Wednesday, 11th December 2024

ಅರಿವಿನ ಅದ್ಭುತವೀ ಪ್ರೇರಣಾ ಪಿರಮಿಡ್‌

ಶ್ವೇತಪತ್ರ

ಡಾ.ಶ್ವೇತಾ ಬಿ.ಸಿ.

shwethabc@gmail.com

ಈಜಿಪ್ಟಿನ ಭೂದೃಶ್ಯದ ಮುಖ್ಯ ಭಾಗವಾಗಿರುವ ಪಿರಮಿಡ್‌ಗಳನ್ನು ತಮ್ಮದೇ ಎತ್ತರದಿಂದ ಇಣುಕಿದರೆ 40 ಶತಮಾನಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ, ನಿರಂತರ ಆಶ್ಚರ್ಯಗಳನ್ನು ಕೌತುಕಗಳನ್ನು ಉಂಟುಮಾಡುತ್ತವೆ. ಪಿರಮಿಡ್‌ನಂತೆ ನಮ್ಮನ್ನು ಕಾಡುವ ಅಸಂಖ್ಯ ಮಾನವ ಸೃಷ್ಟಿಯ ಅಚ್ಚರಿಗಳು ಕ್ರಿಯಾಶೀಲತೆಯ ಮೂಲ.

ವಿಜ್ಞಾನ-ತಂತ್ರಜ್ಞಾನ ಮಹಾಕಾವ್ಯ ಕಲಾಕೃತಿ ಅಧಿಕಾರದ ಸ್ಥಾನ ಹೀಗೆ ವ್ಯಕ್ತಿಯೊಬ್ಬ ಮಾಡುವ ಪ್ರಯತ್ನಗಳು, ಪರದಾಟಗಳು, ತಡ ಕಾಟಗಳು ಮನುಷ್ಯನ ಸ್ವಭಾವ ಮತ್ತು ಆತನೊಳಗೆ ಹುಟ್ಟುವ ಆಂತರಿಕ ಚಲನೆಯ ಪ್ರತಿಬಿಂಬಗಳೇ ಆಗಿವೆ. ಬದುಕಿನುದ್ದಕ್ಕೂ ನಮ್ಮನ್ನು ಹುರಿದುಂಬಿಸಬಹುದಾದ ಪ್ರೇರಣಾ ಪಿರಮಿಡ್ ಒಂದು ನಮ್ಮೊಳಗಿದೆ. ನಮ್ಮ ಆತಂಕ ಭಯವನ್ನು ಕಡಿಮೆ ಮಾಡಿ ಜೀವನದ ಬಗ್ಗೆ ಸುತ್ತಲಿನ ಜಗತ್ತಿನ ಬಗ್ಗೆ ಪ್ರೀತಿ ಯನ್ನು ವಿಸ್ಮಯವನ್ನು ನಂಬಿಕೆಯನ್ನು ಹುಟ್ಟಿಸುತ್ತಾ ಕಾಲವನ್ನು ಎದುರಿಸುವ ಧೈರ್ಯ ಸ್ಥೈರ್ಯವನ್ನು ನಾಳೆಗಳ ಬಗ್ಗೆ ಭರವಸೆಯನ್ನು ಮೂಡುವಂತೆ ಮಾಡುತ್ತಾ ನಮ್ಮನ್ನು ಸದಾ ಪ್ರಭಾವಿಸುತ್ತಲೇ ಇರುತ್ತದೆ.

ಮನಸ್ಸನ್ನು ರೋಗಲಕ್ಷಣದ ಬುಟ್ಟಿಯಾಚೆ ನೋಡುತ್ತಾ ಪಾಸಿಟಿವ್ ಮೆಂಟಲ್ ಹೆಲ್ತ ಹೇಗೆ ರಚನೆಗೊಂಡಿದೆ ಎಂಬುದನ್ನು ತನ್ನ ಸಂಶೋಧನೆಗಳ ಮೂಲಕ ವಿವರಿಸುತ್ತಾ ಅಮೆರಿಕದ ಮನೋವಿಜ್ಞಾನಿ ಅಬ್ರಹಾಂ ಮ್ಯಾಸ್ಲೋ ರಚಿಸಿದ ಸರಳ ತ್ರಿಕೋನಾಕಾರದ ಐದು ಹಂತ ಗಳನ್ನು ಒಳಗೊಂಡ ಪ್ರೇರಣಾ ಪಿರಮಿಡ್ ಮನುಷ್ಯ ತನ್ನ ಕೊರತೆಗಳನ್ನು ಮೀರಿ ತನ್ನದೇ ಸಾಮರ್ಥ್ಯದ ಅರಿವಿನೊಂದಿಗೆ ತನ್ನ ಅತ್ಯುತ್ತಮಗಳನ್ನು ಗುರುತಿಸಿಕೊಳ್ಳುವ ಚೌಕಟ್ಟನ್ನು ಒದಗಿಸಿಕೊಡುತ್ತದೆ.

ನಾವೆಲ್ಲರೂ ನಮ್ಮ ಬದುಕನ್ನು ಹೇಗೆ ಅರ್ಥಪೂರ್ಣವಾಗಿಸಿಕೊಳ್ಳುತ್ತೇವೆ ಎಂಬ ಹೊಳಹುಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಮನುಷ್ಯನ ಪ್ರೇರಣೆ ಹಾಗೂ ಅವನ ವೈಯಕ್ತಿಕ ಬೆಳವಣಿಗೆಯ ಮೂಲವೇ ಪ್ರತಿದಿನ ಅವನ ಬದುಕಲ್ಲಿ ಎದುರಾಗುವ ಅಗತ್ಯತೆಗಳು ಹಾಗೂ ಅವಶ್ಯಕತೆಗಳು. ಇವುಗಳನ್ನು ಪೂರೈಸಿಕೊಳ್ಳಲು ಆ ಮೂಲಕ ನಿರ್ದಿಷ್ಟ ಗುರಿಯನ್ನು ಮುಟ್ಟಲು ಆಂತರಿಕವಾಗಿ ಮನುಷ್ಯ ಹೇಗೆ ಚಾಲನೆಯಲ್ಲಿರುತ್ತಾನೆ ಎಂಬ ವಿವರಣೆಯೇ ಮ್ಯಾಸ್ಲೋನ ಐದು ಹಂತಗಳ ಈ ಪ್ರೇರಣಾ ಪಿರಮಿಡ್.

ಮನುಷ್ಯನ ಅವಶ್ಯಕತೆಗಳು ಅವನ ಅಗತ್ಯತೆಗಳಿಗೆ ಅನುಗುಣವಾಗಿ ಬದುಕನ್ನು ಪ್ರತಿನಿಽಸುತ್ತವೆ. ಪ್ರೇರಣಾ ಪಿರಮಿಡ್ಡಿನ ಮೊದಲ
ಎರಡು ಹಂತಗಳನ್ನು ಮೂಲಭೂತ ಅಗತ್ಯಗಳು ಎಂದು ಪರಿಗಣಿಸಿದರೆ ಕ್ರಮವಾಗಿ ನಂತರದ ಎರಡು ಹಂತಗಳು ಮಾನಸಿಕ ಅಗತ್ಯ
ಗಳಾಗಿವೆ ಮತ್ತು ಕೊನೆಯ ಹಂತವು ಸ್ವಯಂ ಅರಿವಿನ ಹಂತವಾಗಿದೆ. ಮೊದಲ ನಾಲ್ಕು ಹಂತಗಳು ಮನುಷ್ಯನ ಕೊರತೆಗಳಾಗಿ ಅವನನ್ನು ಪ್ರೇರೇಪಿಸುತ್ತ ಇರುತ್ತವೆ ಕೊರತೆ ನೀಗುವವರೆಗೂ. ಸ್ವಯಂ ಅರಿವಿನ ಪ್ರೇರಣೆಯೇ ಬೇರೆ ತೆರೆನಾದದ್ದು ನಮ್ಮನ್ನು ಹೆಚ್ಚು ಹೆಚ್ಚು ಉಲ್ಲಸಿತಗೊಳಿಸುವ ಕೆಲಸಗಳಲ್ಲಿ ತೊಡಗುವಂತೆ ಅವು ನಮ್ಮನ್ನು ಉತ್ತೇಜಿಸುತ್ತವೆ. ಪ್ರೇರಣಾ ಪಿರಮಿಡ್ ಬಹಳ ಸರಳವಾಗಿ
ಬದುಕನ್ನು ನಮಗೆ ಅರ್ಥೈಸುತ್ತದೆ. ಉದಾಹರಣೆಗೆ ಹೊಟ್ಟೆ ಬಟ್ಟೆ ಚಿಂತೆಯ ಕಸರತ್ತು ಪೂರೈಕೆಯಾದ ಮೇಲೆ ನಮ್ಮ ಮನದಂಗಳದಿ ಹೊಸ ಜಾಗವೊಂದು ಖಾಲಿ ಮೂಡುತ್ತದೆ.

