Friday, 13th December 2024

Rajendra Bhat Column: ನಮ್ಮ ಮಗುವಿನ ಪರಿಪೂರ್ಣ ಶಿಕ್ಷಣಕ್ಕೆ 4 Qಗಳು!

Quotient

ಸ್ಫೂರ್ತಿಪಥ ಅಂಕಣ: ಬುದ್ದಿವಂತಿಕೆ ಒಂದೇ ನಮ್ಮ ಮಗುವಿನ ಆಸ್ತಿ ಅಲ್ಲ!

  • ರಾಜೇಂದ್ರ ಭಟ್ ಕೆ.

Rajendra Bhat Column: ನಿಮ್ಮ ಮಗುವಿನ ಸಾಮರ್ಥ್ಯಗಳನ್ನು ಕೇವಲ ಪರೀಕ್ಷೆಯ (Exams) ಅಂಕಗಳ (Marks) ಮೂಲಕ ಅಳತೆ ಮಾಡುವ ಕಾಲ ಒಂದಿತ್ತು! ಮಕ್ಕಳು ಪಡೆದ ಅಂಕಗಳ ಆಧಾರದ ಮೇಲೆ ಬುದ್ದಿವಂತ, ದಡ್ಡ ಇತ್ಯಾದಿಗಳ ವರ್ಗೀಕರಣ ಆಗ್ತಿತ್ತು.

ಆದರೆ ಮುಂದೆ ಗುಣಾತ್ಮಕವಾದ ಶಿಕ್ಷಣದ (Education) ಕನ್ಸೆಪ್ಟ್ ವಿಸ್ತಾರ ಆಗುತ್ತ ಹೋದಂತೆ ನಮ್ಮ ಮಗುವಿನ ಸರ್ವಾಂಗೀಣವಾದ ಅಭಿವೃದ್ಧಿಯು ಶಿಕ್ಷಣದ ಉದ್ದೇಶ ಅಂತ ಆಯ್ತು. ಅದರ ಆಧಾರದ ಮೇಲೆ ನಮ್ಮ ಮಗುವಿನ ಶಿಕ್ಷಣವು ಪರಿಪೂರ್ಣ ಆಗಬೇಕು ಅಂತಾದರೆ ಈ ಕೆಳಗಿನ ನಾಲ್ಕು ಅಂಶಗಳು (Quotient) ಅತೀ ಮುಖ್ಯ ಎಂದು ಶಿಕ್ಷಣತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅವುಗಳ ಪೂರ್ತಿ ವಿವರವು ಇಲ್ಲಿದೆ.

1) ಬುದ್ಧಿಮತ್ತೆಯ ಸೂಚ್ಯಂಕ – IQ (Inteligent Quotient)

ನಮ್ಮ ಮಗು ಎಷ್ಟು ಬುದ್ದಿವಂತಿಕೆ ಹೊಂದಿದೆ ಎನ್ನುವುದನ್ನು ಅಳತೆ ಮಾಡಲು ಈಗ ಮಾಪನ ಮತ್ತು ಪರೀಕ್ಷೆಗಳು ಇವೆ. ಈಗ ಅದನ್ನು ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮಾಡ್ತಾ ಇಲ್ಲ .ಅದು ಮೆಮೋರಿಯ ಅಳತೆಯು ಕೂಡ ಅಲ್ಲ. ನಮ್ಮ ಮಗು ಎಷ್ಟು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತದೆ ಎಂಬುದರ ಮಾಪನ ಅದು.

