Wednesday, 11th December 2024

ಕೊನೆಯುಸಿರೆಳೆದ ರಾವಣ

ಸ್ಮರಣೆ

ಕೀರ್ತನ ಶೆಟ್ಟಿ

ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿಯಲ್ಲಿ ರಾವಣನ ಪಾತ್ರದ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಅರವಿಂದ್ ತ್ರಿವೇದಿ (82) ಮುಂಬೈಯಲ್ಲಿ ಇತ್ತೀಚೆಗೆ ನಿಧನ ಹೊಂದಿದರು. ಇವರು 8 ನವೆಂಬರ್ 1938 ರಂದು ಜನಿಸಿದ ಒಬ್ಬ ಶ್ರೇಷ್ಠ ಕಲಾವಿದ.

ವಿಶೇಷವೆಂದರೆ, ಭಗವಂತ ಶ್ರೀ ರಾಮನ ಭಕ್ತನಾಗಿದ್ದ ಇವರು, ರಾವಣನ ಪಾತ್ರ ಮಾಡುವ ಮೊದಲು ಶ್ರೀರಾಮನ ಆಶೀರ್ವಾದ ಪಡೆಯುತ್ತಿದ್ದರು. ಹಾಗೆಯೇ ದೇವರ ಮೇಲಿನ ಗೌರವ ಮತ್ತು ಭಕ್ತಿಯಿಂದ ರಾವಣನ ದೃಶ್ಯಗಳನ್ನು ಚಿತ್ರೀಕರಿಸುವಾಗ ಉಪವಾಸ ಮಾಡುತ್ತಿದ್ದರು. ಚಿತ್ರೀಕರಣ ಪ್ರಾರಂಭವಾಗುವ ಮೊದಲು, ಅವರು ಬಹಳಷ್ಟು ಪೂಜೆ ಮಾಡುತ್ತಿದ್ದರು, ಹಾಗೆಯೇ ಚಿತ್ರೀಕರಣದ ಸಮಯದಲ್ಲಿ ರಾಮನಿಗೆ ಹೇಳಬೇಕಾದ ಎಲ್ಲಾ ಕೆಟ್ಟ ವಿಷಯಗಳಿಗಾಗಿ ಕ್ಷಮೆ ಕೇಳುತಿದ್ದರು. ಕಳೆದ ವರ್ಷ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದಾಗ, ದೂರದರ್ಶನ ವಾಹಿನಿಯು, ದಿನಕ್ಕೆ ಎರಡು ಬಾರಿ ರಾಮಾಯಣವನ್ನು ಪ್ರಸಾರ ಮಾಡುತ್ತಿತ್ತು. ಸೀತಾಪಹರಣದ ಸಂದರ್ಭ, ಇವರು ಭಾವನಾತ್ಮಕವಾಗಿ ಕ್ಷಮೆಯಾಚಿಸಿದ ದೃಶ್ಯವನ್ನು ಯಾರು ತಾನೆ ಮರೆಯಲು ಸಾಧ್ಯ? ಆಗ ಇದು ಭಾರೀ ವೈರಲ್ ಆಗಿತ್ತು.

ರಾಮಾಯಣ ಮಾತ್ರವಲ್ಲದೇ, ಬಾಲಿವುಡ್ ಹಾಗೂ ಗುಜರಾತಿ ಭಾಷೆಯಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅರವಿಂದ ತ್ರಿವೇದಿಯವರು ಅವರ ಸಹೋದರ ಉಪೇಂದ್ರ ತ್ರಿವೇದಿ ಜತೆಗೂಡಿ, 40 ವರ್ಷಗಳಿಗೂ ಹೆಚ್ಚು ಕಾಲ ಗುಜರಾತಿ ಚಿತ್ರರಂಗದಲ್ಲಿ ಮಿಂಚಿದ್ದರು. ಇದರೊಂದಿಗೆ, ವಿಕ್ರಮ-ಬೇತಾಳ ಮತ್ತು ವಿಶ್ವಾಮಿತ್ರ ಧಾರಾವಹಿಯಲ್ಲೂ ನಟಿಸಿದ್ದಾರೆ. ಗುಜರಾತಿ ಭಾಷೆಯ ದೇಶ್ ರೇ ಜೋಯಾ, ದಾದಾ ಪರದೇಶ್ ಜೋಯಾ ಸಿನಿಮಾದ ದಾದಾಜಿ ಪಾತ್ರವು ಈಗಲೂ ಹಚ್ಚಹಸಿರಾಗಿದೆ.

ಗುಜರಾತಿನ ಸಬರ್‌ಕಾಂತಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಇವರು, 2002 ರಿಂದ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್ (ಸಿಬಿಎಫ್ಸಿ) ನ ಪ್ರಭಾರ ಅಧ್ಯಕ್ಷರೂ ಆಗಿದ್ದರು. ಪರಾಯ ಧನ್, ಜೇಸಲ್ ತೋರಲ್ ಜೇಸಲ, ಜಂಗಲ್ ಮೇ ಮಂಗಲ, ಆಜ್ ಕಿ ತಾಜಾ ಖಬರ್ ಇನ್ಸ್‌ಪೆಕ್ಟರ್, ಕುನ್ವರ್ಬಾಯಿ ನು ಮಾಮೆರುನ್ ನರಸಿಂಹ ಮೆಹ್ತಾ, ತ್ರಿಮೂರ್ತಿ ಬಲರಾಮ, ಹೋತಲ್ ಪದ್ಮಿನಿ, ಜೋಗಿದಾಸ್ ಖುಮಾನ್, ಶೆಟಲ್ ನೇ ಕಾಂತೇ, ಸಂತು ರಂಗಿಲಿ, ಪೈಸೊ ಬೋಲೆ ಛೆ, ಭಗತ್ ಗೋರಾ ಕುಂಭಾರ್ ಇವರು ನಟಿಸಿರುವ ಪ್ರಮುಖ ಚಿತ್ರಗಳಾಗಿವೆ.

ಇವರ ರಾವಣ ಪಾತ್ರವು ಎಲ್ಲರಲ್ಲೂ ಸದಾಕಾಲ ಅಚ್ಚಳಿಯದಂತೆ ಉಳಿಯಲಿದೆ. ಅವರು ನಮ್ಮೆಲ್ಲರನ್ನೂ ಬಿಟ್ಟು ಹೋಗಿದ್ದರೂ, ಅವರ ನಟನೆಯು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತದೆ.