Wednesday, 11th December 2024

ಆರ್‌ಸಿಬಿ ಟು ಕಾಮೆಂಟೇಟರ‍್ಸ್ ಮಾತಾಡೋದಲ್ಲ, ಮಾಡಿ ತೋರಿಸಿ

ತುಂಟರಗಾಳಿ

ಸಿನಿಗನ್ನಡ

ಅಪ್ಪ ತುಂಬಾ ಹೆಸರು ಮಾಡಿದ ವ್ಯಕ್ತಿ ಆಗಿದ್ರೆ ಆಗೋ ಸಮಸ್ಯೆಗಳು ಇವು. ಜನ ಅವರ ಮಕ್ಕಳನ್ನು ನೋಡಿ, ನೀವೂ ಅವರ ಥರನೇ ಆಗಬೇಕು, ಅವರ ಥರನೇ ಇರಬೇಕು ಅಂತ ಷರಾ ಬರೆದುಬಿಡುತ್ತಾರೆ. ಅಪ್ಪನ ಗುಣದಲ್ಲಿ ಒಂದೆರಡು ಮಿಸ್ ಆದ್ರೂ ಮಕ್ಕಳಿಗೆ ಗ್ರಹಚಾರ ಗ್ಯಾರಂಟಿ. ಅಂಥದ್ದೇ ದಾರಿಯಲ್ಲಿ ಈಗ ನಮ್ಮ ಕನ್ನಡದ ನಟ ಶಿವರಾಜ್ ಕುಮಾರ್ ಇದ್ದಾರೆ.

ಹೇಳಿ ಕೇಳಿ ಡಾ. ರಾಜ್ ಕುಮಾರ್ ಅವರು ರಾಜಕೀಯದಿಂದ ದೂರ ಇದ್ದವರು. ಎಂಥ ದೊಡ್ಡ ಆಮಿಷಗಳು ಬಂದಿದ್ರೂ ಅಣ್ಣಾವ್ರು ಅವುಗಳಿಗೆ ಮರುಳಾಗಲಿಲ್ಲ. ಆದರೆ ಈಗ ದೊಡ್ಡ ಮನೆಯ ಸೊಸೆ ಗೀತಾ ಶಿವರಾಜ್ ಕುಮಾರ್ ಮತ್ತೊಮ್ಮೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಹಜವಾಗಿಯೇ ಗಂಡನಾಗಿ ಶಿವಣ್ಣ ಅವರಿಗೆ ಬೆಂಬಲ ಕೊಟ್ಟು ಹೆಂಡತಿಯ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡ್ತಾ ಇದ್ದಾರೆ. ಆದರೆ ಇದು ಹಲವರ ಕೆಂಗಣ್ಣಿಗೆ ಗುರಿ ಆಗಿದೆ. ಬೇರೆ ಯಾರೋ ಯಾಕೆ, ಸ್ವಂತ ಶಿವಣ್ಣನ ಅಭಿಮಾನಿಗಳೇ ಅಪಸ್ವರ ಹಾಡೋಕೆ ಶುರು ಮಾಡಿದ್ದಾರೆ. ಶಿವಣ್ಣ ಅಭಿಮಾನಿಗಳಾಗಿದ್ದು ರಾಜಕೀಯ ವಾಗಿ ಬಿಜೆಪಿ ಪರ ನಿಂತಿರೋರಿಗೆ ಶಿವಣ್ಣ ಕಾಂಗ್ರೆಸ್ ಪರ ಪ್ರಚಾರ ಮಾಡ್ತಾ ಇರೋದು ಸರಿಯಾಗಿ ಕಾಣುತ್ತಿಲ್ಲ.

ಆದರೆ ಗೀತಾ ಶಿವರಾಜ್ ಕುಮಾರ್ ಅವರು ಈ ಮುಂಚೆ ಜೆಡಿಎಸ್‌ನಲ್ಲಿ ಇದ್ದವರು. ಹಾಗಾಗಿ ಅವರೇನೂ ಹೊಸದಾಗಿ ರಾಜಕೀಯಕ್ಕೆ ಬಂದಿಲ್ಲ. ಇನ್ನು ಶಿವಣ್ಣ ಕೂಡಾ ಇದೇ ಮೊದಲ ಬಾರಿಗೆ ಏನೂ ಹೆಂಡತಿಯ ಪರ ನಿಂತಿಲ್ಲ. ಹಾಗಾಗಿ ಈಗ ಮಾತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಾ ಇರೋದಕ್ಕೆ ಕಾರಣ, ಅವರು ಕಾಂಗ್ರೆಸ್ ಪರ ಇದ್ದಾರೆ ಅನ್ನೋದು. ಹಾಗಾಗಿ ಇದು ಕೇವಲ ಬಿಜೆಪಿಗರ ಅಸಮಾಧಾನ ಅಷ್ಟೇ ಅಂದುಕೊಂಡು ಶಿವಣ್ಣ ತಮಗೆ ಸರಿ ಅನ್ನಿಸಿದ್ದನ್ನು ಮಾಡ್ತಾರಾ ಎಂಬುದನ್ನು
ಕಾದು ನೋಡಬೇಕಾಗಿದೆ.

