Friday, 13th December 2024

ರಾಜಕೀಯ ಅನಿವಾರ್ಯವೋ, ವಾಸ್ತವಕ್ಕೆ ಹಿಡಿದ ಕನ್ನಡಿಯೋ ?

ವಿಶ್ಲೇಷಣೆ

ರಮಾನಂದ ಶರ್ಮಾ

ಆರ್‌ಬಿಐ ತನ್ನ ರೆಪೋ ದರವನ್ನು ಕಾಯ್ದುಕೊಂಡಿರುವ ಬಗ್ಗೆ ಜನಸಾಮಾನ್ಯರಲ್ಲಿ, ಬ್ಯಾಂಕಿಂಗ್ ವಲಯದಲ್ಲಿ, ಆರ್ಥಿಕ ತಜ್ಞರಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು, ಹಣಕಾಸು ನೀತಿಯು ಜನಸಾಮಾನ್ಯರ ದಿನಬಳಕೆ ವಸ್ತುಗಳ ಬೆಲೆ ಉತ್ತರಮುಖಿಯಾಗದಂತೆ ಎಚ್ಚರಿಕೆ ವಹಿಸಿದೆ ಎನ್ನುವುದು ಮುಖ್ಯವಾದ ಟೀಕೆ.

ನಿರೀಕ್ಷೆಯಂತೆ, ಮಾಧ್ಯಮಗಳಲ್ಲಿನ ಊಹಾಪೋಹಗಳಂತೆ, ಕೆಲವರ ಆಶಯದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು (ಅಂದರೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕು ನೀಡುವ ಸಾಲದ ಮೇಲಿನ ಬಡ್ಡಿದರವನ್ನು) ಬದಲಾವಣೆ ಮಾಡದೆ
ಯಥಾಸ್ಥಿತಿಯನ್ನು (ಶೇ.೬.೫೦) ಕಾಯ್ದುಕೊಂಡಿದೆ. ಆರ್ ಬಿಐ ಹೀಗೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿರುವುದು ೫ನೇ ಬಾರಿ. ಆರ್‌ಬಿಐ ಈ ನಿಲು ವನ್ನು ತಳೆಯಬಹುದು ಎಂದು ಸುಮಾರು ೪೦ ಆರ್ಥಿಕ ತಜ್ಞರು ಹೇಳಿದ್ದು, ಆರ್ ಬಿಐನ ಹಣಕಾಸು ಸಮಿತಿಯ ೬ ಸದಸ್ಯರಲ್ಲಿ ಐವರು ಇದನ್ನು ಬೆಂಬಲಿಸಿದ್ದು ಗಮನಾರ್ಹ. ಈ ನಿಲುವಿನ ಹಿಂದಿನ ಅರ್ಥ, ಇನ್ನೊಮ್ಮೆ ಹಣಕಾಸು ನೀತಿ ಮರುಪರಾಮರ್ಶೆಯಾಗುವವರೆಗೆ ಬ್ಯಾಂಕುಗಳು ತಾವು
ಸಾಮಾನ್ಯವಾಗಿ ಸ್ವೀಕರಿಸುವ ಠೇವಣಿ ಮೇಲೆ ಮತ್ತು ತಾವು ನೀಡುವ ರೀಟೇಲ್ ಮತ್ತು ಕಾರ್ಪೊರೇಟ್ ಸಾಲದ ಮೇಲೆ ವಿಧಿಸುವ ಬಡ್ಡಿದರದಲ್ಲಿ ಮಾರ್ಪಾಡು ಮಾಡುವುದಿಲ್ಲ ಮತ್ತು ಸಾಲಗಳ ಮಾಸಿಕ ಕಂತುಗಳಲ್ಲಿ ಯಾವುದೇ ವ್ಯತ್ಯಾಸದ ಸಾಧ್ಯತೆ ಇರುವುದಿಲ್ಲ.

