ಅಭಿಮತ
ರಘು ಕೋಟ್ಯಾನ್, ಮಂಗಳೂರು
ರಾಜೀವ್ ಗಾಂಧಿಯವರು ಶ್ರೀ ರಾಮಮಂದಿರದ ಬಾಗಿಲು ತೆರೆಸಿದ ನಂತರ, ‘೧೯೮೯ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಜೀವ್ ಗಾಂಯವರೇ ಶಂಕು ಸ್ಥಾಪನೆ ನೆರವೇರಿಸಿದ್ದರು’ ಎಂದು ಈಗ ಕಾಂಗ್ರೆಸ್ ಹೇಳುತ್ತಿದೆ. ಶಾ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಲ್ಪಸಂಖ್ಯಾತರ ಷರಿಯಾ ಕಾನೂನಿಗೆ ವಿರುದ್ಧ ವಾಗಿ ನೀಡಿದಂಥ ಆದೇಶವನ್ನು, ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜೀವ್ ಗಾಂಧಿ ನಾಯಕತ್ವದ ಕಾಂಗ್ರೆಸ್ ಸರಕಾರ ತಡೆಹಿಡಿದಿತ್ತು.
ಅಲ್ಪಸಂಖ್ಯಾತರ ಇಂಥ ಅತಿಯಾದ ಓಲೈಕೆಯಿಂದ ಅಸಮಾಧಾನಗೊಂಡ ಹಿಂದೂಗಳನ್ನು ಸಂತೈಸಲು ರಾಮಮಂದಿರದ ಶಂಕುಸ್ಥಾಪನೆಯ ನಾಟಕವಾಡ ಲಾಗಿತ್ತು ಎಂಬುದು ಒಂದು ವಾದ. ಇನ್ನೊಂದು ವಾದ ಏನೆಂದರೆ, ಶ್ರೀರಾಮ ಜನ್ಮಭೂಮಿಯಲ್ಲಿದ್ದ ವಿವಾದಿತ ಕಟ್ಟಡ ನೆಲಸಮವಾದದ್ದು ೧೯೯೨ರಲ್ಲಿ; ಹಾಗಾದರೆ ರಾಮಮಂದಿರ ಕಟ್ಟಲು ೧೯೮೯ರಲ್ಲಿ ಶಂಕುಸ್ಥಾಪನೆ ಮಾಡಿದ್ದು ಯಾವ ಜಾಗದಲ್ಲಿ? ವಿವಾದಿತ ಕಟ್ಟಡವನ್ನು ಹಾಗೆಯೇ ಇಟ್ಟುಕೊಂಡು ಪಕ್ಕದಲ್ಲಿ
ಮಂದಿರ ಕಟ್ಟಲು ಕಾಂಗ್ರೆಸ್ ಪಿತೂರಿ ನಡೆಸಿತ್ತು. ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿನ ದೇವಾಲಯ ನಿರ್ಮಾಣದಲ್ಲಿ ಇಂಥದೇ ಪಿತೂರಿಯನ್ನು ಮಾಡಿ ಕಾಂಗ್ರೆಸ್ ಸಫಲಗೊಂಡಿತ್ತು.
೧೯೬೮ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘದ ಮೊದಲ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ನಾಯಕ ಗಣೇಶ್ ವಾಸುದೇವ್ ಮಾವಲಂಕರ್ ಅವರು, ಇಡೀ ಭೂಮಿ ಟ್ರಸ್ಟ್ ಹೆಸರಲ್ಲಿದ್ದರು ಕೂಡ ಮಸೀದಿಯ ಜಾಗ ಬಿಟ್ಟು ಪಕ್ಕದಲ್ಲಿ ಮಂದಿರ ನಿರ್ಮಾಣ ಮಾಡಿದ್ದರು. ಅಲ್ಲದೆ ಮಸೀದಿಯನ್ನು ಅಲ್ಪಸಂಖ್ಯಾತರಿಗೆ ವಹಿಸಿಕೊಡಲು ಕಾನೂನಿಗೆ ವಿರುದ್ಧವಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೇ ರೀತಿ ಅಯೋಧ್ಯೆಯಲ್ಲೂ ವಿವಾದಿ ಕಟ್ಟಡದ ಪಕ್ಕದಲ್ಲಿ ಮಂದಿರ ನಿರ್ಮಿಸಿ, ತದನಂತರ ವಿವಾದಿತ ಕಟ್ಟಡವನ್ನು ಅಲ್ಪಸಂಖ್ಯಾತರಿಗೆ ವಹಿಸಿಕೊಡುವ ಹುನ್ನಾರ ನಡೆಸಲಾಗಿತ್ತು. ಇದರ ವಾಸನೆ ಕಂಡುಹಿಡಿದ ವಿಶ್ವ ಹಿಂದೂ ಪರಿಷತ್, ವಿವಾದಿತ ಕಟ್ಟಡದ ನೆಲಸಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ೧೯೯೦ರಲ್ಲಿ ಕಾರ್ಯಾಚರಣೆಗೆ ಇಳಿದಿತ್ತು.
ದುರದೃಷ್ಟವಶಾತ್ ಆಗಿನ ಸರಕಾರ ಕರಸೇವಕರ ಮೇಲೆ ಬೇಕಾಬಿಟ್ಟಿ ಗುಂಡುಹಾರಿಸಿ ಗಣನೀಯ ಸಂಖ್ಯೆಯ ಶ್ರೀರಾಮ ಕರಸೇವಕರ ಸಾವಿಗೆ ಕಾರಣ ಕರ್ತನಾಗಿತ್ತು. ನಂತರ ೧೯೯೨ ರಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಅಯೋಧ್ಯೆಯಲ್ಲಿ ಕರಸೇವೆ ನಡೆದು ವಿವಾದಿತ ಕಟ್ಟಡವನ್ನು ಧರೆಗುರುಳಿಸಲಾಯಿತು. ನಿಜ ಸಂಗತಿಯೆಂದರೆ, ಆಗಿನ ನರಸಿಂಹರಾವ್ ಅವರ ಸರಕಾರ ಕರಸೇವಕರ ಮೇಲೆ ಗುಂಡಿಕ್ಕುವ ಯಾವ ಆದೇಶವನ್ನೂ
ನೀಡಲಿಲ್ಲ; ಈ ವಿವಾದಿತ ಕಟ್ಟಡ ನೆಲಸಮಗೊಳ್ಳುವಲ್ಲಿ ಕಾಂಗ್ರೆಸ್‌ನ ನರಸಿಂಹರಾವ್ ಅವರ ಪಾತ್ರ ಅಪಾರ. ತಾನು ಮಾಡದ ಎಲ್ಲವನ್ನೂ ತಾನೇ ಮಾಡಿದ್ದು ಎನ್ನುತ್ತಿರುವ ಈಗಿನ ಕಾಂಗ್ರೆಸಿಗರು, ವಿವಾದಿತ ಕಟ್ಟಡ ನೆಲಸಮಗೊಂಡಿದ್ದು ತಮ್ಮಿಂದಲೇ ಅಂತ ಹೇಳುವ ಧೈರ್ಯ ತೋರುತ್ತಿಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)