ಆ ಖಾಲಿ ಬಿಟ್ಟ ಜಾಗಗಳನ್ನು ಬದುಕಿನ ಅಗತ್ಯಗಳ ಆಶಯಕ್ಕೆ ತಕ್ಕಂತೆ ಮತ್ತೆ ಮತ್ತೆ ತುಂಬಿಸುತ್ತ ಹೋಗುತ್ತೇವೆ. ಹೊಸದೊಂದು
ಬಟ್ಟೆಯ ಆಸೆ, ಸ್ವಂತ ಸೂರಿರಬೇಕೆಂಬ ಆಸೆ, ಇನ್ನೂ ಹೆಚ್ಚು ಪಗಾರ ನೀಡುವ ಕೆಲಸದ ಆಸೆ, ಪಕ್ಕದ ಮನೆಗೆ ಹೊಸ ಕಾರೊಂದು
ಬಂತು ನಾನ್ಯಾವಾಗ ತೆಗೆದುಕೊಳ್ಳಲಿ ಎಂಬ ಆಸೆ. ಹೀಗೆ ಆಸೆ ಅಗತ್ಯಗಳ ರೂಪ ಪಡೆದು ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಚಾಲ್ತಿಯಲ್ಲಿಡುತ್ತಲೇ ಇರುತ್ತದೆ ಮತ್ತೆ ಮತ್ತೆ.

ಮನುಷ್ಯನ ಅಗತ್ಯತೆಗಳ, ಅವಶ್ಯಕತೆಗಳ ಮೂಲ ಅವನ ಹಸಿವು. ಮನುಷ್ಯನಿಗೆ ಮೂರೂ ತೆರೆನಾದ ಹಸಿವುಗಳಿವೆ ಜೈವಿಕ ಹಸಿವು,
ಮಾನಸಿಕ ಹಸಿವು, ಅರಿವಿನ ಹಸಿವು. ಪ್ರೇರಣಾ ಪಿರಮಿಡ್‌ನ್ನು ಸುಮ್ಮನೆ ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ ಹಸಿವಿನ ಜಗತ್ತು
ಅನಾವರಣಗೊಳ್ಳುತ್ತಾ ನಾವೆಲ್ಲಿ ಕಳೆದು ಹೋಗಿದ್ದೇವೆ ಎಂಬುದನ್ನು ನೆನಪಿಸುತ್ತದೆ. ಪಿರಮಿಡ್‌ನ ಬಹುಮುಖ್ಯ ಭಾಗವನ್ನು ಆವರಿಸಿ ಕೊಂಡಿರುವುದು ಜೈವಿಕ ಹಸಿವು. Materialist possession ನ ಭಾಗವೇ ಆಗಿರುವ ಈ ಹಸಿವಿನೊಳಗೆ unfortunately ನಾವು stuck ಆಗಿಬಿಟ್ಟಿರುತ್ತೇವೆ. ಏಕೆಂದರೆ ಇಲ್ಲಿನ ಹಸಿವು ಇನ್ನೂ ಬೇಕು ಎಂಬ ಹಂಬಲದೊಂದಿಗೆ ನಮ್ಮನ್ನು ಅಸಹಾಯಕರನ್ನಾಗಿಯೂ ನಿರ್ಬಲರನ್ನಾಗಿಯು ಮಾಡಿಬಿಟ್ಟಿರುತ್ತದೆ.

What next? ಎಂಬ ಪ್ರಶ್ನೆ ನಮ್ಮನ್ನು ಊಟ, ಬಟ್ಟೆ, ನಿz ,ಕಾರು, ಮನೆ, ಬ್ಯಾಂಕ್ ಬ್ಯಾಲೆನ್ಸ್ ಗಳೆಂಬ Attention ಹಾಗೂ possession ಗಳಿಗಷ್ಟೇ ಸೀಮಿತಗೊಳಿಸಿ ಬಿಟ್ಟಿದೆ. ಬದುಕಿನ ಜರ್ನಿಯಲ್ಲಿ ಜೈವಿಕ ಮಾನಸಿಕ ಹಸಿವನ್ನು ಮೀರಿ ಮೇಲ್ಮುಖವಾಗಿ ಚಲಿಸುತ್ತ ನಮ್ಮ potential ಗಳನ್ನ Strength ಗಳನ್ನ efficiency ಗಳನ್ನ ಗುರುತಿಸಿಕೊಳ್ಳುತ್ತಾ ನಮ್ಮ ಅತ್ಯುತ್ತಮವಾದ ಅರಿವಿನ ಅದ್ಭುತವನ್ನು ನಮ್ಮದೇ ಸೃಜನಶೀಲತೆಯಲ್ಲಿ ಕ್ರಿಯಾಶೀಲತೆಯ ಚೌಕಿಟ್ಟಿನೊಳಗೆ ಅಚ್ಚೊತ್ತಬಹುದಾಗಿದೆ.

ಹೀಗೆ ಅರಿವಿನ ಹಸಿವು ಬದುಕಿಗೆ ಪೂರ್ತಿಯಾದ ಅರ್ಥವನ್ನು ತುಂಬುತ್ತ ನಮ್ಮನ್ನು ನಾವು ಮರು ಭೇಟಿಯಾಗುವ ಮಾಂತ್ರಿಕತೆಯನ್ನು ಹೊಂದಿದೆ. ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಭ್ರಮೆಯ ಜಗತ್ತಿನಲ್ಲಿ, ಸ್ವಮೋಹದ ಬಲೆಯಲ್ಲಿ ಹೊರ ಬರಲಾಗದಂತೆ ಅನಿಶ್ಚಿತತೆಯ ದೋಣಿಯಲ್ಲಿ ಸಿಲುಕಿರುವ ನಮಗೆ ಮ್ಯಾಸ್ಲೋನ ಈ ಪ್ರೇರಣಾ ಪಿರಮಿಡ್ ದಿಕ್ಸೂಚಿಯಾಗಿದೆ. ಸಮತೋಲನವಾಗಿ ವಿವೇಕಯುತವಾಗಿ ಸೊಗಸಾಗಿ ನಾವು ನಮ್ಮ ಬದುಕುಗಳನ್ನು ಜೋಡಿಸಿಲ್ಲವೆಂಬುದರ ಪ್ರತಿಬಿಂಬವೇ ಆಗಿದೆ ಪ್ರೇರಣಾ ಪಿರಮಿಡ್. ಪಿರಮಿಡ್ ಸೂಚಿಸುವ ಅತ್ಯುನ್ನತವಾದ ಸಮತೋಲನವೆಂದರೆ ನಮ್ಮ ಸಂಕೀರ್ಣವಾದ ವ್ಯಕ್ತಿತ್ವ ಸ್ವಭಾವದ ನಡುವೆಯೂ ಸಾಮರಸ್ಯದ ಬದುಕಿನ ಭಾವಚಿತ್ರ ವನ್ನು ಹೊಸ ಅರಿವಿನ ಮೂಲಕ ಪೂರ್ಣಗೊಳಿಸಬೇಕೆಂಬುದೇ ಆಗಿದೆ