ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಪರಸ್ತ್ರೀಸೀಯರ ಚಿಂತೆ ಮಾಡದ ಟೆಡ್ಡಿ ಪಿಯರ್ಸ್‌ಗೆ ಅಸಾಧಾರಣ ಅಪರಿಚಿತ ರೂಪವತಿಯೊಬ್ಬಳ ಸೌಂದರ್ಯದ ಕ್ಷಣಿಕ ಸ್ಯಾಂಪಲ್‌ನ ಅಚಾನಕ್ ದರ್ಶನವಾಗುತ್ತದೆ. ಸ್ತಿಮಿತ ಕಳೆದುಕೊಂಡು ಅವಳ ಬೆನ್ನೇರುತ್ತಾನೆ. ಅವನ ಶ್ರಮ ಫಲಪ್ರದವಾಗುತ್ತದೆ, ಅವಳ ಅಪಾರ್ಟ್ಮೆಂಟಿಗೆ ಬರ ಹೇಳುತ್ತಾಳೆ.
ಹೆಂಡತಿಗೆ ತಿಳಿಯಬಾರದ? ತನಗೆ ತಾನೇ ಟೆಲಿಗ್ರಾಮ್ ಕಳಿಸಿಕೊಳ್ಳುತ್ತಾನೆ. ಸ್ನಾನದ ಟಬ್‌ನಲ್ಲಿರುವಾಗ ಕರೆಗಂಟೆ ಸದ್ದಾಗುತ್ತದೆ. ಹೆಂಡತಿ ಟೆಲಿಗ್ರಾಮ್ ಪಡೆಯಲು ಹೋದಾಗ ಹಿರಿಹಿರಿ ಹಿಗ್ಗುತ್ತಾನೆ. ಆಫೀಸಿನಿಂದ ಬಂದಿದೆ ಟೆಲಿಗ್ರಾಮ, ನೀನು ಹೋಗಬೇಕಂತೆ, ಎಂದು ಹೆಂಡತಿ ಓದಿಹೇಳುತ್ತಾಳೆ. ನೆಮ್ಮದಿಯಾಗಿ ನಿನೊಟ್ಟಿಗಿರುವುದಕ್ಕೂ ಈ ದರಿದ್ರ ಬಾಸ್ ಬಿಡುವುದಿಲ್ಲ ಎನ್ನುತ್ತಾ ಹುಸಿ ಕೋಪದಲ್ಲಿ ಸ್ನಾನದ ನೀರಿಗೇ ಗುದ್ದುತ್ತಾನೆ. ಹೆಂಡತಿ ಸಮಾಧಾನ ಮಾಡುತ್ತಾಳೆ.
ಎನಿಸಿದಂತೆಯೇ ಎಲ್ಲವೂ ನಡೆಯುತ್ತಿರುತ್ತೆ. ಇಷ್ಟೂ ದಿನ ಕಾದ ಸುಸಮಯದ ಕ್ಷಣಗಣನೆ ಆರಂಭವಾಗುತ್ತದೆ. ಪಲ್ಲಂಗವೇರಿದ ಸ್ವಲ್ಪದರ ಪ್ರೇಮಿಯ ಗಂಡ – ಆತ ಪೈಲಟ್ – ಅನಿರೀಕ್ಷಿತವಾಗಿ ಬಂದಿಳಿಯುತ್ತಾನೆ. ರಸಭಂಗವಾಗುತ್ತದೆ. ತೊಡಲು ಅವನಿ ಗೊಂದು ಗೌನ್ ಕೊಟ್ಟು ಹೊರಹೋಗಲು ಹೇಳುತ್ತಾಳೆ. ಕೈಗೆ ಬಂದ ತುತ್ತು ಬಾಯಿಂದ ದೂರವಾಗುತ್ತದೆ. ಕಿಟಕಿಯಿಂದ ತೂರಿ ಸಜ್ಜದ ಮೇಲೆ ನಿಲ್ಲುತ್ತಾನೆ.
