Saturday, 14th December 2024

ಮಳೆ, ಕೃತಕ ನೆರೆ ಸೃಷ್ಟಿಸುವ ನಿತ್ಯ ಅವಾಂತರಗಳು

ವಿದ್ಯಮಾನ

ಆದರ್ಶ್ ಶೆಟ್ಟಿ. ಉಪ್ಪಿನಂಗಡಿ

ನಿತ್ಯ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪವರ್ ಮ್ಯಾನ್‌ಗಳ ಕರ್ತವ್ಯದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ? ಇನ್ನೊಬ್ಬರ ಮನೆಯನ್ನು ಬೆಳಗುವ ಬೆಳಕಿನ ಯೋಧರೆಂದು ಕರೆಸಿಕೊಳ್ಳುವ ಅದೆಷ್ಟೋ ಪವರ್‌ಮ್ಯಾನ್‌ಗಳು ಪ್ರಾಣ ಕಳೆದುಕೊಂಡು ತಮ್ಮ ಮನೆಯ ದೀಪವನ್ನೇ ಆರಿಸಿಕೊಂಡವರಿದ್ದಾರೆ.

ರೈತರು ಹಾಗೂ ಜನಸಾಮಾನ್ಯರು ಕಾಲಕಾಲಕ್ಕೆ ಮಳೆ ಬೀಳದಿದ್ದರೆ ಆಕಾಶದ ಕಡೆಗೆ ಮುಖ ಮಾಡುವುದು, ಮಳೆಗಾಗಿ ಪ್ರಾರ್ಥನೆ ಮಾಡುವುದು,ಬಾರಿ ಪ್ರಮಾಣದ ಕುಡಿಯುವ ನೀರಿನ ಅಭಾವ ಉಂಟಾದಾಗ ದೇವರ ಮೊರೆ ಹೋಗುವುದು, ಕಪ್ಪೆಗೆ ಮದುವೆ ಮಾಡಿಸುವುದು, ಕತ್ತೆಗೆ ಪೂಜೆ ಮಾಡುವಂತಹ ಸಂಪ್ರದಾಯವನ್ನು ಕೆಲವು ಭಾಗಗಳಲ್ಲಿ ಹಲವಾರು ವರ್ಷಗಳಿಂದ ಕಾಣುತ್ತಿದ್ದೇವೆ. ಇನ್ನು ಕೆಲ ದೇವಾಲಯಗಳಲ್ಲಿ ಸಿಯಾಳಾಭಿಷೇಕ, ಪೂಜೆ, ಹೋಮ ಹವನಗಳನ್ನು ಕೂಡ ಅಲ್ಲಿನ ಆಡಳಿತ ಮಂಡಳಿಗಳು ಮುಜರಾಯಿ ಇಲಾಖೆಯ ವತಿಯಿಂದ ನಡೆಸುವ ವಿದ್ಯಮಾನಗಳಿವೆ. ಈ ಪ್ರಕೃತಿದತ್ತವಾಗಿ ಶುದ್ಧ ಗಾಳಿ, ಕಾಲ ಕಾಲಕ್ಕೆ ಮಳೆ-ಬೆಳೆಯಾಗದಿರಲು ಭೂಮಿಯ ಮೇಲಿನ ಮಾನವ ನಿರ್ಮಿತ ಅನಾಚಾರಗಳು ಕೂಡ ಒಂದು ಕಾರಣವೆನ್ನಬಹುದು. ಈ ಬಾರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾಗೂ ದೇಶದ ವಿವಿಧ ಪ್ರದೇಶಗಳಲ್ಲಿ ವಾತಾವರಣ ಬಿಸಿಯೇರಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿರುವುದನ್ನು ಕಂಡಿದ್ದೇವೆ.

