Monday, 9th December 2024

ಶಾಪಾದಪಿ ವರಾದಪಿ ರಮ್ಯ, ಮಹಾಕಾವ್ಯ ರಾಮಾಯಣ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಹಲ್ಯೆಯ ಕಥೆಯನ್ನು ನಾನು ಪದವಿನೋದಕ್ಕಾಗಿ ‘ರಾಮಾಯಣದಲ್ಲೊಂದು Rock and Roll ಅಂತ ಹೇಳುವುದಿದೆ. ಇಂದ್ರನನ್ನೂ ಮೋಹಪರವಶನಾಗಿಸುವ ದರ್ಯ ಅಹಲ್ಯೆಗೆ ಇತ್ತು. ‘ಇವಳಲ್ಲಿ ರೂಪಹೀನತೆ (ಹಲ್ಯ) ಲವಲೇಶವೂ ಇರಲಿಲ್ಲವಾದ್ದರಿಂದ ಬ್ರಹ್ಮದೇವನು ಇವಳನ್ನು ‘ಅಹಲ್ಯಾ’ ಎಂದು ಕರೆದನು, ಅಷ್ಟೂ ಅತಿರೂಪವತಿಯಾಗಿದ್ದಳೀಕೆ’ ಎಂದು ಪುರಾಣಗಳು ಬಣ್ಣಿಸುತ್ತವೆ.

ಗೌತಮ ಮಹರ್ಷಿಗೂ ಅದು ಗೊತ್ತಿತ್ತು. ಆದ್ದರಿಂದಲೇ Ahalye, You Rock! ಎಂದು ಹೀಗೇ ಒಮ್ಮೆ ಆಕೆಯನ್ನು ಕೊಂಡಾಡಿದನು. ಮುಂದೇನಾಯ್ತೆಂದು ನಮಗೆ ಗೊತ್ತಿದೆ. ವಿಶ್ವಾಮಿತ್ರರ ಯಜ್ಞರಕ್ಷಣೆಗೆಂದು ಕಾಡಿಗೆ ಬಂದಿದ್ದ ಶ್ರೀರಾಮಚಂದ್ರನು ಆ ಸ್ಥಳಕ್ಕೆ ಬಂದು Ahalye, You Roll! ಎಂದಾಗ, ಶಿಲೆಯಾಗಿದ್ದವಳು ಮತ್ತೆ ಸುಂದರಿಯಾಗಿ ಎದ್ದುಬಂದಳು. ತಪಸ್ಸಿನಿಂದ ಪರಿಶುದ್ಧಳಾದ ಮೇಲೆ ಗೌತಮ ಮಹರ್ಷಿಯೊಡನೆ ಅಹಲ್ಯೆಯ ಪುನರ್ಮಿಲನವಾಯಿತು. ಗೌತಮ ಮತ್ತು ಶ್ರೀರಾಮ ಇಂಗ್ಲಿಷ್‌ನಲ್ಲಿ ಮಾತ ನಾಡುತ್ತಿದ್ದರೇ ಎಂದು ಮಾತ್ರ ನನ್ನನ್ನು ಕೇಳಬೇಡಿ!

ಪದವಿನೋದ ಒತ್ತಟ್ಟಿಗಿರಲಿ, ಅಹಲ್ಯೆಯ ಕಥೆಯಲ್ಲಿ ನಾವು ಗಮನಿಸಬೇಕಾದ್ದು ಶಾಪ ಮತ್ತು ಉಃಶಾಪಗಳ ವಿಚಾರ. ಉಃಶಾಪ ಅಂದರೆ ಶಾಪವಿಮೋಚನೆ. ಬಹುತೇಕವಾಗಿ ಶಾಪ ಕೊಟ್ಟವರೇ ಸೂಚಿಸುವ ಪರಿಹಾರೋಪಾಯ. ವಾಲ್ಮೀಕಿ ರಾಮಾಯಣದಲ್ಲಿ ಅಹಲ್ಯೆಯ ಕಥೆ ಎರಡು ಬಾರಿ ಬರುತ್ತದೆ. ಅವೆರಡರಲ್ಲಿ ಅಲ್ಪಸ್ವಲ್ಪ ಭಿನ್ನತೆಯೂ ಇದೆ. ಬಾಲಕಾಂಡದಲ್ಲಿ ಬರುವ ಕಥೆಯ ಪ್ರಕಾರ, ಗೌತಮನ ವೇಷದಲ್ಲಿ ಆಶ್ರಮಕ್ಕೆ ಬಂದವನು ಇಂದ್ರನೆಂದು ಅಹಲ್ಯೆಗೆ ಮೊದಲೇ ಗೊತ್ತಿತ್ತು. ಅಷ್ಟೇ ಅಲ್ಲದೆ ದೇವತೆಗಳ ರಾಜನಾದ ಇಂದ್ರನು ತನ್ನಲ್ಲಿ ಮೋಹಿತನಾಗಿದ್ದಾನೆ ಎಂಬ ಸಂಗತಿಯು ಅವಳಿಗೆ ಹೆಮ್ಮೆಯ ವಿಷಯವಾಗಿತ್ತು.

ನಿಜವಾಗಿ ಅಹಲ್ಯೆಯಿಂದ ಮಹಾ ಅಪರಾಧ ನಡೆದಿತ್ತು. ಅದಕ್ಕೆ ತಕ್ಕ ಶಾಸ್ತಿ ಆಗಲೇಬೇಕಿತ್ತು. ‘ಸಾವಿರಾರು ವರ್ಷಗಳವರೆಗೆ ಯಾರ ಕಣ್ಣಿಗೂ ಬೀಳದೆ ನೀನು ಕೇವಲ ವಾಯುಭಕ್ಷಣೆ ಮಾಡಿ ಬದುಕಿರು!’ ಎಂಬ ಶಾಪವನ್ನು ಗೌತಮ ಮಹರ್ಷಿಯು ಅಹಲ್ಯೆಗೆ ಕೊಡುತ್ತಾನೆ.
‘ಶ್ರೀರಾಮನ ದರ್ಶನದಿಂದ ಶುದ್ಧಳಾಗಿ ಪೂರ್ವರೂಪವನ್ನು ತಾಳುವೆ’ ಎಂದು ಉಃಶಾಪವನ್ನೂ ಸೂಚಿಸುತ್ತಾನೆ. ಉತ್ತರಕಾಂಡದಲ್ಲಿ ಬರುವ ಕಥೆಯ ಪ್ರಕಾರ, ಗೌತಮನ ವೇಷವನ್ನು ಧರಿಸಿ ಆಶ್ರಮಕ್ಕೆ ಬಂದವನು ಇಂದ್ರನೆಂದು ಅಹಲ್ಯೆಗೆ ಗೊತ್ತಿರುವುದಿಲ್ಲ.

ಸ್ವೇಚ್ಛೆಯಿಂದ ಇಂದ್ರನೊಡನೆ ರತಿಕ್ರೀಡೆಯಲ್ಲಿ ತೊಡಗಿರಲಿಲ್ಲ. ಆದ್ದರಿಂದ ಶಾಪವು ಸೌಮ್ಯವಾಗಬೇಕೆಂದು ಅಹಲ್ಯೆಯು ಪ್ರಾರ್ಥಿಸು ತ್ತಾಳೆ. ಆಗ ಗೌತಮ ಮಹರ್ಷಿ ‘ಮಾನವದೇಹಧಾರಿಯಾದ ಮಹಾವಿಷ್ಣುವು ಬ್ರಾಹ್ಮಣರ ನೆರವಿಗೆಂದು ವನಕ್ಕೆ ಆಗಮಿಸಿದಾಗ ನೀನು ಪವಿತ್ರಳಾಗುವೆ. ನೀನು ಎಸಗಿದ ದುಷ್ಕರ್ಮಗಳನ್ನು ಪರಿಹರಿಸುವ ಸಾಮರ್ಥ್ಯ ಅವನಲ್ಲಿ ಮಾತ್ರ ಇದೆ. ಅವನಿಗೆ ಆತಿಥ್ಯ ಸಲ್ಲಿಸಿ ಉಪಚರಿಸಿದರೆ ನೀನು ನನ್ನ ಬಳಿ ಬಂದು ವಾಸಿಸುವೆ!’ ಎಂದು ಉಃಶಾಪ ನೀಡುತ್ತಾನೆ.

ಸರಿ, ಅಹಲ್ಯೆಗೇನೋ ಶಾಪವಾಯ್ತು, ಇಂದ್ರನನ್ನು ನಿರಪರಾಧಿ ಎಂದು ಬಿಟ್ಟರೇ? ಖಂಡಿತ ಇಲ್ಲ. ಗೌತಮ ಮೊದಲು ಶಾಪ ಕೊಟ್ಟಿದ್ದೇ ಇಂದ್ರನಿಗೆ. ‘ಎಲೈ ದುರ್ಬುದ್ಧಿಯೇ, ನನ್ನ ವೇಷವನ್ನು ಧರಿಸಿ ನೀನು ಈ ನೀಚಕೃತ್ಯವನ್ನು ಮಾಡಿರುವಿ. ಆದ್ದರಿಂದ ನೀನು ವೃಷಣರಹಿತ ನಾಗು!’ ಕೋಪದಿಂದ ಉರಿಯುತ್ತಿದ್ದ ಗೌತಮನ ಶಾಪದಿಂದ ಇಂದ್ರನ ವೃಷಣಗಳೆರಡೂ ಕಳಚಿ ಭೂಮಿಗೆ ಬಿದ್ದವು. ಉಃಶಾಪಕ್ಕಾಗಿ ಗೌತಮನನ್ನೇ ಬೇಡುವ ಧೈರ್ಯ ಇಂದ್ರನಿಗಿರಲಿಲ್ಲ.

ವೃಷಣರಹಿತನಾದ ಇಂದ್ರನು ಆಮೇಲೆ ಸಿದ್ಧ ಗಂಧರ್ವ ಚಾರಣ ಮತ್ತು ಅಗ್ನಿಯ ಮರೆಹೊಕ್ಕು ‘ಗೌತಮರ ತಪೋಹರಣಕ್ಕಾಗಿ ಬೇಕಂತಲೇ ನಾನು ಹಾಗೆ ಮಾಡಿದೆ (ಶಪಿಸಿದವರ ಅಂತಃಶಕ್ತಿ ಕುಗ್ಗುತ್ತದೆಂದು ಪ್ರತೀತಿ). ನನ್ನ ಅವಸ್ಥೆ ಹೀಗಾಯಿತು. ದಯವಿಟ್ಟು ನನ್ನನ್ನು ಪುನಃ ವೃಷಣ ಯುಕ್ತನನ್ನಾಗಿ ಮಾಡಿರಿ’ ಎಂದು ಬಿನ್ನವಿಸಿದನು. ಆಗ ಅಗ್ನಿಯು ಒಂದು ಯಜ್ಞದಲ್ಲಿ ಬಲಿಯಾಗಲಿಕ್ಕಿದ್ದ ಹೋತದ ವೃಷಣಗಳನ್ನು ಇಂದ್ರನಿಗೆ ಕೊಡಿಸುವಂತೆ ಪಿತೃದೇವನನ್ನು ಕೇಳಿಕೊಂಡನು.

ಪಿತೃದೇವನು ಹೋತದ ವೃಷಣಗಳನ್ನು ಕಿತ್ತು ಇಂದ್ರನಿಗೆ ಜೋಡಿಸಿದನು. ಅಂದಿನಿಂದ ಇಂದ್ರನು ಮೇಷವೃಷಣ ಎಂದೆನಿಸಿದನು. ಉತ್ತರಕಾಂಡದಲ್ಲಿ ಬರುವ ವಿವರಗಳು ಕೊಂಚ ಭಿನ್ನ. ‘ಎಲೈ ಇಂದ್ರನೇ, ನೀನು ನನ್ನ ಪತ್ನಿಯನ್ನು ನಿಸ್ಸಂಕೋಚವಾಗಿ ಉಪಯೋಗಿ ಸಿರುವೆ ಯಾದ್ದರಿಂದ ಸಂಗ್ರಾಮದಲ್ಲಿ ನೀನು ಶತ್ರುವಿನ ಸೆರೆಯಾಳಾಗುವೆ. ನೀನು ಮಾಡಿದ ಪಾಪಕರ್ಮವು ಈ ಪ್ರಪಂಚದಲ್ಲಿ ಹರಡು ವುದು. ಈ ಮನುಷ್ಯಲೋಕದಲ್ಲಿ ಜಾರಕರ್ಮದಲ್ಲಿ ತೊಡಗುವವರಿಗೆ ಅರ್ಧಪಾಪವು ತಗಲುವುದು. ಮಿಕ್ಕ ಅರ್ಧ ಪಾಪವು ಜಾರಕರ್ಮ ಪ್ರವರ್ತಕನಾದ ನಿನಗೆ ತಗಲುತ್ತ ಹೋಗುವುದು. ಅಕ್ಷಯಸ್ಥಾನವು ನಿನಗೆ ಎಂದೆಂದಿಗೂ ದೊರೆಯಲಾರದು. ಯಾವನು ದೇವರಾಜ ನಾಗುವನೋ ಅವನ ಸ್ಥಾನವೂ ಸ್ಥಿರವಾಗಿ ಉಳಿಯಲಾರದು!’ ಎಂದು ಇಂದ್ರನಿಗೆ ಗೌತಮನ ಶಾಪ.

ಅಹಲ್ಯೆಯ ಕಥೆಯನ್ನು ಅಲ್ಲಿಗೇ ಬಿಟ್ಟು ಈಗ ಇಡೀ ರಾಮಾಯಣವನ್ನು ಫೋಕಸ್‌ಗೆ ತೆಗೆದುಕೊಳ್ಳೋಣ. ಸೂಕ್ಷ್ಮವಾಗಿ ಗಮನಿಸಿದರೆ ರಾಮಾಯಣದ ತುಂಬೆಲ್ಲ ಶಾಪಗಳು ಉಃಶಾಪಗಳು ಮತ್ತು ವರಗಳದೇ ಜಾಲ! ರಾಮಾಯಣ ಕೃತಿ ರಚನೆಯಾದದ್ದೇ ಪ್ರಣಯದಲ್ಲಿದ್ದ ಕ್ರೌಂಚಪಕ್ಷಿ ಜೋಡಿಯಲ್ಲಿ ಗಂಡನ್ನು ನಿಷಾದನೊಬ್ಬ ಬಾಣ ಬಿಟ್ಟು ಕೊಂದಾಗ ವಾಲ್ಮೀಕಿಯ ಬಾಯಿಂದ ಆ ನಿಷಾದನಿಗೆ ಶಾಪರೂಪವಾಗಿ ಬಂದ ಉದ್ಗಾರದಿಂದ. ‘ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ| ಯತ್ಕ್ರೌಂಚಮಿಥುನಾದೇಕಮವಧಿ ಕಾಮ ಮೋಹಿತಮ್’ ಎಂಬ ಉದ್ಗಾರ.

ಶೋಕವೇ ಶ್ಲೋಕವಾದ ಪರಿ. ‘ನಿಷಾದನೇ, ಕಾಮಮೋಹಿತವಾದ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ
ಶಾಂತಿ ಲಭಿಸಲಾರದು!’ ಎಂದು ಅರ್ಥ. ಶೋಕವನ್ನೇನೋ ವ್ಯಕ್ತ ಪಡಿಸಿಯಾಯ್ತು, ಆಮೇಲೆ ವಾಲ್ಮೀಕಿ ಚಿಂತಾಗ್ರಸ್ತನಾದನು. ತಪಸ್ಸನ್ನು ನಾಶಗೊಳಿಸುವ ಶಾಪವಾಣಿಯು ತನ್ನ ಮುಖದಿಂದ ಹೊರಬಂದಿದ್ದಕ್ಕೆ ನೊಂದುಕೊಂಡನು. ಹಾಗೆ ಅಸ್ವಸ್ಥ ಮನಃ ಸ್ಥಿತಿಯಲ್ಲಿದ್ದಾಗ ವಾಲ್ಮೀಕಿಗೆ ಬ್ರಹ್ಮದೇವನು ಪ್ರತ್ಯಕ್ಷನಾಗಿ ‘ನೀನು ರಚಿಸಿದ ಈ ಶ್ಲೋಕವು ಯಶೋರೂಪವಾಗುವುದು. ನನ್ನ ಆಣತಿಯಂತೆಯೇ ನಿನ್ನಲ್ಲಿ ಸರಸ್ವತಿ ಒಲಿದಿದ್ದಾಳೆ. ಆದ್ದರಿಂದ ಋಷಿವರ್ಯನೇ, ನೀನು ರಾಮನ ಸಂಪೂರ್ಣ ಚರಿತ್ರೆಯನ್ನು ಬಣ್ಣಿಸು!