ಲೂಸ್ ಟಾಕ್
ಲಕ್ಷ್ಮಣ್ ಸವದಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಬಿಜೆಪಿ ಬಿಟ್ಟು ಹೋದ ಮೇಲೆ ಶೆಟ್ಟರ್ ಬಗ್ಗೆ ತುಂಬಾ ಜನ ಮಾತಾಡ್ತಾ ಇzರೆ. ನಿಮ್ ಬಗ್ಗೆ ಯಾರೂ ಜಾಸ್ತಿ ಮಾತಾಡ್ತಾ ಇಲ್ವಲ್ಲ?
-ಅಲ್ಲರೀ, ಅವ್ರು ಲಿಂಗಾಯತರು ಅಲ್ವಾ ಇಲ್ಲಾಂದ್ರೆ, ಎಲ್ರೂ ಅವ್ರನ್ನ ಯಾಕೆ ಶೆಟ್ರು ಅಂತ ಕರೀತಾರೆ?

ಯಾರಿಗೂ ಬರದೇ ಇರೋ ಡೌಟು ನಿಮಗೆ ಬರತ್ತೆ. ನೋಡಿ. ಸರಿ, ಲಕ್ಷ್ಮಣ ಅಂತ ಹೆಸರಿಟ್ಕೊಂಡು ರಾಮನ
ಪಕ್ಷನೇ ಬಿಟ್ಟು ಬಂದ್ರಲ್ಲ, ಇದ್ ಸರೀನಾ?
-ಪಕ್ಷದಿಂದ ಪಕ್ಷಕ್ಕೆ ಹಾರಿ ನಾನು ಹನುಮಂತ ಅಂತ ಪ್ರೂವ್ ಮಾಡಿದ್ದೇನೆ. ಅಷ್ಟು ಸಾಕಲ್ಲ ಬಿಜೆಪಿಗೆ.

ಅದೂ ಸರಿ ಬಿಡಿ, ಆಯ್ತು, ಬಿಜೆಪಿ ಬಿಟ್ಟು ಹೋದ ಮೇಲೂ ಜನ ನಿಮ್ಗೆ ಓಟ್ ಹಾಕ್ತಾರೆ ಅಂತ ಗ್ಯಾರಂಟಿ ಇದೆಯಾ?
-ಬಿಜೆಪಿಯವರು ಗ್ಯಾಸ್ ರೇಟ್ ಜಾಸ್ತಿ ಮಾಡಿದ್ಮೇಲೆ, ಜನ ಸೌದಿಗೆ ಓಟ್ ಹಾಕ್ಲೇಬೇಕಲ್ಲ.

ಬಿಟ್ರೆ ಇಂಡಿಯಾ ಬಿಟ್ಟು ಸೌದಿಗೇ ಹೋಗಿ ಎಲೆಕ್ಷನ್ ನಿ ಥರ ಇದ್ದೀರಾ ನೀವು
-ರಾಜಕಾರಣಿಗಳಿಗೆ ಒಂದ್ ಕಡೆ ಕಾಲ್ ನಿಲ್ಲಲ್ಲ ಅಂದ್ಮೇಲೆ, ಎಲ್ಲಿಗೆ ಬೇಕಾದ್ರೂ ಹೋಗಿ ಎಲೆಕ್ಷನ್ನಿಗೆ ನಿಂತ್ಕೊಬಹುದು ಬಿಡಿ.
ಈಗ ಬಿಜೆಪಿಯವರು ಯಾರೂ ನಿಮ್ಮನ್ನ ಸದನದಲ್ಲಿ ಕೂತು ನೀಲಿ ಚಿತ್ರ ನೋಡಿದವರು ಅಂತ ಆಡಿಕೊಳ್ತಾ ಇಲ್ವಾ
-ಅದೆಂಗ್ ಆಡ್ಕೊತಾರೆ. ಅವ್ರ್ ಸಿಡಿನೇ ನೋಡಿದ್ದು ನಾನು.

