Friday, 13th December 2024

ಅಂತೂ ಇಂತೂ ಪ್ರೀತಿ ಬಂತು

ವಿದೇಶ ವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

ಕರ್ನಾಟಕ ಸಂಘ ಖತಾರ್ ಹಮ್ಮಿಕೊಂಡ ರಾಜ್ಯೋತ್ಸವದ ಕಾರ್ಯಕ್ರಮವಿದೆ, ಬನ್ನಿ ಎಂಬ ಒಂದು ದೂರವಾಣಿ ಕರೆಗೆ ಓಗೊಟ್ಟು ಕೆಲವು ಬಾರಿ ಖತಾರ್‌ಗೆ ಹೋಗಿದ್ದಿದೆ. ಕೆಲವೇ ಗಂಟೆಗಳಲ್ಲಿ ನಿರ್ಣಯಿಸಿ, ಆತ್ಮೀಯರ ಜನ್ಮದಿನ, ವಿವಾಹ ವಾರ್ಷಿಕೋತ್ಸ ಗಳಿಗೂ ಹಾಜರಿ ಕೊಟ್ಟಿದ್ದಿದೆ.

ಆ ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ವಾಸಿಸಲು ಪರವಾನಗಿ (ರೆಸಿಡೆನ್ಸ್ ಪರ್ಮಿಟ್) ಪಡೆದಿದ್ದ ಕಾರಣ, ನೆರೆ ರಾಷ್ಟ್ರಗಳಾದ ಯುಎಇ, ಖತಾರ್, ಒಮಾನ್, ಬಹ್ರೈನ್ ಮತ್ತು ಕುವೈತ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಒಕ್ಕೂಟದ ಯಾವುದೇ ದೇಶಕ್ಕೆ ಹೋಗಲು ಮುಂಚಿತವಾಗಿ ವಿಸಾ ಪಡೆದುಕೊಳ್ಳಬೇಕೆಂಬ ನಿಬಂಧನೆ ಇರಲಿಲ್ಲ. ಆ ದೇಶದ ಗಡಿಯ ದೇಶದೊಳಗೆ ಪ್ರವೇಶಿಸಲು ಪರವಾನಗಿ (ವಿಸಾ ಆನ್ ಅರೈವಲ್) ನೀಡಲಾಗುತ್ತಿತ್ತು.

ಕೊಲ್ಲಿಯ ಆರು ರಾಷ್ಟ್ರಗಳ ಪೈಕಿ ಯಾವ ದೇಶದ ವಾಸ್ತವ್ಯದ ಪರವಾನಗಿ ಇದ್ದರೂ, ಸೌದಿ ಅರೇಬಿಯಾ ಒಂದನ್ನು ಹೊರತು ಪಡಿಸಿ, ಉಳಿದ ಎಲ್ಲ ರಾಷ್ಟ್ರಗಳಲ್ಲೂ ಈ ಸೌಲಭ್ಯವಿತ್ತು. ಈ ಒಂದು ಅಡಚಣೆ ಇಲ್ಲವಾದ್ದರಿಂದ ಕೊನೆ ಘಳಿಗೆಯಲ್ಲೂ ನಿರ್ಣಯಿಸಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೊರಟುಬಿಡಬಹುದಾಗಿತ್ತು. ಬಹ್ರೈನ್‌ನ ರಾಜಧಾನಿ ಮನಾಮ ಮತ್ತು ಖತಾರ್ ನ ರಾಜಧಾನಿ ದೋಹಾದ ನಡುವಿನ ದೂರ ಸುಮಾರು ನೂರಾ ಐವತ್ತು ಕಿಲೋಮೀಟರ್.

ವಿಮಾನದಲ್ಲಿ ಹಾರಿದರೆ ಅಬ್ಬಬ್ಬಾ ಎಂದರೆ ಮುಕ್ಕಾಲು ಗಂಟೆ. ಸೌದಿ ಅರೇಬಿಯಾ ಮೂಲಕ ಭೂಮಾರ್ಗದಲ್ಲಿ ಹೋದರೆ
ಸುಮಾರು ನಾಲ್ಕು ನೂರು ಕಿಲೋ ಮೀಟರ್. ಕಾರಿನ ಪ್ರಯಾಣವಾದರೆ ಎರಡು ಅಂತಾರಾಷ್ಟ್ರೀಯ ಗಡಿಯ ಗೊಡವೆ ಹಿಡಿದರೂ ಐದು ತಾಸು. ನನ್ನ ಕೆಲಸ ಸೌದಿ ಅರೇಬಿಯಾದ ಪೂರ್ವಭಾಗದಲ್ಲಿ ಇರುತ್ತಿದ್ದುದರಿಂದ, ಒಂದೇ ಅಂತಾರಾಷ್ಟ್ರೀಯ ಗಡಿ ದಾಟಬೇಕಾಗಿರುತ್ತಿದ್ದುದರಿಂದ, ನಾನಿರುವ ಸ್ಥಳದಿಂದ ಎರಡೂವರೆಯಿಂದ ಮೂರು ತಾಸಿಗೆ ದೋಹಾ ತಲುಪುತ್ತಿದ್ದೆ.

ಸುಸ್ತು ಎನಿಸದ ಈ ಪ್ರಯಾಣದ ಆಹ್ಲಾದವೇ ವಿಶೇಷ ವಾದದ್ದು. ಸೌದಿ ಅರೇಬಿಯಾದದಿಂದ ಖತಾರ್‌ಗೆ ಪ್ರಯಾಣಿಸುವಾಗ
ದಾರಿಯುದ್ದಕ್ಕೂ, ಕಣ್ಣು ಹಾಯಿಸಿದಷ್ಟೂ ಮರುಭೂಮಿಯ ಪ್ರದೇಶ. ಖತಾರ್ ಗಡಿ ಸಮೀಪಿಸುತ್ತಿದ್ದಂತೆ ಭೌಗೋಳಿಕ ಚಿತ್ರಣ
ಬದಲಾಗುತ್ತಾ ಹೋಗುತ್ತದೆ. ಒಂದು ಕಡೆ ಸಮುದ್ರ, ಇನ್ನೊಂದು ಕಡೆ ಸುಮಾರು ಇನ್ನೂರರಿಂದ ಮುನ್ನೂರು ಮೀಟರ್‌ನಷ್ಟು ಸಮತಟ್ಟಾದ ಪ್ರದೇಶ, ನಂತರ ಇರುವ ಗುಡ್ಡಗಳು ಪ್ರಯಾಣದ ಆಯಾಸ ಮರೆಸುತ್ತವೆ.

ಖತಾರ್ ಮತ್ತು ಸೌದಿ ಅರೇಬಿಯಾದ ಗಡಿ ಸುಮಾರು ಎಂಬತ್ತೈದು ಕಿಲೋ ಮೀಟರ್ ದೂರದವರೆಗೆ ಅಂಟಿಕೊಂಡಿದ್ದರೂ, ದೇಶದ ಒಳಹೋಗಲು ಅಥವಾ ಹೊರಗೆ ಬರಲು ಸಲ್ವಾ – ಅಬುಸಾಮ್ರಾ ಪ್ರದೇಶದಲ್ಲಿರುವ ಹೆಬ್ಬಾಗಿಲಿನಿಂದ ಮಾತ್ರ ಸಾಧ್ಯ. ಯಾವುದೇ ದೇಶದವರಾದರೂ ಭೂಮಾರ್ಗವಾಗಿ ಖತಾರ್‌ಗೆ ಹೋಗಬಯಸಿದರೆ ಇರುವುದು ಇದೊಂದೇ ದಾರಿ. ದ್ವೀಪ ರಾಷ್ಟ್ರ ವಾದ ಬಹ್ರೈನ್‌ಗೂ ಇದೇ ಸ್ಥಿತಿ.

ಸೌದಿ ಅರೇಬಿಯಾದಿಂದ ಬಹ್ರೈನ್‌ಗೆ ಒಂದು ಸೇತುವೆ ಇಲ್ಲವಾದರೆ ಭೂಮಾರ್ಗ ಅಲಭ್ಯ. ಜಲಮಾರ್ಗ, ವಾಯು ಮಾರ್ಗಗಳ ಪರ್ಯಾಯ ವ್ಯವಸ್ಥೆ ಇದ್ದರೂ, ಸುಮಾರು ಮೂರೂವರೆ ವರ್ಷದ ಹಿಂದೆ ಇವೆಲ್ಲದಕ್ಕೂ ಕಡಿವಾಣ ಬಿದ್ದಿತ್ತು. ನಾನೇನೋ ವೈಯಕ್ತಿಕ, ಸಾಂಸ್ಕೃತಿಕ ಕಾರ್ಯಕ್ಕೆ ಹೋಗುತ್ತಿದ್ದವನು. ಆದರೆ ಖತಾರ್‌ನ ಗಡಿಯಲ್ಲಿರುವ ಅನೇಕರು ಸೌದಿ ಅರೇಬಿಯಾದ ಗಡಿ
ಯಲ್ಲಿರುವ ಊರುಗಳಿಗೆ ವೈದ್ಯಕೀಯ, ಶಿಕ್ಷಣ, ವ್ಯವಹಾರ ಇತ್ಯಾದಿಗಳಿಗೆ ಪ್ರತಿನಿತ್ಯ ಬಂದು ಹೋಗುತ್ತಿದ್ದರು, ಅವರ ಪರಿಸ್ಥಿತಿ ಹೇಗಾಗಿರ ಬಹುದು!

ವಿಶ್ವಕ್ಕೆ ಅಮೆರಿಕ ಹೇಗೆ ದೊಡ್ಡಣ್ಣನೋ ಹಾಗೆಯೇ ಕೊಲ್ಲಿ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ದೊಡ್ಡಣ್ಣ ಎಂದರೆ ತಪಾಗಲಿಕ್ಕಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ವಿಸ್ತೀರ್ಣ, ತೈಲ ಮತ್ತು ಅನಿಲ ನಿಕ್ಷೇಪ, ಆದಾಯ, ಎಲ್ಲದರಲ್ಲೂ ಸೌದಿ ಅರೇಬಿಯಾ
ದೊಡ್ದದು. ಖತಾರ್ ದೇಶದ ವಿಸ್ತೀರ್ಣ ಹನ್ನೊಂದು ಸಾವಿರದ ಐದು ನೂರು ಚದರ ಕಿಲೋ ಮೀಟರ್ ಗಳಾದರೆ ಸೌದಿ ಅರೇಬಿಯಾದ ವಿಸ್ತೀರ್ಣ ಇಪ್ಪತ್ತೊಂದೂವರೆ ಲಕ್ಷ ಚದರ ಕಿಲೋ ಮೀಟರ್‌ಗಳು.

ವಿಸ್ತೀರ್ಣದಲ್ಲಿ ಸೌದಿ ಅರೇಬಿಯಾ ಕೊಲ್ಲಿಯ ಉಳಿದ ಐದು ರಾಷ್ಟ್ರಗಳ ಒಟ್ಟೂ ವಿಸ್ತೀರ್ಣಕ್ಕಿಂತ ಐದು ಪಟ್ಟು ದೊಡ್ಡದು. ಪಶ್ಚಿಮ ಏಷ್ಯಾದ ಅತಿ ದೊಡ್ಡ ದೇಶ ಎಂಬ ಹೆಗ್ಗಳಿಕೆಯೂ ಸೌದಿ ಅರೇಬಿಯಾದ್ದು. ಈ ದೇಶದ ವಾರ್ಷಿಕ ಜಿಡಿಪಿ (ಸುಮಾರು ಎರಡು ಸಾವಿರ ಬಿಲಿಯನ್ ಡಾಲರ್) ಉಳಿದ ಐದು ರಾಷ್ಟ್ರಗಳ ವಾರ್ಷಿಕ ಜಿಡಿಪಿಗೆ ಸಮ. ಸೌದಿ ಅರೇಬಿಯಾದ ಜನಸಂಖ್ಯೆ ಸುಮಾರು ಮೂರು ಕೋಟಿ ನಲವತ್ತು ಲಕ್ಷವಾದರೆ, ಐದು ರಾಷ್ಟ್ರಗಳ ಒಟ್ಟೂ ಜನಸಂಖ್ಯೆ ಸುಮಾರು ಎರಡು ಕೋಟಿ ಇಪ್ಪತ್ತೈದು ಲಕ್ಷ. (ವಿದೇಶಿಯರನ್ನೂ ಸೇರಿಸಿ). ಈ ಪ್ರದೇಶದಲ್ಲಿ ರಾಜತಾಂತ್ರಿಕವಾಗಿ ಹಲವಾರು ವರ್ಷ ಗಳಿಂದ ಸೌದಿ ಅರೇಬಿಯಾದ ನಿರ್ಣಯಗಳಿಗೆ ಹೆಚ್ಚಿನ ಮಹತ್ವ.