ಉದಾಹರಣೆಗೆ ನಮ್ಮ ನಿಮ್ಮ ಮಗು ಫ್ಯೂಸ್ ತಂತಿಯ ಬಗ್ಗೆ ವಿಜ್ಞಾನದಲ್ಲಿ ಸರಿಯಾಗಿ ಓದಿ, ಅದನ್ನು ಬಾಯಿಪಾಠ ಮಾಡಿ ಪರೀಕ್ಷೆಗೆ ಬರೆದು ಮಾರ್ಕ್ಸ್ ತೆಗೆದುಕೊಳ್ಳುತ್ತದೆ. ಆದರೆ ತನ್ನದೇ ಮನೆಯಲ್ಲಿ ಫ್ಯೂಸ್ ವಯರ್ ಹೋದಾಗ ಅದು ಲೈನ್ ಮ್ಯಾನಗೆ ರಿಪೇರಿ ಮಾಡಲು ಕರೆ ಮಾಡಿದರೆ ಅದು ಬುದ್ದಿವಂತಿಕೆ ಅಲ್ಲ! ಅದೇ ಸ್ವತಃ ಫ್ಯೂಸ್ ವಯರ್ ಹಾಕಿದರೆ ಅದು ಬುದ್ದಿವಂತಿಕೆ!

ಪುಸ್ತಕದ ಜ್ಞಾನವನ್ನು ಇವತ್ತು ಪ್ರಾಕ್ಟಿಕಲ್ ಜ್ಞಾನ ರೂಲ್ ಮಾಡುತ್ತ ಇದೆ. ಆದ್ದರಿಂದ ನಿಮ್ಮ ಮಗು ಹೆಚ್ಚು IQವನ್ನು ಪಡೆಯಬೇಕು ಅಂತಾದರೆ ಪ್ರಾಕ್ಟಿಕಲ್ ಜ್ಞಾನವನ್ನು ಹೆಚ್ಚು ಪಡೆಯಬೇಕು. ಅದರ ಅರ್ಥ ಥಿಯರಿಯನ್ನು ನಿರ್ಲಕ್ಷ್ಯ ಮಾಡಬೇಕು ಅಂತ ಅಲ್ಲ!

2) ಸಾಮಾಜಿಕ ಸೂಚ್ಯಂಕ – SQ
(Social Quotient)

ಇದು ನಮ್ಮ ಮಗುವಿನ ಸಾಮರ್ಥ್ಯದ ಎರಡನೇ ಶಕ್ತಿಶಾಲಿ ಮಾನದಂಡ. ನಮ್ಮ ನಿಮ್ಮ ಮಗು ತನ್ನ ಓರಗೆಯ ಇತರ ಮಕ್ಕಳಿಂದ, ಶಿಕ್ಷಕರಿಂದ, ಬಂಧುಗಳಿಂದ, ಗೆಳೆಯರಿಂದ, ನೆರೆಮನೆಯವರಿಂದ ಎಷ್ಟು ಸಹಜ ಪ್ರೀತಿ ಪಡೆಯುತ್ತ ಇದೆ ಅದು ಸಾಮಾಜಿಕ ಸೂಚ್ಯಂಕ.

ನಮ್ಮ ಮಗುವಿನ ತರಗತಿಯಲ್ಲಿ ಎಲ್ಲ ಮಕ್ಕಳ ಕೈಯ್ಯಲ್ಲಿ ಪೇಪರ್ ಮತ್ತು ಪೆನ್ ಕೊಟ್ಟು ನೀವು ಹೆಚ್ಚು ಪ್ರೀತಿಸುವ ಐದು ಗೆಳೆಯರ ಹೆಸರು ಬರೆಯಿರಿ ಎಂದು ಹೇಳಿ. ಅವರು ಬರೆದಾದ ನಂತರ ಅವರೆಲ್ಲರ ಪೇಪರ್ ತೆಗೆದುಕೊಂಡು ಪರೀಕ್ಷೆ ಮಾಡಿದಾಗ ನಮ್ಮ ಮಗುವಿನ ಹೆಸರು ಅತೀ ಹೆಚ್ಚು ಬಾರಿ ರಿಪೀಟ್ ಆಗಿದೆ ಅಂತಾದರೆ ಅದರ SQ ತುಂಬಾ ಹೆಚ್ಚಿದೆ ಎಂದರ್ಥ! ಸಾಮಾಜಿಕ ಸೂಚ್ಯಂಕ ಅಂದರೆ ನಮ್ಮ ಮಗುವಿನ ಸ್ವೀಕಾರಾರ್ಹತೆಯೇ ಆಗಿದೆ. ಗೆಳೆತನ, ಸಹಕಾರ ಮನೋಭಾವ, ತಂಡದಲ್ಲಿ ಕೆಲಸ ಮಾಡುವುದು ನಮ್ಮ ಮಗುವಿನ SQ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ.

