ತಿಳಿರುತೋರಣ
srivathsajoshi@yahoo.com
ಅರ್ಥಗಳನ್ನರಸುತ್ತ ಪದಗಳ ಬೆಂಬತ್ತುವುದು ನನ್ನ ಹೊಸ ಹವ್ಯಾಸವೇನಲ್ಲ. ಈ ಹುಚ್ಚು ನನಗೆ ನಿಡುಗಾಲ ದಿಂದಲೂ ಇದೆ. ಬಹಳಷ್ಟು ಸಲ ಅಂತಹ ಹುಡುಕಾಟದಲ್ಲಿ ಅತ್ಯಾಶ್ಚರ್ಯಕರ ನಿಧಿಗಳು ಸಿಕ್ಕಿರುವುದೂ ಇದೆ. ಆದರೆ ಈಗ ನಾನಿಲ್ಲಿ ಪರಿಚಯಿಸಲಿಕ್ಕೆ ಹೊರಟ ಅರ್ಥನಿಧಿ ನನ್ನ ಹುಡುಕಾಟದ
ಫಲವಾಗಿ ಸಿಕ್ಕಿದ್ದಲ್ಲ, ಹಿರಿಯ ಓದುಗಮಿತ್ರರೊಬ್ಬರು ನನಗೆ ಕೊಟ್ಟಿರುವುದು. ಅದೇನೆಂದರೆ, ಸಂಸ್ಕೃತ ಭಾಷೆಯಲ್ಲಿ ‘ವಿಷ’ ಶಬ್ದಕ್ಕೆ ಮಾಮೂಲಿ ಅರ್ಥವಷ್ಟೇ ಅಲ್ಲದೆ ನೀರು ಎಂಬ ಅರ್ಥವೂ ಇರುವುದು! ಖಂಡಿತವಾಗಿಯೂ ನನಗೆ ಈ ವಿಷ(ಯ) ಗೊತ್ತಿರಲಿಲ್ಲ.
ಕಳೆದ ವಾರದ ವಿಷ-ವಿಶೇಷ ಅಂಕಣಬರಹಕ್ಕೆ ಮೈಸೂರಿನಿಂದ ರಾಘವೆಂದ್ರ ಶ್ರೀನಿವಾಸ ಅವರು ಬರೆದಿರುವ ಪ್ರತಿಕ್ರಿಯೆಯಲ್ಲಿಯೇ ಗೊತ್ತಾದದ್ದು. ನೀವೂ ಅದನ್ನೊಮ್ಮೆ ಓದಬೇಕು: ‘ಶ್ರೀವತ್ಸ ಜೋಶಿಯವರ ಗಮನಕ್ಕೆ, ‘ವಿಷ’ಯಾಂತರ ಅಂದುಕೊಳ್ಳಬೇಡಿ. ನಿಮ್ಮ ಇತ್ತೀಚಿನ ಲೇಖನ ಸಂಸ್ಕೃತ ಪದ ವಿಷಕ್ಕೆ ಸಂಬಂಧಿಸಿದ್ದೇ ಇದು ಕೂಡ. ವಿಷ ಎಂಬುದರ ಪ್ರಸಿದ್ಧ ಅರ್ಥ ನಂಜು, ಮಾರಣಾಂತಿಕ ಪರಿಣಾಮ ಬೀರುವಂಥದ್ದು ಎಂದು ನಮಗೆಲ್ಲ ಗೊತ್ತೇ ಇದೆ. ಆದರೆ ವಿಷ ಎಂಬ ಪದಕ್ಕೆ ನೀರು ಎಂಬ ಅಪ್ರಸಿದ್ಧ ಅರ್ಥವೂ ಇದೆ.
ಇದನ್ನು ಅಮರಕೋಶವು ವಾರಿವರ್ಗದಲ್ಲಿ ಸಂಗ್ರಹಿಸಿದೆ. ಶ್ರೀ ವಾದಿರಾಜ ಸ್ವಾಮಿಗಳು ಶ್ರೀ ರುಕ್ಮಿಣೀಶ ವಿಜಯ ಕೃತಿಯ ಒಂದು ಶ್ಲೋಕದಲ್ಲಿ ವಿಷ ಶಬ್ದಕ್ಕೆ
ನೀರು ಎನ್ನುವ ಅರ್ಥವನ್ನು ಬಹಳ ಸೊಗಸಾಗಿ ಬಳಸಿದ್ದಾರೆ. ಶ್ಲೋಕ ಹೀಗಿದೆ: ‘ವಿಷಾಶ್ರಯತ್ವೇನ ಗುಣೇನ ನಾಮ್ನಾ| ದ್ವಯೋ: ಸ ಸಾಮ್ಯೇಧಿಪಿ ಭುಜಂಗಮಂ ತಮ್| ನಿಪೀಡ್ಯ ಭಾಸ್ವತ್ತನಯಾಂ ಜುಗೋಪ| ನ ಕಸ್ಯ ಯೋಷಿತ್ಸು ಹಿ ಪಕ್ಷಪಾತ:||’ ಈ ಪ್ರಸಂಗ ಕೃಷ್ಣನು ಕಾಳಿಂಗ ಸರ್ಪವನ್ನು ಮಣಿಸಿದ ಕಥೆಯಲ್ಲಿ ಬರುತ್ತದೆ.
ಕಾಳಿಂಗ ಸರ್ಪಕ್ಕೆ ಮತ್ತು ಯಮುನಾ ನದಿಗೆ ಮೂರು ಸಾಮ್ಯಗಳಿವೆ. ಹೆಸರಿನ ಸಾಮ್ಯ- ಯಮುನೆಯನ್ನು ಕಾಳಿಂದಿ ಎಂದು ಕೂಡ ಕರೆಯುತ್ತಾರೆ; ಗುಣ ಸಾಮ್ಯ- ಇಬ್ಬರ ಬಣ್ಣವೂ ಕಪ್ಪು. ವಿಷಕ್ಕೆ ಆಶ್ರಯ ನೀಡಿದ್ದಾರೆ ಇಬ್ಬರೂ- ಯಮುನೆ ನೀರಿಗೆ ಮತ್ತು ಸರ್ಪವು ವಿಷಕ್ಕೆ. ಹೀಗಿದ್ದಾಗ್ಯೂ ಕೃಷ್ಣ ಪಕ್ಷಪಾತ ಮಾಡಿದ. ಸರ್ಪವನ್ನು ತುಳಿದು ಮರ್ದಿಸಿದ; ಸೂರ್ಯಪುತ್ರಿ ಯಮುನೆಯನ್ನು ಕಾಪಾಡಿದ. ಲೋಕದಲ್ಲಿಯೂ ಅಷ್ಟೇ. ಜನ ಸ್ತ್ರೀಯರ ಪರವಾಗಿಯೇ ಇರುತ್ತಾರೆ! ಇದು ಶ್ಲೋಕ ಕೊಟ್ಟ ಅರ್ಥಾಂತರ ನ್ಯಾಸ. ವಂದನೆಗಳು, ಹರೇ ಶ್ರೀನಿವಾಸ. ರಾಘವೇಂದ್ರ ಮೈಸೂರು.’
ಎಷ್ಟು ಸ್ವಾರಸ್ಯಕರ ಮಾಹಿತಿ! ಬರೀ ಅರ್ಥವನ್ನಷ್ಟೇ ಅಲ್ಲ, ಯಾವ ಸಂದರ್ಭದಲ್ಲಿ ಬಳಕೆಯಾಗಿದೆ ಎಂಬುದನ್ನೂ ಆಕರ ಸಹಿತ ತಿಳಿಸಿದ್ದಾರೆ! ರಾಘವೇಂದ್ರ ಶ್ರೀನಿವಾಸರ ಬಗ್ಗೆ ಒಂದೆರಡು ಮಾತುಗಳನ್ನಿಲ್ಲಿ ಹೇಳಲೇಬೇಕು. ಅವರು ತಿಳಿರುತೋರಣ ಅಂಕಣವನ್ನು ನಿಯತವಾಗಿ ಓದುತ್ತಾರಂತೆ. ಎರಡು ವರ್ಷಗಳ ಹಿಂದೆ ‘ಬರಿಗಾಲಲ್ಲಿ ನಡೆದರೆ ಬಂಗಾರದ ಮನುಷ್ಯರಾಗುತ್ತೇವೆ’ ಲೇಖನಕ್ಕೆ ಮೊದಲ ಬಾರಿಗೆ ಇಮೇಲ್ನಲ್ಲಿ ಪ್ರತಿಕ್ರಿಯೆ ಬರೆದಿದ್ದರು.
‘ಪಾದರಕ್ಷೆಯ ಅತಿ ಕನಿಷ್ಠ ಬಳಕೆಯ ನನ್ನ ನಂಬಿಕೆಯನ್ನು ನಿಲುವನ್ನು ಬೆಂಬಲಿಸುವವರು ಈ ಭೂಮಿಯ ಮೇಲೆ ಇದ್ದಾರೆಂದು ಖುಷಿಯಾಗಿದೆ. ನನ್ನ ಅಪ್ಪನಿಗೆ ೯೩ ವರುಷಗಳು. ಚಪ್ಪಲಿ ತೊರೆದು ೭೦ ವರುಷಗಳೇ ಸಂದಿವೆ. ಆರೋಗ್ಯವಾಗಿದ್ದಾರೆ. ನಾನು ಉದ್ಯೋಗಕ್ಕೆ ಹೋಗುವಾಗ ನೋಡುವ ಸುತ್ತಮುತ್ತಲ ಜನ ಏನೆಂದುಕೊಂಡಾರೆಂದು ಅನಿವಾರ್ಯವಾಗಿ ಪಾದರಕ್ಷೆ ಧರಿಸುತ್ತಿದ್ದೆ. ಕೆಲವೊಮ್ಮೆ ಕಾಲಲ್ಲಿ ಚಪ್ಪಲಿ ಇಲ್ಲದಿದ್ದಾಗ ಜನ ತುಚ್ಛವಾಗಿ
ನೋಡಿದ್ದುಂಟು. ಲೇಖನ ಚೆನ್ನಾಗಿದೆ. ಅದು ಅeನಿಗಳ ಕಣ್ಣು ತೆರೆಸಲಿ. ವಂದನೆಗಳು. ರಾಘಣ್ಣ.’ ಎಂದು ಹೃದಯಸ್ಪರ್ಶಿ ಒಕ್ಕಣೆ.
ಆಮೇಲೆ ಕಳೆದವರ್ಷ ಜೂನ್ನಲ್ಲಿ ಪ್ರಧಾನಿ ಮೋದಿಯವರ ವಾಷಿಂಗ್ಟನ್ ಡಿಸಿ. ಭೇಟಿಯಲ್ಲಿ ಇಲ್ಲಿನ ಸಂಸತ್ತಿನಲ್ಲಿ ಮಾಡಿದ ಅತ್ಯದ್ಭುತ ಭಾಷಣದ ಬಗ್ಗೆ ಅಂಕಣದಲ್ಲಿ ಬರೆಯುವಂತೆ ಕೋರಿಕೆ ಸಲ್ಲಿಸುತ್ತ ನನಗೊಂದು ಇಮೇಲ್ ಕಳುಹಿಸಿದ್ದರು. ನಾನು ಮೋದಿಯವರ ಬಗ್ಗೆ ಬರೆಯುವ ಬದಲು ಮೋದಿ ಯವರಿಗೆ ಸಸ್ಯಾಹಾರ ಊಟ ಒದಗಿಸಿದ ಆನಂದ್ ಪೂಜಾರ್ ಮತ್ತು ವುಡ್ ಲ್ಯಾಂಡ್ಸ್ ರೆಸ್ಟೊರೆಂಟ್ ಬಗ್ಗೆ ಬರೆದೆ. ರಾಘಣ್ಣ ಇಷ್ಟಪಟ್ಟರೋ ಇಲ್ಲವೋ ಗೊತ್ತಿಲ್ಲ. ಕಳೆದವಾರ ವಿಷ-ಲೇಖನದಲ್ಲಿ ‘ವಿಷಯ ಭೋಗದ ತೃಣಕೆ ಉರಿಯಾಗಿರಲುಬೇಕು ನಿಶಿಹಗಲು ಶ್ರೀಹರಿಯ ನೆನೆಯಬೇಕು…’ ಎಂಬ ಸಾಲು ಗಳನ್ನು ಗಮನಿಸಿದವರೇ ಆ ಕೀರ್ತನೆಯನ್ನು ಹಿಂದೊಮ್ಮೆ ಅವರ ಮಗಳು ಅನುಷಾ ಪವನ್ ತಿರುಪತಿಯಲ್ಲಿ ಬಾಲಾಜಿಯ ಸನ್ನಿಧಿಯಲ್ಲಿ ಹಾಡಿದ್ದರೆಂದು ತಿಳಿಸುತ್ತ ಅದರ ವಿಡಿಯೊ ಹಂಚಿಕೊಂಡರು.
ರಾಘಣ್ಣನವರಿಂದ ನನಗೆ ಬಂದ ಮೂರನೆಯ ಇಮೇಲ್ ಅದು. ನನ್ನ ನೆಚ್ಚಿನ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಕೀರ್ತನೆಯನ್ನು
ಕೇಳಿಸಿದ್ದಕ್ಕೆ ಧನ್ಯವಾದಗಳು ಎಂದು ಅವರಿಗೆ ಉತ್ತರಿಸಿದೆ. ಅಲ್ಲಿಯವರೆಗೂ ನಾನವರನ್ನು ‘ಮೈಸೂರಿನಲ್ಲಿರುವ ಯಾರೋ ಒಬ್ಬ ಹಿರಿಯ ಓದುಗರು’ ಎಂದಷ್ಟೇ ತಿಳಿದುಕೊಂಡಿದ್ದೆ. ಆಮೇಲೆ ಮತ್ತೊಂದು ಇಮೇಲ್ನಲ್ಲಿ ಸವಿವರ ಪರಿಚಯ ತಿಳಿಸಿದರು. ೧೯೮೩ರಿಂದ ಅವರು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಏಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ರಾಯರ ಮಠ ಸ್ಥಾಪಿಸಿ ಈಗ ಅಲ್ಲಿಯೇ ಇದ್ದಾರೆ.
ತಿಳಿರುತೋರಣ ಅಂಕಣದಲ್ಲಿ ಎಸ್ .ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ರಾಘವೇಂದ್ರ ಭಟ್ಟರೇ ಮೊದಲಾದ ಮೈಸೂರಿನ ಹಿರೀಕರ ಉಲ್ಲೇಖ ವನ್ನು ವಿಶೇಷವಾಗಿ ಗಮನಿಸಿದ್ದಾರೆ, ಕಾರಣ ಆ ಎಲ್ಲ ಹಿರಿತಲೆಗಳ ಒಡನಾಟ/ಪರಿಚಯ ಇವರಿಗಿದೆ. ಒಟ್ಟಾರೆಯಾಗಿಯೂ ಸಂಸ್ಕೃತ ಶ್ಲೋಕಗಳ, ದಾಸರ ಪದಗಳ ಉಲ್ಲೇಖವಿರುವ ಬರಹಗಳು ಅವರಿಗೆ ಹೆಚ್ಚು ಮೆಚ್ಚುಗೆಯಂತೆ. ಈಗ ನಮ್ಮ ಸಂಪರ್ಕಮಾಧ್ಯಮ ಇಮೇಲ್ನಿಂದ ವಾಟ್ಸಪ್ಗೆ ಬದಲಾಗಿದೆ. ಮೇಲಿನ ಕಾಳಿಂಗಮರ್ದನ ವಿವರಗಳನ್ನು ರಾಘಣ್ಣ ನನಗೆ ಕಳುಹಿಸಿದ್ದು ವಾಟ್ಸಪ್ನಲ್ಲಿಯೇ.
ವಿಷ ಪದಕ್ಕೆ ನೀರು ಎಂಬ ಅರ್ಥವೂ ಇದೆ ಅಂತ ಅವರ ಮೆಸೇಜಿನಲ್ಲಿ ಓದಿ ನಾನು ಮಾಡಿದ ಮೊದಲ ಕೆಲಸವೆಂದರೆ ನನ್ನಲ್ಲಿರುವ ಪ್ರೊ.ಜಿ.ಎನ್. ಚಕ್ರವರ್ತಿಯವರ ಸಂಸ್ಕೃತ-ಕನ್ನಡ ನಿಘಂಟು ತೆರೆದು ‘ವಿಷ’ ಪದಕ್ಕೆ ಯಾವ್ಯಾವ ಅರ್ಥ ಕೊಟ್ಟಿದ್ದಾರೆ ಎಂದು ನೋಡಿದ್ದು! ಅಲ್ಲಿ ಅಡಗಿ ಕುಳಿತಿತ್ತು ವಿಷದೊಳಗೇ ಅಮೃತ! ನಪುಂಸಕಲಿಂಗ ಪದವಾಗಿ ವಿಷ ಅಂದರೆ ಜಲ, ನೀರು ಎಂದು ನೀಟಾಗಿ ಅಚ್ಚಾಗಿದೆ. ಅದೇ ನೀರಿನಿಂದ (ನೀರಿನ ತೊಟ್ಟಿಯಿಂದ ಅಂತಿಟ್ಕೊಳ್ಳಿ) ಆರ್ಕಿಮಿಡೀಸ್ ಓಡಿಹೋದಂತೆ ಒಂದು ‘ಯುರೇಕಾ!’ ಕ್ಷಣ. ಏನೆಂದರೆ ಇದುವರೆಗೆ ಎಷ್ಟೋಸಲ ದಾಸರ ಪದಗಳಲ್ಲಿ ತಾವರೆ ಎಂಬ ಅರ್ಥದಲ್ಲಿ ‘ಬಿಸಜ’ ಪದವನ್ನು ಗಮನಿಸಿದ್ದೇನೆ. ‘ಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೇ…’ (ವರವ ಕೊಡು ಎನಗೆ ವಾಗ್ದೇವಿ…), ‘ಬಿಸಜಾಕ್ಷ ಪುರಂದರವಿಠಲಗರ್ಪಿಸೋ ನಿತ್ಯ…’ (ಮುಸುರೆ ತೊಳೆಯಬೇಕು ಮನಸಿನ…), ‘ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ…’ (ಕುಲಕುಲವೆನ್ನುತಿಹರು ಕುಲವ್ಯಾವುದು…) ಮುಂತಾದುವುಗಳಲ್ಲೆಲ್ಲ ಏನಿದು ಬಿಸಜ ಏನಿದರ ವ್ಯುತ್ಪತ್ತಿ ಎಂದು ಯೋಚಿಸಿದ್ದೇನೆ. ಈಗ ಗೊತ್ತಾಯಿತು! ಬಿಸಜ ಅಂದರೆ ವಿಷಜ ಎಂಬ ಸಂಸ್ಕೃತ ಪದದ ತದ್ಭವ ರೂಪ. ವಿಷಜ ಅಂದರೆ ನೀರಿನಲ್ಲಿ ಹುಟ್ಟಿದ. ಜಲಜ, ವಾರಿಜ, ಅಂಬುಜ, ನೀರಜ ಇದ್ದಹಾಗೆಯೇ. ಅಂದಮೇಲೆ, ವಿಷ ಎಂದರೆ ನೀರು ಅಂತಲೂ ಆಗುತ್ತದೆಂದು ಸಾಬೀತಾಯಿತು!
ಅರ್ಥಾನ್ವೇಷಣೆಯ ಹುಚ್ಚು ಮತ್ತೆ ಗರಿಗೆದರಿತು. ರಾಘಣ್ಣನವರ ಪ್ರತಿಕ್ರಿಯೆಯಲ್ಲಿ ಅಮರಕೋಶದ ಪ್ರಸ್ತಾವವೂ ಇತ್ತಷ್ಟೆ? ನನ್ನ ಬಳಿ ವಿದ್ವಾನ್ ಎನ್.ರಂಗನಾಥ ಶರ್ಮಾ ಸಂಪಾದಿತ ‘ಅಮರಸಿಂಹನ ನಾಮಲಿಂಗಾನುಶಾಸನ ಅಥವಾ ಅಮರಕೋಶ’ ಪುಸ್ತಕದ ಮುದ್ರಿತ ಪ್ರತಿ ಇದೆ. ಅದರಲ್ಲಿ ವಾರಿವರ್ಗದಲ್ಲಿ ಮೂರು ಶ್ಲೋಕಗಳನ್ನು ನೀರಿನ ಪರ್ಯಾಯಪದಗಳಿಗೇ ಬಳಸಿದ್ದಾರೆಂದು ಈಗ ಗಮನಿಸಿದೆ! ಒಂದೊಂದು ಪದವೂ ಅದೆಷ್ಟು ಸುಂದರ! ಇಲ್ಲಿ ನೋಡಿ: ‘ಆಪಃ ಸ್ತ್ರೀ ಭೂಮ್ನಿ ವಾರ್ವಾರಿ ಸಲಿಲಂ ಕಮಲಂ ಜಲಮ್| ಪಯಃ ಕೀಲಾಲಮಮೃತಂ ಜೀವನಂ ಭುವನಂ ವನಮ್||’ –
ಇದು ಮೊದಲನೆಯ ಶ್ಲೋಕ. ‘ಕಬಂಧಮುದಕಂ ಪಾಥಃ ಪುಷ್ಕರಂ ಸರ್ವತೋಮುಖಮ್| ಅಂಭೋಧಿರ್ಣಸ್ತೋಯಪಾನೀಯ ನೀರಕ್ಷೀರಾಂಬು ಶಂಬರಮ್||’ – ಇದು ಎರಡನೆಯ ಶ್ಲೋಕ.