ಇವೆಲ್ಲದರ ಜತೆಗೆ, ವಿಶ್ವದಾದ್ಯಂತ ಇರುವ ಇಸ್ಲಾಂ ಧರ್ಮೀಯರ ಪವಿತ್ರ ಸ್ಥಳ ಮೆಕ್ಕಾ ಮತ್ತು ಮದೀನಾ ಇರುವುದೂ ಸೌದಿ ಅರೇಬಿಯಾದಲ್ಲಿಯೇ. ದೊಡ್ಡಣ್ಣ ಎಂದು ಕರೆಸಿಕೊಳ್ಳಲು ಇನ್ನೇನು ಬೇಕು ಹೇಳಿ? ಮೊದಲಿಂದಲೂ ಕೊಲ್ಲಿಯ ಆರು ರಾಷ್ಟ್ರಗಳೂ ಪರಸ್ಪರ ಸೌಹಾರ್ದಯುತ ಸಂಬಂಧವನ್ನೇ ಹೊಂದಿದ್ದವು. ಸಣ್ಣ ಪುಟ್ಟ ವಿಷಯಗಳನ್ನು ಹೊರತುಪಡಿಸಿದರೆ, ಸೌದಿ ಅರೇಬಿಯಾ ಮತ್ತು ಖತಾರ್ ಸಂಬಂಧವೂ ಇದಕ್ಕೆ ಹೊರತಾಗಿರಲಿಲ್ಲ.

ಹಾಗೆ ನೋಡಿದರೆ ಖತಾರ್ ಮತ್ತು ಬಹ್ರೈನ್ ನಡುವೆ ಕೆಲವು ವಿಷಯಗಳಲ್ಲಿ, ಅದರಲ್ಲೂ ಹವಾರ್, ಜುಬೇರಾ ದ್ವೀಪವೂ ಸೇರಿದಂತೆ ಐದು ದ್ವೀಪದ ವಿಷಯದಲ್ಲಿ ವಿವಾದವಿತ್ತು. ಇದು 1936ರಿಂದಲೂ ಇದ್ದ ವಿವಾದ ವಾಗಿತ್ತು. ಒಂದು ದ್ವೀಪದಲ್ಲಿ ಬಹ್ರೈನ್ ನಿರ್ಮಾಣ ಕಾರ್ಯ ಆರಂಭಿಸಿದಾಗ ಖತಾರ್‌ನ ಪಡೆಗಳು ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಹೇಳಿ
ಕೆಲವು ಬಹ್ರೈನ್ ಮತ್ತು ಇಪ್ಪತ್ತೊಂಬತ್ತು ಡಚ್ ಕಾರ್ಮಿಕರನ್ನು ಸೆರೆ ಹಿಡಿದಿಟ್ಟುಕೊಂಡಿದ್ದವು.

ಆಗ ಸೌದಿ ಅರೇಬಿಯಾ ಮತ್ತು ಇತರ ದೇಶಗಳು ಮಧ್ಯವರ್ತಿಯಾಗಿ ಭಾಗವಹಿಸಿ ಇಬ್ಬರ ನಡುವಿನ ಬಿಸಿ ಆರಿಸಲು ಪ್ರಯತ್ನಿಸಿ ಯಶಸ್ವಿಯಾದದ್ದೂ ಇದೆ. 1991ರಲ್ಲಿ ಮತ್ತೆ ಈ ವಿಷಯ ಭುಗಿಲೆದ್ದು, ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೆಟ್ಟಿಲೇ ರಿತು. ನ್ಯಾಯಾಲಯ ದ್ವೀಪಗಳನ್ನು ಸಮನಾಗಿ ಹಂಚಿ ವಿವಾದಕ್ಕೆ ತೆರೆ ಎಳೆದು ಎರಡೂ ರಾಷ್ಟ್ರಗಳನ್ನು ಸಮಾಧಾನ ಪಡಿಸಿತ್ತು.

2011ರಲ್ಲಿ ಬಹ್ರೈನ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗ ಖತಾರ್ ತನ್ನ ಸೇನೆಯ ಒಂದು ಸಾವಿರ ಯೋಧರನ್ನೂ, ಕೆಲವು ಯುದ್ಧೋಪಕರಣಗಳನ್ನೂ ಸಹಾಯಕ್ಕೆಂದು ಕಳಿಸಿತ್ತು. ಸೌದಿ ಅರೇಬಿಯಾದ ಮತ್ತು ಖತಾರ್ ನಡುವಿನ ಅಸಮಾಧಾನದ ಸೌಧಕ್ಕೆ ಮೊದಲ ಅಡಿಗಲ್ಲು ಬಿದ್ದದ್ದು 1996ರಲ್ಲಿ. ಅದು ಅರಬ್ ಸ್ಪ್ರಿಂಗ್ಸ್‌ನ ಬೆಂಬಲಿಸುವ ಅಲ್‌ಜಜೀರಾ ಟೆಲಿವಿಷನ್ ಖತಾರ್ ‌ನಲ್ಲಿ ಪ್ರಧಾನ ಕಚೇರಿ ತೆರೆಯುವುದರೊಂದಿಗೆ ಕಾರ್ಯಾರಂಭ ಮಾಡಿದ ವರ್ಷ.

ಆರಂಭದ ದಿನದಿಂದಲೂ ಇದರ ಒಲವು ಕ್ರಾಂತಿಕಾರಿ ವಿಚಾರಗಳ ಕಡೆಗೆ ಎಂಬ ಅಪವಾದ ಟಿವಿ ಚಾನೆಲ್ ಮೇಲಿತ್ತು. ಸೌದಿ
ಅರೇಬಿಯಾ ಒಪ್ಪದ ತತ್ವಗಳನ್ನು ಹೊಂದಿರುವ ಇರಾನ್ ದೇಶದ ಕಡೆಗೆ ಅಲ್‌ಜಜೀರಾ ಮೃದು ಧೋರಣೆ ಹೊಂದಿದೆ ಎಂಬುದು ಸೌದಿ ಅರೇಬಿಯಾಕ್ಕೆ ಇರಿಸುಮುರುಸು ಉಂಟುಮಾಡಿತ್ತು. ಖತಾರ್‌ನ ಅಂದಿನ ದೊರೆ ಶೇಖ್ ಹಮದ್ ಬಿನ್ ಖಲಿಫಾ ಅಲ್ಥಾನಿ ಸಾಕಷ್ಟು ಪ್ರಗತಿಪರ ಕಾರ್ಯದ ನಡುವೆ ಯೂ ಕೆಲವು ಅಪವಾದಗಳು ಅಂಟಿಕೊಂಡವು.

ಅಮೆರಿಕ ಗೊತ್ತುಪಡಿಸಿದ ಉಗ್ರಗಾಮಿ ಸಂಘಟನೆಯಾದ ಅಲ್ನುಸ್ರಾ ಫ್ರಾಂಟ್‌ಗೆ ಧನ ಸಹಾಯ ಮಾಡಿದ, ಕ್ರಾಂತಿಕಾರಿ ಗುಂಪು ಎಂದು ಕರೆಸಿಕೊಳ್ಳುವ ಇಜ್ ಅದ್ದಿನ್ ಅಲ್ಖಸ್ಸಮ್ ಬ್ರಿಗೇಡ್‌ನ ತವರಾದ ಹಮ್ಮಾಸ್ ಸಂಘಟನೆಯ ವ್ಯಕ್ತಿಗಳನ್ನು ಭೇಟಿಯಾದ, ಅಲ್ಖೆ ದಾ, ಎಂಎನ್‌ಎಲಎ, ಮುಜಾವೋ ಮೊದಲಾದ ಸಂಘಟನೆಗಳಿಗೆ ಹಣ ಮತ್ತು ಕೆಲವು ವಸ್ತುಗಳನ್ನು ಪೂರೈಸಿದ ಅಪವಾದ ಎದುರಿಸ ಬೇಕಾಯಿತು.

ಇಷ್ಟರ ನಡುವೆಯೂ ಎರಡೂ ದೇಶದ ನಡುವೆ ಸಂಬಂಧಗಳು ಒಂದು ಹಂತದಲ್ಲಿಯೇ ಇದ್ದವು. ಇರಾನ್ ದೇಶದ ಮಿತ್ರ ಮತ್ತು ಲೆಬನಾನ್‌ನ ಹಿಜಬು ಸಂಘಟನೆಯ ಸಮರ್ಥಕ, ಸಿರಿಯಾದ ಅಂದಿನ ಅಧ್ಯಕ್ಷ ಬರ್ಷ ಅಲಅಸಾದ್‌ನನ್ನು ಪದಚ್ಯುತಿಗೊಳಿಸಲು ಎರಡೂ ರಾಷ್ಟ್ರಗಳು ಒಂದಾಗಿದ್ದವು. ಯೆಮನ್ ದೇಶದ ಜನರು ಅಲ್ಲಿಯ ದೊರೆ ಅಲಿ ಅಬ್ದು ಸಾಲೆಹ್ ವಿರುದ್ಧ ದಂಗೆ ಎದ್ದಾಗ, ಕ್ರಾಂತಿಕಾರಿಗಳ ಪರವಾಗಿದ್ದ ಖತಾರ್ ಮತ್ತು ಸಾಲೆಹ್ ಪರ ಒಲವುಳ್ಳ ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ್ದವು.

