Saturday, 14th December 2024

Ramayana: ನಾರಾಯಣ ಯಾಜಿ ಅಂಕಣ: ಕಿಷ್ಕಿಂಧಾ ಕಾಂಡ- ವಾಲಿವಧೆಗೆ ಮುಹೂರ್ತ

ramayana 3

ಅವನಿ ಅಂಬರ ಅಂಕಣ: ಶತ್ರು ನಿಗ್ರಹಕ್ಕೆ ನಿಶಾಕಾಲ ಪ್ರಶಸ್ತವೆನ್ನುವ ಕೂಟನೀತಿ

narayana yaji
  • ನಾರಾಯಣ ಯಾಜಿ

Ramayana: ಶೋಭಸೇಹ್ಯಧಿಕಂ ವೀರ! ಲತಯಾ ಕಣ್ಠಸಕ್ತಯಾ
ವಿಪರೀತ ಇವಾಕಾಶೇ ಸೂರ್ಯೋ ನಕ್ಷತ್ರಮಾಲಯಾ ৷৷ ಕಿ.14.9৷৷

ವೀರನೇ! ನಕ್ಷತ್ರಮಾಲೆಯಿಂದ ಪರಿವೃತನಾಗಿ ಆಕಾಶದಲ್ಲಿ ಕಾಣುವ ರಾಕಾಚಂದ್ರನಂತೆ (ಉತ್ಪಾತ ಸೂರ್ಯನಂತೆ) ಈ ಲತೆಯಿಂದ ಶೋಭಿಸುವ ನಿನ್ನ ಸ್ವರೂಪವೇ ವಾಲಿಗೆ ಸಾವಿನ ಸೂಚಕವಾದ ಮಹಾ ವಿಪ್ಪತ್ತನ್ನು ಸೂಚಿಸುವುದು (ಭಾವಾರ್ಥ).

ವಾಲಿಯನ್ನು ವಧಿಸಲು ಸುಗ್ರೀವನೊಡಗೂಡಿ (Sugreeva) ರಾಮ ಲಕ್ಷ್ಮಣ ಸಹಿತ ಇತರ ವಾನರರೆಲ್ಲರೂ ಎರಡನೆಯ ಬಾರಿಗೆ ಕಿಷ್ಕಿಂಧೆಗೆ ಬರುವ ಸಮಯದ ಕುರಿತು ಅನೇಕ ಜಿಜ್ಞಾಸೆಗಳಿಗೆ ಕಾರಣವಾಗುವ ಶ್ಲೋಕ ಇದಾಗಿರುವುದರಿಂದ ಭಾವಾರ್ಥವೆಂದಿರುವೆ. ರಾಮನ ಬಾಣಕ್ಕೆ ವಾಲಿ ಸಾಯುವ ಪ್ರಕರಣದ ಭಾಗವನ್ನು ವಿಶ್ಲೇಷಿಸುವುದಕ್ಕಿಂತ ಮೊದಲು ಆತನ ಮೇಲೆ ಆಕ್ರಮಣಕ್ಕೆ ರಾಮ ಬಹು ಎಚ್ಚರಿಕೆಯಿಂದ ಕಾರ್ಯೋನ್ಮುಖನಾಗುತ್ತಾನೆ. ವಾಲಿಯನ್ನು ವಧಿಸಲು ಆತ ಸಂಕಲ್ಪ ಮಾಡಿಯೇ ತೀರಿದ್ದ. ಇದಕ್ಕೆ ಸುಗ್ರೀವನ ಆಗ್ರಹ ಕೇವಲ ಒಂದು ಕಾರಣ ಮಾತ್ರ. ಬಹು ಮುಖ್ಯ ಕಾರಣ ಬೇರೆಯೇ ಇದೆ. ಅದರ ವಿವೇಚನೆಯನ್ನು ವಾಲಿ ವಧೆಯ ವಿಷಯದಲ್ಲಿ ಗಮನಿಸೋಣ. ಸುಗ್ರೀವ ಮೊದಲ ಸಲ ಅಂತೂ ಜೀವ ಉಳಿಸಿಕೊಳ್ಳಲು ಋಷ್ಯಮೂಕಕ್ಕೆ ಓಡಿಬಂದು ತಪ್ಪಿಸಿಕೊಂಡಿರುವುದು, ರಾಮನನ್ನು ನಿಂದಿಸಿದ್ದು ಎಲ್ಲಾ ಘಟನೆಗಳನ್ನು ನೋಡಿದೆವು. ಗಜಪುಷ್ಪ ಮಾಲೆಯಿಂದ ವಾಲಿ ಮತ್ತು ಸುಗ್ರೀವ ಈ ಇಬ್ಬರಲ್ಲಿನ ಬೇಧವನ್ನು ಮುಂದೆ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಆಯಿತು. ಸುಗ್ರೀವನ ಸಂಶಯ ಇಲ್ಲಿಗೆ ಮುಗಿಯಲಿಲ್ಲ. ರಾಮನಲ್ಲಿ ವಾಲಿಯನ್ನು ಕೊಲ್ಲಲು ಬೇಕಾದ ಶಕ್ತಿಯ ಜೊತೆಗೆ ಆಧ್ಯಾತ್ಮಿಕ ತೇಜಸ್ಸು ಇದೆಯೋ ಎನ್ನುವದನ್ನು ನೋಡಲು ಸಪ್ತಜನ ಆಶ್ರಮದ ಹಾದಿಯಿಂದ ಕರೆದುಕೊಂಡು ಬಂದ (ಹಿಂದಿನ ಸಂಚಿಕೆಯಲ್ಲಿ ಆ ಭಾಗದ ವಿವರವಿದೆ). ಇಲ್ಲಿ ಎರಡನೆಯ ಸಲ ಯುದ್ಧಕ್ಕೆ ಬಂದಿರುವ ಸಮಯ ಹಗಲೋ ರಾತ್ರಿಯೋ ಎನ್ನುವುದರ ಕುರಿತು ವಿದ್ವಾಂಸರಲ್ಲಿ ಅನೇಕ ಚರ್ಚೆಗಳಾಗಿವೆ. ಕೆಲವೊಬ್ಬರು ಹಗಲಿನ ಸಮಯ ಎನ್ನುತ್ತಾರೆ, ಇನ್ನು ಕೆಲವು ಪಂಡಿತರು ರಾತ್ರಿಯೇ ಆಗಿತ್ತು ಎನ್ನುತ್ತಾರೆ. ಅದಕ್ಕೆ ಕಾರಣ “ವಿಪರೀತ ಇವಾಕಾಶೇ ಸೂರ್ಯೋ ನಕ್ಷತ್ರಮಾಲಯಾ” ಸೂರ್ಯ ನಕ್ಷತ್ರ ಮಾಲೆಗಳಿಂದ ಪರಿವೃತ್ತನಾಗುವಂತೆ ಎನ್ನುವ ಅರ್ಥ ಜಿಜ್ಞಾಸೆಗೆ ಮೂಲ ಹೇತುವಾಗಿದೆ.

ಇಲ್ಲಿ ವಾಲ್ಮೀಕಿ ಹೇಳಿದ “ಸೂರ್ಯನು ನಕ್ಷತ್ರಮಾಲೆಯಿಂದ ಪರಿವೃತನಾದಂತೆ” ಎನ್ನುವುದರ ಅರ್ಥವನ್ನು ವಿವೇಚಿಸಿ ನೋಡುವುದಾದರೆ ಹಗಲಿನಲ್ಲಿ ಯಾವ ಕಾರಣಕ್ಕೂ ನಕ್ಷತ್ರಗಳು ಉದಯಿಸುವುದಿಲ್ಲ, ರಾತ್ರಿಕಾಲದಲ್ಲಿ ಸೂರ್ಯ ಇರುವುದಿಲ್ಲ, ಹಾಗಾಗಿ ಈ ಶ್ಲೋಕದಲ್ಲಿ ವಾಲ್ಮೀಕಿ ಏನೋ ಗೂಢವನ್ನು ಹೇಳಿದ್ದಾನೆ ಎನ್ನುತ್ತಾರೆ. ಸೂರ್ಯ ನಕ್ಷತ್ರ ಮಾಲೆಯಿಂದ ಶೋಭಿಸುವುದು ಅಸಂಭವ. ಈ ಶ್ಲೋಕ ’ಅಭೂತೋಪಮೆ’ ಯೆಂದು ಪ್ರತಿಪಾದಿಸುತ್ತಾರೆ. ಇದೊಂದು ಅನಿಷ್ಟ ಸೂಚಕವಾದ ಶಕುನದ ಸೂಚನೆ. ಜೌತಿಷ್ಯ ಶಾಸ್ತ್ರದ ಪ್ರಕಾರ ಹಗಲಿನಲ್ಲಿ ನಕ್ಷತ್ರ ಕಾಣಿಸುವುದು ಮತ್ತು ರಾತ್ರಿಯಲ್ಲಿ ಕಾಮನ ಬಿಲ್ಲು ಆ ರಾಷ್ಟದ ರಾಜನಿಗೆ ವಿನಾಶವೆಂದು ಗರ್ಗರು ಹೇಳಿದ್ದಾರೆ. ಪ್ರಳಯಕಾಲ ಬರುವ ಮುನ್ನ ಹಗಲಿನಲ್ಲಿ ನಕ್ಷತ್ರಗಳೂ, ರಾತ್ರಿಯಲ್ಲಿ ಇಂದ್ರ ಧನಸ್ಸೂ ಕಾಣುತ್ತದೆ ಎನ್ನುವ ವಿವರಣೆ ಪುರಾಣಗಳಲ್ಲಿದೆ ಈ ಕಾರಣದಿಂದ ’ವಿಪರೀತ’ ಎನ್ನುವ ಶಭ್ದಗಳನ್ನು ಅಭೂತೋಪಮೆ ಎಂದು ವಿವರಿಸುತ್ತಾರೆ. ಹಗಲಿನಲ್ಲಿ ನಕ್ಷತ್ರ ಕಾಣಿಸುವುದೆಂದರೆ ಖಗ್ರಾಸ ಸೂರ್ಯ ಗ್ರಹಣ ಎನ್ನುವ ಅರ್ಥವಿದೆ. ಮಹಾಭಾರತ ಯುದ್ಧದಲ್ಲಿಯೂ ಅರ್ಜುನ ತನ್ನ ಮಗ ಅಭಿಮನ್ಯುವಿನ ಸಾವಿಗೆ ಕಾರಣನಾದ ಜಯದ್ರಥನನ್ನು 14ನೆಯ ದಿನದ ಯುದ್ಧದಲ್ಲಿ ಕೊಲ್ಲುವ ಮುನ್ನ ಹಗಲಿನಲ್ಲಿ ಖಗ್ರಾಸ ಸೂರ್ಯ ಗ್ರಹಣವಾಗಿ ನಕ್ಷತ್ರಗಳೆಲ್ಲವೂ ಕಾಣಿಸಿಕೊಂಡ ಘಟನೆಯನ್ನು ನೆನಪಿಸಿಕೊಳ್ಳಬಹುದು.

ಸುಗ್ರೀವ ಸೂರ್ಯನ ಅಂಶದಿಂದ ಜನಿಸಿದವನಾಗಿರುವುದರಿಂದ ಇಂದು ಆತನಿಗೆ ರಾಮನ ನೆರವೆನ್ನುವ ಅಭಯದ ಪರಿಣಾಮ ತನ್ನ ಪತ್ನಿ ಮತ್ತು ಕಿಷ್ಕಿಂಧೆಯ ರಾಜ್ಯವೆನ್ನುವ ನಕ್ಷತ್ರಗಳು ಆತನಿಗೆ ದೊರಕುವುದೆನ್ನುವ ಸಂಭ್ರಮದಲ್ಲಿ ಶೋಭಿಸುತ್ತಿದ್ದಾನೆ. ಅಥವಾ ಸೂರ್ಯನ ಅಂಶವಾದ ಸುಗ್ರೀವನಿಗೆ ತೊಡಿಸಿದ ನಾಗಪುಷ್ಪ ಕೊರಳಹಾರವೇ ನಕ್ಷತ್ರಗಳಂತೆ ಶೋಭಿಸಿದವು ಎನ್ನುವ ಅರ್ಥವನ್ನು ಮಾಡಿ ಹಗಲಿನಲ್ಲಿ ಸೂರ್ಯ ನಕ್ಷತ್ರಗಳೊಡನೆ ಪರಿವೃತ್ತನಾಗಿದ್ದಾನೆ ಎನ್ನುವ ವಿವರಣೆಯನ್ನು ಕೆಲವರು ನೀಡಿದ್ದಾರೆ. ರಾಮಾಯಣದುದ್ದಕ್ಕೂ ನಕ್ಷತ್ರ ಮತ್ತು ಗ್ರಹಗಳ ಚಲನೆಯ ಅನೇಕ ವಿವರಗಳಿವೆ. ’ವಿಪರೀತೇ’ ಎನ್ನುವ ಶಬ್ದಕ್ಕೆ ಕಿಷ್ಕಿಂಧೆಯ ಅರಸನಾದ ವಾಲಿಗೆ ಆ ಸಮಯ ಉತ್ಪಾತಕಾಲವಾಗಿದೆ ಎನ್ನುವ ಅರ್ಥವನ್ನೂ ಮಾಡಬಹುದು. ಇದಕ್ಕೆ ಪುಷ್ಟಿಯಾಗಿ ರಾಮ ಮತ್ತು ಸುಗ್ರೀವನ ಮೈತ್ರಿಯಾದ ತಕ್ಷಣದಲ್ಲಿ ಸೀತೆಯ ಕಮಲಸದೃಶವಾದ ಎಡಗಣ್ಣು, ವಾಲಿಯ ಹೊಂಬಣ್ಣವಾದ ಎಡಗಣ್ಣು ಮತ್ತು ರಾವಣನ ಅಗ್ನಿಸದೃಶವಾದ ಎಡಗಣ್ಣು ಏಕಕಾಲದಲ್ಲಿ ಅದುರಿದವಂತೆ. ಹೆಂಗಸರಿಗೆ ಎಡಗಣ್ಣು ಅದುರಿದರೆ ಶುಭ, ಗಂಡಸರಿಗೆ ಎಡಗಣ್ಣು ಅದುರುವಿಕೆ ಅಪಶಕುನವನ್ನು ಸೂಚಿಸುತ್ತದೆ. ಈ ಇಬ್ಬರ ಮೈತ್ರಿ ಸೀತಾದೇವಿಗೆ ಶುಭವನ್ನೂ, ವಾಲಿ ರಾವಣರ ಪಾಲಿಗೆ ಅಶುಭಸೂಚಕವೂ ಆಗಿತ್ತು ಎನ್ನುವುದನ್ನು ಕವಿ ವಿವರಿಸುತ್ತಾನೆ. ಆದರೆ ಈ ಎರಡೂ ಉದಾಹರಣೆಗಳಲ್ಲಿ ಆಗ ಸಂದರ್ಭ ಹಗಲಾಗಿತ್ತೋ, ರಾತ್ರಿಯಾಗಿತ್ತೋ ಎನ್ನುವ ಅನುಮಾನವನ್ನು ಪರಿಹರಿಸುವುದಿಲ್ಲ.

