Saturday, 14th December 2024

ರಮಜಾನ್ ತಿಂಗಳು ಮತ್ತು ಮಧ್ಯಂತರ ಉಪವಾಸ

ವಿದೇಶವಾಸಿ

dhyapaa@gmail.com

ರಮಜಾನ್ ತಿಂಗಳು ಇಸ್ಲಾಂ ಧರ್ಮದ ನಾಲ್ಕನೆಯ ಸ್ತಂಭ. ಆ ತಿಂಗಳಿನಲ್ಲಿ ಮಾಡುವ ಉಪವಾಸ ಎಂದರೆ ಹೊಟ್ಟೆಯ ಜತೆಗೆ ತನ್ನ ಇಂದ್ರಿಯ ಗಳನ್ನೂ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಉಪವಾಸ ಸ್ವಯಂ ನಿಯಂತ್ರಣಕ್ಕೆ ಇರುವ ಒಂದು ವ್ಯಾಯಾಮ. ಇದು ಒಂದು ಭಾಗ. ಉಪವಾಸ ಇದ್ದಾಗ ಮಾತ್ರ ಹಸಿವಿನ ಅನುಭವವಾಗುತ್ತದೆ.

‘ಇನ್ನೇನು ರಮಾದಾನ್ ತಿಂಗಳು ಆರಂಭವಾಗುತ್ತದೆ. ಇನ್ನು ಬೆಳಗಿನ ತಿಂಡಿಗೆ, ಮಧ್ಯಾಹ್ನದ ಊಟಕ್ಕೆ ಏನಪ್ಪಾ ಮಾಡುವುದು? ಸೂರ್ಯೋದಯ ಆದ ಕ್ಷಣದಿಂದ ಸೂರ್ಯಾಸ್ತ ಆಗುವವರೆಗೆ ಸಾರ್ವಜನಿಕವಾಗಿ ಏನನ್ನೂ ತಿನ್ನುವಂತಿಲ್ಲ, ಕುಡಿಯುವಂತಿಲ್ಲ. ಹೊಟೇಲು, ಚಹಾದ ಅಂಗಡಿಗಳು
ಮುಚ್ಚಿರುವಾಗ ಹೊಟ್ಟೆ ತುಂಬಿಸಿಕೊಳ್ಳುವುದಾದರೂ ಹೇಗೆ? ಹೋಗಲಿ ಅಂಗಡಿಗಳು ತೆರೆದಿದ್ದು, ಬಿಸ್ಕತ್ತು, ಬ್ರೆಡ್, ಚಾಕಲೇಟ್, ಕೇಕ್, ಜ್ಯೂಸ್ ಇತ್ಯಾದಿ ಸಿಕ್ಕರೂ ಅಲ್ಲಿಯೇ ತಿನ್ನುವಂತಿಲ್ಲ, ಕುಡಿಯುವಂತಿಲ್ಲ.

ಇರಲಿ, ಕಾರಿನ, ಪಾರ್ಕಿನ ಕುಳಿತು ಹೊಟ್ಟೆ ತುಂಬಿಸಿಕೊಳ್ಳೋಣವೇ ಎಂದರೆ, ಊಹೂಂ… ಅದೂ ಸಾಧ್ಯವಿಲ್ಲ. ಮಕ್ಕಳು, ವಯಸ್ಕರು, ಗರ್ಭಿಣಿ ಯರು, ರೋಗಿಗಳು ಮತ್ತು ಪ್ರಯಾಣದಲ್ಲಿರುವವರಿಗೆ ಮಾತ್ರ ಇದರಿಂದ ವಿನಾಯತಿ. ಹಾಗಂತ ಕಚೇರಿಯಿಂದ ಮನೆಗೆ ಹೋಗುವುದಾಲಿ, ಹತ್ತಿರದ ತಿರುಗಾಟವನ್ನಾಗಲಿ ಪ್ರಯಾಣ ಎಂದು ಪರಿಗಣಿಸಲಾಗುವುದಿಲ್ಲ. ಪ್ರಯಾಣ ಏನಿದ್ದರೂ ದೂರದ ಅಥವಾ ಅಂತಾರಾಷ್ಟ್ರೀಯ ಮಟ್ಟದ್ದಾಗಿರಬೇಕು’. ‘ಈ ಒಂದು ತಿಂಗಳು ಹಗಲಿನಲ್ಲಿ ಉದರೋಪ ಚಾರದ ಕಾರ್ಯ ಏನಿದ್ದರೂ ಮನೆಯ ಒಳಗೆ ಮಾತ್ರ. ಕಚೇರಿಯಲ್ಲಿ ವರ್ಷದ ಹನ್ನೊಂದು ತಿಂಗಳು ನಗುತ್ತಲೇ ಕುದಿಯುವ ಚಹಾ ಕಿತ್ತಲಿಗೂ ಇದೊಂದು ತಿಂಗಳು ರಜೆ. ಚಹಾ ಬಿಡಿ, ಕಚೇರಿಯ ಒಳಗೂ ಹೊರಗೂ ನೀರನ್ನೂ ಕುಡಿಯುವಂತಿಲ್ಲ ಎಂದರೆ ದೊಡ್ಡ ಕಷ್ಟ ಮಾರಾಯ್ರೆ.’