ಎರಡೂ ರಾಷ್ಟ್ರಗಳು ಲಿಬಿಯಾದ ಅಂತರ್ಯುದ್ಧದಲ್ಲಿ ಪ್ರತಿಸ್ಪರ್ಧಿ ತಂಡ ಗಳನ್ನು ಬೆಂಬಲಿಸಿದ್ದಲ್ಲದೇ, ಕೆಲ ಕಾಲ ರಾಜತಾಂತ್ರಿಕ
ಸಂಬಂಧವನ್ನು ಕಡಿದುಕೊಂಡಿದ್ದರು. 2015ರಲ್ಲಿ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಸಿಂಹಾಸನ ಏರಿದ ನಂತರ ಯೆಮನ್ನಲ್ಲಿ ಸರಕಾರದ ವಿರುದ್ಧ ಬಂಡೆದ್ದಿದ್ದ ಹೌತಿ ಸೈನಿಕರ ವಿರುದ್ಧದ ಹೋರಾಟಕ್ಕೆ ಉಭಯ ದೇಶಗಳು ಜೊತೆಯಾದವು.

2016 ರ ವೇಳೆಗೆ ಈ ಜೋಡಿ ಸಿರಿಯಾದಲ್ಲಿ ಒಬ್ಬರಿಗೊಬ್ಬರು ಹೆಚ್ಚಿನ ಪ್ರಮಾಣದಲ್ಲಿ ಸಹಕರಿಸಲು ಆರಂಭಿಸಿತು. ಸೌದಿ
ಅರೇಬಿಯಾದಲ್ಲಿ ಒಬ್ಬ ವ್ಯಕ್ತಿಗೆ ಮರಣದಂಡನೆ ನೀಡಿದ್ದಕ್ಕೆ ಇರಾನ್ ಆಕ್ಷೇಪಿಸಿದಾಗ ಖತಾರ್ ಸೌದಿ ಅರೇಬಿಯಾದ ಪರ ನಿಂತಿತು. ಆ ಕಾಲದಲ್ಲಿ ಉಭಯ ದೇಶಗಳ ಸಂಬಂಧ ಉತ್ತುಂಗದಲ್ಲಿತ್ತು. 2017ರ ಜೂನ್ ಐದರಂದು ಸೌದಿ ಅರೇಬಿಯಾ,
ಯುಎಇ, ಬಹ್ರೈನ್ ಮತ್ತು ಈಜಿಪ್ಟ್ ಸೇರಿದಂತೆ ಇನ್ನೂ ಕೆಲವು ದೇಶಗಳು ಖತಾರ್‌ನೊಂದಿಗೆ ಸಂಚಾರ, ವ್ಯಾಪಾರ, ರಾಜತಾಂತ್ರಿಕ ವಿಷಯಗಳೂ ಸೇರಿದಂತೆ ಎಲ್ಲವನ್ನೂ ಸ್ತಬ್ಧಗೊಳಿಸಿದ್ದವು.

ಒಮಾನ್ ಮತ್ತು ಕುವೈತ್ ಯಾವ ದೇಶದ ಕಡೆಗೂ ಒಲವು ತೋರಿಸದೆ ತಟಸ್ಥವಾಗಿ ಉಳಿದವು. ತಮ್ಮ ತಮ್ಮ ದೇಶದ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೂ ನಿರ್ಬಂಧ ಹೇರಲಾಯಿತು. ಈ ನಿರ್ಬಂಧದಿಂದ ಆಯಾ ದೇಶದ ನಾಗರಿಕರಿಗೆ, ವ್ಯಾಪಾರಕ್ಕೆ ತೊಂದರೆಯಾಯಿತು. ನೇರ ಪ್ರಯಾಣ ಸಾಧ್ಯವಿಲ್ಲದ ಕಾರಣ ವಾಯುಮಾರ್ಗವಾಗಿ ಒಮಾನ್ ಅಥವಾ ಕುವೈತ್ ಮುಖೇನ ಹೋಗಬೇಕಾಗುತ್ತಿತ್ತು. ಇದರಿಂದ ಮುಕ್ಕಾಲು ಗಂಟೆ, ಒಂದು ಗಂಟೆಯ ಪ್ರಯಾಣ ನಾಲ್ಕು ಐದು ತಾಸುಗಳಾಗುತ್ತಿತ್ತು.

