Friday, 13th December 2024

Rangaswamy Mookanahally Column: ಬದಲಾವಣೆಗೆ ಒಗ್ಗಿಕೊಳ್ಳುವುದು ಜಾಣತನ !

rangaswamy column

ವಿಶ್ವರಂಗ ಅಂಕಣ: ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ

  • ರಂಗಸ್ವಾಮಿ ಮೂಕನಹಳ್ಳಿ

ನನ್ನ ಬದುಕು ಹೀಗಿರಬೇಕು , ಹಾಗಿರಬೇಕು ಎಂದು ಕನಸು ಕಾಣುವವರು ಬದಲಾವಣೆಗೆ ಸಿದ್ಧರಾಗಿರಬೇಕು. ಉಳಿದವರು ಸಿದ್ಧರಾಗಬೇಕಾದ ಅವಶ್ಯಕತೆ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವಾಗುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಸಲು ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ. ರಾಮ ಮತ್ತು ಭೀಮ ಇಬ್ಬರೂ ಒಳ್ಳೆಯ ಸ್ನೇಹಿತರು. ರಾಮನಿಗೆ ಜಗತ್ತನ್ನೆಲ್ಲಾ ಗೆಲ್ಲುವ ಆಸೆ , ಭೀಮನಿಗೆ ಊರೇ ಪ್ರಪಂಚ ಅವನಿಗೆ ಏನೂ ಬೇಡ. ಎರಡು ಹೊತ್ತು ಊಟ , ಸ್ನೇಹಿತರ ಜೊತೆ ಮಾತು , ಒಡನಾಟ ಸಾಕು. ಜಗತ್ತನ್ನು ಗೆಲ್ಲುವವನಿಗೆ ಜಗತ್ತಿನ ಅಸ್ಥಿರತೆಯನ್ನು ಅರಗಿಸಿಕೊಳ್ಳುವ ಶಕ್ತಿ ಇರಬೇಕು. ರಾಮ ದೊಡ್ಡ ದೊಡ್ಡ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಭೀಮ ಕೂಡ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಬದುಕಿಗೆ ಬೇಕಾಗುವ ಬದಲಾವಣೆಗಳಿಗೆ ಒಗ್ಗಿಕೊಳ್ಳಲೇಬೇಕು. ಒಟ್ಟಿನಲ್ಲಿ ನಾವೆಲ್ಲರೂ ಬದಲಾವಣೆಗಳಿಗೆ ಒಗ್ಗಿಕೊಳ್ಳದೆ ಬೇರೆ ದಾರಿಯಿಲ್ಲ.

ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ. ನಾವಿರುವ ಪರಿಸ್ಥಿತಿ ಎಷ್ಟೇ ಚಂದವಿರಲಿ ಅದು ಬದಲಾಗುತ್ತದೆ. ಬದಲಾಗಬೇಕು , ಇಲ್ಲದಿದ್ದರೆ ನಾವೇ ಬದಲಾಯಿಸುತ್ತೇವೆ. ನಾವು ಓದುತ್ತಿರುವ ಪುಸ್ತಕದ ಒಂದು ಅಧ್ಯಾಯದಲ್ಲಿನ ಪುಟದಲ್ಲಿ ಒಳ್ಳೆಯ ಮಾಹಿತಿ ಇದ್ದು ಅದನ್ನು ಓದಿ ಬಹಳ ಮುದಗೊಂಡಿರುತ್ತೀರಿ . ಆದರೆ ಎಷ್ಟು ಸಮಯ ಅದೇ ಹಾಳೆಯಲ್ಲಿ ಉಳಿಯಬಹುದು , ಮುಂದಿನ ಪುಟಕ್ಕೆ ಹೋಗಲೇಬೇಕು , ಪುಟ ತಿರುಗಿಸದೆ ವಿಧಿಯಿಲ್ಲ. ಬದುಕು ಹಾಗೆ ಬದಲಾಗಬೇಕು , ಬದಲಾವಣೆಗೆ ಒಗ್ಗಿಕೊಳ್ಳಬೇಕು.