ನಾನು ಸೌದಿ ಅರೇಬಿಯಾಕ್ಕೆ ಬಂದ ಹೊಸತರಲ್ಲಿ, ಮುಸ್ಲಿಂ ಸಮುದಾಯದವರನ್ನು ಹೊರತುಪಡಿಸಿ, ಉಳಿದವರ ಬಾಯಲ್ಲಿ ಈ ಮಾತುಗಳು ಸಾಮಾನ್ಯವಾಗಿತ್ತು. ಕೆಲವರು ಹೇಳದಿದ್ದರೂ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದರು. ಆಗ ಮಾತ್ರ ಎಂದಲ್ಲ, ಇವತ್ತಿಗೂ ಅದು ಮುಂದುವರಿದಿದೆ. ಸೌದಿ ಅರೇಬಿಯಾ ಮಾತ್ರವಲ್ಲ, ಎಲ್ಲ ಕೊಲ್ಲಿ ರಾಷ್ಟ್ರಗಳಲ್ಲಿ ಅಥವಾ ಮುಸ್ಲಿಂ ರಾಷ್ಟ್ರಗಳಲ್ಲಿ ‘ರಮದಾನ್’ (ಅಥವಾ ರಮಜಾನ್ ತಿಂಗಳು) ಅಂದರೆ
ಹೀಗೆಯೇ. ಹಗಲಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಇನ್ನೊಬ್ಬರಿಗೆ ಕಾಣುವಂತೆ ಆಹಾರ ಸೇವನೆ ನಿಷೇಧ. ಯಾಕೆಂದರೆ ಮುಸ್ಲಿಮರು ಉಪವಾಸ
ಆಚರಿಸುವ ತಿಂಗಳು ಅದು. ಹಾಗಾದರೆ ‘ಮುಸ್ಲಿಂ ಧರ್ಮಕ್ಕೆ ಸೇರದವರು ತಿನ್ನಬಹುದಲ್ಲ’ ಎಂಬ ವಾದ ಬೇಡ.

ಏಕೆಂದರೆ ಅದು ಈ ನೆಲದ ಕಾನೂನು. ಅಲ್ಲಿ ಇರಬೇಕು ಎಂದರೆ, ಇರುವಷ್ಟು ದಿನ ಅಲ್ಲಿಯ ಕಾನೂನನ್ನು ಗೌರವಿಸಬೇಕು, ಅದಕ್ಕೆ ತಕ್ಕಂತೆ, ಹೊಂದಿಕೊಂಡು ನಡೆಯಬೇಕು ಅಷ್ಟೇ. ಉಪವಾಸ ವೃತವನ್ನು ಅನ್ಯಧರ್ಮೀಯರೂ ಪಾಲಿಸಲೇ ಬೇಕು ಎನ್ನುವ ಕಟ್ಟುನಿಟ್ಟಿನ ಕಾನೂನು ಇಲ್ಲ. ಮನೆಯ ಒಳಗೆ ಯಾವ ನಿರ್ಬಂಧವೂ ಇಲ್ಲ. ಇದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಇಲ್ಲೂ ಒಂದು ಸಣ್ಣ ಸಮಸ್ಯೆ ಇದೆ. ಮನೆ
ಇದ್ದರೆ, ಮನೆಯಲ್ಲಿ ಹೆಂಡತಿ ಇದ್ದರೆ ಅಥವಾ ಕೊನೆ ಪಕ್ಷ ಸ್ವಂತ ಅಡುಗೆ ಮಾಡಿಕೊಳ್ಳುವ ವ್ಯವಸ್ಥೆ ಇದ್ದರೆ, ಮಧ್ಯಾಹ್ನ ಊಟದ ವೇಳೆ ಮನೆಗೆ ಹೋಗಿ ಬರುವ ವ್ಯವಸ್ಥೆ ಇದ್ದರೆ ಸರಿ.

