Thursday, 19th September 2024

ಪುತ್ತಿಗೆ ಶ್ರೀಗಳ ಸಾಧನೆಗಳತ್ತ ಒಂದು ಇಣುಕು ನೋಟ

ವಿಚಾರ ಮಂಟಪ

ಶ್ರೀವತ್ಸ ಬಲ್ಲಾಳ

‘ಪುತ್ತಿಗೆ ಶ್ರೀಗಳು’ ಎಂದೇ ಖ್ಯಾತರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸುಮಾರು ೨೦೦೦ನೇ ಇಸವಿಯಿಂದಲೂ ಅಮೆರಿಕದಲ್ಲಿ ನಡೆಸುತ್ತಿರುವ ಧರ್ಮಪ್ರಚಾರದ ಕಾರ್ಯವನ್ನು ಹತ್ತಿರದಿಂದ ಕಂಡ ಯೋಗಾಯೋಗ ನನ್ನದು.

ಶ್ರೀಗಳ ಧರ್ಮಪ್ರಚಾರ, ಮುಖ್ಯವಾಗಿ ಜನಸಾಮಾನ್ಯರಲ್ಲಿ ಕೃಷ್ಣಪ್ರಜ್ಞೆ ಮತ್ತು ಭಗವದ್ಗೀತೆಯ ಅರಿವು ಮೂಡಿಸುವ, ಆ ಕುರಿತಾದ ಒಲವನ್ನು ಬೆಳೆಸುವ ಪರಿ ಅನನ್ಯ. ತಾಯ್ನೆಲದಿಂದ ಎಷ್ಟೇ ದೂರದಲ್ಲಿದ್ದರೂ ಪ್ರತಿಯೊಬ್ಬರೂ ಸ್ವಯಂಜಾಗೃತರಾಗಿ ಉಡುಪಿಯ ಕೃಷ್ಣನನ್ನು ಇಲ್ಲಿಂದಲೂ ಅಷ್ಟೇ ಹತ್ತಿರದಿಂದ ಕಂಡು ಅನುಭವಿಸಬೇಕು ಎಂಬುದು ಅವರ ಆಶಯ. ಅಂಥದೊಂದು ವಿಶಿಷ್ಟ ದೂರದೃಷ್ಟಿಯಿಂದ ಅವರು ನಡೆಸಿದ, ನಡೆಸುತ್ತಿರುವ ನಿಸ್ವಾರ್ಥ ಸೇವೆಯು ಒಂದು ಅಭೂತಪೂರ್ವವಾದ ಕೃಷ್ಣಸೇವೆ ಎನ್ನದೆ ಬೇರಾವುದೇ ಉಪಮೆಗಳನ್ನು ಬಳಸಿ ಹೇಳಲಾಗದು.

ಕಳೆದ ಶತಮಾನದ ೯೦ರ ದಶಕದ ಆದಿಭಾಗದಿಂದಲೂ, ಮಾಹಿತಿ ತಂತ್ರಜ್ಞಾನದ ನಾಗಾಲೋಟದಿಂದಾಗಿ ಇಡೀ ವಿಶ್ವವೇ ಒಂದು ಗ್ರಾಮ ದಂತಾಗಿರು ವುದು ಪುತ್ತಿಗೆ ಶ್ರೀಗಳ ಈ ಮಹದಾಕಾಂಕ್ಷೆಯ ಪ್ರಯತ್ನಕ್ಕೆ ಪೂರಕವಾಗಿಯೇ ಬೆಳೆದಿರುವುದು ಕೂಡ ಒಂದು ಯೋಗಾಯೋಗ. ಅದಕ್ಕೂ ಮೊದಲು, ತಾಯ್ನೆಲದಿಂದ ವಲಸೆ ಬಂದ ಆಸ್ತಿಕರು ತಮ್ಮ ಧರ್ಮ- ಸಂಸ್ಕೃತಿ-ಆಚರಣೆ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಬೇಕೆಂದಿದ್ದರೆ ಪಡಬೇಕಿದ್ದ ಹರಸಾಹಸವನ್ನು ವಿವರಿಸಲಾಗದು.