ಕಳೆದ ಬಾರಿ ಮಳೆ ವಿಳಂಬವು ಕೂಡ ಈ ಬಾರಿಯ ಅವ್ಯವಸ್ಥೆಗೆ ಒಂದು ಕಾರಣವೆನ್ನಬಹುದು. ಈ ಬಾರಿ ಜನಸಾಮಾನ್ಯರ ಪ್ರಾರ್ಥನೆಯ ಫಲವೋ ಎಂಬಂತೆ ದೇಶವ್ಯಾಪಿ ಉತ್ತಮ ಮಳೆಯಾಗುತ್ತಿದೆ. ಕೆಲವೆಡೆ ಪ್ರವಾಹಗಳ ಅಬ್ಬರ ಕಂಡು ಬಂದಿದೆ.ಜಲಾಶಯಗಳು ತುಂಬಿ ತುಳುಕಿ, ಕೆರೆ, ಹಳ್ಳ, ನದಿಗಳು ತುಂಬಿ ಹರಿಯುತ್ತಿದೆ. ಕೃಷಿ ಚಟುವಟಿಕೆಗಳಿಗೆ ಪ್ರಮುಖವಾಗಿ ವ್ಯಾಪಕ ಮಳೆಯ ಪ್ರಮಾಣದಿಂದ ಕೆಲವು ಬೆಳೆ, ಬೇಸಾಯಗಳಿಗೆ ಲಾಭ ನಷ್ಟದ ಲೆಕ್ಕಾಚಾರವನ್ನು ರೈತಾಪಿ ವರ್ಗ ನಡೆಸುತ್ತಿದೆ. ಶಾಲಾ ಕಾಲೇಜುಗಳಿಗೆ ವಾರವಿಡೀ ರಜೆ ಘೋಷಣೆಯಾಗಿದೆ.

ಗುಡ್ಡ ಬೆಟ್ಟಗಳು ಜರಿದು ರಾಷ್ಟ್ರೀಯ ಹೆದ್ದಾರಿ, ರಸ್ತೆಗಳು ಬಂದ್ ಆಗಿ ಪರ್ಯಾಯ ಮಾರ್ಗವನ್ನು ಅನುಸರಿಸಬೇಕಾದ ಪರಿಸ್ಥಿತಿ ಪ್ರಯಾಣಿಕರು, ವಾಹನ
ಚಾಲಕರಿಗೆ ಎದುರಾಗಿದೆ. ವ್ಯಾಪಕ ಪ್ರಮಾಣದಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ, ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಸಂಚಾರ ವ್ಯತ್ಯಯವಾಗಿ ಪವರ್‌ಮ್ಯಾನ್‌ಗಳು ಹಗಲು ರಾತ್ರಿ ಕಾರ್ಯದ ಒತ್ತಡದಿಂದ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿ ಡೆಂಘೀ, ಶೀತ, ಕಫ, ಕೆಮ್ಮು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಜನಸಾಮಾನ್ಯ ರಿಗೆ ಅರಿವು ಮೂಡಿಸುವುದರ ಜತೆಗೆ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಡೆಂಘೀನಂತಹ ಜ್ವರ ಹಲವಾರು ಮಂದಿಯನ್ನು ಈಗಾಗಲೇ ಬಲಿ ಪಡೆದಿದೆ. ಸಾರ್ವಜನಿಕ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ರೋಗಿಗಳಿಂದ ತುಂಬಿ
ಹೋಗಿವೆ. ಜನಸಾಮಾನ್ಯರು ಮಳೆ ಬಾರದೇ ಇದ್ದಾಗ ಯಾವ ರೀತಿ ದೇವರಲ್ಲಿ ಪ್ರಾರ್ಥನೆ ನಡೆಸುತ್ತಿದ್ದರೋ ಅದೇ ಜನಗಳು ಇತ್ತೀಚಿಗೆ ಸುರಿದ ನಿರಂತರ ಧಾರಾಕಾರ ಮಳೆಗೆ ಮನೆಯಿಂದ ಹೊರಬರಲಾಗುತ್ತಿಲ್ಲ, ಬಟ್ಟೆ ಒಣಗುತ್ತಿಲ್ಲ, ಮಕ್ಕಳಿಗೆ ಶಾಲೆ ಇಲ್ಲ, ಮಳೆ ಬೆಳೆಗೆ ಹಾನಿಯಾಗಿದೆ, ಸಾಂಕ್ರಾಮಿಕ
ರೋಗಗಳ ಹಾವಳಿ, ವಿಪರೀತ ಚಳಿ ಎಂದೆಲ್ಲ ತಮ್ಮ ಪಾಡಿಗೆ ಗೊಣಗುವುದನ್ನು ಕೂಡ ನಮ್ಮ ಸುತ್ತ ಮುತ್ತ ಕಾಣುತ್ತೇವೆ.

