ಪ್ರಚಲಿತ
ಹೃತಿಕ್ ಕುಲಕರ್ಣಿ
hrithikkulkarni@gmail.com
ವರುಣ ದೇವನೂ ಹೌದು ಅವನು ದೈತ್ಯನೂ ಹೌದು. ಆತ ಕರುಣಾಮಯಿಯೂ ಹೌದು, ಅವನೇ ದಯಾದೂರನೂ ಹೌದು. ಅವನು ಎಷ್ಟು ಅಭಿವೃದ್ಧಿಯ ಬಯಸುವವನೋ ಅಷ್ಟೇ ಮಾನವನ ದುಃಖಾಗ್ನಿಗೆ ಪ್ರವಾಹರೂಪಿ ಮಳೆಯೆಂಬ ತುಪ್ಪ ಸುರಿಯುವವನೂ ಆಗಿದ್ದಾನೆ.
ರೈತರು ಕಳೆ ಕೀಳುವ ಮೊದಲೆ ಕಿತ್ತುಕೊಳ್ಳುವವನು ನೀನಲ್ಲವೆ, ಮೂಕ ಜೀವಿಗಳನ್ನು ಅನಿಶ್ಚಿತತೆಗೆ, ಹಸಿವಿನ ಆರ್ದತೆಗೆ ನೂಕುವವನು ನಾನೇ ಎಂದು ಎದೆಯುಬ್ಬಿಸಿ ಹೇಳಿಕೊಳ್ಳಲು ನೀನು ಅರ್ಹನೇ ಅಲ್ಲವೆ! ಉಳ್ಳವರು ಒಂದರ್ಧ ಗಂಟೆ ಹೆಚ್ಚು ನಿದ್ರಿಸಲು ಅನುವುಮಾಡಿ ಕೊಟ್ಟ ನಿನ್ನ ಕೃಪಾಗುಣವ ಮೆಚ್ಚಲೇ ಬೇಕು. ಆದರೆ ನೆನಪಿರಲಿ, ನಿನ್ನ ಬೇಧ ದೃಷ್ಟಿಗೆ ನನ್ನ ಧಿಕ್ಕಾರವಿದೆ. ನೀನು ಉಳ್ಳವರ ಮಲಗಿಸಿದೆ, ಬೆಚ್ಚಗೆ ಮಲಗಿಸಿದೆ. ಅವರೂ ನಿಶ್ಚಿಂತೆ ಯಿಂದ ನಿದ್ರಿಸಿದರು. ಆದರೆ ಉಳಿದವರ ಆಲೋಚನೆಯಿಲ್ಲದ ನೀನು ಈ ಕ್ಷಣಕ್ಕೆ ದೈವವೋ? ದೈತ್ಯವೋ? ಬಡವರು, ಅಲ್ಪರನ್ನು ಭಯಭೀತನಾಗಿಸುವ ನೀನು ದೈವನಾಗಿರಲು ಸಾಧ್ಯವೇ? ನೀನೇ ಹೇಳಬೇಕು.
ಕಷ್ಟ ಕಾರ್ಪಣ್ಯಗಳಿಂದ ತುಂಬಿರುವ ಹೃದಯಸಮುದ್ರದಲ್ಲಿ ಬೆರಳಿಡಲೂ ನಲುಗುತ್ತಿರುವ ನಾವುಗಳು ನಿನ್ನ ಮಕ್ಕಳಲ್ಲವೆ? ಅಂತಹದ್ದರಲ್ಲಿ ನಮ್ಮಗಳ ಮನೆಯನ್ನೂ, ಓಣಿಯನ್ನೂ ನೀನು ಸಮುದ್ರವಾಗಿಸಲು ಹೊರಟಿದ್ದಿ ಯಲ್ಲವೋ, ಭೇಷ್. ನಾವು ಸಹಿಷ್ಣುಗಳು ಎಂದು ತಾತ್ಸಾರವೇ ನಮ್ಮ ಮೇಲೆ? ಅಥವಾ ದುಃಖಕ್ಕೆ ಒಗ್ಗಿದವರು ನೀವು ಎನ್ನುತ್ತಿಯೊ! ಉಳ್ಳವರು, ಮಧ್ಯಮರು, ಬಡವರು ಈ ಮೂವರಲ್ಲಿ ಮೊದಲನೆಯವರಿಗೆ ನೀನಿವತ್ತು ದೈವ. ಉಳಿದವರಿಗೆ ನೀನು ಏನು?? ನೀನು ಎಲ್ಲರಿಗೂ ದೈವವೇ ಆಗಿದ್ದರೆ ಸರ್ವರ ಸಮೃದ್ಧಿಯಾಗಿರಬೇಕು ನಿನ್ನ ಉದ್ದೀಶ್ಯ ಸರ್ವನಾಶವಲ್ಲ.
