ಅಭಿವ್ಯಕ್ತ
ವಿನಯ್ ಖಾನ್
ಅಲ್ಲ ನಮ್ಮನ್ನೆಲ್ಲ ಹಾಳುಗೆಡವಿದ ಇವರಿಗೆ ನಾವ್ಯಾಕೆ ಮರುಗಬೇಕು? ಶೋಕಾಚರಣೆ ಆಚರಿಸಬೇಕು? ಹಾಗೆಂದು ಸಂತೋಷ ಪಡಬೇಕೆಂದೇನೂ ಅಲ್ಲ. ಅಂಥ ವಿಕೃತಿ ನಮ್ಮಲ್ಲಿಲ್ಲ. ಆ ಬ್ರಿಟನ್‌ನ ರಾಜ-ರಾಣಿಯರು ಕುಳಿತುಕೊಳ್ಳುವ ಸಿಂಹಾಸನ ಕಣ್ಣಿಗೆ ಶುಭ್ರವಾಗಿ ಕಾಣಬಹುದು, ಆದರೆ ಅದಕ್ಕೆ ಕೋಟ್ಯಂತರ ಜನರ ರಕ್ತದ ಹಸಿ ಇನ್ನೂ ಮೆತ್ತಿದೆ. ಬ್ರಿಟನ್‌ನಲ್ಲಿ ಒಳ್ಳೆಯ ರಸ್ತೆ, ಅರಮನೆ, ಕಟ್ಟಡಗಳು ಕಾಣಬಹುದು, ಅದು ಎಷ್ಟೋ ಕೋಟಿ ಜನರ ನೆತ್ತರು, ಎಲುಬುಗಳ ಮೇಲೆಯೇ ರಾರಾಜಿಸುತಿವೆ.
ಮೊನ್ನೆ ಬ್ರಿಟನ್ ರಾಣಿ ತೀರಿಕೊಂಡಾಗ ಅಮೆರಿಕದ ಪತ್ರಕರ್ತ tucker carlson ಹೇಳ್ತಾನೆ, ‘ಅಮೆರಿಕದ ಸರಕಾರ ಅಫ್ಘಾನಿ ಸ್ತಾನ್‌ನಿಂದ ತನ್ನ ಸೇನೆಯನ್ನು ಹಿಂಪಡೆದಾಗ ಅಲ್ಲಿ ವಿಮಾನ ನಿಲ್ದಾಣ, ಕಂಟೈನರ್‌ಗಳು ಮತ್ತು ಗನ್‌ಗಳನ್ನು ಬಿಟ್ಟು ಬಂದಿದ್ದೆವು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಒಂದಿಡೀ ನಾಗರೀಕತೆ, ಭಾಷೆ, ನ್ಯಾಯಾಂಗ, ಶಾಲೆಗಳು, ಚರ್ಚ್‌ಗಳು, ಸಾರ್ವಜನಿಕ ಕಟ್ಟಡಗಳನ್ನು ಬಿಟ್ಟರು, ಅದೆಲ್ಲವೂ ಇನ್ನೂ ಚಾಲ್ತಿಯಲ್ಲಿದೆ, ಉದಾಹರಣೆಗೆ ಬಾಂಬೆ ನಗರದಂಥ ರೈಲ್ವೇ ಸ್ಟೇಷನ್ ವಾಷಿಂಗ್ಟನ್‌ನಂತಹ ಅನೇಕ ಪ್ರಪಂಚದ ಯಾವುದೇ ಮುಂದುವರಿದ ರಾಷ್ಟ್ರಗಳ ನಗರಗಳಲ್ಲೂ ಇಲ್ಲ.’