‘ಕೃಪೀಟಂ ಕಾಂಡಮಸ್ತ್ರೀ
ಸ್ಯಾಜ್ಜೀವನೀಯಂ ಕುಶಂ ವಿಷಮ್|
ಮೇಘಪುಷ್ಪಂ ಘನರಸಸ್ತ್ರಿಷು ದ್ವೇ
ಅಪ್ಯಮಮ್ಮಯಮ್||’ – ಇದು ಮೂರನೆಯದು. ವಿಷ ಬರುವುದು ಇದರಲ್ಲೇ. ಮೂರೂ ಶ್ಲೋಕಗಳಲ್ಲಿ ಬರುವ ಪದಗಳನ್ನು ಪ್ರತ್ಯೇಕವಾಗಿ
ಗಮನಿಸಿ: ಅಪ್, ವಾರ್, ವಾರಿ, ಸಲಿಲ, ಕಮಲ, ಜಲ, ಪಯಸ್, ಕೀಲಾಲ, ಅಮೃತ, ಜೀವನ, ಭುವನ, ವನ, ಕಬಂಧ, ಉದಕ, ಪಾಥಸ್,
ಪುಷ್ಕರ, ಸರ್ವತೋಮುಖ, ಅಂಭಸ್, ಅರ್ಣಸ್, ತೋಯ, ಪಾನೀಯ, ನೀರ, ಕ್ಷೀರ, ಅಂಬು, ಶಂಬರ, ಕೃಪೀಟ, ಕಾಂಡ, ಜೀವನೀಯ, ಕುಶ, ವಿಷ, ಮೇಘಪುಷ್ಪ, ಘನರಸ… ಇದೇ ನೋಡಿ ಸಂಸ್ಕೃತದ ಶಬ್ದಶ್ರೀಮಂತಿಕೆ! ಇಂಗ್ಲಿಷ್ನಲ್ಲಾದರೆ ವಾಟರ್ ಎಂಬ ಒಂದೇ ಪದದಿಂದ ನಿಭಾಯಿಸಬೇಕು. ಕವಿತೆ
ಬರೆಯುವವರಿಗೆಲ್ಲ ಎಷ್ಟು ಕಷ್ಟ. ಸಂಸ್ಕೃತದಲ್ಲಾದರೆ ಹಾಗಲ್ಲ ಸಂದರ್ಭ-ಸೌಂದರ್ಯಕ್ಕೆ ತಕ್ಕಂತೆ ಇಷ್ಟು ದೊಡ್ಡ ಪಟ್ಟಿಯಿಂದ ಬೇಕಾದ್ದನ್ನು ಆಯ್ದುಕೊಳ್ಳಬಹುದು. ಯಾವುದನ್ನು ಯಾವ ಲಿಂಗ, ವಚನದಲ್ಲಿ ಬಳಸಬೇಕೆಂಬ ಸೂಚನೆಯೂ ಇರುತ್ತದೆ.
ಉದಾಹರಣೆಗೆ ‘ಅಪ್’ ಸ್ತ್ರೀಲಿಂಗ, ನಿತ್ಯಬಹುವಚನ (ತೆಲುಗಿನಲ್ಲಿ ನೀಳ್ಳು ಎಂದು ಬಹುವಚನ ಬಳಸುತ್ತಾರಲ್ವಾ ಇದೇ ಕಾರಣಕ್ಕಿರಬಹುದು. ಉತ್ತರಕರ್ನಾಟಕದ ಮಂದಿ ಕನ್ನಡದಲ್ಲೂ ‘ನಲ್ಲಿಯಲ್ಲಿ ನೀರು ಬಂದಾವು’ ಎನ್ನುವುದನ್ನು ನಾನು ಗಮನಿಸಿದ್ದೇನೆ). ‘ಯೋಧಿಪಾಂ ಪುಷ್ಪಂ ವೇದ| ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ…’ ಎಂದು ಆರಂಭವಾಗುವ ಮಂತ್ರಪುಷ್ಪದಲ್ಲಿ ಅಪ್ ಪದವನ್ನು ಬಹುವಚನದಲ್ಲೇ ಬಳಸಲಾಗಿದೆ. ಅಗ್ನಿ, ವಾಯು, ಸೂರ್ಯ, ಚಂದ್ರ, ನಕ್ಷತ್ರಗಳು, ಮೋಡ, ಮಳೆ ಎಲ್ಲವೂ ನೀರಿನ(ನೀರುಗಳ) ಪುಷ್ಪಗಳು. ಇದನ್ನು ಬಲ್ಲವನು ಸುಭಿಕ್ಷನಾಗುವನು ಎಂಬುದು ಮಂತ್ರಪುಷ್ಪದ ತಾತ್ಪರ್ಯ.
ಕೃಷ್ಣಯಜುರ್ವೇದದ ಒಂದು ಮಂತ್ರಭಾಗ ಅದು. ನೀರಿನ ಪರ್ಯಾಯ ಪದಗಳ ಪೈಕಿ ಕೆಲವು ನಮಗೆಲ್ಲ ಅಷ್ಟೇನೂ ಪರಿಚಯವಿಲ್ಲದವು. ಏಕೆಂದರೆ ಅವುಗಳ ಬಳಕೆ ಕಡಿಮೆ. ಆದರೆ ಬೇರೆ ಬಹಳಷ್ಟು ಚಿರಪರಿಚಿತವೇ. ಸುಭಾಷಿತಗಳಲ್ಲಿ, ನಿತ್ಯಪಠನದ ಸ್ತೋತ್ರಗಳಲ್ಲಿ, ಅಷ್ಟೇಕೆ ಕನ್ನಡದ ಕಾವ್ಯಗಳಲ್ಲೂ ಆಧುನಿಕ ಭಾವ-ಭಕ್ತಿ-ಚಿತ್ರಗೀತೆಗಳಲ್ಲೂ ಇವೆಲ್ಲ ಧಾರಾಳವಾಗಿ ಬಳಕೆಯಾಗಿವೆ. ‘ಮಂದಾಕಿನೀ ಸಲಿಲಚಂದನ ಚರ್ಚಿತಾಯ ನನ್ದೀಶ್ವರ ಪ್ರಮಥನಾಥ ಮಹೇಶ್ವರಾಯ…’ದಲ್ಲಿ ಸಲಿಲ ಬಂದಿದೆ. ಅಂತೆಯೇ ಕುವೆಂಪುರವರ ‘ಸಲಿಲ ತೀರ್ಥ ಪುಣ್ಯರಂಗೆ ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು…’ದಲ್ಲಿಯೂ.
