Saturday, 14th December 2024

ಲಾಟರಿಯ ಕೋಟಿ ಹಣ ಬಿಟ್ಟುಕೊಟ್ಟ ಪುಣ್ಯಕೋಟಿ

ನಾಡಿಮಿಡಿತ

ವಸಂತ ನಾಡಿಗೇರ

ದಾನ ಧರ್ಮ ಮಾಡುವವವರಿಗೆ ನಮ್ಮಲ್ಲಿ ಬರವೇನೂ ಇಲ್ಲ. ಟಾಟಾ, ಬಿರ್ಲಾ, ಅಂಬಾನಿ ಅವರಿಂದ ಹಿಡಿದು ಅಸಂಖ್ಯಾತ ಜನರು ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ.

ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಿದ್ದಾರೆ. ನಿಸರ್ಗ ಪ್ರಕೋಪ ಮೊದಲಾದ ಸಂದರ್ಭಗಳಲ್ಲಿ ಸಹಾಯಹಸ್ತ ಚಾಚಿ
ದ್ದಾರೆ. ಟಾಟಾ, ಪ್ರೇಂಜೀ ಅಂಥವರು ತಮ್ಮ ಆಸ್ತಿಯ ಬಹುಪಾಲನ್ನು ದಾನ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲೂ ಬಿಲ್ ಗೇಟ್ಸ್ ಮೊದಲಾದವರು ಮಾಡಿರುವ ದಾನಧರ್ಮಗಳಿಗೆ ಲೆಕ್ಕವಿಲ್ಲ. ಇದಕ್ಕೆ, ’ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಎಂದು ಹೇಳಬಹುದು.

ಒಳ್ಳೆಯ ಆದಾಯವಿರುವ ಕೆಲಸವನ್ನು ಬಿಟ್ಟು, ತಮ್ಮಲ್ಲಿರುವ ಎಲ್ಲ ಹಣವನ್ನು ಬಡಬಗ್ಗರಿಗೆ ನೀಡಿರುವಂಥ ಜನರ ಉದಾ ಹರಣೆಗಳೂ ಇವೆ. ಸ್ವತಃ ಭಿಕ್ಷೆ ಬೇಡಿದರೂ ಅದರಿಂದ ಬಂದ ಆದಾಯವನ್ನು ದೇವಸ್ಥಾನಗಳಿಗೆ ನೀಡಿದ ಮಹಿಳೆಯ ಬಗೆಗೂ ಹಿಂದೆ ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಮತ್ತೊಂದು ಕಡೆ, ಹಣದ ಹಪಹಪಿಗೆ ಬಿದ್ದು ಮಾಡಬಾರದ್ದನ್ನೆಲ್ಲ ಮಾಡಿ ಜೈಲು ಕಂಡವರೂ ಉಂಟು.

ಇದರ ಮಧ್ಯೆ, ಅನಿರೀಕ್ಷಿತವಾಗಿ ಹಣ, ಹೆಸರುಗಳಿಸಿದ ಒಂದಷ್ಟು ಜನರೂ ಇರುತ್ತಾರೆ. ಈ ಪೈಕಿ ಲಾಟರಿ ಹೊಡೆದವರ ಕಥೆಗಳು ರೋಚಕವಾಗಿರುತ್ತವೆ. ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲದೆ, ಇಲ್ಲವೆ ನಾನಾ ಬಗೆಯ ಕಷ್ಟಗಳಿಗೆ ಒಳಗಾಗಿ ಹಣವಿಲ್ಲದೆ ಪರದಾಡು ತ್ತಿರುವ ನತದೃಷ್ಟರಿಗೆ ಒಮ್ಮೆಲೇ ಅದೃಷ್ಟ ಒಲಿದು ಬಂದ ನಿದರ್ಶನಗಳಿವೆ. ಹೀಗೆ ಲಕ್ಷ್ಮೀ ಕಟಾಕ್ಷಕ್ಕೆ ಒಳಗಾದವರಲ್ಲಿ
ಹಲವರದು ಬಹುತೇಕವಾಗಿ ಒಂದೇ ಬಗೆಯ ಕಥೆ. ಮಗಳು/ತಂಗಿಯ ಮದುವೆ ಮಾಡಬೇಕು; ಒಂದು ಮನೆಯನ್ನು ಕಟ್ಟಿಸಬೇಕು; ಸಾಲ ತೀರಿಸಬೇಕು; ಒಂದು ಸಣ್ಣ ಬಿಸಿನೆಸ್ ಪ್ರಾರಂಭಿಸಬೇಕು ಇತ್ಯಾದಿ.

ಇವೆಲ್ಲ ಟಿಪಿಕಲ್ ಮಿಡಲ್ ಕ್ಲಾಸ್ ಕನಸುಗಳು. ದೊಡ್ಡ ಮೊತ್ತದ ಲಾಟರಿ ಹೊಡೆದರೆ ಸಮಸ್ಯೆಗಳೆಲ್ಲ ಒಂದೇ ಏಟಿಗೆ ಕೊನೆ ಗೊಳ್ಳುತ್ತವೆ ಎಂಬ ಕನಸು, ಆಸೆ, ಹಂಬಲ. ಅದಕ್ಕಾಗಿಯೇ ಬಹುತೇಕ ಬಡವರು ಮತ್ತು ದುಡ್ಡಿಗಾಗಿ ಪರದಾಡುವಂಥವರು ಲಾಟರಿ ಮೊರೆ ಹೋಗುವುದು. ಹೀಗೆ, ಹಣ ಮಾಡುವ ಸುಲಭದ ದಾರಿ ಹುಡುಕುತ್ತಲೇ ಇದ್ದ ಹಣವನ್ನೂ ಕಳೆದುಕೊಂಡವರೂ ಬೇಕಾದಷ್ಟು ಮಂದಿ ಸಿಗುತ್ತಾರೆ. ಅದಕ್ಕಾಗಿಯೇ ಸಾರಾಯಿಯಂತೆ ಲಾಟರಿ ನಿಷೇಧ ಮಾಡಬೇಕೆಂಬ ಕೂಗು ಕೇಳಿಬರುವುದು.

ನಮ್ಮ ರಾಜ್ಯದಲ್ಲಿ ಈಗ ಲಾಟರಿ ಇಲ್ಲ ಬಿಡಿ. ಆದರೆ ನೆರೆಯ ಕೇರಳದಲ್ಲಿ ಇದೆ. ಇಷ್ಟಕ್ಕೂ ಲಾಟರಿ ಬಗ್ಗೆ ಇಷ್ಟೆಲ್ಲ ಪೀಠಿಕೆಗೆ ಕಾರಣವಾದ ಒಂದು ಘಟನೆ ಇಲ್ಲಿದೆ. ಈಕೆಯ ಹೆಸರು ಸ್ಮಿಜಾ ಕೆ ಮೋಹನ್. ಕೇರಳದಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಾರೆ. ಅಂದರೆ ಹಣ ಮಾಡುವ ಜನರ ಆಸೆಗೆ ನೀರೆರೆಯುವಾಕೆ. ಅದರಿಂದ ಬರುವ ಕಮಿಷನ್‌ನಿಂದ ಒಂದಷ್ಟು ಕಾಸು ಮಾಡಿಕೊಂಡು ಜೀವನ ಸಾಗಿಸುವಂಥವಳು. ಈಚೆಗೆ ನಡೆದ ಘಟನೆಯೊಂದರಿಂದ ಆಕೆ ರಾತ್ರೋರಾತ್ರಿ ಜನರ ಮನ ಗೆದ್ದಿದ್ದಾಳೆ.

ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಮನೆ ಮಾತಾಗಿದ್ದಾಳೆ. ಹಾಗಾದರೆ ಏನದು ಘಟನೆ ಅಂದಿರಾ ? ಎರ್ನಾಕುಲಂ ಜಿಲ್ಲೆಯ ಅಲುವಾ ಎಂಬಲ್ಲಿ ರಸ್ತೆ ಬದಿಯ ಒಂದು ಸಣ್ಣ ಸ್ಟಾಲ್‌ನಲ್ಲಿ ಸ್ಮಿಜಾ ಲಾಟರಿ ಮಾರಾಟ ಮಾಡುತ್ತಾರೆ. ಹಲವು ವರ್ಷಗಳಿಂದ ಇದೇ ವ್ಯಾಪಾರ ಮಾಡುತ್ತಿರುವುದರಿಂದ ಆಕೆಗೆ ಒಂದಷ್ಟು ಕಾಯಂ ಗ್ರಾಹಕರಿದ್ದಾರೆ. ದಿಢೀರ್ ಶ್ರೀಮಂತರಾಗಬೇಕೆಂಬ ಕನಸು ಹೊತ್ತ ಇಂಥವರು ಆಕೆಯ ಬಳಿ ನಿಯಮಿತವಾಗಿ ಲಾಟರಿ ಟಿಕೆಟ್ ಕೊಳ್ಳುತ್ತಾರೆ.

ಹೀಗಾಗಿ ಇಂಥ ಕಾಯಂ ಗಿರಾಕಿಗಳ ಪಟ್ಟಿಯನ್ನು ಸ್ಮಿಜಾ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಒಂದು ವಾಟ್ಸಾಪ್ ಗ್ರೂಪ್ ಕೂಡ ಮಾಡಿಕೊಂಡಿದ್ದಾರೆ. ಅದರ ಮೂಲಕ ಈ ಗ್ರಾಹಕರಿಗೆ ಸಂದೇಶ ಕಳಿಸುವುದು, ವ್ಯವಹಾರ ಮಾಡುವುದು ನಡೆದಿತ್ತು. ಹೀಗಿರು ವಾಗ ಅದೊಂದು ದಿನ: ಸ್ಮಿಜಾ ಬಳಿ 12 ಟಿಕೆಟ್‌ಗಳು ಮಾರಾಟವಾಗದೆ ಉಳಿದಿದ್ದವು. ತಲಾ 200 ರು. ಬೆಲೆಯ, ಕೇರಳ ರಾಜ್ಯ ಸರಕಾರದ ಲಾಟರಿ ಟಿಕೆಟ್ ಅವು. ಯಾಕೋ ಯಾರೂ ಸುಳಿಯಲಿಲ್ಲ.

ಹಾಗೇ ಉಳಿದರೆ ನಷ್ಟ ಎಂಬ ಚಿಂತೆ. ತಮ್ಮ ಕಾಯಂ ಗ್ರಾಹಕರನ್ನು ಸಂಪರ್ಕಿಸಿದರು. ಬಹುಪಾಲು ಜನರು ಆಸಕ್ತಿ ತೋರಲಿಲ್ಲ. ಬೇಡ ಎಂದವರೇ ಹೆಚ್ಚು. ಆ ಪೈಕಿ ಪಿ.ಕೆ. ಚಂದ್ರನ್ ಎಂಬೊಬ್ಬರಿಗೂ ಮೆಸೇಜ್ ಕಳಿಸಿದ್ದರು. ಟಿಕೆಟ್‌ನ ಚಿತ್ರ ಕಳಿಸಿ, ನೋಡುತ್ತೇನೆ ಎಂದರು. ಆ ಪ್ರಕಾರ ಕಳಿಸಿದ್ದಾಯಿತು. ಅವರು ನಿರ್ದಿಷ್ಟ ಟಿಕೆಟ್ ಆಯ್ಕೆ ಮಾಡಿದರು. ಆದರೆ ಹಣವನ್ನು ನಂತರ ಕೊಡುತ್ತೇನೆ ಎಂದರು. ಇದಕ್ಕೆ ಒಪ್ಪಿ ಆ ಟಿಕೆಟ್‌ಅನ್ನು ಚಂದ್ರನ್ ಹೆಸರಿನಲ್ಲಿ ತೆಗೆದಿರಿಸಿದರು ಸ್ಮಿಜಾ. ಆದರೆ ಮಜಾ ನೋಡಿ. ಅಂದು ಸಂಜೆಯೇ ಲಾಟರಿ ಡ್ರಾ ಇತ್ತು. ಅದೇ ನಂಬರಿಗೆ 6 ಕೋಟಿ ರುಪಾಯಿಯ ಬಂಪರ್ ಬಹುಮಾನ ಬರಬೇಕೆ !? ಈಗ ಶುರುವಾಯಿತು ಅಸಲಿ ಕಹಾನಿ. ಚಂದ್ರನ್ ಅವರು ತಾಂತ್ರಿಕವಾಗಿ ಟಿಕೆಟ್ ಖರೀದಿಸಿಲ್ಲ.

ಹಣವನ್ನೂ ಕೊಟ್ಟಿಲ್ಲ. ಈ ನಂಬರಿನ ಟಿಕೆಟ್ ಇರಲಿ ಎಂದು ಹೇಳಿದ್ದರಷ್ಟೆ. ಟಿಕೆಟ್ ಆಕೆಯ ಬಳಿಯೇ ಇತ್ತು. ಅಷ್ಟು ಮಾತ್ರ ವಲ್ಲ. ಈ ಹಿಂದೆ ಟಿಕೆಟ್ ಕೊಂಡ ಹಣ ಕೂಡ ಬಾಕಿ ಇತ್ತು. ಹಾಗಾದರೆ 6 ಕೊಟಿ ಬಹುಮಾನ ಸ್ಮಿಜಾ ಪಾಲಾಯಿತೆ ? ಇಲ್ಲ ! ಈ ಟಿಕೆಟ್‌ಗೆ ಬಹುಮಾನ ಬಂದಿದೆ ಎಂದು ಗೊತ್ತಾದ ತಕ್ಷಣ ಸ್ಮಿಜಾ ಮಾಡಿದ ಮೊದಲ ಕೆಲಸ ಏನು ಗೊತ್ತೇ? ಚಂದ್ರನ್‌ಗೆ ಫೋನ್ ಮಾಡಿ ಈ ಸಂತಸದ ವಿಷಯ ತಿಳಿಸಿದ್ದು. ಅವರು ನಂಬಲಿಲ್ಲ. ತಮಾಷೆ ಮಾಡುತ್ತಿರಬೇಕು ಅಂದುಕೊಂಡರು.

ಸ್ಮಿಜಾ ಮಾತ್ರ ತಡಮಾಡದೆ ನೇರ ಚಂದ್ರನ್ ಮನೆಗೆ ದೌಡಾಯಿಸಿದರು. ಮನೆ ತಲುಪುತ್ತಲೇ ಅವರಿಗೆ ಆ ಟಿಕೆಟ್ ಒಪ್ಪಿಸಿದರು. ಆಗಲೇ ಆಕೆಗೆ ನಿರಾಳ ಭಾವ. ಇತ್ತ ಚಂದ್ರನ್ ಆಕೆಗೆ 1450 ರು ಗಳನ್ನು ಕೊಟ್ಟರು. ಇದು ಹಳೆ ಬಾಕಿಮತ್ತು ಈಗಿನ ಟಿಕೆಟ್ ದರ ಸೇರಿದ ಮೊತ್ತ. ತೋಟದ ಕೆಲಸ ಮಾಡುವ ಚಂದ್ರನ್ ಅವರದು ಹೆಂಡತಿ, ಮೂವರು ಹೆಣ್ಣುಮಕ್ಕಳ ಸಂಸಾರ. ಲಾಟರಿ
ಕೊಳ್ಳುವುದು ಹವ್ಯಾಸ ಮತ್ತು ಅಭ್ಯಾಸ. ಸ್ಮಿಜಾ ಅವರ ಕಾಯಂ ಲಾಟರಿ ಗ್ರಾಹಕರು. ಆ ದಿನ ಸ್ಮಿಜಾ ಅವರೇ ಒತ್ತಾಯ ಮಾಡಿ ಟಿಕೆಟ್ ಕೊಟ್ಟಿದ್ದು. ಆದರೆ ಅದೇ ಅವರ ಭಾಗ್ಯದ ಬಾಗಿಲು ತೆರೆಸಿತು. ಅದೃಷ್ಟ ಎಂದರೆ ಇದೇ ಇರಬೇಕು. ಲಾಟರಿ ಹೊಡೆಯು ವುದು ಎನ್ನುವುದೂ ಇದೇ ಕಾರಣಕ್ಕೆ.

ಈಗ ಲಾಟರಿ ಹಣದಿಂದ ಏನೇನು ಮಾಡಬೇಕು ಎಂದು ಯೋಜನೆ ಹಾಕಿದ್ದಾರೆ. ದೊಡ್ಡ ಮಗಳು ಮನೆ ಕಟ್ಟಿಸುತ್ತಿದ್ದು ಆಕೆಗೆ ನೆರವು ನೀಡಬೇಕು. ಮತ್ತೊಬ್ಬ ಮಗಳ ಮದುವೆ ಮಾಡಬೆಕು. ಎಂಜಿನಿಯರಿಂಗ್ ಕಲಿಯುತ್ತಿರುವ ಮಗನ ಶಿಕ್ಷಣಕ್ಕೆ
ನೆರವಾಗಬೇಕು ಇತ್ಯಾದಿ. ಈ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ಎಲ್ಲರೂ ಆಕೆಯನ್ನು ಕೊಂಡಾಡುವರೇ. ಈ ಕಾಲದಲ್ಲಿ ಇಷ್ಟರ ಮಟ್ಟಿನ ಪ್ರಾಮಾಣಿಕರು ಎಲ್ಲಿ ಸಿಗುತ್ತಾರೆ ಎಂದು ಮಾತನಾಡಿಕೊಂಡರು.

ಆದರೆ ಅಲ್ಲಲ್ಲಿ ಈ ಬಗ್ಗೆ ಬಗೆ ಬಗೆಯ ಚರ್ಚೆಗಳೂ ನಡೆದವು. ಹೇಗೂ ಟಿಕೆಟ್ ಕೊಟ್ಟಿರಲಿಲ್ಲ. ಅವರು ಹಣವನ್ನೂ ನೀಡಿರಲಿಲ್ಲ. ಬಾಯಿಮಾತಿನಲ್ಲಿ ಮಾರಾಟವಾಗಿತ್ತಷ್ಟೆ. ಹೀಗಿರುವಾಗ ಆಕೆಯೇ ಅದನ್ನು ಇಟ್ಟುಕೊಂಡು ತಾನೇ ಬಹುಮಾನ ಪಡೆಯಬಹು ದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದವರಿಗೆ ಬರವಿರಲಿಲ್ಲ. ’ಹೌದಲ್ವಾ’ ಎಂದೇ ಎಲ್ಲರೂ ಹೇಳುವುದು. ಆದರೆ ಇದೇ ವಿಷಯವನ್ನು ಪ್ರಸ್ತಾಪಿಸಿದರೆ ಸ್ಮಿಜಾ ತಡವಿಲ್ಲದೆ, ತಡವರಿಸದೆ ಹೇಳುವ ಮಾತು ಒಂದೇ- ’ಗೊತ್ತಿರುವವವರು, ಗೊತ್ತಿಲ್ಲದವರು ಎಲ್ಲರೂ ನನಗೆ ಇದೇ ಪ್ರಶ್ನೆಯನ್ನು ಕೇಳಿದರು.

ಆದರೆ ನಾವು ಲಾಟರಿ ಮಾರುವವವರು. ಅದನ್ನು ಇಟ್ಟುಕೊಳ್ಳುವವರಲ್ಲ. ಅವರು ಆ ಟಿಕೆಟ್ ನನಗೆ ಇರಲಿ ಎಂದು ಹೇಳಿದ ಮೇಲೆ ಮುಗಿಯಿತು. ಅದು ಅವರದೇ. ಹಣ ಕೊಟ್ಟಿಲ್ಲ, ಅವರ ಬಳಿ ಭೌತಿಕವಾಗಿ ಟಿಕೆಟ್ ಇರಲಿಲ್ಲ. ಬಾಕಿ ಹಣವೂ ಇತ್ತು ಇವೆಲ್ಲ ಬೇರೆ. ಆದರೆ ಒಂದೊಮ್ಮೆ ಮಾರಾಟ ಮಾಡಿದ ಮೇಲೆ ಆಯಿತು. ಮಾತಂದ್ರೆ ಮಾತು. ಲಾಟರಿ ಟಿಕೆಟ್ ಮಾರಾಟಗಾರರಿಗೆ ನಂಬಿಕೆ, ವಿಶ್ವಾಸವೇ. ದೊಡ್ಡದು. ಆ ಟಿಕೆಟ್ ಅನ್ನು ಇಟ್ಟುಕೊಳ್ಳಬೇಕೆಂಬ ಕಿಂಚಿತ್ ಆಸೆ, ಆಲೋಚನೆಯೂ ನನಗೆ ಬರಲಿಲ್ಲ’
ಎನ್ನುತ್ತಾರೆ. ಅದು ಸರಿ. ಆದರೆ ಈ ರೀತಿಯ ಯಾವ ಪ್ರಲೋಭನೆ, ಪ್ರಚೋದನೆಗೂ ಒಳಗಾಗಲಿಲ್ಲ ಎನ್ನಬೇಕಾದರೆ ಸ್ಮಿಜಾ ಶ್ರೀಮಂತಳೇ ಇರಬೇಕು ಎಂಬ ಭಾವನೆ ಎಲ್ಲರಲ್ಲೂ ಮೂಡಿರಬಹುದು.

ಏಕೆಂದರೆ ಅನೇಕ ಸಂದರ್ಭಗಳಲ್ಲಿ ಪ್ರಾಮಾಣಿಕತೆ ಎಂಬುದು ಸಾಪೇಕ್ಷವಾಗಿರುತ್ತದೆ. ಹೊಟ್ಟೆ ತುಂಬಿದವರು ಅಥವಾ ಕಾಸಿಗೆ
ಕೊರತೆ ಇಲ್ಲದವರು ಪ್ರಾಮಾಣಿಕರಾಗಿರುತ್ತಾರೆ. ಅಥವಾ ಹಾಗೆ ತೋರ್ಪಡಿಸಿಕೊಳ್ಳುತ್ತಾರೆ. ಹಸಿವು, ಹಣದ ಕೊರತೆ ಜನರನ್ನು ಒಂದು ಹಂತಕ್ಕಾದರೂ, ಕೆಲವರನ್ನಾದರೂ ಭ್ರಷ್ಟರು, ದುಷ್ಟರು, ಹಪಹಪಿಗಳು, ಲಾಲಸಿಗಳನ್ನಾಗಿ ಮಾಡುತ್ತದೆ. ಆಗೆಲ್ಲ ಅದು ಹೊಟ್ಟೆಪಾಡಿಗಾಗಿ ಮಾಡಿದ್ದು ಬಿಡಿ ಎಂದೆನಿಸಿಕೊಳ್ಳುತ್ತದೆ. ಮಾಫಿ ಆಗುತ್ತದೆ. ಆದರೆ ಸ್ಮಿಜಾ ಶ್ರೀಮಂತಳೂ ಅಲ್ಲ, ತತ್ತ್ವ,
ಆದರ್ಶ ಎಂದು ಹೊರಟವಳೂ ಅಲ್ಲ. ನಿಜ ಹೇಳಬೇಕೆಂದರೆ ಆವರ ಬದುಕಿನದಲ್ಲಿ ಬೇಕಾದಷ್ಟು ಕಷ್ಟಗಳಿವೆ.

ಆಕೆಯ ಜೀವನದತ್ತ ಒಂದು ಇಣುಕು ಹಾಕಿದರೆ ತಿಳಿಯುತ್ತದೆ. ಸ್ಮಿಜಾ ಮೋಹನ್ 37 ವರ್ಷದ, ಕೆಳ ಮಧ್ಯಮ ವರ್ಗಕ್ಕೆ ಸೇರಿದ ಹೆಣ್ಣುಮಗಳು. ಗಣಿತದಲ್ಲಿ ಪದವಿ ಪಡೆದವಳು. ಇಷ್ಟು ಓದಿದರೂ ಲಾಟರಿ ಮಾರಾಟ ಮಾಡುತ್ತಿರುವುದೇತಕ್ಕೆ ಎಂದು ಕೇಳಿದರೆ ಮತ್ತೆ ತಮ್ಮ ಬದುಕಿನ ಹಲವು ತಿರುವುಗಳ ಬಗೆಗೆ ಹೇಳುತ್ತಾರೆ. ’ಎಲ್ಲರಿಗೂ ಹಣಕಾಸಿನ ಸಮಸ್ಯೆ ಇರುತ್ತದೆ. ನಾನು ನನ್ನ
ವಯಸ್ಸಾದ ತಂದೆ ತಾಯಿ ಹಾಗೂ ನನ್ನದೇ ಆದ ಕುಟುಂಬವನ್ನು ನೋಡಿಕೊಳ್ಳಬೇಕಿತ್ತು. ಅಂದರೆ ದುಡಿಯಬೇಕಾದ ಅಗತ್ಯ ವಿತ್ತು. ಹೀಗಾಗಿ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ನಾನು ಮತ್ತು ನನ್ನ ಪತಿ ಸರಕಾರಿ ಮುದ್ರಣಾಲಯದಲ್ಲಿ ಕೆಲಸಕ್ಕೆ ಸೇರಿದೆವು.

2011ರಲ್ಲಿ ಲಾಟರಿ ಟಿಕೆಟ್ ಮಾರಾಟಕ್ಕೂ ಮುಂದಾಂದಾದೆವು. ಆದರೆ ಪ್ರೆಸ್ ಬಂದ್ ಆದ ಕಾರಣ ಕೆಲಸ ಹೋಯಿತು. ಲಾಟರಿ ಮಾರಾಟವನ್ನೇ ಪೂರ್ಣ ಪ್ರಮಾಣದ ಉದ್ಯೋಗವನ್ನಾಗಿ ಮಾಡಿಕೊಂಡೆವು. ಮೊದಲಿಗೆ ನಮಗೆ ಸಹಾಯಕ್ಕೆ ಎಂದು ಒಂದಷ್ಟು ಜನರಿದ್ದರು. ಆದರೆ ಕರೋನಾ ಹಾವಳಿಯ ಬಳಿಕ ಯಾರೂ ಇಲ್ಲ. ನಾವಿಬ್ಬರೇ ಇದನ್ನು ನಿರ್ವಹಿಸುತ್ತೇವೆ.’ ಸ್ಮಿಜಾಗೆ ಇನ್ನೂ ಕೆಲವು ಸಮಸ್ಯೆಗಳಿವೆ. ತಾಯಿ ಕ್ಯಾನ್ಸರ್ ರೋಗಿ. ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ಆರೋಗ್ಯ ಸಮಸ್ಯೆ ಇದೆ. ಆದರೆ ಈಗ ತೊಂದರೆ ಇಲ್ಲ, ಹುಷಾರಾಗಿದ್ದಾನೆ ಎನ್ನುತ್ತಾರೆ. ಹಾಗೆ ನೋಡಿದರೆ ಲಾಟರಿ ಬಿಸಿನೆಸ್ ತಕ್ಕಮಟ್ಟಿಗೆ ಚೆನ್ನಾಗಿಯೇ ನಡೆದಿದೆ ಎಂಬುದು ಸ್ಮಿಜಾ
ಹೇಳಿಕೆ.