ನಾವು ಬದಲಾವಣೆಗೆ ಒಗ್ಗಿಕೊಳ್ಳದಿದ್ದರೆ ಏನಾಗುತ್ತದೆ ? ಎನ್ನುವುದಕ್ಕೆ ಚರಿತ್ರೆಯಲ್ಲಿ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ನೋಕಿಯಾ ಮೊಬೈಲ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿತ್ತು . ಬದಲಾವಣೆಯನ್ನು ಗಮನಿಸಿದ ಕಾರಣ ಮಾರುಕಟ್ಟೆಯಲ್ಲಿ ಹಿಂದೆ ಬಿದ್ದಿತು. ಹಾಗೆ ಕೊಡಕ್ ಎನ್ನುವ ಕ್ಯಾಮರಾ ಉತ್ಪಾದಿಸುತ್ತಿದ್ದ ಸಂಸ್ಥೆಯ ಕಥೆ ಕೂಡ , ಡಿಜಿಟಲ್ ಮಾರುಕಟ್ಟೆಗೆ ಈಗೀಗ ಅವರು ಹೊಂದಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಇನ್ನೊಂದು ಸಣ್ಣ ಕಥೆಯಿದೆ. ಒಂದೂರಿನಲ್ಲಿ ಮೂರು ಕತ್ತೆಗಳಿದ್ದವಂತೆ , ಅವುಗಳು ಬೀಡಾಡಿ ಕತ್ತೆಗಳು. ಅಂದರೆ ಅವಕ್ಕೆ ಮಾಲೀಕನಿರಲಿಲ್ಲ. ಹೀಗಾಗಿ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದವು. ಹೀಗಿರುವಾಗ ಅವುಗಳಿಗೆ ಊರಿನ ಹೊರಗೆ ಒಂದು ಜಾಗದಲ್ಲಿ ನಿತ್ಯವೂ ಜನರು ತಿಂದು ಬಿಸಾಡಿದ ಊಟದ ಜೊತೆಗೆ ಬಾಳೆ ಎಲೆ ಕೂಡ ಸಿಗುತ್ತಿತ್ತು. ಅವುಗಳನ್ನು ತಿಂದು ಕತ್ತೆಗಳು ಬಹಳ ಖುಷಿಯಾಗಿದ್ದವು. ಹೀಗೆ ಒಂದಷ್ಟು ವರ್ಷ ಕಳೆಯುತ್ತದೆ. ಆ ಊರಿನಲ್ಲಿ ಕೆಲಸದ ಕೊರತೆ ಉಂಟಾಗುತ್ತದೆ. ಹೀಗಾಗಿ ಊರ ಹೊರಗೆ ನೆಲಸಿದ್ದ ಜನ ಬೇರೆ ಊರಿಗೆ ವಲಸೆ ಹೋಗುತ್ತಾರೆ. ಕತ್ತೆಗಳಿಗೆ ಇದು ಗೊತ್ತಾಗುವುದಿಲ್ಲ. ಒಂದೆರೆಡು ದಿನ ಊಟ ಸಿಗದೇ ಅವು ಬೇಸರಗೊಳ್ಳುತ್ತವೆ. ಆಗ ಅವುಗಳಲ್ಲಿ ಒಂದು ಕತ್ತೆ ನನಗ್ಯಾಕೋ ಇನ್ನ್ಮುಂದೆ ಊಟ ಸಿಗುವುದಿಲ್ಲ ಎನ್ನಿಸುತ್ತಿದೆ , ಆಹಾರ ಹುಡುಕಿ ಬೇರೆಡೆಗೆ ಹೋಗಬೇಕು ಎನ್ನುತ್ತದೆ. ಅದಕ್ಕೆ ಉಳಿದೆರೆಡು ಕತ್ತೆಗಳು ನಗುತ್ತವೆ. ಜನ ಮರೆತಿದ್ದಾರೆ. ನಾಳೆ ಖಂಡಿತ ಇಲ್ಲಿ ಎಲ್ಲವೂ ಸಿಗುತ್ತದೆ ಎನ್ನುತ್ತವೆ. ಮೊದಲನೇ ಕತ್ತೆ ಆಹಾರ ಹುಡುಕಲು ಹೊರಡುತ್ತದೆ. ಇನ್ನೊಂದೆರೆಡು ದಿನ ಕಳೆಯುತ್ತದೆ , ಊಟದ ವಾಸನೆ ಕೂಡ ಇಲ್ಲ . ಎರಡನೇ ಕತ್ತೆ ಊಟ ಹುಡುಕಿ ಹೋಗೋಣ ಎನ್ನುತ್ತದೆ. ಮೂರನೇ ಕತ್ತೆ ಬಹಳ ಆಶಾವಾದಿ , ಇಲ್ಲ ನಾಳೆ ಸಿಗುತ್ತದೆ , ನಾನು ಕಾಯುತ್ತೇನೆ. ಹಿರಿಯರು ಹೇಳಿದ್ದಾರೆ ತಾಳಿದವನು ಬಾಳಿಯಾನು ಎನ್ನುತ್ತದೆ. ಎರಡನೇ ಕತ್ತೆ ಒಲ್ಲದ್ದ ಮನಸ್ಸಿನಿಂದ ಆಹಾರ ಹುಡುಕಿ ಹೊರಡುತ್ತದೆ. ಕೊನೆಯ ಕತ್ತೆ ಊಟವಿಲ್ಲದೆ ಸಾಯುತ್ತದೆ.

