Friday, 13th December 2024

Rangaswamy Mookanahally Column: ನಮಗೆ ಬೇಕಾದ್ದನ್ನು ಪಡೆವ ದಾರಿಯಿದು !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಜಗತ್ತಿನ ಮುಕ್ಕಾಲುಪಾಲು ಜನ ಮಾತಾಡಲು ಶುರು ಮಾಡಿದರೆ ಹೇಳುವುದು, “ನನಗೆ ಹಣದ ಕೊರತೆಯಿದೆ” ಎಂಬ ಮಾತನ್ನು. “ನನ್ನ ಬಳಿ ಸಮಯವಿಲ್ಲ” ಎನ್ನುವುದು ಇಂಥ ಎರಡನೆಯ ದೊಡ್ಡಮಾತು. ಹಣವಿಲ್ಲ, ಸಮಯವಿಲ್ಲ ಎನ್ನುವುದು ಶುದ್ಧಸುಳ್ಳು. ಆದ್ಯತೆಯ ಕೊರತೆಯಿಂದ ಉಂಟಾದ ಸ್ಥಿತಿಯಿದು!

ಕನ್ನಡದಲ್ಲಿ ಒಂದು ಆಡುಮಾತಿದೆ- ‘ಬಾಯಲ್ಲಿ ಆಡಿದ್ದು ಬೆನ್ನಿಗೆ ಮೂಲ’ ಎನ್ನುತ್ತದೆ ಆ ಮಾತು. ನಾವು ಗೊತ್ತಿದ್ದೋ ತ್ತಿಲ್ಲದೆಯೋ ಆಡುವ ಮಾತುಗಳು ನಮ್ಮ ಸುಪ್ತಮನಸ್ಸಿನಲ್ಲಿ ಬೇರೂರಿಬಿಡುತ್ತವೆ. ಸುಪ್ತಮನಸ್ಸು ಎನ್ನುವುದು ಒಂದು ಮಹಾಸಾಗರ. ಪ್ರಜ್ಞಾವಸ್ಥೆಯಲ್ಲಿರುವ ಮನಸ್ಸು 5 ಪ್ರತಿಶತವಾದರೆ, ಸುಪ್ತಾವಸ್ಥೆಯಲ್ಲಿನ ಮನಸ್ಸು 95 ಪ್ರತಿಶತ ಎನ್ನುತ್ತಾರೆ ಮನೋವಿಜ್ಞಾನಿಗಳು. ಹೀಗಾಗಿ, ನಾವಾಡುವ ಮಾತುಗಳು ನಮ್ಮ ಭವಿಷ್ಯವನ್ನು, ನಾವ್ಯಾರು ಎನ್ನುವುದನ್ನು ನಿರ್ಧರಿಸುತ್ತವೆ.

ಒಟ್ಟಾರೆ ನಮ್ಮ ಬದುಕು ನಾವಾಡುವ ಮಾತುಗಳ ಮೇಲೆ ನಿಂತಿದೆ. ಮಾತಿನಲ್ಲಿರುವ ಶಕ್ತಿಯನ್ನು ನಾವು ಅರಿಯಬೇಕಿದೆ. ನಮ್ಮಲ್ಲಿ ಬಹಳಷ್ಟು ಜನರು ಸ್ವತಃ ಇತರರ ಮುಂದೆ, “ನಾನು ಕೋಪಿಷ್ಠ, ನಾನು ಸೋಂಬೇರಿ, ನನಗೆ ಗಣಿತವೆಂದರೆ ಇಷ್ಟವಿಲ್ಲ, ನನಗೆ ಹಣದ ಮೇಲೆ ಮೋಹವಿಲ್ಲ” ಇತ್ಯಾದಿಯಾಗಿ ಹೇಳುವುದನ್ನು ಕೇಳಿರುತ್ತೇವೆ. ಈ ಪದಗಳನ್ನು ಪದೇಪದೆ ಆಡುತ್ತ ಸುಪ್ತಮನಸ್ಸು ಅದನ್ನು ನಂಬುತ್ತಾ ಹೋಗುತ್ತದೆ. ಆಗ ಆ ಮಾತುಗಳನ್ನು ಹೇಳಿದ್ದ ವ್ಯಕ್ತಿ ನಿಜವಾಗಿಯೂ ಕೋಪಿಷ್ಠನೋ, ಸೋಂಬೇರಿಯೋ ಆಗಿಬಿಡುತ್ತಾನೆ. ವಿಜ್ಞಾನ ಇದನ್ನು ಪುಷ್ಟೀಕರಿಸಿದೆ.
ಆದ್ದರಿಂದ ಆಡುವ ಮಾತುಗಳ ಮೇಲೆ ನಿಗ್ರಹ, ನಿಯಂತ್ರಣ ಹೊಂದುವುದು ಬಹಳ ಅವಶ್ಯಕ.