ಹೀಗಾಗಿ ಅದೆಷ್ಟೋ ಕುಟುಂಬಗಳು ಕಾಲಕ್ರಮೇಣ ತಮ್ಮ ಧರ್ಮ-ಸಂಸ್ಕೃತಿಯ ಅರಿವನ್ನು ಕ್ಷೀಣವಾಗಿಯಾದರೂ ಕಳೆದುಕೊಳ್ಳುತ್ತ, ಒಂದೆರಡು ದಶಕದೊಳಗೆ ಸಂಪೂರ್ಣ ವಿದೇಶಿಯ ರಾಗಿ, ತಮ್ಮದೇ ಕುಟುಂಬದ ಬಾಂಧವರಿಗೆ ಪರಕೀಯರಾಗಿದ್ದೂ ಅಪ್ರಿಯಸತ್ಯ. ಹೊರದೇಶಗಳ ಇಂಥ ಸಹಸ್ರಾರು ಆಸ್ತಿಕರ ಮತ್ತು ಕುಟುಂಬಗಳ ಒಳಿತಿಗಾಗಿ, ಅಮೆರಿಕ ಮಾತ್ರವಲ್ಲದೆ ವಿಶ್ವದೆಲ್ಲೆಡೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕು ಎನ್ನುವ ಪುತ್ತಿಗೆ ಶ್ರೀಗಳ ಅಸಾಧಾರಣ ದೂರದೃಷ್ಟಿಯೇ ಅವರನ್ನು ೧೯೯೬ರ ಕಾಲಘಟ್ಟದಲ್ಲಿ ಮೊದಲ ಬಾರಿಗೆ ಉಡುಪಿಯ ಪುಣ್ಯಕ್ಷೇತ್ರದಿಂದ ಅಮೆರಿಕಕ್ಕೆ ಸೀಮೋಲ್ಲಂಘನ ನಡೆಸುವ ದಿಟ್ಟಹೆಜ್ಜೆ ಇರಿಸಲು ಪ್ರೇರೇಪಿಸಿತು ಎಂಬುದು ಸುಳ್ಳಲ್ಲ.

ಈಗ ಸುಮಾರು ೨೫ ವರ್ಷದ ನಂತರ ನಾವು ಈ ಉದ್ದೇಶದ ಹಿನ್ನೋಟವನ್ನು ವಿಶ್ಲೇಷಿಸಿದರೆ, ಶ್ರೀಗಳ ಧರ್ಮಪ್ರಜ್ಞೆಯು ಒಂದು ರೀತಿಯಲ್ಲಿ
‘ನ ಭೂತೋ ನ ಭವಿಷ್ಯತಿ’ ಎಂಬಂತೆ ಗೋಚರಿಸುತ್ತದೆ ಎನ್ನಲು ಯಾವ ಸಂಕೋಚವೂ ಇರಬಾರದು. ಶ್ರೀಗಳ ಅವಿರತ ಮತ್ತು ನಿಸ್ವಾರ್ಥ ಯತ್ನವನ್ನು ಕಣ್ಣಾರೆ ಕಂಡ ಉಡುಪಿಯ ಮೇರು ವಿದ್ವಾಂಸರೊಬ್ಬರು, ‘ಪ್ರಾಯಶಃ ಆನಂದ ತೀರ್ಥರ ಬಳಿಕ ದ್ವೈತ ಮತವನ್ನು ವಿಶ್ವದೆಲ್ಲೆಡೆ ಪಸರಿಸುವ ಯತ್ನದ ಮೇರು ಕೀರ್ತಿ ಶ್ರೀ ಸುಗುಣೇಂದ್ರ ತೀರ್ಥರಿಗೇ ಸಲ್ಲತಕ್ಕದ್ದು’ ಎಂದಿದ್ದರಲ್ಲಿ ಯಾವ ಉತ್ಪ್ರೇಕ್ಷೆಯಿಲ್ಲ.