ಜಗತ್ತಿನಲ್ಲೆಲ್ಲ ಮನೋಹರನು, ವಿಚಾರವಂತನು, ಧರ್ಮಾತ್ಮನು ಮತ್ತು ಭಗವಂತನೆನಿಸುವವನು ಆತನೊಬ್ಬನೇ ಇದ್ದಾನೆ. ನೀನು ನಾರದನಿಂದ ಕೇಳಿಕೊಂಡ ಬುದ್ಧಿಪ್ರೇರಕವಾದ ರಾಮವೃತ್ತಾಂತವನ್ನು ಜಗತ್ತಿಗೆ ಹೇಳು. ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿ-ನದಿಗಳು ಇರುತ್ತವೆಯೋ ಅಲ್ಲಿಯವರೆಗೆ ಲೋಕದಲ್ಲಿ ರಾಮಾಯಣ ಕಥೆಯು ಪ್ರಚಾರದಲ್ಲಿ ಉಳಿಯುವುದು. ಇದಲ್ಲದೇ ನೀನು ರಚಿಸಿದ ರಾಮಕಥೆಯು ಜನಮಾನಸದಲ್ಲಿರುವವರೆಗೆ, ನಿಷಾದನಿಗೆ ಶಾಪವನ್ನು ಕೊಡುವಾಗ ನೀನು ಕ್ರೋಧವನ್ನು ತಳೆದಿದ್ದರಿಂದ ನಿನ್ನ ಸ್ಥಾನ ಒಂದೊಮ್ಮೆ ಕೆಳಮಟ್ಟ ತಲುಪಿದ್ದರೂ, ನೀನು ಸರ್ವೋಚ್ಚಸ್ಥಾನವಾದ ನನ್ನ ಲೋಕದಲ್ಲಿ ವಾಸಿಸುವೆ’ ಎಂದು ವರವನ್ನಿತ್ತನು. ಅಂದರೆ, ವಾಲ್ಮೀಕಿ ನಿಷಾದನಿಗೆ ಕೊಟ್ಟದ್ದು ಶಾಪ; ಬ್ರಹ್ಮನಿಂದ ಪಡೆದದ್ದು ವರ; ಅದೇ ರಾಮಾಯಣದ ‘ಬೀಜ’.

ರಾಮಾಯಣದ ಸಮಾಪ್ತಿಯೂ ಶಾಪದ ಸಂದರ್ಭದಿಂದಲೇ ಆಗಿದೆ. ರಾಮಾವತಾರದ ಕಾರ್ಯವು ಮುಗಿಯಲಿದೆ ಎಂಬ ಸಂದೇಶವನ್ನು ತಲುಪಿಸಲೆಂದು ಕಾಲಪುರುಷನು ಬ್ರಹ್ಮನ ಹೇಳಿಕೆಯಂತೆ ರಾಮನ ಬಳಿ ಬಂದಿದ್ದನು. ಏಕಾಂತದಲ್ಲಿ ಅವರಿಬ್ಬರೂ ಮಾತನಾಡುತ್ತಿದ್ದರು. ಅಲ್ಲಿ ಇನ್ನ್ಯಾರಿಗೂ ಪ್ರವೇಶಕ್ಕೆ ಅವಕಾಶ ಇರಬಾರದೆಂದು ಲಕ್ಷ್ಮಣನಿಗೆ ವಿಽಸಲಾಗಿತ್ತು. ಈ ಆಜ್ಞೆಯನ್ನು ಉಲ್ಲಂಘಿಸಿದರೆ ದೇಹಾಂತ ಶಿಕ್ಷೆ ಎಂದೂ ನಿಶ್ಚಿತವಾಗಿತ್ತು. ಇದೇ ಸಮಯದಲ್ಲಿ ದುರ್ವಾಸ ಋಷಿಯು ಅಲ್ಲಿಗೆ ಬಂದನು. ತತ್ ಕ್ಷಣವೇ ರಾಮನ ಭೇಟಿ ಮಾಡಿಸಬೇಕೆಂದು ಲಕ್ಷ್ಮಣನಿಗೆ ತಿಳಿಸಿದನು. ಲಕ್ಷ್ಮಣನು ಆಗ ಇದ್ದ ಪರಿಸ್ಥಿತಿಯನ್ನು ದುರ್ವಾಸನಿಗೆ ತಿಳಿಹೇಳಲು ಯತ್ನಿಸಿದನು.

