Sunday, 1st December 2024

ಮಳೆಗಾಲದಲ್ಲಿ ಹೇಗಿರಬೇಕು ಆಹಾರ-ವಿಹಾರ ?

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ಮಳೆಗಾಲ ಯಾರಿಗೆ ಇಷ್ಟ ಇಲ್ಲ ಹೇಳಿ?! ಈ ರಮ್ಯವಾದ ಋತುವಿನಲ್ಲಿ ಹೊರಗಿನ ಪ್ರಕೃತಿಯ ಸೌಂದರ್ಯವನ್ನು ಆನಂದಿಸುವುದರ ಜೊತೆಗೆ ನಮ್ಮ ದೇಹದ ಒಳಗಿನ ಪ್ರಕೃತಿಯ ಅರಿವನ್ನು ಹೊಂದುವುದು ಅಷ್ಟೇ ಮುಖ್ಯ. ವರ್ಷಾಕಾಲದಲ್ಲಿ ಬಾಹ್ಯ ವಾತಾವರಣದ ಪ್ರಭಾವದಿಂದ ಶರೀರದಲ್ಲಿ
ಕ್ಲೇದ/ ದ್ರವಾಂಶ ಹೆಚ್ಚು. ಜೀರ್ಣಶಕ್ತಿ, ಹಸಿವೆ, ಬಾಯಾರಿಕೆ ಕಡಿಮೆ. ದೇಹದ ಬಲ ಕ್ಷಯ. ಮೂರು ದೋಷಗಳ ವಿಕೃತಾವಸ್ಥೆ.

ಇಂತಹ ಪರಿಸ್ಥಿತಿಯಲ್ಲಿ ಈ ಎಲ್ಲ ಏರುಪೇರುಗಳನ್ನು ಸರಿದೂಗಿಸಿಕೊಂಡು ಹೋಗುವ ಆಹಾರ-ವಿಹಾಗಳನ್ನು ಕಲ್ಪಿಸಿಕೊಳ್ಳುವುದು ಬಹಳ ಮುಖ್ಯ . ಇದಕ್ಕೆ ಆಯುರ್ವೇದದ ‘ಋತುಚರ್ಯ’ಯೇ ಸೂಕ್ತವಾದ ಮಾರ್ಗದರ್ಶಿ. ಹಾಗಾದರೆ ಹೆಚ್ಚಿನ ಪೀಠಿಕೆ ಇಲ್ಲದೆ ಮಳೆಗಾಲದ ಸೂಕ್ತ ಆಹಾರವಿಹಾರ ಗಳನ್ನು ಶಾಸದ ಚೌಕಟ್ಟಿನಲ್ಲಿ ತಿಳಿಯೋಣ.

ಜೀರ್ಣಶಕ್ತಿ ಕಡಿಮೆ ಇರುವಾಗ ಆಹಾರದ ಪ್ರಮಾಣದ ಬಗ್ಗೆ ಎಚ್ಚರವಹಿಸಬೇಕು. ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುವಷ್ಟೇ ಆಹಾರವನ್ನು ಸೇವಿಸ ಬೇಕು. ಆಹಾರಕಾಲದ ನಡುವೆ ಏನನ್ನು ಸೇವಿಸದಿರುವುದು, ಏನನ್ನು ಕುಡಿಯದಿರುವುದು ಹುಳಿತೇಗು, ಅಜೀರ್ಣ, ಭೇದಿ, ತಲೆನೋವು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಾಮಾನ್ಯವಾಗಿ ಸೇವಿಸುವ ಆಹಾರವು ಬಿಸಿಯಾಗಿದ್ದಷ್ಟು ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿರುವ ಪೋಷಕಾಂಶ ಗಳು ದೇಹಕ್ಕೆ ದೊರಕಬೇಕಾದರೆ ಆಗಷ್ಟೇ ತಯಾರಿಸಿದ, ಬಿಸಿಯಾದ ಚೆನ್ನಾಗಿ ಬೆಂದ ಆಹಾರದ ಸೇವನೆ ಅವಶ್ಯಕ.