ವಾಲ್ಮೀಕಿಯ ಕಾವ್ಯದ ವಿಶೇಷವೆಂದರೆ ಅವರು ತಮ್ಮ ಕಾವ್ಯಗಳಲ್ಲಿ ಕೊಟ್ಟ ಉದಾಹರಣೆಗಳನ್ನು ಹುಡುಕಲು ಬೇರೆ ಯಾವ ಗ್ರಂಥವನ್ನು ಹುಡುಕಬೇಕಾಗಿಲ್ಲ. ಅದಲ್ಲದೇ ಅವರು ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಗೂಢ ಅರ್ಥಗಳುಳ್ಳ ಶ್ಲೋಕಗಳನ್ನು ಬಳಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ವ್ಯಾಸರ ಶ್ಲೋಕಗಳಲ್ಲಿ ಬರುವ ಅನೇಕ ಉದಾಹರಣೆಗಳ ಅರ್ಥವನ್ನು ಹುಡುಕಲು ಉಪನಿಷತ್ತು, ಅರಣ್ಯಕ ಮೊದಲಾದವುಗಳ ಮೊರೆ ಹೋಗಬೇಕಾಗುತ್ತದೆ. ಉದಾಹರಣೆಗೆ ಬಹಳ ಪ್ರಸಿದ್ಧವಾದ “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಎನ್ನುವುದರ ಮೂಲ ಈಶಾವಾಸ್ಯೋಪನಿಷತ್ತಿನ “ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ” ಅಗಿದೆ. ಚಾಟೋಕ್ತಿಯನ್ನೂ ವ್ಯಾಸರು ಅನೇಕ ಸಂದರ್ಭಗಳಲ್ಲಿ ಬಳಸಿದ್ದಾರೆ. ಹಾಗಾಗಿ ಇಲ್ಲಿ ವಾಲ್ಮೀಕಿಯ ಉದ್ಧೇಶವನ್ನು ಹುಡುಕಲು ಅಭೂತೋಪಮೆಯ ಉದಾಹರಣೆಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ಸರಳವಾಗಿ ಆ ಸಂದರ್ಭವನ್ನು ಗಮನಿಸಬಹುದು. ಮೊದಲ ಸಲ ಸುಗ್ರೀವ ವಾಲಿಯೊಡನೆ ಪೆಟ್ಟು ತಿಂದು ಓಡಿಬರುವಾಗ ಏನಿಲ್ಲವೆಂದರೂ ಅಪರಾನ್ಹವಾಗಿರುತ್ತದೆ. ಅದಾದಮೇಲೆ ರಾಮ ಮತ್ತು ಇತರರು ಮುಂದಿನ ನಡೆಯನ್ನು ರೂಪಿಸುತ್ತಾ ವಾಲಿಯನ್ನು ಕೊಲ್ಲಲು ಯಾವ ಸಮಯ ಪ್ರಶಸ್ತವೆಂದು ಸಮಾಲೋಚಿಸುತ್ತಾರೆ. ಶತ್ರುವನ್ನು ಮರೆಯಲ್ಲಿ ನಿಂತು ಕೊಲ್ಲಬೇಕೆಂದು ಅದಾಗಲೇ ನಿರ್ಧರಿಸಿ ಆಗಿದೆ. ವಾಲಿಯ ಪರಾಕ್ರಮವನ್ನು ಸೂಕ್ಷ್ಮವಾಗಿ ರಾಮ ಗಮನಿಸಿದ್ದಾನೆ. ಎರಡನೆಯ ಸಾರಿ ಯುದ್ಧಕ್ಕೆ ಬರುವಾಗ ರಾಮ ಸಮಯದ ವಿಳಂಬವನ್ನು ಸಹಿಸುವುದಿಲ್ಲ. ತಾನು ವಾಲಿಯನ್ನು ಕೊಲ್ಲಲು ಕಾರಣ ಧರ್ಮದ ಹಾನಿಯನ್ನು ಸಹಿಸದೇ ಇರುವುದು ಎನ್ನುವ ಮೂಲಕ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾನೆ. ಮರೆಯಲ್ಲಿ ನಿಂತು ಕೊಲ್ಲುವುದಕ್ಕಾಗಿ ವಾನರಸಹಿತವಾಗಿ ಅವರೆಲ್ಲರೂ ಪೊದೆಯಿಂದ ಕೂಡಿರುವ ಮರವನ್ನು ಆಶ್ರಯಿಸುತ್ತಾರೆ. ವಾಲಿಯನ್ನು ಕರೆಯಲು ರಾತ್ರಿಕಾಲವೇ ಸೂಕ್ತವೆನ್ನುವುದಕ್ಕೆ ಆತ ಈ ಕೆಳಗಿನ ಶ್ಲೋಕದಲ್ಲಿ ಹೇಳುತ್ತಾನೆ.