ಇಲ್ಲವಾದರೆ? ಈ ಭಾಗದಲ್ಲಿ ಉದ್ಯೋಗಕ್ಕೆ ಬರುವವರೆಲ್ಲ ಸಂಸಾರ ಸಮೇತರಾಗಿ ಬರುವುದಿಲ್ಲ. ಬಹುತೇಕ ಕೂಲಿ ಕಾರ್ಮಿಕರು, ಹೊಟೇಲ್, ಅಂಗಡಿಯಲ್ಲಿ ಕೆಲಸಕ್ಕೆ ಬರುವವರು, ಮಾರಾಟ ಪ್ರತಿನಿಧಿಗಳು, ಇವರೆಲ್ಲ ತಮ್ಮ ಸಂಸ್ಥೆ ಒದಗಿಸಿಕೊಡುವ ಕ್ಯಾಂಪ್ ಅಥವಾ ಮನೆಯಲ್ಲಿ
ಉಳಿದು ಕೊಳ್ಳುವವರು. ಅಂಥವರಿಗೆ ಆಹಾರವನ್ನೂ ಸಂಸ್ಥೆಯೇ ಒದಗಿಸುತ್ತದೆ. ಅಂಥವರಿಗೆ ಕೆಲಸದ ನಡುವೆ ಮನೆಗೆ ಬರುವ ಅವಕಾಶವಾಗಲಿ, ಅಡುಗೆ ಮಾಡಿಕೊಳ್ಳುವ ಅವಕಾಶವಾಗಲಿ ಇರುವುದಿಲ್ಲ. ಈ ಉಪವಾಸ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಮಾಡಬೇಕಾದ ಕ್ರಿಯೆ ಎಂದು ಭಾವಿಸುವವರು ಅನೇಕರಿದ್ದಾರೆ.

ಸೌದಿ ಅರೇಬಿಯಾಕ್ಕೆ ಮೊದಲು ಬಂದಾಗ, ಉಪವಾಸ ಕಷ್ಟ ಎಂದು ತಿಳಿಯುವ ಅನೇಕರಲ್ಲಿ ನಾನೂ ಒಬ್ಬನಾಗಿದ್ದೆ. ಇತ್ತೀಚಿನ ವರ್ಷಗಳಲ್ಲಿ
ಒಂದು ತಿಂಗಳ ಉಪವಾಸವನ್ನು ಸಹಿಸಿಕೊಂಡಿದ್ದೇನೆ, ರೂಢಿಸಿಕೊಂಡಿದ್ದೇನೆ ಎನ್ನುವುದಕ್ಕಿಂತ ಇಷ್ಟಪಡುತ್ತಿದ್ದೇನೆ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆ,
ಹೇಗೆ ಎಂಬುದನ್ನು ಹೇಳುತ್ತೇನೆ. ಧರ್ಮದಲ್ಲಿ ವಿಜ್ಞಾನ ಕೆದಕಬಾರದು, ವಿಜ್ಞಾನದಲ್ಲಿ ಧರ್ಮ ಹುಡುಕಬಾರದು ಎಂಬ ಮಾತಿದೆ. ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಆಚರಣೆಗಳಲ್ಲಿ ವಿಜ್ಞಾನ ಅಡಗಿದೆ ಅಥವಾ ಅವೆಲ್ಲ ಮೂಢನಂಬಿಕೆಗಳು ಎನ್ನುವ, ಎರಡೂ ವರ್ಗದ ಜನ ಭೂಮಿಯ ಮೇಲೆ ಇದ್ದಾರೆ.

ಭೂಮಿ ಇರುವವರೆಗೂ ಇಂಥವರು ಇದ್ದೇ ಇರುತ್ತಾರೆ. ಕೆಲವರ ನಂಬಿಕೆ ಕೆಲವರಿಗೆ ಮೂಢನಂಬಿಕೆಯಾಗಿಯೂ ಕೆಲವರ ಮೂಢನಂಬಿಕೆ ಉಳಿದವರಿಗೆ ವಿಚಿತ್ರವಾಗಿಯೂ ಕಂಡೀತು. ಎಷ್ಟೋ ಬಾರಿ ನಮ್ಮ  ‘ಆಚರಣೆ’ ಎಂಬ ಹಳೆಯ ಸರಕಿಗೆ ಆಧುನಿಕತೆಯ ಲೇಪ ಮೆತ್ತಿ ನಮಗೇ ಹಿಂತಿರುಗಿಸಿದ್ದೂ ಇದೆ. ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿದ ವಿಷಯಕ್ಕೆ, ಪೂರ್ವಜರು ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದ ಆಚರಣೆಗೆ ಮಣೆ ಹಾಕದ ನಾವು ಅದೇ ವಸ್ತು ಆಧುನಿಕತೆಯ ಡಬ್ಬಿಯಲ್ಲಿ ಬಂದಾಗ ಅಡುಗೆಮನೆಯವರೆಗೂ ಕೊಂಡೊಯ್ಯುತ್ತೇವೆ, ಅದನ್ನೇ ಮೃಷ್ಟಾನ್ನವೆಂದು ಸವಿಯುತ್ತೇವೆ. ಇರಲಿ, ಧರ್ಮ ನಿಲ್ಲುವುದು, ನಡೆಯುವುದು ನಂಬಿಕೆಯ ಮೇಲೆಯೇ ಹೊರತು, ಇನ್ಯಾವುದರ ಮೇಲೆಯೂ ಅಲ್ಲ. ಆದ್ದರಿಂದ ಆ ತರ್ಕವಾಗಲಿ, ಚರ್ಚೆಯಾಗಲಿ ಇಲ್ಲಿ ಬೇಡ.

ಮುಸ್ಲಿಂ ಕ್ಯಾಲೆಂಡರ್‌ನ ಒಂಬತ್ತನೆಯ ತಿಂಗಳು ರಮದಾನ್, ಅದು ಮುಸ್ಲಿಂ ಸಮುದಾಯದವರಿಗೆ ಪವಿತ್ರ ಮಾಸ. ಅವರು ಯಾವ ದೇಶದವರೇ
ಆದರೂ, ಯಾವ ದೇಶದಲ್ಲಿದ್ದರೂ ಉಪವಾಸವನ್ನು ಆಚರಿಸುತ್ತಾರೆ. ಮುಸ್ಲಿಂ ಬಾಹುಳ್ಯವಲ್ಲದ ದೇಶಗಳಲ್ಲಿ ಇದರ ತೀವ್ರತೆ ಅಷ್ಟು ತಿಳಿಯುವುದಿಲ್ಲ.
ಕೆಲವು ಕಡೆ ಅದು ಗಮನಕ್ಕೂ ಬರುವುದಿಲ್ಲ. ಆದರೆ ಉಪವಾಸ ಇಸ್ಲಾಂ ಧರ್ಮದ ಐದು ಪ್ರಮುಖ ಆಚರಣೆಗಳಲ್ಲಿ ಒಂದು. ಇಸ್ಲಾಂ ಧರ್ಮದ ಐದು
ಮೂಲ ಮತ್ತು ಪ್ರಮುಖ ಸ್ತಂಭಗಳೆಂದರೆ, ದೇವರಲ್ಲಿ ನಂಬಿಕೆ, ಪ್ರತಿನಿತ್ಯ ಐದು ಬಾರಿ ಪ್ರಾರ್ಥನೆ, ಸಮುದಾಯದ ಕಲ್ಯಾಣಕ್ಕಾಗಿ ಮಾಡುವ ದಾನ, ರಮಜಾನ್ ತಿಂಗಳಿನ ಉಪವಾಸ ಮತ್ತು ಪವಿತ್ರ ಕ್ಷೇತ್ರ ಮೆಕ್ಕಾಕ್ಕೆ ತೀರ್ಥಯಾತ್ರೆ. ಉಪವಾಸದ ಕುರಿತಾಗಿ ಹೇಳುತ್ತಿರುವುದರಿಂದ, ಉಳಿದದ್ದನ್ನು ಬಿಟ್ಟು, ಉಪವಾಸದ ಬಗ್ಗೆ ಸಣ್ಣ ಮಾಹಿತಿ ಇರಲಿ.

