Wednesday, 11th December 2024

ರಾಜಕುಮಾರಿ ಈರುಳ್ಳಿಯಾದ ಕಥೆ

ಸುಧಕ್ಕನ ಕಥೆಗಳು

ಸುಧಾಮೂರ್ತಿ

ಅಕ್ಷಯ ತೃತೀಯ ಬಂದಿತು. ಅಜ್ಜಿ, ಅಜ್ಜ ಎಲ್ಲ ಮೊಮ್ಮಕ್ಕಳ ಜತೆ ಬಟ್ಟೆಯ ಅಂಗಡಿಗೆ ಹೊರಟರು. ಕೆಲವು ತಯಾರಿಸಿದ
ಉಡುಪುಗಳನ್ನು ಹೊರಗೆ ಅಂದವಾಗಿ ಜೋಡಿಸಿದ್ದರು.

ಮಕ್ಕಳಿಗೆಲ್ಲಾ ಸಂತೋಷವೋ ಸಂತೋಷ. ಪ್ರತಿಯೊಬ್ಬರು ತಮಗೆ ಇಷ್ಟವಾದ ಬಣ್ಣದ ಉಡುಪು ಆರಿಸುತ್ತಿದ್ದರು. ಆದರೆ ಕೃಷ್ಣಾ ಮಾತ್ರ ಎನ್ನನ್ನೂ ಆರಿಸದೆ ಸುಮ್ಮನೆ ನಿಂತಿದ್ದಳು. ‘ಮಗೂ ಕೃಷ್ಣಾ ಯಾಕೆ ನಿನಗೆ ಬಟ್ಟೆ ಬೇಡವೇ?’ ಅಜ್ಜಿ ಕಾತುರದಿಂದ ಕೇಳಿದಳು.

‘ಅಜ್ಜಿ ನನಗೆ ಇಲ್ಲಿ ಯಾವ ಉಡುಪೂ ಸೇರಿಲ್ಲ. ಇನ್ನೊಂದು ಅಂಗಡಿಗೆ ಹೋಗೋಣ’ಎಂದಳು. ಮತ್ತೆ ಎಲ್ಲರೂ ಬೇರೆ ಅಂಗಡಿಗೆ ಹೋದರು. ಅಲ್ಲಿಯ ಸೇಲ್ಸ್ಮನ್ ಬೇರೆ ಬಣ್ಣದ ಉಡುಪನ್ನು ತೋರಿಸಿದ. ಆದರೆ ಕೃಷ್ಣಾ ನನಗೆ ಈ ಬಣ್ಣ ಇಷ್ಟವಿಲ್ಲ. ಈ ತರಹದ ಡ್ರೆಸ್ ನನ್ನ ಬಳಿಯಲ್ಲಿ ಇದೆ. ಇದು ನನ್ನ ಸ್ನೇಹಿತೆಯರ ಹತ್ತಿರವಿರುವ ಡ್ರೆಸ್ ತರಹವೇ ಇದೆ…. ಹೀಗೆ ನೂರಾರು ತಕರಾರು ತೆಗೆದಳು. ಅದನ್ನು ನೋಡಿ ಅಜ್ಜ ‘ ಮಗು ಪ್ರತಿ ಅಂಗಡಿಯಲ್ಲಿಯೂ ನೀನು ಒಂದಲ್ಲ ಒಂದು ತಕರಾರು ತೆಗೆಯುತ್ತೀಯಾ.

ಹೀಗಾದರೆ ನಿನ್ನದು ರಾಜಕುಮಾರಿ ಬೀನಾಳ ಕಥೆಯಾಗುತ್ತದೆ’ ಎಂದಳು. ‘ಅಜ್ಜಿ ಇದ್ಯಾವ ಕಥೆ, ಈಗಲೇ ಹೇಳು’ ಎಂದು ಮೊಮ್ಮಕ್ಕಳು ದುಂಬಾಲುಬಿದ್ದರು. ಅಂಗಡಿಯ ಮುಂದೆ ಬೆಂಚಿನ ಮೇಲೆ ಕುಳಿತು ಅಜ್ಜಿ ಕಥೆ ಆರಂಭಿಸಿದಳು. ಅಜ್ಜ ಐಸ್
ಕ್ರೀಂ ತರಲು ಹೋದರು. ಹಿಂದೆ ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನ ರಾಜ್ಯ ಸುಕ್ಷೇಮವಾಗಿತ್ತು. ಎಲ್ಲ ಕಡೆಗೆ ಮಳೆ, ಬೆಳೆ, ಎಲ್ಲವೂ ಚೆನ್ನಾಗಿತ್ತು. ವ್ಯಾಪಾರ, ವ್ಯವಹಾರ ಉತ್ತಮ ಆಗಿದ್ದವು. ಪ್ರಜೆಗಳು ಸಂತೋಷವಾಗಿದ್ದರು. ಆದರೆ ರಾಜ – ರಾಣಿ ಸುಖವಾಗಿರಲಿಲ್ಲ. ಅವರಿಗೆ ಎಲ್ಲವೂ ಇದ್ದರೂ ಮಕ್ಕಳಿರಲಿಲ್ಲ.

ಅದಕ್ಕಾಗಿ ಅನೇಕ ಪೂಜೆ ಪುನಸ್ಕಾರ ಮಾಡುತ್ತಿದ್ದರು. ಕೊನೆಗೆ ಒಂದು ದಿನ ರಾಜನಿಗೆ ಅವನ ಮಂತ್ರಿ ಸಲಹೆ ಕೊಟ್ಟ.
‘ಮಹಾರಾಜ, ನಮ್ಮ ರಾಜಧಾನಿಯ ಹತ್ತಿರದ ಕಾಡಿನಲ್ಲಿ ವನದೇವತೆಯ ದೇವಸ್ಥಾನವಿದೆ. ಅಲ್ಲಿ ಹೋಗಿ ನೀವು ಬೇಡಿಕೊಂಡರೆ ವನದೇವಿ ನಿಮಗೆ ಮಗುವನ್ನು ದಯಪಾಲಿಸಬಹುದು’. ಮಂತ್ರಿಯ ಮಾತು ಕೇಳಿ ರಾಜ-ರಾಣಿ ಕಾಡಿಗೆ ಹೋದರು. ಅಲ್ಲಿ ವನದೇವತೆ ದೇವಸ್ಥಾನ ಇದ್ದಿತು.

ಒಂದೇ ಭಕ್ತಿಯಿಂದ, ಮನದಿಂದ ವನದೇವತೆಯನ್ನು ಪರಿಪರಿಯಾಗಿ ಪ್ರಾರ್ಥಿಸಿದರು. ರಾಜನ ಪ್ರಾರ್ಥನೆಗೆ ಒಲಿದು ವನದೇವತೆ
ಪ್ರತ್ಯಕ್ಷಳಾದಳು. ಅವರಿಬ್ಬರ ಕೋರಿಕೆ ಕೇಳಿ ‘ನಿಮಗೆ ಒಬ್ಬ ಸುಂದರವಾದ ಮಗಳನ್ನು ನಾನು ಕೊಡುತ್ತೇನೆ. ಆದರೆ ಅವಳಲ್ಲಿ ಒಂದು ದುರ್ಗುಣ ಇರುವುದು. ಅವಳಿಗೆ ಬಟ್ಟೆಯ ಬಣ್ಣದ ಹುಚ್ಚು. ಆ ಹುಚ್ಚಿನಿಂದ ನಿಮಗೆ ತೊಂದರೆಯಾಗಬಹುದು. ಈಗ ಹೇಗೆ, ನಿಮಗೆ ನಿಜವಾಗಿ ಮಗು ಬೇಕೆ? ರಾಜ – ರಾಣಿಯರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು.

‘ನಮಗೇನೂ ಸಂಪತ್ತಿನಲ್ಲಿ ಕೊರತೆಯಿಲ್ಲ. ಆದ್ದರಿಂದ ಅವಳಿಗೆ ಬೇಕಾದ ಬಟ್ಟೆ ನಾವು ಕೊಡಿಸೋಣ’. ‘ಆಗಲಿ ತಾಯಿ ನಮಗೊಂದು ಮಗುವನ್ನು ಕರುಣಿಸು’. ಮುಂದೆ ಒಂದು ವರ್ಷದಲ್ಲಿಯೇ ಸುಂದರವಾದ ರಾಜಕುಮಾರಿಯ ಜನ್ಮವಾಯಿತು.
ಅವಳಿಗೆ ಮುದ್ದಿನಿಂದ ‘ಬೀನಾದೇವಿ’ ಎಂದು ನಾಮಕರಣವೂ ಆಯಿತು. ರಾಜಕುಮಾರಿ ಬೀನಾದೇವಿ ಬಿದಿಗೆಯ ಚಂದ್ರನಂತೆ ಸುಂದರವಾಗಿ ಬೆಳೆದುನಿಂತಳು. ವನದೇವಿ ಹೇಳಿದಂತೆ ಅವಳಿಗೆ ಬಟ್ಟೆಯ ಉಡುಪಿನ ಹುಚ್ಚು. ಪ್ರತಿದಿನವೂ ಅವಳಿಗೆ ಬೇರೆ ಬೇರೆ ವಿನ್ಯಾಸದ ಬಣ್ಣದ ಉಡುಪು ಬೇಕು.

ಒಂದು ದಿನ ಒಂದು ಬಟ್ಟೆ ಧರಿಸಿದರೆ ಮತ್ತೊಂದು ದಿನ ಅವಳು ಅದನ್ನು ಧರಿಸುತ್ತಿರಲಿಲ್ಲ. ಹೀಗೆ ಅವಳ ಬಟ್ಟೆಗಾಗಿ ರಾಜ್ಯದಲ್ಲಿ ಅನೇಕ ವರ್ತಕರು ಬೆಲೆಬಾಳುವ ಬಟ್ಟೆಯನ್ನು ತರುತ್ತಿದ್ದರು. ರಾಜಕುಮಾರಿ ನೂರಾರು ನಿಯಮ, ಬಣ್ಣ ಎಲ್ಲವನ್ನೂ ಪಾಲಿಸಿ ಬಟ್ಟೆ ಆರಿಸುತ್ತಿದ್ದಳು. ದಿನಗಳೆದಂತೆ ಅವಳ ವೆಚ್ಚ ಭರಿಸಲಾರದಂತೆ ಏರುತ್ತಿತ್ತು. ರಾಜನಿಗೋ ಧರ್ಮಸಂಕಟ. ಅವನು
ಪ್ರಜೆಗಳನ್ನು ತುಂಬ ಪ್ರೀತಿಯಿಂದ ಪಾಲಿಸುತ್ತಿದ್ದ. ಈ ಹೆಚ್ಚಿನ ಖರ್ಚಿಗಾಗಿ ಆತ ಪ್ರಜೆಗಳ ಮೇಲೆ ಹೊಸ ಕರ ವಿಧಿಸುವ ಸಂದರ್ಭ ಬಂದಿತು.

ವನದೇವಿ ಹೇಳಿದಂತೆ ಬೀನಾಳ ಉಡುಪಿನ ಹುಚ್ಚು ರಾಜನಿಗೆ ಹುಣ್ಣಿನಂತೆ ಆಯಿತು. ಕೊನೆಗೆ ಅವನು ಅವಳನ್ನು ಕರೆದು ‘ಮಗು ನಾನು ಎಷ್ಟು ಹೇಳಿದರೂ ನೀನು ಬಟ್ಟೆಯ ಹುಚ್ಚು ಕಡಿಮೆ ಮಾಡಿಲ್ಲ. ನೀನು ವನದೇವತೆಯ ಪ್ರಸಾದ. ನೀನು ಅವಳ ದೇವಸ್ಥಾನಕ್ಕೆ ಹೋಗಿ ಅಲ್ಲಿಯೇ ಪ್ರಾರ್ಥನೆ ಮಾಡಿಕೊ’ ಎಂದ. ಬೀನಾದೇವಿ ಸಂತೋಷದಿಂದ ಕಾಡಿಗೆ ಬಂದು ವನದೇವಿಯನ್ನು ಪ್ರಾರ್ಥಿಸಿದಳು. ವನದೇವತೆ ಪ್ರತ್ಯಕ್ಷಳಾದಳು. ತನ್ನ ಮನಸ್ಸಿನ ಕೋರಿಕೆಯನ್ನು ರಾಜಕುಮಾರಿ ವನದೇವತೆಗೆ ಹೇಳಿದಳು.
‘ದೇವಿ, ನನಗೆ ಪ್ರತಿದಿನವೂ ಬೇರೆ ಬೇರೆ ಬಣ್ಣದ ಸುಂದರವಾದ ಉಡುಪು ಅಥವಾ ಸೀರೆಯನ್ನು ಕೊಡು, ಮತ್ತೇನೂ ಬೇಡ’.

‘ಸರಿ, ಬೀನಾ ನಾನು ಕೊಡುತ್ತೇನೆ. ಆದರೆ ಒಂದು ನಿಯಮ. ನೀನು ಎಂದೂ ಬೇರೆಯವರ ಉಡುಪು ಅಥವಾ ಸೀರೆ ಕೇಳಬಾರದು ಹಾಗೂ ಉಡಬಾರದು’. ಇದೇನು ದೊಡ್ಡ ನಿಯಮವಲ್ಲ. ‘ವನದೇವತೆಯೇ ಸುಂದರವಾದ ಸೀರೆ ಕೊಡುವಾಗ, ಬೇರೆಯವರ
ಗೊಡವೆ ನಮಗೇಕೆ’ ಎಂದು ಬೀನಾದೇವಿ ಚಿಂತಿಸಿದಳು. ‘ಆಗಲಿ ತಾಯಿ ನಿನ್ನ ಕರಾರಿಗೆ ನನ್ನ ಒಪ್ಪಿಗೆ’ ಎಂದಳು.

‘ಅದನ್ನು ಮೀರಿದರೆ ನಿನಗೆ ಕಠಿಣ ಶಿಕ್ಷೆ’ ಎಂದಳು ವನದೇವಿ. ಹಿಂದು ಮುಂದು ವಿಚಾರಿಸದೇ ಬೀನಾದೇವಿ ಕೂಡಲೇ ಒಪ್ಪಿಗೆ ಕೊಟ್ಟಳು. ಮರುದಿನದಿಂದ ರಾಜಕುಮಾರಿಯ ಪೆಟ್ಟಿಗೆಯಲ್ಲಿ ಪ್ರತಿದಿನವೂ ಸುಂದರವಾದ ಉಡುಪು ಅಥವಾ ಸೀರೆ, ಅದಕ್ಕೆ ತಕ್ಕಂತೆ ಆಭರಣ ಇರುತ್ತಿದ್ದವು. ಅವುಗಳ ಅಂದ ವರ್ಣಿಸಲು ಸಾಧ್ಯವೇ ಇರಲಿಲ್ಲ. ಅವಳ ಸ್ನೇಹಿತೆಯರು ಮೊದಮೊದಲು ಆ
ಬಟ್ಟೆನೋ ‘ಇದೆಷ್ಟು ಚೆಂದ, ಎಷ್ಟು ಅಂದ’ ಎಂದು ಹೇಳುತ್ತಿದ್ದರು. ಆದರೆ ಕಾಲಾಂತರದಲ್ಲಿ ‘ಇದು ಮನುಷ್ಯರು ನೇಯುವ ಬಟ್ಟೆಯಲ್ಲ, ವನದೇವಿ ಕರುಣಿಸಿದ ಬಟ್ಟೆ. ಸುಂದರವಾಗಿಯೇ ಇರೋದು, ಅದರಲ್ಲಿ ಏನು ಅಚ್ಚರಿ’ ಎಂದು ಸುಮ್ಮನಾಗುತ್ತಿದ್ದರು.
ಜನರು ಅವಳ ಸೀರೆಯನ್ನು ಹೊಗಳದೇ ಇದ್ದಾಗ ಬೀನಾದೇವಿಗೆ ನೋವಾಗುತ್ತಿತ್ತು. ಅವಳ ಬಟ್ಟೆಯ ಅಂದಚಂದವನ್ನು ಜನರು ಮೆಚ್ಚಬೇಕೆಂದು ಅವಳು ಬಯಸುತ್ತಿದ್ದಳು. ಆದರೆ ಅದನ್ನು ಯಾರೂ ಮಾಡುತ್ತಿರಲಿಲ್ಲ.