ಮನುಷ್ಯ ಅಥವಾ ಜನಸಾಮಾನ್ಯರು ಈ ಭೂಮಿಯಲ್ಲಿ ತೃಪ್ತಿ, ಪರಿಪೂರ್ಣತೆ ಎಂಬುವುದನ್ನು ಆತ ಯಾವುದೇ ವಿಚಾರದಲ್ಲಿ ಹೊಂದಿರಲು ಅಸಾಧ್ಯ.
ಎಷ್ಟೇ ವ್ಯವಸ್ಥೆ, ಸೌಕರ್ಯಗಳನ್ನು ಕಲ್ಪಿಸಿದರೂ ಆತ ಅದಕ್ಕೊಂದು ಕೊಂಕು ಮಾತನ್ನು ಆಡಿಯೇ ಆಡುತ್ತಾನೆ. ಜನರು ತಮ್ಮ ಮನೆಯಲ್ಲಿ ದಿನ ನಿತ್ಯ
ಉರಿಯುವ ಬಲ್ಬ, ತಿರುಗುವ ಫ್ಯಾನ್, ವಿದ್ಯುತ್ ನಲ್ಲಿ ವ್ಯತ್ಯಯವಾದರೆ ಮೊತ್ತಮೊದಲು ಹಿಡಿಶಾಪ ಹಾಕುವುದು, ಗೊಣಗುವುದು ಕೆಇಬಿ ಅಥವಾ
ಪವರ್‌ಮ್ಯಾನ್‌ಗಳಿಗೆ. ನಮ್ಮ ಸರಕಾರಿ ವ್ಯವಸ್ಥೆಗಳ ಮಧ್ಯೆ ದಿನ ನಿತ್ಯ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪವರ್ ಮ್ಯಾನ್‌ಗಳ ಕರ್ತವ್ಯದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ? ಇಂಧನ ಇಲಾಖೆಯ ಪವರ್‌ಮ್ಯಾನ್‌ಗಳು ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ ಉರುಳಿದ ಕಂಬಗಳು, ತುಂಡಾಗಿ ಬಿದ್ದ ಸರ್ವೀಸ್ ವಯರ್ ಗಳು, ಸಿಡಿಲು ಬಡಿದ ಟ್ರಾನ್ಸ್ ಫಾರ್ಮರ್‌ಗಳು ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಹೊತ್ತು ರಾತ್ರಿ ಹಗಲು ಕರ್ತವ್ಯ ನಿರ್ವಹಿಸಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ.

ತಮ್ಮನ್ನು ಅವಲಂಭಿತರಾದ ಹೆಂಡತಿ ಮಕ್ಕಳು ತಂದೆ ತಾಯಂದಿರನ್ನು ಬಿಟ್ಟು ವಿದ್ಯುತ್ ಕಂಬದಲ್ಲಿ ಕರ್ತವ್ಯ ನಿರ್ವಹಿಸುತ್ತಿzಗಲೇ ವಿದ್ಯುತ್ ಶಾಕ್ ತಗುಲಿ ಪ್ರಾಣ ಕಳೆದುಕೊಂಡ ಅದೆಷ್ಟೋ ಪವರ್‌ಮ್ಯಾನ್‌ಗಳನ್ನು ಕಂಡಿದ್ದೇವೆ. ಇನ್ನೊಬ್ಬರ ಮನೆಯನ್ನು ಬೆಳಗುವ ಬೆಳಕಿನ ಯೋಧರೆಂದು
ಕರೆಸಿ ಕೊಳ್ಳುವ ಅದೆಷ್ಟೋ ಪವರ್‌ಮ್ಯಾನ್‌ಗಳು ಪ್ರಾಣ ಕಳೆದುಕೊಂಡು ತಮ್ಮ ಮನೆಯ ದೀಪವನ್ನೇ ಆರಿಸಿಕೊಂಡವರಿzರೆ. ತಮ್ಮ ಊರಿನಲ್ಲಿ ಒಂದು
ಘಳಿಗೆ ವಿದ್ಯುತ್ ವ್ಯತ್ಯಯವಾದರೆ ಕೆಇಬಿ ಕಚೇರಿಗೆ ಸಾಲು ಸಾಲು ಫ್ಯಾನ್ ಕರೆಗಳ ಸುರಿಮಳೆಯೇ ಬರುತ್ತದೆ. ಮಳೆಗಾಲದಲ್ಲಿ ಜೋರು ಗಾಳಿ, ಸಿಡಿಲಿನ
ಆರ್ಭಟ ಉಂಟಾದರೆ ಸಾಕು ಪವರ್‌ಮ್ಯಾನ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಿದ್ದೆಗೆಟ್ಟು ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ಇನ್ನು ರಾಜ್ಯದ ನಾನಾ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಳು ಕೂಡ ಭರದಿಂದ ಸಾಗುತ್ತಿದೆ. ಭೂ ಸ್ವಾಧೀನ, – ಓವರ್, ಸೇತುವೆ,
ತಡೆಗೋಡೆ ಎಂದೆಲ್ಲ ಈ ಕಾಮಗಾರಿಗಳು ಪೂರ್ಣಗೊಳ್ಳಲು ಸಾಧಾರಣ ೪ ರಿಂದ ೫ ವರ್ಷಗಳು ಬೇಕಾಗುತ್ತದೆ. ಇನ್ನು ಈ ಗುತ್ತಿಗೆ ಕಂಪನಿಗಳ ಅವೈಜ್ಞಾ ನಿಕ ಕಾಮಗಾರಿಗಳಿಂದಾಗಿ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು, ಘನವಾಹನಗಳು ಬಹಳ ಸಂಕಷ್ಟಕ್ಕೆ ಸಿಲುಕುವ ಸ್ಥಿತಿಗಳು ನಿರ್ಮಾಣವಾಗಿದೆ.

ಬಿ.ಸಿ ರೋಡ್‌ನಿಂದ ಅಡ್ಡಹೊಳೆ, ಬಿ.ಸಿ ರೋಡ್ ನಿಂದ ಚಾರ್ಮಾಡಿ, ಸಾಣೂರುನಿಂದ ಬಿಕರ್ನಕಟ್ಟೆ, ಕಾಸರಗೋಡಿನಿಂದ ಕೊಚ್ಚಿ ಹೀಗೆ ರಾಜ್ಯದ ಹಾಗೂ ಅಂತಾರಾಜ್ಯದ ವಿವಿಧ ಭಾಗಗಳ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥ ಕಾಮಗಾರಿಗಳ ಮೂಲಕ ಅಭಿವೃದ್ಧಿಯನ್ನು ಹೊಂದುತ್ತಿರುವುದು ಹೆಮ್ಮೆ ಪಡುವ ವಿಚಾರವೇ. ಆದರೆ ಗುತ್ತಿಗೆ ಕಂಪನಿಗಳು ಪ್ರಮುಖವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ಮಳೆ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿ ವ್ಯವಸ್ಥೆಗಳನ್ನು ಕಲ್ಪಿಸದಿರುವುದು, ಅಗೆದು ಹಾಕಿದ ಅಗತ್ಯಕ್ಕಿಂತ ಹೆಚ್ಚಿನ ಮಣ್ಣುಗಳನ್ನು ಬೇರೆ ಜಾಗಕ್ಕೆ ಡಂಪ್ ಮಾಡದಿರುವುದು, ಗುಡ್ಡಗಳನ್ನು ಅಗೆದು ರಸ್ತೆ ನಿರ್ಮಿಸುವಾಗ ಜರೆಗಳು ಬೀಳದಂತೆ ತಡೆಗೋಡೆ ನಿರ್ಮಿಸದೇ ಅಸಡ್ಡೆ ತೋರುವುದರಿಂದ ಪ್ರಮುಖವಾಗಿ ಮಳೆ ನೀರು ಹರಿದು ಹೋಗದೆ ರಸ್ತೆಗಳಲ್ಲಿ ನಿಂತು ದ್ವೀಪದಂತಾಗಿ ರಸ್ತೆ ಸಂಚಾರ ಬ್ಲಾಕ್ ಆಗುವುದು, ರಸ್ತೆಗಳ ಕೆಸರು ಮಣ್ಣಿನಿಂದ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವುದು, ಪಾದಚಾರಿಗಳಿಗೆ ಕೆಸರು ಚೆಲ್ಲುವುದು, ವಾಹನಗಳು ಮಣ್ಣಿನಿಂದ ಆವರಿಸುವುದು, ಮಣ್ಣು ಜಾರಿ ರಸ್ತೆಗೆ ಬಿದ್ದು ಸಂಪರ್ಕ ಕಡಿದುಕೊಂಡು ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ.

ಇನ್ನು ಪ್ರಯಾಣಿಕರಿಗೆ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ಮಲೆನಾಡನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್, ಸಾಂಸ್ಕೃತಿಕ ನಗರಿ ಮೈಸೂರು ಸಂಪರ್ಕಿಸುವ ಮಡಿಕೇರಿ ರಸ್ತೆಗಳಲ್ಲಿ ಗುಡ್ಡ ಕುಸಿತ ಬೆಟ್ಟ ಕುಸಿತದಿಂದಾಗಿ ರಸ್ತೆ ಸಂಚಾರ ಕಡಿತ ಗೊಂಡು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಮೂರು ಮಾರ್ಗಗಳು ಕೂಡ ಮಳೆಗಾಲ ಸಂದರ್ಭ ದಲ್ಲಿ ಸಂಚಾರಕ್ಕೆ ನಿಘಂಟಿನ ರಸ್ತೆಗಳಲ್ಲ. ಇಲ್ಲಿ ವಿಪರೀತ ಮಳೆಗಾಲ ಸಂದರ್ಭದಲ್ಲಿ ಪ್ರಯಾಣಿಕರು ಘಾಟ್ ಸೆಕ್ಷನ್‌ನಲ್ಲಿ ದಿನವಿಡೀ ರಸ್ತೆ ಬ್ಲಾಕ್ ಆಗಿ ತಾವು ಬರುವ ವಾಹನಗಳಲ್ಲಿ ಮಹಿಳೆಯರು ಮಕ್ಕಳನ್ನು ಹೊತ್ತು ಅನ್ನ ಆಹಾರವಿಲ್ಲದೆ ಸುಗಮ ಸಂಚಾರಕ್ಕೆ ಎದುರು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ರಸ್ತೆ ಬ್ಲಾಕ್ ಹಿನ್ನೆಲೆಯಲ್ಲಿ ಮಂಗಳೂರು ಬೆಂಗಳೂರು ಹೆಚ್ಚುವರಿ ರೈಲು ಓಡಾಟ ವ್ಯವಸ್ಥೆಯನ್ನು ಇತ್ತೀಚಿಗೆ ಕಲ್ಪಿಸಲಾಗಿದೆ. ಇನ್ನು ಅವೈಜ್ಞಾನಿಕವಾಗಿ
ಮನೆ ನಿರ್ಮಾಣ, ಕಂಪೌಂಡ್ ನಿರ್ಮಾಣದಿಂದ ಕಂಪೌಂಡ್ ಕುಸಿದು ಬಿದ್ದು ಮತ್ತು ಮನೆ ಕುಸಿದು ದಾರುಣವಾಗಿ ಹಲವಾರು ಮಂದಿ ಮೃತಪಟ್ಟ
ಘಟನೆ ಈ ಬಾರಿಯ ಮಳೆಗೆ ಸಂಭವಿಸಿದೆ. ಅಂಕೋಲದ ಶೀರೂರು ಗುಡ್ಡ ಕುಸಿತ, ಬೆಳಗಾವಿ ನಿಪ್ಪಾಣಿಯಲ್ಲಿನ ಮನೆ ಕುಸಿತ, ಉಳ್ಳಾಲ ಮದನಿ ನಗರ ದಲ್ಲಿ ನಡೆದ ದುರಂತ ಹಾಗೂ ಈ ಹಿಂದೆ ಮಡಿಕೇರಿ ಕೊಡಗಿನಲ್ಲಿ ನಡೆದ ಬಹುದೊಡ್ಡ ಗುಡ್ಡ ಕುಸಿತ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ.

ಬಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ತಂತಿಗಳು ತುಂಡಾಗಿ ತಂತಿ ಸ್ಪರ್ಶಿಸಿ ಹಲವಾರು ಜೀವಗಳು ಹಾನಿಯಾಗಿವೆ. ದಾರಿ ಮಧ್ಯೆ ಸಂಚರಿಸುವ ಪಾದಚಾರಿಗಳು, ವಿದ್ಯಾರ್ಥಿಗಳು, ಪ್ರಾಣಿಗಳು ಕೂಡ ವಿದ್ಯುತ್ ಅವಘಡಕ್ಕೆ ಬಲಿಯಾದ ಘಟನೆಗಳು ವರದಿಯಾಗಿದೆ. ಕೆಲವೊಂದು ಪ್ರದೇಶದಲ್ಲಿ ಇಂತಹ ಅಪಾಯಕಾರಿ ವಿದ್ಯುತ್ ಕಂಬ, ತಂತಿಗಳು ಜೋತು ಬೀಳುವ ಸ್ಥಿತಿಯಲ್ಲಿದ್ದು ಸಂಬಂಧಪಟ್ಟವರಿಗೆ ತಿಳಿಸಿದರೂ ಅಧಿಕಾರಿ ಗಳ ಬೇಜವಾಬ್ದಾರಿಯಿಂದಲೂ ಕೆಲವೆಡೆ ದುರ್ಘಟನೆ ನಡೆದಿವೆ. ಮಳೆಗಾಲ ಪೂರ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿ ನೆರೆ ಹಾಗೂ ಮಳೆ ಮುಂಜಾಗ್ರತಾ ಕ್ರಮಗಳನ್ನು ಪೂರ್ವಭಾವಿಯಾಗಿ ಕೈಗೊಳ್ಳುವಲ್ಲಿ ಅಸಡ್ಡೆ ತೋರುವುದು ಒಂದು ಭಾಗವಾದರೆ ಇನ್ನು ತಗ್ಗು ಪ್ರದೇಶಗಳಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ, ಗಂಜಿ ಕೇಂದ್ರಗಳನ್ನು ನಿರ್ಮಿಸಿರುವುದು ಕೂಡ ಕಂಡು ಬಂದಿವೆ.

ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯುಂಟಾಗಿ ಕೋಟ್ಯಾಂತರ ರುಪಾಯಿಗಳ ನಷ್ಟ ಸಂಭವಿಸಿದ ಘಟನೆಗಳಿವೆ. ವರ್ಷಗಳು ಕಳೆದಂತೆ ಮಳೆಯ ಪ್ರಮಾಣ ಕುಂಠಿತವಾಗುತ್ತಿರುವ ಮಧ್ಯೆ ಹಲವಾರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ ಎರಡು ದಶಕ ಗಳ ಹಿಂದೆ ಈ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೂ ಈ ಮಟ್ಟದ ಹಾನಿಯಾಗಿರುವುದು ಬಹಳ ವಿರಳ. ಆ ಕಾಲದಲ್ಲಿ ಮಳೆ ನೀರು ಸುಗಮವಾಗಿ ಸಾಗಲು ಬೇಕಾದಷ್ಟು ಜಾಗಗಳಿದ್ದವು. ಪ್ರಮುಖ ಪಟ್ಟಣ, ನಗರಗಳಲ್ಲಿ ನೀರು ಬ್ಲಾಕ್ ಆಗುವ ಪ್ರಮೇಯಗಳು ಬಹಳ ಕಡಿಮೆಯಿದ್ದು, ಇತ್ತೀಚಿನ ಹತ್ತು
ವರ್ಷ ಗಳಿಂದ ಕೊಂಚ ಮಳೆಯಾದರೂ ಮನೆಗಳಿಗೆ ನೀರು ನುಗ್ಗುವ ಪ್ರಸಂಗಗಳು ಎದುರಾಗಿವೆ.

ಎಡೆ ಜಾಗಗಳ ಅತಿಕ್ರಮಣ, ಬೃಹದಾಕಾರವಾಗಿ ತಲೆ ಎತ್ತುತ್ತಿರುವ ಕಟ್ಟಡಗಳು, ಕೆರೆ ಕಾಲುವೆಗಳ, ಚರಂಡಿಯ ಒತ್ತುವರಿ, ಚರಂಡಿಗಳಲ್ಲಿ ಹೂಳು, ಪ್ಲ್ಯಾಸ್ಟಿಕ್ ಕಸಕಡ್ಡಿಗಳು ತುಂಬಿ ನೀರಿನ ಹರಿವಿಗೆ ತೊಡಕಾಗುವುದು ಕೂಡ ಒಂದು ಕಾರಣವೆನ್ನಬಹುದು. ಇನ್ನು ಮಳೆಗಾಲ ಬಂತೆಂದರೆ ಸಾಕು ಸಾಂಕ್ರಾಮಿಕ ರೋಗಗಳು, ವಿವಿಧ ರೀತಿಯ ಜ್ವರಗಳು, ವಿವಿಧ ಖಾಯಿಲೆಗಳು ಜನಸಾಮಾನ್ಯರನ್ನು ಆವರಿಸಿಕೊಳ್ಳುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರಿಗೆ ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ದಂಡೇ ಕಾಣಬಹುದು. ಮಲೇರಿಯಾ, ಡೆಂಘೀನಂತಹ ಖಾಯಿಲೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ಹಲವಾರು ಸಾವುಗಳು ಸಂಭವಿಸಿವೆ.

ದಿಢೀರ್ ಜ್ವರ, ನಿತ್ರಾಣ ರಕ್ತಕಣಗಳ ಕೊರತೆಯಿಂದ ದಿನಗಳೆದಂತೆ ಶರೀರ ಕುಂಠಿತಗೊಂಡು ಅಸುನೀಗುವ ಲಕ್ಷಣಗಳನ್ನು ಹೊಂದಿರುವ ಈ ಜ್ವರವು ಪ್ರಸ್ತುತ ಎಡೆ ಬಾಧಿಸುತ್ತಿದೆ. ಇನ್ನು ಸಾಮಾನ್ಯ ಶೀತ, ಜ್ವರ, ಕಫದಂತಹ ಲಕ್ಷಣಗಳು ಮಾಮೂಲು ಎಂಬಂತಿದೆ. ಮನೆಯ ಸುತ್ತಮುತ್ತಲಿನ ಸ್ವಚ್ಚತಾ ಕೊರತೆ, ಚರಂಡಿ ನೀರು ಸುಗಮವಾಗಿ ಹರಿದು ಹೋಗದೆ ಕ್ರಿಮಿ ಕೀಟಗಳು, ಸೊಳ್ಳೆಗಳ ಕಾಟದಿಂದ ಉಂಟಾಗುವ ಈ ಕಾಯಿಲೆಯ ಬಗ್ಗೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರ ದಂಡು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದೆ.

ಇನ್ನು ಮಳೆಗಾಲದಲ್ಲಿ ಸಂಭವಿಸುವ ಅಪಾರ ಆಸ್ತಿ ಪಾಸ್ತಿಗಳ ಹಾನಿಗೆ ಸರಕಾರದ ಪರಿಹಾರ ನಿಧಿಯಿಂದ ದೊರಕುವ ಪರಿಹಾರ ಧನಗಳು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಏನೂ ಸಾಲದಂತಿದೆ. ಪರಿಹಾರೋಪಾಯಗಳು ಕೂಡ ಸರಕಾರ ಮಟ್ಟದಲ್ಲಿ ತುರ್ತಾಗಿ ಫಲಾನುಭವಿಗಳಿಗೆ ತಲುಪಬೇಕಾದ ಅವಶ್ಯಕತೆಗಳಿದೆ. ಮನೆ ಕುಸಿತ, ಕಂಪೌಂಡ್ ಕುಸಿತ, ಹಟ್ಟಿ ಕುಸಿತ, ಗುಡ್ಡ ಕುಸಿತದಿಂದ ಉಂಟಾದ ಅಪಾರ ಹಾನಿಗಳಿಗೆ ರೈತರ ಕೃಷಿ ಸಂಪತ್ತುಗಳಿಗೆ ಉಂಟಾಗುವ ಬೆಳೆ ಪರಿಹಾರಗಳಲ್ಲಿ ಸರಕಾರಗಳು ಯಾವುದೇ ತಾರತಮ್ಯ ಉಂಟು ಮಾಡದೇ ಮಧ್ಯವರ್ತಿಗಳ ಹಾವಳಿಯನ್ನು
ತಡೆಗಟ್ಟಿ ನೇರವಾಗಿ ಫಲಾನುಭವಿಗಳ ಕೈಗೆ ಅಥವಾ ಖಾತೆಗೆ ಪರಿಹಾರಧನ ಜಮೆಯಾಗುವಂತಹ ವ್ಯವಸ್ಥೆಗಳು ಪಾರದರ್ಶಕತೆಯನ್ನು ಎತ್ತಿ ಹಿಡಿದಂತಾ ಗುತ್ತದೆ.

ಮಳೆಗಾಲದ ನಿತ್ಯ ನಿರಂತರ ಅವಾಂತರಗಳಿಗೆ ಜನಸಾಮಾನ್ಯರು ಕೂಡ ಸಾಕಷ್ಟು ಮುಂಜಾಗ್ರತೆ, ಮುನ್ನೆಚ್ಚರಿಕೆಯನ್ನು ಸರಕಾರದ ಹೊರತಾಗಿ ವಹಿಸ
ಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ.

(ಲೇಖಕರು: ಹವ್ಯಾಸಿ ಬರಹಗಾರರು)