ಅಷ್ಟರ ಮಟ್ಟಿಗೆ ಬ್ಯಾಂಕ್ ಗ್ರಾಹಕರು ನಿಶ್ಚಿಂತೆಯಿಂದ ಇರಬಹುದು. ಆದರೂ ದೇಶದ ರಾಜಕೀಯ, ಆರ್ಥಿಕ ಮತ್ತು ಬ್ಯಾಂಕಿಂಗ್ ವಲಯಗಳಲ್ಲಿ ಏನಾದರೂ ಮಹತ್ವದ ಘಟನೆ ನಡೆದು, ಅದು ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರಿದರೆ, ಬ್ಯಾಂಕುಗಳು ತಾವು ನೀಡುವ ಮತ್ತು ವಿಧಿಸುವ ಬಡ್ಡಿದರದ ನಿಟ್ಟಿನಲ್ಲಿ ಸ್ಪಂದಿಸುವ ಸಾಧ್ಯತೆ ಇರುತ್ತದೆ. ೨೦೨೨ರ ಮೇ ತಿಂಗಳಿಂದ ೨೦೨೩ರ ಫೆಬ್ರವರಿವರೆಗೆ ರೆಪೋ ದರ ಶೇ.೨.೫೦ರಷ್ಟು ಹೆಚ್ಚಾಗಿದ್ದು, ಮನೆ, ಕಾರು ಮತ್ತು ಇತರ ಸಾಲ ಪಡೆದವರು ಮಾಸಿಕ ಕಂತಿನ ಮೊತ್ತದಲ್ಲಿ ಹೆಚ್ಚಾಗಿ ಅಥವಾ ಸಾಲದ ಅವಧಿ ಹೆಚ್ಚಾಗಿ ಹೈರಾಣಾಗಿದ್ದರು.

ರೆಪೋ ದರದ ಸ್ಥಿರತೆಯಿಂದಾಗಿ ೨೦೨೩ರ ಫೆಬ್ರವರಿಯಿಂದ ಈ ಸಾಲಗಳ ಗ್ರಾಹಕರು ಸ್ವಲ್ಪ ನೆಮ್ಮದಿಯಿಂದ ಇದ್ದಾರೆ ಮತ್ತು ಇದೇ ಸಾಧ್ಯತೆಯು ಸ್ವಲ್ಪ ಕಾಲ ಮುಂದುವರಿಯುವ ಲಕ್ಷಣ ಕಾಣುತ್ತಿದೆ. ಆರ್‌ಬಿಐ ತನ್ನ ರೆಪೋ ದರವನ್ನು ಕಾಯ್ದುಕೊಂಡಿರುವ ಬಗ್ಗೆ ಜನಸಾಮಾನ್ಯರಲ್ಲಿ, ಬ್ಯಾಂಕಿಂಗ್ ವಲಯದಲ್ಲಿ, ಆರ್ಥಿಕ ತಜ್ಞರಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು, ಹಣಕಾಸು ನೀತಿಯು ಜನಸಾಮಾನ್ಯರ ದಿನಬಳಕೆ ವಸ್ತುಗಳ ಬೆಲೆ ಉತ್ತರಮುಖಿಯಾಗದಂತೆ ಎಚ್ಚರಿಕೆ ವಹಿಸಿದೆ ಎನ್ನುವುದು ಮುಖ್ಯವಾದ ಟೀಕೆ.

ರೆಪೋ ದರದ ಮೇಲೆ ಅಮೆರಿಕದ -ಡ್ ಮತ್ತು ಇಂಗ್ಲೆಂಡ್‌ನ ಲಿಬರ್ ರೇಟ್‌ಗಳ ನೆರಳು ಸದಾ ಇರುತ್ತಿದ್ದು, ಈ ಎರಡೂ ದರಗಳು ಏರುತ್ತಿದ್ದರೂ ೨೦೨೩ರ ಜುಲೈ ನಂತರ ಸ್ಥಿರವಾಗಿವೆ. ವಿಶ್ವಾದ್ಯಂತ ಯಾವ ದೇಶದಲ್ಲೂ ಬಡ್ಡಿದರದ ಏರಿಕೆ ಅಥವಾ ಇಳಿಕೆಯ ಪ್ರಕ್ರಿಯೆ ಕಾಣುತ್ತಿಲ್ಲ. ಅಮೆರಿಕನ್ -ಡ್ ಅಧ್ಯಕ್ಷರು ಬಡ್ಡಿದರ ಇಳಿತದ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. ಅಂತೆಯೇ ರೆಪೋ ದರವನ್ನು ಸ್ಥಿರವಾಗಿ ಇಡುವುದರ ಹಿಂದೆ ವಿಶ್ಲೇಷಕರು ರಾಜಕೀಯವನ್ನು ಕಾಣುತ್ತಿದ್ದಾರೆ. ಹಾಗೆಯೇ ಲೋಕಸಭಾ ಚುನಾವಣೆ ಮುಗಿಯುವವರೆಗೂ ಈ ಸ್ಥಿರತೆ ಮುಂದುವರಿಯುತ್ತದೆ ಎಂದು ಷರಾ ಬರೆಯುತ್ತಾರೆ. ೩ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗುವ
ಇಂಗಿತ ಕಾಣುತ್ತಿದೆ.

ಸ್ಪಷ್ಟ ಬಹುಮತದ ಸದೃಢ ಸರಕಾರವು ದೇಶದ ಆರ್ಥಿಕತೆಯ ಬೆನ್ನೆಲುಬು. ಅಧಿಕಾರದಲ್ಲಿದ್ದ ಪಕ್ಷಗಳು ಚುನಾವಣಾಪೂರ್ವದಲ್ಲಿ ಮತದಾರರ ಜೇಬಿಗೆ
ಕನ್ನ ಬೀಳದಂತೆ ಮತುವರ್ಜಿ ವಹಿಸುತ್ತವೆ. ಜೇಬನ್ನು ತುಂಬದಿದ್ದರೂ ಪರವಾಗಿಲ್ಲ, ಅದು ಹೆಚ್ಚು ಖಾಲಿಯಾಗದಂತೆ ಎಚ್ಚರಿಕೆ ವಹಿಸುತ್ತವೆ. ರೆಪೋ ದರದ ವಿಶೇಷವೆಂದರೆ, ಅದನ್ನು ಹೇಗೆ ಬದಲಾವಣೆ ಮಾಡಿದರೂ ಗ್ರಾಹಕನನ್ನು ಕಚ್ಚುತ್ತದೆ. ರೆಪೋ ಹೆಚ್ಚಾದರೆ ಸಾಲದ ಮೇಲಿನ ಬಡ್ಡಿದರ ಹೆಚ್ಚಾಗು ತ್ತದೆ; ಆದರೆ ಠೇವಣಿ ಮೇಲೆ ಹೆಚ್ಚು ಬಡ್ಡಿ ದೊರೆಯುತ್ತದೆ. ರೆಪೋ ದರ ತಗ್ಗಿದರೆ ಸಾಲದ ಮೇಲಿನ ಬಡ್ಡಿದರ ಇಳಿಯುತ್ತದೆ; ಆದರೆ ಠೇವಣಿ ಮೇಲಿನ ಆದಾಯ ಕಡಿಮೆಯಾಗುತ್ತದೆ.