೨೧ನೇ ಶತಮಾನದ ಆದಿಭಾಗದಂಥ ಅತ್ಯಂತ ಕಠಿಣ ಕಾಲಘಟ್ಟದಲ್ಲಿ, ಅಮೆರಿಕ ಸರಕಾರದ ಕಟ್ಟುಪಾಡು, ನೀತಿ- ನಿಯಮಗಳೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸಿಕೊಂಡು, ಎಂಥಾ ಸಂಕಷ್ಟ ಪರಿಸ್ಥಿತಿಯಲ್ಲೂ ತಮ್ಮ ಧರ್ಮಪ್ರಜ್ಞೆಯೊಂದಿಗೆ ಒಂದಿನಿತೂ ರಾಜಿಮಾಡಿಕೊಳ್ಳದೆ, ಕೃಷ್ಣದೀಕ್ಷೆಯನ್ನು ಅವರು ಕಟ್ಟು ನಿಟ್ಟಾಗಿ ಪಾಲಿಸಿದ್ದನ್ನು ಹಾಗೂ ವಿದೇಶಿ ನೆಲದಲ್ಲಿನ ಅವರದೇ ಮಠದ ಎಲ್ಲಾ ಶಾಖೆಗಳಲ್ಲೂ ಅದು ಅನುಸರಣೆಯಾಗುವಂತೆ ನೋಡಿಕೊಂಡಿದ್ದನ್ನು ಸ್ವತಃ ಕಂಡವನು ನಾನು. ಮೊದಮೊದಲಿಗೆ, ಆಯಾ ಊರಿನಲ್ಲಿ ಲಭ್ಯವಾಗುತ್ತಿದ್ದ ಮನೆಗಳನ್ನೇ ಮಠಗಳಾಗಿ ಪರಿವರ್ತಿಸಿ ಕೊಂಡು, ಅದಕ್ಕೆ ಬೇಕಾದ ಎಲ್ಲಾ ತರಹದ ಶುದ್ಧೀಕರಣ, ವಾಸ್ತು ಇತ್ಯಾದಿ ಸಂಪ್ರದಾಯದ ಕ್ರಮ ಗಳನ್ನನುಸರಿಸಿ ಕೃಷ್ಣ ಮಂದಿರಗಳನ್ನು ನಿರ್ಮಿಸ ತೊಡಗಿದರು ಶ್ರೀಗಳು.

ಈ ಕಾರ್ಯಯೋಜನೆ ಕೆಲವೇ ವರ್ಷಗಳಲ್ಲಿ ಅಮೆರಿಕದ ಉದ್ದಗಲಕ್ಕೂ ಲಭ್ಯವಾಗತೊಡಗಿದ, ನೂರಾರು ವರ್ಷಗಳಷ್ಟು ಹಳೆಯ ಚರ್ಚುಗಳನ್ನೇ ಮಠದ ಕಾರ್ಯಕ್ಷೇತ್ರ ವಾಗಿ ವಿಸ್ತರಿಸುವಷ್ಟು ಮಟ್ಟಿಗೆ ಬೆಳೆದದ್ದು ಕೃಷ್ಣಾನುಗ್ರಹವೇ ಎನ್ನಬೇಕು. ಹಾಗೆಂದು, ಹಳೆಯ ಚರ್ಚುಗಳೇನೂ ಯಾವುದೇ ಬಂಡ
ವಾಳ ಹೂಡಿಕೆಯಿಲ್ಲದೆ ಶ್ರೀಗಳ ಇಚ್ಛೆಗನುಸಾರವಾಗಿ ಹೂವೆತ್ತಿದಷ್ಟು ಸುಲಭವಾಗಿ ಸಿಗುತ್ತಿದ್ದ ಕಟ್ಟಡಗಳೇನಲ್ಲ. ಬಂಡವಾಳ ಶಾಹಿ ಆರ್ಥಿಕತೆಯ ತುತ್ತತುದಿಯಲ್ಲಿರುವ ರಾಷ್ಟ್ರ ಅಮೆರಿಕ; ಇಲ್ಲಿನ ವಹಿವಾಟಿಗನುಸಾರವಾಗಿ, ಯಾವುದೇ ಸಣ್ಣ ಕಟ್ಟಡ ವನ್ನು ಖರೀದಿಸಬೇಕಾದರೂ ಸಮರ್ಥ ಆರ್ಥಿಕ ವ್ಯವಸ್ಥೆಯೂ ಇರಬೇಕಾದ್ದು ಅನಿವಾರ್ಯ. ಶ್ರೀಗಳ ದೂರದೃಷ್ಟಿಯ ಮತ್ತು ನಿಸ್ವಾರ್ಥ ಪ್ರಯತ್ನಕ್ಕೆ ಅಮೆರಿಕದಲ್ಲಿ ನೆಲೆಸಿರುವ ಸಹಸ್ರಾರು ಭಕ್ತ-ಬಾಂಧವರು ತೋರಿದ ಬೆಂಬಲ, ಕೊಡಮಾಡಿದ ಆರ್ಥಿಕ ಸಹಾಯ ಮತ್ತು ಅದಕ್ಕೆ ಪೂರಕವಾಗಿ ಶ್ರೀಗಳು ಹಗಲಿರುಳೆನ್ನದೆ ತಮ್ಮ ಯೋಜನೆಯ ಫಲಶ್ರುತಿಯನ್ನು ಅಮೆರಿಕದ ಉದ್ದ ಗಲಕ್ಕೂ, ವಿಶ್ವದ ಮೂಲೆಮೂಲೆಗೂ ಪಸರಿಸಿದ್ದು ಪ್ರಮುಖ ಚೇತನವಾಗಿ ಪರಿಣಮಿಸಿತು.

ಹೀಗೆ ಅತ್ಯಂತ ಶಾಸ್ತ್ರೀಯವಾಗಿ ಕಟ್ಟಲ್ಪಟ್ಟ ಶ್ರೀ ವೆಂಕಟಕೃಷ್ಣ ವೃಂದಾವನ, ಕೆನಡಾ ಸೇರಿದಂತೆ ಉತ್ತರ ಅಮೆರಿಕದಲ್ಲಿ ೧೨ ಶಾಖೆಗಳನ್ನು ಬೆಳೆಸಿರು ವುದು ಶ್ರೀಗಳ ದೂರದೃಷ್ಟಿಯ ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿ. ವೈದ್ಯ, ವಿಜ್ಞಾನಿ, ಎಂಜಿನಿಯರ್ ಹೀಗೆ ಯಾವುದೇ ವೃತ್ತಿ ಪ್ರವೀಣರು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲೂ ನಡೆಸುವ ಯತ್ನ, ಹೆಣಗಾಡುವ ಪರಿಯನ್ನು ಕಂಡರೆ ಮತ್ತು ಅದನ್ನು ಶ್ರೀಗಳ ಮಹತ್ವಾಕಾಂಕ್ಷಿ ಯೋಜನೆಗಳೆದುರು ಹೋಲಿಸಿದರಷ್ಟೇ ಶ್ರೀಗಳ ಸಾಧನೆ ತಿಳಿಯುತ್ತದೆ.

ಅಷ್ಟಮಠದ ಸಂಪ್ರದಾಯ, ನೇಮ-ನಿಷ್ಠೆಗಳನ್ನು ಎಳ್ಳಷ್ಟೂ ಬಿಟ್ಟುಕೊಡದೆ ಇಲ್ಲಿಯೂ ಅದೇ ಕಟ್ಟುನಿಟ್ಟಿನ ಜೀವನಶೈಲಿಯನ್ನು ಶ್ರೀಗಳು ಅನುಸರಿಸು ತ್ತಿರುವುದು ವಿಶೇಷ. ೨೦೨೧ರಲ್ಲಿ ನ್ಯೂಜೆರ್ಸಿಯಲ್ಲಿ ನಡೆದ ಶ್ರೀಗಳ ಚಾತುರ್ಮಾಸ ದೀಕ್ಷೆಯ ಸಂದರ್ಭದಲ್ಲಿ, ನಮ್ಮ ಮನೆಯಲ್ಲಿ ಒಂದು ದಿನವಿಡೀ ನಡೆಸಿದ ಪುತ್ತಿಗೆ ವಿಠ್ಠಲ ದೇವರ ಸಂಸ್ಥಾನ ಪೂಜೆ ಮತ್ತು ಶ್ರೀಗಳ ಭಿಕ್ಷಾ ಕಾರ್ಯಕ್ರಮದ ವೇಳೆ ಈ ಕಟ್ಟುನಿಟ್ಟಿನ ಶೈಲಿಯನ್ನು ಕಂಡು ಪುನೀತರಾದ ಭಾಗ್ಯ ನಮ್ಮದು. ಮಠದ ಶಾಖೆಗಳುದ್ದಕ್ಕೂ ಶ್ರೀಗಳು ಮತ್ತವರ ಸಿಬ್ಬಂದಿ ಭಕ್ತರೊಡನೆ ನಡೆಸುವ ಸಂವಾದ, ಧರ್ಮಕಾರ್ಯಗಳೆಲ್ಲವೂ ಎಂಥವರಿಗೂ ಒಂದು ಉನ್ನತ ಮಟ್ಟದ ಉದಾಹರಣೆಯೇ.

ಪ್ರತಿನಿತ್ಯ ನಡೆಯುವ ಜ್ಞಾನ ಯಜ್ಞದ ಫಲಾನುಭವಿಗಳನ್ನು ಕಂಡ ಯಾರು ಕೂಡಾ ಮೂಕರಾಗಲೇಬೇಕು. ಇಲ್ಲಿನ ಆಬಾಲವೃದ್ಧರು ಭಗವದ್ಗೀತೆಯ
ಹದಿನೆಂಟೂ ಅಧ್ಯಾಯಗಳನ್ನು ನಿರರ್ಗಳವಾಗಿ ಪಠಿಸುವುದನ್ನು ಕಂಡಾಗ ಶ್ರೀಗಳ ನಿರಂತರ ಪ್ರಯತ್ನದ ಫಲವೇನು ಎಂಬುದು ಮನದಟ್ಟಾಗುತ್ತದೆ. ಈ ಹಿಂದೆಯೂ ಅನೇಕ ಧಾರ್ಮಿಕ ನಾಯಕರು, ನೇತಾರರು ಅಮೆರಿಕದ ಹಲವೆಡೆ ದೇಗುಲಗಳನ್ನು ಕಟ್ಟಿ ಧರ್ಮಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಯತ್ನವನ್ನು ಯಶಸ್ವಿಯಾಗೇ ನಡೆಸಿದ್ದಾರೆ. ಆದರೆ ಅವರೆಲ್ಲರಿಗೂ ಮೀರಿದ ಒಂದು ಯಶಸ್ಸು ಶ್ರೀ ಸುಗುಣೇಂದ್ರ ತೀರ್ಥರಿಗಷ್ಟೇ ಸಲ್ಲಬೇಕು.

ಭಗವದ್ಗೀತೆಯಂಥ ಅಪೂರ್ವ ಗ್ರಂಥವನ್ನು, ಜಾತಿ- ಧರ್ಮ-ಮತ-ಕುಲ ಎಂಬ ಭೇದವಿಲ್ಲದೆ ಮನೆಮನೆಗೂ ತಲುಪಿಸಿದ ಕೀರ್ತಿ ಅವರದ್ದು. ಕರ್ಮ ಭೂಮಿಯೆಂದೇ ಪರಿಗಣಿಸಲ್ಪಡುವ ಅಮೆರಿಕದ ಫೀನಿಕ್ಸ್‌ನಲ್ಲಿ ನಡೆಸಿದ ನಾಗತನು ತರ್ಪಣದಂಥ ಅತ್ಯಂತ ಧರ್ಮಸೂಕ್ಷ್ಮತೆಯಿರುವ ಮತ್ತು ಪರಶುರಾಮ ಸೃಷ್ಟಿಯ ಭಾಗದಲ್ಲಷ್ಟೇ ಕಾಣಸಿಗುವ ಸಂಪ್ರದಾಯದ ಆಚರಣೆಯೇ ಇರಲಿ ಅಥವಾ ಯಜುರ್‌ಸಂಹಿತಾ ಯಾಗಾದಿಗಳೇ ಇರಲಿ, ಋತ್ವಿಜರೆಲ್ಲರನ್ನೂ ಉಡುಪಿಯ ಸುತ್ತಮುತ್ತಲ ಪರಿಸರದಿಂದ ಕರೆಸಿಕೊಂಡು, ಇಲ್ಲಿಯೂ ಅದೇ ಕಟ್ಟುನಿಟ್ಟಿನ ಸಂಪ್ರದಾಯವನ್ನನುರಿಸಿ ಈ ಎಲ್ಲಾ ಕಾರ್ಯಗಳನ್ನು ನೆರವೇರಿಸುವುದು ಎಂದರೆ ಸಾಮಾನ್ಯ ಸಂಗತಿಯಲ್ಲ.

ಧನಬಲವೊಂದಿದ್ದರೆ ಇವೆಲ್ಲವನ್ನೂ ನಡೆಸಿಬಿಡಬಹುದು ಎಂದುಕೊಂಡಿದ್ದರೆ ಅದು ಅಜ್ಞಾನವಷ್ಟೇ; ಇಂಥ ಕೈಂಕರ್ಯಗಳಿಗೆಲ್ಲ ಮುಖ್ಯವಾಗಿ
ದೇವತಾನುಗ್ರಹ ಇರಲೇಬೇಕು. ಶ್ರೀಗಳ ನಿಷ್ಠೆ ಮತ್ತು ಎಡೆಬಿಡದ ಪ್ರಯತ್ನವು ಸನಾತನ ಧರ್ಮದ ಅನುಯಾಯಿಗಳನ್ನಷ್ಟೇ ಅಲ್ಲದೆ, ಇತರ ಧರ್ಮ/
ಮತಾವಲಂಬಿಗಳನ್ನೂ ತನ್ನತ್ತ ಸೆಳೆದಿದೆ. ಇದು ಪ್ರಾಂಜಲ ನೋಟದಿಂದ ಕಾಣಬಯಸುವ ಭಕ್ತರಿಗಷ್ಟೇ ಗೋಚರಿಸುವ ಸತ್ಯ. ಅಮೆರಿಕದ ಅಧ್ಯಕ್ಷರೇ ಆಗಲಿ, ಸೌದಿಯ ದೊರೆಯೇ ಆಗಲಿ, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯೇ ಇರಲಿ, ಶ್ರೀ ಸುಗುಣೇಂದ್ರ ತೀರ್ಥರ ನಿರ್ಮಲ ಮನಸ್ಸಿನ ಉದ್ದೇಶಗಳನ್ನು
ಯಾವುದೇ ತಾರತಮ್ಯವಿಲ್ಲದೆ ಈಡೇರಿಸಲು ಮುಂದಾಗುವುದು ಕಾಕತಾಳೀಯವೂ ಅಲ್ಲ, ಅನುಕೂಲಸಿಂಧು ಧೋರಣೆಯೂ ಅಲ್ಲ.

ಈ ಅರಿವು ನಮ್ಮ ಸಮಾಜದಲ್ಲಿ ದಿನೇದಿನೆ ಬೆಳೆಯುತ್ತಿರುವ ಭಾವನೆ ಕೂಡ ಎಂಬುದು ಒಂದು ಆಶಾದಾಯಕ ಬೆಳವಣಿಗೆ. ಶ್ರೀ ಆನಂದ ತೀರ್ಥರ ಬಳಿಕ ಗುರುಪರಂಪರೆಯಲ್ಲಿ ಕಾಣಸಿಗುವ ಶ್ರೀ ವಾದಿರಾಜರ ನಂತರದ ಯುಗಪುರುಷರೆಂದು ಕರೆಯಬಹುದಾದವರು ಶ್ರೀ ಸುಗುಣೇಂದ್ರ ತೀರ್ಥರು. ಇಂಥ
ಮಹಾಯತಿಗಳ ೪ನೇ ಪರ್ಯಾಯದ ಹೊಸ್ತಿಲಲ್ಲಿ ನಿಂತಿರುವ ನಾವೆಲ್ಲರೂ ಆ ಅಮೃತಘಳಿಗೆಯನ್ನು ಧನ್ಯತೆಯಿಂದ ಕಣ್ತುಂಬಿಕೊಂಡು, ಭಗವದ ನುಗ್ರಹಕ್ಕೆ ಮತ್ತು ಗುರುಕಾರುಣ್ಯಕ್ಕೆ ಪಾತ್ರರಾಗುವ ಅಪೂರ್ವ ಅವಕಾಶವನ್ನೇ ಪಡೆದಿದ್ದೇವೆ. ಇಂಥ ಗುರುಗಳ ನಿರಂತರ ಪ್ರಯತ್ನದಿಂದಾಗಿ ಇಡೀ ವಿಶ್ವವೇ ಕೃಷ್ಣಪ್ರಜ್ಞೆಯತ್ತ ನಡೆಯುವಂತಾಗಲಿ. ಭಗವದ್ಗೀತೆಯ ಸಾರಾಂಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭವಸಾಗರವನ್ನು ದಾಟಿ ಮೋಕ್ಷ ಪಡೆಯುವ ಪ್ರಜ್ಞೆಯನ್ನು ಜಾಗೃತವಾಗಿರಿಸಿ ಕೊಳ್ಳುವಂತಾಗಲಿ.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *