Saturday, 14th December 2024

ಮೌಲ್ಯಾಧರಿತ ರಾಜಕೀಯದ ಮೂರ್ತರೂಪ ಹೆಗಡೆ

ಸವಿ ನೆನಪು

ಬಸವರಾಜ ಹೊರಟ್ಟಿ

ಮೌಲ್ಯಾಧಾರಿತ ರಾಜಕೀಯವೇ ಕಳೆದುಹೋಗುತ್ತಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ, ರಾಮಕೃಷ್ಣ ಹೆಗಡೆ ಅವರನ್ನು ನೆನಪು ಮಾಡಿಕೊಳ್ಳುವುದು ಅತ್ಯಗತ್ಯ. ಮೌಲ್ಯಾಧಾರಿತ ರಾಜಕಾರಣಿ ಎನ್ನುವ ಪದಕ್ಕೆ ಅರ್ಥ ಕೊಟ್ಟವರೇ ರಾಮಕೃಷ್ಣ ಹೆಗಡೆ ಎಂದರೆ ಅತಿಶಯೋಕ್ತಿಯಲ್ಲ. ನಾನು ನೋಡಿದಂತೆ, ರಾಮಕೃಷ್ಣ ಹೆಗಡೆ ಅವರು ರಾಷ್ಟ್ರದ ಪ್ರಬುದ್ಧ, ವಿಚಾರವಂತ ರಾಜಕಾರಣಿಗಳ ಸಾಲಿನಲ್ಲಿ ಅಗ್ರಮಾನ್ಯರು. ಸರಳ ನಡವಳಿಕೆಯ, ಸಮಯ ಪ್ರಜ್ಞೆಯುಳ್ಳ, ಸೂಕ್ಷ್ಮ ಸಂವೇದಿ ನಾಯಕ, ರಾಜ್ಯ ಕಂಡ ಸಮರ್ಥ ಮುಖ್ಯಮಂತ್ರಿಗಳು.

ರಾಜ್ಯ ರಾಜಕಾರಣದಲ್ಲಿ ಚಿರಸ್ಥಾಯಿ ಮತ್ತು ದೊಡ್ಡ ವ್ಯಕ್ತಿತ್ವ. ನಾನು ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಅವರನ್ನು ನೋಡಿಕೊಂಡು ಬೆಳೆದೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಅವರ ಪರಿಚಯವಾಗಿತ್ತು. ನಮ್ಮ ಕಾಲೇಜಿನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅವರನ್ನು ಕರೆಯಿಸಲಾಗುತ್ತಿತ್ತು. ನಾನು ಎಂಎಲ್‌ಸಿ ಆದಾಗ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ೧೯೮೩ರಲ್ಲಿ ಮುಖ್ಯಮಂತ್ರಿ ಆಗಿದ್ದರು. ನಮ್ಮನ್ನು ಜನತಾದಳದ ಕೋರ್ ಕಮಿಟಿ ಸದಸ್ಯರಾಗಿ ಮಾಡಿದ್ದರು. ಅವರು ನಮಗೆ ಗಾಡ್ ಫಾದರ್ ಥರ ಇದ್ದರು. ಅವರು ಸಿಎಂ ಆದಾಗ ಕೌನ್ಸಿಲ್‌ನಲ್ಲಿ ಬಹುಮತ ಇಲ್ಲದಿದ್ದಾಗ ಸಹಕಾರ ನೀಡಿದ್ದೆವು. ಕುಟುಂಬದ ಸದಸ್ಯನ ರೀತಿಯಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇವೆ. ಅವರೂ ಪ್ರತಿಹಂತದಲೂ ಅದೇ ರೀತಿ ನಡೆದುಕೊಳ್ಳುತ್ತಿದ್ದರು. ಅವರು ಪಕ್ಷ ಬಿಟ್ಟು ‘ನವ ನಿರ್ಮಾಣ ವೇದಿಕೆ’ ಮಾಡಿದಾಗ ನಾನು ಮೊದಲು ಅವರ ಜತೆ ಹೋಗಿದ್ದೆ ಕೊನೆಯ ತನಕ ಅವರ ಜತೆ ಇರುತ್ತಿದ್ದೆ. ಅವರು ಮುಖ್ಯಮಂತ್ರಿ ಆಗಿದ್ದಾಗ ನನಗೆ ರಾಜಕೀಯ ಪಟ್ಟುಗಳನ್ನು ಕಲಿಸಿದ್ದರು. ಅವರ ಆಡಳಿತದಲ್ಲಿ ‘ಶಾಸಕರ ದಿನ’ ಆಚರಣೆಗೆ ಬಂತು.

