Friday, 13th December 2024

ಪಾದಯಾತ್ರೆ ರಾಹುಲ್ ಕೈ ಹಿಡಿಯುವುದಾ ?

ಪ್ರಸ್ತುತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯು ಸಂಪನ್ನಗೊಂಡಿದೆ. ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಿ 146 ದಿನಗಳ ತರುವಾಯ ಜನವರಿ ೩೦ರಂದು ಶ್ರೀನಗರದಲ್ಲಿ ಮುಕ್ತಾಯಗೊಂಡಿದೆ. ೩,೭೫೦ ಕೀ.ಮಿ.  ಪಾದ ಯಾತ್ರೆಯು ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಮತ್ತೊಮ್ಮೆ ಜೀವಕೊಡಲು ನಡೆಸಿದ ಕಸರತ್ತಾಗಿತ್ತು.

ದಿನನಿತ್ಯ ೨೦ ಕಿಮಿ. ನಡೆದು ತಮ್ಮ ಯೋಜಿತ ಗುರಿ ತಲುಪುವಲ್ಲಿ ಯಶಸ್ವಿಯಾದರು. ರಾಜಕೀಯ ಹೊರಗಿಟ್ಟು ನೋಡಿದಾಗ ಇದೊಂದು ಪ್ರಶಂಸನೀಯ ಪ್ರಯತ್ನ ಎಂಬು ದರಲ್ಲಿ ಎರಡನೇ ಮಾತಿಲ್ಲ. ರಾಜಕೀಯ ನಾಯಕರುಗಳು ತಮ್ಮ ರಾಜಕೀಯ ಭವಿಷ್ಯಕ್ಕೆ ಪುನಃಶ್ಚೇತನ ಪಡೆಯಲೊ ಅಥವಾ ತಮ್ಮ ಪಾರ್ಟಿಗೆ ಚೈತನ್ಯ ತುಂಬಿಸಲು ಹಾಗೂ ಪಕ್ಷದ ಕಾರ್ಯಸೂಚಿಯನ್ನು ಜನರಿಗೆ ತಲುಪಿಸಿ ಮತ್ತೆ ಅಧಿಕಾರ ಗ್ರಹಣ ಮಾಡಲೋ ಈ ಹಿಂದೆ ಯೂ ಹಲವಾರು ರಾಜಕೀಯ ಯಾತ್ರೆಗಳು ನಡೆದಿವೆ.

ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ೧೯೮೩ರಲ್ಲಿ ೬ ತಿಂಗಳು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ೪,೨೬೦ಕಿ. ಮಿ. ಪಾದಯಾತ್ರೆ ಕೈಗೊಂಡಿದ್ದರು. ಕಾಂಗ್ರೆಸ್ ಮುಖಂಡ ರಾಜಶೇಖರ ರೆಡ್ಡಿಯವರು ಸಂಯುಕ್ತ ಆಂಧ್ರಪ್ರದೇಶದಲ್ಲಿ ಅಂದಿನ ಚಂದ್ರಬಾಬು ನಾಯ್ಡು ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ೬೦ ದಿನಗಳ ೧೫೦೦ ಕಿ.ಮಿ. ಪಾದಯಾತ್ರೆ ಕೈಗೊಂಡಿ ದ್ದರು.