ನಾನು ತಿಳಿದಂತೆ ರಮಜಾನ್ ತಿಂಗಳು ಇಸ್ಲಾಂ ಧರ್ಮದ ನಾಲ್ಕನೆಯ ಸ್ತಂಭ. ಆ ತಿಂಗಳಿನಲ್ಲಿ ಮಾಡುವ ಉಪವಾಸ ಎಂದರೆ ಹೊಟ್ಟೆಯ ಜತೆಗೆ
ತನ್ನ ಇಂದ್ರಿಯಗಳನ್ನೂ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಉಪವಾಸ ಸ್ವಯಂ ನಿಯಂತ್ರಣಕ್ಕೆ ಇರುವ ಒಂದು ವ್ಯಾಯಾಮ. ಇದು ಒಂದು ಭಾಗ.
ಉಪವಾಸ ಇದ್ದಾಗ ಮಾತ್ರ ಹಸಿವಿನ ಅನುಭವವಾಗುತ್ತದೆ. ತನ್ಮೂಲಕ ಹಸಿದವರ ಬಗ್ಗೆ ಕಳಕಳಿ ಮೂಡಿ, ಅವರ ಹೊಟ್ಟೆ ತುಂಬಿಸಲು ಮನಸ್ಸು, ಕೈ
ಮುಂದಾಗುತ್ತದೆ.

ಮನುಷ್ಯ ಹಸಿದವರಿಗೆ ಊಟ ನೀಡಲು ಮುಂದಾಗುತ್ತಾನೆ. ತನ್ಮೂಲಕ ಮನುಷ್ಯ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಇದು ಇನ್ನೊಂದು ಭಾಗ. ಉಪವಾಸವನ್ನು ಖುರಾನ್ ಧರ್ಮಗ್ರಂಥ ಮಾತ್ರವಲ್ಲ, ಬಹುತೇಕ ಎಲ್ಲ ಧರ್ಮಗ್ರಂಥಗಳಲ್ಲೂ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ ನವರಾತ್ರಿ, ಶಿವರಾತ್ರಿ, ಏಕಾದಶಿ, ವಾರದಲ್ಲಿ ಒಂದು ದಿನ ಹೀಗೆ ಉಪವಾಸವನ್ನು ಉಲ್ಲೇಖಿಸಲಾಗಿದೆ, ಅದನ್ನು ಆಚರಿಸುವವರೂ ಇದ್ದಾರೆ. ಇರಲಿ, ಮೊದಲನೆಯ ವಿಷಯ ಒಂದನ್ನೇ ನೋಡೋಣ. ಹಸಿವು ಮತ್ತು ಖಾಲಿ ಹೊಟ್ಟೆ, ಇವೆರಡರ ನಡುವೆ ಅಂತರವಿದೆ. ಹಸಿವೆಯಾದಾಗ ದೇಹದಲ್ಲಿ ಶಕ್ತಿಯ ಸ್ಥರ ಕಡಿಮೆಯಾಗುತ್ತದೆ.