ಕುಪಿತ ದುರ್ವಾಸನು ಲಕ್ಷ್ಮಣನಿಗೆ ‘ದುರ್ವಾಸನು ಆಗಮಿಸಿದ್ದಾನೆ ಎಂಬುದನ್ನು ನೀನು ಈ ಕ್ಷಣಕ್ಕೆ ರಾಮನಿಗೆ ತಿಳಿಸು. ಇಲ್ಲದಿದ್ದರೆ ನಾನು ಈ ದೇಶವನ್ನು, ಅಯೋಧ್ಯೆಯನ್ನು, ನಿನ್ನನ್ನು ಮತ್ತು ರಾಮನನ್ನು ಶಪಿಸುವೆ! ಭರತನಿಗೂ ನಿಮ್ಮೆಲ್ಲ ಪೀಳಿಗೆಗೂ ಶಾಪ ಕೊಡುವೆ!’ ಎಂದನು. ಲಕ್ಷ್ಮಣನಿಗೆ ಮಹಾಸಂದಿಗ್ಧ ಉಂಟಾಯಿತು. ದುರ್ವಾಸನ ಭೇಟಿ ಯನ್ನು ಆ ಕ್ಷಣಕ್ಕೆ ರಾಮನೊಡನೆ ಮಾಡಿಸುವುದೆಂದರೆ ರಾಮನ ಆಜ್ಞೆಯ ಉಲ್ಲಂಘನೆ. ಅದರ ಶಿಕ್ಷೆಯೆಂದರೆ ಸಾವು. ಭೇಟಿಯಾಗದಂತೆ ಮಾಡಿದರೆ ಇಡೀ ರಘುಕುಲಕ್ಕೆ ಘೋರ ಶಾಪ! ಇಕ್ಕಟ್ಟಿನಲ್ಲಿ ಸಿಲುಕಿದ ಲಕ್ಷ್ಮಣನು ಆತ್ಮಾರ್ಪಣೆ ಮಾಡಿಯಾದರೂ ರಘುಕುಲವನ್ನು ಕಾಪಾಡುವುದೇ ಲೇಸೆಂದು ಭಾವಿಸಿ ದುರ್ವಾಸ ಋಷಿಯ ಆಗಮನವನ್ನು ರಾಮನಿಗೆ ತಿಳಿಸಿದನು. ಅವರ ಭೇಟಿಯಾಯಿತು.

ಆಜ್ಞೆಯನ್ನು ಮೀರಿದುದಕ್ಕಾಗಿ ಲಕ್ಷ್ಮಣನು ತಾನಾಗಿ ಸರಯೂ ನದಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡನು. ಲಕ್ಷ್ಮಣನ ವಿಯೋಗದಿಂದ ರಾಮನಿಗೆ ದುಃಖವಾಗಿ ಆತನೂ ಲಕ್ಷ್ಮಣನನ್ನು ಹಿಂಬಾಲಿಸಿದನು, ಅಂತರ್ಧಾನನಾದನು. ರಾಮಾವತಾರಕ್ಕೆ ಕಾರಣವೂ ಒಂದು ಶಾಪವೇ. ದೇವ- ದೈತ್ಯರಲ್ಲಿ ಯುದ್ಧ ನಡೆದಾಗ ದೇವತೆಗಳು ದೈತ್ಯರನ್ನು ಹಿಯಾಳಿಸತೊಡಗಿದರು. ದೈತ್ಯರು ಭೃಗುಪತ್ನಿಯ ಆಶ್ರಯ ಪಡೆದರು. ಅದನ್ನು ಕಂಡು ವಿಷ್ಣುವಿಗೆ ರೇಗಿತು. ಆತನು ತನ್ನ ಚಕ್ರದಿಂದ ಭೃಗುಪತ್ನಿಯ ಶಿರವನ್ನು ಹಾರಿಸಿದನು.

ಪತ್ನಿಯ ವಧೆಯಾಗಿದ್ದನ್ನು ಕಂಡು ಭೃಗುವು ಅತ್ಯಂತ ಕ್ರೋಧಾವಿಷ್ಟನಾದನು. ವಿಷ್ಣುವಿಗೆ ಶಾಪವಿತ್ತನು: ‘ಅವಧ್ಯಳಾದ ನನ್ನ ಪತ್ನಿ
ಯನ್ನು ನೀನು ಕೋಪಾವೇಶದಲ್ಲಿ ವಧಿಸಿರುವೆ. ಅದಕ್ಕಾಗಿ ನೀನು ಮನುಷ್ಯಲೋಕದಲ್ಲಿ ಜನ್ಮತಾಳುವೆ. ಅಲ್ಲಿ ಅನೇಕ ವರ್ಷಗಳ ಕಾಲ
ಪತ್ನಿಯ ವಿಯೋಗದ ದುಃಖವು ಪ್ರಾಪ್ತವಾಗುವುದು.’ ಶಾಪವನ್ನೇನೋ ಕೊಟ್ಟನು ಆದರೆ ಆಮೇಲೆ ಭೃಗುವೂ ತುಂಬ ನೊಂದು ಕೊಂಡನು. ವಿಷ್ಣುವನ್ನು ಪೂಜಿಸಿ ಸಂತೋಷಿಸಿದನು. ಭಕ್ತವತ್ಸಲನಾದ ವಿಷ್ಣುವು ‘ಲೋಕಕಲ್ಯಾಣಕ್ಕಾಗಿ ಈ ಶಾಪವನ್ನು ಅಂಗೀ ಕರಿಸಲೇಬೇಕು’ ಎಂದನು; ಹಾಗೆಯೇ ನಡೆದುಕೊಂಡನು.

ರಾಮನಿಗೆ ವನವಾಸ ಆದದ್ದರ ಹಿನ್ನೆಲೆಯನ್ನು ಗಮನಿಸಿದರೆ- ದಶರಥನು ಹಿಂದೊಮ್ಮೆ ತಿಮಿಧ್ವಜನೆಂಬ ದೈತ್ಯನೊಡನೆ ಯುದ್ಧ ಮಾಡಿದಾಗ ರಾಣಿ ಕೈಕೇಯಿಯು ಚಾಕಚಕ್ಯತೆಯಿಂದ ದಶರಥನನ್ನು ರಕ್ಷಿಸಿದ್ದು, ಪ್ರೀತನಾದ ದಶರಥನು ಆಕೆಗೆ ಎರಡು ವರಗಳನ್ನು ಕೊಟ್ಟಿದ್ದು, ಮಂಥರೆಯಿಂದ ಪ್ರೇರಿತಳಾದ ಕೈಕೇಯಿಯು ಹೀನಾಯ ರೀತಿಯಲ್ಲಿ ಆ ವರಗಳನ್ನು ದಶರಥನಲ್ಲಿ ಕೇಳಿದ್ದು- ಇವೆಲ್ಲ
ಗೋಚರಿಸುತ್ತವಾದರೂ, ಶ್ರವಣಕುಮಾರನ ಅಂಧ ಮಾತಾಪಿತರ ಶಾಪ ದಶರಥನಿಗಿತ್ತಲ್ಲವೇ? ‘ನನಗೀಗ ಯಾವ ರೀತಿ ಪುತ್ರ ಮರಣ ದಿಂದ ದುಃಖವಾಗಿದೆಯೋ ಅದೇ ರೀತಿ ಪುತ್ರಶೋಕದಿಂದ ನಿನಗೆ ಮರಣವುಂಟಾಗುವುದು!’ ಎಂದು ಶ್ರವಣನ ತಂದೆಯು ದಶರಥನನ್ನು ಶಪಿಸಿದ್ದನು.