ಹೀಗೆ ಕೆಲವೊಂದು ಮಾತುಗಳನ್ನು ಹರಿಬಿಟ್ಟಿದ್ದಾನೆ. ಹೌದು, ಬ್ರಿಟಿಷರು ನಮಗಾಗಿ ಬಿಟ್ಟು ಹೋಗಿದ್ದು ಹಲವಾರಿವೆ, ಆದರೆ ಯಾವ ಬೆಲೆಗೆ? ಪಾಪ ಅಮೆರಿಕದ ಹಾಲು, ಬೀರು ಕುಡಿದು ಬೆಳೆದ ಅವನಿಗೆ ಭಾರತೀಯರು ಹರಿಸಿದ ನೆತ್ತರಿನ ಪ್ರಮಾಣದ ಬಗ್ಗೆ ಸಣ್ಣ ಮಾಹಿತಿಯೂ ಇರಲಿಕ್ಕಿಲ್ಲ. ಇತಿಹಾಸದ ಪುಟಗಳಲ್ಲೊಮ್ಮೆ ಇಣುಕಿ ಹಾಕಿದಾಗ, ಅಲ್ಲಿ ಕಾಣುವುದು ಇವರ ದರ್ಪ, ಅಟ್ಟಹಾಸ, ಕೊಲೆಗಡುಕತನ, ಲೂಟಿ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅನಾಗರಿಕತೆ, ಭಾರತೀಯರ ಕಣ್ಣಿರು, ಸ್ವಾತಂತ್ರಕ್ಕೋಸ್ಕರ ಪಣ ತೊಟ್ಟವರ ಸಾಹಸ ಇವು ಗಳೇ… ಬ್ರಿಟಿಷರು ತಮ್ಮ ರಾಣಿಯ ಅಣತಿಯಂತೆ ಭಾರತಕ್ಕೆ ಬಂದಾಗ ಅವರು ಬರೀ ವ್ಯಾಪಾರಿಗಳು!
ತಮ್ಮ ನರಿ ಬುದ್ಧಿಯನ್ನು ಬಳಸಿ, ನಮ್ಮ ದೊಡ್ಡತನದಿಂದ ನಮ್ಮನ್ನೇ ಆಳಿದವರು. ಅವರ ಆಡಳಿತದಲ್ಲಿ ಸತ್ತ ಭಾರತೀಯ ರೆಷ್ಟೋ, ಭಿಕಾರಿ ಆದವರೆಷ್ಟೋ, ಅವರು ಲೂಟಿ ಹೊಡೆದ ಹಣದ ಮೌಲ್ಯವೆಷ್ಟೋ. ಅದೆಲ್ಲದರ ಬಗೆಗೆ ಇನ್ನೂವರೆಗೂ ಸರಿಯಾದ ಮಾಹಿತಿ ಇಲ್ಲ. ಕೆಲವರ ಮಾಹಿತಿಯ ಪ್ರಕಾರ ಬ್ರಿಟಿಷರು ಇಲ್ಲಿಯವರೆಗೂ ದೋಚಿದ್ದು 45 ಟ್ರಿಲಿಯನ್ ಡಾಲರ್! ಅದಿನ್ನೂ ಹೆಚ್ಚಿರಬಹುದು, ಆದರೆ ಭಾರತೀಯರ ಹಣೆಬರಹಕ್ಕೆ ಇನ್ನೂ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನೂ ತಲುಪಿಲ್ಲ! ಅದಕ್ಕಾಗಿ ಇನ್ನೂ ಹರಸಾಹಸ ಪಡುತ್ತಿದ್ದೇವೆ.