ಇನ್ನು ಧರ್ಮಶಾಸ್ತ್ರಗಳ ಪ್ರಕಾರ ಕೂಡ, ನಾವು ಕೆಟ್ಟ ಮಾತುಗಳನ್ನು ಋಣಾತ್ಮಕ ಮಾತುಗಳನ್ನು ಆಡಬಾರದು ಎನ್ನುತ್ತಾರೆ. ಇಲ್ಲಿ ಅವರು ಸುಪ್ತಮನಸ್ಸಿನ ಬದಲು ‘ಅಸ್ತು ದೇವತೆಗಳನ್ನು’ ಹೆಸರಿಸುತ್ತಾರೆ; ನಾವು ಏನು ಹೇಳುತ್ತೇವೆಯೋ ಅದಕ್ಕೆ ಅಸ್ತು ದೇವತೆಗಳು ‘ತಥಾಸ್ತು’ ಅನ್ನುತ್ತಾರೆ, ಹೀಗಾಗಿ ಅದು ನಿಜವಾಗುತ್ತದೆ ಎಂದು ಹೇಳುತ್ತಾರೆ.

“The only thing that’s keeping you from getting what you want is the story you keep telling yourself “, ಅಂದರೆ, “ನಿಮಗೇನು ಬೇಕೋ ಅದನ್ನು ಪಡೆಯಲು ಇರುವ ಏಕೈಕ ಮಾಧ್ಯಮವೆಂದರೆ, ನಿಮಗೆ ನೀವು ಹೇಳಿಕೊಳ್ಳುವ ಮಾತು/ಕಥೆ” ಎನ್ನುವ ಮಾತನ್ನು ಅಮೆರಿಕದ ಹೆಸರಾಂತ ಲೈಫ್ ಕೋಚ್ ಮತ್ತು ಬಿಸಿನೆಸ್ ಸ್ಟ್ರಾಟಜಿಸ್ಟ್ ಟೋನಿ ರಾಬಿನ್ಸ್ ಹೇಳುತ್ತಾರೆ. ಗಮನಿಸಿ ನೋಡಿ, ಮೇಲೆ ಹೇಳಿದ ಎಲ್ಲಾ‌ ಮಾತುಗಳ ಸಾರಾಂಶ ಮಾತ್ರ ಒಂದೇ- ಮಾತಿನ ಮೇಲೆ ನಿಗಾ ಇರಲಿ.

ಇದನ್ನೇ ನಮ್ಮಲ್ಲಿ, ‘ಮಾತು ಒಡೆದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಜಾಣನುಡಿಯಾಗಿ ಹೇಳಿದ್ದಾರೆ. ಆಡಿದ ಮಾತನ್ನು ನಾವು ಮರಳಿ ಪಡೆಯಲಾರೆವು. ಆದ್ದರಿಂದ, ಆಡುವುದಕ್ಕೆ ಮುನ್ನ ಹತ್ತು ಬಾರಿ ಯೋಚಿಸಬೇಕಾಗುತ್ತದೆ. ‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬ ಇನ್ನೊಂದು ಪ್ರಸಿದ್ಧ ನಾಣ್ಣುಡಿ ಯು, ನಮ್ಮ ಪೂರ್ವಜರು ಅದೆಷ್ಟು ಜ್ಞಾನಿಗಳಾಗಿ ದ್ದರು ಎಂಬುದಕ್ಕೆ ಒಂದು ಉದಾಹರಣೆ. ಇಲ್ಲಿ ಕೂಡ, ‘ತಪ್ಪು ಮಾತುಗಳನ್ನು ಆಡುವುದಕ್ಕಿಂತ ಸುಮ್ಮನಿರುವುದು ಮೇಲು’ ಎನ್ನುವ ಧ್ವನಿಯಿದೆ.

