Friday, 13th December 2024

ಸ್ವಾತಂತ್ರ‍್ಯದ ಅಮೃತಧಾರೆಯಲಿ ಕ್ವಿಟ್‌ ಇಂಡಿಯಾದ ನೆನಪು

ಅಭಿಪ್ರಾಯ

ಅನೀಶ್ ಬಿ.ಕೊಪ್ಪ

ಭಾರತಾಂಬೆಯು ಬ್ರಿಟಿಷರ ಸಂಕೋಲೆಯಿಂದ ಮುಕ್ತಿ ಪಡೆದು, 75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ಧ್ವಜಾರೋಹಣದ ಸಂಭ್ರಮದಲ್ಲಿದ್ದಾಳೆ.
ಬಂಧನದಲ್ಲಿ ರುವವನು ಸ್ವಾತಂತ್ರ್ಯದ ಮಹತ್ವ ಅರಿಯಬಲ್ಲ, ಬಂಧನ ಮುಕ್ತವಾಗಲು ಯೋಚಿಸಬಲ್ಲ.

ಅಂತೆಯೇ ತಮ್ಮದೇ ತಾಯ್ನಾಡಿನಲ್ಲಿ ಪರಕೀಯರ ಆಡಳಿತದ ಸಂಕೋಲೆಯಲ್ಲಿ ಸಿಲುಕಿದ್ದ ಭಾರತೀಯರಿಗೆ ಸ್ವಾತಂತ್ರ್ಯವನ್ನು ಪಡೆಯಲೇಬೇಕೆಂಬ ಛಲವು ಸ್ವಾತಂತ್ರ್ಯಕ್ಕಾಗಿ ಅನೇಕ ದಾರಿಗಳ ಯೋಚನೆಗೆ ಇಂಬು ತುಂಬಿತು. ಮಂದಗಾಮಿ, ತೀವ್ರಗಾಮಿ ಮತ್ತು ಕ್ರಾಂತಿಕಾರಿಗಳ ನಾನಾ ರೀತಿಯ ಹೋರಾಟಗಳ ಫಲಿತ ವೆಂಬಂತೆ, 1947 ರ ಆಗ 15 ರಂದು ಸ್ವಾತಂತ್ರ್ಯದ ನಗುವನ್ನು ಬೀರುವಂತಾಯಿತು. ಇಂತಹ ಹೋರಾಟದ ದಿಟ್ಟ ಹೆಜ್ಜೆಗಳಲ್ಲಿ ಪ್ರಮುಖವಾದುದು 1942ರ ಆಗ 8 ರಂದು ಗಾಂಧೀಜಿಯವರು ಕರೆಕೊಟ್ಟ ಕ್ವಿಟ್ ಇಂಡಿಯಾ ಚಳವಳಿ.

ಭಾರತಾಂಬೆಯನ್ನು ಅನ್ಯರ ಕಪಿಮುಷ್ಠಿಯಿಂದ ಬಿಡಿಸುವ ಧ್ಯೇಯವನ್ನಿಟ್ಟುಕೊಂಡು, ಸ್ವಾತಂತ್ರ್ಯ ಹೋರಾಟದ ಹಾದಿಗೆ ಹೊಸ ತಿರುವನ್ನು ನೀಡಿದ ಕ್ವಿಟ್ ಇಂಡಿಯಾ ಚಳವಳಿಯನ್ನು 79 ವರ್ಷಗಳ ಹಿಂದೆ ಗಾಂಧೀಜಿಯವರು ಮತ್ತವರ ೫೦ ಮಂದಿ ಬೆಂಬಲಿಗರೊಡನೆ ಮುಂಬಯಿಯಲ್ಲಿ ಪ್ರಾರಂಭಿಸಿದರು. ಬಾಂಬೆ ಅಧಿವೇಶನದಿಂದ ಪ್ರಾರಂಭಗೊಂಡ ಆಗ ಕ್ರಾಂತಿ ಚಳವಳಿ’, ಭಾರತ ಬಿಟ್ಟು ತೊಲಗಿ’ ಎಂದೂ ಕರೆಯಲ್ಪಡುವ ಈ ಚಳವಳಿಯ ನೇತಾರ ಮಹಾತ್ಮಾ ಗಾಂಧೀಯವರ ಕರೆಯಂತೆ, 1942 ರ ಆಗ 9ರಂದು ಮುಂಬೈಯ ಗೊವಾಳಿಯ ಮೈದಾನ (ಇಂದು ಈ ಮೈದಾನವನ್ನು ಆಗ ಕ್ರಾಂತಿ ಮೈದಾನವೆಂದು ಕರೆಯುತ್ತಾರೆ)ದಲ್ಲಿ ಮಾಡು ಇಲ್ಲವೆ ಮಡಿ’ ಘೋಷಣೆಯೊಂದಿಗೆ ಪ್ರಾರಂಭಗೊಂಡಿತು.