ಬಹುಮಹಡಿ ಕಟ್ಟಡ. ಅವನು ನಿಂತಿರುವುದು ಯಾರದೋ ಕಣ್ಣಿಗೆ ಬಿದ್ದು, ನೋಡಿದ ವ್ಯಕ್ತಿ ಅವನು ಆತ್ಮಹತ್ಯೆಗೆ ಪ್ರಯತ್ನಿಸು ತ್ತಿರಬೇಕೆಂದು ತಪ್ಪಾಗಿ ತಿಳಿಯುತ್ತಾನೆ. ಕೆಲವೇ ಕ್ಷಣಗಳಲ್ಲಿ ಜನ ಜಮಾಯಿಸುತ್ತಾರೆ. ಅಗ್ನಿಶಾಮಕ ದಳವೂ ಧಾವಿಸುತ್ತದೆ. ಟಿವಿ ಚಾನೆಲ್ ಹಿಂದೆ ಬೀಳುತ್ತದೆಯೇ? ಸಜ್ಜದ ಮೇಲೆ ಗೌನ್‌ನಲ್ಲಿ ನಿಂತವನ ದೃಶ್ಯದ ನೇರಪ್ರಸಾರವಾಗುತ್ತದೆ. ಮನೆಯಲ್ಲಿ ಆ ದೃಶ್ಯ
ವನ್ನು ಕಂಡ ಅವನ ಹೆಂಡತಿ ತನ್ನ ವ್ಯಭಿಚಾರವೇನಾದರೂ ಗಂಡನಿಗೆ ತಿಳಿದು ಆತ್ಮಹತ್ಯೆಗೆ ಮುಂದಾದನೇನೊ ಎಂದು ಕೊಳ್ಳುತ್ತಾಳೆ.
ಕೊನೆಗೂ, ಪಿಯರ್ಸನ್ನು ಹರಡಿ ಹಿಡಿದ ಬಲೆಯ ಮೇಲೆ ನೆಗೆಯಲು ಮನವೊಲಿಸಲಾಗುತ್ತದೆ. ಇದು ದ ವುಮನ್ ಇನ್ ರೆಡ್ ಚಿತ್ರದ ಸಾರಾಂಶ. ಸಜ್ಜದಿಂದ ಕೆಳಗೆ ಜಿಗಿಯುವುದನ್ನು ವಿಳಂಬ ಗತಿಯಲ್ಲಿ ಚಿತ್ರಿಸಲಾಗಿದೆ. ಮನೆಯಲ್ಲಿ ಹೆಂಡತಿ ಇದ್ದೂ ಕ್ಷಣಿಕ ಸುಖಕ್ಕಾಗಿ ಬೇರೊಬ್ಬಳಿಂದ ವಿಚಲಿತನಾಗುವ ಬಗ್ಗೆ ಜಿಗಿಯುವಾಗ ಮಾಡುವ ಸ್ವಗತದಲ್ಲಿ ಬೇಸರ ವ್ಯಕ್ತಪಡಿಸುತ್ತಾನೆ. ಹಾಗೆ
ಹೇಳಿಕೊಳ್ಳುತ್ತಲೇ ರಸ್ತೆಯಲ್ಲಿ ನೆರೆದ ಜನರ ಮಧ್ಯದ ಹೆಣ್ಣೊಬ್ಬಳಲ್ಲಿ ಆತನ ದೃಷ್ಟಿ ನೆಡುತ್ತದೆ. ಈ ಚಿತ್ರ ಬಿಡುಗಡೆಯಾದದ್ದು 1984ರಲ್ಲಿ.
