Friday, 13th December 2024

ಪಿರಮಿಡ್ಡಿನ ನಿಗೂಢ ಲೋಕದಲ್ಲಿ ಒಂದು ರಾತ್ರಿ ಕಳೆದ ಅನೂಹ್ಯ ಅನುಭವ

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

‘ನೀವು ಈಜಿಪ್ಟಿನಿಂದ ವಾಪಸ್ ಬಂದ ಬಳಿಕ ಈ ಪುಸ್ತಕವನ್ನು ಓದಲೇಬೇಕು’ ಎಂದು ಯೋಗಿ ದುರ್ಲಭಜೀ ನನಗೊಂದು ಪುಸ್ತಕವನ್ನು
ಕಳುಹಿಸಿಕೊಟ್ಟಿದ್ದರು. ಈಜಿಪ್ಟಿಗೆ ಹೋಗುವ ಮುಂಚೆಯೇ ಆ ಕೃತಿ ನನ್ನ ಕೈಸೇರಿದ್ದರೂ, ಅವರ ಸೂಚನೆ ಮೇರೆಗೆ ನಾನು ತೆರೆದು
ನೋಡುವ ಗೋಜಿಗೆ ಹೋಗಿರಲಿಲ್ಲ. ಅಲ್ಲಿಂದ ವಾಪಸ್ ಬಂದವನೇ ಆ ಪುಸ್ತಕವನ್ನು ಕೈಗೆತ್ತಿಕೊಂಡೆ.

ಅದು ಪಾಲ್ ಬೃಂಟನ್ (1898 -1981) ಬರೆದ Search in Secret India, A Message from Arunachala The Secret Path ಎಂಬ ಪುಸ್ತಕ. ಅದನ್ನು ಬರೆದಿದ್ದು 1936 ರಲ್ಲಿ. ನೀವು ಪಾಲ್ ಬೃಂಟನ್ ಹೆಸರನ್ನು ಕೇಳಿರುತ್ತೀರಿ. ಮೂಲತಃ ಅವರು ಬ್ರಿಟಿಷ್ ಲೇಖಕರು ಮತ್ತು ಅಧ್ಯಾತ್ಮಿಕ ವಿಷಯ ಲೇಖಕರು. ಅದಕ್ಕೂ ಮಿಗಿಲಾಗಿ ಹೇಳಬೇಕೆಂದರೆ, ರಮಣ ಮಹರ್ಷಿಗಳ ಜೀವನ ಮತ್ತು ಸಂದೇಶಗಳಿಂದ ಪ್ರಭಾವಿತರಾದವರು. ರಮಣರನ್ನು ತಮ್ಮ ಗುರು ಎಂದು ಸ್ವೀಕರಿಸಿದವರು.

ಬೃಂಟನ್ ಒಂದು ರೀತಿಯಲ್ಲಿ, ರಮಣರನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿ ದವರು. ಬೃಂಟನ್ ಬರೆದ ಅ Search in Secret India, A Message from Arunachala ಮತ್ತು The Secret Path ಜನಪ್ರಿಯ ಕೃತಿಗಳು. ರಮಣ ಮಹರ್ಷಿ ಗಳ ಜತೆ ಅವರು ನಡೆಸಿದ ಮಾತುಕತೆ, ಸಂದರ್ಶನ ಇಂದಿಗೂ ಚರ್ಚಿತ ಮತ್ತು ಪ್ರಸ್ತುತ. ರಮಣರ ಜತೆಗಿನ ಸಾಂಗತ್ಯದಿಂದಾಗಿ ಪಾಲ್ ಬೃಂಟನ್ ಭಾರತದಲ್ಲಿ ಮುನ್ನೆಲೆಗೆ ಬಂದವರು.

ಈಜಿಪ್ಟಿನಿಂದ ಮರಳಿದ ಬಳಿಕ ಬೃಂಟನ್ ಬರೆದ ಅ A Search in Secret Egypt ಪುಸ್ತಕ ಓದಲಾರಂಭಿಸಿದೆ. ಯೋಗಿ ದುರ್ಲಭಜೀ ಯಾಕೆ ಈ ಪುಸ್ತಕವನ್ನು ಓದುವಂತೆ ನನಗೆ ಸೂಚಿಸಿದರು ಎಂಬುದನ್ನು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಪಿರಮಿಡ್ಡು ಗಳ ಬಗ್ಗೆ ಸಾವಿರಾರು ವಿeನಿಗಳು, ಇತಿಹಾಸಕಾರರು, ಪುರಾತತ್ವ ಶಾಸಜ್ಞರು, ಕುತೂಹಲ ಸಂಗತಿಗಳ ಬಗ್ಗೆ ಬೆನ್ನು ಹತ್ತುವವರು. ಹೀಗೆ ಅವೆಷ್ಟೋ ಸಹಸ್ರ ಮಂದಿ ಅಧ್ಯಯನ, ಸಂಶೋಧನೆ ಮಾಡಿದ್ದಾರೆ. ಪಿರಮಿಡ್ಡು ಗಳ ಕೌತುಕಗಳ ಬಗ್ಗೆ ತಲೆ ಕೆಡಿಸಿಕೊಂಡವರು ಕಮ್ಮಿಯೇನಲ್ಲ.