ಆದರೆ ಖಾಲಿ ಹೊಟ್ಟೆಯಲ್ಲಿ ಹಾಗಲ್ಲ. ಮನುಷ್ಯ ಖಾಲಿ ಹೊಟ್ಟೆಯಲ್ಲಿರುವಾಗ ಮನಸ್ಸು ಮತ್ತು ದೇಹ ಹೆಚ್ಚು ಉತ್ತಮವಾಗಿ ಕೆಲಸಮಾಡುತ್ತದೆ. ಆರೋಗ್ಯ ಎನ್ನುವುದು ಹೊರಗಿನಕ್ಕಿಂತ ಒಳಗಿಂದಲೇ ಹೆಚ್ಚು. ನಮಗೆ ಬರುವ ಶೇಕಡಾ ಐವತ್ತು ಪ್ರತಿಶತಕಾಯಿಲೆಗೆ ಮೂಲ ಹೊಟ್ಟೆ. ಅದರಲ್ಲಿ ಶೇಕಡಾ ಎಪ್ಪತ್ತಕ್ಕೊ ಹೆಚ್ಚು ಕಾರಣ ನಮ್ಮ ಆಹಾರ ಮತ್ತು ನಾವು ಅದನ್ನು ಸೇವಿಸುವ ಪದ್ಧತಿ ಎಂದು ಆಯುರ್ವೇದ ಹೇಳುತ್ತದೆ. ನಮ್ಮ ದೇಹದಲ್ಲಿರುವ ಕಲ್ಮಶ ಹೊರಗೆ ಹಾಕಲು ಉಪವಾಸ ಸಹಾಯಕಾರಿ ಎನ್ನುತ್ತದೆ. ಇತೀಚೆಗೆ ಪ್ರಚಲಿತದಲ್ಲಿರುವ ‘ಇಂಟೆರ್ಮಿಟೆಂಟ್ -ಸ್ಟಿಂಗ್’ ಅಥವಾ ಮಧ್ಯಂತರ ಉಪವಾಸದ ಪಾಠವೂ ಅದೇ ತಾನೆ? ವಯಸ್ಸಿಗೆ ಅನುಗುಣವಾಗಿ ಹನ್ನೆರಡರಿಂದ ಹದಿನಾರು ಗಂಟೆಯ ವರೆಗೆ ಉಪವಾಸ ಮಾಡಿ, ದೇಹವನ್ನು ‘ಡಿಟಾP’ ಆಗುತ್ತದೆ ಎಂದು ಮಧ್ಯಂತರ ಉಪವಾಸ ತಜ್ಞರು ಸಲಹೆ ನೀಡುತ್ತಾರೆ.

ನಾವೂ ಅದನ್ನು ಪ್ರಶ್ನೆ ಮಾಡದೆ ಒಪ್ಪುತ್ತೇವೆ. ನಮಗೆ ಗ್ರಂಥಗಳಿಗಿಂತ ತಜ್ಞರ ಮೇಲೇ ಹೆಚ್ಚು ನಂಬಿಕೆ. ಕಾರಣ ಧರ್ಮಗ್ರಂಥಗಳಲ್ಲಿ ಬರೆದದ್ದು, ಪೂರ್ಜರು ನಮಗೆ ಹೇಳಿದ್ದು ಪುಕ್ಕಟೆ. ಇದೇ ವಿಷಯವನ್ನು ಸಂಶೋಧನೆಯ ಹೆಸರಿನಲ್ಲಿ ನೂರಾರು ಕೋಟಿ ಖರ್ಚುಮಾಡಿ, ಅದಕ್ಕೆ ಸಂಬಂಧಿಸಿದ
ಗ್ರಾ-, ವಿಡಿಯೋ, ಪವರ್ ಪಾಯಿಂಟ್ ಪ್ರೆಸೆಂಟೇಷನ್, ಭಾವಚಿತ್ರಗಳು, ಉಪಯೋಗ ಪಡೆದವರ ಅಭಿಪ್ರಾಯಗಳನ್ನೆಲ್ಲ ಸಾಮಾಜಿಕ ಜಾಲತಾಣ ದಲ್ಲಿ ಹಾಕಿದರೆ ಅದಕ್ಕೆ ಎಲ್ಲಿಲ್ಲದ ಬೆಲೆ.