rama sugreeva

ರಿಪೂಣಾಂ ಧರ್ಷಿಣ ಶೂರಾ ಮರ್ಷಯನ್ತಿ ನ ಸಂಯುಗೇ.
ಜಾನನ್ತಸ್ತು ಸ್ವಕಂ ವೀರ್ಯಂ ಸ್ತ್ರೀಸಮಕ್ಷಂ ವಿಶೇಷತಃ ৷৷ ಕಿ.14.18৷৷

ತಮ್ಮ ಶೌರ್ಯ ಪರಾಕ್ರಮವೇ ಹೆಚ್ಚೆಂಬ ಹೆಮ್ಮೆಯಿರುವ ಶೂರರು ಅದರಲ್ಲಿಯೂ ವಿಶೇಷವಾಗಿ ಸ್ತ್ರೀಯರ ನಡುವಿನಲ್ಲಿರುವಾಗ ಶತ್ರುಗಳ ಗರ್ಜನೆಯನ್ನು ಸ್ವಲ್ಪವೂ ಸಹಿಸರು.

ಈ ಮೇಲಿನ ಶ್ಲೋಕದಿಂದ ವಿದಿತವಾಗುವುದೇನೆಂದರೆ ವಾಲಿಯಂತಹ ಶೂರರು ಸ್ತ್ರೀಯರ ಗುಂಪಿನಲ್ಲಿರುವ ಸಮಯವೆಂದರೆ ಅದು ಸಾಯಂಕಾಲದ ಸಮಯವೆಂದೇ ಅರ್ಥೈಸಬಹುದು. ಆ ತಕ್ಷಣವೇ ವಾಲಿಯನ್ನು ಪುನಃ ಯುದ್ಢಕ್ಕೆ ಕರೆದರೆ ಆತ ಯುದ್ಧಕ್ಕೆ ಬರದೇ ಇರುವ ಸಾಧ್ಯತೆಯೂ ಉಂಟು. ಸುಗ್ರೀವ ಅದಾಗಲೇ ಕಿಷ್ಕಿಂಧೆಯ ಕೋಟೆಯನ್ನೂ ಮತ್ತು ಅರಣ್ಯದಲ್ಲಿ ಬಲೆಯಂತೆ ಸುತ್ತುವರೆದಿರುವ ವಾಲಿಯ ಗೂಢಾಚಾರರು (ಹರಿವಾಗುರಯಾ ವ್ಯಾಪ್ತಾಂ) ವಾಲಿಗೆ ತನ್ನ ಮತ್ತು ಸುಗ್ರೀವನ ನಡುವಿನ ಭೇಟಿ ಮತ್ತು ವಿಷಯಗಳನ್ನು ಈಗಗಲೇ ತಿಳಿಸಿರಬಹುದೆನ್ನುವ ಸಂಶಯವನ್ನು ರಾಮ ಊಹಿಸಿದ್ದಾನೆ. ಶತ್ರುಗಳನ್ನು ಎದುರಿಸಬೇಕಾದರೆ ಯಾವೆಲ್ಲ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದು ಅಯೋಧ್ಯಾಕಾಂಡದ 100ಸರ್ಗದಲ್ಲಿ ರಾಮ ಭರತನಿಗೆ ಉಪದೇಶಿಸುವಾಗ ವಿವರವಾಗಿ ಬಂದಿದೆ. ಹಾಗಾಗಿ ಸ್ತ್ರೀಯರ ನಡುವೆ ಇರುವಾಗ ಸುಗ್ರೀವ ವಾಲಿಯನ್ನು ಕರೆದರೆ ಸಹಜವಾಗಿ ಕ್ರೋಧಗೊಂಡು ವಾಲಿ ಏಕಾಂಗಿಯಾಗಿ ಬರುತ್ತಾನೆ. ಬಲಶಾಲಿಗಳನ್ನು ಹಣಿಯಲು ಇದೊಂದು ಯುದ್ಧ ತಂತ್ರ. ಈ ಹಿಂದೆ ಮಾಯಾವಿ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ್ದು ಚಂದ್ರೋಯದ ಅರ್ಧರಾತ್ರಿಯಲ್ಲಿ ಆಗಿತ್ತು. ಆ ದಿನವೂ ಚನ್ನಾಗಿ ಚಂದ್ರನ ಬೆಳಕು ಭೂಮಿಯನ್ನು ಬೆಳಗುತ್ತಿತ್ತು. ಹಾದಿಯೆಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ಆ ಹೊತ್ತಿನಲ್ಲಿಯೂ ವಾಲಿ ತನ್ನ ಪತ್ನಿ ತಾರೆಯ ಸಂಗಡ ಏಕಾಂತದಲ್ಲಿದ್ದನು. ತನ್ನ ಪೌರುಷಕ್ಕೆ ಸವಾಲು ಹಾಕಿರುವುದರಿಂದ ಆತ ತಾರೆ ಮತ್ತು ಸುಗ್ರೀವ ಬೇಡವೆಂದು ತಡೆದರೂ ಯುದ್ಧಕ್ಕೆ ಹೊರಟಿದ್ದ.