ಕಾಕತಾಳೀಯವೆಂಬಂತೆ ನಮ್ಮ ದೇಶ ಸ್ವಾತಂತ್ರ್ಯ ಪಡೆದ ದಿನದಂದು. ಮೋಹವನ್ನು ಹತ್ತಿಕ್ಕುವ ಸುಲಭ ಮಾರ್ಗವೆಂದರೆ ಅದಕ್ಕೆ ಶರಣಾಗುವುದು ಎಂದು ಆಸ್ಕರ್ ವೈಲ್ಡ್ ಹೇಳಿದ್ದಾನೆ. ವಿವಾಹೇತರ ಸಂಬಂಧಗಳು ಕಾನೂನು ಬಾಹಿರವಲ್ಲ ಎಂಬ ಮಹೋನ್ನತ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ನೀಡಿದ್ದು ಭಾರತ ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳ ನಂತರ. ಆಸ್ಕರ್‌ನ ಆ ನುಡಿಯೇ ನಾದರೂ ನ್ಯಾಯಾಲಯದ ಪರಿಗಣನೆಗೆ ಬಂದಿತೊ ಕಾಣೆ. ನಿತ್ಯ ನಡೆಯುವ ವ್ಯಭಿಚಾರವನ್ನು ತಡೆಯಲಿಕ್ಕಾಗುವುದಿಲ್ಲ
ವಾದ್ದರಿಂದ ಸಮ್ಮತ ಸೆಕ್ಸ್ ಅಪರಾಧವಾಗಲಾರದೆಂಬ ತರ್ಕವೇ? ಸಮ್ಮತಿ ಎಂದರೆ ವಿವಾಹೇತರ ಸಂಬಂಧಕ್ಕೆ ಮುಂದಾಗುವ ರಿಬ್ಬರ ಸಮ್ಮತಿ; ಬಾಳಸಂಗಾತಿಗಳ ಸಮ್ಮತಿಯಲ್ಲ.
ಎಪ್ಪತ್ತರ ದಶಕದಲ್ಲಿ, ಗಾಂಧಿ ಬಜಾರ್‌ನ ವೃತ್ತದ ಮೂಲೆಯೊಂದರಲ್ಲಿ ಆರಂಭವಾದ ಸ್ಟ್ಯಾಂಡರ್ಡ್ ಟೈಲರಿಂಗ್‌ನ ಮಾಲೀಕ ರಾದ ಶಾಂತಾರಾಮ್ ಹಾಸ್ಯ ಪ್ರಜ್ಞೆ ಯುಳ್ಳವರು. ಆಗಿನ ಕಾಲಕ್ಕೆ ಅತ್ಯಂತ ಜನಪ್ರಿಯವಾಗಿದ್ದ ಬೆಲ್ ಬಾಟಮ್ ಪ್ಯಾಂಟ್ ಹೊಲಿಸಲು ತರುಣನೊಬ್ಬ ಬಂದ. ಅಳತೆ ತೆಗೆದುಕೊಳ್ಳುವಾಗ ಬಾಟಮ್ 36 ಇಂಚು ಇಡಲು ಹೇಳಿದ. ಮನೆಯಲ್ಲಿ ಕೇಳ್ಕೊಂಡು ಬಂದಿದ್ದೀ ತಾನೇ? ಎಂದು ಲೋಕಾನುಭವವಿದ್ದ ಶಾಂತಾರಾಮ್ ನಗುತ್ತಾ ಕೇಳಿದರು. ಹಾಗೆ, ಒಂದು ವೇಳೆ, ಮೇಲೆ ಪ್ರಸ್ತಾಪಿಸಿದ ಚಿತ್ರದಲ್ಲಿ ಕ್ಲೆ ಮ್ಯಾಕ್ಸ್ ದೃಶ್ಯದ ಆರಂಭದಲ್ಲಿ ಆಕೆ ಆತನನ್ನೋ, ಆತ ಆಕೆಯನ್ನೋ ಶಾಂತಾರಾಮರಂತೆ ಮನೇನಲ್ಲಿ ಕೇಳ್ಕೊಂಡು ಬಂದಿದ್ದೀ ತಾನೇ ಎಂದಿದ್ದರೆ ಸಿನೆಮಾ ಆದರೂ ಹೇಗೆ ಮುಂದುವರಿದೀತು!
ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪೇ ವಿವಾಹೇತರ ಸಂಬಂಧಕ್ಕೆ ಗೃಹೋದ್ಯಮದ ಸಾಂಸ್ಥಿಕ ಸ್ವರೂಪವನ್ನು ಪರೋಕ್ಷವಾಗಿ ಕೊಟ್ಟಿದೆ ಎಂಬ ಭಾವನೆ ವ್ಯಾಪಕವಾಗಿರುವುದರಿಂದ ಅಂತಹ ಸಂಬಂಧ ಬೆಳೆಸಲು ಮನೆಯ ಯಜಮಾನತಿಯ/ಯಜಮಾನನ ಮೌಖಿಕ/ ಲಿಖಿತ ಪೂರ್ವಾನುಮತಿ ಪಡೆಯಲೇಬೇಕೆಂದಿಲ್ಲ.
ಎಂತಲೇ, ರಮೇಶ್ ಜಾರಕಿಹೊಳಿಯವರ ನೈತಿಕತೆ ಸತ್ತಿದೆ ಎನ್ನುವ ವಾದಕ್ಕೆ ಪುಷ್ಟಿ ಸಿಗಲಾರದು. ಸತ್ತಿರುವುವರ ಮನೆಯ ಶೋಕಾಚರಣೆಯಲ್ಲಿರುವವರ ಮುಖಕ್ಕೆ ಮೈಕ್ ಹಿಡಿದು ಸಾವಿನ ಬಗ್ಗೆ ಏನನಿಸುತ್ತೆ ಎಂದು ಕೇಳುವ ಪರಿಪಾಠ ದೃಶ್ಯ ಮಾಧ್ಯಮ ದಲ್ಲಿದೆ. ಬಿಡುಗಡೆಯ ಹಂತದಲ್ಲಿದೆ ಎನ್ನಲಾದ ಮತ್ತಷ್ಟು ಸಿಡಿಗಳನ್ನರಸುವ ಭರದಲ್ಲಿ ಮನನೊಂದು ರಾಜೀನಾಮೆ ನೀಡಿದ ಸಚಿವರ ಸಂಬಂಧಿಗಳನ್ನು ಸಂದರ್ಶಿಸುವುದಕ್ಕೆ ಟಿವಿ ಚಾನೆಲ್‌ಗಳಿಗೆ ಪುರುಸೊತ್ತಾಗಲಿಲ್ಲ ಅಂತ ಕಾಣುತ್ತೆ.
ಚಾನೆಲ್‌ಗಳ ದುರಾದೃಷ್ಟಕ್ಕೆ ಶಿಕಾರಿಗೊಳಪಡಬೇಕಿದ್ದ ಸಚಿವರು ಕೋರ್ಟಿನ ಮೊರೆಹೋಗಿ ಅಲ್ಲಿಂದ ಪರಿಹಾರ ಪಡೆದು ಸಾರ್ವಜನಿಕರಲ್ಲಿ ಇನ್ನಿಲ್ಲದ ಕುತೂಹಲವನ್ನು ಸೃಷ್ಠಿಸಿದ್ದಾರೆ. ಸ್ನೇಹಿತರ ವಲಯದಲ್ಲಿ, ಗಂಡ – ಹೆಂಡಂದಿರನ್ನು ಹಂಚಿಕೊಳ್ಳು ವಂಥ ಪ್ರಕರಣಗಳೂ ಪೊಲೀಸ್ ದಾಖಲೆಗಳಲ್ಲಿ ಸಿಗುತ್ತವೆ. ಸಿಗದಿರುವ ಪ್ರಕರಣಗಳೂ ಇರದಿರುವ ಸಾಧ್ಯತೆ ಇಲ್ಲ. ಅಂತಹ ಮೌಖಿಕ ಒಪ್ಪಂದದ ಮೇಲೆ ಆದ ಕೂಡುವಿಕೆಯ ಪ್ರಕರಣವಿದೊ ಎಂಬ ಪ್ರಶ್ನೆಯೂ ಆಧುನಿಕ ಭಾರತದಲ್ಲಿ ಸಹಜವೇ.
ಹಾಗೇನಾದರೂ ಸಂಭವಿಸಿದ್ದಲ್ಲಿ, ಸಚಿವರ ಪಾತ್ರ ಖಂಡನೀಯವಾದದ್ದು. ಸಾಮಾಜಿಕ ಅಂತರ ಕಾಯ್ದುಕೊಂಡು ಜನಸಾಮಾನ್ಯರಿಗೆ ಆದರ್ಶವಾಗಬೇಕಿದ್ದ ಸಚಿವರು ಆಕೆಯ ಸಾಮೀಪ್ಯ ಬಯಸಿದ್ದಾರೆ. ಬೇರೇನನ್ನು ಧರಿಸದಿದ್ದರೂ ನಡೆಯು ತ್ತಿತ್ತೇನೊ, ಮಾಸ್ಕ್ ನಿಯಮವನ್ನು ಗಾಳಿಗೆ ತೂರಿzರೆ. ಮುಂಜಾಗರೂಕತೆ ವಹಿಸದೆ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದಲ್ಲದೇ ಆ ಹೆಂಗಸಿಗೂ ನಿಯಮದ ಉಲ್ಲಂಘನೆಗೆ ಪ್ರೇರೇಪಿಸಿದ್ದಾರೆ.