ಆದರೆ, ಇಂದಿನ “Busy life’ ನಲ್ಲಿ ಮೂರು ಹೊತ್ತು ಬಿಸಿ ಊಟವನ್ನು ಮಾಡುವುದು practical ಅಲ್ಲ ಅನ್ನುವದು ಬಹಳ ಜನರ ಅಭಿಪ್ರಾಯ. ಅದಕ್ಕೆ
ಒಂದು ಸುಲಭವಾದ ಪರಿಹಾರವೆಂದರೆ ಊಟ ತಣ್ಣಗಾಗಿದ್ದರೂ, ಅದರ ಜೊತೆಯಲ್ಲಿ ಸ್ವಲ್ಪ ಬಿಸಿ ನೀರನ್ನು ಊಟದ ಮಧ್ಯೆ ಮಧ್ಯೆ ಹೀರುವುದರಿಂದ,
ಆಹಾರವನ್ನು ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಾಕೆಂದರೆ ಆಯುರ್ವೇದದ ಪ್ರಕಾರ, ಕುದಿಸಿದ ಬಿಸಿನೀರು – ‘ದೀಪನ’ ಅಂದರೆ ಜಠರಾಗ್ನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಆಹಾರವನ್ನು ಸುಲಭವಾಗಿ ಜೀರ್ಣಿಸಿ, ಮಲಮೂತ್ರ ಪ್ರವೃತ್ತಿಯನ್ನು ಸಹ ಸರಾಗ ಮಾಡುತ್ತದೆ.

ಹಾಗಾಗಿ, ಆಹಾರದ ಜೊತೆ ಸದಾ ಕುದಿಸಿದ ನೀರನ್ನು ಸೇವಿಸುವುದು ಅತ್ಯುತ್ತಮ. ಆಯುರ್ವೇದ ಹೇಳತ್ತೆ, ಸ್ವಾಸ್ಥ್ಯ ರಕ್ಷಣೆಗಾಗಿ ಆಹಾರದ ಮೊದಲು ಅಥವಾ ಆಹಾರದ ನಂತರ ನೀರು ಸೇವಿಸುವುದ ಒಳ್ಳೆಯದಲ್ಲ. ಸದಾ ಊಟದ ಜೊತೆ, ಸ್ವಲ್ಪ ಸ್ವಲ್ಪ ನೀರು ಕುಡಿಯುವುದು ಸದಾ ಆರೋಗ್ಯಕರ ಅಭ್ಯಾಸ ವೆಂದು. ಇನ್ನು, ಮಾಡಿಟ್ಟ ತಂಗಳ ಆಹಾರ/ ಫ್ರಿqನಲ್ಲಿ ವಾರಗಳ ಗಟ್ಟಲೆ ಶೇಖರಿಸಿದ ಆಹಾರವು ಶರೀರ- ಮನಸ್ಸುಗಳ ಸ್ವಾಸ್ಥ್ಯವನ್ನು ಹಾಳು ಮಾಡು ವುದು ಖಚಿತ. ಮಳೆಗಾಲದಲ್ಲಂತೂ ಕೇಳುವುದೇ ಬೇಡ.