ಬದಲಾವಣೆಯನ್ನು ನಾವು ಗಮನಿಸಬೇಕು . ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಯನ್ನು ಊಹಿಸಿಕೊಳ್ಳಬೇಕು. ಸಮಾಜವನ್ನು , ಜಗತ್ತನ್ನು ಗಮನಿಸಿಸುತ್ತಿದ್ದರೆ ಆಗಬಹುದಾದ ಬದಲಾವಣೆಯನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಅಂತಹ ಬದಲಾವಣೆಗೆ ಸಿದ್ಧವಾಗಿರಬೇಕು. ಬದಲಾವಣೆಯನ್ನು ಒಪ್ಪಿಕೊಂಡು ಅದಕ್ಕೆ ಹೊಂದಿಕೊಳ್ಳಬೇಕು.

ಚಾಣಕ್ಯ ನೀತಿಯಲ್ಲಿ ಒಂದುಕಡೆ ಚಾಣಕ್ಯ ‘ ಯಾವ ಮರವು ಬಾಗದೆ ನೇರವಾಗಿ ನಿಂತಿರುತ್ತದೆ , ಆ ಮರವನ್ನು ಮೊದಲು ಕಡಿಯಲಾಗುತ್ತದೆ ‘ ಎನ್ನುವ ಮಾತನ್ನು ಹೇಳಿದ್ದಾರೆ. ಅರ್ಥವಿಷ್ಟೆ ಬಿರುಸಾದ ಗಾಳಿ ಬಂದಾಗ ಅತ್ತಿತ್ತ ವಾಲಾಡುವ ಮರಗಳು ಉಳಿದುಕೊಳ್ಳುತ್ತವೆ. ಸೆಟೆದು ನಿಂತ ಮರಗಳು ನೆಲ ಕಚ್ಚಿರುತ್ತವೆ. ಉಳಿವಿಗಾಗಿ ಕೆಲವೊಮ್ಮೆ ಹೊಂದಾವಣಿಕೆ ಮಾಡಿಕೊಂಡು ಹೋಗುವುದು ಅನಿವಾರ್ಯ.

ಇಂದಿನ ಸಮಾಜದಲ್ಲಿ ಬುದ್ದಿಮತ್ತೆಯಲ್ಲಿ ಒಂದಂಶ ಕಡಿಮೆಯಿದ್ದರೂ ಹೇಗೋ ಬದುಕಬಹುದು ಆದರೆ , ಫ್ಲೆಕ್ಸಿಬಿಲಿಟಿ ಮತ್ತು ಅಡಾಪ್ಟಬಿಲಿಟಿ ಇಲ್ಲದಿದ್ದರೆ ಬದುಕುವುದು ಬಹಳ ಕಷ್ಟ.