ಹೀಗಾಗಿ ಇಲ್ಲಿಯೂ ವಿವೇಚನಾಯುತ ಮಾತಿಗೆ ಪ್ರಥಮ ಸ್ಥಾನ. ಇದರ ಜತೆಗೆ, ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವ ಇನ್ನೊಂದು ಆಡುಮಾತು ಕೂಡ ಮಾತಿಗೆ ನಮ್ಮ ಸಮಾಜದಲ್ಲಿರುವ ಸ್ಥಾನವನ್ನು ಎತ್ತಿ ತೋರಿಸುತ್ತದೆ. ಸರಿಯಾಗಿ ಮಾತನಾಡಲು ಬಂದವನಿಗೆ ಶತ್ರುಗಳು ಇರುವುದಿಲ್ಲ, ಹೀಗಾಗಿ ಜಗಳವಾಡುವ ಪ್ರಮೇಯ ಉದ್ಭವಿಸುವುದಿಲ್ಲ ಎನ್ನುವುದನ್ನು ಈ ಆಡುಮಾತು ಹೇಳುತ್ತದೆ. ಒಟ್ಟಿನಲ್ಲಿ, ನಾವಾಡುವ ಮಾತುಗಳು Make or Break ಪರಿಸ್ಥಿತಿಯನ್ನು ತಂದಿಡುತ್ತವೆ ಎನ್ನುವುದು ವೇದ್ಯ.

ಬಾಯಲ್ಲಿ ಜೋರಾಗಿ ಆಡಬೇಕೆಂದೇನೂ ಇಲ್ಲ, ಮನಸ್ಸಿನಲ್ಲಿ ನಾವು ನಮ್ಮ ಬಗ್ಗೆ ಯಾವ ಕಲ್ಪನೆ ಕಟ್ಟಿಕೊಳ್ಳುತ್ತೇವೆ? ಯಾವ ಕಥೆಯನ್ನು ಉಣಬಡಿ
ಸುತ್ತಿದ್ದೇವೆ? ಎಂಬುದನ್ನೂ ಮನಸ್ಸು ನಂಬುತ್ತಾ ಹೋಗುತ್ತದೆ. ನನ್ನ ಮಗಳು ಅನನ್ಯ 9ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವಳ ತರಗತಿಯಲ್ಲಿ 27 ಮಕ್ಕಳಿದ್ದಾರೆ. ನೀವು ನಂಬುವುದಿಲ್ಲ, ಮೈಸೂರಿನಂಥ ನಗರದಲ್ಲಿ ಹತ್ತರಿಂದ ಹದಿನೈದು ಮಕ್ಕಳಿಗೆ ಪೋಷಕರಲ್ಲಿ ಒಬ್ಬರಿದ್ದರೆ, ಇನ್ನೊಬ್ಬರಿಲ್ಲ!

ಕೆಲವರದು ವಿಚ್ಛೇದನ, ಕೆಲವರದು ಸಪರೇಷನ್. ಮತ್ತೆ ಕೆಲವರನ್ನು ಕೋವಿಡ್ ಮಹಾಮಾರಿ ನುಂಗಿದೆ. ಹೆಸರು ಬೇಡ, ಅನನ್ಯಳ ಸ್ನೇಹಿತೆಯೊ
ಬ್ಬಳು ನಿತ್ಯವೂ ತಾನು ‘SHIT’ ಎನ್ನುತ್ತಿದ್ದಳಂತೆ. ಇದನ್ನು ಅನನ್ಯಳ ಮೂಲಕ ತಿಳಿದುಕೊಂಡ ನಾನು, “ಅವಳೇಕೆ ಶಿಟ್ ಎನ್ನುತ್ತಾಳೆ?” ಎಂದು ಕೇಳಿದೆ.