ಒಂದು ದಿನ ಅಕ್ಷಯ ತೃತೀಯಾ ಹಬ್ಬ ಇದ್ದಿತು. ಜನರೆಲ್ಲ ಒಟ್ಟುಗೂಡಿದರು. ಬೀನಾದೇವಿ ಎಂದಿನಂತೆ ಸುಂದರವಾದ ಬಣ್ಣ ಬಣ್ಣದ ಸೀರೆಯನ್ನು ಉಟ್ಟು ಬಂದಳು. ಆದರೆ ಅವಳ ಸ್ನೇಹಿತೆಯೊಬ್ಬಳು ಸಾಧಾರಣವಾದ ಹೊಸಸೀರೆಯನ್ನು ಉಟ್ಟಿದ್ದಳು.
ಆದರೆ ಉಳಿದವರೆಲ್ಲರೂ ‘ಎಷ್ಟು ಸುಂದರವಾದ ಸೀರೆ ಇದು’ ಎಂದು ಹೊಗಳುತಿದ್ದರು.

ಬೀನಾದೇವಿಗೆ ಕೋಪ ಮತ್ತು ಅಸೂಯೆ ಎರಡೂ ಬಂದವು. ತನ್ನ ಸೀರೆಯ ಚೆಂದವನ್ನು ಯಾರೂ ಹೇಳುತ್ತಿಲ್ಲವಲ್ಲ ಅನಿಸಿತು. ಸಿಟ್ಟಿನ ಭರದಲ್ಲಿ ವಿವೇಕ ಮರೆತು ಸ್ನೇಹಿತೆಗೆ ‘ನಿನ್ನ ಸೀರೆ ನನಗೆ ಕೊಡು, ನನ್ನ ಸೀರೆ ಕೊಡುತ್ತೇನೆ’ ಎಂದಳು. ಅಷ್ಟರಲ್ಲಿ
ಆಕಾಶವಾಣಿಯಾಯಿತು. ‘ಬೀನಾದೇವಿ ನೀನು ನಿನ್ನ ಕರಾರನ್ನು ಮುರಿದೆ. ನಿನಗೆ ಇನ್ನು ಮಾನವ ಜನ್ಮ ಹೋಗುವುದು, ಸಿದ್ಧಳಾಗು’ ಬೀನಾದೇವಿಗೆ ದುಃಖ ಉಕ್ಕಿ ಬಂದಿತು. ಹಿಂದೆ ತಿರುಗಿ ನೋಡಿದರೆ ಅಲ್ಲಿ ತಾಯಿ,ತಂದೆ, ಸ್ನೇಹಿತೆಯರು, ಪ್ರಜೆಗಳು ಎಲ್ಲರೂ ಸೇರಿ ಅವಕ್ಕಾಗಿ ನಿಂತಿದ್ದರು. ಎಲ್ಲರೂ ಅವಳನ್ನು ಪ್ರೀತಿಸುತ್ತಿದ್ದರು. ಎಲ್ಲರನ್ನು ಕಂಡರೆ ಅವಳಿಗೆ ಪಂಚಪ್ರಾಣ.