ಮಹಾತ್ಮ ಗಾಂಧೀಯವರ ನೇತೃತ್ವದಲ್ಲಿ ಭಾರತದಾದ್ಯಂತ ಜನರು ಒಗ್ಗೂಡಿ, ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆಯನ್ನು ತೀವ್ರವಾಗಿ ಖಂಡಿಸುವ ಮೂಲಕ ಆಂಗ್ಲರ ಸಂಕೋಲೆಯಿಂದ ಭಾರತಾಂಬೆಯನ್ನು ಬಿಡಿಸಿಕೊಳ್ಳುವುದೇ ಈ ಚಳವಳಿಯ ಏಕಮಾತ್ರ ಗುರಿಯಾಗಿತ್ತೇ ಹೊರತು, ಮತ್ತೇನಲ್ಲ. 1942ರ ಮಾರ್ಚ್ ನ ಅಂತ್ಯದಲ್ಲಿ ಬ್ರಿಟಿಷ್ ಸರಕಾರವು ಎರಡನೇ ವಿಶ್ವಸಮರ (ಮಹಾಯುದ್ಧ)ದಲ್ಲಿ ಭಾರತೀಯರ ಬೆಂಬಲ ಮತ್ತು ಸಹಕಾರವನ್ನು ಭದ್ರಪಡಿಸಿಕೊಳ್ಳಲು ಹೊಸ ರೂಪದ ಪ್ರಯತ್ನವೊಂದನ್ನು ಮಾಡಿತು.

ಸರ್. ಸ್ಟ್ಯಾಫೋರ್ಡ್ ಕ್ರಿರವರ ನಾಯಕತ್ವದಲ್ಲಿ ಕ್ರಿ ಆಯೋಗ’ವನ್ನು ಭಾರತಕ್ಕೆ ಕಳುಹಿಸಿತು. ಈ ಆಯೋಗದ ಪ್ರಯತ್ನದಂತೆ, ದ್ವಿತೀಯ ಮಹಾಯುದ್ಧದಲ್ಲಿ ಭಾರತದ ಪ್ರವೇಶದ ಕುರಿತು ಭಾರತೀಯರಲ್ಲಿಯೇ ವಿಭಿನ್ನ ನಿಲುವುಗಳು ಮೂಡತೊಡಗಿದವು. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧೀಜಿಯವರು ನೈತಿಕವಾಗಿ ಯುದ್ಧಕ್ಕೆ ಒಪ್ಪಿಗೆಯನ್ನು ನೀಡದೆಯೇ, ಯುದ್ಧದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿದರು. ಕ್ರಿನೊಂದಿಗಿನ ಮಾತುಕತೆ ಮುಗಿಯುವ ಹಂತದಲ್ಲಿರುವಾಗ ರಾಷ್ಟ್ರೀಯ ನಾಯಕತ್ವವು ಯುದ್ಧಕ್ಕೆ ಬೆಂಬಲ ನೀಡುವ ಬದಲಿಗೆ ತಕ್ಷಣದ ಸ್ವಯಂ ಸರಕಾರ ರಚನೆಯ ಬೇಡಿಕೆಯನ್ನಿಟ್ಟರು.

ಇದಕ್ಕೆ ಬ್ರಿಟಿಷರ ಪ್ರತಿಕ್ರಿಯೆ ಶೂನ್ಯವಾಗಿತ್ತು. ಆಗ ಗಾಂಧೀಜಿಯವರ ಮುಂದಾಳತ್ವದ ಕ್ವಿಟ್ ಇಂಡಿಯಾ’ ಚಳುವಳಿಯ ಯೋಚನೆ ಯೋಜನೆಗಳು ಗರಿಗೆದರಿ ದವು. ಚಳವಳಿ ಶುರುವಾದ ಕೆಲವೇ ಗಂಟೆಗಳಲ್ಲಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ, ಅಬ್ದುಲ್ ಕಲಾಂ ಆಜಾದ್ ಮತ್ತು ಮಹಾತ್ಮ ಗಾಂಧಿ ಸೇರಿದಂತೆ ಅನೇಕ ಮುಖಂಡರನ್ನು ದೇಶದ್ರೋಹವೆಂಬ ಕಾರಣದಿಂದಾಗಿ ಜೈಲಿಗೆ ತಳ್ಳಲಾಯಿತು. ಗಾಂಧೀಜಿಯವರನ್ನು ಬಂಧಿಸಿ, ಅಗಾಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿಡಲಾಗಿತ್ತು.

ಗಾಂಧೀಜಿ ಸೇರಿದಂತೆ ಹಲವು ನಾಯಕರು ಬಂಧನಕ್ಕೊಳಗಾದ ಬಳಿಕ ಲೋಹಿಯಾ, ಅರುಣಾ ಆಸಿಫ್ ಅಲಿ ಹಾಗೂ ಜೆ.ಪಿ. ನಾರಾಯಣ್ ರವರು ಚಳವಳಿ ಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚಳವಳಿಯ ತೀಕ್ಷ್ಣತೆಯನ್ನು ಸೂಕ್ಷ್ಮವಾಗಿ ಅರಿತ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಸೆರೆಮನೆಗೆ ಹಾಕಿದುದರ ಕಾರಣ, ನಾಯಕರಿಲ್ಲದೆಯೇ ನಡೆದ ಚಳವಳಿಯು ಇಡೀ ದೇಶಾದ್ಯಂತ ತೀವ್ರ ಸ್ವರೂಪವನ್ನು ಪಡೆದಿದ್ದು ಈ ಚಳವಳಿಯ ಹೆಗ್ಗಳಿಕೆಯೇ ಸರಿ.

ಆರಂಭದಲ್ಲಿ ಶಾಂತಚಿತ್ತದಿಂದ  ಸಾಗುತ್ತಿದ್ದ ಪ್ರತಿಭಟನೆ, ಸ್ವಾತಂತ್ರ್ಯ ಹೋರಾಟಗಾರರ ಮನೆಗಳ ಮೇಲಿನ ಮತ್ತು ಐ.ಎನ್.ಸಿ ಕಚೇರಿಗಳ ಮೇಲೆ ನಡೆಸಲಾದ ದಾಳಿಗಳಿಂದ ಹಾಗೂ ಅನೇಕ ನಾಯಕರು ಮತ್ತು ಹೋರಾಟಗಾರರನ್ನು ಜೈಲಿಗಟ್ಟಿದಾಗ, ದೇಶದ ಜನರೆ ಒಂದಾಗಿ, ಚಳವಳಿಯೂ ಉಗ್ರ ಸ್ವರೂಪವನ್ನು
ತಾಳಿತು. ಆ ಸಮಯದಲ್ಲಿ ಬ್ರಿಟಿಷ್ ಸರಕಾರದ ಯಾವ ಎಚ್ಚರಿಕೆಗಳಿಗೂ ಜಗ್ಗದೆಯೇ, ನಿಂದನೆಗಳಿಗೆ ಕುಗ್ಗದೆಯೇ ಅರುಣಾ ಅಸಫ್ ಅಲಿ ರವರು ಬಾಂಬೆಯಲ್ಲಿ ನಡೆದ ಕಾಂಗ್ರೆಸ್ ಅಽವೇಶನದ ಅಧ್ಯಕ್ಷತೆ ವಹಿಸಿದ್ದರು.

ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ನೆರೆದಿದ್ದ ಜನಸಮೂಹ ಮತ್ತು ಅರುಣಾ ಅಸಫ್ ಅಲಿ ರಾಷ್ಟ್ರಧ್ವಜವನ್ನು ಹಾರಿಸಿ,ಹೋರಾಟದ ಕಿಚ್ಚಿಗೆ ಇನ್ನಷ್ಟು ಪುಷ್ಠಿ ಕೊಟ್ಟರು. ಕೃಷಿಕರು ಬಹು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಈ ಕ್ವಿಟ್ ಇಂಡಿಯಾ ಚಳವಳಿಯಿಂದಾಗಿ ಇಡೀ ದೇಶದಲ್ಲಿ ಕ್ರಾಂತಿಯ ಅಲೆ ಭುಗಿಲೆದ್ದಿತು. ಬ್ರಿಟಿಷರ ದಬ್ಬಾಳಿಕೆ, ಅಸಹನೀಯ ಆಡಳಿತದಿಂದಾಗಿ ಸಾಮಾನ್ಯ ಜನರಲ್ಲಿನ ದೇಶಭಕ್ತಿಯ ಕಿಚ್ಚು, ರಕ್ತದ ಕಣಕಣದಲ್ಲಿಯೂ ಕುದಿಯಲಾರಂಭಿಸಿತು.
ಗಲ್ಲಿಗಲ್ಲಿಗಳಿಂದ ದಿಲ್ಲಿಯವರೆಗೂ ‘ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆಯು ನಾಗರಿಕರಲ್ಲಿನ ದೇಶಪ್ರೇಮವನ್ನು ಬಡಿದೆಬ್ಬಿಸಿ, ಮಾಡು
ಇಲ್ಲವೇ ಮಡಿ’ ಎಂಬ ಕಿಚ್ಚು ಹಚ್ಚಲು ಕಾರಣವಾಯಿತು.