ಈ ದಂಪತಿ ಭಾಗ್ಯಲಕ್ಷ್ಮಿ ಎಂಬ ಏಜೆಂಟರಿಂದ ಲಾಟರಿ ಪಡೆದು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಾಗ ಅದನ್ನು ಮಾರಿದವರಿಗೂ ಒಂದಷ್ಟು ಕಮಿಷನ್ ಬರುತ್ತದೆ. ಆ ಲೆಕ್ಕದಲ್ಲಿ ನೋಡಿದರೆ ಇವರಿಗೂ ಹಣ ಬರಬೇಕು. ಆದರೆ ಹಣ ಬರುವುದೇ, ಬಂದರೆ ಎಷ್ಟು ಎಂಬುದರ ಅಂದಾಜು ಸ್ಮಿಜಾಗೆ ಇಲ್ಲ.

ಅದಿರಲಿ. ಸ್ಮಿಜಾ ಏನೋ ಪ್ರಾಮಾಣಿಕತೆಯಿಂದ ಆ ಟಿಕೆಟ್ ಅನ್ನು ನೈಜ ವಾರಸುದಾರರಿಗೆ ಕೊಟ್ಟರಲ್ಲ. ಆದರೆ ಆ ವ್ಯಕ್ತಿ ಈಕೆಗೆ ಅದರಲ್ಲಿ ಒಂದು ಪಾಲೇನಾದರೂ ನೀಡಿದನೇ ಎಂಬುದು ಗೊತ್ತಾಗಿಲ್ಲ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಲಾಟರಿ ಬಂದವರು ಬಕ್ಷೀಸು ನೀಡುತ್ತಾರೆ. ಆದರೆ ಚಂದ್ರನ್ ಹಾಗೆ ಕೊಟ್ಟ ಹಾಗಿಲ್ಲ. ಕೊಟ್ಟಿದ್ದಿದ್ದರೆ ಸ್ಮಿಜಾ ಅದನ್ನೂ ಹೇಳಿರೋರು. ’ನನಗೆ ಅಂಥ ಯಾವ ನಿರೀಕ್ಷೆ, ಅಪೇಕ್ಷೆಗಳೂ ಇಲ್ಲದಿರುವಾಗ ನಾನ್ಯಾಕೆ ಆ ಹಣಕ್ಕೆ ಕೈಚಾಚಲಿ’ ? ಎಂಬುದು ಅವರ ಪ್ರಶ್ನೆ.

ಸ್ಮಿಜಾ ಕೈ ಒಡ್ಡಬೆಕು ಎಂದಲ್ಲ. ಆದರೆ ಲಾಟರಿ ಹೊಡೆದ ಖುಷಿಯಲ್ಲಿ- ಅದೂ ಅಷ್ಟು ದೊಡ್ಡ ಮೊತ್ತದ ಹಣ ಬಂದಿರುವಾಗ- ಒಂದಷ್ಟು ಹಣವನ್ನು ಕೊಡಬಹುದಾಗಿತ್ತು. ಆದರೆ ಬಂದದ್ದೆಲ್ಲ ತನಗೇ ಇರಲಿ ಎಂಬ ಮನೋಭಾವದವರೋ ಏನೋ ಗೊತ್ತಿಲ್ಲ. ಈಗ ಎಲ್ಲರೂ ಭೇಷ್ ಭೇಷ್ ಅನ್ನುತ್ತಿರುವುದನ್ನು ನೋಡಿದ ಸ್ಮಿಜಾಗೆ ಮುಜುಗರವಾಗುತ್ತಿದೆಯಂತೆ. ’ನಾನೇನು ಅಂಥ ಘನಂದಾರಿ ಕೆಲಸ ಮಾಡಿದ್ದೇನೆ ಎಂದು ಹೀಗೆ ಎಲ್ಲರೂ ನನ್ನ ಹಿಂದೆ ಬಿದ್ದಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ.