ಇನ್ನು ದುಂದುಭಿಯೂ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ ಸಮಯವೂ ರಾತ್ರಿಕಾಲವೇ ಆಗಿತ್ತು ಎನ್ನುವುದನ್ನು ಕಿಷ್ಕಿಂಧಾ ಕಾಂಡದ ಹನ್ನೊಂದನೆಯ ಸರ್ಗದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದೂ ಅಲ್ಲದೇ IIT Kanpur ಅವರ ವಾಲ್ಮೀಕಿ ರಾಮಾಯಣದ ವಿವರಣೆಯಲ್ಲಿ ಹುಣ್ಣಿಮೆಯ ಚಂದ್ರನೇ ಸೂರ್ಯ ಎನ್ನುವ ವಿವರಣೆಯಿದೆ. (Welcome to Valmiki Ramayana | Valmiki Ramayanam). ಈ ಎಲ್ಲ ಮೂಲಗಳಿಂದ ವಿವೇಚಿಸುವುದಾದರೆ, ಸುಗ್ರೀವ ವಾಲಿಯನ್ನು ಕರೆದ ಕಾಲ ಸಂದ್ಯಾಕಾಲವೇ ಆಗಿರಬೇಕು. ಅದೂ ಅಲ್ಲದೇ ಆ ದಿನ ಅಮಾವಾಸ್ಯೆಯಂತೂ ಅಲ್ಲ; ಶುಕ್ಲಪಕ್ಷದ ಹುಣ್ಣಿಮೆಯಾಗಿರಬೇಕು. “ವಿಪರೀತ” ಎನ್ನುವ ಶಬ್ದಕ್ಕೆ ರಾತ್ರಿ ಎನ್ನುವ ಅರ್ಥ ಉಂಟು. (ಪರೀತಂ ಎಂದರೆ ಹಗಲು) “ರಾಕಾಮಧ್ಯಗತಶ್ಚಂದ್ರಃ ಸೂರ್ಯ ಇತ್ಯಭಿಧೀಯತೆ” – ಹುಣ್ಣಿಮೆಯ ದಿನದ ಚಂದ್ರನನ್ನು ಸೂರ್ಯನೆಂದೂ ಕರೆಯುತ್ತಾರೆ. ರಾತ್ರಿಕಾಲದಲ್ಲಿ ಸೂರ್ಯ ಚಂದ್ರನಾಗಿ ಬೆಳಕು ನೀಡುತ್ತಾನೆ ಎನ್ನುವದಕ್ಕೆ ಆತನಿಗೆ “ಆರ್ಯಮಾ” ಎನ್ನುವ ಹೆಸರಿದೆ. “ಹುಣ್ಣಿಮೆಯ ದಿನ ನಕ್ಷತ್ರಗಳಿಂದ ಪರಿವೃತನಾದ ಚಂದ್ರನಂತೆ ಸುಗ್ರೀವ ಶೋಭಿಸುತ್ತಿದ್ದ” ಎನ್ನುವ ಸರಳ ಅರ್ಥ ಕಾವ್ಯದ ಸೌಂದರ್ಯದ ದೃಷ್ಟಿಯಿಂದಲೂ ಚನ್ನಾಗಿ ಹೊಂದಿಕೆಯಾಗುತ್ತದೆ. ಅದೂ ಅಲ್ಲದೇ ವಿಷ್ಣು ಪುರಾಣದಲ್ಲಿ “ಕ್ಷೀಣಂ ಸೋಮಂಸುರೈಃಪೀತಮಾಪ್ಯಾಯಯತಿ ದೀಪ್ತಿರ್ಮಾನ್ I ಮೈತ್ರೇಯೈಕ ಕಲಂ ಸಂತಂ ರಶ್ಮಿನೈಕೇನ ಭಾಸ್ಕರಃ – ಎನ್ನುವಲ್ಲಿ ಚಂದ್ರನು ಸೂರ್ಯಕಿರಣ ಪ್ರವೇಶದಿಂದಲೇ ಕಾಂತಿವಿಶಿಷ್ಟನಾಗುವುದರಿಂದ ಆತನೇ ಸೂರ್ಯನೆನಿಸಲ್ಪಡುವನು” ಎಂದು ವಿವರಿಸಲಾಗಿದೆ. ಸೂರ್ಯನ ಬೆಳಕನ್ನು ಚಂದ್ರ ಪ್ರತಿಫಲಿಸುತ್ತಾನೆ ಎನ್ನುವುದು ಭಾರತೀಯ ಜೌತಿಷ್ಯ ಮತ್ತು ಪುರಾಣಗಳಲ್ಲಿ ವಿವರಿಸಲ್ಪಟಿದೆ. ವೇದ, ಖಗೋಲ ವಿಜ್ಞಾನ, ಮಹಾಕಾವ್ಯಗಳು ಮತ್ತು ಪುರಾಣ ಭಾರತೀಯ ಪರಂಪರೆಯಲ್ಲಿ ಜೊತೆಜೊತೆಯಲ್ಲಿ ಸಾಗುತ್ತವೆ. ಎಲ್ಲವೂ ಜ್ಞಾನವನ್ನು ಬೋಧಿಸುವ ಒಂದೊಂದು ಮಾರ್ಗಗಳಾಗಿವೆ. ಗುರಿ ಮಾತ್ರ ಒಂದೇ.