ಹಾಗೆಯೇ ಒಮ್ಮೆ ಮಾಡಿಟ್ಟು ಮತ್ತೆ ಮತ್ತೆ ಅದನ್ನೇ ಬಿಸಿ ಮಾಡಿ/ ಓವೆನ್‌ನಲ್ಲಿಟ್ಟು ಬಿಸಿ ಮಾಡಿದ ಆಹಾರವು ಆರೋಗ್ಯ ಪೂರಕವಲ್ಲ. ಇಂತಹ ಆಹಾರಗಳು ಪೋಷಣೆಯನ್ನು ನೀಡದೆ ಬೇಗನೆ ಮುಪ್ಪು ಆವರಿಸುವುದಕ್ಕೂ ಕಾರಣ. ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಪದೇ ಪದೇ ಅನಾರೋಗ್ಯ ವನ್ನು ತರುತ್ತದೆ. ಹಾಗಾಗಿ ತಂಗಳ ಪಟ್ಟಿಗೆಯಿಂದ ದೂರವಿದ್ದಷ್ಟು ಆರೋಗ್ಯಕ್ಕೆ ಹತ್ತಿರವಾಗಬಹುದು. ಮಳೆಗಾಲದಲ್ಲಿ ವಿಶೇಷವಾಗಿ ಯಾವ ರುಚಿ ಪ್ರಧಾನವಾದ ಆಹಾರವನ್ನು ಸೇವಿಸಬೇಕು? ನಿಮಗೆ ಗೊತ್ತಿರಬಹುದು ರಸಗಳು ೬ – ಮಧುರ ಅಂದರೆ ಸಿಹಿ, ಆಮ್ಲ ಅಂದರೆ ಹುಳಿ, ಲವಣ ಅಂದರೆ ಉಪ್ಪು, ಕಟು ಅಂದರೆ ಖಾರ, ತಿಕ್ತ ಅಂದರೆ ಕಹಿ ಹಾಗೂ ಕಷಾಯ ಅಂದರೆ ಒಗರು – ಇವುಗಳನ್ನು ಆಯುರ್ವೇದದಲ್ಲಿ ‘ಷಡ್ರಸ’ ಎಂದು ಕರೆಯುತ್ತಾರೆ.

ಆಯುರ್ವೇದದ ಪ್ರಕಾರ ಷಡ್ರಸೋಪೇತ ಭೋಜನ ಯಾವಾಗಲೂ ಆರೋಗ್ಯಕರ – ಅಂದರೆ ನಿತ್ಯ ಸೇವಿಸುವ ಮೂರು ಕಾಲದ ಆಹಾರದಲ್ಲಿಯೂ ೬ ರಸಗಳ balance ಇರಬೇಕು. ಯಾವುದೋ ಒಂದೇ ರುಚಿ ಪ್ರಧಾನವಾದ ಆಹಾರವನ್ನೇ ಸದಾ ಸೇವಿಸುವುದರಿಂದ ಬಲ ಕಡಿಮೆಯಾಗುವುದು ಖಚಿತ ಅನ್ನುವುದು ಆಯುರ್ವೇದದ ವಾಕ್ಯ. ಇನ್ನು ಮಳೆಗಾಲದಲ್ಲಿ ವಿಶೇಷವಾಗಿ ಹುಳಿರಸ ಹೆಚ್ಚಾಗಿರುವ, ಜೊತೆಗೆ ಉಪ್ಪು ಖಾರ ಇರುವ ಬಿಸಿ ಬಿಸಿಯಾದ, ಸ್ವಲ್ಪ ಜಿಡ್ಡಿನಿಂದ ಒಗ್ಗರಿಸಿದ, ಜೀರ್ಣಕ್ಕೆ ಹಗುರವೂ ಆದ ಆಹಾರದ ಸೇವನೆ ಹಿತಕರ.

