ಧರ್ಮಸೂತ್ರ
ಡಾ.ಸಿ.ಜೆ.ರಾಘವೇಂದ್ರ ವೈಲಾಯ
‘ಆಡದಲೆ ಮಾಡುವನು ರೂಢಿಯೊಳಗುತ್ತಮನು’ ಎಂಬ ಮಾತಿನಂತೆ ಅತ್ಯುನ್ನತ ಆದರ್ಶಗಳನ್ನು ಸ್ವತಃ ಬದುಕಿ ತೋರಿಸಿದವನು ಶ್ರೀರಾಮ. ತಾನು ಸ್ವಪೌರುಷದಿಂದ ಗೆದ್ದ ಮತ್ತು ಬಂಗಾರದ ತಟ್ಟೆಯಲ್ಲಿಟ್ಟು ತನಗೆ ಕೊಡಮಾಡಿದ ಸ್ವರ್ಣಲಂಕೆಯನ್ನು ತಿರಸ್ಕರಿಸಿ, ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು ಉದ್ಘೋಷಿಸಿ, ತನ್ನ ತಾಯ್ನಾಡಿಗೆ ಮರಳಲು ಹಪಹಪಿಸಿದವನು ಶ್ರೀರಾಮ.
ಆಸ್ತೇಯ ಮತ್ತು ಅಪರಿಗ್ರಹ ಎಂಬ ಸನಾತನ ಮೌಲ್ಯಗಳ ಸಾಕಾರಮೂರ್ತಿಯಾದ ಶ್ರೀರಾಮನನ್ನು ಯಃಕಶ್ಚಿತ್ ಮಾನವನೆನ್ನಲು ಸಾಧ್ಯವೇ? ಸ್ವಾರ್ಥಸಾಧನೆಗಾಗಿ ಸ್ವಜನರ ರಕ್ತಪಾತಕ್ಕೂ ಹೇಸದಂಥ ಬಹುಜನರ ಮಧ್ಯೆ, ಕೇವಲ ಪಿತೃವಾಕ್ಯ ಪರಿಪಾಲನೆಗಾಗಿ ತನ್ನ ಸರ್ವಸ್ವವನ್ನೂ ಕ್ಷಣಮಾತ್ರ ದಲ್ಲಿ ತ್ಯಜಿಸಿ ಏಕಾಂಗಿಯಾಗಿ ಕಾಡಿಗೆ ಹೊರಟು ನಿಂತ ಇಂಥ ಮಹಾತ್ಯಾಗಿ, ಯೋಗಿ ಎಲ್ಲಿದ್ದರೂ ಆತ ದೇವರೇ. ಷೋಡಷಗುಣ ಪರಿಪೂರ್ಣನಾದ ಶ್ರೀರಾಮಚಂದ್ರನು ಹಿಂದೊಮ್ಮೆ ನಮ್ಮೀ ಭರತ ಭೂಮಿಯಲ್ಲಿ ನಡೆದಾಡಿದ್ದನೆನ್ನುವುದೇ ಭಾರತೀಯರಾದ ನಮಗೆಲ್ಲಾ ಹೆಮ್ಮೆ. ಇಂಥ ಆದರ್ಶ ಪುರುಷನನ್ನು ನಾವು ಇನ್ನೆಲ್ಲಿ ಕಂಡೇವು? ಹಿಂದೂಗಳಿಗೆ ಸಪ್ತಮೋಕ್ಷದಾಯಕ ತೀರ್ಥಕ್ಷೇತ್ರಗಳ ಪೈಕಿ ಮೊದಲನೆಯದಾದ ಅಯೋಧ್ಯಾ ನಗರವನ್ನು ಶ್ರೀರಾಮನ ಕಾಲಾನಂತರದಲ್ಲಿ ಅವನ ಪುತ್ರ ಕುಶನು ಮರುನಿರ್ಮಿಸಿದ.
ತದನಂತರ, ಕಲಿಯುಗದ ಶಕಪುರುಷ ವಿಕ್ರಮಾದಿತ್ಯನು ಸರಯೂ ನದಿಯ ತಟದಲ್ಲಿ ನಿರ್ಮಿಸಿದ ಅಯೋಧ್ಯೆಯಲ್ಲಿನ (ಅವಧ್) ಈ ಮೂಲ ರಾಮ ಮಂದಿರವನ್ನು ಮತ್ತೆ ಜೀರ್ಣೋದ್ಧಾರ ಮಾಡಿದ್ದು ಶುಂಗವಂಶದ ಪುಷ್ಯಮಿತ್ರ ಶುಂಗ. ನಂತರ ೫ನೇ ಶತಮಾನದಲ್ಲಿ ಅದು (ಸಾಕೇತ) ಬೌದ್ಧರ ಪ್ರಮುಖ ಕೇಂದ್ರವಾಗಿತ್ತು ಹಾಗೂ ಆದಿನಾಥನೂ ಸೇರಿದಂತೆ ಅಲ್ಲಿ ಐವರು ತೀರ್ಥಂಕರರು ಜನಿಸಿದ್ದರು. ತರುವಾಯ, ಕನೌಜಿನ ರಾಜ ಜಯಚಂದ್ರ ಅದನ್ನು ನವೀಕರಿಸಿದ.
ಪಾಣಿಪತ್ ಯುದ್ಧದಲ್ಲಿ ಆತ ಮರಣಿಸಿದ ನಂತರ ಅನೇಕ ಆಕ್ರಮಣಕಾರರು ಕಾಶಿ, ಮಥುರಾಗಳ ಮೇಲೆ ದಾಳಿಮಾಡಿ ಅಲ್ಲಿದ್ದ ಹಲವು ಮೂಲ ದೇಗುಲ ಗಳನ್ನು ನೆಲಸಮ ಮಾಡಿ ಅರ್ಚಕರನ್ನು ಹತ್ಯೆಗೈದರು. ಆದರೆ ೧೪ನೇ ಶತಮಾನದವರೆಗೂ ಅವರಿಗೆ ಅಯೋಧ್ಯೆಯ ಮೂಲ ರಾಮದೇಗುಲವನ್ನು ಕೆಡವಲಾಗಿರಲಿಲ್ಲ. ಸಿಕಂದರ್ ಲೋದಿಯ ಆಳ್ವಿಕೆಯ ಕಾಲಘಟ್ಟದಲ್ಲೂ ಅಲ್ಲಿ ಭವ್ಯ ರಾಮದೇಗುಲವಿದ್ದ ಪುರಾವೆಗಳಿವೆ. ಮುಘಲರು ೧೪ನೇ ಶತಮಾನದ ನಂತರ ಭಾರತದಲ್ಲಿ ಅಧಿಕಾರಕ್ಕೆ ಬಂದರು.
೧೫೨೭-೨೮ರ ಅವಽಯಲ್ಲಿ ಬಾಬರನ ಸೇನಾ ದಂಡನಾಯಕ ಮೀರ್ ಬಾಕಿ, ಅಲ್ಲಿನ ಮಂದಿರವನ್ನು ನೆಲಸಮಗೊಳಿಸಿ ಅದೇ ಭಗ್ನಾವಶೇಷಗಳಿಂದ ಅಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ. ತರುವಾಯದ ಐತಿಹಾಸಿಕ ವಿವರಗಳು ಈಗಿನವರಿಗೆ ಗೊತ್ತಿರುವಂಥದ್ದೇ. ಸಾಕೇತದ ರಾಮಮಂದಿರವನ್ನು ಭೌತಿಕ ವಾಗಿ ಕೆಡವಿದ ಮತಾಂಧರ ಕಾಲದಿಂದ ತೊಡಗಿ, ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಅಂದಿನ ಸೆಕ್ಯುಲರ್ ಸರಕಾರ ಮತ್ತು ಕೊಟ್ಟಕೊನೆಗೆ
ರಾಮಮಂದಿರದ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ ಸರ್ವೋಚ್ಚ ನ್ಯಾಯಾಲಯದ ಸುದೀರ್ಘ ಕಾನೂನು ಸಮರದವರೆಗಿನ ಹಿಂದೂಗಳ ಈ ಅವಿರತ ಹೋರಾಟವು ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಭಾರತವು ವಸಾಹತುಶಾಹಿಗಳ ಕಪಿಮುಷ್ಟಿಯಿಂದ ಸ್ವಾತಂತ್ರ್ಯ ಪಡೆದು ೭೫ ವರ್ಷಗಳಾದ ಈ ಅಮೃತಕಾಲದಲ್ಲಿ ಶ್ರೀರಾಮಚಂದ್ರನ ಭವ್ಯ-ದಿವ್ಯ ಮಂದಿರವು ಆತನ ಜನ್ಮಭೂಮಿಯೂ ಕರ್ಮ ಭೂಮಿಯೂ ಆದ ಅಯೋಧ್ಯೆ ಯಲ್ಲೇ ರೂಪುಗೊಂಡು ಲೋಕಾರ್ಪಣೆಗೊಳ್ಳುತ್ತಿರುವುದು ಸನಾತನ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುಜ್ಜೀವನದ ಶುಭ ಸಂಕೇತವೇ ಸರಿ.