ನೆಟ್ ಪಿಕ್ಸ್
ಒಂದು ದಿನ ಮಧ್ಯಾಹ್ನ ಒಂದು ಕ್ಯೂಟ್ ನಾಯಿಮರಿ ಅಷ್ಟೇ ಕ್ಯೂಟ್ ಆಗಿರೋ ಹೇಮಾ ಮನೆಗೆ ಬಂತು. ಮನೆ ಬಾಗಿಲ ಹತ್ರಾನೇ ನಿಂತ್ಕಂಡಿದ್ದ ನಾಯಿ ಮರಿ ನೋಡಿ, ಅದರ ತಲೆ ಸವರಿದಳು ಹೇಮಾ. ನಾಯಿ ಮೆಲ್ಲನೆ ಮನೆ ಒಳಗೆ ಬಂತು.
ಆ ಕಡೆ, ಈ ಕಡೆ ನೋಡಿ ಒಂದು ಪ್ರಶಸ್ತವಾದ ಮೂಲೆಯಲ್ಲಿ ಹೋಗಿ ಮಲಗಿಬಿಟ್ಟಿತು, ಒಂದೆರಡು ಗಂಟೆಗಳಾದ ಮೇಲೆ ಎದ್ದು ನಿಂತ ನಾಯಿಯನ್ನು ನೋಡಿ ಹೇಮಾ ಬಾಗಿಲು ತೆರದಳು. ಅವಳನ್ನೇ ಹಿಂಬಾಲಿಸಿದ ನಾಯಿ ಬಾಗಿಲು ತೆರೆದ ಕೂಡಲೇ ಹೊರಟು ಹೋಯಿತು, ಮರುದಿನ ಪಕ್ಕಾ ಆದೇ ಸಮಯಕ್ಕೆ ಬಾಗಿಲ ಬಳಿ ಏನೋ ಸದ್ದಾಯಿತು, ಬಾಗಿಲು ತೆರೆದರೆ ಅದೇ ನಾಯಿ. ಹೇಮಾಳನ್ನು ನೋಡಿದ ಕೂಡಲೆ ಅವಳ ಹಿಂದಿನಿಂದ ನುಸುಳಿಕೊಂಡು ಒಳಗೆ ಹೋಗಿ ಮತ್ತೆ ಅದೇ ಮೂಲೆಯಲ್ಲಿ ನೆಮ್ಮದಿಯಾಗಿ ಮಲಗಿಕೊಂಡಿತು. ಒಂದೆರಡು ಗಂಟೆಗಳ ನಂತರ ಎದ್ದು ಹೋಯಿತು.

ಇದು ಪ್ರತಿದಿನ ಕಂಟಿನ್ಯೂ ಆಗತೊಡಗಿತು. ಹೇಮಾಗೆ ಆಶ್ಚರ್ಯ. ಯಾರ ನಾಯಿ ಇದು, ಇಲ್ಲಿ ಯಾಕೆ ಬರುತ್ತೆ, ಇಲ್ಲಿ ಯಾಕೆ ಮಲಗುತ್ತೆ ಅಂತ. ಒಂದು ದಿನ ನಾಯಿ ಹೋಗುವಾಗ ‘ನಾಯಿ ಮಾಲೀಕರ ಗಮನಕ್ಕೆ, ಈ ನಾಯಿ ಯಾರದೋ ಗೊತ್ತಿಲ್ಲ. ಇದು ಪ್ರತಿದಿನ ಮಧ್ಯಾಹ್ನ ನಮ್ಮ ಮನೆಗೆ ಬಂದು ನಿದ್ದೆ ಮಾಡಿ ಎದ್ದು ಹೋಗುತ್ತದೆ. ನನಗೆ ಏನೂ ಅರ್ಥ ಆಗುತ್ತಿಲ್ಲ’ ಎಂದು ಒಂದು ಚೀಟಿಯಲ್ಲಿ ಬರೆದು ನಾಯಿಯ ಕುತ್ತಿಗೆಯ ಪಟ್ಟಿಗೆ ಸಿಕ್ಕಿಸಿ ಕಳಿಸಿದಳು.

