ಅಭಿವ್ಯಕ್ತಿ
ಅರವಿಂದತನಯ
ರಾಮಾಯಣದ ಬಗ್ಗೆ ಶತ ಶತಮಾನಗಳಿಂದ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಬಂದಿವೆ.
ತ್ರೇತಾಯುಗದಲ್ಲಿ ರಾಜನಾಗಿದ್ದ ರಾಮಚಂದ್ರ ಕಲಿಯುಗದಲ್ಲಿ ಭಗವಾನನಾಗಿ, ಆರಾಧ್ಯ ದೈವವಾಗಿ ಪೂಜಿಸಲ್ಪಡುವ
ಭಗವಂತನಾಗಿರುವುದನ್ನು ನಾವು ಕಾಣುತ್ತೇವೆ. ರಾಮಾಯಣದ ಕಥೆ ಕೇವಲ ಈಗಿರುವ ಭಾರತದ ಭೌಗೋಳಿಕ ಸರಹದ್ದಿಗೆ ಮಾತ್ರ ಸೀಮಿತವಾದದ್ದಲ್ಲ. ಪೂರ್ವ ಏಷ್ಯಾದ ದೇಶಗಳಲ್ಲಿಯೂ ಸಹ ರಾಮಾಯಣದ ಕಥೆ ದಾಖಲಾಗಿರುವುದು ಚರಿತ್ರೆಯ ಪುಟಗಳಿಂದ ನಮಗೆ ತಿಳಿಯುತ್ತದೆ.
ಬೇರೆ ಬೇರೆ ಭೌಗೋಳಿಕ ಪ್ರದೇಶಗಳಲ್ಲಿ ಪ್ರಚಲಿತವಿರುವ ರಾಮಾಯಣದ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿದ್ದರೂ ಮೂಲ ಕಥಾಹಂದರವು ಒಂದೇ ರೀತಿ ಇರುವುದು ಕಂಡುಬರುತ್ತದೆ. ಭಾರತವಲ್ಲದೇ ಬೇರೆ ಬೇರೆ ದೇಶಗಳಲ್ಲಿ ದೊರೆತಿರುವ ರಾಮಾಯಣಗಳು:
೧. ಖೋಟಾನಿ ರಾಮಾಯಣ: ಪೂರ್ವ ತರ್ಕಿಸ್ಥಾನದಲ್ಲಿನ ರಾಮಾಯಣ. ಈ ರಾಮಾಯಣದಲ್ಲಿ ರಾಮ ಲಕ್ಷ್ಮಣರು ಸಹಸ್ರಬಾಹು ಎಂಬುವನ ಮಕ್ಕಳು. ಈ ಸಹಸ್ರಬಾಹು ದಶರಥನ ಮಗ ಎಂಬುದಾಗಿ ಚಿತ್ರಿತವಾಗಿದೆ.
೨. ಕಾಕವಿನ್ ರಾಮಾಯಣ: ಯೋಗೀಶ್ವರ ಎಂಬುವವನಿಂದ ಇಂಡೋನೇಶಿಯಾದಲ್ಲಿ ೧೨ನೇ ಶತಮಾನದಲ್ಲಿ ರಚಿತ ವಾದದ್ದು.
೩. ಸೇರತ್ ರಾಮ: ಆಧುನಿಕ ಜಾವಾ ಪ್ರಾಂತ್ಯದಲ್ಲಿ ಪ್ರಚಲಿತವಿರುವ ರಾಮಾಯಣ. ಈ ರಾಮಾಯಣದಲ್ಲಿನ ಕಥೆ ವಾಲ್ಮೀಕಿ
ರಾಮಾಯಣದ ಕಥೆಯನ್ನೇ ಅನುಸರಿಸುತ್ತದೆ.
೪. ಸೇರತ್ ಕಂಡ್ ಆಫ್ ಜಾವಾ: ಇದು ಸೇರತ್ ರಾಮ್ ಕಥೆಯನ್ನು ಅನುಸರಿಸಿದರೂ – ಇಲ್ಲಿ ಸೀತೆಯನ್ನು ರಾವಣನ ಮಗಳು ಎಂಬುದಾಗಿ ಚಿತ್ರಿಸಲಾಗಿದೆ.
೫. ಇಂಡೋ ಚೀನಾದಲ್ಲಿ ರಿಯಮ್ ಕೇರ್, ಅಂದರೆ ರಾಮನ ಪ್ರಸಿದ್ಧಿ ಎಂಬ ಅರ್ಥದಲ್ಲಿ ರಾಮಾಯಣ ಕಥೆಯನ್ನು ಬರೆಯಲಾಗಿದೆ.
೬. ರಾಮ್ ಕಿಯೆಮ್‌ನ ಆಫ್ ಸಿಯಾಮ್
೭. ಯಾಮ್ ಸ್ವೆ ಆಫ್ ಬರ್ಮ
೮. ಸಿಂಹಳೀ ರಾಮಾಯಣದಲ್ಲಿ ಹನುಮಂತನ ಬದಲಿಗೆ ವಾಲಿಯೇ ಲಂಕೆಯನ್ನು ಸುಟ್ಟ ಎಂಬ ಕಥೆಯಿದೆ ಮತ್ತು ವಾಲಿಯೇ ಸೀತೆಯನ್ನು ಲಂಕೆಯಿಂದ ರಕ್ಷಿಸಿ ಕರೆತರುತ್ತಾನೆ.
ಮೇಲೆ ತಿಳಿಸಿರುವುದು ಭಾರತದ ಪೂರ್ವಕ್ಕಿರುವ (Southeast Asia) ದೇಶಗಳಲ್ಲಿ ಪ್ರಚಲಿತವಿರುವ ರಾಮಾಯಣಗಳು. ಇನ್ನು ಭಾರತದಲ್ಲಿಯೇ ನಾವು ಅನೇಕ ಪ್ರಾಂತ್ಯಗಳಲ್ಲಿ ಶತಮಾನಗಳ ಹಿಂದಿನಿಂದಲೂ ಅನೇಕಾನೇಕ ಭಾಷೆಗಳಲ್ಲಿ ರಾಮಾಯಣ ರಚನೆಗೊಂಡಿರುವುದನ್ನು ಕಾಣಬಹುದು. ಕ್ರಿಸ್ತಶಕ ಒಂದನೇ ಶತಾಬ್ಧದಲ್ಲಿದ್ದ ಜೈನ ಕವಿಯಾದ ವಿಮಲಸೂರಿಯು
ರಾಮಕಥೆಯನ್ನೊಳಗೊಂಡ ಪದ್ಮ ಚರಿತವನ್ನು ರಚಿಸಿರುವನು.
೧೬ನೇ ಶತಮಾನದಲ್ಲಿ ಬಂಗಾಳದಲ್ಲಿ ಕೃತಿವಾಸ ರಾಮಾಯಣ, ಒರಿಯಾದ ವಿಚಿತ್ರ ರಾಮಾಯಣ, ೧೭ನೇ ಶತಮಾನದ ಮರಾಠಿಯ ಭರತ ರಾಮಾಯಣ, ಗುಜರಾತಿಯ ರಾಮಾಯಣ ರ್ಸಾ, ಹಿಂದಿಯಲ್ಲಿ ಸುರ್ ರಾಮಾಯಣ, ಗೋಸ್ವಾಮಿ
ತುಲಸೀದಾಸ್ ರಚಿತ ರಾಮಚರಿತಮಾನಸ್, ಕನ್ನಡದ ತೊರವೆ ರಾಮಾಯಣ, ಮಹಾಕವಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ತಮಿಳಿನ ಕಂಬ ರಾಮಾಯಣಂ ಹೀಗೆ ರಾಮಾಯಣದ ಕಥೆಯು ಭಾರತದ ಎಲ್ಲ ಭಾಷಿಕ ಕವಿಗಳನ್ನೂ ಆಕರ್ಷಿಸಿರುವುದು ಸತ್ಯ.
ಮಹಾಭಾರತದಲ್ಲಿ ನಾಲ್ಕು ಬಾರಿ ರಾಮಾಯಣದ ಕಥೆಯ ಉಖವಿದೆ ಮತ್ತು ಸುಮಾರು ಐವತ್ತು ಬಾರಿ ಸಾಂದರ್ಭಿಕವಾಗಿ ರಾಮಾಯಣದ ಉಖಗಳನ್ನು ಪಂಡಿತರು ಗುರುತಿಸಿದ್ದಾರೆ. ಈ ಎಲ್ಲಾ ರಾಮಾಯಣಗಳಲ್ಲೂ ವಾಲ್ಮೀಕಿ ರಾಮಾಯಣದ ಕಥೆಯೇ
ಸೂರ್ತಿ ಮತ್ತು ಮೂಲ ಸಾಮಗ್ರಿ ಎಂಬುದನ್ನು ಇಲ್ಲಿಯವೆರೆಗೂ ಇತಿಹಾಸ ತಜ್ಞರೂ ಮತ್ತು ಪಂಡಿತರು ಒಪ್ಪಿದ್ದಾರೆ.
ಆದಿಕವಿ ವಾಲ್ಮೀಕಿಯೂ ರಾಮಾಯಣದ ಕಥೆಯನ್ನು ಕ್ರೋಢೀಕರಿಸಿ, ಮಹಾಕಾವ್ಯವನ್ನಾಗಿ ರಚಿಸಿದ್ದಾನೆ. ವಾಲ್ಮೀಕಿಯು ರಾಮಾಯಣದ ನಾಯಕ ಪಾತ್ರಧಾರಿಯಾದ ರಾಮನನ್ನು ದೇವರ ಅವತಾರವೆಂದು ಚಿತ್ರಿಸಿಲ್ಲ. ಆದರ್ಶ ರಾಜಕುಮಾರ, ಮಹಾವೀರ, ಆದರ್ಶ ಪತಿ, ಪ್ರೇಮಮಯಿ, ಪ್ರಜಾವತ್ಸಲನಾದ ರಾಜ, ಧರ್ಮನಿಷ್ಠ, ಭ್ರಾತೃಪ್ರೇಮಿ, ಹೀಗೆ ಚಿತ್ರಿತವಾಗಿದೆಯೇ ಹೊರತು ದೇವರ ಅವತಾರವಾಗಿ ರಾಮನು ಗೋಚರಿಸುವುದಿಲ್ಲ.
ತಮಿಳಿನ ಕಂಬನ್ ಮತ್ತು ಹಿಂದಿಯ ಗೋಸ್ವಾಮಿ ತುಳಸೀದಾಸ್ ಅವರುಗಳ ಕಾಲಕ್ಕಾಗಲೇ ರಾಮನು ಭಗವಂತನ ಅವತಾರ ವಾಗಿ ಬದಲಾಗಿ ಹೋಗಿರುವುದು ಅವರ ಕೃತಿಗಳಿಂದ ನಮಗೆ ತಿಳಿಯುಬರುತ್ತದೆ. ವಾಲ್ಮೀಕಿಯ ರಾಮನು ಮನುಷ್ಯನಾಗಿ ದೈವತ್ವವನ್ನು ಹೊಂದಿದ್ದ ಮಹನೀಯನಾಗಿಯೇ ಕಾಣುತ್ತಾನೆ. ಗುರುದೇವ ರವೀಂದ್ರರೂ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ಮನುಷ್ಯನೇ ತನ್ನ ಗುಣ ವಿಶೇಷಗಳ ಕಾರಣಗಳಿಂದ ದೈವತ್ವವನ್ನು ಹೊಂದಿದ ಎಂಬ ರವೀಂದ್ರರ ಮಾತನ್ನು, ಶ್ರೀ ಮೈಥಿಲಿ ಶರಣಗುಪ್ತರವರು ತಮ್ಮ ಸಾಕೇತ್ ಗ್ರಂಥದಲ್ಲಿ ಉಖಿಸಿzರೆ. ಶತ ಶತಮಾನಗಳಿಂದ ಈ ರಾಮಾಯಣದ ಕಥೆ ಭಾರತದಲ್ಲಿ ಮಾತ್ರ ಅಲ್ಲದೇ ವಿದೇಶಗಳಲ್ಲಿಯೂ ಸಹ ಸಾಮಾನ್ಯ ಜನರ, ಲೇಖಕರ ಕುತೂಹಲಕ್ಕೆ ಕಾರಣವಾದದ್ದಾರೂ ಯಾಕೆ? ಕೇವಲ ಸಂಸ್ಕೃತ ಮಾತ್ರವಲ್ಲದೇ ಇನ್ನೂ ಅನೇಕ ಭಾಷೆಗಳಲ್ಲಿ ಯೂ ಈ ಕಥೆಯ ರಚನೆಗಳು ರೂಪುಗೊಳ್ಳಲು ಕಾರಣವಾದರೂ ಏನು ಎಂಬುದನ್ನು ವಿವೇಚಿಸಬೇಕು.
ಎನ್. ಚಂದ್ರಶೀಖರ ಅಯ್ಯರ್ ಅವರು ರಚಿಸಿದ ವಾಲ್ಮೀಕಿ ರಾಮಾಯಣ ಮೊದಲನೇ ಮುದ್ರಣಕ್ಕೆ ಮುನ್ನುಡಿ ಬರೆಯುತ್ತ ಪಂಡಿತ್ ಜವಹಲಾಲ್ ನೆಹರು ಅವರು ಹೀಗೆ ಬರೆಯುತ್ತಾರೆ: From the peasant in the field and the worker in the factory and to the highbrow and the scholar, the story of Rama and Sita has been a living one…. Valmiki wrote his
immortal epic and in later days, Tulasidas writing in homely language made this story a part of the texture of the lives of our people. A story and a book which has had the powerful influence on millions of people, during some
millennia of our changing history, must have peculiar virtue in it ಈ ರೀತಿಯಾಗಿ ರಾಮಾಯಣದ ಕಥೆಯು ಯುಗಯುಗ ಗಳು ಕಳೆದರೂ ಜನರ ಬಾಯಲ್ಲಿ, ಪಂಡಿತರ ಬರಹಗಳಲ್ಲಿ, ಸಂಗೀತದಲ್ಲಿ, ನಾಟಕಗಳಲ್ಲಿ, ದೇಶ, ಭಾಷೆ, ಜಾತಿ ಪ್ರಾಂತ್ಯಗಳ ಎಗಳನ್ನು ಮೀರಿ ಇಂದಿಗೂ ನೆಲೆ ನಿಂತಿರುವುದಕ್ಕೆ ಅದರ ಕಥೆ, ಪಾತ್ರಗಳ ಸೃಷ್ಟಿ, ಆ ಪಾತ್ರಗಳು ಬಿಂಬಿಸುವ ಆದರ್ಶ ಮುಂತಾದ
ಹಲವು ಕಾರಣಗಳು ಜನರ ಮನಸ್ಸನ್ನು ಹಿಡಿದಿಟ್ಟಿರುವುದಂತೂ ಸರ್ವ ಸತ್ಯವಾದ ಸಂಗತಿ.
ಇನ್ನು ವಾಲ್ಮೀಕಿ ರಾಮಾಯಣವನ್ನು ನಾವು ಸೂಕ್ಷ ವಾಗಿ ಗಮನಿಸಿದರೆ ಅಥವಾ ಅದರ ಕಥೆಯನ್ನೂ ಅಲ್ಲಿ ಘಟಿಸಿರುವ ಘಟನೆಗಳನ್ನು ಹಿಂಜಿ ನೋಡಿದರೆ ನಮಗೆ ಇಲ್ಲಿಯವರೆಗೂ ಗೋಚರವಾಗದ ಮತ್ತೊಂದು ಸೂಕ್ಷ್ಮವಾದ ಸಂದೇಶ ಕಾಣಬರುತ್ತದೆ. ವಾಲ್ಮೀಕಿ ರಾಮಾಯಣದ ಕಥಾನಾಯಕ ರಾಮ ಬ್ರಾಹ್ಮಣನಲ್ಲ.
ಈ ಕಥೆಯ ಪ್ರಮುಖ ಖಳನಾಯಕ ರಾವಣ ಬ್ರಾಹ್ಮಣ. ಇನ್ನು ರಾಮನ ಪಕ್ಷದಲ್ಲಿರುವ ಎಲ್ಲ ಪ್ರಮುಖ ಪಾತ್ರಗಳನ್ನೂ ಗಮನಿಸಿ ದರೆ, ಅದರಲ್ಲಿ ನಮಗೆ ಇಡೀ ಪ್ರಪಂಚದ ಅನೇಕ ಜೀವ ಸಂಕುಲಗಳಿಗೆ ಸೇರಿದ ಪಾತ್ರಗಳಿವೆ. ಹನುಮಂತ, ಸುಗ್ರೀವ, ಅಂಗದ, ವಾಲಿ ಮುಂತಾದವರು ವಾನರ ಜಾತಿಗೆ ಸೇರಿದವರು. ಜಾಂಬವಂತ ಭಲ್ಲೂಕ, ಜಟಾಯು, ಸಂಪಾತಿ ಪಕ್ಷಿಸಂಕುಲಕ್ಕೆ ಸೇರಿದ ವರು.
ಅಳಿಲು ಇಲಿ ಜಾತಿ. ರಾಮನ ಮಿತ್ರನಾ ದ ಗುಹ ಅಂಬಿಗ ಕುಲದವನು. ಮನುಷ್ಯವರ್ಗಮಾತ್ರವಲ್ಲದೇ, ಮನುಷ್ಯರಲ್ಲದ ಅನೇಕ ಜೀವ ಸಂಕುಲಗಳು ರಾಮನ ನೆರವಿಗೆ ನಿಂತು ಸಹಾಯಮಾಡಿದ ಕಥೆಯು ವಾಲ್ಮೀಕಿ ರಾಮಾಯಣದ್ದು. ರಾವಣನು ಬ್ರಾಹ್ಮಣ ನಾಗಿದ್ದರೂ, ವೇದ ಶಾಸಪಂಡಿತನಾಗಿದ್ದರೂ, ಪರಮ ಶಿವಭಕ್ತನಾಗಿದ್ದರೂ, ಅವನ ವಿರುದ್ಧ ಇಡೀ ಜೀವ ಸಂಕುಲವೇ ಒಟ್ಟಾಗಿ ನಿಂತು ಅವನ ವಿನಾಶಕ್ಕೆ ಕಾರಣವಾಗಿದ್ದು ಏಕೆ? ಪುರಾಣ ಕಥೆ ಎಂಬ ವಿಚಾರವನ್ನು ಬದಿಗಿಟ್ಟು, ಯೋಚಿಸಿದರೆ – ಯಾವ ಒಬ್ಬ ವ್ಯಕ್ತಿ ಎಷ್ಟೇ ಕುಲೀನ ವಂಶಜನಾಗಿ ಬ್ರಾಹ್ಮಣನಾಗಿದ್ದರೂ, ಅವನು ಬ್ರಾಹ್ಮಣ ಕುಲದ ಶಿಸ್ತನ್ನು ಮೀರಿದರೆ, ಅಂದರೆ ಬ್ರಾಹ್ಮಣ
ನಾಗಿರುವುದಕ್ಕೆ ಬೇಕಾದ ಅಧ್ಯಾಪನ, ವ್ಯಾಸಂಗ, ಸಂಯಮ, ಜೀವ ಕಾರುಣ್ಯ ಮುಂತಾದ ಗುಣಗಳಿಂದ ವಿಮುಖನಾದರೆ ಅವನಿಗೆ ವಿನಾಶ ಕಟ್ಟಿಟ್ಟದ್ದು ಎಂಬುದೇ ಇಲ್ಲಿನ ಸಂದೇಶ.
ಒಬ್ಬ ಬ್ರಾಹ್ಮಣ ರಾವಣನು ಆತಂಕವಾದಿಯಾಗಿ ಮಾರ್ಪಟ್ಟರೆ ಅವನ್ನನ್ನು ನಿಗ್ರಹಿಸಲು ಇಡೀ ಮನುಜ ಕುಲಮಾತ್ರವಲ್ಲ, ಪ್ರಾಣಿ ಸಂಕುಲ ಮತ್ತು ಪಕ್ಷಿಸಂಕುಲಗಳು ಒಂದಾಗಬೇಕಾಗುತ್ತದೆ ಎಂಬ ವಿಚಾರ ವಾಲ್ಮೀಕಿ ರಾಮಾಯಣದ ಕಥೆಯಿಂದ ತಿಳಿಯಬಹು
ದೇನೋ. ಅದೇ ಅಬ್ರಾಹ್ಮಣನಾದ ರಾಮನು ಆದರ್ಶ ಪ್ರಾಯನಾಗಿದ್ದು, ಅವನ ಸಹಾಯಕ್ಕೆ ಎಲ್ಲ ವರ್ಗದವರೂ ಬಂದು ನಿಂತರು ಎಂಬುದನ್ನೂ ವಾಲ್ಮೀಕಿಯೂ ಬಹಳ ಸೂಕ್ಷ್ಮವಾಗಿ ತಿಳಿಸುತ್ತಾನೆ. ಅಂದರೆ ಬ್ರಾಹ್ಮಣ ಬ್ರಾಹ್ಮಣ ಮಾತ್ರ ಆಗಿದ್ದರೆ ಅವನು ನಿರಪಾಯಕಾರಿ, ಅದೇ ಅವನು ಭಯೋತ್ಪಾದಕನಾದರೆ ಅವನ ನಿಗ್ರಹ ಕಷ್ಟಸಾಧ್ಯ. ವಾಲ್ಮೀಕಿ ರಾಮಾಯಣದಲ್ಲಿ ಬ್ರಾಹ್ಮಣನಾದ ರಾವಣನ ನಿಗ್ರಹಕ್ಕೆ ಎಲ್ಲ ಜೀವಸಂಕುಲಗಳೂ ಪಟ್ಟಪಾಡು ಅಷ್ಟಿಷ್ಟಲ್ಲ.
ಈ ಸೂಕ್ಷ್ಮವನ್ನು ಅರಿಯದೇ ರಾಮಾಯಣವನ್ನು ಬ್ರಾಹ್ಮಣರು ಪಾರಾಯಣ ಮಾಡುತ್ತಾರೆ ಎಂಬ ಕಾರಣಕ್ಕೆ ಅದನ್ನು ಬ್ರಾಹ್ಮಣರ ಗ್ರಂಥ ಎಂದು ವಿರೋಧಿಸುತ್ತಲೇ ಬಂದಿರುವವರು ಅನೇಕರಿದ್ದಾರೆ. ರಾಮನ ಭಕ್ತರೂ ಸಹ ರಾಮ ವಿರೋಧಿಗಳನ್ನು ಬಹಳ ಕಟುವಾಗಿ ಎದುರಿಸಿ ಇಲ್ಲದ ಗೊಂದಲಗಳಿಗೆ ಕಾರಣ ರಾಗಿರುವ ಸಂಗತಿಗಳು ಎಲ್ಲರಿಗೂ ತಿಳಿದ ವಿಷಯವೇ. ರಾಮಾಯಣದ ಕಥೆ ನಡೆದ ಕಾಲದಲ್ಲಿ ಆದರ್ಶ ರಾಜನಾಗಿದ್ದ ರಾಮ, ಕಾಲ ಸರಿಯುತ್ತಾ ಬಂದ ಹಾಗೆ ಕ್ರಮೇಣ ಭಗವಾನ ನಾಗಿದ್ದೇ ಇದಕ್ಕೆಲ್ಲ ಕಾರಣವೆನಿಸುತ್ತದೆ.
ವಾಲ್ಮೀಕಿ ರಾಮಾಯಣದಲ್ಲಿ ರಾಮನು ಎಲ್ಲ ಜೀವರಾಶಿಗಳು ಅದು ಯಾರೇ ಇರಲಿ ಶರಣಾಗಿ ಬಂದವರಿಗೆ ಅಭಯ ನೀಡುತ್ತೇನೆ ಎಂಬ ಭರವಸೆಯ ಘೋಷಣೆಯನ್ನು ಮಾಡುತ್ತಾನೆ. ಅಂದರೆ ಆಕಾಲದಲ್ಲಿ ಇಡೀ ಭಾರತವರ್ಷದಲ್ಲಿ ಅನೇಕ ಜಾಗಗಳಲ್ಲಿ ಆತಂಕವಾದಿಗಳ ಗುಂಪುಗಳು, ಜನರನ್ನು, ಪ್ರಾಣಿಗಳನ್ನು ಹಿಂಸಿಸುತ್ತಾ ಅವರ ಬದುಕನ್ನು ನರಕಪ್ರಾಯವನ್ನಾಗಿ ಮಾಡು ತ್ತಿದ್ದವು. ಇವರ ಉಪಟಳದಿಂದ ರೋಸಿಹೋಗಿದ್ದವರಿಗೆ ಅಭಯ, ಆಶ್ರಯ ನೀಡುವ ಒಬ್ಬ ನಾಯಕನ ಅವಶ್ಯಕತೆ ಇತ್ತು.
ರಾಮನು ಆದರ್ಶ ರಾಜನಾಗಿ ಬಂದಾಗ ಅವನ ಹಿಂದೆ ಎಲ್ಲರೂ ನಿಂತು ಅವನ ನಾಯಕತ್ವವನ್ನು ಸ್ವೀಕರಿಸಿದರು. ದಕ್ಷಿಣದ ದಂಡಕಾರಣ್ಯದಲ್ಲಿ ಖರ, ದೂಷಣ, ತ್ರಿಶಿರಸ್ಸು ಮುಂತಾದ ಭಯೋತ್ಪಾದಕರ ನೆಲೆಗಳನ್ನು ರಾಮ ನಾಶಮಾಡಿದ. ಅಲ್ಲಿನ ಜನರಿಗೆ ನೆಮ್ಮದಿ ತಂದ. ಇವರೆಲ್ಲರ ನಾಯಕ ನಾಗಿ ಅಟ್ಟಹಾಸದಿಂದ ಮೆರೆಯುತ್ತಿದ್ದ ರಾವಣನನ್ನೂ ನಿಗ್ರಹಿಸಿದ. ಇದನ್ನು ನಾವು ವಿಚಾರ ಮಾಡಿದರೆ, ಇಂದಿಗೂ ಸಹ ಆಫ್ಗಾನಿಸ್ಥಾನದ ತಾಲಿಬಾನಿಗಳು, ಇರಾಕಿನ ಐಸಿಸ್ ಉಗ್ರರು ಮುಂತಾದ ಭಯೋತ್ಪಾದಕರ ನೆಲೆಗಳು ರಾಮಾಯಣದ ಕಾಲದಲ್ಲಿದ್ದಂತೆಯೇ ಇವೆ.
ತಾಲಿಬಾನಿಗಳು, ಐಸಿಸ್ ಉಗ್ರರನ್ನು ನಿಗ್ರಹಿಸಲು ಇಸ್ಲಾಂ ದೇಶಗಳೂ ಸಹ ಒಂದಾಗಿ ಹೋರಾಟ ನಡೆಸುತ್ತಿವೆ. ಉಗ್ರರು ಇಸ್ಲಾಂ ಕುಲಕ್ಕೆ ಸೇರಿದವರೆಂದು ಅವರು ಉಗ್ರರ ಬಗ್ಗೆ ಮೃದು ಧೋರಣೆ ತಳೆದಿಲ್ಲ. ರಾಮಾಯಣದ ಕಥೆಯಲ್ಲಿ, ಶ್ರೀರಾಮನ ಪಾತ್ರದಲ್ಲಿ, ಅತ್ಯಂತ ಆದರ್ಶಪ್ರಾಯವಾದ, ಸರ್ವಕಾಲಕ್ಕೂ ಸರ್ವರಿಗೂ ಪ್ರಿಯವಾದ ಗುಣ ವಿಶೇಷಗಳು ಇಲ್ಲದೇ ಇದ್ದಿದ್ದರೆ, ಪಂಡಿತ್ ಜವಹರಲಾಲ ನೆಹರೊ ಆಗಲಿ, ಯುಗದ ಕವಿ ಜಗದ ಕವಿ ಕುವೆಂಪು ಅವರಾಗಲಿ, ಅವರಿಗಿಂತ ಹಿಂದಿನ ಕವಿವರ್ಯರುಗಳಾಗಲೀ,
ಯಾರೂ ರಾಮಾಯಣದ ಬಗ್ಗೆ ಇಷ್ಟೊಂದು ಶ್ಲಾಘನೀಯವಾಗಿ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿರಲಿಲ್ಲ.
ರಾಮನ ರಾಮಾಯಣದ ಪರವಾಗಿ ಆಗಲಿ ವಿರೋಧವಾಗಿಯೇ ಆಗಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು ಬರೀ ಜೊಳ್ಳುವಾದಗಳನ್ನು ಮಾಡುತ್ತ ಬೀದಿ ಜಗಳಕ್ಕೆ ಇಳಿಯುವುದು, ಅಥವಾ ತಾನು ಹೇಳುವುದು ಮಾತ್ರ ಅತ್ಯಂತ ಮಹತ್ತರವಾದ ವಿಚಾರವೆಂಬಂತೆ ಬಿಂಬಿಸುವ ಪ್ರಯತ್ನಪಡುವುದು, ವಿಚಾರವೇ ಇಲ್ಲದೆ ಬಾಲಿಶವಾದ ಮಾತುಗಳಿಂದ ಅಗ್ಗದ ಪ್ರಚಾರ ಗಿಟ್ಟಿಸುವ ಶುಷ್ಕ ವಿಚಾರವಾದಿಗಳ ಮಾತುಗಳು, ಇವೆಲ್ಲ ಪ್ರಜ್ಞಾವಂತರ ಲಕ್ಷಣಗಳಲ್ಲ.
ಆಳವಾದ ಮತ್ತು ವಿಶಾಲವಾದ ಅಧ್ಯಯನದಿಂದ ಮೂಡಿಬಂದಂಥ ವಿಚಾರಗಳನ್ನು ಜನರ ಮುಂದೆ ಮಂಡಿಸುವ ಪ್ರಯತ್ನ
ಮಾಡಬೇಕಾದ ಜರೂರು ಈ ಸಂದರ್ಭದಲ್ಲಿ ಬಹಳ ಅಗತ್ಯ. ಟಿವಿ, ದಿನಪತ್ರಿಕೆ, ಅಂತರ್ಜಾಲ ಮುಂತಾದ ಅನೇಕ ಮಾಧ್ಯಮ ಗಳಲ್ಲಿ ಬರೀ ಶುಷ್ಕವಾದ ವಿಚಾರ ವಿಶ್ಲೇಷಣೆಯೇ ಹೆಚ್ಚು ಕಾಣಸಿಗುತ್ತಿದೆ. ಮನಸ್ಸಿನ ಆಳದಲ್ಲಿ ಗಹನವಾದ ವಿಚಾರ ಮಂಥನಕ್ಕೆ ಸಿದ್ಧವಿಲ್ಲದ ಶುಷ್ಕ ಪಂಡಿತರ ಅಬ್ಬರ ನಿಜಕ್ಕೂ ಅಪಾಯಕಾರೀ ಪ್ರವೃತ್ತಿಯಾಗಿ ಪರಿಣಮಿಸಿದೆ.
ರಾಮಾಯಣದ ವಿರೋಧಿ ಗುಂಪುಗಳು ರಾಮನ ಬಗ್ಗೆ ರಾಮಾಯಣದ ಬಗ್ಗೆ ಅತ್ಯಂತ ಅಸಹ್ಯಕರ ರೀತಿಯ ಮಾತುಗಳನ್ನು ಆಡುತ್ತಾ ಪ್ರಚಾರಗಿಟ್ಟಿಸುತ್ತಾರೆ. ಅದೇ ರೀತಿ ರಾಮ ಭಕ್ತರೂ ಸಹ ನಮ್ಮ ಸಂಸ್ಕೃತಿಗೆ ವಿರೋಧವಾದ ರೀತಿಯ ಅನಾಗರಿಕ
ವರ್ತನೆ ತೋರುತ್ತಿರುವುದೂ ಖಂಡನೀಯ. ಪ್ರಸಿದ್ಧ ಇತಿಹಾಸ ಪಂಡಿತರಾದ ಡಾ. ಎಸ್. ಶ್ರೀಕಂಠಶಾಸ್ತ್ರಿ ಅವರು ತಮ್ಮ ಭಾರತೀಯ ಸಂಸ್ಕೃತಿ (ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ ೧೯೭೫ ಪುಟ ೩೯೨) ಎಂಬ ಗ್ರಂಥದಲ್ಲಿ ಹೀಗೆ ಬರೆಯು ತ್ತಾರೆ. ಭಾರತೀಯರೆಂದಿಗೂ ಕೂಪಕರ್ಮಗಳಂತಿರಲಿಲ್ಲ.
ವಿದೇಶಿ ಮತ್ತು ವಿಜಾತೀಯ ಸಂಸ್ಕೃತಿಗಳಲ್ಲಿರುವ ನಿಸ್ಸಾರವಾದ ಅಂಶಗಳನ್ನು ನಿರಾಕರಿಸಿ ಸದ್ಗುಣಗಳನ್ನು ಗ್ರಹಿಸಲು ಹಿಂತೆಗೆ ಯಲಿಲ್ಲ. ಇಂತಹ ಗುಣಗ್ರಹಣೆಯಿಂದ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡು ಆತ್ಮ ಹಾನಿ ಮಾಡಿಕೊಳ್ಳಲಿಲ್ಲ ಇಂಥ ಭಾರತೀಯ ಸಂಸ್ಕೃತಿಯ ವಾರಸುದಾರರಾಗಿರುವ ಇಂದಿನ ಪ್ರಜ್ಞಾವಂತರು ಅಧ್ಯಯನದಿಂದ, ವಿಚಾರಮಂಥನದಿಂದ ಮೂಡಿ
ಬರುವ ಗಟ್ಟಿಯಾದ ವಾದ ಮಂಡಿಸಿ ಪ್ರತಿವಾದಿಗಳಿಗೆ ಭಯಂಕರರಾಗೆ ಬೇಕೇ ಹೊರತು, ಬರೀ ಭಯಂಕರವಾದಿಗಳಾಗಬಾರದು.
ಪ್ರಸ್ತುತ ನಡೆಯುತ್ತಿರುವ ಈ ಪರ ವಿರೋಧ ಚರ್ಚೆಗಳನ್ನು ಗಮನಿಸಿದರೆ ಇದೆಲ್ಲ ನೆಲದ ಮೇಲೆ ಬೆಳೆದಿರುವ ಗರಿಕೆ ಹುಲ್ಲನ್ನು ಮಾತ್ರ ಮೇಯುವ ಹಸುವಿನ ಹಾಗೆ, ಮೂಲ ಬೇರಿನವೆರೆಗೂ ಶೋಧಿಸಿ, ಸಂಪಾದಿಸಿರುವ ಪಾಂಡಿತ್ಯ, ಪ್ರತಿಭೆ ಇಲ್ಲದ ಬರಿ
ಪಲ್ಲವಗ್ರಾಹಿ ಪಂಡಿತರ ಗದ್ದಲ ಎಂಬ ತೀರ್ಮಾನಕ್ಕೆ ಬರದೇ ಬೇರೆ ದಾರಿಯಿಲ್ಲ.