ಜತೆಗೆ ವ್ಯವಹಾರದ ನಷ್ಟವಂತೂ ಇದ್ದದ್ದೇ. ಕೆಲವರು ಇದನ್ನು ಎರಡನೆಯ ಅರಬ್ ಶೀತಲ ಸಮರ ಎಂದೂ ಕರೆದರು. ಖತಾರ್ ಕ್ರಾಂತಿಕಾರಿ ನಡೆಗಳನ್ನು ಬೆಂಬಲಿಸುತ್ತಿದೆ ಎಂದು ಸೌದಿ ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಿತ್ತು. ಎರಡೂ ಅಮೆರಿಕದ ಮಿತ್ರ
ರಾಷ್ಟ್ರಗಳೇ ಆಗಿದ್ದರಿಂದ ನೇರ ಹಣಾಹಣಿಗೆ ಇಳಿಯಲಿಲ್ಲ. ಅಲ್‌ಜಜೀರಾ ಟಿವಿ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ಋಣಾತ್ಮಕವಾದ ವರದಿ ಮಾಡುತ್ತಿದ್ದಾರೆ ಎಂದು ಸೌದಿ ಅರೇಬಿಯಾ, ಯುಎಇ ಮತ್ತು ಬಹ್ರೈನ್ ಆರೋಪಿಸಿದವು. ತಮಗೂ ಇದೇ ಅನುಭವ ಆಗುತ್ತಿದೆ ಎಂದು ಈಜಿಪ್ತ್, ಸೆನೆಗಲ್‌, ಮಾಲ್ಡೀವ್ಸ್, ಜೋರ್ಡನ್, ಜಿಬೌಟಿ, ಹಾದಿ ನೇತೃತ್ವದ ಯೆಮನ್ ಮೊದಲಾದ ದೇಶಗಳು ದನಿಗೂಡಿಸಿದವು. ಖತಾರ್ ಕ್ರಾಂತಿಕಾರಿ ಸಂಘಟನೆಗಳಿಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿ ಈ ಎಲ್ಲ ದೇಶಗಳು ಖತಾರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡವು.

ಯೆಮನ್‌ನ ಹೌತಿ ವಿರುದ್ಧದ ಹೋರಾಟದ ಒಕ್ಕೂಟ ದಿಂದ ಖತಾರನ್ನು ಹೊರಗಿಟ್ಟವು. ತಮ್ಮ ದೇಶದ ವಾಯು ಮತ್ತು
ಸಮುದ್ರ ಪ್ರದೇಶಗಳನ್ನು ಖತಾರ್ ಬಳಸದಂತೆ ನಿರ್ಬಂಧಿಸಿದವು. ಖತಾರ್‌ನಿಂದ ಇರಾನ್‌ಗೆ ಹೋಗಲು ಇದ್ದ ಒಂದೇ  ದಾರಿಯನ್ನು ಸೌದಿ ಅರೇಬಿಯಾ ಮುಚ್ಚಿತು. ಖತಾರ್ ಇರಾನ್‌ನೊಂದಿಗೆ ತನ್ನ ಸಂಬಂಧವನ್ನು ಪುನಃ ಸ್ಥಾಪಿಸುವುದಾಗಿ ಹೇಳಿತು.
ಎರಡೂ ದೇಶಗಳ ನಡುವೆ ಸಂಬಂಧ ಸುಧಾರಿಸುತ್ತಿದ್ದಂತೆಯೇ, ಸೌದಿ ಅರೇಬಿಯಾ ತನ್ನ ಮತ್ತು ಖತಾರ್ ನಡುವೆ ಇರುವ ಭೂಮಿಯನ್ನು ಅಗೆದು ಕಾಲುವೆ ನಿರ್ಮಿಸಿ, ಖತಾರ್ ದೇಶವನ್ನು ದ್ವೀಪ ರಾಷ್ಟ್ರವನ್ನಾಗಿಸುವುದಾಗಿ ಘೋಷಿಸಿತು.