ನಮ್ಮ ಕರುನಾಡಿನಲ್ಲಿಯೂ ಕೂಡ ಈಸೂರು ಮತ್ತಿತರ ಪ್ರದೇಶಗಳಲ್ಲಿ ಹೋರಾಟವು ಉಗ್ರ ಸ್ವರೂಪವನ್ನು ಪಡೆದುಕೊಂಡಿತು. ಕ್ವಿಟ್ ಇಂಡಿಯಾ ಚಳವಳಿಯ
ಜ್ವಾಲೆಗಳು ಬ್ರಿಟಿಷ್ ಆಡಳಿತದ ಬುಡದಿಂದ ನೆತ್ತಿಯವರೆಗೂ ಹತ್ತಿ, ಉರಿಯಲಾರಂಭಿಸಿತು. ಈ ಕಾವಿನ ಫಲಿತವು, ಐದು ವರ್ಷಗಳ ಬಳಿಕ ಅಂದರೆ 1947ರ ಆಗ 15ರಂದು ಭರತಭೂಮಿಯು ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದು, ಮುಕ್ತವಾಗಿ ಸ್ವಾತಂತ್ರ್ಯ ಆಡಳಿತವನ್ನು ನಡೆಸುವ ಶುಭ ಘಳಿಗೆ ಉದಯಿಸಿತು. ಶಾಂತಿ ಸಂಯಮಕ್ಕೂ ಒಂದು ಇತಿಮಿತಿ ಇರುತ್ತದೆ ಎಂಬುದನ್ನು ಸಾದರಪಡಿಸಿದ ಚಳವಳಿ ಈ ಕ್ವಿಟ್ ಇಂಡಿಯಾ ಚಳವಳಿ ಎಂದರೆ ಅತಿಶಯೋಕ್ತಿ  ಯಾಗ ಲಾರದು.

ಎಳೆಯ ಕುಡಿಗಳಿಂದ ಹಿಡಿದು, ಹಿರಿಯ ಚೇತನಗಳವರೆಗೋ ಒಂದೇ ಭಾವ, ಒಂದೇ ಧ್ಯೇಯದಿಂದ ಒಗ್ಗೂಡಿ, ಬ್ರಿಟಿಷರ ಅಸ್ತಿತ್ವವನ್ನೇ ಅಲುಗಾಡಿಸಲು ಹೊರಟ
ಪ್ರಮುಖ ಹೆಜ್ಜೆಗಳಲ್ಲಿ ಈ ಚಳವಳಿಯೂ ಒಂದಾಗಿದೆ. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಮೊದಲ್ಗೊಂಡು, ಸ್ವಾತಂತ್ರ್ಯದ ಘೋಷಣೆಯಾಗು ವವರೆಗೂ ನಡೆದ ಅನೇಕ ರೀತಿಯ ಹೋರಾಟಗಳಲ್ಲಿ ಕ್ವಿಟ್ ಇಂಡಿಯಾ ಚಳವಳಿಯು ವಿಭಿನ್ನವಾದದ್ದು ಮತ್ತು ವಿಶೇಷವಾದದ್ದು. ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ಕರೆ ಕೊಟ್ಟು 79 ವಸಂತಗಳು ಕಳೆದರೂ, ಅಂದಿನ ಹೋರಾಟದಲ್ಲಿ ದುಡಿದ, ಮಡಿದ ಜೀವಗಳು ಇಂದಿಗೂ ಸದಾ ಪ್ರಾತಃ ಸ್ಮರಣೀಯರು. ಹಲವು ಚಳವಳಿಗಳ ಮೂಲಕ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಂಡು, ದೇಶವನ್ನು ಸಾಧನೆಯ ದಿಗಂತದತ್ತ ಕೊಂಡೊಯ್ಯಬೇಕಾದ ಕನಸನ್ನು ಕಂಡು, ನನಸು ಮಾಡಬೇಕಾದ ಜವಾಬ್ದಾರಿ ಸಮಸ್ತ ಭಾರತೀಯರದಾಗಿದೆ.