ಆದರೆ, ಅವರಾರೂ ಪಾಲ್ ಬೃಂಟನ್ ಮಾಡಿದ ಸಾಹಸ ಮತ್ತು ಹೊಸ ಹೆಜ್ಜೆ ತುಳಿದವರಲ್ಲ. ತಮ್ಮ ತಮ್ಮ ಆಸಕ್ತಿಯ ನೆಲೆಗಳಲ್ಲಿ ಅವರೆಲ್ಲ ಅಧ್ಯಯನ ಮಾಡಿದರೆ, ಬೃಂಟನ್ ಮಾತ್ರ ಪಿರಮಿಡ್ಡಿನ ಒಳಗೆ ಏಕಾಂಗಿಯಾಗಿ ಒಂದು ರಾತ್ರಿ ಕಳೆಯಲು ನಿರ್ಧರಿಸಿ ದ್ದರು. ಅಲ್ಲಿಯವರೆಗೆ ಅಂಥ ಹುಚ್ಚು ಸಾಹಸಕ್ಕೆ ಯಾರೂ ಮುಂದಾಗಿರಲಿಲ್ಲ. ಪಿರಮಿಡ್ಡಿನ ಒಳಗೆ ಅತೀಂದ್ರಿಯ ಅನುಭವ ಪಡೆಯುವುದು ಅವರ ಉದ್ದೇಶ ವಾಗಿತ್ತು. ಅದು ಅಷ್ಟು ಸುಲಭವಾಗಿರಲಿಲ್ಲ. ಕಾರಣ ಪಿರಮಿಡ್ಡು ನಿರ್ವಹಣೆಯ ಹೊಣೆಹೊತ್ತ ಸಂಬಂಧಪಟ್ಟವರನ್ನು ಮನವೊಲಿಸಿ ಅನುಮತಿ ಪಡೆಯಬೇಕಿತ್ತು. ಆ ದಿನಗಳಲ್ಲಿ ಇವೆಲ್ಲವನ್ನೂ ಪತ್ರ ವ್ಯವಹಾರಗಳ ಮೂಲಕವೇ ಮಾಡಬೇಕಿತ್ತು. ತಮ್ಮ ಹುಡುಕಾಟದ ಮೂಲ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟ ಬಳಿಕ, ಗ್ರೇಟ್ ಪಿರಮಿಡ್ಡಿನಲ್ಲಿ ಖುಫು ದೊರೆಯ ಗೋರಿಯಲ್ಲಿ ಒಂದು ರಾತ್ರಿ ಕಳೆಯಲು ಅವರಿಗೆ ಅನುಮತಿ ನೀಡಲಾಯಿತು.

ಈಗ ಪ್ರವಾಸಿಗರ ಅನುಕೂಲಕ್ಕಾಗಿ ಪಿರಮಿಡ್ಡಿನೊಳಗೆ ವಿದ್ಯುತ್ ದೀಪವನ್ನು ಅಳವಡಿಸಲಾಗಿದೆ. ಆದರೆ ಬೃಂಟನ್ ಪಿರಮಿಡ್ಡಿನೊಳಗೆ ಪ್ರವೇಶಿಸಿದ ಆ ದಿನ (1934ರಲ್ಲಿ)ಗಳಲ್ಲಿ ವಿದ್ಯುತ್ ದೀಪಗಳಿರಲಿಲ್ಲ. ಸುತ್ತಲೂ ಕೊತ್ತಕತ್ತಲು. ಆ ರಾತ್ರಿ ಅವರು ಈಜಿಪ್ಟಿನ ಪ್ರಾಚೀನ ದೊರೆ -ರೊನ ಗೋರಿಯ ಮುಂದೆ ನಿಂತಾಗ ಗಾಢ ಕತ್ತಲು, ಸಹಿಸಲಸಾಧ್ಯವಾದ ಮೌನ. ತಾವು ಹೊಸ ಲೋಕದೆಡೆಗೆ ಪಯಣ ಬೆಳೆಸಿದ್ದೇನೆ ಎಂಬುದರ ಸಣ್ಣ ಸುಳಿವೂ ಅವರಿಗಿರಲಿಲ್ಲ. ಅಲ್ಲಿ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಅವರ ಮನಸ್ಸು ಅಲ್ಲಿಂದ ಹೊರಟು ಹೋಗು ಎಂದು ದಬ್ಬುತ್ತಿತ್ತು, ತಳ್ಳುತ್ತಿತ್ತು. ಆ ಅಸಹನೀಯ ವಾತಾವರಣದಲ್ಲಿ ಒಂದು ಕ್ಷಣ ಕಳೆಯುವುದು ಸಹ ಸಾಧ್ಯವಿರಲಿಲ್ಲ. ಆದರೆ ಬೃಂಟನ್ ತಮ್ಮ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ, ಏನೇ ಬಂದರೂ ಅದನ್ನು ಹೊಸ ಅನುಭವವಾಗಿ ಸ್ವೀಕರಿಸಬೇಕೇ ಹೊರತು, ಭಯ-ಆತಂಕ ಗಳಿಂದ ಓಡಿ ಹೋಗಬಾರದು ಎಂದು ತಮಗೆ ಧೈರ್ಯ ಹೇಳಿಕೊಂಡು ಬಂದಿದ್ದನ್ನೆಲ್ಲ ಎದುರಿಸಲು ತೀರ್ಮಾನಿಸಿದರು.

ಈ ಸಂದರ್ಭದಲ್ಲಿ ಅವರ ಮುಂದೆ ಅನೇಕ ಘಟನೆಗಳು ಜರುಗುತ್ತವೆ. ಅವರ ಮುಂದೆ ತಾವು ಎಂದೆಂದೂ ನೋಡದ ವಿಚಿತ್ರ, ವಿಕಾರ ಸ್ವರೂಪದ ಜೀವಿಗಳು ಅವರ ಮುಂದೆ ಬರುತ್ತವೆ, ಗೋರಿಯ ಮೇಲೆ ಹಾರಾಡುತ್ತವೆ, ಅವುಗಳ ಮಧ್ಯೆ ಅವರವರ ಮಧ್ಯೆ ಹಾಕ್ಯಾಟಗಳು ನಡೆಯುತ್ತವೆ. ಎಲ್ಲಿಂದಲೋ ಬಂದು ಅವು ಕತ್ತು ಹಿಚುಕಿದಂತೆ ಭಾಸವಾಗುತ್ತವೆ. ಇಂಥ ಸಂದರ್ಭದಲ್ಲಿ ಅವರು ಅಲ್ಲಿಂದ ಓಡಿ ಬರದಿದ್ದುದೇ ಆಶ್ಚರ್ಯ. ಬೇರೆಯವರಾಗಿದ್ದರೆ ಅಲ್ಲಿಯೇ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು, ಇಲ್ಲವೇ ಹೃದಯಾ ಘಾತದಿಂದ ಅಸು ನೀಗುತ್ತಿದ್ದರು. ಆಗ ಒಂದು ವಿಚಿತ್ರ ಸಂಭವಿಸುತ್ತದೆ.

ಅಸ್ಪಷ್ಟ ಆಕೃತಿಯೊಂದು ಅವರ ಹೆಗಲ ಮೇಲೆ ಕೈ ಹಾಕಿ, ತಾನು ನಿಮ್ಮ ಸ್ನೇಹಿತನೆಂದೂ, ಭಯಗ್ರಸ್ತನಾಗಕೂಡದೆಂದೂ ಸಂತೈಸುತ್ತದೆ. ಆ ಕತ್ತಲೆಯಲ್ಲಿ ಮಿಂಚು ಸರಿದಂತಾಗುತ್ತದೆ, ಅಬ್ಬ ಧರ್ಮಗುರು ಬರುತ್ತಾನೆ. ‘ನೀನೇಕೆ ಇಲ್ಲಿಗೆ ಬಂದೆ? ನಮ್ಮ ಪ್ರಪಂಚದಲ್ಲಿ ನಿನಗೇನು ಕೆಲಸ?’ ಎಂದು ಪ್ರಶ್ನಿಸುತ್ತಾನೆ. ಆದರೆ, ಬೃಂಟನ್ ಆ ಧರ್ಮಗುರು ಜತೆ ತಮಗರಿವಿಲ್ಲದಂತೆ ಮಾತುಕತೆಗೆ ತೊಡಗುತ್ತಾರೆ. ‘ನಮ್ಮ ಉಸಾಬರಿ ನಿನಗೇಕೆ? ನೀನೇಕೆ ಇಲ್ಲಿಂದ ಹೊರಟುಹೋಗಬಾರದು? ನಮ್ಮ ಜಗತ್ತಿನಲ್ಲಿ ನಿನಗೇನು ಕೆಲಸ?’ ಎಂದು ಆ ಧರ್ಮಗುರು ಪ್ರಶ್ನಿಸುತ್ತಿದ್ದರೆ, ಅವನ ಪ್ರಶ್ನೆಗಳಿಗೆ ಉತ್ತರಿಸಲು ಬೃಂಟನ್ ತಡಕಾಡುತ್ತಾರೆ.

‘ಇದೊಂದು ಸ್ವಪ್ನಲೋಕ. ಇಲ್ಲಿದ್ದರೆ ನೀನು ನಿನ್ನ ಲೋಕದಿಂದ ದೂರ ಹೋಗುತ್ತೀಯ, ಎಚ್ಚರ’ ಎಂದು ಆ ಧರ್ಮಗುರು ಹೇಳಿದಾಗ, ‘ನಿಮ್ಮ ಲೋಕವನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಕಾರಣದಿಂದಲೇ ನಾನು ಇಲ್ಲಿಗೆ ಆಗಮಿಸಿದ್ದೇನೆ’ ಎಂದು ಬೃಂಟನ್ ವಾದ ಮಾಡುತ್ತಾರೆ. ಆಗ ಅಲ್ಲಿಗೆ ಒಂದು ಪ್ರೇತದಂತೆ ಗೋಚರಿಸುವ ಆಕೃತಿ ಬಂದು, ‘ಅಲ್ಲಿ ಕಾಣುವ ಶವದ ಗೋರಿಯ ಮೇಲೆ ಮಲಗು’ ಎಂದು ಹೇಳುತ್ತದೆ. ಬೃಂಟನ್ ಹಾಗೆ ಮಾಡುತ್ತಾರೆ. ಆಗ ಆ ಶವ ಅಡಲಾರಂಭಿಸುತ್ತದೆ. ನೋಡನೋಡುತ್ತಿದ್ದಂತೆ ಆ ಶವದಿಂದ ಊದುಬತ್ತಿ ಯಿಂದ ಬಿಳಿ ಹೊಗೆ ಹೊಮ್ಮುವಂತೆ, ಒಂದು ಆಕೃತಿ ಹೊರಬಿದ್ದು ಬೃಂಟನ್ ಮುಂದೆ ಸುಳಿದಾಡಲಾ ರಂಭಿಸುತ್ತದೆ. ಆಗ ಬೃಂಟನ್ ಅವರಿಗೆ ಇದು ತಮ್ಮ ಮನಸ್ಸಿನೊಳಗೆ ಹುಯ್ದಾಡುತಿರುವ ಆಲೋಚನೆಯಾ, ಕಲ್ಪನೆಯ ಕಸರತ್ತಿನ ಆಟವಾ ಅಥವಾ ನಿಜಕ್ಕೂ ತಾವು ನೋಡುತ್ತಿರುವುದೆಲ್ಲ ಸತ್ಯ ಘಟನೆಗಳಾಎಂಬ ಗೊಂದಲಗಳು ಕಾಡಲಾರಂಭಿಸುತ್ತವೆ.

ಆಗ ಆ ಪ್ರೇತ, ‘ಈ ಗೋರಿಯಲ್ಲಿ ಸೃಷ್ಟಿಯ ರಹಸ್ಯಗಳೆಲ್ಲ ಅಡಕವಾಗಿವೆ. ಸೃಷ್ಟಿಯಲ್ಲಿ ಹುಟ್ಟಿದ ಮನುಷ್ಯನ ಬಗ್ಗೆ ಮಾಹಿತಿ ಗಳನ್ನು ಸಂಗ್ರಹಿಸಿಡಲಾಗಿದೆ. ಇದನ್ನು ನೀನು ಅರ್ಥ ಮಾಡಿಕೊಳ್ಳಬಯಾ? ಅಷ್ಟಕ್ಕೂ ನನಗೇ ಇವೆಲ್ಲ ಅರ್ಥವಾಗಿಲ್ಲ. ನಿನಗೆ ಹೇಗೆ ತಿಳಿದೀತು? ಸುಮ್ಮನೆ ಬಂದ ದಾರಿಯಲ್ಲಿ ಹಿಂದಕ್ಕೆ ಹೋಗು’ ಎಂದು ಹೇಳಿ ಆ ಪ್ರೇತ ಅದೃಶವಾಗುತ್ತದೆ. ಪಿರಮಿಡ್ಡಿನೊಳಗೆ ತಾವು ಕಳೆದ ಕ್ಷಣಕ್ಷಣದ ಅನುಭವವನ್ನು ಸುಮಾರು ೩೩೦ ಪುಟಗಳ ಈ ಸುದೀರ್ಘ ಕೃತಿಯಲ್ಲಿ ಬೃಂಟನ್ ವಿವರಿಸುತ್ತ ಹೋಗು ತ್ತಾರೆ.