ದಶರಥನು ಅಜ್ಞಾನದಿಂದ ಶ್ರವಣನ ವಧೆ ಮಾಡಿದ್ದನಾದ್ದರಿಂದ ಶಾಪ ತುಸು ಸೌಮ್ಯವಾಗಿಯೇ ಇತ್ತು. ಇಲ್ಲವಾದರೆ ಬ್ರಹ್ಮಹತ್ಯಾ ದೋಷದ ಫಲವಾಗಿ ಮಹಾ ಶಾಪ ದಶರಥನನ್ನು ತಟ್ಟುತ್ತಿತ್ತು. ಮೇಲೆ ಉಲ್ಲೇಖಿಸಿದಂಥವು ವಾಲ್ಮೀಕಿ ರಾಮಾಯಣದ ಕೆಲವು ಪ್ರಸಿದ್ಧ ಜನಜನಿತ ಶಾಪಗಳಷ್ಟೇ. ಇನ್ನೂ ಚಿಕ್ಕಪುಟ್ಟ ಶಾಪಗಳು ತುಂಬ ಇವೆ. ಏಕೆಂದರೆ ಹಲವು ಕಾರಣಗಳಿಗಾಗಿ ಶಾಪ ಕೊಟ್ಟದ್ದಿರುತ್ತದೆ. ವಧೆ, ನಾಶ, ಆಕ್ರಮಣ, ದುರ್ವರ್ತನೆ, ಉದ್ಧಟತನ, ಭಯೋತ್ಪಾದನೆ, ಸಲ್ಲದ ಬೇಡಿಕೆ, ಪರಸ್ತ್ರೀಯ ಅಭಿಲಾಷೆ, ಬಲಾತ್ಕಾರ, ರತಿಕ್ರೀಡೆಯಲ್ಲಿ ಅಡ್ಡಿ, ತಂದೆತಾಯಿ-ಗುರುಹಿರಿಯರ ಅವಹೇಳನ, ಕ್ರೋಧ, ಛಲ, ಅನಿಷ್ಟ ಭೋಜನ, ಅಯೋಗ್ಯ ಸಮಯ ಇತ್ಯಾದಿ.

ಎಲ್ಲದಕ್ಕೂ ಮೂಲಕಾರಣ ಕೋಪ. ಅಗಸ್ತ್ಯಋಷಿಯ ಮೈಮೇಲೆ ಏರಿಹೋಗಿ ಅವನನ್ನು ನುಂಗಲು ಬಂದ ತಾಟಕಾ ರಾಕ್ಷಸಿ ಅಗಸ್ತ್ಯನ ಶಾಪಕ್ಕೆ ಗುರಿಯಾದಳು. ದುಂದುಭಿ ಎಂಬ ರಾಕ್ಷಸನನ್ನು ಕೊಂದು ಆತನ ದೇಹವನ್ನು ಅಪ್ಪಳಿಸಿ ದೂರಕ್ಕೆ ಎಸೆದಾಗ ರಕ್ತದ ಹನಿಗಳು ಮತಂಗ ಋಷಿಯ ಆಶ್ರಮದಲ್ಲಿ ಬಿದ್ದವು, ಋಷಿ ಅತಿಕೋಪದಿಂದ ವಾಲಿಯನ್ನು ಶಪಿಸಿದನು. ಓರೆಗಣ್ಣಿಂದ ಪಾರ್ವತಿಯತ್ತ ನೋಡಿದ್ದಕ್ಕೆ ಕುಬೇರನು ಪಿಂಗಲಾಕ್ಷ(ಗಾಜುಗಣ್ಣಿನವ) ಆದನು.

ಸೀತೆಯ ವಕ್ಷಸ್ಥಳವನ್ನು ಮತ್ತೆಮತ್ತೆ ಕುಕ್ಕಿದ ಕಾಗೆಗೆ ರಾಮ ಬಿಟ್ಟ ದರ್ಭೆಯ ಬ್ರಹ್ಮಾಸ್ತ್ರವು ಒಂದು ಕಣ್ಣನ್ನೇ ಶಾಶ್ವತವಾಗಿ ಕಳೆದುಕೊಳ್ಳು ವಂತಾಯಿತು(ಕಾಗೆಯ ರೂಪದಲ್ಲಿ ಬಂದವನು ಇಂದ್ರನ ಮಗ). ಮಿತಿಮೀರಿದ ವರ್ತನೆಗಾಗಿ ವಿಶ್ವಾವಸು ಎಂಬ ಗಂಧರ್ವನು ಸ್ಥೂಲಶಿರಾ ಋಷಿಯ ಶಾಪದಿಂದಾಗಿ ಕಬಂಧ ರಾಕ್ಷಸನಾಗಿ ಹುಟ್ಟಿದನು. ಶಂಕರನ ಬಗ್ಗೆ ಅವಮರ್ಯಾದೆಯ ಮಾತುಗಳನ್ನಾಡಿದ್ದರಿಂದ ನಂದೀಶ್ವರನು ರಾವಣನಿಗೆ ಶಾಪವಿತ್ತನು.

