ಅಭಿಪ್ರಾಯ
ವಿನಾಯಕ ಭಟ್ಟ
vinayak.oni@gmail.com
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯದ ಮೇಲಾಟಗಳ ಮಳೆ ಧೋ ಎಂದು ಸುರಿದು ಸದ್ಯಕ್ಕೆ ನಿಂತಿದೆ. ಮತ್ತೆ ಮಂತ್ರಿ ಮಂಡಲದ ಗೊಂದಲದ ಮಳೆ ಸದ್ಯದ ಶುರುವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹೊತ್ತಿನಲ್ಲಿ ತಡವಾಗಿ ಆದರೂ ರಭಸದ ನೀರಿನ ಮಳೆ ಶುರುವಾಗಿದೆ. ಕೆಲವು ಕಡೆಯಲ್ಲಿ ಪ್ರವಾಹ ಪರಿಸ್ಥಿತಿ ಕೂಡ ಬಂದಿದೆ.
ಒಂದು ಕಡೆ ರಾಜಕಾರಣಿಗಳ ಅಧಿಕಾರದ ಆಸೆ ದೊಡ್ಡ ದೊಡ್ಡ ಪ್ರಹಸನಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಆದರೆ ದುರದೃಷ್ಟವಶಾತ್ ಸುರಿಯುತ್ತಿರುವ ನೀರಿನ ಮಳೆಯ ಬಗೆಗೆ ಯಾರಿಗೂ ಲಕ್ಷ್ಯವಿಲ್ಲದೇ ಹೋಗುತ್ತಿದೆ. ಇಂತಹುದೇ ಹೋರಾಟ, ಛಲವನ್ನು ಸುರಿಯುತ್ತಿರುವ ಮಳೆ ನೀರನ್ನು ಹಿಡಿಯುವ ಬಗ್ಗೆಯಾಗಲೀ, ಮಳೆ ನೀರನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಆಗಲೀ ತೋರಿದ್ದರೆ ಎಷ್ಟು ಚೆನ್ನ ಅನಿಸುತ್ತದೆ. ನಗರಗಳಲ್ಲಿ ಮಳೆ ನೀರನ್ನೂ ಹೀರಿ ಕೊಳ್ಳಲು ನೆಲಕ್ಕೆ ಜಾಗ ನೀಡಿಲ್ಲ. ಎಲ್ಲ ಕಡೆ ಕಾಂಕ್ರಿಟ್ ಕಟ್ಟಡ, ರೋಡು. ಶುದ್ಧವಾದ ಮಳೆ ನೀರನ್ನು ಹಿಡಿದಿಟ್ಟು ಕೊಳ್ಳುವ ಯಾವ ದೂರದೃಷ್ಟಿ ಯೋಚನೆಯೂ ಯೋಜನೆಯೂ ಸರಕಾರದ ಮುಂದೆ ಇಲ್ಲದೇ , ಕೇವಲ ರಾಜಕೀಯದ ಕೊಚ್ಚೆಯೊಳಗೇ ಎಲ್ಲ ರಾಜಕಾರಣಿಗಳು ಪಕ್ಷಾತೀತವಾಗಿ ಮುಳುಗಿ ತೇಲಾಡುತ್ತಿದ್ದಾರೆ.
ಮಳೆಯ ನೀರನ್ನು ಭೂ ಒಡಲಲ್ಲಿ ಇಂಗಿಸಿ ಅಂತರ್ಜಲವನ್ನು ಹೆಚ್ಚಿಸುವ ಬಹು ಮಹತ್ವದ ಕೆಲಸವನ್ನು ಗುಡ್ಡಗಳು ಮಾಡುತ್ತಿದ್ದವು. ಆದರೆ ಇದೇ ರಾಜಕೀಯ ಗಣಿಗಾರಿಕೆ ಎಂಬ ಹೆಸರಿನಲ್ಲಿ ಗುಡ್ಡಗಳನ್ನು ಅಗೆದು, ಕರಗಿಸಿ ಬಿಸಾಡು ತ್ತಿವೆ . ಸುಂದರವಾದ ಕಾಡುಗಳು ಮಳೆ ನೀರನ್ನು ತಮ್ಮೊಳಗೆ ಮುಚ್ಚಿಟ್ಟುಕೊಂಡು, ನೆಲದಲ್ಲಿ ಆರ್ದ್ರತೆಯನ್ನು ಉಳಿಸಿಕೊಂಡು ಬೇಸಿಗೆಯಲ್ಲಿ ತಂಪನ್ನು ಕೊಡುತ್ತಿದ್ದವು. ಆದರೆ, ನಾಗರೀಕರಣಕ್ಕೆ ಬಲಿಯಾಗುತ್ತ ತಂಪನ್ನು ಕಳೆದುಕೊಳ್ಳುತ್ತಾ ಭೂಮಿ ಯನ್ನೂ ಬಿಸಿ ಮಾಡುತ್ತಿರುವುದಕ್ಕೆ ಕಾಡಿನ ಬುಡಕ್ಕೆ ಕೊಡಲಿ ಹಾಕುತ್ತಿರುವ ರಾಜಕೀಯ ಪ್ರೇರಿತ ಯೋಜನೆಗಳೂ ಕಾರಣ ಅಂದರೂ ತಪ್ಪಾಗಲಿಕ್ಕಿಲ್ಲ.