ನಾನು ತಿಳಿದಂತೆ, ಇವೆರಡರ ನಡುವೆ ಒಂದೇ ವ್ಯತ್ಯಾಸವೆಂದರೆ ಕಾಲಘಟ್ಟ. ಅಂದಿನ ಕಾಲದಲ್ಲಿ ಸಂಶೋಧನೆ ಇರಲಿಲ್ಲವೆಂದೇನಲ್ಲ. ಈ ಕುರಿತು
ಯಾರಾದರೂ ಸಂಶೋಧನೆ ಮಾಡಿರಲೇಬೇಕು.ಇಂತಹ ವಿಷಯಗಳೆಲ್ಲ ಕನಸಿನಲ್ಲಿ ಬರುವಂಥದ್ದಲ್ಲ. ಒಂದು ವೇಳೆ ಕನಸಿನಲ್ಲಿ ಬಂದರೂ ಅದು
ಸರಿಯೋ, ತಪ್ಪೋ ಎಂಬುದರ ಬಗ್ಗೆ ಅಧ್ಯಯನ ಅಲ್ಲದಿದ್ದರೂ, ಅವಲೋಕನವನ್ನಂತೂ ಮಾಡಿರಲೇಬೇಕು. ಅಷ್ಟರ ನಂತರವೂ, ಇದನ್ನು ತಿಳಿಸಲು
ಹೊರಟರೆ ಎಷ್ಟು ಜನ ಇದನ್ನು ಅರ್ಥಮಾಡಿಕೊಂಡಾರು? ವಿಜ್ಞಾನ, ಅಧ್ಯಯನಕ್ಕಿಂತಲೂ ಪವಾಡವನ್ನು ನಂಬುವ ಜನರಿಗೆ, ದೇವರ ಕುರಿತು
ಭಯ-ಭಕ್ತಿ ಇಟ್ಟುಕೊಂಡವರಿಗೆ, ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸುತ್ತಿದ್ದರು ಎಂದರೆ ತಪಾಗಲಿಕ್ಕಿಲ್ಲ.

ಇಂದಿಗೂ ಮಗು ಹಾಲು ಕುಡಿಯದಿದ್ದರೆ ಅಮ್ಮ ‘ಗುಮ್ಮ ಬರುತ್ತೆ’ ಎಂದು ಹೇಳುತ್ತಾಳಲ್ಲ. ಒಮ್ಮೆಯೂ ಗುಮ್ಮನನ್ನು ನೋಡದ ಮಗು ಗಟಗಟನೆ ಹಾಲು ಕುಡಿದು ಮುಗಿಸುತ್ತದಲ್ಲ. ಸಣ್ಣ ಮಗುವಿನ ಮುಂದೆ ಹಾಲಿನ ಗುಣಧರ್ಮ, ಕ್ಯಾಲ್ಸಿಯಂ, ಎಲುಬಿನ ಬೆಳವಣಿಗೆಗಳ ಕಡತ ಬಿಚ್ಚುತ್ತ ಹೊರಟರೆ ಅದಕ್ಕೆ ಏನು ಅರ್ಥವಾದೀತು? ಆದರೆ ಮಗುವಿಗೆ ಲಾಭವಾಯಿತು, ತಾಯಿಯ ಕೆಲಸ ಮುಗಿಯಿತು! ಧಾರ್ಮಿಕ ಉಪವಾಸ ಎನ್ನಿ, ಮಧ್ಯಂತರ ಉಪವಾಸ ಎನ್ನಿ, ಹೆಚ್ಚು ಕಮ್ಮಿ ಒಂದೇ.

ವ್ಯತ್ಯಾಸವೆಂದರೆ, ಬೊಜ್ಜು ಹೆಚ್ಚಾದಾಗ ಅಥವಾ ತೂಕ ಇಳಿಸಿಕೊಳ್ಳಲು ‘ಡಯಟೀಷಿಯನ್’ ಬಳಿ ಹೋಗುವ ನಾವು ನಮ್ಮ ಪುರಾತನ ಆಚರಣೆ ಯನ್ನು ನಂಬುವುದಿಲ್ಲ. ಈ ವಿಷಯ ಅರ್ಥವಾದಾಗಿನಿಂದ ನನಗೆ ಸೌದಿ ಅರೇಬಿಯಾದ ರಮದಾನ್ ತಿಂಗಳು ಕಷ್ಟ ಎಂದು ಅನಿಸಲಿಲ್ಲ. ಸೂರ್ಯೋ ದಯಕ್ಕಿಂತ ಮೊದಲು ತಿನ್ನದಿದ್ದರೂ, ಸೂರ್ಯಾಸ್ತ ಆದ ಕೂಡಲೇ ಉಪವಾಸ ಮುಗಿಸದಿದ್ದರೂ, ಹೊಟ್ಟೆ ಕಟ್ಟುವುದನ್ನು ಕಲಿತುಕೊಂಡೆ. ಅದರಿಂದ ನನ್ನ ಆರೋಗ್ಯದ ಮೇಲೆ ಆಗುವ ಪರಿಣಾಮ ಗಮನಿಸಿದೆ. ಒಂದು ವರ್ಷದ ಅವಧಿಯಲ್ಲಿ ದೇಹಕ್ಕೆ ಕೂಡಿ ಹಾಕುವ ಎರಡು-ಮೂರು ಕಿಲೋ ತೂಕವನ್ನು ಒಂದು ತಿಂಗಳ ಉಪವಾಸ ಮತ್ತು ಸಣ್ಣ ವ್ಯಾಯಾಮದ ಮೂಲಕ ಕಳೆದುಕೊಳ್ಳಬಹುದಾದರೆ ಯಾಕೆ ಬೇಡ? ಒಮ್ಮೆ ಇದು ಅರ್ಥವಾದರೆ ಹಸಿವು ಹೆಚ್ಚು ಬಾಧಿಸುವುದಿಲ್ಲ.