ನೀನಿಲ್ಲದೆ ಬೆಳೆ ಬೆಳೆಯಲಾರವು, ಬಳ್ಳಿ ಚಿಗುರಲಾರವು, ನದಿ ಕೆರೆಗಳು ತುಂಬಿ ನಮ್ಮ ದಾಹತಣಿಸಲಾರವು. ನೀನಿರದೆ ಬಾತುಕೊಳಿಗಳ ಬಳುಕಿಗೆಲ್ಲಿದೆ ಆಸ್ಪದ, ನೀನಿರದೆ ಮೀನಿಗೆಲ್ಲಿದೆ ಜೀವಿತ, ನೀನಿರದೆ ಜಲಪಾತಗಳು, ಝರಿಗಳು ಸೌಂದರ್ಯ ಹೀನ, ನೀನಿರದೇ ನಾನೂ ಅನಾಥನೇ ಓ ನನ್ನ ದೈವ. ಅರಿಯೋ ನಮ್ಮ ಅರಕೆಗಳನ್ನು, ನಮ್ಮ ತುಡಿತಗಳನ್ನು, ನಮ್ಮ ತೊಡಕುಗಳನ್ನು. ಅರಿತೂ ನೀನು ಸರ್ವನಾಶ ಬಯಸುವೆಯಾದರೆ ನಿನೆಂಥ ದೈವ. ನಿನ್ನ ಪೂಜಿಸುವ, ನಿನ್ನ ಆರಾಧಿಸುವ ಆರ್ಯ ಸಂಸ್ಕೃತಿ ನಮ್ಮದು, ಹಾ ನಿನ್ನದೇ ಸಂಸ್ಕ್ರತಿಯದು.
ಆದರೆ ನನ್ನ ಸಂಸ್ಕ್ರತಿಯಲ್ಲಿ ದೈವ ಸ್ಥಾನವಿರುವ ನೀನು ಕರುಣಾಹೀನನೆಂದರೆ ನಾನೆಂತು ನಂಬುವುದು? ಆದರೆ ವಾಸ್ತವಾ ನನ್ನ ಮುಂದೆಯೇ ಬೀಳುತ್ತಿದೆ
ಪ್ರವಾಹೋಪಾದಿಯಲ್ಲಿ ಎನ್ನುವುದಂತೂ ನೀನು ಬಲ್ಲೆ. ಇದು ನಿನ್ನ ಕೃಪೆಯಲ್ಲ, ನಿನ್ನ ನಿಷ್ಕರುಣ ರೂಪಕ್ಕೆ ಒಂದು ನಿದರ್ಶನ. ಬರೇ ಬರೇ ಬರೆಯೆಳೆಯುತ್ತಿದ್ದೀಯ ಕುದಿಯುವ ಈ ಹೃದಯಕ್ಕೆ ನೀನು. ನಿನ್ನ ಅಸ್ತಿತ್ವ ಪ್ರದರ್ಶನ ಎಂತು ಮಾಡಿದರೆ ನಿನ್ನ ಮಕ್ಕಳಿಗೆ ಒಳಿತು ಎಂಬುದನ್ನು ಅರಿಯದಾಯಿತೇ ವರುಣನ ಮತಿ. ನಾವು ನಿನ್ನ ವೈಯ್ಯಾರ ಪ್ರೀಯರು. ಹಾಗಂತ ನಿನ್ನ ರೌದ್ರರೂಪಕ್ಕೆ ಅಂಜಿ ಅಳುಕುವ ಅಂಜುಬುರುಕರು ನಾವು ಎಂದು ತಿಳಿಯಬೇಡ.
ನಿನಗೇ ಗೊತ್ತಿದೆ ನಾವು ಕಷ್ಟ ಸಹಿಷ್ಣುಗಳೆಂದು. ಸಾಮಾನ್ಯವಾಗಿ ಪ್ರಿಯರ ರೌದ್ರರೂಪ ಯಾರಿಗಾದರೂ ಆಂತಕ, ಅಳುಕು ಹುಟ್ಟಿಸುವಂಥದ್ದು. ಅದು ನೀನು ಬಲ್ಲೆ. ಆದರೂ ನೀನು ನಿನ್ನ ಹಠ ಬಿಡಲೊಯಲ್ಲ ಅದೇ ನನ್ನನ್ನು ನಿಷ್ಠುರರನ್ನಾಗಿ ಮಾಡುತ್ತಿದೆ. ಅಷ್ಟಕ್ಕೂ ನನ್ನ ಪ್ರೀತಿ ಮತ್ತು ನಿಷ್ಠುರತೆಗೆ ನೀನು ಅರ್ಹನೇ ಅನ್ನು.
ಶತಮಾನದಿಂದ ಕವಿಗಳು ನಿನ್ನ ಬಣ್ಣಿಸುತ್ತಿರುವ ಪರಿ ಕೇಳಿ ಕೇಳಿ ಬಹಳ ಹಿಗ್ಗಿರುವಂತಿದೆ ನೀನು. ತಿಳಿ, ಅದು ಅವರ ಕಲ್ಪನೆ, ಅದು ಅವರ ವೈಯಕ್ತಿಕ ಅಭಿಪ್ರಾಯ.
ಅದನ್ನು ಓದಿ, ಕೇಳಿ, ಹಾಡಿ ನಾವೂ ಕುಣಿದದ್ದಿದೆ ಉತ್ಸುಕರಾಗಿದ್ದಿದೆ. ಆದರೆ ಇಂದು ಕುಣಿತವೂ ಇಲ್ಲ ಉತ್ಸುಕತೆಯೂ ಇಲ್ಲ. ಏಕೆಂದರೆ ಈ ನಿನ್ನ ವಿನಾಶ ದಾಟದ ಕಲ್ಪನೆ ನಮಗೆ ಸಾಧ್ಯವಿಲ್ಲ.
ಏಕೆಂದರೆ ವಿನಾಶದಲ್ಲೂ ವಿಕಸನವನ್ನು ಕಲ್ಪಿಸಿಕೊಳ್ಳಲು ನಾವು ಸಾಮಾನ್ಯರು ಕವಿಗಳಲ್ಲ. ಮನೆಮನೆಯಲ್ಲಿ ದಾಪುಗಾಲಿಡುತ್ತಿರುವ ನೀನು ಮನೆಯವರ ಆರ್ತನಾದ ಕೇಳಲಾರೆಯಾ. ನೀನು ಬೇಕೆಂದು, ನೀನು ಬಂದಾಗ ’ಹೋಗೋ ಮಾರಾಯಾ’ ಎನ್ನುವ ಆ ನಿನ್ನ ಗುಣಗಾನ ನಿನ್ನ ಕರ್ಣಕ್ಕೆ ಕೇಳದಾಯಿತೇ? ಅವರಿಗೆ ನೀನ್ಯಾಕೆ ಬೇಡವಾದೆ ಗೊತ್ತಿದೆ ತಾನೆ! ಸ್ವಲ್ಪ ಜಾಸ್ತಿಯಾದರೆ ಅಮೃತವೂ ವಿಷ. ಹೆಚ್ಚಾದ ಎಲ್ಲವೂ ವಿಷವೇ. ದಾಹ ಉಣಿಸುವ ನೀನು ಹೆಚ್ಚಾದರೆ ದಾಹಿಯನ್ನೇ ಮುಳುಗಿಸಿ ನಿನ್ನ ಹಸಿವನ್ನೇ ನಿಗಿಸಿಕೊಳ್ಳುವವ ಎನ್ನುವುದು ಸತ್ಯವೆ?? ನಿನ್ನ ಹಾಡಿ ಹೊಗಳಲು ನಾನೇನು ಕವಿಯಲ್ಲ, ಹುಚ್ಚು ಕಲ್ಪನಾಗಾರನೂ ನಾನಲ್ಲ. ನಾನು ನಿನ್ನ ಭಕ್ತ.
ನಾನು ನಿನ್ನ ದಾಸ. ಅದಕ್ಕೇ ಈ ಸಿಟ್ಟು, ಈ ನಿಷ್ಠುರತೆ ಇಷ್ಟು ಪ್ರಖರವಾಗಿ ಹೊರಬಂದದ್ದು. ನೀನು ನನ್ನನ್ನು ಕ್ಷೇಮವಾಗೇ ಇಟ್ಟಿರುವೆ ಆದರೆ ನನ್ನ ಬಂಧುಗಳಾದ
ವಿಶ್ವಸಮುದಾಯವೂ ಕ್ಷೇಮವಾಗಿದೆಯೇ? ಇಲ್ಲ. ಕ್ಷೇಮವಾಗಿಡುವ ಭರವಸೆಯನ್ನಾದರೂ ನಿನ್ನ ಭಕ್ತನಿಗೆ ಕೊಡಬಯಾ? ರೈತರ, ಬಡವರ, ಮಧ್ಯಮರ,
ಮೂಕ ಜೀವಿಗಳ, ಸೈನಿಕರ, ಎಲ್ಲರ ಕ್ಷೇಮಾಭಿವೃದ್ಧಿಯ ಹೊಣೆ ನೀನು ಹೊರಬೇಕು. ಅದೇ ನಿನ್ನೆ ಭಕ್ತರ ಬಯಕೆ. ಈಡೇರಿಸಿದನ್ನ. ಈ ಅನ್ವಯವಾಗು ವಂತಹದ್ದು.