rama sugreeva

ಕಿಷ್ಕಿಂಧೆಯಲ್ಲಿ ಸುಗ್ರೀವನ ಗರ್ಜನೆಯನ್ನು ಕೇಳಿದ ತಾರೆ ಯುದ್ಧಕ್ಕೆ ಹೊರಟ ವಾಲಿಯನ್ನು ತಡೆಯುತ್ತಾ ಈಗ ಯುದ್ಧಕ್ಕೆ ಹೋಗುವುದು ಉಚಿತವಲ್ಲ ಎಂದು ಅನೇಕ ನೀತಿ ಮಾತುಗಳನ್ನು ಹೇಳುತ್ತಾಳೆ. ರಾಮ ಲಕ್ಷ್ಮಣರು ಋಷ್ಯಮೂಕ ಪರ್ವತಕ್ಕೆ ಬಂದಿರುವ ವಿಷಯ ಆಕೆಗೆ ಮಗ ಅಂಗದನ ಮೂಲಕ ತಿಳಿದಿದೆ. ವಾನರರು ಬಲೆಯಂತೆ ಇಡೀ ಪರ್ವತದುದ್ದಕ್ಕೂ ಚದುರಿಕೊಂಡು ಅರಣ್ಯದ ಆಗುಹೋಗುಗಳ ಕುರಿತು ನಿಗಾ ಇರಿಸುತ್ತಿದ್ದರು ಎನ್ನುವುದು ವೇದ್ಯ. ತಾರೆ ಹೇಳುವ “ಕಾಲ್ಯಮೇತೇನ ಸಙ್ಗ್ರಾಮಂ ಕರಿಷ್ಯಸಿ ಚ ವಾನರ – ವಾನರನೇ ನಾಳೆ ಬೆಳಗಾಗುತ್ತಲೇ ಸುಗ್ರೀವನೊಡನೆ ಯುದ್ಧ ಮಾಡು, ಅಷ್ಟರೊಳಗಾಗಿ ನಿನ್ನ ಶತ್ರುವಿಗೆ ಯಾವ ಮೇಲ್ಮೇಯಾಗಲೀ, ನಿನಗೆ ಯಾವ ವಿಧದಲ್ಲಿ ನ್ಯೂನ್ಯತೆಯಾಗಲಿ ಉಂಟಾಗದು” ಎಂದು ತಡೆಯುತ್ತಾಳೆ. ಈ ಎಲ್ಲ ವಿಷಯಗಳನ್ನು ಗಮನಿಸಿದಾಗ ಯಾವ ಅನುಮಾನವೂ ಇಲ್ಲದೇ ಸುಗ್ರೀವ ವಾಲಿಯನ್ನು ಯುದ್ಧಕ್ಕೆ ಎರಡನೆಯ ಸಲ ಕರೆದಾಗ ಹುಣ್ಣಿಮೆಯ ರಾತ್ರಿಹೊತ್ತಾಗಿತ್ತು ಎನ್ನುವುದು ಸ್ಪಷ್ಟವಾಗಿದೆ. ಕಾವ್ಯದ ಸೌಂದರ್ಯ ಮತ್ತು ಶತ್ರುಗಳನ್ನು ಎದುರಿಸುವ ಕೂಟವಿದ್ಯೆಯ ರಾಜನೀತಿ ಇವೆರಡನ್ನೂ ಗಮನಿಸಿದರೆ ಅದು ರಾತ್ರಿಕಾಲವೇ ಆಗಿತ್ತು ಎನ್ನುವುದನ್ನು ನಿರ್ವಿವಾದವಾಗಿ ಹೇಳಬಹುದು.