ಇದು ಒಂದು ರೀತಿಯಲ್ಲಿ, ‘ನಿನ್ನ ನಗುವಿನಲ್ಲಿ ನಾನು ಅಳುವನ್ನು ಕಂಡೆ, ನಿನ್ನ ಅಳುವಿನಲ್ಲಿ ನಾನು ನಕ್ಕೆ’ ಎನ್ನುವಂತೆ. ರೆಪೋ ದರ ಹೆಚ್ಚಾದರೆ ಅದೇ ಪ್ರಮಾಣದಲ್ಲಿ ಸಾಲದ ಮೇಲಿನ ಬಡ್ಡಿದರ ಹೆಚ್ಚಾಗುತ್ತದೆ. ಆದರೆ, ಅದೇ ಪ್ರಮಾಣದಲ್ಲಿ ಠೇವಣಿ ಮೇಲಿನ ಬಡ್ಡಿದರ ಹೆಚ್ಚಾಗುತ್ತದೆ ಎನ್ನಲು ಸಾಧ್ಯವಿಲ್ಲ. ಅನುಭವಿಗಳ ಪ್ರಕಾರ ಸ್ವಲ್ಪ ಕಡಿಮೆಯೇ ಇರುತ್ತದೆ. ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಬಡ್ಡಿದರಗಳು, ಇನ್ನಿತರ ಹಣಕಾಸು ಮಾನದಂಡಗಳ ಸಂಗಡ ಚಿನ್ನದ ಮತ್ತು ತೈಲದ ಮೇಲೆ ಅವಲಂಬಿಸಿರುತ್ತವೆ. ಚಿನ್ನದ ಬೆಲೆಯಲ್ಲಿ ಏರುಪೇರು ಕಾಣದೆ ಸ್ವಲ್ಪ ಸ್ಥಿರತೆ ಇದ್ದರೂ, ಕಚ್ಚಾತೈಲದ ಬೆಲೆಯಲ್ಲಿ ಕಳೆದ ವಾರ ಕುಸಿತ ಕಂಡುಬಂದಿದ್ದು, ಬ್ರೆಂಟ್ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ ಶೇ.೧.೦೬ರಷ್ಟು ಕಡಿಮೆಯಾಗಿ ೭೬.೫೬
ಡಾಲರ್‌ಗೆ ಇಳಿದಿದೆ.

ಕಚ್ಚಾತೈಲದ ಬೆಲೆ ಇಳಿತ ದೇಶದ ಆರ್ಥಿಕ ವ್ಯವಸ್ಥೆಗೆ ಶುಭಸೂಚಕ ಎನ್ನಲಾಗುತ್ತದೆ. ಸೌದಿ ಅರೇಬಿಯಾ ಕಚ್ಚಾತೈಲದ ಬೆಲೆಯನ್ನು ಕಡಿಮೆ ಮಾಡಿದೆ
ಮತ್ತು ಏಷ್ಯಾದಲ್ಲಿರುವ ತನ್ನ ಖರೀದಿದಾರ ರಾಷ್ಟ್ರಗಳಿಗೆ ಕಚ್ಚಾತೈಲವನ್ನು ಕಡಿಮೆ ದರದಲ್ಲಿ ಮಾರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಜನವರಿಯಲ್ಲಿ ಈ ಬೆಲೆಯಿಳಿಕೆ ಆರಂಭವಾಗುತ್ತಿದೆ. ಭಾರತದ ಆಮದಿನಲ್ಲಿ ಕಚ್ಚಾತೈಲವು ಅಗ್ರಸ್ಥಾನದಲ್ಲಿದ್ದು, ಆಮದಿನ ಹೊರೆ ಇಳಿ ದಷ್ಟೂ ದೇಶದ ಆರ್ಥಿಕ ವ್ಯವಸ್ಥೆ ದೃಢವಾಗುತ್ತದೆ.

ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು ೬೦೪ ಶತಕೋಟಿ ಡಾಲರ್‌ಗೆ ಏರಿದ್ದು, ರೆಪೋ ದರವನ್ನು ಬದಲಾಯಿಸದಿರುವುದರಲ್ಲಿ ಇದರ ಪಾತ್ರ ಹೆಚ್ಚಾಗಿದೆ. ಒಂದು ದೇಶದ ಆರ್ಥಿಕತೆಯ ಗಟ್ಟಿತನವನ್ನು ಅಳೆಯುವುದು, ಆ ದೇಶ ಹೊಂದಿರುವ ವಿದೇಶಿ ವಿನಿಮಯ ನಿಧಿಯ ಮೇಲೆ. ಕೋವಿಡ್ ಮಹಾಮಾರಿಯ ನಂತರ ದೇಶದ ಉದ್ಯಮ ವಲಯವು ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಿದ್ದು, ಮೂಲಭೂತ ಸೌಕರ್ಯದಲ್ಲಿನ ಬೆಳವಣಿಗೆಯು ಶೇ.೧೨.೧ರ ಮಟ್ಟವನ್ನು ಮೀರಿದೆ. ಜಿಎಸ್‌ಟಿ ಸಂಗ್ರಹ ಸತತವಾಗಿ ಏರುತ್ತಿದ್ದು, ೧.೬೫ ಲಕ್ಷ ಕೋಟಿ ರುಪಾಯಿಯನ್ನು ದಾಟಿದೆ. ಹಣದುಬ್ಬರ ಇದ್ದರೂ, ಅದು ಸಹಿಸಿಕೊಳ್ಳಬಹುದಾದ ಶೇ.೫ರ ಮಿತಿಯೊಳಗೆ ಇದೆ. ಷೇರುಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆ ಮಟ್ಟದಲ್ಲಿ ಮೇಲೇರಿವೆ.

ಜಿಡಿಪಿ ಪ್ರಗತಿಯು ಶೇ.೭.೮೦ರಷ್ಟಿದ್ದು, ತಜ್ಞರ ಪ್ರಕಾರ ಆರ್ಥಿಕ ಪರಿಸ್ಥಿತಿಯು ರೆಪೋ ದರವನ್ನು ಕಡಿಮೆ ಮಾಡಲು ಅನುಕೂಲಕರವಾಗಿತ್ತು. ಆದರೂ,
ರೆಪೋ ದರ ಇಳಿಸುವುದರಿಂದ ಆರ್ಥಿಕತೆಯ ಸುಗಮ ಪ್ರಯಾಣಕ್ಕೆ ಅಡೆತಡೆಯಾಗಬಹುದು ಎನ್ನುವ ಚಿಂತನೆ ಆರ್‌ಬಿಐನಲ್ಲಿ ಮೂಡಿರಬಹುದು, ಅಂತೆಯೇ ಅದು ಸ್ಥಿರತೆಯನ್ನು ಕಾಯ್ದುಕೊಂಡಿದೆ ಎಂದು ಹೇಳಲಾಗುತ್ತದೆ. ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಆತಂಕಗೊಳ್ಳಬಹುದಾದ ಯಾವುದೇ ಅಂಶ ಇಲ್ಲದಿರುವುದು ಮತ್ತು ಆರ್ಥಿಕತೆಯ ಎಲ್ಲಾ ಮಾನದಂಡಗಳು ನಿರೀಕ್ಷೆಯ ಪರಿಽಯಲ್ಲಿರುವುದು ಹಾಗೂ ರೆಪೋ ಬದಲಾವಣೆಯು ಮುಂದೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಬಗೆಗೆ ಖಚಿತತೆ ಇಲ್ಲದೆ ಗೊಂದಲಮಯವಾಗಿರುವುದು ಆರ್‌ಬಿಐ ರಕ್ಷಣಾತ್ಮಕ ಆಟವನ್ನು ಆಡುವಂತೆ ಮಾಡಿದೆ ಎನ್ನಲಾಗುತ್ತಿದೆ.

ಗ್ರಾಹಕರಿಂದ ಸಂಗ್ರಹಿಸಿದ ಠೇವಣಿಯನ್ನು ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡಲು ಬಳಸಿಕೊಳ್ಳುತ್ತವೆ. ಗ್ರಾಹಕರಿಗೆ ನೀಡುವ ಬಡ್ಡಿದರ ಮತ್ತು ವಿಧಿಸುವ ಬಡ್ಡಿದರದ ವ್ಯತ್ಯಾಸವನ್ನು ‘ನೆಟ್ ಇಂಟರೆಸ್ಟ್ ಮಾರ್ಜಿನ್’ ಅಥವಾ ನಿವ್ವಳ ಬಡ್ಡಿ ಎನ್ನುತ್ತಾರೆ. ಬ್ಯಾಂಕುಗಳ ಖರ್ಚುವೆಚ್ಚವನ್ನು ನಿಭಾಯಿಸಲು ಇದು ಕನಿಷ್ಠ ಶೇ.೩ರಷ್ಟಾದರೂ ಇರಬೇಕು ಎಂಬುದು ‘ಥಂಬ್ ರೂಲ್’. ಸರಕಾರದ ನಾನಾ ರೀತಿಯ ನಿಯಂತ್ರಣದಿಂದಾಗಿ ಈ ಮಾರ್ಜಿನ್ ಸಣ್ಣದಾಗುತ್ತಿದ್ದು, ಬ್ಯಾಂಕ್ ನಿರ್ವಹಣೆ ಒತ್ತಡದಲ್ಲಿ ಸಿಲುಕಿದೆ. ಬ್ಯಾಂಕುಗಳು ಗ್ರಾಹಕರ ಸ್ಥಿರ ಠೇವಣಿ ಮೇಲೆ ನೀಡುವ ಬಡ್ಡಿಗೆ ಹೋಲಿಸಿದರೆ, ರೆಪೋ ಸುಸ್ತಿ ಎನ್ನಬಹುದು. ಅಂತೆಯೇ ಬ್ಯಾಂಕುಗಳಿಗೆ ಹೆಚ್ಚಿನ ಮಾರ್ಜಿನ್ ದೊರಕುತ್ತದೆ.

ಗ್ರಾಹಕರ ಉಳಿತಾಯ ಖಾತೆಯ ಮೇಲೆ ನೀಡುವ ಬಡ್ಡಿದರ ಕಡಿಮೆ ಇರಬಹುದು, ಆದರೆ ಬ್ಯಾಂಕುಗಳಿಗೆ ಉಳಿತಾಯ ಖಾತೆಗಳಿಂದ ಸಂಗ್ರಹವಾಗುವ ಠೇವಣಿ ಗಮನಾರ್ಹವಾಗಿರುವುದಿಲ್ಲ. ಅಂತೆಯೇ ಉಳಿತಾಯ ಖಾತೆಯಲ್ಲಿರುವ ಠೇವಣಿಯಿಂದ ಗ್ರಾಹಕರ ಸಾಲದ ಬೇಡಿಕೆಯನ್ನು ಬ್ಯಾಂಕುಗಳು ಪೂರೈಸಲಾಗುವುದಿಲ್ಲ. ಈ ಒತ್ತಡದಿಂದ ಪಾರಾಗಲು ಬ್ಯಾಂಕುಗಳು ರೆಪೋ ಹೆಸರಿನಲ್ಲಿ ಆರ್‌ಬಿಐನ ಮೊರೆಹೋಗುತ್ತವೆ. ಆರ್‌ಬಿಐ ತನ್ನಲ್ಲಿ ಮಿಗತೆ
ಇರುವ ನಿಽಯನ್ನು ಬ್ಯಾಂಕುಗಳಿಗೆ ಸಾಲ ನೀಡಿ ಆದಾಯ ಗಳಿಸುತ್ತದೆ. ಇದರಲ್ಲಿ ಬ್ಯಾಂಕುಗಳು ಮತ್ತು ಆರ್‌ಬಿಐ ಇಬ್ಬರ ಲಾಭವೂ ಇರುತ್ತದೆ.

ಈ ಬಾರಿಯ ಆರ್‌ಬಿಐ ಹಣಕಾಸು ನೀತಿಯ ಇನ್ನೊಂದು ವಿಶೇಷವೆಂದರೆ, ಯುಪಿಐ ಪಾವತಿಯ ಮೇಲಿರುವ ಮಿತಿಯನ್ನು ೫ ಲಕ್ಷ ರು.ಗೆ ಏರಿಸಿರುವುದು.
ಇತ್ತೀಚೆಗೆ ಬ್ಯಾಂಕುಗಳಲ್ಲಿ ಡಿಡಿ ವ್ಯವಸ್ಥೆ ಕಡಿಮೆಯಾಗಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಪಾವತಿ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ವೈದ್ಯಕೀಯ ಸೇವೆಗೆ ಮಾಡುವ ಪಾವತಿ ವಿಷಯದಲ್ಲಿ ತೊಂದರೆಯಾಗುತ್ತಿದ್ದು, ಈಗ ಸರಾಗವಾಗಿ ಪಾವತಿಸಬಹುದಾಗಿದೆ. ಇದು ಬಹುದಿನಗಳ ಬೇಡಿಕೆಯಾಗಿತ್ತು. ಹಣದುಬ್ಬರ ಮತ್ತು ಬಡ್ಡಿದರದ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿ ಜನತೆಯ ಆಕ್ರೋಶದಿಂದ ಪಾರಾಗಿದೆ ಎನ್ನಬಹುದು.

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)