ನಮ್ಮ ದೇಶದಲ್ಲಿ ಇಷ್ಟೊಂದು ಜನ ರಾಷ್ಟ್ರಪತಿ ಆಗಿ ಹೋದರೂ ನಮಗೆ ರಾಷ್ಟ್ರಪತಿ ಅಂದ ಕೂಡಲೇ ಯಾಕೆ ಅಬ್ದುಲ್ ಕಲಾಂ ನೆನಪಾಗ್ತಾರೆ. ಅದಕ್ಕೆ ಕಾರಣ ಅವರ SQ!

3) ಭಾವನಾತ್ಮಕ ಸೂಚ್ಯಂಕ – EQ
( Emotional Quotient)

ಇದು ನಮ್ಮ ಮಗುವಿನ ಸರ್ವಾಂಗೀಣವಾದ ಬೆಳವಣಿಗೆಯ ಮೂರನೇ ಸೂಚ್ಯಂಕ. ಅದು ಮಗುವಿನ ಸಹಜವಾದ ಭಾವನೆಗಳ ಸರಿಯಾದ ಮಾಪನ ಆಗಿದೆ. ನಮ್ಮ ಮಗುವು ಬೇರೆಯವರನ್ನು ಎಷ್ಟು ಚೆನ್ನಾಗಿ ಪ್ರೀತಿ ಮಾಡುತ್ತದೆ ಅದು ಅದರ EQ!

ಅದು ತನ್ನ ಗೆಳೆಯರ ಬಗ್ಗೆ, ಟೀಚರ್ ಬಗ್ಗೆ, ಓರಗೆಯವರ ಬಗ್ಗೆ ವ್ಯಕ್ತಪಡಿಸುವ ಸಹಜವಾದ ಭಾವನೆಗಳು ನಮ್ಮ ಮಗುವನ್ನು ಗೆಲ್ಲಿಸುತ್ತವೆ. ಉದಾಹರಣೆಗೆ ಪುನೀತ್ ರಾಜಕುಮಾರ್ ಅವರು ತನ್ನ ಸಹನಟರ ಬಗ್ಗೆ, ನಟಿಯರ ಬಗ್ಗೆ, ಅನಾಥ ಮಕ್ಕಳ ಬಗ್ಗೆ, ವೃದ್ಧಾಶ್ರಮದ ವೃದ್ಧರ ಬಗ್ಗೆ ತೋರಿದ ಪ್ರೀತಿಗೆ ಕಾರಣ ಅವರ EQ! ಅದರಲ್ಲಿ ಶೋ ಇರಲಿಲ್ಲ. ಎಲ್ಲವೂ ಸಹಜ ಮತ್ತು ಸಹಜ. EQ ಸ್ಟ್ರಾಂಗ್ ಇರುವ ಮಗುವು ಮುಂದೆ ಸಮಾಜದಲ್ಲಿ ಅದ್ಭುತವಾಗಿ ಗೆಲ್ಲುತ್ತದೆ.

Memory Power

4) ಆಧ್ಯಾತ್ಮದ ಸೂಚ್ಯಂಕ – SQ
( Spiritual Quotient)

ಏನ್ಸಾರ್, ಸಣ್ಣ ಮಕ್ಕಳಲ್ಲಿ ಆಧ್ಯಾತ್ಮಿಕ ಶಕ್ತಿ ಇದೆಯಾ ಎಂದು ನೀವು ಕೇಳಬಹುದು. ಖಂಡಿತ ಇದೆ!

ಅದು ನಮ್ಮ ಮಗು ಪಡೆಯುತ್ತಿರುವ ಮೌಲ್ಯಗಳ ಸಮ್ಮರಿ! ಮೌಲ್ಯಗಳು ಮಗುವಿಗೆ ಬೋಧನೆಯಿಂದ ಬರುವಂಥದ್ದು ಅಲ್ಲ. ಅವುಗಳು ಅನುಕರಣೆಯಿಂದ ಬರುವಂಥದ್ದು! ಮಗು ಭೇಟಿ ಮಾಡಿದ ವ್ಯಕ್ತಿಗಳು, ಅದರ ಶಿಕ್ಷಕರು, ಮಗು ಓದಿದ ಪುಸ್ತಕಗಳು, ಅದರ ಓರಗೆಯ ಗೆಳೆಯರು ಇವರಿಂದೆಲ್ಲ ಮಕ್ಕಳು ಮೌಲ್ಯವನ್ನು ಪಡೆಯುತ್ತಾರೆ. ತನ್ನಲ್ಲಿ ಮೊದಲೇ ಅಂತರ್ಗತ ಆಗಿರುವ ಮೌಲ್ಯಗಳನ್ನು ಗಟ್ಟಿ ಮಾಡುತ್ತದೆ.

ನಮ್ಮ ಮಗುವಿಗೆ ಸ್ಟ್ರಾಂಗ್ ಆದ ಮೌಲ್ಯ ಶಿಕ್ಷಣ ಬೇಕು. ಅದು ಒಳ್ಳೆಯ ಮೌಲ್ಯಯುತ ಆಗಿರುವ ಪುಸ್ತಕಗಳನ್ನು ಓದಬೇಕು. ಒಳ್ಳೆಯ ಪಾಸಿಟಿವ್ ಆದ ಪರಿಸರದಲ್ಲಿ ಬೆಳೆಯಬೇಕು. ಮೌಲ್ಯಯುತವಾದ ನಾಟಕಗಳು, ಸಣ್ಣ ಕತೆಗಳು, ವಿಡಿಯೋಗಳು, ಭಾವಗೀತೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಶಕ್ತಿ ಹೊಂದಿರುತ್ತವೆ. ಅದು ನಮ್ಮ ಮಗುವಿನ ಹದಿನಾಲ್ಕು ವರ್ಷಗಳ ಒಳಗೆ ಆದರೆ ತುಂಬಾ ಒಳ್ಳೆಯದು.

ಸಾಲುಮರ ತಿಮ್ಮಕ್ಕನ ಪರಿಸರ ಪ್ರೇಮ, ಸೈನಿಕರ ದೇಶಭಕ್ತಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸರಳವಾದ ಜೀವನ, ವಿವೇಕಾನಂದರ ವಿಚಾರ ಧಾರೆಗಳು, ಅಬ್ದುಲ್ ಕಲಾಂ ಅವರ ವಿನಯವಂತಿಕೆ, ನೇತಾಜಿ ಸುಭಾಷ ಚಂದ್ರಬೋಸರ ಧೈರ್ಯ, ಥಾಮಸ್ ಆಲ್ವಾ ಎಡಿಸನನ ಕುತೂಹಲ, ಡಾಕ್ಟರ್ ರಾಜಕುಮಾರ್ ಅವರ ಮುಗ್ಧತೆ………… ಇವುಗಳೆಲ್ಲವೂ ಮಕ್ಕಳಲ್ಲಿ ಮೌಲ್ಯ ಶಕ್ತಿಯನ್ನು ಹೆಚ್ಚಿಸುತ್ತವೆ.

ಈ ನಾಲ್ಕು Qಗಳು ನಿಮ್ಮ ಮಗುವನ್ನು ಪರಿಪೂರ್ಣ ಶಿಕ್ಷಣದ ಉತ್ಥಾನದ ಕಡೆಗೆ ಕೈ ಹಿಡಿದು ಕರೆದುಕೊಂಡು ಹೋಗುತ್ತವೆ ಅನ್ನುವುದು ಭರತವಾಕ್ಯ!

ಇದನ್ನೂ ಓದಿ: Rajendra Bhat Column: ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)