ಇವರನ್ನೆಲ್ಲ ಹೇಗೆ ಬಿಟ್ಟುಹೋಗಬೇಕು? ಕಣ್ಣೀರು ಸುರಿಯಿತು. ಅವಳು ಮಂಡಿಯೂರಿ ‘ತಾಯಿ, ನಾನು ಮಾತು ತಪ್ಪಿದೆ. ನನ್ನನ್ನು ಕ್ಷಮಿಸು. ನಾನು ಮಾನವ ಜನ್ಮವನ್ನು ಬಿಡಲು ಸಿದ್ಧಳಿದ್ದೇನೆ. ಆದರೆ ನನ್ನದೊಂದು ಕೋರಿಕೆ. ನೀನು ವನದೇವತೆ. ಆದ್ದರಿಂದ ನನ್ನನ್ನು ಯಾವುದಾದರೊಂದು ತರಕಾರಿಯಾಗಿ ಮಾಡು. ಅದರಲ್ಲಿ ಸುಂದರವಾದ ತೆಳ್ಳನೆಯ ಪದರು ಪದರುಗಳು
ಇರಲಿ. ಅದನ್ನು ಬೇರೆ ಮಾನವರು ನೋಡಿದಾಗ ನನ್ನ ಬಟ್ಟೆಯ ಹುಚ್ಚು ಅವರಿಗೆ ನೆನಪಾಗಲಿ. ಅದನ್ನು ಬಿಡಿಸುವಾಗ ಅವರ ಕಣ್ಣಲ್ಲಿ ನೀರು ಬರಲಿ. ನಾನು ದುಃಖದಿಂದ ನನ್ನ ಪ್ರಜೆಗಳನ್ನು ನನ್ನ ಬಂಧು ಬಳಗವನ್ನು ತಾಯಿ – ತಂದೆಯರನ್ನು ಬಿಟ್ಟು
ಹೋಗುತ್ತಿದ್ಧೇನೆ. ಈ ತರಕಾರಿಯನ್ನು ಪ್ರತಿಯೊಬ್ಬರು  ಉಪಯೋಗಿಸಲಿ. ಭೂಮಿಯಲ್ಲಿ ಅತ್ಯಂತ ಜನಪ್ರಿಯವಾಗಲಿ.
ವನದೇವತೆಗೂ ದುಃಖವಾಯಿತು. ಆದರೆ ಬೇರೆ ದಾರಿಯೇ ಇರಲಿಲ್ಲ. ಅಂತೂ ಇಂತೂ ಬೀನಾದೇವಿ ತರಕಾರಿಯಾಗಿ ಎಲ್ಲರಿಗೂ ಪ್ರಿಯಳಾದಳು.
***

‘ಅಜ್ಜಿ, ಆ ತರಕಾರಿ ಯಾವುದು? ಎಂದ ರಘು.
‘ನೀವೇ ಹೇಳಿ’ ಎಂದಳು ಅಜ್ಜಿ.
‘ಅಜ್ಜಿ ನನಗೆ ಗೊತ್ತು, ಅದು ಬಹುಶಃ ಈರುಳ್ಳಿ ಇರಬೇಕು. ಅದನ್ನು ಹೆಚ್ಚುವಾಗ ಕಣ್ಣೀರು ಬರುವುದೇ ಅಲ್ಲದೇ ಅದಕ್ಕೆ ಎಷ್ಟೊಂದು ತೆಳ್ಳನೆಯ ಪದರು ಇದೆ ಎಂದಳು ಕೃಷ್ಣಾ. ‘ಹೌದು, ಅದರ ರುಚಿಯೇ ರುಚಿ. ಅದು ಎಲ್ಲರ ಮನೆಯಲ್ಲಿಯೂ ಇರುತ್ತದೆಯಲ್ಲ’ ಎಂದಳು ಅನುಷ್ಕಾ. ಅಷ್ಟರಲ್ಲಿ ಅಜ್ಜ ಈರುಳ್ಳಿ ಪಕೋಡ ಮತ್ತು ಐಸ್‌ಕ್ರೀಂ ತಂದರು.