ಉದಾಹರಣೆಗೆ – ಜೀರಿಗೆ, ಮೆಣಸು, ಹಿಂಗು, ಸಾಸಿವೆಗಳಿಂದ ಒಗ್ಗರಿಸಿದ ಹುಣಸೆ ಸಾರು, ನಿಂಬೆಹಣ್ಣಿನ ಸಾರು, ನೆಲ್ಲಿಕಾಯಿ ಸಾರು, ಶುಂಠಿ ರಸಂ, ಕೋಕಂ/ಅಮ್ಸೋಲ್ ಸಾರು, ದಾಳಿಂಬೆ ಸಾರು ಇತ್ಯಾದಿ. ಇನ್ನು ಮಜ್ಜಿಗೆಯಿಂದ ಮಾಡಿದ ಕಡಿ, ಮಜ್ಜಿಗೆ ಹುಳಿ, ಪಳದ್ಯಗಳು ಅತ್ಯಂತ ಹಿತ. ಆದರೆ ನೆನಪಿಡಿ- ಈ ಖಾದ್ಯಗಳಿಗೆ ಮಜ್ಜಿಗೆಯನ್ನು- ಚೆನ್ನಾಗಿ ನೀರು ಹಾಕಿ ಕಡಿದ ಮಜ್ಜಿಗೆಯನ್ನು ಉಪಯೋಗಿಸಬೇಕೇ ಹೊರತು, ಮೊಸರನ್ನಲ್ಲ! ಯಾಕೆಂದರೆ ಮೊಸರನ್ನು
ಎಂದಿಗೂ ಬಿಸಿ ಮಾಡಬಾರದು ಅಥವಾ ಬಿಸಿ ಆಹಾರದ ಜೊತೆ ಸೇವಿಸಬಾರದು. ಹಾಗಾಗಿ ಮಜ್ಜಿಗೆಯ ಬಳಕೆ ಸದಾ ಹಿತ.

ಹಳೆಯ ಅಕ್ಕಿಯ ಅನ್ನ, ಹಳೆಯ ಜವೆ ಗೋಧಿ/ ಬಾರ್ಲಿ, ಗೋಧಿಯ ಅನ್ನ, -ಲ್ಕಾ, ರೊಟ್ಟಿಗಳು ಒಳ್ಳೆಯದು. ಹೊಸ ಅಕ್ಕಿ ಜೀರ್ಣಕ್ಕೆ ಜಡ ಹಾಗೂ
ಮಧುಮೇಹದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಹುರುಳಿ ಕಟ್ಟು ಸಾರು, ತೊಗರಿ ಕಟ್ಟು, ಹೆಸರು ಕಟ್ಟು ಸಾರು, ರಾಗಿ ಮತ್ತು ಹೆಸರುಬೇಳೆ
ಯನ್ನು ಸಾಕಷ್ಟು ಬಳಸಬಹುದು. ಶುಂಠಿ, ಮೆಣ ಸು, ಬೆಳ್ಳುಳ್ಳಿ, ಸಾಸಿವೆ, ಅರಿಶಿಣಗಳನ್ನು ಹೆಚ್ಚಾಗಿ ಬಳಸಬೇಕು. ಬೇಸಿಗೆಯಲ್ಲಿ ಚೆನ್ನಾಗಿ ಒಣಗಿಸಿಟ್ಟ
ಒಣ ತರಕಾರಿ, ಬಾಳಕ, ಉಪ್ಪು ಮೆಣಸಿನ ಕಾಯಿ ಯ ಬಳಕೆ ಹಿತ. ಹೀರೆಕಾಯಿ, ಪಡವಲಕಾಯಿ, ಹಾಲುಗುಂಬಳ, ಸೋರೆಕಾಯಿ, ಮಂಗಳೂರು
ಸೌತೆ, ಬೂದುಗುಂಬಳ, ಮೂಲಂಗಿ, ಕ್ಯಾರೆಟ, ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸಬಹುದು.

