Saturday, 14th December 2024

ಅದೇ ರಾಗಾ ಇಲ್ಲಿ ಬಂದು ಹಾಡದಿದ್ದರೇ ಲೇಸು !

ಅಶ್ವತ್ಥಕಟ್ಟೆ

ranjith.hoskere@gmail.com

ಕಾಂಗ್ರೆಸ್ ಪ್ರಚಾರವನ್ನು ರಾಜ್ಯ ನಾಯಕರನ್ನು ಕೇಂದ್ರೀಕರಿಸಿಯೇ ಮಾಡಿದಂತಿದೆ. ಭಾರತ್ ಜೋಡೋ ಯಾತ್ರೆಯ ವೇಳೆ, ರಾಹುಲ್ ಗಾಂಧಿ ಅವರು ರಾಜ್ಯದ ಬಗ್ಗೆ ಮಾತನಾಡಿದ್ದು ಬಿಟ್ಟರೆ, ಇಲ್ಲಿಯವರೆಗೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ ಆಲೋಚನೆಯಲ್ಲಿಯೂ ರಾಹುಲ್ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ಯಾವುದೇ ಚುನಾವಣೆಯಿರಲಿ, ಪ್ರಚಾರ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಚದುರಂಗದಾಟ ದಲ್ಲಿ ಅದರಲ್ಲಿಯೂ ರಾಷ್ಟ್ರೀಯ ಪಕ್ಷಗಳ ವಿಷಯ ದಲ್ಲಿ ಯಾವುದೇ ಚುನಾವಣೆ ಎದುರಾದರೂ, ಕಾರ್ಯ ಕರ್ತರ, ಸ್ಥಳೀಯ ನಾಯಕರ ಪಾಲು ಶೇ.೯೦ರಷ್ಟಿದ್ದರೆ ವರಿಷ್ಠರು ವಿಧಾನಸಭಾ ಚುನಾವಣೆಯಲ್ಲಿ ಶ್ರಮಿಸುವ ಪಾಲು ಕೇವಲ ೧೦ರಷ್ಟಿರುತ್ತದೆ. ಅದು ‘ಮತ’ಗಳನ್ನು ಸೆಳೆಯುವು ದಕ್ಕೆ ಮಾತ್ರ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೆಸ್ ಪಾಲಿಗೆ ವರಿಷ್ಠರು ‘ಬಂದರೆ ಬರಲಿ’ ಎನ್ನುವ ಲೆಕ್ಕಾಚಾರ ದಲ್ಲಿದ್ದರೆ, ಬಿಜೆಪಿ ಪಾಲಿಗೆ ವರಿಷ್ಠರ ಪ್ರಚಾರವೇ ಮತಬೇಟೆಗಿರುವ ಅಂತಿಮ ಅಸ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದೆ.

ಕರ್ನಾಟಕದ ವಿಧಾನಸಭಾ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆ ಯಾಗಿರುವುದರಿಂದ, ಸಾಮಾನ್ಯವಾಗಿ ಅಬ್ಬರದ ಪ್ರಚಾರ ಮಾಡುತ್ತಿವೆ. ಈ ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್ ರಣತಂತ್ರದಲ್ಲಿ ಕುಮಾರಸ್ವಾಮಿ ಅವರೊಬ್ಬರೇ ಪ್ರಚಾರಕ್ಕಿಳಿದಿದ್ದರೆ, ಈ ಎರಡೂ ಪಕ್ಷಗಳಿಗೂ ಹಲವಾರು ‘ಅಸ’ಗಳಿವೆ. ಆದರೆ ಸದ್ಯದ ಮಟ್ಟಿಗೆ ಗಮನಿಸುವುದಾದರೆ, ಬಿಜೆಪಿಗೆ ‘ರಾಷ್ಟ್ರೀಯ ನಾಯಕ’ರ ಅಸವೇ ಅಂತಿಮ ಎನಿಸಿದ್ದರೆ, ಕಾಂಗ್ರೆಸ್ ನಾಯಕರಿಗೆ ‘ರಾಜ್ಯ ನಾಯಕರೇ’ ಬ್ರಹ್ಮಾಸ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಈ ಮೂಲಕ ಎರಡೂ ಪಕ್ಷಗಳ ರಣತಂತ್ರ ತತ್ವಿರುದ್ಧ ದಿಕ್ಕಿನಲ್ಲಿ ಸಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಕಾಂಗ್ರೆಸ್ ನಾಯಕರು ರಾಜ್ಯ ನಾಯಕತ್ವವನ್ನೇ ನೆಚ್ಚಿಕೊಂಡು ಪ್ರಚಾರಕ್ಕೆ ಇಳಿದಿದ್ದರೆ, ಅತ್ತ ಆಡಳಿತಾರೂಢ ಬಿಜೆಪಿ ವರಿಷ್ಠರು ಮಾತ್ರ, ಕರ್ನಾಟಕದಲ್ಲಿ ಚುನಾವಣೆಗೆ ನಾಲ್ಕೈದು ತಿಂಗಳಿರುವಾಗಲೇ ಕರ್ನಾಟಕದಲ್ಲಿ ಗಿರಕಿ ಹೊಡೆಯಲು ಶುರು ಮಾಡಿದ್ದರೆ. ಇದಕ್ಕೆ ವಿರುದ್ಧ ಎನ್ನುವಂತೆ
ಕಾಂಗ್ರೆಸ್ ಮಾತ್ರ ವರಿಷ್ಠರತ್ತ ನೋಡದೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಡೀ ಪ್ರಚಾರದ ನೊಗ ಹೊತ್ತಿರುವಂತೆ ತೋರುತ್ತಿದೆ.  ಕರ್ನಾಟಕದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ, ರಾಜ್ಯದತ್ತ ಹೆಚ್ಚು ಗಮನ ಹರಿಸಿಲ್ಲ ಎನ್ನುವುದನ್ನು ಅವರು ಭಾಗವಹಿಸಿರುವ ರ‍್ಯಾಲಿ ಅಥವಾ ಸಮಾವೇಶಗಳ ಸಂಖ್ಯೆಯಲ್ಲಿಯೇ ಸ್ಪಷ್ಟವಾಗಿ ತೋರುತ್ತಿದೆ.

ಹಾಗೇ ನೋಡಿದರೆ, ಕಾಂಗ್ರೆಸ್ ಇಡೀ ಪ್ರಚಾರವನ್ನು ರಾಜ್ಯ ನಾಯಕರನ್ನು ಕೇಂದ್ರೀಕರಿಸಿಯೇ ಮಾಡಿದಂತಿದೆ. ಭಾರತ್ ಜೋಡೋ ಯಾತ್ರೆಯ ವೇಳೆ, ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಸಾಗುವಾಗ ರಾಜ್ಯದ ಬಗ್ಗೆ ಮಾತನಾಡಿದ್ದು, ಬಿಟ್ಟರೆ ಇಲ್ಲಿಯವರೆಗೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ ಎನ್ನುವ ಯಾವ ಆಲೋಚನೆಯಲ್ಲಿಯೂ ರಾಹುಲ್ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಇನ್ನು ಒಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಮೂರ‍್ನಾಲ್ಕು ಗಂಟೆಯ ಲೆಕ್ಕಕ್ಕೆ ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ ಆಗಮಿಸಿದ್ದು, ಬಿಟ್ಟರೆ ಮತ್ತೊಮ್ಮೆ ತಲೆ ಹಾಕಿಲ್ಲ. ಇನ್ನು ಕರ್ನಾಟಕದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೊರಟಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಟ್ಟರೆ ಇನ್ಯಾವ ಸಮಾವೇಶ ದಲ್ಲಿಯೂ ಕಾಣಿಸಿಕೊಂಡಿಲ್ಲ.

ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಆರಂಭದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಬಸ್ ಯಾತ್ರೆ ಮಾಡಿದ್ದರು. ಇದಾದ ಬಳಿಕ ಇಬ್ಬರು ದಕ್ಷಿಣ ಹಾಗೂ ಉತ್ತರವೆಂದು ಹಂಚಿಕೊಂಡು, ನಿತ್ಯ ಎರಡರಿಂದ ಮೂರು ಸಮಾವೇಶ, ಕ್ಷೇತ್ರಗಳಲ್ಲಿ ಭಾಗವಹಿಸಿ, ಪಕ್ಷ ಸಂಘಟನೆ ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದರೂ, ಈ ಹಂತದವರೆಗೆ ಕಾಂಗ್ರೆಸ್‌ನ ವರಿಷ್ಠರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಯಾವ್ಯಾವ ದಿನದಂದು ಕರ್ನಾಟಕಕ್ಕೆ ಆಗಮಿಸ ಲಿದ್ದಾರೆ? ಎಷ್ಟು ಕ್ಷೇತ್ರಗಳಿಗೆ ಹೋಗಲಿದ್ದಾರೆ? ಈ ಮೂವರನ್ನು ಹೊರತುಪಡಿಸಿ ದೆಹಲಿಯಿಂದ ಯಾವ್ಯಾವ ನಾಯಕರು ಆಗಮಿಸುತ್ತಾರೆ ಎನ್ನುವ ಯಾವುದೇ ಸ್ಪಷ್ಟತೆ ಸ್ವತಃ ಕಾಂಗ್ರೆಸ್ ನಾಯಕರಿಗಿಲ್ಲ.

ಆದರೆ ಇದಕ್ಕೆ ತತ್ವಿರುದ್ಧದ ರೀತಿಯಲ್ಲಿ ಬಿಜೆಪಿಯಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ಮೊದಲೇ ಹೇಳಿದಂತೆ, ಚುನಾವಣೆಗೆ ನಾಲ್ಕೈದು ತಿಂಗಳು ಇರುವಾಗಲೇ ಬಿಜೆಪಿಯ ಇಡೀ ದಂಡೆ ಕರ್ನಾಟಕಕ್ಕೆ ಆಗಮಿಸುತ್ತಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದಿಲ್ಲೊಂದು ಸರಕಾರಿ ಕಾರ್ಯಕ್ರಮಗಳ ನೆಪದಲ್ಲಿ ಕರ್ನಾಟಕ್ಕೆ ಆಗಮಿಸಿ, ಮತಗಳ ಧೃವೀಕರಣಕ್ಕೆ ಅಬ್ಬರದಲ್ಲಿ ಕಾರ್ಯ ನಿರ್ವಹಿಸು ತ್ತಿದ್ದರೆ, ಇತ್ತ ಸಮಾವೇಶಗಳ ನೆಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕರ್ನಾಟಕಕ್ಕೆ ಆಗಮಿಸಿ, ಮತಗಳನ್ನು ಸೆಳೆಯುವ ಪ್ರಯತ್ನ ವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಈ ರೀತಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ದಿಕ್ಕಿನಂತೆ ಪ್ರಚಾರದಲ್ಲಿ ಅಸಗಳನ್ನು ಬಳಸಿಕೊಳ್ಳುವುದಕ್ಕೂ ಹಲವು ಕಾರಣಗಳಿವೆ. ಮೊದಲಿಗೆ ಕಾಂಗ್ರೆಸ್‌ನಲ್ಲಿ ನೋಡುವುದಾದರೆ, ವಯಸ್ಸಿನ ಕಾರಣ ಹಾಗೂ ಆರೋಗ್ಯ ಕಾರಣಕ್ಕೆ ಸೋನಿಯಾ ಗಾಂಧಿ ಅವರು ಸದ್ಯಕ್ಕೆ ಸಕ್ರಿಯವಾಗಿ ಪ್ರಚಾರ ದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನು ರಾಹುಲ್ ಗಾಂಧಿ ಅವರಾಗಲಿ, ಪ್ರಿಯಾಂಕಾ ಗಾಂಧಿಯಾಗಲಿ ಪ್ರಚಾರದಲ್ಲಿ ಭಾಗವಹಿಸಿದರೆ, ಮತಗಳು ‘ಪ್ಲಸ್’ ಆಗುವುದಕ್ಕಿಂತ ‘ಮೈನಸ್’ ಆಗುವ ಆತಂಕ ಹಲವು ನಾಯಕರಲ್ಲಿದೆ.

ಈ ಹಿಂದಿನ ಹಲವು ಚುನಾವಣೆಗಳಲ್ಲಿ, ರಾಹುಲ್ ಪ್ರಚಾರ ಸಮಯದಲ್ಲಿ ಆಡುವ ಕೆಲವೊಂದು ‘ಡ್ಯಾಮೇಜಿಂಗ್’ ಮಾತುಗಳು ಇಡೀ ಚುನಾವಣಾ
ಚಿತ್ರಣವನ್ನೇ ಬದಲಾಯಿಸಿರುವ ಉದಾಹರಣೆಗಳಿವೆ. ಇನ್ನು ಉತ್ತರ ಪ್ರದೇಶದಲ್ಲಿ ‘ಅಚ್ಚರಿ’ಯ ರೀತಿಯಲ್ಲಿ ಇಡೀ ಪ್ರಚಾರವನ್ನು ಪ್ರಿಯಾಂಕಾ ಹೆಗಲಿಗೆ ಹಾಕಲಾಗಿತ್ತು. ಆದರೆ ಫಲಿತಾಂಶ ಮಾತ್ರ ‘ಶೂನ್ಯ’ವಾಗಿತ್ತು. ಇನ್ನಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು. ಅವರಿಂದ ಪಕ್ಷಕ್ಕೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಸ್ಥಳೀಯ ನಾಯಕರಿದ್ದಾರೆ. ಆದರೆ ಖರ್ಗೆ ಅವರ ‘ಹವಾ’ ಇಡೀ ಕರ್ನಾಟಕದ ಮೇಲೆ ಪರಿಣಾಮ ಬೀರುವುದೇ? ಅಥವಾ ಕೇವಲ ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾಗುವುದೇ ಎನ್ನುವ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಇದನ್ನು ಹೊರತುಪಡಿಸಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ, ಈಗಾಗಲೇ ಉತ್ತಮ ರೀತಿಯಲ್ಲಿ ಪ್ರಚಾರ ಕೈಗೆತ್ತಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಬಾರದಂತೆ
ನೋಡಿಕೊಳ್ಳುವುದೊಂದೇ ಮಹತ್ವದ ಕಾರ್ಯವಾಗಿದೆ. ಈ ವಿಷಯದಲ್ಲಿ ರಾಜ್ಯ ಬಿಜೆಪಿಗೆ ‘ವರ’ವಾಗಿ ಕೇಂದ್ರದ ವರಿಷ್ಠರ ಪಟ್ಟಿಯಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ
ಆದಿತ್ಯನಾಥ್ ಹೀಗೆ, ಪಟ್ಟಿ ದೊಡ್ಡದಾಗಿಯೇ ಇದೆ. ಆ ಕಾರಣಕ್ಕಾಗಿಯೇ ಇಡೀ ಪ್ರಚಾರವನ್ನು ಕೇಂದ್ರದ ನಾಯಕರ ಕೈಯಲ್ಲಿಟ್ಟು, ಸ್ಥಳೀಯ ನಾಯಕರು ‘ಅವರೊಂದಿಗೆ ಹೋಗಿ ಬರುವ’ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಹಾಗೇ ನೋಡಿದರೆ ಬಿಜೆಪಿ ಪಾಲಿಗೆ ಮಾಸ್ ಲೀಡರ್ ಆಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಲವಿದೆ. ಕಳೆದ ಹಲವು
ಚುನಾವಣೆಗಳನ್ನು ಅವರ ನೇತೃತ್ವದಲ್ಲಿ ಬಿಜೆಪಿ ಎದುರಿಸಿ, ಉತ್ತಮ ಫಲಿತಾಂಶವನ್ನು ಪಡೆದಿದೆ. ಆದರೆ ಈ ಬಾರಿ ಅವರಿಗೆ ‘ಮಾಸ್’ಯಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿರುವುದರಿಂದ, ‘ಅವರಿಗೆ ಹಾಕುವ ಜಯಘೋಷ’ಗಳು ಮತವಾಗಿ
ಪರಿವರ್ತನೆಯಾಗುವುದು ಅನುಮಾನ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. ಅವರನ್ನು ಹೊರತುಪಡಿಸಿ, ರಾಜ್ಯ ಬಿಜೆಪಿಯಲ್ಲಿ ಆ ಮಟ್ಟಿಗಿನ ‘ಮಾಸ್ ಲೀಡರ್‌ಶಿಪ್’ ಗುಣವನ್ನು ರಾಜ್ಯ ಮತದಾರರಿನ್ನು ಗುರುತಿಸಿಲ್ಲ.

ಆದ್ದರಿಂದ ಅನಿವಾರ್ಯವಾಗಿ ಬಿಜೆಪಿ ರಾಜ್ಯ ಘಟಕ ತಮ್ಮ ಟ್ರಂಪ್ ಕಾರ್ಡ್ ಆಗಿರುವ ಮೋದಿ ಅವರನ್ನೇ ಬಳಸಿಕೊಳ್ಳಬೇಕಾಗಿದೆ. ಈ ಕಾರಣ ಕ್ಕಾಗಿಯೇ ಅವರೂ ಪದೇಪದೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ. ಆದರೆ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್,
ಜೆ.ಪಿ ನಡ್ಡಾ ಇವರೆಲ್ಲರ ಸಮಾವೇಶಗಳಿಗೂ ಜನ ಭಾರಿ ದೊಡ್ಡ ಪ್ರಮಾಣದಲ್ಲಿ ಆಗಮಿಸಬಹುದು. ಜಯಘೋಷ ಕೂಗಬಹುದು, ರೋಡ್ ಶೋಗಳಿಗೆ ಕಿಮೀಗಟ್ಟಲೇ ಜನ ಸೇರಬಹುದು. ಆದರೆ ಈ ಎಲ್ಲರೂ ಬಿಜೆಪಿ ಪರ ಮತ ಹಾಕುವುದಕ್ಕೆ ಸ್ಥಳೀಯ ನಾಯಕತ್ವವನ್ನು ಹುಡುಕುತ್ತಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಗುಜರಾತ್‌ನಲ್ಲಿ ಮೋದಿ, ಶಾ ಜೋಡಿಯ ಮುಖ ನೋಡಿ ಮತ ನೀಡಿದ್ದು, ನಮ್ಮ ರಾಜ್ಯದವರು ಎನ್ನುವ ‘ಕನೆಕ್ಟ್’ಗೆ. ಆಷ್ಟೇ ದೊಡ್ಡ ಪ್ರಮಾಣದಲ್ಲಿ ಕರ್ನಾಟಕದ ಜನರು ಮೋದಿ, ಅಮಿತ್ ಶಾ ಅವರನ್ನು ಒಪ್ಪಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಗೆ ಬಿಜೆಪಿಗರ ಬಳಿಯೇ ಉತ್ತರವಿಲ್ಲವಾಗಿದೆ.ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ತದ್ವಿರುದ್ಧ ದಿಕ್ಕಿನಲ್ಲಿ ತಮ್ಮ ಪ್ರಚಾರದ ‘ಐಕಾನ್’ಗಳನ್ನು ಬಳಸಿಕೊಳ್ಳುತ್ತಿವೆ. ರಾಜ್ಯದ ನಾಯಕತ್ವ ವನ್ನು ನೋಡಿ ಕಾಂಗ್ರೆಸ್‌ಗೆ ಮತದಾರರು ‘ಜೈ’ ಎನ್ನುವರೋ ಅಥವಾ ಬಿಜೆಪಿಯಲ್ಲಿ ವರಿಷ್ಠರ ಮಾತುಗಳನ್ನು ಒಪ್ಪಿ ರಾಜ್ಯ ಬಿಜೆಪಿ ನಾಯಕರನ್ನೇ ಅಪ್ಪಿಕೊಳ್ಳುವರೋ ಎನ್ನುವುದನ್ನು ಮತದಾನದ ದಿನವೇ ಸ್ಪಷ್ಟವಾಗಲಿದೆ.