Tuesday, 10th December 2024

Ranjith H Ashwath Column: ಪ್ರತಿಷ್ಠೆಯೇ ಈ ಉಪಸಮರದ ಮೂಲ

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ಕಳೆದ ಎರಡು ದಶಕದ ರಾಜ್ಯ ರಾಜಕೀಯದಲ್ಲಿ ಹತ್ತು ಹಲವು ಉಪಚುನಾವಣೆಗಳನ್ನು ರಾಜ್ಯದ ಜನ ನೋಡಿದ್ದಾರೆ. ಇವುಗಳಲ್ಲಿ ಕೆಲವು ಹಾಲಿ
ಶಾಸಕ, ಸಂಸದರು ಕೊನೆಯುಸಿರು ಎಳೆದ ಕಾರಣಕ್ಕೆ ನಡೆದಿದ್ದರೆ, ಹೆಚ್ಚಿನವು ಪುಢಾರಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿದ ಕಾರಣಕ್ಕಾಗಿಯೇ ನಡೆದಿರುವುದು. ಆದರೆ ಈಗ ಎದುರಾಗಿರುವ ಉಪಚುನಾವಣೆ ಈ ಎರಡನ್ನೂ ಮೀರಿ, ಶಾಸಕರಾಗಿ ವರ್ಷ ಕಳೆಯುವ ಮೊದಲೇ ಸಂಸದರಾಗಿ
ಆಯ್ಕೆಯಾದವರು ತಮ್ಮ ಸ್ಥಾನವನ್ನು ತೆರವು ಮಾಡಿದ ಕಾರಣಕ್ಕೆ ನಡೆಯುತ್ತಿರುವಂಥದ್ದು. ಈ ಉಪಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ಯಾವುದೇ ಬಿರುಗಾಳಿ ಬೀಸದಿದ್ದರೂ, ‘ಪ್ರತಿಷ್ಠೆ’ಯ ಕಾರಣಕ್ಕೆ ಮೂರೂ ಕ್ಷೇತ್ರಗಳಲ್ಲಿ ಅದು ಮಹತ್ವವನ್ನು ಪಡೆದುಕೊಂಡಿದೆ ಎನ್ನಲಡ್ಡಿಯಿಲ್ಲ.

ಹೌದು, ಕ್ರಮವಾಗಿ ಶಿಗ್ಗಾವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಶಾಸಕರಾಗಿ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಇ.ತುಕಾರಾಂ ಅವರುಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ, ಈ ಕ್ಷೇತ್ರ
ಗಳಲ್ಲಿನ ತಂತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅದೇನೇ ಇರಲಿ, ಈ ಉಪಚುನಾವಣೆಯ ಬಹಿರಂಗ ಪ್ರಚಾರವು ಸೋಮವಾರಕ್ಕೆ ಅಂತ್ಯವಾಗಿದ್ದು, ಬುಧವಾರ ಬೆಳಗ್ಗೆ ಮತದಾನವು ಆರಂಭವಾಗಲಿದೆ. ಸಾಮಾನ್ಯವಾಗಿ ನಡೆಯುವ ಉಪಚುನಾವಣೆಗೆ ಹೋಲಿಸಿ ನೋಡಿದಾಗ, ಈ ಬಾರಿಯದನ್ನು ಪಕ್ಷಗಳು ‘ಗಂಭೀರ’ವಾಗಿ ಪರಿಗಣಿಸಿಲ್ಲ. ಆದರೆ ಅಭ್ಯರ್ಥಿಗಳು ಮತ್ತು ಅವರ ಹಿಂದಿರುವ ‘ಶಕ್ತಿ’ಗಳಿಗೆ ಈ ಉಪಸಮರ ನಿರ್ಣಾಯಕವೆನಿಸಿದೆ, ಪ್ರತಿಷ್ಠೆಯ ಪ್ರದರ್ಶನದ ಸಂದರ್ಭವಾಗಿದೆ ಎನ್ನಲಡ್ಡಿಯಿಲ್ಲ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳಲ್ಲಿ ಭರ್ಜರಿ ವಿಜಯ ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯೇರಿರುವುದು ಈಗಾಗಲೇ ಜಗಜ್ಜಾಹೀರು.