ಅನನ್ಯ ಹೇಳಿದ ಉತ್ತರ ನನಗೆ ಆಶ್ಚರ್ಯ ತರಿಸಿತ್ತು. ಆ ಮಗುವಿನ ಪೂರ್ಣ ಹೆಸರಿನಲ್ಲಿ ‘SHIT’ ಎಂಬ ಅಕ್ಷರಗಳು ಬರುತ್ತವೆ. ಅಪ್ಪನಿಲ್ಲದ ಬೇಸರ, ತಾನು ಪ್ರಯೋಜನವಿಲ್ಲದವಳು ಎಂಬ ಮನೋಭಾವ ಆಕೆಯಿಂದ ಆ ಮಾತುಗಳನ್ನು ಆಡಿಸಿದೆ. ತಕ್ಷಣ ನಾನು ಅನನ್ಯಳಿಗೆ, “ಅವಳು ಹೇಳಿದ್ದು ತಪ್ಪಿದೆ. ಅದರಲ್ಲಿ ‘ಖ’ ಎನ್ನುವ ಅಕ್ಷರ ಸೈಲೆಂಟ್. ಹೀಗಾಗಿ ನಿನ್ನ ಸ್ನೇಹಿತೆಗೆ ಹೇಳು- ಅವಳು ‘SHIT’ ಅಲ್ಲ, ‘HIT’ ಅಂತ” ಎಂಬ ಮಾತನ್ನು ಹೇಳಿದೆ. ಅವಳ ಸ್ನೇಹಿತೆ ಇಂದಿಗೆ ನನ್ನ ಸ್ನೇಹಿತೆಯೂ ಹೌದು. ಆ ಪುಟಾಣಿ ಹೃದಯದಲ್ಲಿ ಬೇಕಾಗಿರುವ ಒಳ್ಳೆಯ ಮಾತು, ಚಿಂತನೆ ಕಳೆದುಹೋಗಿತ್ತು, ಅಷ್ಟೇ. ಎಳವೆಯಲ್ಲಿ ನಮ್ಮ ಬಗ್ಗೆ ನಾವು ಆಡಿಕೊಳ್ಳುವ ಮಾತುಗಳು ಇನ್ನಷ್ಟು ಹೆಚ್ಚು ಪರಿಣಾಮಕಾರಿ. ಹೀಗಾಗಿ ನಾವು ನಮ್ಮ ಜತೆಜತೆಗೆ, ನಮ್ಮ ಮಕ್ಕಳ ಮೇಲೂ ಕಣ್ಣಿಟ್ಟಿರಬೇಕು. ನಮಗೇನು ಬೇಕೋ ಅದನ್ನು ನಿತ್ಯವೂ ಮನಸ್ಸಿಗೆ ಹೇಳುತ್ತಿರೋಣ- ನಾನು ಇನ್ನಷ್ಟು ಆರೋಗ್ಯವಂತನಾಗಬೇಕು, ಹಣವಂತನಾಗಬೇಕು, ವಿದ್ಯಾವಂತನಾಗಬೇಕು, ಪ್ರಸಿದ್ಧನಾಗಬೇಕು, ಲೋಕಕಲ್ಯಾಣ ಮಾಡಬೇಕು, ಮುಂದಿನ ವರ್ಷದಲ್ಲಿ ಎಂಬಿಎ ಮಾಡಬೇಕು, ವಿದೇಶ ಪ್ರವಾಸ ಹೋಗಬೇಕು- ಹೀಗೆ ಏನಾದರೂ ಸರಿಯೇ ಧನಾತ್ಮಕ ಮಾತುಗಳು ನಮ್ಮವಾಗಿರಲಿ.

ಇದನ್ನು ೩ ತಿಂಗಳ ಕಾಲ ಪಟ್ಟುಹಿಡಿದು ಪ್ರಯತ್ನಿಸಿ ನೋಡಿ, ಅಚ್ಚರಿಯ ಫಲಿತಾಂಶ ನಿಮ್ಮದಾಗುತ್ತದೆ. ನಾವಾಡುವ ಮಾತುಗಳು ನಮ್ಮನ್ನು ‘ಡಿಫೆನ್’ ಮಾಡುತ್ತವೆ. ಮಾತುಗಳಿಂದ ರಾಜ್ಯವನ್ನು ಕಟ್ಟಬಹುದು, ಒಡೆಯಲೂಬಹುದು.