ಏಕೆಂದರೆ, ಮನುಷ್ಯನ ದೇಹ ಬಹಳ ಅಡ್ಜಸ್ಟೇಬಲ. ಯಾವುದಕ್ಕಾದರೂ ಬಹುಬೇಗೆ ಹೊಂದಿಕೊಳ್ಳುವ ಗುಣ ಅದಕ್ಕಿದೆ. ಆದ್ದರಿಂದಲೇ ಕೊಲ್ಲಿ ರಾಷ್ಟ್ರದ ಐವತ್ತು ಡಿಗ್ರೀ ತಾಪಮಾನದಲ್ಲಿ ಬದುಕುವ ಮನುಷ್ಯನೂ ಮೈನಸ್ ಇಪ್ಪತ್ತೈದು ಡಿಗ್ರೀ ತಾಪಮಾನ ಹೊಂದಿದ ಸೈಬೇರಿಯಾಕ್ಕೆ ಹೋಗಿ ಹೊಂದಿ ಕೊಳ್ಳುತ್ತಾನೆ. ಆದ್ದರಿಂದ ಕಳೆದ ಎರಡೂವರೆ ದಶಕದಿಂದ ಉಪವಾಸ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿಲ್ಲ. ನಮ್ಮ ಆರೋಗ್ಯಕ್ಕೆ ಒಳಿತಾಗುತ್ತದೆ ಎಂದಾದರೆ ವಿಜ್ಞಾನದ ಹೆಸರಾಗಲಿ, ಧರ್ಮದ ಲೇಪವಾಗಲಿ, ಯಾವ ಫರಕ್ಕೂ ಬೀಳುವುದಿಲ್ಲ. ಎಲ್ಲಾ ಪ್ರವಾಸದಲ್ಲಿರುವಾಗ, ಆರೋಗ್ಯ ಕೆಟ್ಟಾಗ ಬಿಟ್ಟರೆ ಉಳಿದಂತೆ ಊರಲ್ಲಿ ಇರುವಾಗ ಉಪವಾಸ ತಪ್ಪಿಸುವುದಿಲ್ಲ. ತಿನ್ನುವುದನ್ನು ರೂಢಿಸಿಕೊಳ್ಳುವುದು ಸುಲಭ. ತಿನ್ನುವು ದರಿಂದ ಖುಷಿಯಾಗುವುದೂ ನಿಜ.

ಉಪವಾಸ ಕಷ್ಟ ಎಂದೆನಿಸಬಹುದು, ಒಂದು ಹಂತದಲ್ಲಿ ಅದೂ ಖುಷಿಕೊಡುತ್ತದೆ. ದೇಹದ ವಿಷಯದಲ್ಲಿ ಒಂದು ವಿಷಯ ಸತ್ಯ. ಏನೆಂದರೆ, ಹೆಚ್ಚು ತಿನ್ನುವುದಕ್ಕಿಂತ ಕಡಿಮೆ ತಿನ್ನುವುದು ಒಳ್ಳೆಯದು. ಲೋಕದಲ್ಲಿ ಅನೇಕರು ಕಡಿಮೆ ತಿನ್ನುವುದರಿಂದಲೇ ಆರೋಗ್ಯವಂತರಾಗಿದ್ದಾರೆ.