ಹೀಗೆ ಪ್ರತಿಯೊಂದೂ ಕಡೆಯಿಂದ ನೋಡಿದರೂ ರಾಜಕೀಯದ ಮಳೆಯನ್ನು ಬಿಟ್ಟು ಬೀಳುವ ನೀರಿನ ಮಳೆಯನ್ನೂ ಹಿಡಿದಿಡಲು ಯೋಚಿಸಲೂ ಆಗದ ವಿಲಕ್ಷಣ
ಪರಿಸ್ಥಿತಿ ಸದ್ಯಕ್ಕೆ ನಮ್ಮ ಸರಕಾರದ್ದು. ಏನು ಕೇಳಿದರೂ ಕರೋನ ಎಂಬ ಸಿದ್ಧ ಉತ್ತರ ಸಿಗುವುದು ಕೂಡಾ ನಮ್ಮ ಆಡಳಿತದ ದುರದೃಷ್ಟ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಲೆನಾಡಿನ ಜಿಯ ಹಳ್ಳಿಗಳಿಗೆ ಕೂಡ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿದ್ದು
ಸುದ್ದಿಯಾಗಿತ್ತು. ಇನ್ನೇನು ತಡವಾಗಿಯಾದರೂ ಮಳೆಗಾಲ ಶುರುವಾಗಿದೆ. ಉತ್ತರ ಕನ್ನಡ, ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನೂ ಈ ಮಳೆ ತಂದೊಡ್ಡಿದೆ. ಆದರೂ ಈ ಸಂದರ್ಭದಲ್ಲಿ ಮಳೆ ಕೊಯ್ಲನ್ನು ನೆನಪಿಸುವ ಅವಶ್ಯಕತೆ ಕಂಡು ಬರುತ್ತಿದೆ.
ಸುಲಭ ವಿಧಾನಗಳನ್ನು ಅನುಸರಿಸುವುದರ ಮೂಲಕ ಸಾಮಾನ್ಯ ಜನರಾದ ನಾವೂ ಕೂಡ ಮಳೆ ಕೊಯ್ಲಿಗೆ ನಮ್ಮದೇ ಕೊಡುಗೆಯನ್ನು ಕೊಡಬಹುದು. ನಮ್ಮ ಚಾವಣಿಯ ನೀರನ್ನೂ ಮಳೆ ಕೊಯ್ಲು ಮಾಡಬಹುದು. ಹಳ್ಳಿಗಳಲ್ಲಿ ಕಾಣ ಸಿಗುವ ಹರಿಯುವ ಸಣ್ಣ ತೊರೆ ಕೂಡ ಮಳೆ ಕೊಯ್ಲಿಗೆ ಉತ್ತಮ ಅವಕಾಶ ಒದಗಿಸ ಬಲ್ಲದು. ಚಿಕ್ಕ ನೀರಿನ ಹರಿವನ್ನು ಹತ್ತಿರದ ಹುತ್ತಕ್ಕೆ ಬಿಟ್ಟರೆ ಅದೆಷ್ಟೋ ನೀರನ್ನು ಭೂಮಿಗೆ ತುಂಬಲು ಸಾಧ್ಯ ಅನ್ನುವ ಮಾತೂ ಇದೆ. ಚಿಕ್ಕ ಚಿಕ್ಕ ಸಾಧ್ಯತೆಗಳೇ ಮುಂದೆ ದೊಡ್ಡ ಪ್ರಯೋಜನ ಕೊಡಬಲ್ಲವು. ಹಾಗಾಗಿ ಸರಕಾರವೇ ಇಂತಹವುಗಳ ಬಗ್ಗೆಯೂ ವಿಚಾರ ಮಾಡಿ ಏನಾದರೂ ಮಾಡೀತು ಎಂಬ ಉತ್ಪ್ರೇಕ್ಷಿತ ಕಲ್ಪನೆಯಿಂದ ಹೊರಬಂದು ನಮ್ಮ ನೀರಿಗೆ ನಾವೇ ಆಧಾರವನ್ನು ಕಂಡು ಕೊಳ್ಳಲು ಇದು ಸೂಕ್ತ ಸಮಯ.