ಅಭಿಮತ
ನಿತ್ಯಾನಂದ ಹೆಗಡೆ, ಮೂರೂರು
ನಮಗೋ ನಮ್ಮಂಥವರಿಗೋ ಕಾಡದ ಒಂದು ವಿಚಾರ, ಅದು ಹಾಗೆ ಕಾಡಿದವರಿಗೆ ಹೇಗೆ ಅನ್ನಿಸೀತು! ನಮ್ಮ ಮನೆಯ ಬಾಜುವಿನಲ್ಲಿ ಒಬ್ಬರು ಸಿವಿಲ್ ವಕೀಲರು ಇದ್ದಾರೆ. ನಮ್ಮದು ತೀರಾ ಹಳ್ಳಿಯಲ್ಲಿಯೂ ದುರ್ಗಮ ದಾರಿಯಿಂದ ಕೂಡಿರುವ ದಟ್ಟಡವಿಯ ಹಳ್ಳಿ. ಇಲ್ಲಿಗೆ ಆ ವಕೀಲರನ್ನು ಹುಡುಕಿ ಕೊಂಡು ‘ಕುಟ್ಟಪ್ಪಿ’ ಅನ್ನುವ ಅಮಾಯಕ ನಡೆದುಕೊಂಡು, ಅದೂ ಅಜಮಾಸು ಮೂರು ಕಿ.ಮೀ. ದೂರದಿಂದ ಬರುತ್ತಾನೆ.
ನಿರಂತರ ಕಳೆದ ಐದು ವರ್ಷಗಳಿಂದ ನನ್ನ ಮನೆಯ ಕೆಳರಸ್ತೆಯಲ್ಲಿ ಹಾದು ವಕೀಲರ ಮನೆಗೆ ನಡೆದೇ ಹೋಗಿಬರುತ್ತಾನೆ. ಅವನಲ್ಲಿ ಯಾವ ದ್ವಿಚಕ್ರ ವಾಹನವೂ ಇಲ್ಲ. ಬಡವ, ಅಮಾಯಕ. ನನ್ನ ಮನೆಯಿಂದ ಮುಖ್ಯರಸ್ತೆಗೆ ಅರ್ಧ ಕಿ.ಮೀ. ಅತ್ಯಂತ ಕಳಪೆಯಾಗಿರುವ ಕಲ್ಲು-ಮಣ್ಣಿನ ರಸ್ತೆ ಬೇರೆ. ಹೀಗಿರುತ್ತಿರಲಾಗಿ ಒಂದು ದಿನ ಕುಟ್ಟಪ್ಪಿಯಲ್ಲಿ, ‘ಹಠಬಿಡದ ತ್ರಿವಿಕ್ರಮನ ಹಿಂದೆ ಬರುವ ಬೇತಾಳನಂತೆ ನಿರಂತರ ಅದೆಷ್ಟೋ ಕಾಲದಿಂದ ವಕೀಲರ ಮನೆಗೆ ತಿರುಗ್ತೀ, ಏನು ಕಥೆ?’ ಎಂದು ಕೇಳಿದೆ.
ಅವನಿಗೂ ಅಂದು ಪುರಸೊತ್ತು ಇತ್ತು, ಏಕೆಂದರೆ ಅನ್ಯ ಕಾರ್ಯದ ನಿಮಿತ್ತವಾಗಿ ವಕೀಲರು ಮನೆಗೆ ಬಂದಿರಲಿಲ್ಲ. ಕುಟ್ಟಪ್ಪಿ ಹೇಳಿದ: ‘ಥೋ ನನ್ನ ದೊಂದು ಮೂರು ಗುಂಟೆ ಹಿತ್ತಲಿನ ಸಣ್ಣ ವ್ಯಾಜ್ಯ ತೆಳತ್ತ… (ತಿಳಿಯಿತಾ?) ನಾನು ನನ್ನ ಮೂರು ಜನ ಅಣ್ಣಂದಿರದ್ದು ತೆಳತ್ತ… ನಾಕು ಜನರಲ್ಲಿ ನಾನು ಮನೇಲಿ ಇಪ್ಪಂವ ತೆಳತ್ತ… ಉಳಿದ ಮೂರು ಜನ ದೊಡ್ಡ ಪಗಾರು ತೆಕಂವೂ ನೌಕರಿಯವು. ಮತ್ತೆ ಅವೆಲ್ಲಾ ಬೆಂಗಳೂರು, ಮೈಸೂರು, ಯಲ್ಲಾ ಹೊರದೇಶದಲ್ಲೇ ಇರ್ತ ತೆಳತ್ತ… ಇದ್ದ ಮೂರು ಗುಂಟೆ ಹಿತ್ಲಲ್ಲಿ ಸರೀ ಪಾಲು ಬೇಕು ಅಂಬ.
ಅದು ಹೇಂಗೆ ಪಾಲು ಮಾಡೂದು. ಒಂದು ಮನಷಂಗೆ ಮುಕ್ಕಾಲು ಗುಂಟೆ ಬತ್ತು ತೆಳತ್ತ… ’ ಹೀಗೆ ತನ್ನ ‘ತೆಳತ್ತ’ ಶೈಲಿಯಲ್ಲಿ ಹೇಳುತ್ತಾ ಹೋದ. ‘ಆತು, ಅದು ಯಾಕೆ ಬಗೆಹರಿಯಲಿಲ್ಲ?’ ಅಂದೆ. ಅದಕ್ಕವ, ‘ಈ ವ್ಯಾಜ್ಯ ಹಾಯ್ಕ ಕೂತಿಯ ತೆಳತ್ತ… ಮೂರು ಗುಂಟೆನೂ ಮನೆಗೆ ತಾಗಿ ಹಾಳಬಿದ್ಕಂಡಿದ್ದು ತೆಳತ್ತ… ಹೊಟ್ಟೆಲುರೀ ಬೀಳ್ತು… ಅರ್ಧ ಗುಂಟೆ ಕೊಟ್ರೂ ನನಗೆ ಸಾಕು, ಉಳದವ್ವು ನನ್ನ ಕೋರ್ಟಿಗೆ ತಿರಗ್ಸತ ತೆಳತ್ತ…’ ಅಂದ. ಆ ಕ್ಷಣಕ್ಕೆ ನನಗೆ ಕಂಡದ್ದು ಒಂದು ವಿಚಾರ. ಆದರೂ ಇಷ್ಟು ಸಣ್ಣ ವಿಚಾರವನ್ನು ಪರಿಹರಿಸಲು ಕೋರ್ಟಿಗೆ ಐದಾರು ವರ್ಷ ಆದರೂ ಸಾಕಾಗಿಲ್ಲವೇ? ಅನಿಸಿತು.
ಹಾಗೆಯೇ ಕುಟ್ಟಪ್ಪಿಗೆ ಹೇಳಿದೆ: ‘ನಿನಗೆ ಒಂದು ಕುಮಟಾ ತಿರುಗಾಟ ಅಷ್ಟೇ ಅಲ್ದನಾ, ನಿನ್ನ ಬಾಕಿ ಕೆಲಸಾ ಆಗಲೇ ಮುಗಿಸಿಬಿಡು ಆಗದಾ, ತೊಂದರೆ ಯೇನು?’ ಅಂದೆ. ಅದಕ್ಕೆ ಕುಟ್ಟಪ್ಪಿ ಅಂದ ಮಾತು ತುಂಬಾ ವಿಚಾರಕ್ಕೆ ಹಚ್ಚಿತು. “ಅದು ಹಾಂಗಾಗ್ತಿಲ್ಯ ನಿತ್ಯಾನಂದಣ್ಣ! ಕೇಸು ಇದ್ದ ದಿನ ನಾವು ಪ್ರತಿಸಲ ವಕೀಲಂಗೆ ಒಂದು ಸಾವಿರ ರೂಪಾಯಿ ಕೊಡಬೇಕು ಮತ್ತು ಜಡ್ಜರು ಕರೆದ ಸಮಯದಲ್ಲಿ (ಅದಕ್ಕೆ ಸಮಯ ನಿಗದಿ ಇಲ್ಲ) ಇರಬೇಕು.
ಇಲ್ಲದಿದ್ದರೆ, ‘ಕೇಸನ್ನು ಮುಂದೆ ಹಾಕಲಾಗಿದೆ; ಮುಂದಿನ ದಿನಾಂಕ ನಿಗದಿ ಮಾಡಿದ ಕೂಡಲೇ ಹೊರಹೋಗುವುದು ಮತ್ತು ಮುಂದಿನ ದಿನಾಂಕ ಇರುವಾಗ ತಪ್ಪದೇ ಬರುವುದು.
ಇಲ್ಲವಾದರೆ ‘ಎಕ್ಸ್ ಪಾರ್ಟಿ’ಯ ತೀರ್ಮಾನ ಒಪ್ಪತಕ್ಕದ್ದು’ ಹೇಳಿರ್ತು ತೆಳತ್ತ… ಅಣ್ಣಂದಿಕ್ಕ ದೂರಿಂದ ಬೇಕೂ ಹೇಳೇ ಬತ್ವಿಲ್ಲೆ, ಮತ್ತೆ ನಾನೊಬ್ಬ ಹೋದಾಕ್ಷಣ ತೀರ್ಮಾನ ಆಗತಿಲ್ಲೆ ತೆಳತ್ತ… ಆದರೆ ಪ್ರತೀ ವಾಯ್ದೆಗೆ ಅಣ್ಣಂದಿಕ್ಕ ಸಕಾರಣ ಕೊಡತ ನನಗೆ ವಕೀಲಂಗೆ ಒಂದು ಸಾವಿರ ತೆರೂದೇಯ” ಎಂದ ಕುಟ್ಟಪ್ಪಿ. ನನಗೆ, ‘ಛೇ, ಇದೆಂಥ ನ್ಯಾಯ?’ ಅನ್ನಿಸಿತು.
ಮೊದಲಾಗಿ, ನ್ಯಾಯಾಲಯದ ವಿಚಾರವಾಗಿ ಹುಟ್ಟಿದ ಪ್ರಶ್ನೆಗಳಿವು: ಒಂದು ದಿನಕ್ಕೆ ಬಗೆಹರಿಸಬೇಕಿದ್ದ ಕೇಸ್‌ಗಳ ಲೆಕ್ಕ, ಅದರ ಅಗಾಧತೆ ಕೋರ್ಟಿಗೆ ತಿಳಿಯದೇ? ಮತ್ತು ಇಂದು ಇಂತಿಷ್ಟು ಕೇಸಿನ ಪರಾಮರ್ಶೆ ಮಾಡಲಾಗುವುದು ಅಂದಮೇಲೆ ಅದನ್ನು ಮಾಡಬೇಕು. ಅದಲ್ಲವಾದರೆ, ಯಾವುದೇ ಕೇಸಿನ
ವಾದಿ-ಪ್ರತಿವಾದಿಗಳು ತಮಗೆ ಅನನುಕೂಲವೆಂದಾದರೆ ಎರಡು ದಿನ ಮುಂಚಿತವಾಗಿ ತಿಳಿಸಬೇಕು. ಆಗ ನ್ಯಾಯಾಲಯ ಇಂಥ ‘ಕುಟ್ಟಪ್ಪಿ’ಗಳಿಗೆ ತಿಳಿವಳಿಕೆ ನೀಡಿ ವೃಥಾ ಅಲೆದಾಟವನ್ನು ತಪ್ಪಿಸಬೇಕು.
ಒಂದು ಕೇಸನ್ನು ಸಕಾರಣವಾಗಿ ಮುಂದೂಡಿದರೆ ವಕೀಲರಿಗೆ ಕೊಡಬೇಕಾದ ಹಣಕ್ಕೆ ವಿನಾಯಿತಿ ನೀಡಬೇಕು. ಏಕೆಂದರೆ ವಕೀಲರು ದಿನವೂ ಕೋರ್ಟಿ ನಲ್ಲಿ ಸಹಿ ಮಾಡಿರಬೇಕು. ಅದಕ್ಕಾಗಿ ಅವರಿಗೆ ಈ ಅಮಾಯಕ ಸಾವಿರ ರುಪಾಯಿ ತೆರುವುದೇಕೆ? ನ್ಯಾಯಾಧೀಶರು ಸಣ್ಣಪುಟ್ಟ ಕೇಸುಗಳನ್ನು ಯಾವ ದಿನವೇ ನಿಗದಿಪಡಿಸಲಿ, ಅದು ಅವರು ಲೆಕ್ಕ ಹಾಕಿಯೇ ನಿರ್ಣಯಿಸಿದ ಮೇಲೆ ಅಕಸ್ಮಾತ್ ಒಬ್ಬ ವಾದಿಯೋ ಪ್ರತಿವಾದಿಯೋ ತನಗೆ ತೊಂದರೆಯಾಗಿ ಬರಲಾಗದಾದರೆ, ಅದರ ದಂಡವನ್ನು ವಕೀಲರಿಗೇಕೆ ಹಾಕಬಾರದು? ಅದು ಅವರ ವೈಯಕ್ತಿಕ ವಿಷಯ.
ಒಮ್ಮೆ ಕೇಸಿನ ಫಿರ್ಯಾದುದಾರ ತನ್ನ ತೊಂದರೆಯಿಂದಾಗಿ ಬಾರದಾದರೆ, ‘ಎಕ್ಸ್ ಪಾರ್ಟಿ’ ತೀರ್ಮಾನ ಮಾಡಲಾಗುವುದಾ? ಹಾಗಾದರೆ ವಕೀಲನ ವೈಯಕ್ತಿಕ ತೊಂದರೆಗೆ ಹೊಣೆ ಯಾರು? ಈಗೀಗ ಈ ಕೇಸ್‌ಗಳನ್ನು ಅನಗತ್ಯವಾಗಿ ಮುಂದೂಡುವುದು, ಬಂದ ಹಣವನ್ನು ಎಲ್ಲಾ ಹಂಚಿಕೊಳ್ಳುವುದು ಪರಿಪಾಠವಾಗಿ, ಅಮಾಯಕ ಫಿರ್ಯಾದುದಾರರೆಲ್ಲರಿಗೂ ಸಾವಿರದಂತೆ ಕುಟ್ಟಪ್ಪಿಯ ಕುಟುಂಬದ ನಾಲ್ಕು ಸಾವಿರ ಅನಾಯಾಸವಾಗಿ ಹಂಚಿಕೆ ಯಾಗುತ್ತ ದಂತ ಒಂದು ಸುದ್ದಿ ಇದೆ. ಇದು ಕೇವಲ ಗಾಳಿ ಸುದ್ದಿಯಾದರೂ, ಬೆಂಕಿಯಿಲ್ಲದೆ ಹೊಗೆಯಾಡದು ಎಂಬ ‘ಧೂಮವಹ್ನಿ’ ನ್ಯಾಯವನ್ನು ತೋರಿಸದಾ? ಇಷ್ಟು ಮಾತ್ರವೇ ಅಲ್ಲ. ಕುಟ್ಟಪ್ಪಿಯು ಪದೇ ಪದೆ ತಿರುಗಿ ಸವೆದ ಚಪ್ಪಲಿ, ಅವನ ಇಡೀ ಮೈ ಬೆವರಿ ಅಂಟಿಕೊಂಡ ತೊಪ್ಪೆಯ ಅಂಗಿ, ಹಣವಿಲ್ಲದ ಅವನ ಪರದಾಟ, ಅವನ ಅಸಹಾಯಕತೆ ಇವೆಲ್ಲವನ್ನೂ ಕಂಡಾಗ ಮನಸ್ಸಿಗೆ ಬೇಸರವಾಗುತ್ತದೆ.
ಮಹಾಮಹಾ ವಂಚಕ ಕೋಟ್ಯಧಿಪತಿಗಳು ಜಾಮೀನಿನ ಮೇಲೆ ಹೊರಬಂದು ಮತ್ತೆಂದೂ ಶಿಕ್ಷೆ ಅನುಭವಿಸ ದಂತೆ ರಾಜಕೀಯ ಒತ್ತಡ ಹಾಕಿಸಿ ಬಚಾವಾಗುವುದಾದರೆ, ಕುಟ್ಟಪ್ಪಿಯಂಥವರಿಗೆ ನ್ಯಾಯ ನಿಜಕ್ಕೂ ದೊರೆಯುವುದೇ? ಎಂಬ ಅನುಮಾನವೂ ಹುಟ್ಟುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)