ಪಕ್ಷೇತರರ ಬೆಂಬಲವೂ ಸಿಕ್ಕಿರುವುದರಿಂದ ಶಾಸಕರ ಸಂಖ್ಯಾ ಬಲ 136ಕ್ಕೇರಿದೆ. ಈಗ ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಹಿಂದೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳೇ ವಿಜೇತರಾಗಿದ್ದವರು. ಆದ್ದರಿಂದ, ಈ ಉಪಚುನಾವಣೆಯಲ್ಲಿ ಮೂರರ ಪೈಕಿ ಒಂದರಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ಗೆ ಈ ಹಿಂದಿನ ಸಂಖ್ಯಾಬಲವೇ ಸಿಗುತ್ತದೆ. ಒಂದು ವೇಳೆ ಮೂರಕ್ಕೆ ಮೂರನ್ನೂ ಗೆದ್ದರೆ, ‘ಬೋನಸ್’ ರೀತಿಯಲ್ಲಿ ಹೆಚ್ಚುವರಿ ಶಾಸಕರ ಸಂಖ್ಯಾಬಲ ಕಾಂಗ್ರೆಸ್‌ಗೆ ಲಭಿಸಲಿದೆ. ಇನ್ನೊಂದೆಡೆ, ಬಿಜೆಪಿ-ಜೆಡಿಎಸ್ ಮೈತ್ರಿಬಣ ಎರಡನ್ನೂ ಸೇರಿಸಿದರೂ ನೂರರ ಗಡಿ ದಾಟುವುದಿಲ್ಲ. ಹೀಗಿರುವಾಗ ಮೂರಕ್ಕೆ ಮೂರು ಕ್ಷೇತ್ರವನ್ನು ಗೆದ್ದರೂ ಸರಕಾರದ ಹಂತದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಈ ಉಪಚುನಾವಣೆಯ ಫಲಿತಾಂಶದಿಂದ ಸರಕಾರ ಬೀಳುತ್ತದೆ ಅಥವಾ ಫಲಿತಾಂಶ ನೋಡಿಕೊಂಡು ಅದನ್ನು ಅಸ್ಥಿರಗೊಳಿಸ ಬಹುದು ಎನ್ನುವ ಯಾವುದೇ ಲೆಕ್ಕಾಚಾರಗಳು ಪ್ರತಿಪಕ್ಷಗಳ ತೆಕ್ಕೆಯಲ್ಲಿಲ್ಲ.

ಒಂದು ವೇಳೆ ಸೋಲನುಭವಿಸಿದರೂ ಪಕ್ಷವಾಗಿ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್‌ಗೆ ಯಾವುದೇ ಸಮಸ್ಯೆಯಿಲ್ಲ. ಇಷ್ಟಾಗಿಯೂ ಈ ಉಪಚುನಾವಣೆ ಭಾರಿ ರಂಗು ಪಡೆದಿದೆ. ಇದು ರಾಜ್ಯಮಟ್ಟದಲ್ಲಿ ಹೆಚ್ಚಾಗಿ ಕಾಣದಿದ್ದರೂ, ಸ್ಥಳೀಯವಾಗಿ ಆಯಾ ಕ್ಷೇತ್ರಕ್ಕೆ ಸೀಮಿತವಾಗಿ ಇತರೆ ಚುನಾವಣೆಗಳಿಗಿಂತ ಹೆಚ್ಚಾಗಿ, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಸರಕಾರ ಅಥವಾ ಪಕ್ಷಕ್ಕಾಗುವ ಲಾಭ-ನಷ್ಟ ಎನ್ನುವು ದಕ್ಕಿಂತ ‘ವೈಯಕ್ತಿಕ’ ವರ್ಚಸ್ಸಿನ ಮೇಲಾಗುವ ಪರಿಣಾಮ ಎನ್ನುವುದನ್ನು ಮೂರೂ ಪಕ್ಷದ ನಾಯಕರು ಒಪ್ಪಿಕೊಳ್ಳಬೇಕಾಗಿದೆ.

ಹಾಗೆ ನೋಡಿದರೆ, ಕರ್ನಾಟಕದಲ್ಲಿ ನಡೆದಿರುವ ಬಹುತೇಕ ಉಪಚುನಾವಣೆಗಳು ‘ನೆಕ್-ಟು-ನೆಕ್’ ಫೈಟ್‌ಗೆ ಸಾಕ್ಷಿಯಾಗಿರುವ ಇತಿಹಾಸವಿದೆ. ‘ಆಪರೇಷನ್ ಕಮಲ’ದ ಮೂಲಕ ಸರಕಾರ ರಚಿಸಿ, ಬಹುಮತಕ್ಕೆ ಬೇಕಿರುವ ಸಂಖ್ಯಾಬಲವನ್ನು ಪಡೆಯಲು ಇವು ನಡೆದಿರುವುದೇ ಹೆಚ್ಚು.
ಉದಾಹರಣೆಗೆ 2013ರಲ್ಲಿ ಯಡಿಯೂರಪ್ಪ ಅವರು 7 ಶಾಸಕರಿಂದ ರಾಜೀನಾಮೆ ಕೊಡಿಸಿ ಸರಕಾರವನ್ನು ರಚಿಸಿ ದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ಬಿಜೆಪಿಗೆ ಬೇಕಿದ್ದ ‘ಅಗತ್ಯ’ ಸಂಖ್ಯಾಬಲವನ್ನು ಪಡೆಯಲಾಯಿತು.

ಇದಾದ ಬಳಿಕ ನಡೆದ ಬಹುಚರ್ಚಿತ ಉಪಸಮರವೆಂದರೆ 2014ರಲ್ಲಿ ನಡೆದ ಹಣಾಹಣಿ. ಆಗಲೂ ಕಾಂಗ್ರೆಸ್-ಜೆಡಿಎಸ್‌ಗೆ ಸೇರಿದ 17 ಶಾಸಕರ ರಾಜೀನಾಮೆ ಕೊಡಿಸಿ, ಬಳಿಕ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸುವಂತೆ ಬಿಜೆಪಿ ನಾಯಕರು ನೋಡಿಕೊಂಡಿದ್ದರು. ಆ ಎರಡು ಉಪಚುನಾವಣೆಯಲ್ಲಿ, ಚುನಾವಣೆ ನಡೆದ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸದಿದ್ದರೆ ಸರಕಾರವೇ ಬೀಳುವ ಸಾಧ್ಯತೆ ಯಿತ್ತು. ಈ ಒತ್ತಡದಲ್ಲಿಯೇ ಅಂದಿನ ಆಡಳಿತ ಪಕ್ಷ ಬಿಜೆಪಿ ಚುನಾವಣೆಯನ್ನು ನಡೆಸಿ, ಇಡೀ ಸಂಪುಟವನ್ನೇ ಚುನಾವಣಾ ಕ್ಷೇತ್ರಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಿತ್ತು. ಆದರೆ ಈ ಬಾರಿಯ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಈ ರೀತಿಯ ಒತ್ತಡವೇನೂ ಇಲ್ಲ ಎಂಬುದು ಸ್ಪಷ್ಟ.

ಇಂಥ ಒತ್ತಡವಿಲ್ಲದಿದ್ದರೂ, ಈ ಮೊದಲೇ ಹೇಳಿದಂತೆ, ಮೂರೂ ಕ್ಷೇತ್ರಗಳು ಒಂದೊಂದು ಕಾರಣಕ್ಕೆ ಪ್ರತಿಷ್ಠೆಯ ಅಖಾಡಗಳಾಗಿ ಪರಿಣಮಿಸಿ ಬಿಟ್ಟಿವೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯರ ಒಂದಿಡೀ ಸಚಿವ ಸಂಪುಟವನ್ನು ಈ ಮೂರೂ ಕ್ಷೇತ್ರಗಳಿಗೆ ಹಂಚಿಕೆ ಮಾಡಿ ಉಸ್ತುವಾರಿ ಗಳನ್ನಾಗಿ ನೇಮಿಸಲಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ನಿತ್ಯ ಒಂದೊಂದು ಕ್ಷೇತ್ರಕ್ಕೆ ಭೇಟಿ ನೀಡಿ, ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಬಿಜೆಪಿಯ ವಿಷಯದಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಲೋಕಸಭಾ ಚುನಾವಣೆಗಿಂತ ಹೆಚ್ಚಿನ ಪ್ರಮಾಣದ ಪ್ರಚಾರಕಾ ರ್ಯದಲ್ಲಿ ಬಿಜೆಪಿ ವತಿಯಿಂದ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇನ್ನು ದಶಕದ ಬಳಿಕ ಒಂದೇ ಕ್ಷೇತ್ರದಲ್ಲಿ ಒಂದು ವಾರದವರೆಗೆ ಕೂತು ದೇವೇಗೌಡರು ತಮ್ಮ ಮೊಮ್ಮಗನ ಗೆಲುವಿಗೆ ರಣತಂತ್ರ ರೂಪಿಸಿದ್ದರೆ, ನಾಮಪತ್ರ ಸಲ್ಲಿಕೆಯಾದ ದಿನದಿಂದಲೂ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣವನ್ನು ಬಿಟ್ಟು ಹೊರಬಂದಿಲ್ಲ. ಅದೇ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿಯನ್ನು ಬಿಟ್ಟು ಹೊರಬಂದಿಲ್ಲ.

ಸರಕಾರದ ಮೇಲೆ ಅಥವಾ ರಾಜ್ಯ ರಾಜಕೀಯದ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರದಿದ್ದರೂ, ನಾಯಕರು ಈ ಉಪಚುನಾವಣೆ ಯನ್ನು ಈ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿರುವುದು ಏಕೆ ಎಂಬ ಪ್ರಶ್ನೆ ಅಥವಾ ಸಹಜ ಕುತೂಹಲ ಬಹುತೇಕರಲ್ಲಿ ಮನೆಮಾಡಿದೆ. ಅದಕ್ಕೆ ಉತ್ತರ ಸರಳ- ಈ ಮೂರೂ ಕ್ಷೇತ್ರಗಳಲ್ಲಿ ಒಂದೊಂದು ಪಕ್ಷದಿಂದ ‘ಕುಟುಂಬ’ ಸದಸ್ಯರೇ ನಿಂತಿದ್ದಾರೆ. ಅಂದರೆ, ಸಂಡೂರಿನಿಂದ ತುಕಾರಾಂ ಪತ್ನಿ ಅನ್ನಪೂರ್ಣ, ಶಿಗ್ಗಾವಿಯಿಂದ ಬಸವರಾಜ ಬೊಮ್ಮಾಯಿ ಪುತ್ ಭರತ್ ಬೊಮ್ಮಾಯಿ ಹಾಗೂ ಚನ್ನಪಟ್ಟಣದಿಂದ ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ನಿಖಿಲ್‌ರನ್ನು ಹೊರತು ಪಡಿಸಿದ ಇನ್ನಿಬ್ಬರೂ ಚುನಾವಣಾ ರಾಜಕೀಯಕ್ಕೆ ಹೊಸಬರು. ಆದ್ದರಿಂದ ಅವರ ಪರವಾಗಿ ಕ್ರಮವಾಗಿ ಅವರ ಪತಿ ಮತ್ತು ತಂದೆ ಈ ಉಪಚುನಾವಣೆಯಲ್ಲಿ ಕಸರತ್ತು ಮಾಡಬೇಕಾಗಿ ಬಂದಿದೆ. ಕಳೆದ ಎರಡು ಚುನಾವಣೆಗಳಲ್ಲಿ ಭಾರಿ ಮುಖಭಂಗ ಅನುಭವಿಸಿ ಈಗ ಮೂರನೇ ಪ್ರಯತ್ನಕ್ಕೆ ಇಳಿದಿದ್ದಾರೆ ನಿಖಿಲ್, ಹೀಗಾಗಿ ಈ ಉಪಸಮರ ಅವರ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವ ಪರಿಸ್ಥಿತಿಯನ್ನು ನಿರ್ಮಿಸಿದೆ.

ಈ ಮೂರು ಕ್ಷೇತ್ರಗಳ ಪೈಕಿ ಶಿಗ್ಗಾವಿಯಲ್ಲಿ ಈಗಾಗಲೇ‘ಹೊಂದಾಣಿಕೆ’ಯ ವಾಸನೆ ಶುರುವಾಗಿದೆ. ಮಿಕ್ಕಂತೆ, ಸಂಡೂರಿನಲ್ಲಿ ಜನಾರ್ದನ ರೆಡ್ಡಿ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ತುಕಾರಾಂ ಕಾರಣಕ್ಕೆ ಕಾಂಗ್ರೆಸ್ ನ ಸ್ಥಳೀಯ ನಾಯಕರು ತಟಸ್ಥರಾಗಿದ್ದಾರೆ. ಆದರೆ ತೀವ್ರ ಪೈಪೋಟಿ ಹುಟ್ಟುಹಾಕಿ ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಅದು ಚನ್ನಪಟ್ಟಣ. ಈ ಕ್ಷೇತ್ರದಲ್ಲಿ ಒಂದೆಡೆ ದೇವೇಗೌಡರ ಕುಟುಂಬದ ಮೂರನೇ ಪೀಳಿಗೆಯಾತ ಚುನಾವಣಾ ರಾಜಕೀಯದ ಚಕ್ರವ್ಯೂಹವನ್ನು ಭೇದಿಸಲು ಹೋರಾಡುತ್ತಿದ್ದರೆ, ಇನ್ನೊಂದೆಡೆ ಮೂರು ದಶಕಗಳ
ಕಾಲ ದೇವೇಗೌಡರ ವಿರುದ್ಧ ಹೋರಾಡಿಕೊಂಡು ಬಂದಿರುವ ಸಿ.ಪಿ.ಯೋಗೇಶ್ವರ ಅವರು ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ನ ಮಡಿಲು ಸೇರಿ ಅಲ್ಲಿಂದಲೇ ಸ್ಪರ್ಧಿಸಿದ್ದಾರೆ. ಈ ಇಬ್ಬರಲ್ಲಿ ಯಾರೇ ಸೋತರೂ, ಅವರ ರಾಜಕೀಯ ಅಸ್ತಿತ್ವ ಬಹುತೇಕ ಅಂತ್ಯವಾಗಲಿದೆ ಎಂಬುದೇ ಸದ್ಯಕ್ಕೆ ರಾಜಕೀಯದ ಪಡಸಾಲೆಯಲ್ಲಿ ಹರಿದಾಡುತ್ತಿರುವ ಮಾತಾಗಿದೆ. ಈ ಕಾರಣಕ್ಕಾಗಿಯೇ ಈ ಕ್ಷೇತ್ರದಲ್ಲಿ
ಜೆಡಿಎಸ್ ನಾಯಕರು ಠಿಕಾಣಿ ಹೂಡಿದ್ದರೆ, ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿಯವರ ಭದ್ರಕೋಟೆಯನ್ನು ಭೇದಿಸಬೇಕೆಂಬ ರಣಹುಮ್ಮಸ್ಸಿನಲ್ಲಿ ಕಳೆದ ಮೂರು ತಿಂಗಳಿಂದ ಚನ್ನಪಟ್ಟಣದಲ್ಲಿಯೇ ಓಡಾಡಿಕೊಂಡಿದ್ದಾರೆ!