ನಾವು ಯಕ್ಷಗಾನದವರು ನಮ್ಮ ವಾಲ್ಮೀಕಿಯಾದ ಪಾರ್ತಿಸುಬ್ಬ ಹೇಳಿದ ಪ್ರಕಾರ ರಾತ್ರಿಕಾಲ ಎಂದೇ ಅರ್ಥಹೇಳುತ್ತೇವೆ ನಮಗಿದೇ ಇಷ್ಟ. ಕಾವ್ಯ ಸೌಂದರ್ಯ ಮತ್ತು ಉಪಮೆಗಳಿಂದ ಕೂಡಿದಾಗ ಸೊಗಸು ಹೆಚ್ಚುತ್ತದೆ. ಅದನ್ನು ವಿಪರೀತವಾಗಿ ಅರ್ಥಮಾಡಿಕೊಂಡರೆ ಅದರ ರಸಸ್ವಾಧಕ್ಕೆ ಭಂಗ ಬರುತ್ತದೆ. ಅದು ಕವಿಯ ಆಶಯವಲ್ಲ.

ಈ ಸಲ ವಾಲಿಯನ್ನು ಕೊಲ್ಲಲೇ ಬೇಕೆಂದು ಮತ್ತೊಮ್ಮೆ ಸುಗ್ರೀವ ಇಲ್ಲಿ ರಾಮನಲ್ಲಿ “ಪ್ರತಿಜ್ಞಾ ಯಾ ತ್ವಯಾ ವೀರ! ಕೃತಾ ವಾಲಿವಧೇ ಪುರಾ – ವೀರನೇ ! ವಸಂತಕಾಲವು ಬಂದೊಡನೆಯೇ ಲತೆಯು ಪುಷ್ಪಭರಿತ್ವಾಗುವಂತೆ ವಾಲಿಯನ್ನು ಸಂಹರಿಸುವೆನೆಂಬ ನಿನ್ನ ಪ್ರತಿಜ್ಞಾವಚನವು ಈ ಸಮಯದಲ್ಲಿ ಸಫಲವಾಗುವಂತೆ ಮಾಡು” ಎಂದು ಆಗ್ರಹಪೂರ್ವಕವಾದ ವಿನಂತಿಯನ್ನು ಮಾಡುತ್ತಾನೆ. ವಾಲಿ ವಧೆಯೆನ್ನುವುದು ರಾಮನೇ ಏಕಾಂಗಿಯಾಗಿ ತೆಗೆದುಕೊಂಡ ನಿರ್ಧಾರವಲ್ಲ, ಅದು ಸುಗ್ರೀವನ ಆಗ್ರಹವೂ ಆಗಿತ್ತು.

ಅಂತೂ ವಾಲಿ ವಧೆಗೆ ಮುಹೂರ್ತ ಸನ್ನಿಹಿತವಾಯಿತು.

ಇದನ್ನೂ ಓದಿ: New Column: ಅವನಿ ಅಂಬರ ಅಂಕಣ: ಋಷ್ಯಮೂಕದೊಳಿಪ್ಪ ಸುಗ್ರೀವನೆಂಬ ವಾನರ