ಮಿಲನ್ ಕುಂದೇರಾ ತಮ್ಮ ಒಂದು ಪುಸ್ತಕದಲ್ಲಿ ಹೀಗೆ ಪ್ರಸ್ತಾಪಿಸಿದ್ದಾರೆ: ಅಪರಿಚಿತತೆಯಿಂದುಂಟಾಗುವ ಕಸಿವಿಸಿ ನೀವು ಪಟಾಯಿಸಿದ ಹೆಣ್ಣಿನ ಸಾಂಗತ್ಯದಲ್ಲಿರುವಾಗ ಆಗುವುದಿಲ್ಲ; ಒಂದು ಕಾಲದಲ್ಲಿ ನಿಮ್ಮೊಟ್ಟಿಗಿದ್ದ ಹೆಣ್ಣಿನ ಸಂಪರ್ಕಕ್ಕೆ ಬಂದಾಗ ಕಾಡುವ ವಿಕ್ಷಿಪ್ತ ಅಪರಿಚಿತತೆ ಅಗಣ್ಯ. ಈ ರೂಪಕವನ್ನು ಅವರು ಬಳಸುವ ಕಾರಣವೇ ಮೋಹಕ. ತಾಯ್ನಾಡಿನಿಂದ ದೀರ್ಘ ಕಾಲ ದೂರವಿದ್ದು ಹಿಂತಿರುಗಿದ ವ್ಯಕ್ತಿಯಲ್ಲಿ ತಾನು ಹುಟ್ಟಿ ಬೆಳೆದ ದೇಶವನ್ನು ಕಂಡಾಗ ಕಾಡುವ ಅಪರಿಚಿತತೆಯ ಗಾಢತೆ ಯನ್ನು ಓದುಗರಿಗೆ ಮನದಟ್ಟು ಮಾಡಿಸುವ ಸೊಗಸೇ ಸೊಗಸು.
ನಾನು ಸ್ವದೇಶವನ್ನು ಬಿಟ್ಟು ಹೆಚ್ಚು ಕಾಲ ಹೊರಗೆ ಹೋಗಿಲ್ಲ, ಆದರೆ ನನ್ನ ಹುಟ್ಟೂರಾದ ಬೆಂಗಳೂರಿನಿಂದ ದೂರ ಬಂದು
ವರ್ಷಗಳಾಯಿತು. ಇತ್ತೀಚಿನ ಸಿಡಿ ಹಗರಣವೂ ಸೇರಿದಂತೆ ರಾಜಧಾನಿಯಗುವ ಅನೇಕ ವಿದ್ಯಮಾನಗಳನ್ನು ನೋಡಿದಾಗ ಕುಂದೇರಾ ವಿವರಿಸುವ ಅಪರಿಚಿತತೆ ನನ್ನನ್ನೂ ಕಾಡುತ್ತದೆ. ಬೆಂಗಳೂರು ಅಪರಿಚಿತವಾಗಿ ಕಾಣುತ್ತದೆ. ಇನ್ನು, ಹಾರಿಸಿಕೊಂಡು ಬಂದ ಮಹಿಳೆಯ ಜತೆ ಪುರುಷನು ಹೇಗೆ ವರ್ತಿಸುತ್ತಾನೆಂಬ ಕುಂದೇರಾರ ವರ್ಣನೆಯ ಹಿನ್ನೆಲೆಯಲ್ಲಿ ಸಿಡಿಯನ್ನು ವೀಕ್ಷಿಸಿದಾಗ
ಆ ಗಂಡಸು ಆ ಮಹಿಳೆಯ ಬಗ್ಗೆ ತೋರುವ ಸಲುಗೆ ಎದ್ದು ಕಾಣುತ್ತದೆ.
ಅಂದರೆ, ಅಪರಿಚಿತತೆ ಆತನನ್ನು ಕಾಡಿದಂತಿಲ್ಲ. ಅಂದರೆ, ಆಕೆ ಪರಿಚಿತಳಲ್ಲ, ಪಟಾಯಿಸಿದ ಹೆಂಗಸೇ ಇರಬೇಕು ಎನ್ನುವ ನಿರ್ಧಾರಕ್ಕೆ ಬರಬಹುದೇನೊ! ವಿದೇಶದ ಸಂಕಲನಗೊಂಡು (ವ್ಯವಕಲ್ಯಾಣ ವಾಗಿzಷ್ಟೋ? ಏನೋ?) ಮತ್ತಿನ್ನೆ ಯೂ-ಟ್ಯೂಬ್
ನಲ್ಲಿ ಅಪ್ರೋಡ್ ಆದ ಸಿಡಿಯಲ್ಲಿ ಇರುವ ವ್ಯಕ್ತಿ ತಾನಲ್ಲ ಎಂದು ಹೇಳಿದ ನಂತರವೂ ಸಚಿವ ಸ್ಥಾನಕ್ಕೆ ಜಾರಕಿಹೊಳಿ ರಾಜೀನಾಮೆ ನೀಡಿzರೆಂದರೆ, ರಾಜಕಾರಣದಲ್ಲಿ ನೈತಿಕತೆ ನಶಿಸಿಲ್ಲ ಎಂದೇ ಅರ್ಥ.
ವೈಜ್ಞಾನಿಕ ಅಭಿಪ್ರಾಯದಂತೆ, ಒಬ್ಬ ವ್ಯಕ್ತಿಯನ್ನು ಎಲ್ಲ ವಿಧದಲ್ಲೂ ಹೋಲುವ ಮತ್ತೊಬ್ಬ ವ್ಯಕ್ತಿ (ಅಂಥವರನ್ನು doppeleganger ಎಂದು ಕರೆಯಲಾಗುತ್ತದೆ) ಬೇರೆ ತಾಯಿಯ ಮಡಿಲಲ್ಲಿ ಹುಟ್ಟುವ ಸಾಧ್ಯತೆ ಒಂದು ಟ್ರಿಲಿಯನ್‌ನಲ್ಲಿ ನಗಣ್ಯವಾದ ಒಂದು ಭಾಗವಷ್ಟೆ. ವಿಶ್ವದ ಜನಸಂಖ್ಯೆ ಒಂದು ಟ್ರಿಲಿಯನ್‌ಗಿಂತ ಬಹಳಷ್ಟು ಕಡಿಮೆ ಇರುವ ಕಾರಣ ರಮೇಶ್
ಜಾರಕಿಹೊಳಿಯ ತದ್ರೂಪಿನ ಮತ್ತೊಬ್ಬ ಗಂಡಸು ಇರುವುದನ್ನು ವಿಜ್ಞಾನ ತಳ್ಳಿಹಾಕುತ್ತದೆ. ಹಾಗಿದ್ದಾಗ್ಯೂ, ಅವರು ತಾವು ನಿರ್ದೋಷಿ ಎಂದು ಸಾಬೀತುಪಡಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ತನ್ನನ್ನು ಹೋಲುವ ವ್ಯಕ್ತಿಯೊಬ್ಬ ಒಂದು ಕೆಲಸವನ್ನು ಮಾಡಿ ಅದು ತಾನೇ ಮಾಡಿದ್ದೆಂದು ನಾಡಿನ ಜನ ಎಳ್ಳಷ್ಟೂ
ಸಂಶಯವಿಲ್ಲದೆ ಮಾತನಾಡುವಾಗ ಆತನಿಗೆ ಹೇಗೆನಿಸುತ್ತದೆಯೊ ಕಾಣೆ. ಒಂದು, ಅಯೋಗ್ಯ, ತನ್ನ ಹೆಸರಿಗೆ ಮಸಿಬಳಿದನಲ್ಲ ಎಂಬ ಆಕ್ರೋಶ. ಆದರೆ, ಇಂತಹ ಒಂದು ಕೆಲಸ ಅಪರಾಧಾರ್ಹವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ಸಾರಿ ಹೇಳಿರುವಾಗ ತನ್ನನ್ನೇ ಹೋಲುವ ಆ ಗಂಡಸು ಹೆಣ್ಣೊಬ್ಬಳನ್ನು ಕಬಳಿಸಿದ್ದಕ್ಕಾಗಿ ಸಚಿವರಲ್ಲಿ ಆಕ್ರೋಶದ ಬದಲಾಗಿ ಅಸೂಯೆ ಮೂಡಿರಬಹುದೇ ಎಂಬ ಪ್ರಶ್ನೆ ಅಪ್ರಸ್ತುತವಾಗಲಾರದು.
