Tuesday, 10th December 2024

ಆಧುನಿಕತೆಯ ಸ್ಪರ್ಶ ನೀಡಿದ ರಾಜೀವ್

ಗುಣಗಾನ

ಮಂಜುನಾಥ್ ಭಂಡಾರಿ

ಭಾರತದ ಅತಿದೊಡ್ಡ ಶಕ್ತಿ ಎಂದರೆ ಅದು ಯುವಜನತೆ. ಬೇರೆ ದೇಶಗಳಲ್ಲಿ ಜನಸಂಖ್ಯಾ ಬೆಳವಣಿಗೆ ಶಾಪ ಎನಿಸಿಕೊಂಡರೆ, ಭಾರತದಲ್ಲಿ ಅದು ಅಮೂಲ್ಯ ಮಾನವ ಸಂಪನ್ಮೂಲ ಎನಿಸಿಕೊಂಡಿದೆ. ೮೦ರ ದಶಕದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ತಿರುವು ದೊರೆತು ಇಡೀ ದೇಶವನ್ನು ಯುವಶಕ್ತಿ ಹೇಗೆ ಆಳಬಲ್ಲದು ಎಂಬ ಸಂದೇಶ ಅನುರಣಿಸಿತ್ತು. ಅಂಥ ಯುವಶಕ್ತಿ ಯನ್ನು ರಾರಾಜಿಸಿದವರೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ!

ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ಅವರು ಜನಿಸಿದ ಕ್ಷಣ, ಈ ಮಗು ದೇಶದ ರಾಜಕಾರಣಕ್ಕೆ ಪರಿವರ್ತನೆಯ ಮೇಲ್ಪಂಕ್ತಿ ಹಾಕಿ
ಕೊಡಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಬಾಲಕನಾಗಿದ್ದಾಗಲೇ ತಾಯಿಯ ರಾಜಕಾರಣವನ್ನು ಅತಿ ಹತ್ತಿರದಿಂದ ನೋಡಿದ್ದರೂ, ರಾಜಕೀಯದ
ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ, ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ರಾಜೀವ್ ಮನಸ್ಸು ಮಾಡಿರಲಿಲ್ಲ. ಅವರ ಒಲವು
ಇದ್ದುದು ಎಂಜಿನಿಯರಿಂಗ್ ಮತ್ತು ವಿeನದ ಕಡೆಗೆ ಮಾತ್ರ. ಸಂಗೀತ ಎಂದರೆ ರಾಜೀವ್ ಗಾಂಧಿಯವರ ಮನಸ್ಸಿಗೆ ಆಪ್ತ. ಪಾಶ್ಚಿಮಾತ್ಯ, ಹಿಂದೂಸ್ತಾನಿ ಸಂಗೀತ ಆಲಿಸುತ್ತಿದ್ದರು.

ವೃತ್ತಿಯಲ್ಲಿ ಪೈಲಟ್ ಆಗಬೇಕೆಂದುಕೊಂಡು ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಪೂರ್ಣಗೊಳಿಸಿ ಆ ಕನಸನ್ನು ನೆರವೇರಿಸಿಕೊಂಡರು. ಆದರೆ ವಿಮಾನವನ್ನು ನಡೆಸಬೇಕಾದ ವ್ಯಕ್ತಿ, ರಾಜಕೀಯದ ಸ್ಥಿತ್ಯಂತರಗಳಿಂದಾಗಿ ಇಡೀ ದೇಶವನ್ನು ಮುನ್ನಡೆಸುವ ಗುರುತರ ಹೊಣೆ ಹೊರಬೇಕಾಯಿತು. ರಾಜೀವ್ ಗಾಂಧಿ ವಿಮಾನಯಾನ ಕ್ಷೇತ್ರಕ್ಕೆ ಮನಸ್ಸು ತೆರೆದುಕೊಂಡಿದ್ದಾಗ, ೧೯೮೦ರಲ್ಲಿ ಸೋದರ ಸಂಜಯ್ ಗಾಂಧಿ ಅಪಘಾತದಲ್ಲಿ ಮೃತರಾದರು. ಈ ವೇಳೆ ರಾಜಕೀಯ ಪ್ರವೇಶಿಸುವಂತೆ ಅವರ ಮೇಲೆ ಒತ್ತಡ ಬಂತು. ನಂತರ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತ ರಾದರು.

