Sunday, 13th October 2024

ರಫೇಲ್ ನಿಯಂತ್ರಿಸಲು ಮತ್ತೆ ರಾಹುಲ್ ಪಡೆ !

ಪ್ರಚಲಿತ

ಚಂದ್ರಶೇಖರ ಬೇರಿಕೆ

chandrashekharaberike@gmail.com

ಭಾರತ ಮತ್ತು – ದೇಶಗಳ ನಡುವಿನ ರಕ್ಷಣಾ ಒಪ್ಪಂದದ ಅಡಿಯಲ್ಲಿ ಸುಮಾರು 59 ಸಾವಿರ ಕೋಟಿ ಮೊತ್ತದ ರಫೇಲ್ ದಿ ಗೇಮ್ ಚೇಂಜರ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಮಾಡಲಾದ ಆರೋಪ ಮತ್ತು ಮುಂದುವರೆದ ಭಾಗವಾಗಿ ಈ ವಿವಾದ ಭಾರತದ ಸುಪ್ರೀಂ ಕೋರ್ಟ್‌ನಿಂದ ವಿಚಾರಣೆಗೆ ಒಳಪಟ್ಟು ಅಂತಿಮವಾಗಿ ಯಾವುದೇ ಅವ್ಯವಹಾರ ನಡೆದ ಬಗ್ಗೆ ಪುರಾವೆಗಳಿಲ್ಲ ಎಂದು ಕೋರ್ಟ್ ತೀರ್ಮಾನಕ್ಕೆ ಬಂದು ಕ್ಲೀನ್‌ಚಿಟ್ ದೊರೆತು ತಣ್ಣಗಾಗಿದ್ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ಯುಪಿಎ ಸರಕಾರದ ಅವಽಯಲ್ಲಿ ಪ್ರತಿ ರಫೇಲ್ ಯುದ್ಧ ವಿಮಾನಕ್ಕೆ 526 ಕೋಟಿಯಂತೆ ಒಟ್ಟು 126 ವಿಮಾನ ಖರೀದಿ ನಿಗದಿಯಾಗಿತ್ತು. ಆದರೆ 2014ರಲ್ಲಿ ಆಡಳಿತಕ್ಕೆ ಬಂದ ಎನ್‌ಡಿಎ ಸರಕಾರ ಈ ನಿರ್ಧಾರ ವನ್ನು ರದ್ದು ಮಾಡಿ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಜತೆ ಸೆಪ್ಟೆಂಬರ್ 2016ರಲ್ಲಿ ಹೊಸ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಅನ್ವಯ ಒಂದು ವಿಮಾನಕ್ಕೆ 1670 ಕೋಟಿಯಂತೆ ಒಟ್ಟು 59 ಸಾವಿರ ಕೋಟಿ ಮೊತ್ತದಲ್ಲಿ 36 ಅತ್ಯಾಧುನಿಕ ರಫೇಲ್ ಯುದ್ಧ ವಿಮಾನವನ್ನು ಖರೀದಿ ಮಾಡಲು ನಿರ್ಧರಿಸಿತ್ತು. ಆದರೆ ವಿಮಾನ ತಯಾರಿಕೆಯಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಬದಲಿಗೆ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಹೆಸರು ತಳುಕು ಹಾಕಿಕೊಂಡು ಈ ವಿವಾದ ಇನ್ನಷ್ಟು ರೋಚಕತೆ ಪಡೆಯಿತು. ಈ ಬಹುಕೋಟಿ ಮೊತ್ತದ ರಕ್ಷಣಾ ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ 2018ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪಿಎಎಲ್ ಅರ್ಜಿ ಸಲ್ಲಿಕೆಯಾಗಿತ್ತು.

ಇದನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಡಿಸೆಂಬರ್ 14, 2018 ರಂದು ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯಹಾರ ನಡೆಸಿದ್ದು ಕಂಡು ಬಂದಿಲ್ಲ’ ಎಂದು ತೀರ್ಪು ನೀಡಿ ಸಲ್ಲಿಕೆಯಾಗಿದ್ದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮಾಡಿದ ನ್ಯಾಯಾಲಯ ನವೆಂಬರ್ 14, 2019ರಂದು 36 ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ’ ಎಂದು ಸ್ಪಷ್ಟವಾಗಿ ಪುನರುಚ್ಚರಿಸಿ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿತ್ತು.

ಈ ಮಧ್ಯೆ 2019ರ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿಯವರನ್ನು ‘ಚೌಕಿದಾರ್ ಚೋರ್ ಹೈ’ ಎಂದು ಲೇವಡಿ ಮಾಡಿದ ಪರಿಣಾಮ ಈ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡು ಪರಸ್ಪರ ಕೆಸರೆರೆಚಾಟಕ್ಕೆ ನಾಂದಿಯಾ ಯಿತು. ಆದರೆ ತನ್ನ ನಿರ್ಧಾರವನ್ನು ಪ್ರಬಲವಾಗಿ ಸಮರ್ಥನೆ ಮಾಡಿಕೊಂಡ ಬಿಜೆಪಿ ಈ ಒಪ್ಪಂದದಲ್ಲಿನ ಭ್ರಷ್ಟಾಚಾರದ ಆರೋಪವನ್ನು ನಿರಾಕರಿಸುತ್ತಲೇ ಬಂದಿತ್ತು.

ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ದೊಡ್ಡ ಸದ್ದಿನೊಂದಿಗೆ ಟೇಕ್ ಆಫ್’ ಆಗುತ್ತಿದ್ದ ರಫೇಲ್ ಜೆಟ್‌ಗಳು ಕಾಂಗ್ರೆಸ್ ಸಮಾವೇಶದಲ್ಲಿ ಲ್ಯಾಂಡ್’ ಆಗುತ್ತಿದ್ದವು. ಆದರೆ ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಪ್ರಧಾನಿಯವರ ವಿರುದ್ಧ ಸ್ವತಃ ಸುಪ್ರೀಂ ಕೋರ್ಟ್ ‘ಚೌಕಿದಾರ್ ಚೋರ್ ಹೈ’ ಎಂದು ತೀರ್ಪು ನೀಡಿದೆ ಎಂಬುದಾಗಿ ನ್ಯಾಯಾಲಯದ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಯಾದ ಬಳಿಕ ಆ ಬಗ್ಗೆ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟನೆ ನೀಡಿ, ಕ್ಷಮೆ ಕೇಳಿ ವಿಷಾದ ವ್ಯಕ್ತಪಡಿಸಿದ ಬಳಿಕ ಈ ವಿಚಾರದಲ್ಲಿ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆಯಿಂದ ಇರುವಂತೆ ಕೋರ್ಟ್ ಬುದ್ದಿ ಹೇಳಿದ ಪ್ರಸಂಗವೂ ನಡೆಯಿತು.

ಅರ್ಥಾತ್ ಈ ಹಂತದವರೆಗಿನ ರಫೇಲ್ ಹೋರಾಟದಲ್ಲಿ ರಾಹುಲ್ ಫೇಲ್ ಆದರು. ಇಷ್ಟರ ಭ್ರಷ್ಟಾಚಾರದ ರೆಕ್ಕೆಪುಕ್ಕಗಳನ್ನು ಜೋಡಿಸಿಕೊಂಡೇ ಬಳಿತು ಕೊಳ್ಳುತ್ತಾ ಫ್ರಾನ್ಸ್‌ನಿಂದ ಹಾರಾಟಕ್ಕೆ ಅಣಿಯಾಗುತ್ತಿದ್ದ ಮೊದಲ ಬ್ಯಾಚ್‌ನ 5 ರಫೇಲ್ ಜೆಟ್ಗಳು ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ ನಿರಾಳತೆಯಿಂದ ಗಗನಕ್ಕೆ ಹಾರಿ ಭವ್ಯ ಮತ್ತು ಸಾಂಪ್ರದಾಯಿಕ ಸ್ವಾಗತದೊಂದಿಗೆ ಜುಲೈ 29, 2020ರಂದು ಭಾರತದ ಅಂಬಾಲಾ ವಾಯುನೆಲೆಯಲ್ಲಿರುವ ತನ್ನ ಗೂಡನ್ನು ಸೇರಿಕೊಂಡವು. ಈಗ ಈ ರಫೇಲ್‌ಗಳ ಹಾರಾಟವನ್ನು ನಿಯಂತ್ರಿಸಲು ಮತ್ತೆ ರಾಹುಲ್ ಪಡೆ ಮುಂದಾಗಿದೆ.

ಅಷ್ಟಕ್ಕೂ ನಡೆದಿದ್ದೇನು ಎಂದರೆ 2016ರಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆ ಹಾಗೂ ಭಾರತ ಸರಕಾರದ ನಡುವೆ ನಡೆದ 36 ರಫೇಲ್ ಯುದ್ಧ ವಿಮಾನಗಳ
ಖರೀದಿ ಒಪ್ಪಂದದಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆ ಸುಮಾರು 8.8 ಕೋಟಿ ಲಂಚವನ್ನು ಭಾರತದ ಮಧ್ಯವರ್ತಿಗಳಿಗೆ ಪಾವತಿಸಿದೆ ಎಂದು ಫ್ರಾನ್ಸ್‌ನ
ಭ್ರಷ್ಟಾಚಾರ ನಿಗ್ರಹ ದಳದ ತನಿಖೆಯನ್ನು ಆಧರಿಸಿ ಮೀಡಿಯಾಪಾರ್ಟ್ ಎಂಬ ವೆಬ್‌ಸೈಟ್ ಏಪ್ರಿಲ್ ನಲ್ಲಿ ವರದಿ ಮಾಡಿತ್ತು. ಆ ಬಳಿಕ ಆರ್ಥಿಕ ಅಪರಾಧ
ಪತ್ತೆಯಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಫ್ರಾನ್ಸ್‌ನ ಶೆಪಾರ್ ಎಂಬ ಎನ್‌ಜಿಒ ಸಲ್ಲಿಸಿದ ದೂರಿನ ಅನ್ವಯ ಫ್ರಾನ್ಸ್‌ನ ರಾಷ್ಟ್ರೀಯ ಹಣಕಾಸು
ಅಭಿಯೋಜಕರ ಕಚೇರಿಯಿಂದ ನ್ಯಾಯಾಂಗ ತನಿಖೆಗೆ ಆದೇಶಿಸಿ ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದು ಮೀಡಿಯಾಪಾರ್ಟ್ ವರದಿ ಮಾಡಿದೆ. ಈ ಬೆಳವಣಿಗೆಯನ್ನು ಗಮನಿಸಿದ ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದು, ಪ್ರಧಾನಿಯವರು ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಜಂಟಿ ಸದನ ಸಮಿತಿ (ಜೆಪಿಸಿ) ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದೆ.

ಇದು ದೇಶದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸಲ್ಪಟ್ಟ ಮೊದಲ ಪ್ರಕರಣವಲ್ಲ. 1987ರ ಬೋಫೋರ್ಸ್ ಹಗರಣ, 2011ರಲ್ಲಿ 2ಜಿ ಸ್ಪೆಕ್ಟ್ರಂ ಹಗರಣಗಳ ವಿರುದ್ಧ ಜೆಪಿಸಿ ತನಿಖೆಗೆ ಒತ್ತಾಯಗಳು ಕೇಳಿ ಬಂದ ಬಳಿಕ ಆ ಪ್ರಕರಣಗಳು ತನಿಖೆಗೆ ಒಳಗಾದವು. ಫ್ರಾನ್ಸ್‌ನಲ್ಲಿ ಈಗ ನಡೆಯುತ್ತಿರುವ ರಫೇಲ್ ವಿಚಾರಣೆ ಯಲ್ಲಿ ಒಂದು ವೇಳೆ ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವ್ಯತಿರಿಕ್ತ ತೀರ್ಪು ಬಂದರೆ ಆಗ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟ ನಡೆಯಲಿದೆ.

ರಫೇಲ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಪಟ್ಟಂತೆ ಎರಡು ದೇಶಗಳ ನ್ಯಾಯಾಲಯಗಳ ತೀರ್ಪು ವ್ಯತಿರಿಕ್ತವಾಗಿದ್ದರೆ ಈ ದಂಧ್ವಗಳನ್ನು ನಿವಾರಿಸಲು ಖಂಡಿತವಾಗಿಯೂ ಕೇಂದ್ರ ಸರಕಾರ ಜೆಪಿಸಿ ತನಿಖೆಗೆ ಒಪ್ಪಿಕೊಂಡು ದೇಶದ ಜನರಿಗೆ ಮತ್ತೊಮ್ಮೆ ಸತ್ಯ ತಿಳಿಸಬೇಕಾದ ಅನಿವಾರ್ಯತೆ ಎದುರಾ ಗುತ್ತದೆ. ಪ್ರಸಕ್ತ ಕೇಂದ್ರ ಸರಕಾರ ಏಳು ವರ್ಷಗಳ ಅವಧಿಯಲ್ಲಿ ನಯಾ ಪೈಸೆಯ ಭ್ರಷ್ಟಾಚಾರ ನಡೆದಿಲ್ಲವೇ? ಇಲ್ಲಿಯವರೆಗೆ ಯಾವುದೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ ಎಂದಾದರೆ ದೇಶದ ಜನ ಯಾವ ತೀರ್ಮಾನಕ್ಕೆ ಬರಬೇಕು? ಯಾಕೆಂದರೆ ಆಡಳಿತ ಪಕ್ಷದ ಭ್ರಷ್ಟಾಚಾರವನ್ನು ಜನರ ಮುಂದೆ ಇಡಬೇಕಾದ ಮಹತ್ತರ ಜವಾಬ್ದಾರಿ ಸಹಜವಾಗಿ ಪ್ರತಿಪಕ್ಷಗಳ ಮೇಲೆ ಇರುತ್ತದೆ.

ಗಮನಿಸಬೇಕಾದ ಅಂಶವೆಂದರೆ ದೇಶದಲ್ಲಿ ಭ್ರಷ್ಟಾಚಾರ ವಿರುದ್ಧದ ಹೋರಾಟಗಾರರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮ ಗಳಿಂದಲೂ ಕೇಂದ್ರ ಸರಕಾರದ ವಿರುದ್ಧ ನಿರ್ದಿಷ್ಟ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿಲ್ಲ. ಆದರೆ ಆಡಳಿತ ನೀತಿಗಳು, ಧೋರಣೆಗಳ ವಿರುದ್ಧ ಮಾತ್ರವೇ ಟೀಕೆಗಳು ವ್ಯಕ್ತವಾಗುತ್ತಿದೆ. ಕೇಂದ್ರ ಸರಕಾರದ ಪ್ರತಿಯೊಂದು ನಡೆಯಲ್ಲಿಯೂ ಎಡವುಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರತಿಪಕ್ಷಗಳು ಭ್ರಷ್ಟಾಚಾರದ ಸುಳಿವು ಸಿಕ್ಕಿದ್ದರೆ ಸುಮ್ಮನೆ ಕುಳಿತಿರುತ್ತಿತ್ತೇ ಎಂಬ ಪ್ರಶ್ನೆ ಮೂಡುತ್ತದೆ.

ರಫೇಲ್ ಹೊರತುಪಡಿಸಿ ಇನ್ಯಾವುದೇ ಭ್ರಷ್ಟಾಚಾರದ ಆರೋಪಗಳು ಕೇಂದ್ರ ಸರಕಾರದ ವಿರುದ್ಧ ಪ್ರತಿಪಕ್ಷಗಳಿಂದ ಕೇಳಿ ಬಂದಿಲ್ಲ. ಅಂದರೆ ಕೇಂದ್ರ ಸರಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ ಎಂಬುದನ್ನು ಪ್ರತಿಪಕ್ಷಗಳು ಪರೋಕ್ಷವಾಗಿ ಸಾಬೀತು ಮಾಡಿದಂತಾಯಿತು. ಇಲ್ಲಿ ಒಂದು ವಿಚಾರ ಮನದಟ್ಟಾಗುತ್ತದೆ ಅಥವಾ ನಾವು ಹಾಗೇ ಭಾವಿಸಬೇಕಾಗುತ್ತದೆ. ಒಂದೋ ಕೇಂದ್ರ ಸರಕಾರದಿಂದ ಯಾವುದೇ ರೀತಿಯ ಭ್ರಷ್ಟಾಚಾರ ಇಲ್ಲಿಯವರೆಗೆ ನಡೆದಿಲ್ಲ. ಅಥವಾ ಅದನ್ನು ಪತ್ತೆ ಹಚ್ಚಿ ಬಯಲು ಮಾಡಲು ಪ್ರತಿಪಕ್ಷಗಳು ವಿಫಲವಾಗಿವೆ.

ಕೆಲವೊಂದು ಸನ್ನಿವೇಶಗಳಲ್ಲಿ ಸರಕಾರದ ನಿಲುವಿಗೆ ಪೂರಕವಾದ ತೀರ್ಪುಗಳು ನ್ಯಾಯಾಲಯಗಳಿಂದ ಹೊರಬಿದ್ದಾಗ ಸರಕಾರದ ಅಣತಿಯಂತೆ ನ್ಯಾಯಾಲಯಗಳು ವರ್ತಿಸುತ್ತವೆ ಎಂಬ ಅಪಸ್ವರಗಳು ಕೇಳಿ ಬರುವುದನ್ನು ಗಮನಿಸಿದ್ದೇವೆ. ಅದರಲ್ಲೂ ಕೆಲವು ಸೂಕ್ಷ್ಮ ವಿಚಾರಗಳಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ತೀರ್ಪು ನೀಡಿದ ನ್ಯಾಯಾಧೀಶರುಗಳಿಗೆ ನಿವೃತ್ತಿ ಬಳಿಕ ಉನ್ನತ ಹುದ್ದೆ, ಸ್ಥಾನಮಾನ ಗಳನ್ನು ನೀಡಿದಾಗ ಅನಪೇಕ್ಷಿತ ವ್ಯಾಖ್ಯಾನಗಳು ಕೇಳಿ ಬರುವುದು ಸಾಮಾನ್ಯ. ಅಂತಹುದೇ ಸನ್ನಿವೇಶವನ್ನು ಈಗ ನಾವು ಕಾಣುತ್ತಿದ್ದೇವೆ.

ರಫೇಲ್ ಪ್ರಕರಣದಲ್ಲಿ ಕೇಂದ್ರ ಸರಕಾರಕ್ಕೆ ಕ್ಲೀನ್‌ಚಿಟ್ ನೀಡಿದ್ದಾಗ ಸುಪ್ರೀಂ ಕೋರ್ಟ್ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಯಾಗಿದ್ದವರು ರಂಜನ್ ಗೊಗೊಯ.
ಮಾತ್ರವಲ್ಲದೇ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಬಳಿಕ ಹಲವು ಸೂಕ್ಷ್ಮ ಪ್ರಕರಣದ ತೀರ್ಪುಗಳನ್ನು ನೀಡಿದ ಪೀಠದಲ್ಲಿದ್ದವರು. ಅವರನ್ನು ಕೇಂದ್ರ ಸರಕಾರ ಇತ್ತೀಚೆಗೆ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದಾಗ ಒಂದಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ಆದರೆ ಇದು ನಿವೃತ್ತ ನ್ಯಾಯಾಧೀಶರಿಗೆ ಹುದ್ದೆ, ಸ್ಥಾನಮಾನಗಳನ್ನು ನೀಡಿದ ಮೊದಲ ಪ್ರಕರಣವಲ್ಲ.

ಜನವರಿ 12, 2018ರಂದು ಅಂದಿನ ಸಿಜೆಐ ದೀಪಕ್ ಮಿಶ್ರಾ ಅವರ ಕಾರ್ಯವೈಖರಿ ಮತ್ತು ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸಾರ್ವಜನಿಕ ಪತ್ರಿಕಾಗೋಷ್ಠಿ ಯನ್ನು ನಡೆಸಿದ ನ್ಯಾಯಾಧೀಶರುಗಳಾದ ಚಲಮೇಶ್ವರ್, ಮದನ್ ಬಿ ಲೋಕುರ್ ಮತ್ತು ಕುರಿಯನ್ ಜೋಸೆಫ್ ಜತೆಯಲ್ಲಿದ್ದ ಇದೇ ರಂಜನ್ ಗೊಗೊಯ್ ಮತ್ತು ಅವರ ತಂಡದವರಿಗೆ ಆಗ ಬೆಂಬಲ ಸೂಚಿಸಿದ್ದು ಇದೇ ಪ್ರತಿಪಕ್ಷಗಳು. ನ್ಯಾಯಾಂಗದ ವಿಚಾರದಲ್ಲಿ ಈ ರಾಜಕೀಯ ಪಕ್ಷಗಳ ನಿಲುವುಗಳು ಕಾಲಕಾಲಕ್ಕೆ ಬದಲಾಗುತ್ತವೆ.

ರಫೇಲ್ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಕ್ಲೀನ್‌ಚಿಟ್ ನೀಡಿದಾಗ ನ್ಯಾಯಾಲಯವನ್ನು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶಂಸಿಸಿದ ಆಡಳಿತ ಪಕ್ಷ ಕರೋನಾ ಸೋಂಕಿತರಿಗೆ ಆಕ್ಸಿಜನ್ ವಿಚಾರದಲ್ಲಿ ಕೇಂದ್ರ ಸರಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಾಗ ಶಾಸಕಾಂಗದಲ್ಲಿ ನ್ಯಾಯಾಲಯ ಹಸ್ತಕ್ಷೇಪದ ಆರೋಪಗಳು ಕೇಳಿ ಬಂತು. ಹಾಗೆಯೇ ರಫೇಲ್ ತೀರ್ಪಿನ ಬಗ್ಗೆ ಅತೃಪ್ತಿ ಹೊಂದಿದ್ದ ಪ್ರತಿಪಕ್ಷಗಳು ಆಕ್ಸಿಜನ್ ವಿಚಾರದಲ್ಲಿ ಕೇಂದ್ರ ಸರಕಾರವನ್ನು
ತರಾಟೆಗೆ ತೆಗೆದುಕೊಂಡಾಗ ಸುಪ್ರೀಂ ಕೋರ್ಟ್ ನಡೆಯನ್ನು ಪ್ರಶಂಸಿಸಿತ್ತು.

ಈಗ ಮತ್ತೆ ಮುನ್ನೆಲೆಗೆ ಬಂದ ರಫೇಲ್ ವಿವಾದ – ನ್ಯಾಯಾಲಯದ ತೀರ್ಪನ್ನು ಕೇಂದ್ರೀಕರಿಸಿದೆ. ಅಲ್ಲಿನ ತೀರ್ಪು ಭಾರತದ ಸುಪ್ರೀಂ ಕೋರ್ಟ್‌ ನ ತೀರ್ಪಿಗೆ ವ್ಯತಿರಿಕ್ತವಾದರೆ ಈ ವಿವಾದ ಇನ್ನಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಒಂದು ವೇಳೆ ಅಲ್ಲಿನ ತೀರ್ಪು ಭಾರತದ ಸುಪ್ರೀಂ
ಕೋರ್ಟ್‌ನ ತೀರ್ಪಿಗೆ ಪೂರಕವಾಗಿ ಹೊರಬಿದ್ದರೆ ಮೋದಿಯವರ ಪ್ರಸಿದ್ಧ ಘೋಷವಾಕ್ಯ ‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಮತ್ತೆ ಮೊಳಗಲಿದೆ.