ನೆನಪಿರಲಿ- ಅಸ್ತು ದೇವತೆಗಳು ‘ಅಸ್ತು’ ಎನ್ನುತ್ತಿರುತ್ತಾರೆ. ನಾವು ಬಾಯಲ್ಲಿ ಆಡಿದ್ದು ನಮ್ಮ ಬುಡಕ್ಕೆ ಬರುತ್ತದೆ. ಒಳಿತಾಡಿದರೆ ಒಳಿತು, ಕೆಡುಕಾಡಿದರೆ ಕೆಡುಕು. ಇಷ್ಟೆಲ್ಲಾ ಮಾತು ಏಕೆ ಹೇಳಬೇಕಾಯ್ತು ಗೊತ್ತಾ? ಎರಡು ದಿನಗಳ ಹಿಂದೆ ನಾನೊಬ್ಬರನ್ನು ಭೇಟಿಮಾಡಿದೆ. ಅವರು ತಮ್ಮ ಮಗನನ್ನು ಏಳನೆಯ ತರಗತಿಯಿಂದಲೇ ಷೇರು ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆಗಳಿಗೆ ತಯಾರುಮಾಡಲು ಹೆಮ್ಮೆಯಿಂದ ಶುರು ಮಾಡಿದ್ದರಂತೆ! ಆ ಹುಡುಗನಿಗೆ ಈಗ 21ರ ಹರೆಯ, ಪದವಿ ಮುಗಿಸುವ ಹಂತದಲ್ಲಿದ್ದಾನೆ. ತನ್ನ ಖರ್ಚುಗಳಿಗೆ, ಕಾಲೇಜಿನ ಫೀಸ್‌ಗೆ ಆತ
ಪೋಷಕರನ್ನು ಅವಲಂಬಿಸಿಲ್ಲ. ಈಗಾಗಲೇ ಆತ ತನ್ನ ಹಣವನ್ನು ತಾನು ಗಳಿಸಿಕೊಳ್ಳಲು ಶುರುಮಾಡಿದ್ದಾನೆ.

ಪದವಿ ಮುಗಿಸಿ, ‘ಕೆಲಸವಿಲ್ಲ, ಕೆಲಸ ಸಿಕ್ಕಿಲ್ಲ’ ಎಂದು ಕುಳಿತಿರುವ ಸಾವಿರಾರು ಹುಡುಗರ ಮಧ್ಯೆ ಈ ಹುಡುಗ ತನ್ನ ಬದುಕನ್ನು ಆಗಲೇ ಕಂಡುಕೊಂಡಿದ್ದಾನೆ. ಇದು ಹೇಗೆ ಸಾಧ್ಯವಾಯ್ತು? ಆ ಹುಡುಗನ ಪೋಷಕರು ಹೇಳಿದ ಮಾತುಗಳು ಮೇಲಿನ ಎಲ್ಲಾ ಸಾಲುಗಳನ್ನು ಬರೆಯಲು ಪ್ರೇರಣೆ. ಆ ಹುಡುಗನ ಪೋಷಕರಿಬ್ಬರಿಗೂ ಸಂಖ್ಯೆ ಅಂದರೆ ಅಷ್ಟಕ್ಕಷ್ಟೇ, ಹೀಗಾಗಿ ತಮ್ಮ ಮಗನಿಗೆ ಎರಡು ವರ್ಷದ ಮಗುವಿನಿಂದಲೇ, “ನಿನಗೆ ಸಂಖ್ಯೆಗಳು ಎಂದರೆ ಬಹಳ ಇಷ್ಟ, ನೀನು ಗಣಿತ ಮತ್ತು ಲೆಕ್ಕಾಚಾರಗಳಲ್ಲಿ ಬುದ್ಧಿವಂತ” ಎನ್ನುವ ಮಾತುಗಳನ್ನು ಆಡುತ್ತಿದ್ದರಂತೆ!

ಸಹಜವಾಗಿಯೇ ಆ ಮಗು ತನ್ನ ಅಪ್ಪ-ಅಮ್ಮ ಹೇಳಿದ್ದನ್ನೆಲ್ಲಾ ನಂಬುತ್ತಾ ಹೋಗಿದೆ. ಏಳನೆಯ ತರಗತಿಯ ವೇಳೆಗೆ ಮಗುವಿಗೆ ಸಂಖ್ಯೆಗಳ
ಸೆಳೆತ ಶುರುವಾಗಿದೆ. ಹೆತ್ತವರು ಮಾಡಿದ ಪ್ರಯೋಗ ಫಲ ಕೊಟ್ಟಿದೆ. ಒಂದು ‘ಸುಳ್ಳನ್ನು’ ಹತ್ತು ಬಾರಿ ಹೇಳುತ್ತಾ ಹೋದರೆ ಅದನ್ನು ‘ಸತ್ಯ’ ಎಂದು ಸಮಾಜ ನಂಬುತ್ತದೆ. ಪದೇಪದೆ ಅವವೇ ವಿಷಯಗಳನ್ನು ಪುನರಾವರ್ತನೆ ಮಾಡುವುದರ ಶಕ್ತಿ ಬಹುದೊಡ್ಡದು.

ಜಗತ್ತಿನ ಮುಕ್ಕಾಲುಪಾಲು ಜನ ಮಾತಾಡಲು ಶುರುಮಾಡಿದರೆ ಹೇಳುವುದು, “ನನಗೆ ಹಣದ ಕೊರತೆಯಿದೆ” ಎಂಬ ಮಾತನ್ನು. “ನನ್ನ ಬಳಿ
ಸಮಯವಿಲ್ಲ” ಎನ್ನುವುದು ಇಂಥ ಎರಡನೆಯ ದೊಡ್ಡಮಾತು. ಹಣವಿಲ್ಲ, ಸಮಯವಿಲ್ಲ ಎನ್ನುವುದು ಶುದ್ಧಸುಳ್ಳು. ಆದ್ಯತೆಯ ಕೊರತೆಯಿಂದ
ಉಂಟಾದ ಸ್ಥಿತಿಯಿದು! ಮನಸ್ಸಿಗೆ ಸರಿಯಾದ ಸೂಚನೆ ನೀಡದೆ ಇರುವುದರ ಫಲಿತಾಂಶವಿದು. ಆಟೋ ಹತ್ತಿ, ಎಲ್ಲಿಗೆ ಹೋಗಬೇಕು ಎಂಬುದನ್ನು
ಹೇಳದಿದ್ದರೆ ಆಟೋ ಡ್ರೈವರ್ ಎಲ್ಲಿಗೆ ಕರೆದುಕೊಂಡುಹೋಗಲು ಸಾಧ್ಯ? ನಮ್ಮ ಮನಸ್ಸಿಗೆ ಸರಿಯಾದ ಸೂಚನೆ ನೀಡದೆ ಇದ್ದರೆ, ಹಣ ಮತ್ತು
ಸಮಯ ಎರಡೂ ಇಲ್ಲ ಎನ್ನಿಸುವುದು ಸಾಮಾನ್ಯ. ಎಲ್ಲರಿಗೂ ಇರುವುದು ದಿನದಲ್ಲಿ 24 ಗಂಟೆಗಳು ಮಾತ್ರ, ಅದನ್ನು ಸರಿಯಾಗಿ ಪ್ಲಾನ್ ಮಾಡಬೇಕು. ಸೋಷಿಯಲ್ ಮೀಡಿಯಾದಲ್ಲಿ, ಅಕ್ಕಪಕ್ಕದವರ ಜತೆಯಲ್ಲಿ ನಿಂತು ಕೆಲಸಕ್ಕೆ ಬಾರದ ಹರಟೆಯಲ್ಲಿ ಸಮಯ ಹಾಳುಮಾಡಿ ಕೊಂಡು, ಮಾಡಬೇಕಾದ ಕೆಲಸಕ್ಕೆ ವೇಳೆಯಿಲ್ಲ ಎನ್ನುವ ನೆಪವನ್ನು ನೀಡಿದರೆ, ಸಮಯದ ಸದುಪಯೋಗ ಮಾಡಿಕೊಂಡಿಲ್ಲ ಎಂದರ್ಥವೇ ಹೊರತು ‘ಸಮಯವಿಲ್ಲ’ ಎಂದಲ್ಲ.

ನಾವು ಆದ್ಯತೆಯನ್ನು ಸರಿಯಾಗಿ ನಿಗದಿಪಡಿಸಿ ಕೊಂಡಿಲ್ಲ ಎಂಬುದು ಇದರರ್ಥ. ಬೆಳಗಿನ ನಡಿಗೆಗೆ, ಊಟ-ತಿಂಡಿಗೆ, ಸಿದ್ಧತೆಗೆ, ಓದಿಗೆ, ಓಡಾಟಕ್ಕೆ, ಕೆಲಸಕ್ಕೆ ಹೀಗೆ ವೇಳೆಯನ್ನು ನಮ್ಮ ಬದುಕಿನ ಓಘಕ್ಕೆ ತಕ್ಕಂತೆ ಸಿದ್ಧಪಡಿಸಿಕೊಳ್ಳಬೇಕು. ವೇಳೆಯನ್ನು ಮತ್ತು ಹಣವನ್ನು ಬೇಕಾಬಿಟ್ಟಿ ವ್ಯಯಿಸಿ ನಂತರ ‘ಸಮಯವಿಲ್ಲ’, ‘ಹಣವಿಲ್ಲ’ ಎನ್ನುವ ರಾಗ ಹಾಡಿದರೆ ಅದರಿಂದ ಪ್ರಯೋಜನವಿಲ್ಲ.

ಬದುಕಿಗೆ ಆದ್ಯತೆಗಳು ಅತ್ಯಂತ ಮುಖ್ಯವಾಗಿಬೇಕು. ಇನ್ನೊಂದು ಪ್ರಮುಖ ಅಂಶವೆಂದರೆ, ಒಬ್ಬೊಬ್ಬರ ಆದ್ಯತೆಗಳ ಪಟ್ಟಿ ಬೇರೆ ಬೇರೆ ಇರುತ್ತದೆ.
ಹೀಗಾಗಿ ಪ್ರತಿಯೊಬ್ಬರೂ ತಮ್ಮ ಬದುಕಿಗೆ ಅನುಗುಣವಾಗಿ ಆದ್ಯತೆಯ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಆದ್ಯತೆಯ ಪಟ್ಟಿಯಿಲ್ಲದೆ ಮಾಡುವ
ಯಾವ ಕೆಲಸವೂ ಪರಿಪೂರ್ಣವಲ್ಲ. ನಾಳೆಗೆ ಬೇಕಿರುವುದು ಮಕ್ಕಳ ಶಾಲೆಗೆ ಪಾವತಿಸಬೇಕಿರುವ ಫೀಸು; ಅದನ್ನು ಮರೆತು ಅಥವಾ ಆದ್ಯತೆಯ ಪಟ್ಟಿಯಲ್ಲಿ ಅದಕ್ಕೆ ಕೊನೆಯ ಸ್ಥಾನ ಕೊಟ್ಟು, ಪ್ರವಾಸಕ್ಕೆ ಹೊರಟರೆ ಏನಾಗುತ್ತದೆ ಹೇಳಿ? ಆದ್ಯತೆಯಲ್ಲಿ ತಪ್ಪಾಗಿರುವುದರಿಂದ ಬದುಕು ಪಲ್ಲಟ ವಾಗುತ್ತದೆ. ಹೀಗಾದಾಗ ‘ಹಣವಿಲ್ಲ’ ಎನ್ನುವ ಗೊಣಗಾಟ ಶುರುವಾಗುತ್ತದೆ.

ನನಗೇನು ಬೇಕು? ಈ ಬದುಕಿನಿಂದ ನಾನು ಏನನ್ನು ಬಯಸುತ್ತಿದ್ದೇನೆ? ಬಯಸಿದ ಬದುಕನ್ನು ಪಡೆಯಲು ದಾರಿ ಯಾವುದು? ಆ ದಾರಿಯಲ್ಲಿ
ನಡೆಯುವಾಗ ಪ್ರಥಮವಾಗಿ ಮಾಡಬೇಕಾದ ಕೆಲಸಗಳಾವುವು? ಹೀಗೆ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ನೆನಪಿರಲಿ- ನಾವೆಲ್ಲರೂ ನಮ್ಮನ್ನು ನಾವು ಬುದ್ಧಿವಂತರು ಎಂದುಕೊಳ್ಳುತ್ತೇವೆ, ಎಲ್ಲವೂ ನೆನಪಿನಲ್ಲಿರುತ್ತದೆ ಎಂದುಕೊಳ್ಳುತ್ತೇವೆ. ಆದರೆ ಇದು ತಪ್ಪು. ಸರಿಯಾದ ಪಟ್ಟಿ ಸಿದ್ಧವಿದ್ದರೆ, ಅದರಂತೆ ನಾವು ಕ್ರಮವಾಗಿ ಸಾಗುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬಹುದು. ಹಾಗೊಮ್ಮೆ ತಪ್ಪಿದ್ದರೆ ಅದನ್ನು ಸರಿಪಡಿಸಿಕೊಂಡು ಸಾಗಲು ಕೂಡ ಅದು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Rangaswamy Mookanahally Column: ಸೋಲಲೇಬಾರದೆಂಬ ಧೋರಣೆ ತರವಲ್ಲ !