ಯಾವುದೋ ಪೊಲೀಸ್ ಠಾಣೆಯವರು ಆಕೆಗೆ ಸನ್ಮಾನ ಇಟ್ಟುಕೊಂಡಿದ್ದರು. ’ನಿಮಗೆ ಸನ್ಮಾನ ಮಾಡುತ್ತೇವೆ ಎಂದು ಸಂಘ ಸಂಸ್ಥೆಗಳು ದುಂಬಾಲು ಬಿದ್ದಿವೆ. ಇದರಿಂದ ಆಕೆಗೆ ಸಂತಸದ ಜತೆಗೆ ತುಂಬಾ ಸಂಕೋಚ ವಾಗುತ್ತಿದೆಯಂತೆ. ಹೀಗೂ ಉಂಟೇ ಎಂದು ತನ್ನನ್ನೆ ತಾನು ಕೇಳಿಕೊಳ್ಳುವಂತಾಗಿದೆ ಆಕೆಗೆ. ’ಏಜೆನ್ಸಿಯವರು ಹಣ ನೀಡಿದರೆ ಏನು ಮಾಡುವಿರಿ’ ಎಂದು ಕೇಳಿದರೆ,
’ಗೊತ್ತಿಲ್ಲ, ಕೊಟ್ಟರೆ ನೋಡೋಣ’ ಎಂದು ತಣ್ಣನೆಯ ಪ್ರತಿಕ್ರಿಯೆ ನೀಡುತ್ತಾರೆ.

’ಸರಕಾರದವರು ನಮಗೆ ಒಂದು ಸಣ್ಣ ಮನೆ ಕಟ್ಟಿಸಿಕೊಟ್ಟಿದ್ದಾರೆ. ಅಷ್ಟು ಸಾಕು’ ಎನ್ನುವ ಸ್ಮಿಜಾ ಅಲ್ಪತೃಪ್ತೆ. ಅಂತೂ ಸ್ಮಿಜಾ ರನ್ನು ನೋಡಿ ದರೆ ಪುಣ್ಯಕೋಟಿಯ ಕಥೆ ನೆನಪಾಗುತ್ತದೆ. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಗೋವಿನ ಹಾಡಿನ ಸಾಲು ಕಣ್ಣಮುಂದೆ ಕಟ್ಟುತ್ತದೆ. ಆದರೆ ಕೊಟ್ಟ ಸಾಲವನ್ನೂ ವಾಪಸು ಕೊಡದಿರುವ, ಲಂಚಕ್ಕಾಗಿ ಕೈಯೊಡ್ಡುವ, ಹೇಗಾದರೂ ಮಾಡಿ ದಿಢೀ ರ್ ಹಣ ಮಾಡಬೆಕು ಎಂಬ ಹಪಹಪಿಯಲ್ಲಿರುವವರೇ ಹೆಚ್ಚಾಗಿರುವ ಇಂದಿನ ಈ ಜಗತ್ತಿನಲ್ಲಿ ಈ ಮಟ್ಟಿನ ಪ್ರಾಮಾಣಿಕತೆ, ನಿರ್ಲಿಪ್ತ ಭಾವದವರು ಕಾಣಸಿಗುವುದು ಅಪರೂಪದಲ್ಲಿ ಅಪರೂಪ. ಅದಕ್ಕಾಗಿಯೇ ಸ್ಮಿಜಾ ನಮಗೆ ವಿಭಿನ್ನವಾಗಿ ಕಾಣುತ್ತಾರೆ.

ನಾಡಿಶಾಸ್ತ್ರ
ಕೊಟ್ಟ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು
ಎಂಬ ಪುಣ್ಯಕೋಟಿಯಂಥವರು ಈಗಲೂ ಇರುವರೇನು
ಎಂಬ ಮಾತಿಗೆ ಇಹರು ಎಂದು ಹೇಳುತಿರುವಂತೆ
ಬಾಳುತ್ತಿರುವ ಈಕೆಯೇ ನಿಜದಿ ಹೃದಯ ಶ್ರೀಮಂತೆ