ಬ್ರಿಟಿಷರು ನಮ್ಮ ದೇಶಕ್ಕೆ ಕಾಲಿಟ್ಟಾಗ ಭಾರತದ ಆರ್ಥಿಕತೆ (ಜಿಡಿಪಿ) ಪ್ರಪಂಚದ ಆರ್ಥಿಕತೆಯ ಶೇಕಡಾ 23 ರಷ್ಟು ಪಾಲನ್ನು ಹೊಂದಿತ್ತು. ಅವರು ಕಾಲು ಕೀಳುವ ಹೊತ್ತಿಗೆ ನಮ್ಮಲ್ಲಿ ಉಳಿದಿದ್ದು ಕೇವಲ 3ಕ್ಕಿಂತ ಕಡಿಮೆ. ಬೆಂಗಾಳದ ಮಸ್ಲಿನ್ ಬಟ್ಟೆಗಳು ಪ್ರಪಂಚಾದ್ಯಂತ ಹೆಸರುವಾಸಿ, ಆದರೆ ತಮ್ಮ ಬಟ್ಟೆ ವ್ಯಾಪಾರವನ್ನು ಭದ್ರಪಡಿಸಲು ಬ್ರಿಟಿಷರು ನೇಕಾರರ ಮಗ್ಗವನ್ನು ಮುರಿದರು, ಅವರ ಬೆರಳನ್ನು ಕತ್ತರಿಸಿದರು, ಕೆಲವರ ಮೇಲೆ ಅತ್ಯಧಿಕ ತೆರಿಗೆ ಪೇರಿಸಿ ಅವರನ್ನು ಭಿಕ್ಷುಕರನ್ನಾಗಿ ಮಾಡಿದರು. ಮೊದಲನೇ ವಿಶ್ವಯುದ್ಧದಲ್ಲಿ, ಬ್ರಿಟಿಷರಿಗಾಗಿ ನಮ್ಮ 54 ಸಾವಿರ ಸೈನಿಕರು ತಮ್ಮ ಪ್ರಾಣ ಬಲಿಕೊಟ್ಟರು.
64 ಸಾವಿರ ಸೈನಿಕರು ಗಾಯಗೊಂಡು, 4 ಸಾವಿರ ಜನ ಕಾಣೆಯಾಗಿದ್ದು ಇನ್ನೂ ಆ ನೆಲದಲ್ಲಿ ಹಸಿಯಾಗಿಯೇ ಇದೆ.
ಎರಡನೆಯ ವಿಶ್ವಯುದ್ಧದಲ್ಲಿ ತಮ್ಮದಲ್ಲದ ದೇಶಕ್ಕಾಗಿ 89 ಸಾವಿರ ಭಾರತೀಯ ಸೈನಿಕರು ಪ್ರಾಣಾರ್ಪಣೆಗೈದಿದ್ದರು. ಅದೇ ಸಮಯದಲ್ಲಿ ಭಾರತೀಯರ ಆಹಾರವನ್ನು ಯುದ್ಧಕ್ಕೆ ರಫ್ತು ಮಾಡಿದ್ದರಿಂದ ಹಸಿವಿನಿಂದ ಬಂಗಾಲದಲ್ಲಿ ಅಸುನೀಗಿದವರು 30 ಲಕ್ಷಕ್ಕೂ ಹೆಚ್ಚುಜನ. ಇನ್ನು ಜಲಿಯನ್ ವಾಲಾ ಬಾಗ್‌ನಲ್ಲಿ ಸೇರಿದ್ದ ಸಾವಿರಕ್ಕೂ ಅಧಿಕ ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದು ಮರೆಯಲಾದೀತೆ? ನಮ್ಮಲ್ಲಿದ್ದ ಗುರುಕುಲ ಪದ್ಧತಿಯನ್ನು ಅಳಿಸಿ ಹಾಕಿ, ಮೆಕಾಲೆ ಪದ್ಧತಿಯನ್ನು ಜಾರಿಗೊಳಿಸಿ,
ತಮ್ಮ ಧರ್ಮ ಪ್ರಚಾರಕರನ್ನು ಕರೆಸಿ ಹೀನಾಯವಾಗಿ ಕೋಟ್ಯಂತರ ಹಿಂದೂಗಳನ್ನು ಮತಾಂತರ ಮಾಡಿದ್ದು, ರಾಜರನ್ನು ಅನ್ಯಾಯವಾಗಿ ಸೋಲಿಸಿ ಅವರ ಆಸ್ತಿಯನ್ನೆಲ್ಲ ಕೊಳ್ಳೆ ಹೊಡೆದದ್ದು, ಜನರ ಮೇಲೆ ಅಟ್ಟಹಾಸ ಮಾಡಿ, ಮಹಿಳೆಯರ ಮೇಲೆ
ಅತ್ಯಾಚಾರ ಮಾಡಿ, ಸುಲಿಗೆ ಮಾಡಿದ್ದು, ಇಲ್ಲಿಯ ಕಲಾಕೃತಿ, ಆಭರಣ, ವಿಗ್ರಹಗಳನ್ನು ಕದ್ದು ಕೊನೆಗೆ ಕೋಹಿನೂರನ್ನು ಸೇರಿಸಿ ತಮ್ಮ ರಾಣಿಗೆ ಅರ್ಪಿಸಿದ್ದರಲ್ಲ, (ಬ್ರಿಟಿಷ್ ಮ್ಯೂಸಿಯಂ ಅನ್ನು ಇನ್ನೂ ಚೋರ್ ಬಜಾರ್ ಎಂದೇ ಕರೆಯುತ್ತಾರೆ)
ಅದನ್ನೆಲ್ಲ ಹೇಗೆ ತಾನೇ ಕ್ಷಮಿಸಬಹುದು? ಭಾರತೀಯರಿಗೆ ಎಲ್ಲದಕ್ಕೂ ಮರಗುವ ಗುಣ ಜಾಸ್ತಿ!
ಬ್ರಿಟನ್‌ರಾಣಿ ಎಲಿಜಬೆತ್ 2 ಇಹಲೋಕ ತ್ಯಜಿಸಿದಾಗ ಅದಕ್ಕೆ ಪ್ರಪಂಚಾದ್ಯಂತ ಅವರಿಗೆ ಶ್ರದ್ಧಾಂಜಲಿಯನ್ನೂ ಕೋರಲಾ ಯಿತು. ಇದರಲ್ಲಿ ಭಾರತೀಯರೂ ಹೊರತಿಲ್ಲ. ನಮ್ಮ ಸರಕಾರದಿಂದ ಒಂದು ದಿನದ ಶೋಕಾಚರಣೆಯನ್ನೂ ಮಾಡಿದೆವು. ಆದರೆ, ಬ್ರಿಟನ್ ರಾಣಿಯ ಸಾವಿಗೆ ಕೊರಗುವಷ್ಟು, ಗೌರವ ಕೊಡುವಷ್ಟು ಅವರಿಂದ ನಮ್ಮ ದೇಶಕ್ಕೆ, ಜನರಿಗೆ ಒಳ್ಳೆಯ ದೇನಾಗಿಲ್ಲ.
ಆಗಿದ್ದರೆ, ಅದು ಪ್ರಜಾಪ್ರಭುತ್ವ ಒಂದೇ. ಅದೂ ಬಿಟ್ಟಿಯಾಗಿ ಬಂದಿದ್ದೇನಲ್ಲ. ಎಲ್ಲೋ ಒಂದು ಕಡೆ ಮೋಘಲರ ಅಟ್ಟಹಾಸ ಶುರುವಗುವ ಸಮಯಕ್ಕೇ ಬಂದಿದ್ರಿಂದ ಹಿಂದೂಗಳಿಗೂ ನಿರುಮ್ಮಳ ಭಾವ ಉಂಟಾಗಿರಬಹುದಷ್ಟೇ. ಆದರೂ ಇವರಲ್ಲಿದ್ದುದ್ದು ಬೇರೆಯದೇ ರೀತಿಯ ಅಟ್ಟಹಾಸ ಬಿಡಿ!
ಬರೀ ಇವರ ಅಽಕಾರ, ಧನ ದಾಹಕ್ಕೆ ಭಾರತೀಯರಷ್ಟೇ ಅಲ್ಲ ಪ್ರಪಂಚದ 56 ರಾಷ್ಟ್ರಗಳು. ಅದನ್ನೆಲ್ಲ ಸೇರಿಸಿ ಕಾಮನ್‌ವೆಲ್ತ್
ಅನ್ನುವ ಒಂದು ಸಂಘಟನೆಯನ್ನೂ ಮಾಡಿದರು ಬಿಡಿ. ಅದರಿಂದ ಕ್ರೀಡಾಕೂಟ, ಆಗಾಗ ಮೀಟಿಂಗುಗಳು ಮತ್ತು ಕೆಲವೊಂದಿಷ್ಟು(?) ಕೆಲಸಗಳನ್ನು ಬಿಟ್ಟರೆ ಹೇಳುವಂಥದ್ದೇನೂ ಮಾಡಿಲ್ಲ. ಆದರೆ, ಇಷ್ಟೆಲ್ಲ ಕ್ರೌರ್ಯದ ಕರಾಳ ಚರಿತ್ರೆಯನ್ನು
ಹೊಂದಿದ ಬ್ರಿಟಿಷರು ಮತ್ತವರ ರಾಣಿ ಯಾವುದಾದರೂ ದೇಶಕ್ಕೆ ಕ್ಷಮಾಪಣೆ ಕೇಳಿದರಾ? ಊಹೂಂ ಏನೂ ಇಲ್ಲ. ಅದರ ನಾಯಕರೋ, ಪ್ರಧಾನ ಮಂತ್ರಿಯೋ ಪರಿಹಾರ ಅನ್ನುವ ಮಾತು, ಎಲ್ಲೂ ಇಲ್ಲ! ಬ್ರಿಟಿಷರು ಕ್ಷಮೆಯಾಚಿಸಲಿ, ಪರಿಹಾರ ನೀಡಲಿ ಎಂದು ಎಷ್ಟೋ ಬಾರಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆ ಯಾದರೂ, ಯಾವ ಬ್ರಿಟಿಷನೂ ಇದಕ್ಕೆ ಸೊಪ್ಪು ಹಾಕಲಿಲ್ಲ. ಅದಕ್ಕಿಂತ ಅವರಿನ್ನೂ ಅದೇ ವಸಾಹತುಶಾಹಿ ಮಾನಸಿಕತೆಯಲ್ಲೇ ತಾವು ಮಾಡಿದ್ದನ್ನೂ ‘ಗ್ರೇಟ್’ ಅನ್ನುವ ಭಾವನೆಯಲ್ಲೇ ಇದ್ದಾರೆ!
ಅದನ್ನೆಲ್ಲ ಬಿಡಿ ತುಂಬಾ ಹಳೇದು ಈ ‘ಹರ್ ಮೆಜೆಸ್ಟಿ ಕ್ವೀನ್ ಎಲಿಜಾಬತ್’ ಗದ್ದುಗೆ ಏರಿದ ಮೇಲೆ ಅಂಥದ್ದೇನೂ ವಸಾಹತು ಶಾಹಿ ದೋರಣೆತೋರಿಲ್ಲ ಎಂದಂತೇನಿಲ್ಲ. ಅವಳು ಬಂದಮೇಲೂ ಕೀನ್ಯಾದ ಮೌ ಮೌ ಹೋರಾಟಗಾರರನ್ನು concentration camps ಗಳಲ್ಲಿ ತುಂಬಿಸಿ ಅವರಿಗೆ ನರಕ ಯಾತನೆ ಕೊಟ್ಟಿದ್ದು. ಮಲೇಸಿಯಾದ ಬಟಂಗ್ ಕಾಲಿಯಲ್ಲಿ ಜನರನ್ನು ಕೊಂದಿದ್ದು ವಳಿಗೆ ಗೊತ್ತಿರದೇ ಆಗಿರುತ್ತಾ? ಅದಕ್ಕಾದರು ಕ್ಷಮೆ!
ಅಲ್ಲ ನಮ್ಮನ್ನೆಲ್ಲ ಹಾಳುಗೆಡವಿದ ಇವರಿಗೆ ನಾವ್ಯಾಕೆ ಮರುಗಬೇಕು? ಶೋಕಾಚರಣೆ ಆಚರಿಸಬೇಕು? ಹಾಗೆಂದು ಸಂತೋಷ ಪಡಬೇಕೆಂದೇನೂ ಅಲ್ಲ. ಅಂಥ ವಿಕೃತಿ ನಮ್ಮಲ್ಲಿಲ್ಲ. ಆ ಬ್ರಿಟನ್‌ನ ರಾಜ-ರಾಣಿಯರು ಕುಳಿತುಕೊಳ್ಳುವ ಸಿಂಹಾಸನ ಕಣ್ಣಿಗೆ ಶುಭ್ರವಾಗಿ ಕಾಣಬಹುದು, ಆದರೆ ಅದಕ್ಕೆ ಕೋಟ್ಯಂತರ ಜನರ ರಕ್ತದ ಹಸಿ ಇನ್ನೂ ಮೆತ್ತಿದೆ. ಬ್ರಿಟನ್‌ನಲ್ಲಿ ಒಳ್ಳೆಯ ರಸ್ತೆ, ಅರಮನೆ, ಕಟ್ಟಡಗಳು ಕಾಣಬಹುದು, ಅದು ಎಷ್ಟೋ ಕೋಟಿ ಜನರ ನೆತ್ತರು, ಎಲುಬುಗಳ ಮೇಲೆಯೇ ರಾರಾಜಿಸುತಿವೆ. ಅದಕ್ಕೇ ಸಂಸದ ಶಶಿ ತರೂರ್ ಒಂದು ಭಾಷಣದಲ್ಲಿ ಹೇಳುತ್ತಾರೆ.
‘ಬ್ರಿಟನ್ ಅನ್ನು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಯುತ್ತಾರೆ. ಏಕೆಂದರೆ, ಕತ್ತಲಲ್ಲಿ ದೇವರೂ ಬ್ರಿಟಿಷರನ್ನು
ನಂಬುತ್ತಿರಲಿಲಲ್ಲ!’ ಇಂಥದ್ದೇ ಕೃತ್ಯಕ್ಕೆ ಅಣಿಯಾದ ದಕ್ಷಿಣ ಆಫ್ರಿಕದ ಕೆಲವೊಂದಿಷ್ಟು ನಾಯಕರು ಎಲಿಜಬೆತ್ ಸಾವಿಗೆ
‘ತನ್ನ ಕರಾಳ ಅಧಿಪತ್ಯದಿಂದ ಪ್ರಪಂಚದ ಕೋಟ್ಯಂತರ ಜನರಿಗೆ ಅಮಾನವೀಯತೆಯಿಂದ ನಿರ್ಮಿಸಲ್ಪಟ್ಟ ಸಂಸ್ಥೆಯ ಮುಖ್ಯಸ್ಥೆ’ ಎಂದೂ ಹೇಳಿದರು. ಆದರೆ ಭಾರತೀಯರು ಯಾರ ಸಾವನ್ನೂ ಸಂಭ್ರಮಿಸಿದವರಲ್ಲ, ರಾವಣನನ್ನು ಪ್ರಭು ಶ್ರೀರಾಮ ಕೊಂದಾಗ ಅವನಿಗೆ ಸಕಲ ಗೌರವ, ಮರ್ಯಾದೆಯನ್ನೂ ಕೊಟ್ಟು ಅಂತ್ಯಕ್ರಿಯೆ ಮುಗಿಸಿದವರು ನಾವು. ಇಲ್ಲಿ
ಭಾರತೀಯರೂ ಕೂಡ ಸಾವನ್ನು ಸಂಭ್ರಮಿಸುವುದಲ್ಲ, ಆದರೆ ಅವರಿಂದ ಆದ ಕ್ರೌರ್ಯವನ್ನು ಮರೆಯಲಾಗದು, ಅವರನ್ನು
ನಮ್ಮದೇ ರಾಣಿ ಎಂದುಕೊಳ್ಳುವುದು ಸಲ್ಲ.