ಸರಿ, ಮರುದಿನ ನಾಯಿ ಮತ್ತೆ ಬಂತು. ಎಂದಿನಂತೆ ಬಾಗಿಲು ತೆರೆದ ಕೂಡಲೆ ತನ್ನ ಮಲಗುವ ಜಾಗ ಹುಡುಕಿಕೊಂಡು ಹೊರಟ ನಾಯಿಯ ಕುತ್ತಿಗೆಯಲ್ಲಿ ಇನ್ನೊಂದು ಚೀಟಿ ಇತ್ತು. ಅದರಲ್ಲಿ ಬರೆದಿತ್ತು ‘ಇದು ನಮ್ಮನೆ ನಾಯಿ, ವಟ, ವಟ
ಮಾತನಾಡುವ ನನ್ನ ಹೆಂಡತಿಯ ಕಾಟ ಸಹಿಸಿಕೊಳ್ಳೋಕಾಗದೆ, ಮಧ್ಯಾಹ್ನದ ನಿದ್ದೆಗಾಗಿ ಅದು ನಿಮ್ ಮನೆಗೆ ಬರ್ತಾ ಇದೆ, ಅಂದ ಹಾಗೆ, ಇಫ್ ಯೂ ಡೋಂಟ್ ಮೈಂಡ್, ನಾಳೆಯಿಂದ ನಾಯಿ ಜೊತೆ ನಾನೂ ಬರ್ಲಾ?’

ಲೈನ್ ಮ್ಯಾನ್

ಆರ್‌ಸಿಬಿ ತಂಡಕ್ಕೆ ಮತ್ತೊಬ್ಬ ಕಾಮೆಂಟೇಟರ್ ಕೇದಾರ್ ಜಾಧವ್ ಆಯ್ಕೆ
-ಸುಮ್ನೆ ಕುಂತು ಮಾತಾಡೋದಲ್ಲ, ಮಾಡಿ ತೋರ್ಸಿ ಅಂತ ಕಾಮಂಟೇಟರ್ ಗಳಿಗೆ ಚಾಲೆಂಜ್ ಹಾಕ್ತಾ ಇದೆ ಆರ್‌ಸಿಬಿ

ಮೊನ್ನೆ ವಿರಾಟ್ ಕೊಹ್ಲಿ ಲಕ್ನೋ ತಂಡದ ಮೇಲೆ ಸೇಡು ತೀರಿಸಿಕೊಂಡ ಮೇಲೆ
-ಆರ್‌ಸಿಬಿ ಅಂದ್ರೆ ಉರ್ಸಿಬಿ ಅನ್ನೋ ಥರ ಆಗಿದೆ

ಕೂಲ್ ಕಸ್ಟಮರ್ ಅಂದ್ರೆ ಯಾರು?
-ಐಸ್ ಕ್ರೀಮ್ ಅಂಗಡಿಯ ಗ್ರಾಹಕ

ಸಿನಿಮಾ ರಂಗದಲ್ಲಿ ಸಂಭಾವಿತರು ಅಂದ್ರೆ ಯಾರು?
-ಸಂಭಾವನೆ ಕೇಳದೇ ಇರೋರು

ಸಿಗರೇಟು ಸೇದೋದನ್ನ ಬಿಡಲಾಗದವನಿಗೆ ಏನು ಹೇಳಬೇಕು?
-‘ಸುಟ್ಟು’ ಗುಣ ಸುಟ್ಟರೂ ಹೋಗಲ್ಲ

ಎಣ್ಣೆ ಹೊಡೆದು ಮಾಡೋ ವಿಡಿಯೋ ಕಾಲ್
-ಝೂಮ್ ಕಾಲ್

‘ಲೈಟ್ ಹಾರ್ಟೆಡ್’ ಮನುಷ್ಯ ಅಂದ್ರೆ ಯಾರು?
-ಎದೆಯಲ್ಲಿ ಜ್ಞಾನದ ಹಣತೆ ಇರೋನು

ಟೆಲಿಪ್ರಾಂಪ್ಟರ್‌ನಲ್ಲಿ ಆಡೋ ಮಾತು
-ಕಿವಿಮಾತು
ಮಂಜು ಸುರಿದು ಆಗುವ ಸಾವು ನೋವಿಗೆ ಕಾರಣ
-ಸ್ನೋ ಪಾಯಿಸನ್

– ಫುಡ್ ಮಾರುವ ಫುಟ್ ಪಾತ್
-ಫುಡ್ ಪಾತ್