ಮಿಲನ ಕ್ರಿಯೆಯಲ್ಲಿನ ತಮಾಷೆಯ ಅಂಶದ ಬಗ್ಗೆಯೂ ಕುಂದೇರಾ ಮತ್ತೊಂದು ಸಂದರ್ಭದಲ್ಲಿ ಪ್ರಸ್ತಾಪ ಮಾಡುತ್ತಾರೆ. ಅವರು ಹೇಳಿದ್ದು ಬೇರೆ ಕಾರಣಕ್ಕೆ. ಆ ಕಾರಣ ಸರ್ವವಿದಿತ, ವಿವರಣೆ ಅನಾವಶ್ಯಕ. ಆದರೆ, ತಮ್ಮನ್ನು ಹೋಲುವ ಯಾವುದೊ ಆಸಾಮಿ ಯಾವುದೊ ಅನಾಮಧೇಯ ಹೆಣ್ಣಿನೊಂದಿಗೆ ಕಳೆದ ದೃಶ್ಯಗಳು ಬಹಿರಂಗ ಗೊಂಡಿದ್ದಕ್ಕೆ ರಮೇಶ್ ಜಾರಕಿಹೊಳಿ ಸಚಿವ
ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ತಮಾಷೆಯಾಗೇ ಕಾಣುತ್ತದೆ. ಟೆಡ್ಡಿ ಪಿಯರ್ಸ್ ಸಜ್ಜದಿಂದ ಜಿಗಿದು ಬಲೆಗೆ ಬೀಳುವಾಗ ಪ್ರೇಕ್ಷಕರು ಕಂಡ ತಮಾಷೆಯಂತೆ.
ಸಿಡಿ ಪ್ರಕರಣದ ಹಿಂದೆ ಐದು ಕೋಟಿ ವಹಿವಾಟಾಗಿದೆ ಎಂದು ಸಿನೆಮಾ ನಿರ್ಮಾಪಕರೂ ಆದ ಮಾಜಿ ಮುಖ್ಯಮಂತ್ರಿ
ಎಚ್.ಡಿ. ಕುಮಾರಸ್ವಾಮಿ ಅವರು ಭರವಸೆಯಿಂದ ನುಡಿದಿzರೆ. ಅನುಭವೀ ರಾಜಕಾರಣಿಯಿಂದ ಬಂದ ಆ ಮಾತು ತಮಾಷೆಗೆ ಹೇಳಿದಂತೆ ಕಾಣುವುದಿಲ್ಲ. ಹಾಗೆಯೇ, ಜನಾಭಿಪ್ರಾಯದ ಸುನಾಮಿಯೇ ಜಾರಕಿಹೊಳಿ ವಿರುದ್ಧ ಉದ್ಭವವಾಗಿರುವ ಸಂದರ್ಭದಲ್ಲಿ ಅವರ ಪರವಾಗಿ ನಡೆದಿರುವ ಪ್ರತಿಭಟನೆಯೂ ತಮಾಷೆಗೆ ಮಾಡಿದಂತೆ ಕಂಡುಬರುವುದಿಲ್ಲ.
ತಮ್ಮ ನಾಯಕನ ಚಾರಿತ್ರ್ಯವನ್ನು ಸ್ಥಳೀಯರಿಗಿಂತ ಚೆನ್ನಾಗಿ ಹೊರಗಿನವರು ಅರಿಯಲು ಸಾಧ್ಯವೇ? ಒಂದು ವೇಳೆ ಅದರಲ್ಲಿರುವ ವ್ಯಕ್ತಿ ಜಾರಕಿಹೊಳಿಯೇ ಆಗಿದ್ದರೂ ಬ್ರಹ್ಮಚರ್ಯ ಪರಿಪಾಲನೆಯ ಪರೀಕ್ಷೆಗೆ ಅವರು ತಮ್ಮನ್ನು ತಾವು ಒಡ್ಡಿಕೊಂಡಿರಲಿಕ್ಕೂ ಸಾಕು.