Wednesday, 9th October 2024

ವಿದ್ಯಾರ್ಹತೆ ಮತ್ತು ಉದ್ಯೋಗ ಆಯ್ಕೆ ಪ್ರಕ್ರಿಯೆ

ಅಭಿಪ್ರಾಯ

ವಿನಾಯಕ ಭಟ್ಟ

ಉದ್ಯೋಗಂ ಪುರುಷ ಲಕ್ಷಣಂ ಅನ್ನುವುದೊಂದು ಹಳೆಯ ಮಾತಿದೆ. ಆದರೆ ಈ ಮಾತು ಸದ್ಯದ ಪರಿಸ್ಥಿತಿಗೆ ಖಂಡಿತ ಅನ್ವಯಿಸಲಾರದು. ಏರುತ್ತಿರುವ ಎಲ್ಲ ಬೆಲೆಗಳನ್ನು ಸರಿದೂಗಿಸಿಕೊಂಡು, ಜೀವನ ನಡೆಸುವುದಕ್ಕೆ ಕೇವಲ ಪುರುಷ ಮಾತ್ರ ಉದ್ಯೋಗ ಮಾಡಿದರೆ ಸಾಕಾಗುವುದಿಲ್ಲ.

ಹಲವಾರು ಕುಟುಂಬಗಳಲ್ಲಿ ಪುರುಷರು ಮನೆಯಿಂದ ಹೊರಗೆ ಹೋಗಿ ದುಡಿದರೆ, ಮಹಿಳೆಯರು ಮನೆಯನ್ನು ನೋಡಿಕೊಳ್ಳುವ, ಮಕ್ಕಳನ್ನು ಬೆಳೆಸುವ, ಹಿರಿಯರನ್ನು ನೋಡಿಕೊಳ್ಳುವ ಅತ್ಯುತ್ತಮ ಪವಿತ್ರ ಉದ್ಯೋಗವನ್ನು ಮಾಡುತ್ತಾ, ತಮ್ಮ ಕುಟುಂಬಕ್ಕೆ ಮಹತ್ವದ ಕೊಡುಗೆಗಳನ್ನು ಕೊಡುತ್ತಾರೆ. ಮನೆ ಕೆಲಸ ಅನ್ನುವುದು ತೀರಾ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುವ ಕೆಲಸ ಆದರೂ ಕೂಡ, ಈ ಶಾಲಾ ಕಾಲೇಜಿನ ಕಾಗದದ ವಿದ್ಯಾರ್ಹತೆ ಅನ್ನುವುದು ಹೆಚ್ಚಿನ ಮಹತ್ವ ಬೀರದೆ ಇರುವುದರಿಂದ, ಮುಂದಿನ ವಿಷಯ- ಮನೆಯಿಂದ ಹೊರಗೆ ಮಾಡುವ ಕೆಲಸಕ್ಕೆ ಸಂಬಂಧಪಟ್ಟಿದ್ದು.

ಇದು ಪುರುಷರಿಗೂ, ಮಹಿಳೆಯರಿಗೂ ಸಮಾನವಾಗಿ ಅನ್ವಯ ಆಗುವುದು ಸಾಮಾನ್ಯ. ಪ್ರೌಢ ಶಿಕ್ಷಣ, ಮುಂದಿನ ಪದವಿ ಪೂರ್ವ ಶಿಕ್ಷಣ, ಮುಂದಿನ ಪದವಿ ಶಿಕ್ಷಣ , ಮುಂದಿನ ಉನ್ನತ ಶಿಕ್ಷಣ ಹೀಗೆ, ಕಲಿಯುವುದಕ್ಕೆ ತುದಿ ಎನ್ನುವ ಮಾತೇ ಇಲ್ಲ. ಶಿಕ್ಷಣ ವ್ಯವಸ್ಥೆ ಹೀಗಿದ್ದರೂ ಕೂಡ, ಕೆಲಸ ಕೊಡುವ ವಿಚಾರದಲ್ಲಿ ಮಾತ್ರ ಬಹುತೇಕ ಕಂಪನಿಗಳ ಮಾನವ ಸಂಪನ್ಮೂಲ ಮುಖ್ಯಸ್ಥರುಗಳು ಮೊದಲು ನೋಡುವುದು ವಿದ್ಯಾರ್ಹತೆ! ಅದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಮೊದಲ ಜಿಜ್ಞಾಸೆ. ಬಹುತೇಕ ಎಲ್ಲ ರೀತಿಯ ಶಿಕ್ಷಣಗಳು ವಿಷಯದ ಮೂಲ ಅಂಶಗಳನ್ನು ತಿಳಿಸುತ್ತವೆಯೇ ಹೊರತೂ ಅದರ ಉಪಯೋಗಿಸುವ ವಿಧಾನಗಳ ಬಗ್ಗೆ , ಅದನ್ನು ಉತ್ಪನ್ನವಾಗಿ ಪರಿವರ್ತಿಸುವ ಬಗ್ಗೆ ಕಡಿಮೆ ತಿಳಿಸುತ್ತವೆ. ಅದರಲ್ಲೂ ತಾಂತ್ರಿಕ ಶಿಕ್ಷಣದಲ್ಲಿ ಈ ಅಂಶ ತುಂಬಾ ಮಹತ್ವದ್ದು. ಹಾಗಾಗಿ, ಶಾಲೆಯಿಂದ ಹೊರ ಬರುವ ಯಾವುದೇ ವಿದ್ಯಾರ್ಥಿ ಕೂಡ ಕೈನಲ್ಲಿ ಹಿಡಿದು ಬರುವುದು ಒಂದು ಕಾಗದದ ಪ್ರಮಾಣಪತ್ರ ಮಾತ್ರ.