ಮತ್ತೊಂದು ವಿಶೇಷವೆಂದರೆ, ಸಾಮಾನ್ಯ ಉಪಚುನಾವಣೆಗಳ ರೀತಿಯಲ್ಲಿಯೇ ಈ ಬಾರಿಯೂ ಎರಡೂ ಕಡೆಯಿಂದ ಸ್ಥಳೀಯ ನಾಯಕರೇ ಪ್ರಚಾರಕಾರ್ಯವನ್ನು ‘ನಿಭಾಯಿಸಿದ್ದಾರೆ’. ಈ ಹಿಂದೆಲ್ಲಾ ಕನಿಷ್ಠಪಕ್ಷ ಆಯಾ ಪಕ್ಷದ ರಾಜ್ಯ ಉಸ್ತುವಾರಿಗಳಾದರೂ ರಾಜ್ಯಕ್ಕೆ ಬಂದು
ಹೋಗುತ್ತಿದ್ದರು; ಆದರೆ ಈ ಬಾರಿ ಅವರೂ ರಾಜ್ಯದತ್ತ ತಲೆಹಾಕಲಿಲ್ಲ. ಈ ರೀತಿಯ ನಡೆಗೆ ಕಾರಣ, ಮೊದಲೇ ಹೇಳಿದಂತೆ, ಉಪಚುನಾವಣೆ ಯಲ್ಲಿ ಸಾಮಾನ್ಯವಾಗಿ ಕಂಡುಬರುವ, ಸರಕಾರವನ್ನು ಉಳಿಸುವ ಅಥವಾ ಉರು ಳಿಸುವ ‘ರಾಜಕೀಯ ಗಣಿತ’ ಈ ಬಾರಿ ಕಾಣಬರುತ್ತಿಲ್ಲ.

ಆದ್ದರಿಂದ ಇಲ್ಲಿಗೆ ಕಳಿಸುವ ಬದಲು ಇತರೆ ರಾಜ್ಯಗಳಲ್ಲಿ ರಾಷ್ಟ್ರೀಯ ನಾಯಕರ ಶ್ರಮದಾನವನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿವೆ. ಹಾಗೆ ನೋಡಿದರೆ, ಉಪಸಮರದ ಕಾವಿಗಿಂತ ಈ ಬಾರಿ ಕರ್ನಾಟಕದಲ್ಲಿ ಸದ್ದು ಮಾಡಿದ್ದು ವಕ್ಫ್ ಆಸ್ತಿ ವಿವಾದ. ಈ ವಿವಾದದಿಂದ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ಗೆ ಲಾಭವಾಗುವುದೋ ಅಥವಾ ಮುಸ್ಲಿಂ ಮತಗಳು‌ ಕ್ರೋಡೀಕರಣಗೊಳ್ಳುವ ಮೂಲಕ ಕಾಂಗ್ರೆಸ್‌ಗೆ ಲಾಭವಾಗುವುದೋ ಎಂಬುದು ಬೇರೆ ಮಾತು. ಇದಾದ ಬಳಿಕ ಬಹುದೊಡ್ಡ ಮಟ್ಟದಲ್ಲಿ ಸುದ್ದಿಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ ಪ್ರಸ್ತಾಪಿಸಿದ ‘700 ಕೋಟಿ ರು.ಮದ್ಯದ ಹಣ’. ಈ ಎರಡು ವಿಷಯಗಳೇ ಇಡೀ ಚುನಾವಣಾ ಪ್ರಚಾರದ ಪರ-
ವಿರೋಧ ಚರ್ಚೆಗೆ ನಾಂದಿ ಹಾಡಿದ್ದವು. ಇದೀಗ ಬಹಿ ರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಅಭ್ಯರ್ಥಿಗಳು ಅಥವಾ ಕುಟುಂಬದ ಪ್ರತಿಷ್ಠೆಯಲ್ಲಿ ನಾಳೆ ಮತದಾನ ನಡೆಯಲಿದೆ.

ಈ ಫಲಿತಾಂಶದಿಂದ ಸರಕಾರದಲ್ಲಿ ಏರುಪೇರಾಗುವುದಿಲ್ಲ ಎನ್ನುವುದು ಸತ್ಯವಾದರೂ, ಕೆಲ ಅಭ್ಯರ್ಥಿಗಳ ಸುದೀರ್ಘ ರಾಜಕೀಯ ‘ಭವಿಷ್ಯ’ದ ಸ್ಪಷ್ಟದರ್ಶನ ಅನಾವರಣಗೊಳ್ಳಲಿದೆ ಎಂದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Ranjith H Ashwath Column: ನೀ ಕೊಡೆ, ನಾ ಬಿಡೆ ಹೋರಾಟದಲ್ಲಿ ಗೆಲ್ಲುವುದ್ಯಾರು ?