ಆದರೆ ನೆನಪಿಡಿ ಹೆಚ್ಚಿನ Raw Salads/sprouts ಈ ಋತುವಿನಲ್ಲಿ ವರ್ಜ್ಯ. ಹೊಸ ನೀರು, ಭೂಮಿಯಲ್ಲಿ ಕೆಸರು ಇರುವ ಕಾರಣ ಈ ಕಾಲದಲ್ಲಿ ಬೆಳೆದ ಸೊಪ್ಪುತರಕಾರಿಗಳು ಕ್ರಿಮಿಯನ್ನು ಉತ್ಪತ್ತಿ ಮಾಡುತ್ತದೆ. ಜೀರ್ಣವಾಗುವಾಗ ಹುಳಿಗೊಳ್ಳುತ್ತದೆ. ಈ ಕಾರಣದಿಂದ ಬಳಸದೇ ಇರುವುದು ಅಥವಾ ಮಿತವಾಗಿ ಬಳಸುವುದು ಕ್ಷೇಮ. ನಿಮಗಿದು ಗೊತ್ತೇ? ಆಯುರ್ವೇದದ ಪ್ರಕಾರ ಮೊಳಕೆ ಕಾಳುಗಳ ಮತ್ತು ಹಸಿ ತರಕಾರಿಗಳ ಬಳಕೆ ನಿಷಿದ್ಧ. ಇವುಗಳು ಅತ್ಯಂತ ಅನಾರೋಗ್ಯಕರ ಪದಾರ್ಥಗಳೆಂದು ಆಯುರ್ವೇದದ ಮತ. ಮಾಂಸಾಹಾರಿಗಳು ಕೂಡ ಜೀರ್ಣಕ್ಕೆ ಹಗುರವಾದಂತಹ ಪಕ್ಷಿಗಳ/ಪ್ರಾಣಿಗಳ ಮಾಂಸದ ಬಳಕೆ ಮಾಡಬಹುದು. ಅವುಗಳನ್ನು ಬೇಯಿಸಿದ ನೀರು, ಸೂಪ್, ಸಾರು, ಗ್ರಿಲ್ಡ್ ಚಿಕನ್, ಒಣಗಿಸಿ ಬೇಯಿಸಿದ ಮಾಂಸವನ್ನು ತಿನ್ನಬಹುದು. No fried meat!

ಸಂಡಿಗೆ, ಹಪ್ಪಳ, ಉಪ್ಪಿನಲ್ಲಿಟ್ಟ ತರಕಾರಿ, ಉಪ್ಪಿನಕಾಯಿಗಳ ಮಿತವಾದ ಸೇವನೆ ಒಳ್ಳೆಯದು. ಹಣ್ಣುಗಳಲ್ಲಿ- ಒಣ ದ್ರಾಕ್ಷಿ, ದಾಳಿಂಬೆ, ಬೆಟ್ಟದ
ನೆಲ್ಲಿಕಾಯಿ, ಖರ್ಜೂರಗಳನ್ನು ಬಳಸಬಹುದು. ಇನ್ನು ಮೊಸರಿನ ಬಳಕೆಯ ಬಗ್ಗೆ ವಿಶೇಷವಾಗಿ ಹೇಳಬೇಕು – ಮೊಸರನ್ನು ಆಯುರ್ವೇದವು ರಾತ್ರಿ ಸೇವನೆಗೆ ನಿಷಿದ್ಧವೆಂದು ಹೇಳಿದೆ. ಆದರೆ, ದಿನದಲ್ಲಿ ಹುಳಿ ಇರದ/ ತಣ್ಣಗಿರದ ಮೊಸರನ್ನು ಸ್ವಲ್ಪ ಜೇನುತುಪ್ಪ ಅಥವಾ ಬೇಳೆ ಕಟ್ಟು ಅಥವಾ
ಸಕ್ಕರೆ ಅಥವಾ ನೆಲ್ಲಿಪುಡಿಯ ಜೊತೆಗೆ ಬಳಸುವುದು ಹಿತಕರ. ಮೊಸರಿನ ಜೊತೆ ಹಾಲನ್ನು ಬೆರೆಸಿ ತಿನ್ನುವುದು ಅಥವಾ ಬಿಸಿಯಾದ ಆಹಾರದ ಜೊತೆ
ತಿನ್ನುವುದು ಒಳ್ಳೆಯದಲ್ಲ.

ಇನ್ನು ಮಳೆಗಾಲದಲ್ಲಿ ನೀರಿನ ಬಳಕೆಯ ಬಗ್ಗೆ ಕೆಲವು ವಿಚಾರಗಳು – ಮಳೆಗಾಲದಲ್ಲಿ ಎಂತಹ ನೀರನ್ನು ಕುಡಿಯಬೇಕು? ಘನಾಹಾರಗಳ ಜೊತೆ
ಸದಾ ಕುಡಿಯಲು ಹೊಂದುವ ಪಾನೀಯವೆಂದರೆ ಚೆನ್ನಾಗಿ ಕುದಿಸಿದ ನೀರು ಅಥವಾ ಸ್ವಲ್ಪವೇ ಶುಂಠಿ ಪುಡಿ ಹಾಕಿ ಕುದಿಸಿದ ನೀರು ಅಥವಾ ಜೀರಿಗೆ ಹಾಕಿ ಕುದಿಸಿದ ನೀರು. ಆದರೆ ನೆನಪಿಡಿ – ಬಾಯಾರಿಕೆ ಯನ್ನು ಗಮನಿಸಿ ನೀರು ಕುಡಿದರೆ ಕ್ಷೇಮ. ಬಾಯಾರಿಕೆ ಇಲ್ಲದೆ ಸುಮ್ಮನೆ ಪದೇ ಪದೇ ಮಳೆಗಾಲ ದಲ್ಲಿ ನೀರು ಕುಡಿಯುವುದರಿಂದ ಹಲವಾರು ರೋಗಗಳನ್ನು ನಾವೇ ಬರಮಾಡಿಕೊಂಡಂತಾಗುತ್ತದೆ.

ಇದಲ್ಲದೆ, ಮಳೆಗಾಲದಲ್ಲಿ ಶರೀರದಲ್ಲಿ ದ್ರವದ ಅಂಶ ಹೆಚ್ಚುವ ಕಾರಣ ಈ ಋತುವಿನಲ್ಲಿ ಜೇನುತುಪ್ಪದ ಪ್ರಯೋಗ ಬಹಳ ಒಳ್ಳೆಯದು. ಆದರೆ ಹಿತಮಿತ ಪ್ರಮಾಣದಲ್ಲಿರಲಿ. ಕಾಯಿಸಿ ಆರಿಸಿದ ನೀರಿಗೆ ಸಿಹಿಯಾಗುವಂತೆ ಶುದ್ಧವಾದ ಜೇನುತುಪ್ಪವನ್ನು ಸೇರಿಸಿಕೊಂಡು ಕುಡಿಯಬಹುದು. Remember to never eat honey with anything hot or in hot climate! ಈ ಮೇಲೆ ಹೇಳಿದ ಎಲ್ಲಾ ಪಾನೀಯಗಳು ಜೀರ್ಣಕ್ರಿಯೆಗೆ ಪುಷ್ಟಿ ನೀಡಿ ತೇವಾಂಶವನ್ನು ಸರಿದೂಗಿಸುತ್ತವೆ.

ಒಟ್ಟಿನಲ್ಲಿ ಮಳೆಗಾಲದಲ್ಲಿ ತಾಜಾ, ಬಿಸಿ ಆಹಾರ, ಮಿತವಾದ ಆಹಾರ, ಜೀರ್ಣಕ್ಕೆ ಸುಲಭವಾದ ಆಹಾರ ಸೇವನೆ ಹಿತಕರ. ಒಂದು ಪುಟ್ಟ ಕಿವಿಮಾತು
– ವಿಶೇಷವಾಗಿ ಅತಿಯಾಗಿ ಮಳೆ ಇರುವ ದಿನಗಳಂದು ಬಿಸಿ ಆಹಾರ, ಹುಳಿ-ಉಪ್ಪು ರುಚಿ ಪ್ರಧಾನವಾದ ಜಿಡ್ಡಿನಿಂದ ಒಗ್ಗರಿಸಿದ ಆಹಾರ ಸೇವಿಸುವುದು
ಬಹಳ ಒಳ್ಳೆಯದು. ಅನ್ನಕ್ಕೆ ಬಿಸಿ ಬಿಸಿ ಕೋಕಂ ರಸಂ, ಅದರೊಂದಿಗೆ ಸ್ವಲ್ಪ ನಿಂಬೆಕಾಯಿ ಚಿತ್ರಾನ್ನ ಅಥವಾ ಪುಳಿಯೋಗರೆ , ಕೊನೆಯಲ್ಲಿ ಸ್ವಲ್ಪ ಶುಂಠಿ
ತಂಬುಳಿ ಸವಿದರೆ – ಅದುವೇ ಮಳೆಗಾಲದ ಅತ್ಯಂತ healthiest menu!

ಇನ್ನು ಮಳೆಗಾಲದಲ್ಲಿ ನಮ್ಮ ವಿಹಾರಗಳು ಹೇಗಿರಬೇಕು? ರಾತ್ರಿ ನಿದ್ದೆಗೆಡುವುದು ಅಥವಾ ತಡ ರಾತ್ರಿ ಮಲಗುವುದು ಅನಾರೋಗ್ಯಕರ. ಹಾಗೆಯೇ ಈ
ಕಾಲದಲ್ಲಿ ಹಗಲು ನಿzಯೂ ದೇಹದಲ್ಲಿ ಮತ್ತಷ್ಟು ಜಡತ್ವ ತರುತ್ತದೆ ಜೊತೆಗೆ ತೂಕವನ್ನೂ ಹೆಚ್ಚಿಸುತ್ತದೆ. ಇದರಿಂದ ಅವರೋಧಾತ್ಮಕ ರೋಗಗಳು
ಉತ್ಪತ್ತಿಯಾಗುತ್ತವೆ. ಹಗಲು ನಿದ್ದೆ ಮತ್ತು ರಾತ್ರಿ ಜಾಗರಣೆ ನಮ್ಮನ್ನು ರೋಗಗಳ ಗೂಡನ್ನಾಗಿಸುತ್ತದೆ ಅನ್ನುವುದು ಆಚಾರ್ಯರ ಸ್ಪಷ್ಟ ನುಡಿ.

ಹದವಾದ ವ್ಯಾಯಾಮ ಅಥವಾ ಮೃದು ವ್ಯಾಯಾಮ ಹಿತಕರ. ಅತಿಯಾಗಿ ಸುಸ್ತಾಗುವಷ್ಟು ಮಾಡುವ ವ್ಯಾಯಾಮವು ಈ ಕಾಲದಲ್ಲಿ ಖಂಡಿತ
ಬೇಡ ಯಾಕೆಂದರೆ ಈಗಾಗಲೇ ಶರೀರದ ಬಲ ಕಡಿಮೆ ಇರುವುದರಿಂದ ಅತಿವ್ಯಾಯಾಮ ತೊಂದರೆ ತರುವುದು ಸಿದ್ಧ. ಇದರಿಂದ ಬೇರೆ ಬೇರೆ ರೀತಿಯ deficiency, degeneration, joint disorders, low immunity ಕಾಣಿಸಿಕೊಳ್ಳಬಹುದು. ವಿಶೇಷವಾಗಿ ‘ಅಭ್ಯಂಜನ ಸ್ನಾನ’ ಬಹಳ ಮುಖ್ಯವಾದ ವಿಹಾರ. ಇಡೀ ಮೈಗೆ – ತಲೆಯಿಂದ ಹಿಡಿದು ಪಾದ ಹಾಗೂ ಕಾಲ ಬೆರಳಿನವರೆಗೆ ವಾತಹರ ತೈಲದಿಂದ ಅಭ್ಯಂಜನ ಮಾಡಿ ಅಂದ್ರೆ ಎಣ್ಣೆ ಹಚ್ಚಿ , ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು- ನೋವು ನಿವಾರಕ, ಬಲದಾಯಕ ಹಾಗೂ ಪುಷ್ಟಿಕರ.

Insomnia, hair fall, joint pain, dry skin ಗಳನ್ನು ನಿವಾರಿಸುತ್ತದೆ. ಮೈಥುನ ೧೫ ದಿನಕ್ಕೊಮ್ಮೆ ಇರಲಿ. ಪ್ರಯಾಣ ಕಡಿಮೆ ಇರಲಿ. ಪ್ರಯಾಣ ದಲ್ಲಿ ಎದುರು ಗಾಳಿಯಿಂದ ರಕ್ಷಣೆ ಪಡೆಯಲು helmet/mask/scarf ಗಳನ್ನು ಬಳಸುವುದು ಉತ್ತಮ. ಇವಿಷ್ಟು ವರ್ಷಾ ಋತುಚರ್ಯೆಯ ಒಂದು ಪಕ್ಷಿ ನೋಟ. ಹಾಗಾದರೆ ಪ್ರತಿಯೊಂದು ಋತುವಿನ ಚರ್ಯೆಯನ್ನು ಯಾವಾಗ ಪ್ರಾರಂಭ ಮಾಡಬೇಕು?? ಯಾವಾಗ ಮುಗಿಸಬೇಕು? ಆಯುರ್ವೇದ ದಲ್ಲಿ ‘ಋತುಸಂಧಿ’ ಅನ್ನುವ ಒಂದು ವಿಷಯವಿದೆ. ಇದರ ಪ್ರಕಾರ ಹಿಂದಿನ ಋತುವಿನ ಕೊನೆಯ ಏಳು ದಿನಗಳನ್ನು ಹಾಗೂ ನಂತರದ ಋತುವಿನ ಮೊದಲ ಏಳು ದಿನಗಳನ್ನು- ಅಂದರೆ ಒಟ್ಟು ೧೪ ದಿನಗಳನ್ನು ಋತುಸಂಧಿ ಅಂತ ಪರಿಗಣಿಸಬಹುದು.

ಈ ಕಾಲದಲ್ಲಿ ಹಿಂದಿನ ಋತುಚರ್ಯೆಯನ್ನು ನಿಧಾನವಾಗಿ ನಿಲ್ಲಿಸಿ ಮುಂದಿನ ಋತುವಿನ ಆಹಾರ ವಿಹಾರಗಳನ್ನು ಕ್ರಮೇಣವಾಗಿ ಪಾಲಿಸಲು ಪ್ರಾರಂಭ ಮಾಡಬೇಕು. ತಕ್ಷಣವಾಗಿ ಹಳೆಯ ಆಚರಣೆಯನ್ನು ನಿಲ್ಲಿಸಿ ಮುಂದಿನ ಋತು ಚರ್ಯೆಯನ್ನು ಪ್ರಾರಂಭಿಸುವುದು ಅನಾರೋಗ್ಯಕರ. ಹಾಗಾಗಿ ಬದಲಾವಣೆ ನಿಧಾನವಾಗಿ ಆಗಲಿ. ಸ್ನೇಹಿತರೆ, ಇದು ಆಯುರ್ವೇದದಲ್ಲಿ ಹೇಳಿರುವ ಮಳೆಗಾಲದಲ್ಲಿ ಆರೋಗ್ಯ ರಕ್ಷಣೆಯ ವಿಧಾನ. ಇಡೀ ಋತುಚರ್ಯೆ ಯು- ದೇಹ ಬಲ, ಜೀರ್ಣ ಬಲ/ಅಗ್ನಿ ಬಲ ಹಾಗೂ ದೋಷದ ಬಲಗಳಿಗೆ ಅನುಗುಣವಾಗಿ ಆಹಾರ ವಿಹಾರಗಳ ಸೂಕ್ತ ಬದಲಾವಣೆ. ತನ್ಮೂಲಕ ದೇಹದಲ್ಲಿ ವಿಕೃತವಾದ ದೋಷಗಳ ಪ್ರಾಕೃತ ಶಮನ.

ಇದಕ್ಕಿಂತ ವೈಜ್ಞಾನಿಕವಾದಂತಹ ಆರೋಗ್ಯ ಪಾಲನೆ ಮತ್ತೆಲ್ಲಿ ಶೋಧಿಸಿದರೂ ಸಿಗುವುದಿಲ್ಲ ಅನ್ನುವ ಮಾತನ್ನು ಬಹಳ ಧೈರ್ಯವಾಗಿ ಹೇಳುತ್ತೇನೆ!
Come let us all embrace Ayurveda to Harvest health Happiness!