೨೦೧೭ರಲ್ಲಿ ರಾಜಶೇಖರ್ ರೆಡ್ಡಿಯವರ ಪುತ್ರ ಜಗನ್, ೩೪೧ ದಿನಗಳ ಪಾದಯಾತ್ರೆಯ ಮೂಲಕ ೩,೬೪೮ ಕಿ. ಮಿ. ‘ಪ್ರಜಾಸಂಕಲ್ಪ ಯಾತ್ರೆ’ಯನ್ನು ಸೀಮಾಂಧ್ರದಲ್ಲಿ ಕೈಗೊಂಡಿದ್ದರು. ತಂದೆ-ಮಗ ಇಬ್ಬರೂ ಪಾದ ಯಾತ್ರೆಯ ಮೂಲಕ ಅಧಿಕಾರ ಹಿಡಿಯಲು ಸಫಲರಾದರು. ಇದಲ್ಲದೆ ರಥಯಾತ್ರೆಯ ಮೂಲಕ ದೇಶಾದ್ಯಂತ ಸಾವಿರಾರು ಕಿ.ಮಿ.ಪ್ರವಾಸ ಮಾಡಿ ಬಿಜೆಪಿಯ ಬೇರುಗಳನ್ನು
ದೇಶವ್ಯಾಪಿ ವಿಸ್ತರಿಸಿ ದಾಖಲೆ ನಿರ್ಮಿಸಿರುವವರು ಬಿಜೆಪಿಯ ಜ್ಯೇಷ್ಠ ನಾಯಕ ಎಲ.ಕೆ.ಆಡ್ವಾಣಿ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ೧೯೯೦ರಲ್ಲಿ ಐತಿಹಾಸಿಕ ‘ರಾಮರಥ ಯಾತ್ರೆ’ಯನ್ನು ಕೈಗೊಂಡು ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸಿ ಬಿಟ್ಟರು.

ಇವರ ರಥಯಾತ್ರೆಯನ್ನು ಬಿಹಾರದ ಸಮಷ್ಟಿಪುರದಲ್ಲಿ ತಡೆದ ಕಾರಣ ಅಂದಿನ ಕೇಂದ್ರದಲ್ಲಿದ್ದ ವಿ.ಪಿ.ಸಿಂಗ್ ಸರಕಾರ ಪತನ ವಾಯಿತು. ಇನ್ನು ೧೯೯೧ರಲ್ಲಿ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ ಜೋಶಿಯವರು ಕಾಶ್ಮೀರದ ಸಮಸ್ಯೆ ಉಲ್ಬಣಿಸಿದಾಗ ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ‘ಏಕತಾ ಯಾತ್ರೆ’ ಕೈಗೊಂಡಿದ್ದರು. ಅಂದು ಅವರಿಗೆ ಸಾಥ್ ಕೊಟ್ಟಿದ್ದು ಇಂದು ಪ್ರಧಾನಿ ಯಾಗಿರುವ ನರೇಂದ್ರಮೋದಿ. ಆನಂತರ, ೧೯೯೩ರಲ್ಲಿ ರಾಜಕೀಯದಲ್ಲಿ ಧರ್ಮ ಬೇಡ ಎಂಬ ಕಾನೂನು ತರಲು ಕೇಂದ್ರ ಸರಕಾರ ಉದ್ದೇಶಿಸಿದಾಗ ಆಡ್ವಾಣಿಯವರು ಇದನ್ನು ವಿರೋಧಿಸಿ ‘ಜನಾದೇಶ ಯಾತ್ರೆ’ ಕೈಗೊಳ್ಳುತ್ತಾರೆ.

ಬಳಿಕ ದೇಶಕ್ಕೆ ಸ್ವಾತಂತ್ರ ಬಂದ ೫೦ನೇವರ್ಷದ ಸ್ವರ್ಣ ಜಯಂತಿಯ ಸಂದರ್ಭದಲ್ಲಿ ಆಡ್ವಾಣಿಯವರು ಮತ್ತೆ ಯಾತ್ರೆಗಾಗಿ ರಥವೇರುತ್ತಾರೆ. 2004ರಲ್ಲಿ ಉಪ ಪ್ರಧಾನಿಯಾಗಿದ್ದ ಆಡ್ವಾಣಿಯವರು ಎನ್‌ಡಿಎ ಸರಕಾರದ ಸಾಧನೆಯನ್ನು ತಿಳಿಸಿ ಮತ್ತೆ ಕೇಂದ್ರದಲ್ಲಿ ಸುಭದ್ರ ಸರಕಾರ ರಚಿಸಲು ‘ಭಾರತ ಉದಯ ಯಾತ್ರೆ’ ಕೈಗೊಂಡರು. ಮಾತ್ರವಲ್ಲ, 2013ರಲ್ಲಿ ಕೇಂದ್ರದ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ದ ದೇಶದುದ್ದಗಲಕ್ಕೂ ಪುನಃ ‘ಜನಚೇತನ ಯಾತ್ರೆ’ ಕೈಗೊಳ್ಳುತ್ತಾರೆ.

ಆಡ್ವಾಣಿಯವರ ಹಾಗೆ ಹಲವು ಬಾರಿ ರಥಯಾತ್ರೆ ಕೈಗೊಂಡ ಮತ್ತೊಂದು ಉದಾಹರಣೆ ಇಲ್ಲ. ದೇಶವನ್ನು ಕಾಡುತ್ತಿದ್ದ ಜ್ವಲಂತ ಸಮಸ್ಯೆಯನ್ನು ಮುಂದಿಟ್ಟುಕೊಂಡು ಯಾತ್ರೆಯ ಮೂಲಕ ಜನರಲ್ಲಿ ಜಾಗೃತಿಯುಂಟು ಮಾಡಿದ ‘ಮಹಾರಥಿ’ ಅವರು. ಆದರೆ, ‘ಭಾರತ ಜೋಡೋ ಯಾತ್ರೆ’ಯು ರಾಜಕೀಯ ಕಾರಣಗಳಿಗೆ ನಡೆದ ಪಾದಯಾತ್ರೆಯಾದರೂ ಈ ಯಾತ್ರೆಗೆ ರಾಜಕೀಯ ಉದ್ದೇಶ ವಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

2014ರ ತನಕ ಹತ್ತು ವರ್ಷ ಅಽಕಾರದಲ್ಲಿದ್ದ ಕಾಂಗ್ರೆಸ್, ಮೋದಿಯವರ ರಂಗ ಪ್ರವೇಶದ ತರುವಾಯ ದೇಶಾದ್ಯಂತ ಎಡೆ ಸಾಲು ಸಾಲು ಪರಾಭವ ಅನುಭವಿಸಿತು. ಪಕ್ಷದ ಅತಿ ರಥ-ಮಹಾರಥ ನಾಯಕರುಗಳು ಒಬ್ಬೊಬ್ಬರಾಗಿ ಪಕ್ಷವನ್ನು ತೊರೆದು ಕಾಂಗ್ರೆಸ್ ತನ್ನ ಅಸ್ತಿತ್ವಕ್ಕೇ ಪರದಾಡುವ ಸ್ಥಿತಿ ತಲುಪಿದೆ. ಬಿಜೆಪಿಯ ಆಕ್ರಮಣಕಾರಿ ಪ್ರಚಾರದ ಅಬ್ಬರಕ್ಕೆ ಸೊರಗಿದ್ದ ಕಾಂಗ್ರೆಸ್‌ಗೆ ಮತ್ತೆ ಪುಟಿದೇಳುವ ಅವಶ್ಯಕತೆ ಇತ್ತು. ಇದಲ್ಲದೆ ಸ್ವತಃ ರಾಹುಲ್ ಗಾಂಧಿಯವರು ತಾವೊಬ್ಬ ಗಂಭೀರ ವ್ಯಕ್ತಿತ್ವದ ಪೂರ್ಣಾವಧಿ ರಾಜಕಾರಣಿ ಎಂದು ದೇಶದ ಜನರಿಗೆ ಮನವರಿಕೆ ಮಾಡಿ ಕೊಡುವ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಅವರು ಕನ್ಯಾ ಕುಮಾರಿಯಿಂದ ಕಾಶ್ಮೀರದವರಗೆ ಭಾರತ ಜೋಡೋ ಯಾತ್ರೆಯನ್ನು ಕೈಗೊಂಡರು.

ಈ ಯಾತ್ರೆಯ ಉದ್ದಕ್ಕೂ ರಾಹುಲ್ ಗಾಂಧಿಯವರು ಪ್ರಮುಖವಾಗಿ ಪ್ರಸ್ತಾಪಿಸಿದ ವಿಷಯಗಳು ನಿರುದ್ಯೋಗ, ದೇಶದಲ್ಲಿ ಭೀತಿಯ ವಾತಾವರಣವಿದೆ, ಹಣದುಬ್ಬರ, ದ್ವೇಷ ಜನರನ್ನು ಧರ್ಮದ ಆಧಾರದ ಮೇಲೆ ಒಡೆಯಲಾಗುತ್ತಿದೆ ಎಂಬುದು. ಆದರೆ, ರಾಹುಲ್ ಯಾತ್ರೆಯ ಬಹುದೊಡ್ಡ ಕೊರತೆಯೆಂದರೆ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯಲು ವಿಫಲವಾಗಿದ್ದು ಮತ್ತು ಅವರ ಬತ್ತಳಿಕೆಯಲ್ಲಿ ಮೋದಿ ಸರಕಾರದ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಲು ಒಂದೇ ಒಂದು ಅಸ್ತ್ರವು ಇರಲಿಲ್ಲ.

ಡಿಮಾನಿಟೈಸೇಶನ್ ತರುವಾಯ ಸಾವಿರಾರು ಕಂಪನಿಗಳು ಬಾಗಿಲು ಹಾಕಬೇಕಾಯಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿ ಹೋಗಿ ಲಕ್ಷಾಂತರ ಯುವಕರಿಗೆ ಉದ್ಯೋಗ ನಷ್ಟವಾಯಿತು ಎಂದು ಆಪಾದಿಸಿದರು. ಆದರೆ ಇದನ್ನು ಸಮರ್ಥಿಸಿ ಕೊಳ್ಳಲು ಮುಚ್ಚಿ ಹೋಗಿದ್ದ ಕನಿಷ್ಠ ಹತ್ತು ಕಂಪನಿ ಗಳ ಹೆಸರನ್ನೂ ನೀಡಲಿಲ್ಲ. ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಅವರ ಬಳಿ ಸೂಕ್ತ ಆಧಾರಗಳೇ ಇರಲಿಲ್ಲ.

ಹಿರಿಯೂರಿನಲ್ಲಿ ಆಯೋಜಿಸಿದ್ದ ನಿರುದ್ಯೋಗಿ ಯುವಕ- ಯುವತಿಯರ ಸಭೆಗೆ ಆಗಮಿಸಿದ್ದ ೨೦೦೦ ಯುವಕ ಮತ್ತು ಯುವತಿ ಯರು ಸಮವಸ್ತ್ರ ಧರಿಸಿ ಪಾಲ್ಗೊಂಡಿದ್ದರು. ಸಭೆಯ ಕಾರ್ಯಕಲಾಪವು ಕೇವಲ ರಾಜಕೀಯ ಉದ್ದೇಶದಿಂದ ನಡೆದಿದ್ದು ಎಂಬುದು ನಿಚ್ಚಳವಾಗಿ ಕಾಣುತ್ತಿತ್ತು. ಭಾಗವಹಿಸಿದ್ದ ನಿರುದ್ಯೋಗಿಗಳ ವಿದ್ಯಾರ್ಹತೆ ಮತ್ತು ಎಷ್ಟು ವರ್ಷದಿಂದ ಉದ್ಯೋಗ ವಿಲ್ಲದೆ ಇದ್ದಾರೆ ಎಂಬ ಮಾಹಿತಿಯು ನೀಡಿದ್ದರೆ ಸಭೆಯ ವಿಶ್ವಾಸಾರ್ಹತೆ ಹೆಚ್ಚುತ್ತಿತ್ತು.

ಬೆಲೆಯೇರಿಕೆಯ ಬಗ್ಗೆ ಇವರ ನಿಲುವು ಕೇವಲ ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲ್‌ಗೆ ಸಿಮೀತವಾಗಿತ್ತು. ಇಂಧನದ ಬೆಲೆಯನ್ನು ಬಿಜೆಪಿ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹೆಚ್ಚಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯ ವಾಗಲಿಲ್ಲ. ಹಣದುಬ್ಬರ ಯುಪಿಎ ಅವಧಿಯಲ್ಲಿ ಶೇ.೧೧ರ ಗಡಿ ದಾಟಿತ್ತು. ಭಾರತದ ಆರ್ಥಿಕ ಪರಿಸ್ಥಿತಿಯು ಅಪಾಯದ
ಮಟ್ಟ ತಲುಪಿತ್ತು. ಹಗರಣಗಳ ಸರಮಾಲೆಯು ಸರಕಾರವನ್ನು ಕಂಗೆಡಿಸಿತ್ತು. ೫ ಲಕ್ಷ ಕೋಟಿ  NPA ಬ್ಯಾಂಕ್‌ಗಳನ್ನು
ದಿವಾಳಿಯಂಚಿಗೆ ತಂದಿತ್ತು. ಇದಕ್ಕೆ ವ್ಯತಿರಿಕ್ತವಾಗಿ ೨೦೧೪ರ ತರುವಾಯ ಭಾರತದ ಆರ್ಥಿಕ ಸ್ಥಿತಿಯು ಸದೃಢವಾಗಿದೆ.

ಕಳೆದ ಮೂರು ವರ್ಷದಿಂದ ೮೦ಕೋಟಿ ನಾಗರಿಕರು ಉಚಿತ ರೇಷನ್ ಪಡೆಯುತ್ತಿದ್ದಾರೆ. GST ತೆರಿಗೆ ಸಂಗ್ರಹವು ತಿಂಗಳಿಗೆ
೧.೫ಲಕ್ಷ ಕೋಟಿಯನ್ನು ದಾಟಿದೆ. ಕೈಗಾರಿಕಾ ಚಟುವಟಿಕೆ ಕೋವಿಡ್ ಪೂರ್ವ ಸ್ಥಿತಿಯನ್ನು ತಲುಪಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭದತ್ತ ಮುಖ ಮಾಡಿದೆ. ಐಎಂಎಫ್ ಪ್ರಕಾರ ೨೦೨೩ ರಲ್ಲಿ ಭಾರತದ ಆರ್ಥಿಕತೆಯು ಶೇ.೬.೧ ವೇಗದಲ್ಲಿ ಬೆಳೆಯುತ್ತದೆ ಎಂದು ಅಂದಾಜು ಮಾಡಿದೆ. ಇದು ಅಮೆರಿಕ ಮತ್ತು ಚೀನಾ ಹಿಂದಿಕ್ಕಿ ವಿಶ್ವದಲ್ಲೇ ಅತಿ ಹೆಚ್ಚು ವೇಗದ ಅಭಿವೃದ್ಧಿಯ ಸೂಚ್ಯಂಕವಾಗಿದೆ.

ಇನ್ನು ಯಾತ್ರೆಯ ವೇಳೆ ಅನಗತ್ಯವಾಗಿ ಮಹಾಭಾರತವನ್ನು ತಪ್ಪು ತಪ್ಪಾಗಿ ವ್ಯಾಖ್ಯಾನಿಸಿ ಮುಜುಗರ ಅನುಭವಿಸಿದರು. ಶಿವಜೀ ತಪಸ್ವಿ ಆದಕಾರಣ ಬಿಜೆಪಿಯವರು ‘ಹರ ಹರ ಮಹದೇವ’ ಹೇಳಲ್ಲ ಎಂಬ ವಿಚಿತ್ರ ತರ್ಕವನ್ನು ಮುಂದಿಟ್ಟರು. ದೆಹಲಿಯ ಅಸಾಧ್ಯ ಚಳಿಯಲ್ಲಿಯೂ ರಾಹುಲ್ ಕೇವಲ ಟೀ ಶರ್ಟ್ ಧರಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹರಿ ಯ ಬಿಟ್ಟ ಸುದ್ದಿ ಯಾತ್ರೆಯ ಮೂಲ ಉದ್ದೇಶವನ್ನು ನೇಪಥ್ಯಕ್ಕೆ ಸರಿಸಿ ಕೇವಲ ಟೀ ಶರ್ಟ್ ಬಗ್ಗೆಯೇ ಸಾಮಾಜಿಕ ತಾಣಗಳಲ್ಲಿ ಅನೇಕ ದಿನಗಳು ಚರ್ಚೆ ನಡೆಯಿತು.

ಯಾತ್ರೆಗೆ ಮುಖ್ಯವಾಹಿನಿಯ ಮಾಧ್ಯಮಗಳು ಸೂಕ್ತ ಪ್ರಚಾರ ಕೊಡಲಿಲ್ಲ ಎಂಬ ಕಾಂಗ್ರೆಸ್ ಆರೋಪದಲ್ಲಿ ತಥ್ಯವಿಲ್ಲದೆ ಇರಲಿಲ್ಲ. ಆದರೆ, ತಮ್ಮ ಯಾತ್ರೆಯುದ್ದಕ್ಕೂ ಮುಖ್ಯವಾಹಿನಿಗಳೊಂದಿಗೆ ಸಂವಾದ ಅಥವಾ ಸಂದರ್ಶನವಾಗಲಿ ರಾಹುಲ್ ನೀಡದಿರುವುದು ಸಹ ನಿರೀಕ್ಷಿತ ಮಟ್ಟದಲ್ಲಿ ಯಾತ್ರೆಗೆ ಪ್ರಚಾರ ದೊರೆಯದಿರಲು ಪ್ರಮಖ ಕಾರಣವಾಗಿತ್ತು. ೨೦೧೪ರ ಅರ್ಣಬ್ ಗೋಸ್ವಾಮಿ ಸಂದರ್ಶನದ ಕಹಿ ಅನುಭವವವು ಯಾತ್ರೆಯ ವೇಳೆ ಮತ್ತೊಮ್ಮೆ ಯಾವುದೇ ವಿವಾದಕ್ಕೆ ಸಿಲುಕದಿರಲು ಮುಖ್ಯ ವಾಹಿನಿಯ ಮಾಧ್ಯಮಗಳನ್ನು ದೂರವಿಡುವ ನಿರ್ಧಾರ ಕಾಂಗ್ರೆಸ್ ತೆಗೆದುಕೊಂಡ ಹಾಗೆ ಕಾಣುತ್ತಿತ್ತು.

ಯಾತ್ರೆಯ ಬಹು ದೊಡ್ಡ ಕೊರತೆಯೆಂದರೆ ರಾಹುಲ್ ಗಾಂಧಿಯವರು ತಾವು ಪ್ರಸ್ತಾಪಿಸಿದ ಕೇಂದ್ರ ಸರಕಾರದ ವೈಫಲ್ಯಗಳಿಗೆ ತಮ್ಮ ಪರಿಹಾರವೇನು ಎಂದು ಜನರ ಮುಂದೆ ಹೇಳದಿರುವುದು. ಯಾತ್ರೆಯ ವೇಳೆ ಅಲ್ಲಲ್ಲಿ ನಡೆದ ಪತ್ರಿಕಾಗೋಷ್ಠಿಗಳು ಮೋದಿ ಸರಕಾರವನ್ನು ಟೀಕಿಸಲು ಮಾತ್ರ ಸಿಮೀತವಾಗಿತ್ತು. ತಮ್ಮ ಕನಸಿನ ಭಾರತದ ರೂಪರೇಷೆಗಳನ್ನು ಯಾತ್ರೆಯ ಸಂದರ್ಭದಲ್ಲಿ ಜನರಿಗೆ ತಿಳಿಸುವ ಸುವರ್ಣಾವಕಾಶವನ್ನು ಅವರು ಕಳೆದುಕೊಂಡರು.

ಯಾತ್ರೆಯ ವೇಳೆ ಮಕ್ಕಳು, ಯುವಕರು, ಯುವತಿಯರು ಮತ್ತು ಬಿಜೆಪಿಯನ್ನು ಸದಾ ವಿರೋಧಿಸುವ ವ್ಯಕ್ತಿಗಳು ಇವರೊಡನೆ ಹೆಜ್ಜೆ ಹಾಕಿದ ಚಿತ್ರಗಳನ್ನು ಹಂಚಿಕೊಂಡ ಹಾಗೆಯೇ ರಾಹುಲ್ ಗಾಂಽಯವರ ಪ್ರಬುದ್ಧ ವಿಚಾರಗಳನ್ನು ಜನರೊಂದಿಗೆ ಹಂಚಿ ಕೊಂಡಿದ್ದರೆ ಅವರ ವ್ಯಕ್ತಿತ್ವಕ್ಕೆ ಹೆಚ್ಚು ಉಪಯುಕ್ತವಾಗುತ್ತಿತ್ತು. ಯಾತ್ರೆಯ ಆಯೋಜಕರಿಗೆ ಅದರ ಕಡೆ ಗಮನವೇ ಇರಲಿಲ್ಲ.

ಭಾರತ ಜೋಡೋ ಹೆಸರಲ್ಲಿ ಪ್ರತಿಪಕ್ಷಗಳನ್ನು ತಮ್ಮ ಚಾವಣಿಯಡಿಯಲ್ಲಿ ತರುವ ಕಾಂಗ್ರೆಸ್ ಪ್ರಯತ್ನವೂ ವಿಫಲವಾಯಿತು. ೨೩ ಪಕ್ಷಗಳಿಗೆ ಕಳುಹಿಸಿದ್ದ ಆಹ್ವಾನದಲ್ಲಿ ೮ ಪಕ್ಷಗಳು ಮಾತ್ರ ಭಾಗವಹಿಸಿದವು. ಅದರಲ್ಲೂ ಕೇವಲ ೩ ಪಕ್ಷಗಳ ಅಧ್ಯಕ್ಷರು ಪಾಲ್ಗೊಂಡಿದ್ದರು. ಯಾತ್ರೆಯು ಪ್ರಭಾವ ಕಾಂಗ್ರೆಸಿನ ೨೦೧೯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ಸದ್ಯದ ಪರಿಸ್ಥಿತಿ ಯಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ನೇತೃತ್ವವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿರುವುದರಿಂದ ಕಾಂಗ್ರೆಸ್‌ಗೆ ಬಹು ದೊಡ್ಡ ಹಿನ್ನಡೆಯಾಗಿದೆ.

ರಾಹುಲ್ ಗಾಂಧಿ ತಮ್ಮ ವರ್ಚಸ್ಸನ್ನು ಮತ್ತೆ ಮರಳಿ ಪಡೆಯಲು ಕೈಗೊಂಡ ಈ ಸುದೀರ್ಘ ಯಾತ್ರೆಯು ರಾಜಕೀಯ ವಿರೋಧಿ ಗಳು ಕೂಡ ಮೆಚ್ಚುವಂತಹ ಪ್ರಯತ್ನವಾಗಿತ್ತು. ಬಹು ಮುಖ್ಯ ಸಂಗತಿಯೆಂದರೆ ಭಾರತ ಜೋಡೋ ಯಾತ್ರೆಯು ನಿಸ್ತೇಜ ಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತು. ಯಾತ್ರೆಗೆ ದೊರೆತ ಜನಸ್ಪಂದನೆ ಉತ್ತೇಜನಕರವಾಗಿದ್ದರೂ ಇದು ರಾಜಕೀಯವಾಗಿ ಕಾಂಗ್ರೆಸ್ ಪಾರ್ಟಿಗೆ ಎಷ್ಟರ ಮಟ್ಟಿಗೆ ಲಾಭ ತಂದು ಕೊಡುವುದು ಎಂಬುದನ್ನು ಸಮಯವೇ ಉತ್ತರ
ನೀಡ ಬೇಕಾಗಿದೆ.

 
Read E-Paper click here