ತಾವು ಕಂಡಿzಲ್ಲವೂ ತಮ್ಮ ಭ್ರಮೆ, ಕಲ್ಪನೆಯಾಗಿರಬಹುದು ಎನ್ನುತ್ತಲೇ, ಅತೀಂದ್ರಿಯ ಶಕ್ತಿಯ ತಲ್ಲಣ, ರಹಸ್ಯ, ಮನಸ್ಸಿನ ತವಕ, ಪಿರಮಿಡ್ಡಿನ ನಿಗೂಢ ಲೋಕ, ಉತ್ತರ ಸಿಗದ ಪ್ರಶ್ನೆಗಳಿಗೆ ಹುಡುಕಾಟದ ಬಗ್ಗೆ ಬರೆಯುತ್ತ, ನಮ್ಮ ಮನಸ್ಸಿನಲ್ಲಿ ಅಸಂಖ್ಯ ಪ್ರಶ್ನೆಗಳನ್ನು ಎಬ್ಬಿಸುತ್ತಾರೆ. ಪಿರಮಿಡ್ಡುಗಳನ್ನು ಮತ್ತಷ್ಟು ನಿಗೂಢ ಲೋಕಕ್ಕೆ ಕೊಂಡೊಯ್ಯುತ್ತಾರೆ.

ಕೈರೋದಂದು ಗಾರ್ಬೇಜ್ ಸಿಟಿ

ಕೈರೋ ನಗರ ನ್ಯೂಯಾರ್ಕ್ ನಗರಕ್ಕಿಂತ ಹದಿನಾಲ್ಕು ಪಟ್ಟು ಹೆಚ್ಚು ಕಸವನ್ನು ಉತ್ಪಾದಿಸುವುದಂತೆ.

ಇದಕ್ಕೆ ಮುಖ್ಯ ಕಾರಣ ಜನಸಂಖ್ಯೆ. ನ್ಯೂಯಾರ್ಕ್ ನಗರದಲ್ಲಿ 84 ಲಕ್ಷ ಜನ ವಾಸಿಸುತ್ತಿದ್ದರೆ, ಕೈರೋದಲ್ಲಿ (ಗ್ರೇಟರ್ ಕೈರೋ) ಎರಡೂಕಾಲು ಕೋಟಿ ಜನ ವಾಸಿಸುತ್ತಿದ್ದಾರೆ. ಸತತ ನಾಲ್ಕು ದಿನ ಕಸ ಎತ್ತದಿದ್ದರೆ, ಕೈರೋ ರಸ್ತೆಗಳಲ್ಲಿ ಸಂಚರಿಸಲು ಆಗುವುದಿಲ್ಲ. ಆ ಪ್ರಮಾಣದಲ್ಲಿ ಕಸಗಳು ಸಂಗ್ರಹವಾಗುತ್ತವೆ. ಜನ ಮುಲಾಜಿಲ್ಲದೇ ಕಸಗಳನ್ನು ರಸ್ತೆಗೆ ಅಥವಾ ಕಂಡಕಂಡಲ್ಲಿ ಎಸೆಯುತ್ತಾರೆ. ಕೈರೋ ನಗರವೊಂದರ ಕಸ ಆಯಲು ಒಂದು ಲಕ್ಷ ಅರವತ್ತು ಸಾವಿರ ಮಂದಿಯಿದ್ದಾರೆ. ಅವರೆಲ್ಲರಿಗೂ ಮನ್ಷಿಯತ್ ನಸೇರ್ ಎಂಬ ಪ್ರದೇಶದಲ್ಲಿ ಒಂದು ಬಡಾವಣೆಯನ್ನೇ ನಿರ್ಮಿಸಿ ಕೊಡಲಾಗಿದೆ. ಈ ಪ್ರದೇಶವನ್ನು ಗಾರ್ಬೇಜ್ ಸಿಟಿ ಎಂದೇ ಕರೆಯುತ್ತಾರೆ. ಇದು ಕೊಳಗೇರಿಗಳ ಪೈಕಿ ಅಕ್ಷರಶಃ ದಯನೀಯ ಸ್ಥಿತಿಯಲ್ಲಿರುವ ಕೊಳಗೇರಿ!

ಇಲ್ಲಿ ಕುಡಿಯುವ ನೀರಿಗೆ ತತ್ವಾರ ಹಾಗೂ ದಿನದ ಇಪ್ಪತ್ತು ಗಂಟೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಕತ್ತೆ ಮತ್ತು ಕುದುರೆಗಳನ್ನು ಬಳಸಿ ಕಸವನ್ನು ಸಾಗಿಸಲಾಗುತ್ತದೆ. ಇಪ್ಪತ್ತು-ಮೂವತ್ತು ಅಡಿ ಎತ್ತರದ ಕಸದ ಮೂಟೆಗಳನ್ನು ಹೊತ್ತ ಕತ್ತೆಗಳ ಗಾಡಿ ನಗರದಲ್ಲಿ ಓಡಾಡುವು ದನ್ನು ಕಾಣಬಹುದು. ಈ ಚಿಂದಿ ಆಯುವವರನ್ನು ‘ಜಬ್ಬಾಲೀನ್’ ಎಂದು ಕರೆಯುತ್ತಾರೆ. ಅವರ ಮೂಲ ಕಸುಬು ಚಿಂದಿ ಆರಿಸುವುದು. ಈ ಜನ ತಾವು ಸಂಗ್ರಹಿಸಿದ ಶೇ.ತೊಂಬತ್ತರಷ್ಟು ಕಸವನ್ನು ಮರು\ಸಂಸ್ಕರಣ (ರೀಸೈಕಲ) ಮಾಡುತ್ತಾರೆ. ಇದಕ್ಕಾಗಿ ಹನ್ನೆರಡು ದೊಡ್ಡ ದೊಡ್ಡ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿರುವು ದಕ್ಕಿಂತ ಉತ್ತಮ ಸಂಸ್ಕರಣಾ ಘಟಕಗಳಿವೆ. ಆದರೂ ಈ ಪ್ರದೇಶಕ್ಕೆ ಬಂದ ವಿದೇಶಿ ಪ್ರವಾಸಿಗರಿಗೆ ಕೈರೋದ ಕರಾಳಮುಖದ ದರ್ಶನವಾಗುತ್ತದೆ.