ಮತ್ತೊಂದು ಹಿರಿತನದ ವರ್ಗ. ಹೇಗೋ ಏನೋ, ಒಂದು ಕೆಲಸವನ್ನು ಗಿಟ್ಟಿಸಿಕೊಂಡು, ತನ್ನ ಶ್ರಮವನ್ನು, ಬುದ್ಧಿ ಶಕ್ತಿಯನ್ನು ಹಾಕಿ , ಅದ್ಭುತವಾಗಿ ತನ್ನ ಕಾರ್ಯ ನಿರ್ವಹಿಸುತ್ತಾ, ಒಂದು ಹಂತಕ್ಕೆ ಏರಿರುತ್ತಾರೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಬೇರೆ ಕೆಲಸಕ್ಕೆ ಪ್ರಯತ್ನಿಸುವಾಗ ಕೂಡ ಈ ಶಾಲೆಯ ಪ್ರಮಾಣಪತ್ರ ಅಡ್ಡ ಬರುವ ಸಾಧ್ಯತೆಗಳಿವೆ. ಯಾವುದೋ ಅನಿವಾರ್ಯ ಕಾರಣಗಳಿಂದ ಹೆಚ್ಚಿನ ವಿದ್ಯಾರ್ಹತೆ ಹೊಂದಿರದಿದ್ದರೆ ಮತ್ತೆ ಅದೇ ಕಷ್ಟ.

ಅದೆಷ್ಟೋ ವರ್ಷಗಳ ಕಾಲ ಒಳ್ಳೆಯ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವ ಇದ್ದರೂ ಕೂಡ, ಮತ್ತೆ ಅದೇ ಶೈಕ್ಷಣಿಕ ವಿದ್ಯಾರ್ಹತೆಯನ್ನು ಒಂದು ಮೂಲ ಶಕ್ತಿಯಾಗಿ ಪರಿಗಣಿಸುವ ಮುಖ್ಯ ಅವಶ್ಯಕತೆ ತಿಳಿಯುವುದಿಲ್ಲ. ಅಷ್ಟು ವರ್ಷ ಯಶಸ್ವಿ ಕೆಲಸ ಮಾಡಿದ್ದಾರೆ ಅಂದಮೇಲೆ ಅವರ ಶಕ್ತಿ ಅಷ್ಟಿದೆ ಅನ್ನುವುದಕ್ಕೆ ಮತ್ತೇನು ಪ್ರಮಾಣ ಪತ್ರ ಬೇಕು? ಈಗ ಒಂದು 20 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಶೈಕ್ಷಣಿಕ ವ್ಯತ್ಯಾಸಗಳು ಬಹಳಷ್ಟಿವೆ. ಒಂದು ಚಿಕ್ಕ ಉದಾಹರಣೆ ನಮ್ಮ ದೇಶದ ಎಂಜಿನಿಯರ್ ಗಳ 20 ವರ್ಷದ ಹಿಂದಿನ ಸಂಖ್ಯೆ ಮತ್ತು ಇಂದಿನ ಸಂಖ್ಯೆ. ಹೀಗಿದ್ದೂ ಕೂಡ, ಅದೆಷ್ಟೋ ವರ್ಷಗಳಿಂದ ಕೆಲಸ ಮಾಡಿದ ಅನುಭವ ಇರುವ ವ್ಯಕ್ತಿಗೆ ಮತ್ತೆ ಶೈಕ್ಷಣಿಕ ಹಿನ್ನೆಲೆ ಅನ್ನು ಮಾನದಂಡ ಕೆ? ಇದನ್ನೆ ಲಕ್ಷದಲ್ಲಿ ತೆಗೆದುಕೊಳ್ಳದೇ, ಕಂಪನಿಯ ಗುಣಮಟ್ಟ ನೀತಿ ಅನ್ನುವ ಸಿದ್ಧ ಉತ್ತರ ಮಾನವ ಸಂಪನ್ಮೂಲ ಇಲಾಖೆಯಿಂದ ಬರುತ್ತದೆ.