೧೯೮೪ರಲ್ಲಿ ಗಂಗಾಧರ್ ಗೌಡ ಶಾಸಕರಾಗಿದ್ದರು. ಒಮ್ಮೆ ನಾನು ಒಂದು ಟಿ-ಶರ್ಟ್ ತೆಗೆದುಕೊಂಡಿದ್ದೆ. ಗಂಗಾಧರ್ ಗೌಡರು ‘ಎಲ್ಲಿಂದ ತಂದೆ ಈ ಟಿ-ಶರ್ಟ್?’ ಅಂದರು. ನಾನು ‘ಎಂ.ಜಿ.ರಸ್ತೆಯಿಂದ’ ಎಂದೆ. ಅವರಿಗೂ ಖರೀದಿಸಲೆಂದು ಕರೆದೊಯ್ದರು. ನಾನು ಅದೇ ಟಿ-ಶರ್ಟ್ ಹಾಕಿಕೊಂಡು ವಿಧಾನಸೌಧಕ್ಕೆ ಹೋದಾಗ, ರಾಮಕೃಷ್ಣ ಹೆಗಡೆ ‘ಯಾರು ನೀನು?’ ಅಂದರು. ಆಗ ನಾನು ‘ಯಾಕೆ ಸರ್ ಈ ಥರ ಕೇಳಿದ್ರಿ?’ ಎಂದು ಗಾಬರಿ ಯಾಗಿ ಕೇಳಿದೆ. ‘ಇದು ವಿಧಾನಸೌಧ, ದೇವಸ್ಥಾನ ಇದ್ದಂಗೆ’ ಅಂದು ಅವರ ಪಿಎಯನ್ನು ಕಳುಹಿಸಿ ಅವೆನ್ಯೂ ರಸ್ತೆಯಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಹೋಗಿ ಆರು ಶರ್ಟ್ ಪ್ಯಾಂಟು ಕೊಡಿಸಿದರು. ವಿಧಾನ ಸೌಧವನ್ನು ಅವರು ಅಷ್ಟು ಗೌರವದಿಂದ ಕಾಣುತ್ತಿದ್ದರು ಎನ್ನುವುದಕ್ಕೆ ಇದು ಉದಾಹರಣೆ.

ಇನ್ನೊಂದು ಘಟನೆಯನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಕೆಲವೊಮ್ಮೆ ಅವರು ನಮ್ಮ ತೋಟಕ್ಕೆ ಊಟಕ್ಕೆಂದು ಬರುತ್ತಿದ್ದರು. ಒಮ್ಮೆ ಅವರು ಮುಖ್ಯಮಂತ್ರಿಯಾಗಿದ್ದಾಗ ಬಂದರು. ಆಗ ನಮ್ಮ ತಾಯಿ ಚಪ್ಪಲಿ ಹೊರಗೆ ಬಿಟ್ಟು ಬಾ ಅಂದರು. ಮತ್ತೆ ವಾಪಸ್ ಹೋಗಿ ಚಪ್ಪಲಿ ಹೊರಗೆ ಬಿಟ್ಟರು. ಅವರ ಇಂಥ ದೊಡ್ಡತನಕ್ಕೆ ಬೆಲೆ ಕೊಡಬೇಕು. ಅವರಿಗೆ ಜಾತಿ ಇರಲಿಲ್ಲ. ಸದನದಲ್ಲಿ ಧ್ವನಿ ಎತ್ತುವವರ ಪರ ಇದ್ದರು. ಅವರ ಆಡಳಿತ ದಲ್ಲಿ ಭ್ರಷ್ಟಾಚಾರ ಕಡಿಮೆ ಇರುತ್ತಿತ್ತು. ಆಡಳಿತದಲ್ಲಿ ಉತ್ತಮ ಕೆಲಸಗಳು ಆಗುತ್ತಿದ್ದವು. ಇಂದಿನ ರಾಜಕಾರಣಿಗಳು ಅವರನ್ನು ನೋಡಿ ಕಲಿಯಬೇಕಾಗಿರುವುದು ಬಹಳಷ್ಟಿದೆ. ರಾಜಕೀಯ ಮೌಲ್ಯ ಅಂದರೆ ಏನು? ಒಬ್ಬ ರಾಜಕಾರಣಿ ಹೇಗಿರಬೇಕು? ಎಂಬುದು ಅವರಿಗೆ ಗೊತ್ತಿತ್ತು. ಅವರ ರೀತಿ-ನೀತಿ ನನಗೆ ಬಹಳ ಹಿಡಿಸಿತ್ತು. ಮತ್ತೆ ಇನ್ನೊಂದು ವಿಚಾರ ಎಂದರೆ ಅವರು ಜಾತ್ಯತೀತ ಮನಸ್ಥಿತಿಯವರಾಗಿದ್ದರು. ಇಂದು ಅವರಿದ್ದಿದ್ದರೆ ತುಂಬು ೯೮ ವರ್ಷದ ಸಂಭ್ರಮ. ಅವರ ನೆನಪಿನಲ್ಲಿ, ಅವರ ರಾಜಕೀಯ ಮೌಲ್ಯವನ್ನು ಸಾಧ್ಯವಾದಷ್ಟು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ.

(ಲೇಖಕರು ವಿಧಾನಪರಿಷತ್ ಸಭಾಪತಿ)