ಆದರೂ ಅನೇಕರು ಇಲ್ಲಿಗೆ ಬರುತ್ತಾರೆ. ಇದಕ್ಕೆ ಕಾರಣ ಈ ಪ್ರದೇಶವನ್ನು ಬಳಸಿಯೇ ಅದ್ಭುತವೆನಿಸುವ ಗುಹಾಂತರ ಚರ್ಚ್ (Cave Church) ಇದೆ. ಅದನ್ನು ನೋಡಬೇಕೆಂದರೆ ಗಾರ್ಬೇಜ್ ಸಿಟಿಯ ನರಕ ಸದೃಶ ನೋಟವನ್ನು ಸವಿಯುವುದು ಅನಿ ವಾರ್ಯ. ಕಸಗಳನ್ನು ಕಸದ ತೊಟ್ಟಿಯಲ್ಲಿಯೇ ಹಾಕುವವರು ಕಮ್ಮಿ. ಹಾಕಬೇಕೆನಿಸಿದರೂ ತೊಟ್ಟಿಗಳು ಇದ್ದರೆ ತಾನೇ?

ಆಹಾರ ಮತ್ತು ಪ್ರವಾಸ

Traveling is food for soul ಎಂಬ ಮಾತಿದೆ. ಯಾವ ದೇಶಕ್ಕೆ ಹೋದರೂ ಅಲ್ಲಿನ ಸ್ಥಳೀಯ ಆಹಾರಗಳನ್ನು ಸೇವಿಸ ದಿದ್ದರೆ, ಅಷ್ಟರಮಟ್ಟಿಗೆ ಪ್ರವಾಸ ಅಪೂರ್ಣವಾದಂತೆ. I have to taste a culture to understand it ಎಂದು ಒಬ್ಬ ಪ್ರವಾಸಿ ಹೇಳಿದರೆ, ಮತ್ತೊಬ್ಬ ಐ I have to taste a food to understand culture ಎಂದು ಹೇಳಿದ್ದಾನೆ.

ಅವರಿಬ್ಬರ ಮಾತುಗಳನ್ನು ಕೇಳಿದರೆ, ಒಂದು ದೇಶವನ್ನು ಅರ್ಥ ಮಾಡಿಕೊಳ್ಳಲು ಆಹಾರ ಎಷ್ಟು ಮುಖ್ಯವೆಂಬುದು ಗೊತ್ತಾಗು ತ್ತದೆ. I love art, and I love food. So I am a perfect traveler ಎಂಬ ಮಾತು ಸಹ ಆಹಾರ ಮತ್ತು ಕಲೆ ಮೂಲಕ ಒಂದು ದೇಶ ವನ್ನು ಹೇಗೆ ಅರಿಯಬಹುದು ಎಂಬುದನ್ನು ಒತ್ತಿ ಹೇಳುತ್ತದೆ. ನಾನು ಯಾವುದೇ ದೇಶಕ್ಕೆ ಹೋದರೂ, ಸ್ಥಳೀಯ ಆಹಾರಗಳ ಸವಿಯನ್ನು ತಪ್ಪಿಸಿಕೊಳ್ಳುವುದಿಲ್ಲ. ಅಲ್ಲಿನ ಆಹಾರಗಳು ಅಲ್ಲಿನ ಸಂಸ್ಕೃತಿ, ಜನರ ಅಭಿರುಚಿ, ಬಾಯಿರುಚಿ, ರುಚಿಗ್ರಂಥಿಗಳ ರಸಾನುಭೂತಿಯನ್ನು ತಿಳಿಸಿಕೊಡುತ್ತವೆ. ವಿದೇಶಗಳಿಗೆ ಹೋದವರು ಅಲ್ಲಿಯೂ ಭಾರತೀಯ ರೆಸ್ಟೋರೆಂಟ್ ಗಳನ್ನು ಹುಡುಕಿ ಕೊಂಡು ಹೋಗುತ್ತಾರೆ. ಇಲ್ಲಿದ್ದಾಗಂತೂ ನಮ್ಮ ಆಹಾರಗಳನ್ನು ಸೇವಿಸುತ್ತೇವೆ. ಬೇರೆ ದೇಶಗಳಿಗೆ ಹೋದಾಗಲೂ ನಮ್ಮ ಆಹಾರಗಳನ್ನೇ ಬಯಸುವವರಿದ್ದಾರೆ. ವಿದೇಶಗಳಲ್ಲಿ ತಾವು ಸೇವಿಸುವ ಆಹಾರ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೆಲವರು ವಿದೇಶ ಪ್ರವಾಸ ಹಿಂದೇಟು ಹಾಕುತ್ತಾರೆ. ಇನ್ನು ಕೆಲವರು ನಾಲ್ಕಾರು ದಿನಗಳಿಗೆ ಮೊಟಕುಗೊಳಿಸಿಬಿಡುತ್ತಾರೆ.

ಇನ್ನು ಕೆಲವರು ಮನೆಯಿಂದಲೇ ಒಂದು ವಾರ-ಹತ್ತು ದಿನಗಳಿಗೆ ಬೇಕಾಗುವಷ್ಟು ಆಹಾರಗಳನ್ನು ಸಿದ್ಧಪಡಿಸಿಕೊಂಡು ಹೋಗು ತ್ತಾರೆ. ಅವರ ಪ್ರವಾಸ ಅಷ್ಟರಮಟ್ಟಿಗೆ ಅಪೂರ್ಣವೇ. ಅವರಿಗೆ ತಾವು ಭೇಟಿ ನೀಡಿದ ದೇಶದ ಆಹಾರ ಸಂಸ್ಕೃತಿಯೇ ಗೊತ್ತಾಗುವುದಿಲ್ಲ. ಯಾವುದಾದರೂ ದೇಶ ಅಥವಾ ಸಂಸ್ಕೃತಿಯನ್ನು ಆಹಾರಗಳ ಮೂಲಕ ಪರಿಚಯಿಸಿಕೊಳ್ಳಬೇಕು. ಹೀಗಾಗಿ ವಿದೇಶಕ್ಕೆ ಹೋದಾಗಲೂ ಅನ್ನ, ಸಾಂಬಾರು, ಇಡ್ಲಿ, ವಡೆ, ರೊಟ್ಟಿ, ಚಟ್ನಿಪುಡಿಗಾಗಿ ಹಂಬಲಿಸುವವರನ್ನು ಕಂಡಾಗ, ಅವರು ಪ್ರವಾಸಕ್ಕೆ ಇನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲವೇನೋ ಎನಿಸುತ್ತದೆ.

ಕೈರೋದಲ್ಲಿ ಇಡೀ ವಿಶ್ವದಲ್ಲಿಯೇ ದೊಡ್ಡದಾದ ‘ಓಯಾಸಿಸ್’ ಹೆಸರಿನ ಫುಡ್ ಕೋರ್ಟ್ ಒಂದಿದೆ. ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಅದನ್ನು the largest food court in the world ಎಂದು ಪಟ್ಟಿ ಮಾಡಿದೆ. ಸುಮಾರು ನಾಲ್ಕೂವರೆ ಸಾವಿರ ಜನ ಕುಳಿತುಕೊಳ್ಳ ಬಹುದಾದ, ಇಪ್ಪತ್ತೈದು ರೆಸ್ಟೋರೆಂಟು, ಎರಡು ಸಿನಿಮಾ ಥಿಯೇಟರ್ ಗಳಿರುವ ಈ ಫುಡ್ ಕೋರ್ಟಿನಲ್ಲಿ ಇಪ್ಪತ್ತು ದೇಶಗಳ ವಿಶೇಷ ಖಾದ್ಯಗಳು ಸಿಗುತ್ತವೆ.

ಸಾಮಾನ್ಯವಾಗಿ ಕೈರೋಕ್ಕೆ ಭೇಟಿ ನೀಡಿದವರು ಓಯಾಸಿಸ್‌ಗೆ ಭೇಟಿ ನೀಡದೇ ಬರುವುದಿಲ್ಲ. ಅದು ಕೇವಲ ಫುಡ್ ಕೋರ್ಟಷ್ಟೇ ಅಲ್ಲ, ಈಜಿಪ್ಟ್ ಮತ್ತು ಜಗತ್ತಿನ ಆಹಾರ ಸಂಸ್ಕೃತಿಯನ್ನು ಷೋಕೇಸ್ ಮಾಡುವ, ತಿಂಡಿಪೋತರ ನಿಜವಾದ ತೀರ್ಥ ಕ್ಷೇತ್ರ. ಪ್ರವಾಸೋದ್ಯಮ ದಲ್ಲಿ ಆಹಾರವೂ ಎಂಥ ಪ್ರಮುಖ ಪಾತ್ರವಹಿಸುತ್ತದೆ ಎಂಬುದಕ್ಕೆ ಓಯಾಸಿಸ್ ಒಂದು ಒಳ್ಳೆಯ ನಿದರ್ಶನ.

ಖಾನ್ ಅಲ-ಖಲೀಲಿ ಮಾರುಕಟ್ಟೆ
ಕೈರೋಕ್ಕೆ ಹೋದಾಗ ನೋಡಲೇಬೇಕಾದ ಒಂದು ಸ್ಥಳವೆಂದರೆ ‘ಖಾನ್ ಅಲ್-ಖಲೀಲಿ’ ಎಂಬ ಮಾರುಕಟ್ಟೆ. ಅಲ್ಲಿ ತಂದೆ-ತಾಯಿಯರನ್ನು ಬಿಟ್ಟು ಮತ್ತೆಲ್ಲವೂ ಸಿಗುತ್ತವೆ. ಅವರಿಬ್ಬರೂ ಮಾರಾಟಕ್ಕೆ ಸಿಗದಿರುವುದರಿಂದ ಅಲ್ಲಿ ಅಲಭ್ಯ ಅಷ್ಟೇ. ಇದನ್ನು ಓಲ್ಡ್ ಮಾರ್ಕೆಟ್ ಅಂತಾನೂ ಕರೆಯುತ್ತಾರೆ. ಈ ಮಾರುಕಟ್ಟೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಅಂಗಡಿಗಳಿವೆ.

ಜಗತ್ತಿನ ಎಲ್ಲ ವಸ್ತುಗಳೂ ಆ ಮಾರ್ಕೆಟ್ ನಲ್ಲಿ ಸಿಗುತ್ತವೆ. ಸಹನೆ ಮತ್ತು ಚೌಕಾಶಿ ಮಾಡುವ ಮೆಂಟಾಲಿಟಿ ಇದ್ದವರು ಮಾತ್ರ ಖಾನ್ ಅಲ-ಖಲೀಲಿ ಮಾರಿಕಟ್ಟೆಯಲ್ಲಿ ಶಾಪಿಂಗ್ ಮಾಡಬಹುದು. ಒಂದು ವಸ್ತುವಿಗೆ ಸಾವಿರ ರುಪಾಯಿ ಅಂತ ಹೇಳಿ ಕೊನೆಗೆ ಐವತ್ತು ರುಪಾಯಿಗೂ ಕೊಡುತ್ತಾರೆ. ಅದು ನಿಮ್ಮ ವ್ಯವಹಾರ ನೈಪುಣ್ಯವನ್ನು ಅವಲಂಬಿಸಿದೆ.

ಖಾನ್ ಅಲ-ಖಲೀಲಿ ಒಂದು ಕಾಲಕ್ಕೆ ಇಡೀ ಅರಬ್ ಜಗತ್ತಿನ ವ್ಯಾಪಾರ ಕೇಂದ್ರವಾಗಿತ್ತು. ಇಂದಿಗೂ ಆ ಮಾರುಕಟ್ಟೆ ಮಧ್ಯಪ್ರಾಚ್ಯ ದೇಶಗಳ ಅತ್ಯಂತ ಬೃಹತ್ ಮತ್ತು ಹಳೆಯ ಮಾರುಕಟ್ಟೆಯಾಗಿದೆ. ಹದಿಮೂರನೇ ಶತಮಾನದಲ್ಲಿ ಆ ಮಾರುಕಟ್ಟೆ ಸಾಂಬಾರು ಪದಾರ್ಥಗಳ ಮಾರಾಟಕ್ಕೆ ಹೆಸರುವಾಸಿಯಾಗಿತ್ತು. ವಿದೇಶಿ ವ್ಯಾಪಾರಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆಗ ಊರಿನ ಹೊರಗಿದ್ದ ಮಾರುಕಟ್ಟೆ ಈಗ ನಗರದ ಹೃದಯಭಾಗದೊಳಗೆ ಸೇರಿಕೊಂಡಿದೆ. ನೀವು ಬಯಸಿದ ಯಾವುದಾದರೂ ವಸ್ತು, ಜಗತ್ತಿನಲ್ಲಿ ಎಲ್ಲೂ  ಸಿಗದಿದ್ದರೆ ಅದು ಖಾನ್ ಅಲ-ಖಲೀಲಿ ಮಾರುಕಟ್ಟೆಯಲ್ಲಿ ಸಿಗುವ ಸಾಧ್ಯತೆಯಿದೆ.

ಹಿತ್ತಾಳೆ, ಕಂಚು, ಗಾಜು, ಪಿಂಗಾಣಿಯ ವಸ್ತುಗಳಿಂದ ಡಿದು ಸಿದ್ಧ ಉಡುಪು, ಕಲಾಕೃತಿಗಳು, ವಿಗ್ರಹಗಳು, ಶೀಷೆಯ ಕಲಾಕೃತಿಗಳು, ಅತ್ತರುಗಳು… ಹೀಗೆ ಎಲ್ಲವೂ ಲಭ್ಯ. ಪುರಾತನ ಕಲಾಕೃತಿಗಳನ್ನು ಮಾರಾಟ ಮಾಡುವ ಸಾವಿರಾರು ಮಳಿಗೆಗಳಿವೆ. ಬಂಗಾರ ಸೇರಿದಂತೆ ಎಲ್ಲ ಸಾಮಾನುಗಳನ್ನು ಕಡಿಮೆ ಬೆಲೆಗೆ ಖರೀದಿಸುವ ತಾಣವೆಂದರೆ ಖಾನ್ ಎಲ -ಖಲೀಲಿ ಮಾರುಕಟ್ಟೆ. ಆದರೆ, ಅದರ ಸಾಚಾತನದ ಬಗ್ಗೆ ಯಾರೂ ಗ್ಯಾರಂಟಿ ಕೊಡುವುದಿಲ್ಲ. ದೇವರ ಮೇಲೆ ಭಾರ ಹಾಕಿ ಬಂಗಾರವನ್ನು ಖರೀದಿಸಬೇಕಷ್ಟೆ. ಐದು ಸಾವಿರ ರುಪಾಯಿ ಎಂದು ಆರಂಭದಲ್ಲಿ ಹೇಳಿದ ವಸ್ತುವನ್ನು, ಕೊನೆಯಲ್ಲಿ ನೂರು ರುಪಾಯಿಗೂ ಕೊಡುವುದರಿಂದ ವಸ್ತುವಿನ ಅಸಲಿತನದ ಬಗ್ಗೆಯೇ ಅನುಮಾನ ಏಳಲಾರಂಭಿಸುತ್ತದೆ.

ಹೀಗಾಗಿ ಇಷ್ಟವಾದರೂ ಖರೀದಿಸುವಾಗ ನಂಬಿಕೆ ಬರುವುದಿಲ್ಲ. ಒಮ್ಮೆ ಖಾನ್ ಅಲ್-ಖಲೀಲಿ ಮಾರುಕಟ್ಟೆಯೊಳಗೆ ಹೊಕ್ಕರೆ ಚಕ್ರವ್ಯೂಹ ಹೊಕ್ಕಂತೆ. ಹೊರಬರುವುದು ಹೇಗೆ ಎಂಬುದು ಗೊತ್ತಾಗುವುದಿಲ್ಲ. ಒಮ್ಮೆ ಒಳಹೊಕ್ಕರೆ ಇಕ್ಕೆಲಗಳಲ್ಲಿ ಇರುವ ಅಂಗಡಿಗಳಿರುವ ಕಿರಿದಾದ ರಸ್ತೆಗಳು ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತವೆ. ಹೋದ ದಾರಿಯಲ್ಲಿ ವಾಪಸ್ ಬರುತ್ತೇವೆ ಎಂಬ ಖಾತ್ರಿಯಿಲ್ಲ. ಅಷ್ಟೊಂದು ತಿರುವುಗಳು, ಹೊರಳು ಮತ್ತು ಅಡ್ಡ ರಸ್ತೆಗಳು. ಹತ್ತು ವರ್ಷದ ಬಾಲಕರಿಂದ ತೊಂಬತ್ತು ವರ್ಷದ ಮುದುಕರ ತನಕ ಎಲ್ಲರೂ ವ್ಯಾಪಾರಿಗಳೇ.

ಸಾವಿರ ರುಪಾಯಿ ಮಾಲನ್ನು ಐವತ್ತು ರುಪಾಯಿಗೆ ಕೇಳಿದರೆ, ಬೇಸರಿಸಿಕೊಳ್ಳುವುದಿಲ್ಲ. ಅಷ್ಟೇ ಹಣಕ್ಕೆ ವ್ಯಾಪಾರ ಕುದುರಬಹುದು. ಷೋ ರೂಮುಗಳಲ್ಲಿ ಲಕ್ಷಾಂತರ ರುಪಾಯಿಗೆ ಮಾರಾಟವಾಗುವ ಜನಪ್ರಿಯ ಬ್ರ್ಯಾಂಡೆಡ್ ಸಾಮಾನುಗಳು ಸಾವಿರಕ್ಕೂ ಸಿಗುತ್ತವೆ. ಇಲ್ಲಿ ಸಿಗುವ ಬಹುತೇಕ ವಸ್ತುಗಳು ಡೂಪ್ಲಿಕೇಟ್. ಆದರೆ ತಲತಲಾಂತರಗಳಿಂದ ಇಲ್ಲಿ ವ್ಯಾಪಾರದಲ್ಲಿ ತೊಡಗಿರುವವರು ಅಸಲಿ ವಸ್ತುಗಳನ್ನೂ ಮಾರುತ್ತಾರೆ. ನೂರಾರು ವರ್ಷಗಳ ಹಿಂದಿನ ರೇಡಿಯೋ, ಕೆಮರಾ, ಟೆಲಿಫೋನ್. ಗ್ರಾಮೋಫೋನ್, ಟೈಪ್ ರೈಟರ್, ಗಾಲ್ಫ್ ಸ್ಟಿಕ್ ಸೇರಿದಂತೆ ಆಂಟಿಕ್ ವಸ್ತುಗಳಿಗೂ ಈ ಮಾರುಕಟ್ಟೆ ಪ್ರಸಿದ್ಧ.

ಇವುಗಳನ್ನು ಡೂಪ್ಲಿಕೇಟ್ ಮಾಡುವುದು ಕಷ್ಟ. ಆದರೆ ಅವರು ಅಸಲಿಯೋ, ನಕಲಿಯೋ ಎಂಬುದನ್ನು ಪತ್ತೆ ಹಚ್ಚುವುದು ನಿಮ್ಮ ಜಾಣ್ಮೆಗೆ ಬಿಟ್ಟ ವಿಚಾರ. ಖಾನ್ ಅಲ-ಖಲೀಲಿ ಮಾರುಕಟ್ಟೆಯಲ್ಲಿ ಮೋಸ ಹೋಗದೇ ಶಾಪಿಂಗ್ ಮಾಡುವುದು ಸಾಧ್ಯವೇ ಇಲ್ಲ. ‘ಹೇಗೆ ಮೋಸ ಮಾಡುತ್ತಾರೆ ಎಂಬುದನ್ನು ನೋಡಲಾದರೂ ಅಲ್ಲಿಗೆ ಹೋಗಬೇಕು’ ಎಂದು ನಮ್ಮ ಕಾರಿನ ಡ್ರೈವರ್ ಹೇಳಿದ್ದು ನಿಜ ಎನಿಸಿತು. ಈಜಿಪ್ಟಿನ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ನಗಿಬ್ ಮ್ಹ-ಜ್ ತಮ್ಮ ಕೃತಿಗಳಲ್ಲಿ ಖಾನ್ ಅಲ-ಖಲೀಲಿ ಮಾರುಕಟ್ಟೆಯನ್ನು ಬಣ್ಣಿಸಿದ್ದು, ಹೊರ ಜಗತ್ತಿಗೆ ಅದರ ವೈಶಿಷ್ಟ್ಯ ಗೊತ್ತಾಗುವಂತಾಯಿತು. ಅಲ್ಲಿಗೆ ಕೇವಲ ಪ್ರವಾಸಿ ಗರು ಮಾತ್ರ ಅಲ್ಲ, ಸ್ಥಳೀಯರೂ ಆಗಮಿಸುತ್ತಾರೆ. ಆ ಮಾರುಕಟ್ಟೆಯಲ್ಲಿ ಕೆಲವು ಈಜಿಪ್ಟಿನ ಸಾಂಪ್ರದಾಯಿಕ ಕಾಫಿಹೌಸ್‌ಗಳಿವೆ.

ಒಂದು ಮಾರುಕಟ್ಟೆಯ ವಿಶ್ವರೂಪವನ್ನು ನೋಡಲು ಖಾನ್ ಅಲ್ -ಖಲೀಲಿ ಮಾರುಕಟ್ಟೆಗೆ ಭೇಟಿ ನೀಡಬೇಕು. ನನಗಂತೂ ಅದು ಒಂದು ಬಯಲು ವಿಶ್ವವಿದ್ಯಾಲಯದಂತೆ ಕಂಡಿತು.

ಯೋಚಿಸಬೇಕಾದ ವಿಚಾರ

ಮೊನ್ನೆ ಈಜಿಪ್ಟಿನ ರಾಜಧಾನಿ ಕೈರೋ ವಿಮಾನ ನಿಲ್ದಾಣದಲ್ಲಿರುವ ಸಣ್ಣ ಪುಸ್ತಕದ ಅಂಗಡಿಯಲ್ಲಿ ಪುಸ್ತಕಗಳಿಗೆ ತಡಕಾಡು ತ್ತಿದ್ದಾಗ, ಒಂದು ಬುಕ್ ಮಾರ್ಕ್ ಸಿಕ್ಕಿತು. ಅದರ ಮೇಲೆ ಬರೆದ ಸಾಲುಗಳನ್ನು ನೋಡಿ, ಖರೀದಿಸದೇ ಇರಲು ಆಗಲಿಲ್ಲ. ಅದರ ಮೇಲೆ ಹೀಗೆ ಬರೆದಿತ್ತು. ‘ಗಂಡಸರು ಮದುವೆಯಾದ ನಂತರ ಮದುವೆಯಾಗುವುದಕ್ಕಿಂತ ಮುನ್ನ ಹೇಗೆ ವರ್ತಿಸುತ್ತಿದ್ದರೋ ಹಾಗೆ ವರ್ತಿಸಿದರೆ, ವಿವಾಹ ವಿಚ್ಛೇದನ ಆಗುವುದೇ ಇಲ್ಲ. ಹೆಂಗಸರು ಮದುವೆ ಯಾದ ನಂತರ ಹೇಗೆ ವರ್ತಿಸುತ್ತಾರೋ, ಆ ರೀತಿ ಮದುವೆಗಿಂತ ಮುನ್ನವೇ ವರ್ತಿಸಿ ದ್ದರೆ, ಮದುವೆಗಳೇ ಸಂಭವಿಸುವುದಿಲ್ಲ.’ ಗಂಡಸರು ಮತ್ತು ಹೆಂಗಸರು ಯೋಚಿಸಲೇ ಬೇಕಾದ ವಿಚಾರವಿದು.