ಈಗಾಗಲೇ ಕೆಲಸದಲ್ಲಿ ಇರುವವರು ಇಂದಿನ ದಿನಮಾನಕ್ಕೆ ಬೇಕಾದ ತಾಂತ್ರಿಕ ಮಾಹಿತಿಯಲ್ಲಿ ತಮ್ಮನ್ನು ಮೇಲಿನ ದರ್ಜೆಗೆ ಏರಿಸಿಕೊಳ್ಳಬೇಕಾದ್ದು ಒಳ್ಳೆಯದೇ ಹೌದಾದರೂ ಇದೇ ಮಾನದಂಡ ಆಗಬಾರದು ಅನ್ನಿಸುತ್ತದೆ. ಶಾಲೆ ಕಾಲೇಜುಗಳು ಉದ್ಯೋಗದ ವಿದ್ಯೆಯನ್ನು ಕಲಿಸದಿದ್ದರೂ, ಹೊಸದಾಗಿ ಕೆಲಸ ಹುಡುಕು ವವರಿಗೆ ಉತ್ತಮ ಅಂಕಗಳ ಪ್ರಮಾಣ ಪತ್ರ ಬೇಕೇ ಬೇಕು. ವಿವಿಧ ಸಂಸ್ಥೆಗಳಲ್ಲಿ ಯಶಸ್ವಿ ಕೆಲಸ ಮಾಡಿ ಉತ್ತಮ ಅನುಭವ ಹೊಂದಿದವರಿಗೂ, ಮುಂದಿನ ಕೆಲಸಕ್ಕೆ ಮತ್ತದೇ ಶಾಲೆಯ ಉತ್ತಮ ಅಂಕಗಳ ಪ್ರಮಾಣ ಪತ್ರ ಬೇಕು. ಬಹುಶಃ ಇಂದಿನ ಹಲವಾರು ನಿರುದ್ಯೋಗ ಸಮಸ್ಯೆಗಳಿಗೆ ಕೂಡಾ ಈ ಅವೈಜ್ಞಾನಿಕ ಮೂಲ ಮಾನದಂಡ ಒಂದು ಕಾರಣ ಅನ್ನಬಹುದು.

ಯಾವುದೇ ಕೆಲಸಕ್ಕೂ ಎಂಜಿನಿಯರಿಂಗ್ ಕಡ್ಡಾಯ ಅನ್ನುವ ಸ್ಥಿತಿ ಈಗ ನಿರ್ಮಾಣವಾಗಿದೆ. ಅದೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ, ಎಂಜಿನಿಯರಿಂಗ್ ಪದವೀ ಧರರನ್ನು ತೆಗೆದುಕೊಂಡು ಕೊಡುವ ಕೆಲಸವಾದರೂ ಅವರು ಓದಿದ ವಿಷಯಕ್ಕೆ ಸಂಬಂಧ ಪಟ್ಟಿರುತ್ತದಾ ಅಂದರೆ ಅದೂ ಇಲ್ಲ. ಹೊಸದಾಗಿ ಬರುವ ಉದ್ಯೋಗ ಆಕಾಂಕ್ಷಿಗಳಿಗೆ ಕೇವಲ ಅಂಕಗಳು ಮಾನದಂಡ ಆಗದಿರಲಿ. ಅವರ ಕುಶಲತೆಯನ್ನು ವರೆಗೆ ಹಚ್ಚಿ ಕೆಲಸ ಕೊಡುವ ಪದ್ಧತಿ ಬಂದರೆ ಹೆಚ್ಚು ಉಪಯೋಗ. ಕೋವಿಡ್ ಸಮಸ್ಯೆಯಿಂದ ಕೆಲಸಗಳು ಕೂಡ ಅಷ್ಟೇ ಸಮಸ್ಯೆಗಳಾಗಿವೆ. ಇಂಥ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ನಿಜವಾದ ಕೌಶಲಕ್ಕೆ ಕೂಡ ಮಹತ್ವ ಬರಲಿ. ನಿಜವಾದ ಪ್ರತಿಭೆಗಳಿಗೂ ಅವಕಾಶಗಳು ಸಿಗಲಿ. ಆ ನಿಟ್ಟಿನಲ್ಲಿ ಎಲ್ಲ ಕಂಪನಿಗಳ ಹಿರಿ ತಲೆಗಳೂ, ಮಾನವ ಸಂಪನ್ಮೂಲ ಅಧಿಕಾರಿಗಳೂ ವಿಚಾರ ಮಾಡುವುದು ಒಳಿತು.