‘ಅಚ್ಛೇ ದಿನ್’ ಬರುತ್ತಿದೆ ಎಂದು ನಂಬಿದ್ದು ಸಾರ್ಥಕವಾಯಿತು. ಭವಿಷ್ಯದಲ್ಲಿ ಭಾರತವು ಮತ್ತೆ ವಿಶ್ವಗುರುವಾಗುವ ಮುನ್ಸೂಚನೆ ಇದಲ್ಲವೇ? ಇರಾಕಿನ ಕುರ್ದಿಸ್ತಾನದ ಗವಿಗಳಲ್ಲಿ ದೊರೆತ ಶಿಲಾಯುಗದ ಪಳೆಯುಳಿಕೆಗಳಿಂದ ಹಿಡಿದು, ಸಿರಿಯಾ, ಟರ್ಕಿ, ಮೆಕ್ಸಿಕೋ, ಪೆರು (ಇಂಕಾಗಳು), ಈಜಿಪ್ಟ್, ರಷ್ಯಾ, ಜರ್ಮನಿ, ಶ್ರೀಲಂಕಾ ಹೀಗೆ ಎಲ್ಲೆಲ್ಲೂ ರಾಮನ ಅಸ್ತಿತ್ವದ ಕುರಿತು ಐತಿಹಾಸಿಕ ಪುರಾವೆ ಗಳು ದೊರೆತಿವೆ. ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಮರಿರುವ
ಇಂಡೋನೇಷ್ಯಾದ ಜನರು, ತಮ್ಮ ರಿಲಿಜನ್ ಬದಲಾದರೂ ತಮ್ಮ ಪೂರ್ವಸಂಸ್ಕೃತಿಯನ್ನು ಮತ್ತು ಪೂರ್ವಜನಾದ ರಾಮನ ಸ್ಮೃತಿಯನ್ನು ಇಂದಿಗೂ ಮರೆತಿಲ್ಲ.
ಸಮಕಾಲೀನ ಭಾರತೀಯ ರಂತೆ ಅವರಿಗೆ ತಮ್ಮ ಪೂರ್ವೇತಿಹಾಸದ ಕುರಿತು ಗುಲಗಂಜಿ ಯಷ್ಟೂ ಉಪೇಕ್ಷೆ ಮತ್ತು ಕೀಳರಿಮೆಗಳಿಲ್ಲ. ಈ ವಿಶಾಲ ಭಾವವೇ ಅವರ ರಾಷ್ಟ್ರೀಯತೆಗೆ ಭದ್ರಬುನಾದಿ. ವಾಲ್ಮೀಕಿ ರಚಿಸಿದ ರಾಮಾಯಣವು ವಿದೇಶಗಳಲ್ಲಿ ಹಲವಾರು ಪ್ರಕ್ಷಿಪ್ತ ಹೆಸರುಗಳಿಂದ ಖ್ಯಾತವಾಗಿದೆ. ಥಾಯ್ಲೆಂಡ್, ಬರ್ಮಾ (ಬ್ರಹ್ಮದೇಶ), ಜಾವಾ, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಚೀನಾ, ಜಪಾನ್, ಫಿಲಿಪ್ಪೀನ್ಸ್, ಲಾವೋಸ್, ಮಂಗೋ ಲಿಯಾ ಮೊದಲಾದ ದೇಶಗಳಲ್ಲಿ ರಾಮನ ಕುರಿತು ಇಂದಿಗೂ ವ್ಯಾಪಕ ಭಕ್ತಿ ಮತ್ತು ಶ್ರದ್ಧೆಗಳಿವೆ. ರಾಮ ಮತ್ತು ರಾಮಾಯಣ ಈ ದೇಶಗಳ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ಪ್ರಾಚೀನ ಈಜಿಪ್ಟ್, ಇರಾಕ್, ಸಿರಿಯಾ, ಟರ್ಕಿ, ಮಧ್ಯಪ್ರಾಚ್ಯ, ರಷ್ಯಾ, ಮೆಕ್ಸಿಕೋ, ಗ್ವಾಟೆಮಾಲಾ, ದಕ್ಷಿಣ ಅಮೆರಿಕಾ, ಪೆರು ಮೊದಲಾದೆಡೆ ರಾಮನ ಶಿಲ್ಪಗಳು, ಚಿತ್ರಗಳು, ನಾಣ್ಯಗಳು ದೊರೆತಿವೆ. ಅಲ್ಲಿನ ಸಾಹಿತ್ಯ, ಭಾಷೆ, ನದಿ/ಜನ/ಸ್ಥಳಗಳ ಹೆಸರು ಗಳು, ಕಲೆ, ನೃತ್ಯ, ಧಾರ್ಮಿಕ ಆಚರಣೆಗಳಲ್ಲಿ ಸಂಸ್ಕೃತ, ರಾಮ ಮತ್ತು ರಾಮಾಯಣದ ಅಚ್ಚಳಿಯದ ಪ್ರಭಾವವಿದೆ.
ಥಾಯ್ಲೆಂಡ್ನ ರಾಜವಂಶಸ್ಥರು ತಮ್ಮನ್ನು ರಾಮನ ವಂಶಜರೆಂದೇ ಗುರುತಿಸಿಕೊಳ್ಳುತ್ತಾರೆ. ಹೀಗೆ ರಾಮನ ಅಸ್ತಿತ್ವವನ್ನು ಭಾರತವಷ್ಟೇ ಅಲ್ಲದೆ ವಿಶ್ವವೇ
ಒಪ್ಪಿಕೊಂಡಿದೆ. ರಾಮನ ಜೀವನಗಾಥೆಯು ಒಂದು ಅಮರ ಪ್ರೇಮಕಥೆ. ಏಕಪತ್ನೀ ವ್ರತಸ್ಥನಾದ ರಾಮನು, ತನ್ನ ಅಪಹೃತ ಪತ್ನಿ ಸೀತೆಯ ಶೋಧಕಾಲ ದಲ್ಲಿ ಕಪಿಸೇನೆಯ ಸಹಾಯದಿಂದ ನಿರ್ಮಿಸಿದ ರಾಮಸೇತುವು ಅವರಿಬ್ಬರ ಅಮರಪ್ರೇಮಕ್ಕಿರುವ ಭವ್ಯಸ್ಮಾರಕ. ತ್ರೇತಾಯುಗದ ಶ್ರೀರಾಮನ ಆದರ್ಶ ಗಳು ದೇಶ-ಕಾಲಾತೀತವಾಗಿ ಕಲಿಯುಗಕ್ಕೂ ಅಷ್ಟೇ ಪ್ರಸ್ತುತವಾಗಿವೆ.
ದಲಿತೋದ್ಧಾರ, ಸೀಪರ ಹೋರಾಟ, ಪರಧರ್ಮ ಸಹಿಷ್ಣುತೆ, ವಚನ ಬದ್ಧತೆ, ದೀನದುರ್ಬಲರ ರಕ್ಷಣೆ, ಜನಾಭಿಪ್ರಾಯಕ್ಕೆ ಮನ್ನಣೆ, ಸಮಾಜವಾದ ಹೀಗೆ ಆಧುನಿಕ ಎನ್ನಲಾಗುವ ಆದರ್ಶಗಳನ್ನೆಲ್ಲಾ ಸಹಸ್ರಾರು ವರ್ಷಗಳ ಹಿಂದೆಯೇ ಅಕ್ಷರಶಃ ಪಾಲಿಸಿದವ ಶ್ರೀರಾಮ. ರಾಜನು ಪ್ರಜೆಗಳೆಲ್ಲರಿಗೂ ತಂದೆಯ ಸಮಾನ ಎನ್ನುತ್ತದೆ ಧರ್ಮಶಾಸ. ರಾಜನಾದವನು ಹೇಗಿರ ಬೇಕು ಎಂಬುದನ್ನೇ ನಾವು ಶ್ರೀರಾಮನ ಪ್ರತಿಯೊಂದು ನಡೆ-ನುಡಿಯಲ್ಲೂ ಕಾಣುತ್ತೇವೆ. ದಶರಥನ ಜೀವಿತ ಕಾಲದಲ್ಲಿ ಎಲ್ಲಾ ಪರಿಜನರು, ಅದರಲ್ಲೂ ವಿಶೇಷವಾಗಿ ಸ್ತ್ರೀಯರು ರಾಮನೇ ತಮಗೆ ರಾಜನಾಗಬೇಕೆಂದು ಬಯಸಿದ್ದರಂತೆ. ಆತ
ಅಡವಿಯಿಂದ ಮರಳಲೆಂದು ೧೪ ವರ್ಷಗಳ ಕಾಲ ನಾನಾ ವ್ರತಗಳನ್ನೂ ಕೈಗೊಂಡಿದ್ದರಂತೆ. ಆದರೆ ಕೊನೆಗೆ ಸಾಕ್ಷಾತ್ ರಾಮನೇ ರಾಜನಾಗಿ ಒದಗಿದಾಗ, ಸೀತಾಸಹಿತನಾಗಿ ಆತನನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಅದೇ ಪ್ರಜೆಗಳಿಗೆ ಆಗಲಿಲ್ಲ.
ಇದರಿಂದ ಕಿಂಚಿತ್ತಾದರೂ ಪಾಠವನ್ನು ನಾವು ಕಲಿಯಬೇಕು. ಹಿಂದೊಮ್ಮೆ ಕಾಡಿಗೆ ಹಿಂಬಾಲಿಸಿಕೊಂಡು ಹೊರಟ ಪುರಜನರೇ ಮುಂದೊಮ್ಮೆ ರಾಮ ನನ್ನು ಅಕಾರಣವಾಗಿ ನಿಂದಿಸಿ, ಕೊನೆಗೆ ಸೀತೆ ಅಡವಿ ಪಾಲಾಗಲು ಕಾರಣರಾದರಲ್ಲವೇ? ಜನರ ನೆನಪು ಅಲ್ಪಾಯುಷಿ ಎನ್ನುತ್ತಾರೆ. ರಾಮರಾಜ್ಯವನ್ನು ಸದಾ ಬಯಸುವ ನಮಗೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆಯಿದೆಯೇ? ಆಳುವ ರಾಜ ತಾನು ಯೋಗಿಯಾದರೆ ಸಾಕೇ? ಪ್ರಜೆಗಳಿಗೆ ಯಾವುದೇ ಕರ್ತವ್ಯ ಮತ್ತು ಬಾಧ್ಯತೆಗಳಿಲ್ಲವೇ? ದೇಶವನ್ನು ಮುನ್ನಡೆಸುವ ನೇತಾರನಿಗೆ ರಾಜಕೀಯ, ಧಾರ್ಮಿಕ ಮತ್ತು ನೈತಿಕ ಬಲವನ್ನು ತುಂಬಬೇಕಾದರೆ ನಾವು ಕೂಡ ಅಷ್ಟೇ ಧರ್ಮಿಷ್ಠರಾಗಿರಬೇಡವೇ? ರಾಮಬಾಣದ ಅಗಣಿತ ಶಕ್ತಿಗೆ ಆತನ ತಪಸ್ಸು, ನೈತಿಕತೆ ಮತ್ತು ಧರ್ಮನಿಷ್ಠೆಯೇ ಮೂಲಕಾರಣ. ನಾವು ನಾಡಿಗಾಗಿ ಏನನ್ನೂ ಕೊಡುಗೆ ನೀಡದೆ, ಪ್ರಭುತ್ವದಿಂದಲೇ ಎಲ್ಲವನ್ನೂ ಉಚಿತವಾಗಿ ನಿರೀಕ್ಷಿಸುವ ಮನಸ್ಥಿತಿಯವರಾಗಿದ್ದೇವೆ. ಇದು ಶ್ರಮಜೀವನದ ಬೋಧೆ ಮಾಡುವ ರಾಮರಾಜ್ಯದ ಕಲ್ಪನೆಗೆ ತದ್ವಿರುದ್ಧವಾದದ್ದು.
‘ದೇಶ ನಮಗೇನು ಕೊಟ್ಟಿದೆ ಎಂದು ಕೇಳುವ ಮುನ್ನ, ದೇಶಕ್ಕಾಗಿ ನಾವೇನು ನೀಡಿದ್ದೇವೆ ಎಂದು ಕೇಳಿಕೊಳ್ಳಿ’ ಎಂಬ ಜಾನ್ ಎಫ್.ಕೆನಡಿ ಮಾತುಗಳು ಇಲ್ಲಿ ಪ್ರಸ್ತುತ. ರಾಮರಾಜ್ಯವೇ ನಿಜವಾದ ಪ್ರಜಾರಾಜ್ಯ. ಪ್ರಜಾಪ್ರಭುತ್ವದ ನೈಜ ಪರಿಕಲ್ಪನೆಗೆ ಇದಕ್ಕಿಂತ ಉತ್ತಮ ನಿದರ್ಶನ ಇನ್ನೊಂದಿಲ್ಲ. ಸಂವಿಧಾನದ ಮೂಲಪ್ರತಿಯಲ್ಲಿನ ಮೂಲಭೂತ ಹಕ್ಕುಗಳನ್ನು ವಿವರಿಸುವ ಪುಟದಲ್ಲಿ ರಾಮ ಪಟ್ಟಾಭಿಷೇಕದ ರೇಖಾಚಿತ್ರವು ಮುದ್ರಿತವಾಗಲು, ರಾಮನು ಸುದೀರ್ಘ ವನವಾಸದ ತರುವಾಯ ರಾಜನಾಗಿ ಅಽಕಾರ ವಹಿಸಿಕೊಂಡ ನಂತರ ಜನಾಭಿಪ್ರಾಯಕ್ಕೆ ಕೊಟ್ಟ ಮನ್ನಣೆಯೇ ಮೂಲಪ್ರೇರಣೆ
ಯಾಗಿದೆ. ರಾಮನ ನಡೆ-ನುಡಿ-ಬದುಕು, ಅಷ್ಟೇಕೆ ಅಂತ್ಯವೂ ಸ್ಮರಣೀಯವೇ. ನಿರಪೇಕ್ಷತೆಗೆ, ನಿಸ್ವಾರ್ಥತೆಗೆ ಆತನ ಬದುಕೇ ಅನ್ವರ್ಥ. ‘A man may die, nations may rise and fall, but the idea lives on’ ಎಂಬ ಮಾತಿದೆ.
ಹಾಗಾಗಿ, ಈ ರಾಮರಾಜ್ಯವೆಂಬ ಆದರ್ಶದ ಪರಿಕಲ್ಪನೆಯು ದೇಶ-ಕಾಲಾತೀತವಾದದ್ದು. ಇಂಥ ಕಲ್ಪನೆಯೊಂದನ್ನು ಹುಟ್ಟು ಹಾಕಬಲ್ಲ ಮತ್ತು ತನ್ನ ಬದುಕಿನಲ್ಲಿ ಬಾಳಿ ತೋರಿಸಬಲ್ಲ ರಾಮನಂಥವರು ಈ ಪವಿತ್ರ ಮಣ್ಣಿನಲ್ಲಷ್ಟೇ ಹುಟ್ಟಬಲ್ಲರು. ಭೂಮಿಯ ಮೇಲೆ ಅಂತಿಮ ಮಾನವನು ಇರುವ ತನಕ ಈ ಆದರ್ಶವು ಅಬಾಧಿತವಾಗಿ ಉಳಿಯಲಿದೆ. ತಾನು ಜೀವ ಕಳೆದುಕೊಳ್ಳಬೇಕಾಗಿ ಬಂದರೂ ಕೆಟ್ಟದ್ದನ್ನೆಂದೂ ಮಾಡಬಾರದು; ಸ್ವಂತ ಜೀವನವನ್ನು ಪಣಕ್ಕಿಟ್ಟಾದರೂ ಒಳ್ಳೆಯ ದನ್ನು ಮಾಡ ಬೇಕು ಎಂಬುದೇ ಸನಾತನ ಧರ್ಮದ ಬೋಧೆ. ಈ ಆದರ್ಶವನ್ನು ತನ್ನ ಜೀವನದಲ್ಲಿ ಬದುಕಿ ತೋರಿಸಿ, ಪ್ರತಿಯೊಬ್ಬ ಮಾನವನೂ ತನ್ನ ಮಾದರಿ ನಡೆ-ನುಡಿ ಗಳಿಂದ ದೇವರಾಗಬಲ್ಲ ಎಂದು ಸಾಧಿಸಿ ತೋರಿಸಿದ ಮಹನೀಯ ಶ್ರೀರಾಮ. ಈತನ ಚಿರಂತನ ನೆನಪಿಗಾಗಿ ಮಂದಿರವೊಂದನ್ನು ನಿರ್ಮಿಸುವ ಕನಸು ಹೊತ್ತ ಅಸಂಖ್ಯಾತ ರಾಮಭಕ್ತರ ತ್ಯಾಗ- ಬಲಿದಾನಗಳ ಪುಣ್ಯವಿಶೇಷವೆಂಬಂತೆ ಅಯೋಧ್ಯೆ ಯಲ್ಲಿ ಭವ್ಯದೇಗುಲ ವೊಂದು ತಲೆಯೆತ್ತಿ ನಿಲ್ಲುವ ಈ ಚಾರಿತ್ರಿಕ ಅಮೃತಗಳಿಗೆಗೆ ನಾವೆಲ್ಲ ಸಾಕ್ಷಿಯಾಗುವವರಿದ್ದೇವೆ.
ಭಾರತ ವನ್ನು ಬಾಧಿಸುತ್ತಿರುವ ಸಕಲ ದೌರ್ಬಲ್ಯ – ದೋಷಗಳಿಗೂ, ಧರ್ಮಗ್ಲಾನಿಗೂ ಇದುವೇ ರಾಮಬಾಣ ವಾಗಲಿ. ಅದು ರಾಷ್ಟ್ರೋದ್ದೀಪನದ
ಅಮರ ಸಂಜೀವಿನಿ ಯಾಗಲಿ. ರಾಮ ನಾಮವೇ ಸಮಸ್ತ ಭಾರತೀಯರನ್ನು ಒಗ್ಗೂಡಿಸುವ ಬೀಜ ಮಂತ್ರವಾಗಲಿ. ರಾಮನೇ ಈ ನಾಡಿನ ರಾಷ್ಟ್ರಪುರುಷ. ವಿಶ್ವದೆಲ್ಲೆಡೆ ಹರಿದು ಹಂಚಿಹೋಗಿರುವ ಸಮಸ್ತ ಸನಾತನಿಗಳಿಗೆ ಈ ಭವ್ಯದೇಗುಲವು ಪರಮಪವಿತ್ರ ತೀರ್ಥಕ್ಷೇತ್ರವಾಗಲಿದೆ. ಅಯೋಧ್ಯೆಯು ಮತ್ತೊಮ್ಮೆ ತನ್ನ ಗತವೈಭವಕ್ಕೆ ಮರಳಿ, ವಿಶ್ವವಿಖ್ಯಾತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿ ಅಜರಾಮರವಾಗಿ ವಿಜೃಂಭಿಸಲಿ ಎನ್ನುವುದೇ ಭಾರತೀಯರೆಲ್ಲರ ಆಶಯ.
(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)