ದಂಡರಾಜನ ಸಂಪರ್ಕದಿಂದಾಗಿ ದಂಡಕಾರಣ್ಯವೇ ಶಾಪಕ್ಕೊಳಗಾಯಿತು. ಶಾಪಗಳ ಪರಿಣಾಮಗಳೂ ಒಂದೊಂದೂ ವಿಚಿತ್ರ ರೀತಿ ಯವು. ಹಾಗಂತ ಬರೀ ಶಾಪಗಳಿಂದಷ್ಟೇ ಅಲ್ಲ ರಾಮಾಯಣ ಕಥೆ ಹೆಣೆದುಕೊಂಡಿರುವುದು. ಶಾಪಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವರಗಳೂ ಇವೆ. ಕೆಲವು ಕೇಳಿ ಪಡೆದುಕೊಂಡದ್ದು. ಇನ್ನು ಕೆಲವು ವರ ಕೊಡುವವರು ಸಂಪ್ರೀತರಾಗಿ ತಾವಾಗಿಯೇ ಅನುಗ್ರಹಿಸಿದ್ದು. ದಶರಥನು ಕೇಯಿಗೆ ಕೊಟ್ಟ ವರಗಳೇ ಬಹುಶಃ ನಮಗೆಲ್ಲ ಮೊದಲಿಗೆ ನೆನಪಾಗುವವು.

ಕಾರಣ ಅವುಗಳ ದುರ್ಬಳಕೆ. ದಶರಥನಂತಹ ಹುಲುಮಾನವರಷ್ಟೇ ಅಲ್ಲ, ಬ್ರಹ್ಮ ಮತ್ತು ಈಶ್ವರನೂ ಎಷ್ಟೋ ಸಂದರ್ಭಗಳಲ್ಲಿ ಅಪಾತ್ರರಿಗೆ ವರದಾನ ಮಾಡಿ ಅನಾಹುತಗಳಿಗೆ ಕಾರಣವಾಗಿ ಆಮೇಲೆ ಮಹಾವಿಷ್ಣು ಅದರ ‘ರಿಪೇರಿ’ಗಾಗಿ ಬರಬೇಕಾದ ಸಂದರ್ಭಗಳು ಪುರಾಣಗಳಲ್ಲಿ ಅನೇಕವಿವೆ. ವಾಲ್ಮೀಕಿ ರಾಮಾಯಣವೂ ಇದಕ್ಕೆ ಹೊರತೇನಲ್ಲ. ರಾವಣಪುತ್ರ ಮೇಘನಾದ(ಇಂದ್ರಜಿತು)ಗೆ ದಿವ್ಯರಥ, ಅಕ್ಷಯ ಬತ್ತಳಿಕೆ ಮತ್ತು ಧನುಸ್ಸುಗಳು ಮಹೇಶ್ವರನಿಂದ ವರವಾಗಿ ಸಿಕ್ಕಿದರೆ ಬ್ರಹ್ಮನಿಂದ ಬ್ರಹ್ಮಾಸ್ತ್ರವೇ ಸಿಕ್ಕಿತು. ಆದರೆ ಇಲ್ಲಿ ಬಹುತೇಕ ವರಗಳು ಮುಂದೆ ರಾಮನು ಕೈಗೊಳ್ಳಬೇಕಿದ್ದ ಕಾರ್ಯದಲ್ಲಿ ಉಪಯುಕ್ತವಾಗಲೆಂಬ ಉದ್ದೇಶದಿಂದ ಬೇರೆಬೇರೆಯವರಿಗೆ ಅನುಗ್ರಹವಾದಂಥವು.

ಹನುಮಂತನಿಗಂತೂ ವರಗಳ ಸರಮಾಲೆಯೇ ದೊರಕಿತ್ತು. ಸಾಗರೋಲ್ಲಂಘನದ ವೇಳೆ ಹನುಮಂತನಿಗೆ ಸಹಾಯವಾಗಲಿ ಎಂದು ಮೈನಾಕ ಪರ್ವತಕ್ಕೂ ವರ ಸಿಕ್ಕಿತ್ತು. ಒಟ್ಟಿನಲ್ಲಿ ವಾಲ್ಮೀಕಿ ವಿರಚಿತ ರಾಮಾಯಣವು ಶಾಪ-ವರಗಳ ಹಂದರವೇ ಆಗಿದೆ ಅಂತನಿಸುವುದು ಸಹಜ. ಅದನ್ನೇ ಒಂದು ಅಧ್ಯಯನ ವಸ್ತುವಾಗಿಟ್ಟುಕೊಂಡು ಮರಾಠಿಯಲ್ಲಿ ಒಂದು ಉತ್ಕೃಷ್ಟ ಗ್ರಂಥವನ್ನು ರಚಿಸಿದವರು ಶ್ರೀಪಾದ ರಘುನಾಥ ಭಿಡೆ. ಇವರು ಮರಾಠಿ ಮನೆಮಾತಿನವರಾದರೂ ನಮ್ಮ ಕರ್ನಾಟಕದ ವಿಜಯಪುರದವರು. 1990ರ ಆಸುಪಾಸಿನಲ್ಲಿ ರಚಿತವಾದ ಈ ಕೃತಿಯನ್ನು ‘ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ’ ಶೀರ್ಷಿಕೆಯೊಡನೆ ಕನ್ನಡಕ್ಕೆ ಅನುವಾದಿಸಿದವರು ಸರಸ್ವತಿ ಗಜಾನನ ರಿಸಬೂಡ(ಇರಾವತಿ ಕರ್ವೆಯವರ ‘ಯುಗಾಂತ’ವನ್ನು ಕನ್ನಡಕ್ಕೆ ಅನುವಾದಿಸಿದವರೇ). ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರದಿಂದ ಪ್ರೇರಣೆ ಪ್ರೋತ್ಸಾಹ ಪಡೆದು ರಚಿತವಾದದ್ದು ಈ ಉತ್ಕೃಷ್ಟ ಕೃತಿ. ಮೊದಲಿಗೆ ಮೈಸೂರಿನ ಗೀತಾ ಬುಕ್‌ಹೌಸ್ ನಿಂದ ಪ್ರಕಾಶಿತವಾಗಿ, ಆಮೇಲೆ 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಮರುಪ್ರಕಟಣೆ.

ಸುಮಾರು ೬೦೦ ಪುಟಗಳಷ್ಟು ಭರಪೂರ ಸಾಮಗ್ರಿಯ ಪುಸ್ತಕಕ್ಕೆ ೧೨೦ ರೂಪಾಯಿಗಳ ಕೈಗೆಟಕುವ ಬೆಲೆ. ವಾಲ್ಮೀಕಿ ರಾಮಾಯಣದಲ್ಲಿ ಬರುವ ೬೧ ಶಾಪಗಳು ಮತ್ತು ೮೨ ವರಗಳ ಬಗ್ಗೆ ಇದರಲ್ಲಿ ವಿವರಣೆಯಿದೆ. ಪ್ರತಿಯೊಂದು ಶಾಪ/ವರದ ಪೂರ್ವಸಂಬಂಧವನ್ನು, ಮೂಲ
ಸಂಸ್ಕೃತ ಶ್ಲೋಕಗಳ ಜೊತೆಗೆ ಕನ್ನಡ ಅನುವಾದದೊಡನೆ ವಿವರಿಸಲಾಗಿದೆ. ಶಪಥ, ಸತ್ಯಕ್ರಿಯೆ, ಆಶೀರ್ವಾದ, ಹರಕೆ, ಅಶರೀರವಾಣಿ, ಪುಷ್ಪವೃಷ್ಟಿಗಳ ವಿಮರ್ಶೆಯನ್ನು ಶಾಪ/ವರಗಳ ಸಾಧರ್ಮ್ಯ ಅಥವಾ ಭೇದಗಳನ್ನು ಸ್ಪಷ್ಟೀಕರಿಸಲು ಅಲ್ಲಲ್ಲಿ ಆಯ್ದುಕೊಳ್ಳಲಾಗಿದೆ.

‘ಶಾಪಾದಪಿ ವರಾದಪಿ!’ ಎಂಬ ದೀರ್ಘಪ್ರಸ್ತಾವನೆಯೊಂದೇ ಸಾಕು ಇದರ ಹಿಂದಿರುವ ಅಧ್ಯಯನ ಮತ್ತು ಪರಿಶ್ರಮವನ್ನು ಅರ್ಥ ಮಾಡಿಕೊಳ್ಳಲಿಕ್ಕೆ. ಅಂತರಜಾಲದಲ್ಲಿ ಕನ್ನಡ ಪುಸ್ತಕಗಳ ಸಂಚಯದಲ್ಲಿ ನನಗಿದರ ಪಿಡಿಎಫ್ ಸಿಕ್ಕಿದೆ. ಪೂರ್ಣವಾಗಿ ಓದಿ
ಮುಗಿಸಿದೆನೆಂದಲ್ಲ, ಆದರೆ ಈ ಪುಸ್ತಕದ ಬಗ್ಗೆ ಮೂರು ‘ಮಮಕಾರ’ ಕಾರಣಗಳು ನನಗಿವೆ.

ಶ್ರೀಪಾದ ರಘುನಾಥ ಭಿಡೆ ಮತ್ತು ಸರಸ್ವತಿ ಗಜಾನನ ರಿಸಬೂಡ ಇಬ್ಬರೂ ನಮ್ಮ ಚಿತ್ಪಾವನ ಸಮುದಾಯದವರು; ಮೈಸೂರಿನ ಗೀತಾ ಬುಕ್ ಹೌಸ್ ನನ್ನಂಥ ಅಪಕ್ವ ಬರಹಗಾರನ ಮೊದಲ ಪುಸ್ತಕ ವಿಚಿತ್ರಾನ್ನವನ್ನು ಪ್ರಕಾಶಿಸಿ ಪ್ರೋತ್ಸಾಹಿಸಿದ ಸಂಸ್ಥೆ; ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರರಿಂದ ಪ್ರೀತಿಯ ಆಹ್ವಾನ ಪಡೆದು ನಾನೂ ಭಾಗವಹಿಸಿದವನು. ಇಂದು, ರಾಮನವಮಿಯ ಸಂದರ್ಭ ಅಂಕಣಬರಹದಲ್ಲಿ ಈ ಕೃತಿಯನ್ನು ನಿಮಗೆ ಪರಿಚಯಿಸಿದ್ದೇನೆ. ಸಾಧ್ಯವಾದರೆ ಕೊಂಡು ಓದಿ. ಶಾಪಾದಪಿ ವರಾದಪಿ ರಮ್ಯ ಕಾವ್ಯ ರಾಮಾಯಣದ ಅದ್ಭುತಲೋಕ ನಿಮಗೆ ಮುದ ನೀಡುತ್ತದೆ. ಜೈಶ್ರೀರಾಮ್!