‘ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಶ್ರೂಯತೇ…’ ಸುಭಾಷಿತದಲ್ಲಿ ಪಯಸ್ ಬಂದಿದೆ. ಭಗವದ್ಗೀತೆಯ ‘ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ’ ಶ್ಲೋಕದಲ್ಲಿ ಅಂಭಸ್ ಬಂದಿದೆ. ಮೈಸೂರು ಸಂಸ್ಥಾನದ ನಾಡಗೀತೆ ಎಂದೇ ಖ್ಯಾತಿಯಾದ ‘ಕಾಯೌ ಶ್ರೀ ಗೌರಿ ಕರುಣಾಲಹರಿ
ತೋಯಜಾಕ್ಷಿ ಶಂಕರೀಶ್ವರಿ…’ಯಲ್ಲಿ ತೋಯ ಬಂದಿದೆ. ಅದೇ ತೋಯವು ‘ಪ್ರಥಮವಯಸಿ ಪೀತಂ ತೋಯಮಲ್ಪಂ ಸ್ಮರಂತಃ ಶಿರಸಿ ನಿಹಿತಭಾರಾ ನಾರಿಕೇಲಾ ನರಾಣಾಂ…’ ಸುಭಾಷಿತದಲ್ಲೂ, ತೀರ್ಥ ತಗೊಳ್ಳುವಾಗ ಹೇಳುವ ‘ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ…’ ಮಂತ್ರದಲ್ಲೂ ಬಂದಿದೆ.
‘ರತ್ನೈಃಕಲ್ಪಿತಮಾಸನಂ ಹಿಮಜಲೈಃಸ್ನಾನಂ ಚ ದಿವ್ಯಾಂಬರಮ್…’ ಶಿವಮಾನಸ ಸ್ತೋತ್ರದಲ್ಲಿ, ‘ಚರಿಸುವ ಜಲದಲಿ ಮತ್ಸ್ಯನಿಗೆ ಗಿರಿಯ ಬೆನ್ನಲಿ
ಪೊತ್ತ ಕೂರ್ಮನಿಗೆ…’ ಮಂಗಳ ಪದ್ಯದಲ್ಲಿ, ಅಷ್ಟೇ ಅಲ್ಲ ‘ಜಲಲ ಜಲಲ ಜಲಧಾರೆ…’ ಎಂಬ ಕನ್ನಡ ಚಿತ್ರಗೀತೆಯಲ್ಲೂ ಜಲ ಬಂದಿದೆ. ‘ನದಿಯು ಡೊಂಕಾದರೇನು ಉದಕ ಡೊಂಕೇ ವಿಟ್ಠಲ…’ದಲ್ಲಿ ಉದಕ ಬಂದಿದೆ. ಅಂತೆಯೇ ‘ಗೀತಾಗಂಗೋ ದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ’
ಎಂದು ಗೀತಾಮಾಹಾತ್ಮ್ಯದಲ್ಲೂ.
ಅದೇ ರೀತಿ ಬೇಂದ್ರೆಯವರ ‘ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ…’ಯಲ್ಲಿ ವಾರಿ ಬಂದಿದೆ. ಇನ್ನು ಕೆಲವೆಡೆ ತಾವರೆಯಿಂದಾಗಿ ನೀರಿನ ಬೇರೆಬೇರೆ ಹೆಸರುಗಳು ಪದ್ಯಗಳಲ್ಲಿ ಸಿಗುತ್ತವೆ. ‘ಸುಲಭದ ಮುಕುತಿಗೆ ಸುಲಭವೆಂದೆನಿಸುವ ಜಲರುಹನಾಭನ ನೆನೆ ಮನವೇ ರಂಗ…’, ‘ವರವೀಣಾ
ಮೃದುಪಾಣಿ ವನರುಹಲೋಚನ ರಾಣೀ…’, ‘ಅಂಬುಜನಾಭನ ಅಂತ್ಯವಿಲ್ಲದಾತನ ತುಂಬುಮಾಯವಯ್ಯ ಈ ಲೀಲೆಯ…’, ‘ನಿನ್ನನೇ ನಂಬಿದೆ ನೀರಜನಯನ ಎನ್ನ ಪಾಲಿಸೋ ಇಂದಿರಾ ರಮಣ…’, ‘ದಾರಿಯ ತೋರೋ ಗೋಪಾಲ ವಾರಿಜನಾಭ ಶ್ರೀ ವೈಕುಂಠಲೋಲ…’ ತತ್ಕ್ಷಣಕ್ಕೆ ನೆನಪಾದ ಕೆಲವನ್ನಷ್ಟೇ ಇಲ್ಲಿ ದಾಖಲಿಸಿದ್ದೇನೆ. ಹುಡುಕಿದರೆ ಬೇಕಾದಷ್ಟು ಸಿಗಬಹುದು.
ಅಂತಹ ಹುಡುಕುವಿಕೆಯಲ್ಲಿ ಅನನ್ಯ ರೀತಿಯಲ್ಲಿ ಪಳಗಿದ್ದವರು ಅಮೆರಿಕನ್ನಡ ಖ್ಯಾತಿಯ ದಿ.ಶಿಕಾರಿಪುರ ಹರಿಹರೇಶ್ವರ. ಅವರ ‘ಮಾತಿನ ಮಂಟಪ’ ಪ್ರಬಂಧಗಳ ಕೃತಿಯಲ್ಲಿ ನೀರಿನ ಬಗ್ಗೆ ವಿಚಾರಲಹರಿ ಎಂಬ ಮುಖ್ಯಶೀರ್ಷಿಕೆಯಡಿ ‘ನೀರು, ನಿನಗೆ ಎಷ್ಟೊಂದು ಹೆಸರು!’, ‘ನೀರು ಹೂವು ಯಾರು, ನಿಮಗೆ ಗೊತ್ತೇನು?’, ‘ನೀರು ತುಂಬಿದ ಕನ್ನಡ ನುಡಿಗಟ್ಟುಗಳ ಕೆರೆ, ಒಗಟುಗಳ ತೊರೆ, ಗಾದೆಗಳ ಝರಿಗಳು!’, ‘ನೀರು, ನದಿ, ತೀರ್ಥ, ಮತ್ತು ಸ್ನಾನ’, ಹಾಗೂ ‘ಶತರುದ್ರೀಯದಲ್ಲಿ ನೀರು’ ಎಂಬ ಐದು ಸಂಶೋಧನಾತ್ಮಕ, ಪಾಂಡಿತ್ಯಪೂರ್ಣ ಪ್ರಬಂಧಗಳನ್ನು ಬರೆದಿದ್ದಾರೆ. ಮಂತ್ರಪುಷ್ಪದ ಎಂಟೂ ಋಚೆಗಳನ್ನು ಸುಂದರವಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.
ಒಂದು ಸ್ಯಾಂಪಲ್ ನೋಡಿ: ‘ನೀರ ಹೂವೇನೆಂದು ನೀ ಬಲ್ಲೆಯೇನು| ಅದನರಿಯೆ ಹೂವಿನೊಲು ರಸದ ಸೆಲೆ ನಲಿವಿನೆಡೆ| ಪಶು-ಪುತ್ರ- ಸಂಪದವ ಪಡೆವೆ ನೀನೆಲ್ಲವನು| ತಂಗದಿರ ಚಂದಿರನೆ ನಭದ ನೀರಿನ ಹೂವು| ಇದ ತಿಳಿದು ನೀ ನೀರಲಿರುವುದೆಲ್ಲವ ಗ್ರಹಿಸೆ ಎಲ್ಲ ನಿನ್ನಲ್ಲೇ||’ ವೇದೋಪನಿಷತ್ತುಗಳಲ್ಲಿ ನೀರಿನ ಉಲ್ಲೇಖವಿರುವ ಬೇರೆ ಕೆಲವನ್ನೂ ಕನ್ನಡಕ್ಕೆ ತಂದಿದ್ದಾರೆ. ನೀರಿನ ಪರ್ಯಾಯ ಪದಗಳ ವ್ಯುತ್ಪತ್ತಿಯನ್ನು ತಾರ್ಕಿಕವಾಗಿ ಮಂಡಿಸಿದ್ದಾರೆ. ನಮ್ಮಂಥ ಪಾಮರ ಓದುಗರಿಗೆ ಅದರಲ್ಲಿ ಕೆಲವು ಭಾಗಗಳು ‘ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ…’ ಆಗುತ್ತವಾದರೂ ಹರಿಹರೇಶ್ವರರಿಗೆ ಅದೆಲ್ಲ ‘ನೀರು ಕುಡಿದಷ್ಟು’ ಸುಲಭದ ವಿಚಾರ.
ನೀರಿನ ವಿಷಯದಲ್ಲಿ ನಾನು ನಿಬ್ಬೆರಗಾಗಿ ನೋಡುವ ಇನ್ನೊಬ್ಬ ಬರಹಗಾರರೆಂದರೆ ಇದೇ ವಿಶ್ವವಾಣಿ ಪತ್ರಿಕೆಯಲ್ಲಿ ನಿಲಯದ ಕಲಾವಿದ ಆಗಿರುವ ರಾಧಾಕೃಷ್ಣ ಭಡ್ತಿ. ವಿಜಯಕರ್ನಾಟಕ ಪತ್ರಿಕೆಯಲ್ಲಿದ್ದಾಗ ಅವರು ನೀರಿನ ಬಗ್ಗೆಯೇ ಬರೆಯುತ್ತಿದ್ದ ‘ನೀರು-ನೆರಳು’ ಅಂಕಣ. ವರ್ಷಗಟ್ಟಲೆ, ವಾರವಾರವೂ ನೀರು ನೀರು ನೀರು! ಒಂದು ವ್ಯಂಗ್ಯಚಿತ್ರ ನನಗೆ ಈಗಲೂ ನೆನಪಿದೆ. ಒಮ್ಮೆ ಏಪ್ರಿಲ್ ೧ರ ವಿಜಯಕರ್ನಾಟಕ ಸಂಚಿಕೆಯ ಅಷ್ಟೂ ಪುಟಗಳನ್ನು ಹಾಸ್ಯ-ತಮಾಷೆ-ವ್ಯಂಗ್ಯಗಳಿಂದಲೇ ತುಂಬಿಸಿದ್ದಿತ್ತು. ವಿಜಯಕರ್ನಾಟಕ ಸುದ್ದಿಮನೆಯೊಳಗೆ ಏನೇನು ಹಾಸ್ಯಕಿತಾಪತಿಗಳು ನಡೆಯುತ್ತವೆ ಎಂಬ ಚಿತ್ರಣ. ಸಹೋದ್ಯೋಗಿಗಳೆಲ್ಲ ಸೇರಿ ಭಡ್ತಿಯವರ ತಲೆಮೇಲೆ ಬಾಲ್ದಿತುಂಬ ನೀರು ಸುರಿಯುತ್ತಿರುವ ದೃಶ್ಯ! ಅಲ್ಲಿದ್ದ ಎಲ್ಲರೂ ಯಂಗ್ ಸ್ಟಾಫ್ ಆದ್ದರಿಂದ ಅಂಥ ತಮಾಷೆಗಳು ಮಾಡುವುದೂ ತಗೊಳ್ಳುವುದೂ ‘ನೀರು ಕುಡಿದಷ್ಟೇ’ ಸುಲಭವೆನ್ನಿ.
ಎಂಬಲ್ಲಿಗೆ ಈಗ ಕಳೆದ ವಾರ ಕೇಳಿದ್ದ ವಿಷ-ರಸಪ್ರಶ್ನೆಯ ಸರಿಯುತ್ತರ ತಿಳಿಸುವ ಸಮಯ ಬಂತು. ಉತ್ತರ ‘ನೀರು ಕುಡಿದಷ್ಟು’ ಸುಲಭವಾಗಿದೆ ಎಂದಿದ್ದೆನಷ್ಟೆ? ಹೌದು. ಕೋಶಾಧಿಕಾರಿ ಮತ್ತು ವೈದ್ಯ – ಇಬ್ಬರೂ ತಮ್ಮತಮ್ಮ ಮನೆಯಿಂದ ತಾವು ತಯಾರಿಸಿದ ಅತ್ಯಂತ ಕಟುವಾದ ವಿಷ ಎನ್ನುತ್ತ ತಂದದ್ದು ಬರೀ ನೀರನ್ನೇ! ಹಾಗಿದ್ದರೆ ಕೋಶಾಽಕಾರಿ ಸಾಯಲಿಕ್ಕೆ ಕಾರಣವೇನು? ಆತ ನಿಜವಾಗಿಯೂ ಒಂದು ದುರ್ಬಲ ವಿಷವನ್ನು ಅದು ಹೇಗೋ ಮಾಡಿ ತಯಾರಿಸಿದ್ದನು. ವೈದ್ಯ ಅತಿ ಪವರ್ಫುಲ್ ವಿಷ ತಂದೇತರುತ್ತಾನೆ ಎಂದು ಆತ ನಂಬಿದ್ದನು. ಅದಕ್ಕಾಗಿ ಕೋಶಾಧಿಕಾರಿ ಏನು ಮಾಡಿದ ನೆಂದರೆ ಅರಮನೆಗೆ ಹೊರಡುವ ಸ್ವಲ್ಪ ಮೊದಲು ತನ್ನ ದುರ್ಬಲ ವಿಷವನ್ನೊಂದಿಷ್ಟು ಸೇವಿಸಿದನು.
ವೈದ್ಯ ತರುವ ಪವರ್ಫುಲ್ ವಿಷವನ್ನು ತಾನು ಮೊದಲು ಕುಡಿಯಬೇಕಾಗಿ ಬರುತ್ತದೆ ಆಗ ತನ್ನ ದುರ್ಬಲ ವಿಷ ಶಮನವಾಗುತ್ತದೆ, ಆಮೇಲೆ ಹೇಗೂ ತನ್ನ ವಿಷವೆಂದು ತಾನು ಕುಡಿಯಬೇಕಾದ್ದು ನೀರನ್ನೇ ತಾನೆ ಏನೂ ತೊಂದರೆಯಿಲ್ಲ ಬದುಕುಳಿಯುತ್ತೇನೆ ಎಂದು ಅವನ ಲೆಕ್ಕಾಚಾರ. ವೈದ್ಯ
ಮೊದಲಿಗೆ ಕೋಶಾಧಿಕಾರಿ ತಂದ ನೀರನ್ನು ಕುಡಿದು ಆಮೇಲೆ ತಾನೇ ತಂದ ಪವರ್ಫುಲ್ ವಿಷ ಕುಡಿದರೆ ಪಡ್ಚ ಆಗುತ್ತಾನೆ- ಎಂದು ಕೋಶಾಧಿಕಾರಿ ಮನಸ್ಸಲ್ಲೇ ಮಂಡಿಗೆ ಮೆಲ್ಲುತ್ತಿದ್ದ. ಚಾಲಾಕಿ ವೈದ್ಯನೂ ನೀರನ್ನೇ ತಂದಿದ್ದರಿಂದ ಕೋಶಾಽಕಾರಿ ಸೋತ, ಸತ್ತ!
ರಾಜನಿಗೆ ಪವರ್ಫುಲ್ ವಿಷ ಸಿಗಲೇ ಇಲ್ಲ, ಸಿಕ್ಕಿದ್ದು ನೀರು (ಕೋಶಾಧಿಕಾರಿಯ ಮನೆಯದೂ ವೈದ್ಯನ ಮನೆಯದೂ) ತುಂಬಿದ ಚೊಂಬು!