ಬದಲಾವಣೆಗೆ ಒಗ್ಗಿಕೊಳ್ಳುವುದು ಸುಲಭವಲ್ಲ , ಹೀಗಾಗಿ ಇದಕ್ಕೆ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳ ಅವಶ್ಯಕೆತೆಯಿದೆ. ದೊಡ್ಡದಾದ ಮತ್ತು ನಿಜವಾದ ಬದಲಾವಣೆ ಬರುವುದಕ್ಕೆ ಮುಂಚೆಯೇ ನಮಗೆ ನಾವೇ ಹೊಸತನಕ್ಕೆ ತೆರೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಅಷ್ಟೇನೂ ಮಹತ್ವವಲ್ಲ ಎನ್ನಿಸಬಹುದಾದ ಕೆಲವು ಬದಲಾವಣೆಗಳನ್ನು ನಾವೇ ಮಾಡಿಕೊಳ್ಳಬಹುದು. ಉದಾಹರಣೆಗೆ ನಿತ್ಯವೂ ನಡೆದು ಹೋಗುವ ಹಾದಿ ಬದಲಿಸುವುದು , ನಿತ್ಯದ ವೇಳೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು , ಸಾಮಾನ್ಯವಾಗಿ ಹೋಗುವ ಹೋಟೆಲ್ ಬಿಟ್ಟು ಬೇರೆ ಕಡೆಗೆ ಹೋಗುವುದು , ಹೇರ್ ಕಟ್ ಮಾಡಿಸಿಕೊಳ್ಳಲು ಬೇರೆ ಸಲೂನ್‌ಗೆ ಹೋಗುವುದು . ಇವೆಲ್ಲವೂ ತೀರಾ ಬಾಲಿಶ ಎನ್ನಿಸಬಹುದು. ಆದರೆ ಗಮನಿಸಿ ಇವೆಲ್ಲವೂ ಬದಲಾವಣೆಗೆ ಸಿದ್ಧವಾಗಲು ಸಹಾಯ ಮಾಡುವ ಪುಟಾಣಿ ಹೆಜ್ಜೆಗಳು.

ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಬದಲಾವಣೆಗೆ ನಾವು ಹೊಂದಿಕೊಳ್ಳದಿದ್ದರೆ ಜಗತ್ತಿಗೆ ನಷ್ಟವಿಲ್ಲ. ಅದರಿಂದ ಕಷ್ಟವಾಗುವುದು ನಮಗೆ ಮಾತ್ರ. ಹೀಗಾಗಿ ಫ್ಲೆಕ್ಸಿಬಿಲಿಟಿ ಮತ್ತು ಅಡಾಪ್ಟಬಿಟಿ ಎನ್ನುವ ಎರಡು ಮಹಾಮಂತ್ರಗಳನ್ನು ಜಪಿಸುವುದು ಮರೆಯುವುದು ಬೇಡ.

We Are What We Repeatedly Do , ನಾವು ಪದೇ ಪದೇ ಯಾವುದನ್ನು ಮಾಡುತ್ತಿರುತ್ತೇವೆ ನಾವು ಅದೇ ಆಗಿ ಬಿಡುತ್ತೇವೆ ಎನ್ನುವ ಮಾತುಗಳನ್ನು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದಾರೆ. ೨೧ ದಿನಗಳ ಕಾಲ ನಾವು ಸತತವಾಗಿ ತಪ್ಪದೆ ಯಾವುದನ್ನು ಬಯಸಿ ಮಾಡುತ್ತೇವೆ ಅದು ಅಭ್ಯಾಸ , ಹ್ಯಾಬಿಟ್ ಆಗಿ ಬದಲಾಗುತ್ತದೆ ಎನ್ನುವ ಮಾತನ್ನು ಕೂಡ ಇವರು ಹೇಳಿದ್ದರು.ಮುಂದುವರಿದು ,“We are what we repeatedly do… therefore excellence is not an act, but a habit.” ಎಂದಿದ್ದರು . ನಾವು ಯಾವುದನ್ನು ಪರಿಪಕ್ವತೆ ಎಂದುಕೊಳ್ಳುತ್ತೇವೆ , ಅದು ಬೇರೇನೂ ಅಲ್ಲ ನಮ್ಮ ಒಟ್ಟು ಅಭ್ಯಾಸಗಳ ಮೊತ್ತ . ಅಭ್ಯಾಸಗಳನ್ನು ಬದಲಿಸಿಕೊಳ್ಳುವುದರ ಮೂಲಕ ಬದುಕನ್ನು ಬದಲಿಸಕೊಳ್ಳಲು ಸಾಧ್ಯ ಎನ್ನುವುದು ಮಹಾನ್ ದಾರ್ಶನಿಕರ ಮಾತುಗಳ ಮೂಲಕ ಜನರಿಗೆ ತಿಳಿದಿದೆ. ಇದನ್ನು ಸುಮ್ಮನೆ ಒಪ್ಪುವ ಅವಶ್ಯಕತೆ ಕೂಡ ಇಲ್ಲ. ಇದನ್ನು ನಾವು ಕಾರ್ಯರೂಪಕ್ಕೆ ತರಲು ಯಾರ ವಿಶೇಷ ಅಪ್ಪಣೆ ಬೇಕಿಲ್ಲ . ನಾವು ಪ್ರಯತ್ನಮಾಡಿ ನಂತರ ಒಪ್ಪಬಹುದು.

“Virtues are formed in man by his doing the actions,” – ಮನುಷ್ಯನಲ್ಲಿ ಸದ್ಗುಣಗಳು ಕಾರ್ಯತತ್ಪರಾಗುವುದರಿಂದ ಉತ್ಪನ್ನವಾಗುತ್ತದೆ ಎನ್ನುವ ಮಾತನ್ನು ಕೂಡ ಅರಿಸ್ಟಾಟಲ್ ಹೇಳಿದ್ದಾರೆ. ಸುಮ್ಮನೆ ಮಾತನಾಡುವುದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅಂದುಕೊಂಡದ್ದನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಅದಕ್ಕೆ ಒಂದು ಬೆಲೆ ಬರುತ್ತದೆ. ಹೀಗೆ ಅಂದುಕೊಂಡ ಕಾರ್ಯವನ್ನು ಕೂಡ ಅಂದು ಕೊಂಡ ಸಮಯದಲ್ಲಿ ಅಥವಾ ನಿಗದಿತ ಸಮಯದಲ್ಲಿ ಮಾಡಿದ್ದಾಗ ಮಾತ್ರ ಅದಕ್ಕೆ ಬೆಲೆ. ಇಂದು ಅಂದುಕೊಂಡದ್ದು ವರ್ಷದ ನಂತರ ಕಾರ್ಯರೂಪಕ್ಕೆ ತರಲು ಹೋದಾಗ ಅದು ಸಾಧ್ಯವಾಗದೆ ಹೋಗಬಹುದು, ಅದಕ್ಕೆ ಬೇಕಾದ ಮನಸ್ಥಿತಿ , ಜೋಷ್ ಇಲ್ಲದೆ ಹೋಗಬಹುದು. ಹೀಗಾಗಿ ಅದನ್ನು ತಕ್ಷಣ ಮಾಡುವುದು ಕೂಡ ಬಹಳ ಮುಖ್ಯ. action without delay is soul of efficiency , ತಡಮಾಡದೆ ಕಾರ್ಯತತ್ಪರಾಗುವುದು ದಕ್ಷತೆಯ ಆತ್ಮವಿದ್ದಂತೆ ಎನ್ನುವ ಮಾತನ್ನು ಇಂಗ್ಲಿಷ್ ಭಾಷಿಕರು ಉಚ್ಚರಿಸುತ್ತಾರೆ.

ಹೀಗೆ ತೆಗೆದುಕೊಳ್ಳುವ ಆಕ್ಷನ್ ದಿನಕಳೆದಂತೆ ಹ್ಯಾಬಿಟ್ ಆಗಿ ಬದಲಾಗುತ್ತದೆ. ಇಂತಹ ಉತ್ತಮ ಅಭ್ಯಾಸಗಳು ಬದುಕನ್ನು ಬದಲಿಸುವ ಕ್ಷಮತೆಯನ್ನು ಹೊಂದಿರುತ್ತವೆ. ಎಪಿಕ್ಟೆಟ್ಸ್ ಎನ್ನುವ ಇನ್ನೋರ್ವ ತತ್ವಜ್ಞಾನಿ “capability is confirmed and grows in its corresponding actions, walking by walking, and running by running… therefore, if you want to do something, make a habit of it.” ಎನ್ನುವ ಮಾತನ್ನು ಹೇಳಿದ್ದಾರೆ.

ಅಂದರೆ ನಾವು ಮಾಡುವ ಕೆಲಸಗಳಿಂದ ಮಾತ್ರ ನಮ್ಮ ಕ್ಷಮತೆ ಹೆಚ್ಚುತ್ತಾ ಹೋಗುತ್ತದೆ. ನಡೆಯುವುದರಿಂದ ನಡಿಗೆಯಲ್ಲಿನ ಕ್ಷಮತೆ ಹೆಚ್ಚಾಗುತ್ತದೆ , ಓಡುವುದರಿಂದ ಓಟ ಚನ್ನಾಗಾಗುತ್ತದೆ . ಹೀಗಾಗಿ ಹೆಚ್ಚಿನ ಕ್ಷಮತೆಗೆ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ. ಇದೇ ಮಾತಿನ ಅರ್ಥವನ್ನು ನಾವು ಬದುಕಿನ ಇತರ ಮಗ್ಗಲುಗಳಿಗೂ ವಿಸ್ತರಿಸಿಕೊಳ್ಳಬಹುದು. ನಾವು ಖುಷಿಯಾಗಿರಬೇಕು , ನಾವು ಯಶಸ್ವಿಯಾಗಬೇಕು , ಇತರಿರಿಗಿಂತ ಭಿನ್ನವಾಗಿ ಏನಾದರೂ ಮಾಡಬೇಕು ಎಂದರೆ ಅದಕ್ಕೆ ತಕ್ಕ ಕ್ಷಮತೆಯನ್ನು ನಾವು ಪಡೆದುಕೊಳ್ಳಬೇಕು. ಕ್ಷಮತೆ ಬರುವುದು ಅಭ್ಯಾಸಗಳಿಂದ , ದಿನನಿತ್ಯ ನಾವು ಮಾಡುವ ಕೆಲಸಗಳು ಅಭ್ಯಾಸಗಳಾಗಿ ಬದಲಾಗುತ್ತವೆ. ಹೀಗಾಗಿ ಅಭ್ಯಾಸಗಳನ್ನು ಬದಲಾಸಿಕೊಳ್ಳುವ ಮೂಲಕ ನಾವು ನಮಗೆ ಬೇಕಾದ ಬದುಕನ್ನು ಪಡೆದುಕೊಳ್ಳಬಹುದು.

ನಾವು ಮಾಡುತ್ತಿರುವ ಕೆಲಸವನ್ನೇ ಮಾಡುತ್ತಿದ್ದರೆ , ಸಿಗುತ್ತಿರುವ ಪಲಿತಾಂಶಗಳೇ ಸಿಗುತ್ತವೆ. ನಮಗೆ ಬೇರೆಯ , ಉತ್ತಮ ಫಲಿತಾಂಶ ಬೇಕಿದ್ದರೆ ಆಗ ಖಂಡಿತವಾಗಿ ನಾವು ನಮ್ಮ ಕೆಲಸ , ಅಭ್ಯಾಸವನ್ನು ಬದಲಿಸಕೊಳ್ಳಬೇಕಾಗುತ್ತದೆ. ಮಾಡಿದ್ದನ್ನೇ ಮಾಡುತ್ತಾ ಬೇರೆ ಫಲಿತಾಂಶ ಬಯಸಿದರೆ ಅದು ಯಾರ ತಪ್ಪು ? ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.

ಕೆಟ್ಟ ಅಭ್ಯಾಸಗಳು ಕೆಟ್ಟ ಫಲಿತಾಂಶಗಳನ್ನು ನೀಡುತ್ತವೆ, ಒಳ್ಳೆಯ ಅಭ್ಯಾಸಗಳು ಒಳ್ಳೆಯ ಫಲಿತಾಂಶವನ್ನು ನೀಡುತ್ತವೆ. ಯಾವುದು ಒಳ್ಳೆಯದು ? ಯಾವುದು ಕೆಟ್ಟದ್ದು ? ಎನ್ನುವ ಜಿಜ್ಞಾಸೆ ಉಂಟಾಗುವುದು ಸಹಜ. ಯಾವುದೆಲ್ಲಾ ನಮ್ಮ ಸಹಜ , ಸರಳ ಬದುಕಿಗೆ ಅಡ್ಡಿಯಾಗುತ್ತವೆಯೋ ಅವೆಲ್ಲವೂ ಕೆಟ್ಟ ಅಭ್ಯಾಸಗಳು. ಉದಾಹರಣೆಗೆ ಮೊಬೈಲ್ ಫೋನ್ ವ್ಯಸನ ಕೆಟ್ಟ ಅಭ್ಯಾಸ, ಏಕೆಂದರೆ ಭಾರತೀಯರು ಸರಾಸರಿ ೭ ತಾಸು ಈ ಮೊಬೈಲ್ನಲ್ಲಿ ಕಳೆಯುತ್ತಾರೆ ಎನ್ನುತ್ತದೆ ಅಂಕಿಅಂಶ. ಇದು ಬದುಕಿನ ಎಲ್ಲಾ ವರ್ಗದ ಜನರಲ್ಲೂ ಕ್ಷಮತೆಯನ್ನು ಕಸಿದು ಬಿಟ್ಟಿದೆ. ಹೀಗೆ ಬೇರೊಬ್ಬರು ಮಾತನಾಡುವಾಗ ಅವರನ್ನು ಪೂರ್ಣಗೊಳಿಸಲು ಬಿಡದೆ ಮಧ್ಯೆ ಬಾಯಿಹಾಕುವುದು ಕೂಡ ಕೆಟ್ಟ ಅಭ್ಯಾಸ. ಹೆಚ್ಚು ತಿನ್ನುವುದು , ಅವಶ್ಯಕತೆಗೆ ಮೀರಿದ ಮಾತು , ನಿದ್ದೆ , ಓಡಾಟ ಎಲ್ಲವೂ ಕೆಟ್ಟದ್ದು .

ಮಿಕ್ಕಂತೆ ಬದುಕನ್ನು ಯಾವೆಲ್ಲ ಅಂಶಗಳು ಸರಳ, ಸುಂದರಗೊಳಿಸುತ್ತವೆಯೋ ಅವೆಲ್ಲವೂ ಉತ್ತಮ ಅಭ್ಯಾಸಗಳು ಎನ್ನಿಸಿಕೊಳ್ಳುತ್ತವೆ. ನಿತ್ಯವೂ ಒಂದರ್ಧ ಗಂಟೆ ಓದುವುದು, ಬೆಳಗ್ಗೆ ನಡೆಯುವುದು, ಮಿತಿ ಮೀರಿದ ಆಹಾರ ಸೇವಿಸದೇ ಇರುವುದು, ಬೇರೆಯವರ ಮಾತಿಗೆ ಬೆಲೆ ಕೊಡುವುದು, ತನ್ನಂತೆ ಇತರರು ಎನ್ನುವ ಭಾವನೆ ಹೊಂದಿರುವುದು, ನಿತ್ಯವೂ ತನ್ನೊಂದಿಗೆ ಏಕಾಂತದಲ್ಲಿ ಮಾತನಾಡಿಕೊಳ್ಳುವುದು ಹೀಗೆ ಇವೆಲ್ಲವೂ ಉತ್ತಮ ಅಭ್ಯಾಸಗಳು ಎನ್ನಿಸಿಕೊಳ್ಳುತ್ತವೆ. ನಮ್ಮ ಬದುಕಿನಲ್ಲಿ ಅವಶ್ಯಕತೆಗೆ ತಕ್ಕಂತೆ ಬದಲಾವಣೆ ಆಗಬೇಕಾದ್ದು ಅನಿವಾರ್ಯ.

ಬದುಕಿನಲ್ಲಿ ಕೆಲವೊಂದು ವಿಷಯಗಳಲ್ಲಿ ಆಯ್ಕೆಯಿಲ್ಲ, ಆದರೆ ಕೆಲವೊಂದು ವಿಷಯದಲ್ಲಿ ಆಯ್ಕೆ ನಮ್ಮ ಮುಂದಿರುತ್ತದೆ. ಸರಿಯಾಗಿ ವೇಳೆ ಕಳೆಯುವ ಮತ್ತು ಜೀವನವನ್ನು ಪ್ರಭಾವಿಸುವ ಉತ್ತಮ ವ್ಯಕ್ತಿಗಳನ್ನು, ಒಳ್ಳೆಯ ಸ್ನೇಹಿತರನ್ನು ಜತೆಗಾರರನ್ನಾಗಿಸಿಕೊಳ್ಳುವ ಆಯ್ಕೆ ನಮ್ಮ ಮುಂದಿದೆ. ಸರಿಯಾದ ಆಯ್ಕೆ ಮಾಡಿಕೊಂಡರೆ
ಮತ್ತು ಅಭ್ಯಾಸಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಬದುಕಿನಲ್ಲಿ ಬಹು ದೊಡ್ಡ ಬದಲಾವಣೆಯನ್ನು ನಾವು ಕಾಣಬಹುದು.