ಈ ನಡುವೆ ಎರಡೂ ದೇಶದ ಉನ್ನತ ಸ್ಥಾನದಲ್ಲಿರುವವರ ಕೆಲವು ಹೇಳಿಕೆಗಳು ಪರಿಸ್ಥಿತಿ ಇನ್ನೂ ಬಿಗಡಾಯಿಸಲು ಕಾರಣವಾ ಯಿತು. ಈಗ ಅಮೆರಿಕ ಮತ್ತು ಕುವೈತ್ ಕೊಲ್ಲಿ ರಾಷ್ಟ್ರಗಳ ನಡುವೆ ಇರುವ ಮನಸ್ತಾಪ ಹೋಗಲಾಡಿಸುವಲ್ಲಿ ಸಾಕಷ್ಟು ಶ್ರಮ ವಹಿಸಿವೆ. ಜಿಸಿಸಿ (ಗಲ ಕೊ ಆಪರೇಷನ್ ಕೌನ್ಸಿಲ) ರಾಷ್ಟ್ರಗಳ ನಡುವೆ ಇರುವ ಬಿರುಕನ್ನು ಸರಿಪಡಿಸಿ, ಉತ್ತಮ ಬಾಂಧವ್ಯ ಏರ್ಪಡುವಂತೆ ಮಾಡುವ ಒಪ್ಪಂದಕ್ಕೆ ಸೌದಿ ಅರೇಬಿಯಾ ಮತ್ತು ಪ್ರಾದೇಶಿಕ ಮಿತ್ರ ರಾಷ್ಟ್ರಗಳು ಖತಾರ್‌ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿವೆ.

ಖತಾರ್  ನ ದಿಗ್ಬಂಧನ ಕೊನೆಗೊಳಿಸಿ ಸಂಚಾರದ ಎಲ್ಲ ಮಾರ್ಗಗಳೂ ತೆರೆದುಕೊಳ್ಳಲಿದೆ. ಅಂತೂ ಇಂತೂ ಪುನಃ ಒಂದಾದ ಗಲ ರಾಷ್ಟ್ರಗಳಲ್ಲಿ ಪರಸ್ಪರ ಪ್ರೀತಿ, ಸ್ನೇಹ ಬೆಳೆದು ನಿಲ್ಲಲಿದೆ. ಎಲ್ಲವೂ ಸರಿಹೋಯಿತು ಎಂದಮೇಲೆ ಮತ್ತೇನು? ಮೊನ್ನೆ ಶನಿವಾರ ದಿಂದ ಮೂರೂವರೆ ವರ್ಷದಿಂದ ಮುಚ್ಚಿಕೊಂಡಿದ್ದ ಗಡಿ ತೆರೆದುಕೊಂಡಿದೆ. ಇಂದಿನಿಂದ ಎರಡೂ ದೇಶದ ಯಂತ್ರದ ಹಕ್ಕಿಗಳು ಬಾನಿನಲ್ಲಿ ಹಾರಾಟ ಆರಂಭಿಸಲಿವೆ. ಯುಎಇ, ಬಹ್ರೈನ್ ಮತ್ತು ಈಜಿಪ್ಟ್ ಕೂಡ ಸೌದಿ ಅರೇಬಿಯಾದ ನಿರ್ಣಯವನ್ನು ಅನು ಮೋದಿಸುವ ಸೂಚನೆ ನೀಡಿದ್ದಾಗಿದೆ. ಈ ದೇಶಗಳ ನಡುವೆ ವ್ಯಾಪಾರ, ವ್ಯವಹಾರ, ಸ್ನೇಹ, ಬಾಂಧವ್ಯದ ಸೇತುವೆ ಗಟ್ಟಿಗೊಳ್ಳುವ ನಿರೀಕ್ಷೆಯಂತೂ ಇದ್ದೇ ಇದೆ. ಇದರಿಂದ ಎಲ್ಲ ದೇಶಗಳಿಗೂ ಲಾಭವೇ.

2022ರ ವಿಶ್ವಕಪ್ ಫುಟ್ಬಾಲ್ ಪಂದ್ಯಾಟಗಳಿಗೆ ಖರ್ತಾ ಭರದಿಂದ ಸಜ್ಜಾಗುತ್ತಿದೆ. ಇನ್ನೇನು, ಶೃಂಗಾರಗೊಂಡ ಖತಾರ್ನಲ್ಲಿ ವಿಶ್ವಕಪ್‌ಗೆ ಸಾಕ್ಷಿಯಾಗುವುದೊಂದೇ ಬಾಕಿ.