ಇದಾದ ಬಳಿಕ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ದೇಶದ ಏಕತೆಗಾಗಿ ಮುಲಾಜಿಲ್ಲದೆ ಕೈಗೊಂಡ ಉಕ್ಕಿನ ನಿರ್ಧಾರಕ್ಕೆ ಇಂದಿರಾ ತಮ್ಮ ಪ್ರಾಣದ ಬೆಲೆಯನ್ನೇ ತೆರಬೇಕಾಯಿತು. ಹೆತ್ತ ತಾಯಿ ಹೀಗೆ ದುರಂತ ಅಂತ್ಯವನ್ನು ಕಂಡಾಗಲೂ ನೋವು ನುಂಗಿಕೊಂಡು, ಕರ್ತವ್ಯನಿಷ್ಠೆ ಮೈಗೂಡಿಸಿ ಕೊಂಡು ದಿಢೀರನೆ ಎದ್ದು ನಿಲ್ಲುವುದು ನಿಜಕ್ಕೂ ಗಟ್ಟಿ ಗುಂಡಿಗೆಯ ವ್ಯಕ್ತಿಗೆ ಮಾತ್ರ ಸಾಧ್ಯ. ಅಂಥ ದೃಢತೆ ತಂದುಕೊಂಡ ರಾಜೀವ್ ಗಾಂಧಿ, ೧೯೮೪ ರಿಂದ ೧೯೮೯ರವರೆಗೆ ಐದು ವರ್ಷಗಳ ಕಾಲ ಸಂಪೂರ್ಣವಾಗಿ ದೇಶಕ್ಕೆ ಅರ್ಪಿಸಿಕೊಂಡುಬಿಟ್ಟರು.

ರಾಜೀವ್ ಗಾಂಧಿಯವರು ೪೧ನೇ ವಯಸ್ಸಿನಲ್ಲಿ ಪ್ರಧಾನಿಯಾಗಿ ಭಾರತದ ಅತ್ಯಂತ ಕಿರಿಯ ಪ್ರಧಾನಿ ಎಂಬ ಇತಿಹಾಸ ಬರೆದರು. ಬಹುಶಃ ಅದು
ಜಗತ್ತಿನ ಚುನಾಯಿತ ಸರಕಾರದ ಅತಿ ಕಿರಿಯ ಮುಖ್ಯಸ್ಥ ಎಂಬ ದಾಖಲೆಯೂ ಹೌದು. ಈ ಹೊಸ ಸವಾಲು ಹಾಗೂ ಅನುಭವ ಅವರಿಗೆ ಇಡೀ ದೇಶದ
ಸಮಸ್ಯೆ, ಸವಾಲುಗಳನ್ನು ಪರಿಚಯ ಮಾಡಿಸಿಕೊಟ್ಟಿತು. ಹೀಗಾಗಿ ಮುಂದಿನ ಐವತ್ತು ವರ್ಷಕ್ಕೂ ಅಧಿಕ ಕಾಲಕ್ಕೆ ಭಾರತವು ಸದೃಢವಾಗಿ ನಿಲ್ಲುವಂತೆ ಅಡಿಪಾಯ ಹಾಕಲು ಅವರು ಆರಂಭಿಸಿದರು. ಈಗ ದೇಶದಲ್ಲಿ ‘ವಿಕಸಿತ ಭಾರತ’ದ ಹೆಸರಿನಲ್ಲಿ ಭದ್ರ ಅಡಿಪಾಯ ಹಾಕುತ್ತೇವೆ ಎಂಬ ಘೋಷಣೆ ಕೇಳಿಬರುತ್ತಿದೆ. ಈಗ ಭಾರತ ಬಲಿಷ್ಠ ಆರ್ಥಿಕತೆಯಾಗಿ ಬೆಳೆದಿರುವುದಕ್ಕೆ ಅಂದು ರಾಜೀವ್ ಗಾಂಧಿ ಮೌನವಾಗಿ ಕೈಗೊಂಡ ಕ್ರಾಂತಿಕಾರಕ ನಿಲುವುಗಳೇ ಕಾರಣ.

ಸಂಪರ್ಕ ಕ್ರಾಂತಿ
ಇಂದಿನ ‘ಡಿಜಿಟಲ್ ಇಂಡಿಯಾ’ದ ಆರಂಭವಾಗಿದ್ದೇ ರಾಜೀವರ ತೀರ್ಮಾನಗಳಿಂದ ಎಂಬುದು ಅನೇಕರಿಗೆ ಗೊತ್ತಿಲ್ಲ. ೮೦ರ ದಶಕದಲ್ಲಿ ಭಾರತದಲ್ಲಿ ಸುಮಾರು ೨೦ ಲಕ್ಷ ಫೋನ್ ಸಂಪರ್ಕಗಳಿದ್ದವು. ಒಂದು ದೂರವಾಣಿ ಸಂಪರ್ಕ ಪಡೆಯುವುದು ಹರ ಸಾಹಸವೇ ಆಗಿತ್ತು. ದೂರಸಂಪರ್ಕ ಕ್ಷೇತ್ರದಲ್ಲಿ ಸ್ವದೇಶಿ ಎಂಬ ಸೂತ್ರವನ್ನು  ತಂದ ರಾಜೀವ್, ಅದಕ್ಕಾಗಿಯೇ ೧೯೮೪ರಲ್ಲಿ ಸಿ-ಡಾಟ್ ಸಂಸ್ಥೆ ಸ್ಥಾಪಿಸಿದರು. ಪರಿಣಾಮ ಪಟ್ಟಣಗಳು ಹಾಗೂ ಗ್ರಾಮ ಗಳಲ್ಲಿ ದೂರಸಂಪರ್ಕ ಸಂವಹನ ಜಾಲ ಬೆಳೆಯಿತು. ಇದರ ಜತೆಗೆ ಬಂದ ಪಬ್ಲಿಕ್ ಕಾಲ್ ಆಫೀಸ್ (ಪಿಸಿಒ) ಕ್ರಮದಿಂದ ವಿದೇಶ ಗಳಿಗೂ ದೂರಸಂಪರ್ಕ ಸಂವಹನ ಸಾಧ್ಯವಾಯಿತು.

ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಸಾರ್ವಜನಿಕ ಸ್ಥಳಗಳಲ್ಲಿ ದೂರವಾಣಿ ಬಳಸಿ ಸುಲಭವಾಗಿ ಮಾತನಾಡುವಂತಾಯಿತು. ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಈ ಸೇವೆ ಎಲ್ಲರಿಗೂ ದೊರೆಯಿತು. ಇದು ಬಳಿಕ ಮಹಾನಗರ ಟೆಲಿಪೋನ್ ನಿಗಮ ಲಿಮಿಟೆಡ್‌ನ ಸ್ಥಾಪನೆಗೂ ನಾಂದಿ ಹಾಡಿತು.
ಕಂಪ್ಯೂಟರ್‌ಗಳ ಮಹತ್ವವನ್ನು ಆಗಲೇ ಅರಿತಿದ್ದ ರಾಜೀವ್, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಂಪ್ಯೂಟರ್ ಅಳವಡಿಕೆಗೆ ಶ್ರಮಿಸಿದರು. ರೈಲ್ವೆ ವ್ಯವಸ್ಥೆಯಲ್ಲಿ ಗಣಕೀಕೃತ ಟಿಕೆಟ್ ಬಳಕೆಯಿಂದ ಬಹಳ ಸುಧಾರಣೆಯಾಯಿತು. ಕಂಪ್ಯೂಟರ್‌ಗಳ ಮೇಲಿದ್ದ ತೆರಿಗೆ ಇಳಿಸಲು ಕೂಡ ರಾಜೀವ್ ಕ್ರಮ ವಹಿಸಿದರು.

ಗ್ರಾಮೀಣ ಸ್ವಾವಲಂಬನೆ
ಗ್ರಾಮಗಳಲ್ಲಿ ೩ ಹಂತದ ಆಡಳಿತ ವ್ಯವಸ್ಥೆ ತರುವಲ್ಲಿ ಜೀವರ ಶ್ರಮ ಅಪಾರ. ದೇಶದೆಡೆ ಸಂಚರಿಸಿದ್ದ ಅವರು, ಜನರ ಬಳಿಗೆ ಹೋಗಿ ಅಭಿಪ್ರಾಯ ಸಂಗ್ರ
ಹಿಸಿದ್ದರು. ಸ್ಥಳೀಯಾಡಳಿತದಿಂದ ಮಾತ್ರ ಸುಧಾರಣೆ ಸಾಧ್ಯ ಎಂದು ಅರಿತಿದ್ದರಿಂದಲೇ ಸಂಪೂರ್ಣ ಬದ್ಧತೆಯಿಂದ ಸಂವಿಧಾನಕ್ಕೆ ೭೩ನೇ ತಿದ್ದುಪಡಿ ತಂದು ಗ್ರಾಮಸಭಾಗೆ ಮಾನ್ಯತೆ ನೀಡಲು ಶ್ರಮಿಸಿದರು. ದುರದೃಷ್ಟವಶಾತ್ ಅದಕ್ಕೆ ಸಂಪೂರ್ಣ ಬೆಂಬಲ ಸಿಗಲಿಲ್ಲ. ಮುಂದೆ ಅಧಿಕಾರಕ್ಕೆ ಬಂದ ಸರಕಾರ ಆ ಪ್ರಯತ್ನಕ್ಕೆ ಕಾರ್ಯರೂಪ ನೀಡಿತು. ಮಹಾತ್ಮ ಗಾಂಧಿಯವರ ಗ್ರಾಮೀಣ ಸ್ವಾವಲಂಬನೆಯ ಆಶಯಕ್ಕೆ ಮೊದಲ ಬಾರಿಗೆ ಕಾನೂನಿನ ಸ್ವರೂಪ ನೀಡಿದ್ದೇ ರಾಜೀವರು.

ಇಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಮಕ್ಕಳನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಆದರೆ ೧೯೮೬ರ ರಾಜೀವ್ ಗಾಂಧಿ ಸರಕಾರ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಮಾಡಿ, ಮಹಿಳೆಯರು, ಪರಿಶಿಷ್ಟ ಜಾತಿ/ವರ್ಗದ ಜನರಿಗೆ ಶಿಕ್ಷಣದ ಹಕ್ಕು ಕಲ್ಪಿಸುವ ಕೆಲಸ ಮಾಡಿತ್ತು. ಮತದಾನದ ವಯೋಮಿತಿ ೨೧ರಿಂದ ೧೮ಕ್ಕೆ ಇಳಿಕೆ, ನವೋದಯ ಶಾಲೆಗಳ ನಿರ್ಮಾಣ, ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಯೋಜನೆ, ಆರ್ಥಿಕ ಉದಾರೀಕರಣದ ಕ್ರಮಗಳು ಮೊದಲಾದ ಸರಣಿ ಸಾಧನೆಗಳು ರಾಜೀವರ ಹೆಸರಿನಲ್ಲಿದೆ.

ಭದ್ರ ಬುನಾದಿ
ರಾಜೀವ್ ಗಾಂಧಿ ೪೬ನೇ ವಯಸ್ಸಿನಲ್ಲಿ ಪ್ರಾಣ ತೆತ್ತರೂ, ದೇಶಕ್ಕಾಗಿ ಅವರು ಕೈಗೊಂಡ ತೀರ್ಮಾನ, ಜಾರಿಗೊಳಿಸಿದ ಯೋಜನೆಗಳು, ಆರ್ಥಿಕ ಹಾಗೂ
ಸಾಮಾಜಿಕ ಸುಸ್ಥಿರತೆಗೆ ಭದ್ರಬುನಾದಿ ಒದಗಿಸಿತು. ಅವರು ಇನ್ನಷ್ಟು ಕಾಲ ಬದುಕುವಂತಾಗಿದ್ದರೆ ಭಾರತವು ೯೦ರ ದಶಕದ ಜಗತ್ತಿನ ಬಲಿಷ್ಠ ರಾಷ್ಟ್ರ ಎನಿಸಿಕೊಳ್ಳುತ್ತಿತ್ತು. ಅವರ ಚಿಂತನೆ ಮತ್ತು ಸುಧಾರಣಾ ಕ್ರಮಗಳು, ಇಂದಿನ ಆಡಳಿತಗಾರರಿಗೆ ಸ್ಪೂರ್ತಿಯಾದರೆ ಅಭಿವೃದ್ಧಿಗೆ ಅದಕ್ಕಿಂತ ಬೇರೆ ಮಾರ್ಗದರ್ಶನ ಬೇಕಿಲ್ಲ.

(ಲೇಖಕರು ಶಾಸಕರು ಮತ್ತು ಕಾರ್ಯಾಧ್ಯಕ್ಷರು,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ)