Friday, 13th December 2024

ಮಾತು ಕೇಳಿಸಿಕೊಳ್ಳುವ ಮೊದಲೇ ಪ್ರತಿಕ್ರಿಯಿಸುವವರ ಕುರಿತು…

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಮೊನ್ನೆ ವಿಶ್ವವಾಣಿ ಕ್ಲಬ್ ಹೌಸಿನಲ್ಲಿ ಒಂದು ಕಾರ್ಯಕ್ರಮ ಮಾಡಿದ್ದೆವು. ‘ಅಪ್ಪು ಆತ್ಮದೊಂದಿಗೆ ಡಾ.ರಾಮಚಂದ್ರ ಗುರೂಜೀ ಮಾತಾಡ್ತಾರಂತೆ’ ಎಂದು ಸಾಕಷ್ಟು ಯೋಚಿಸಿಯೇ ಕಾರ್ಯಕ್ರಮದ ಶೀರ್ಷಿಕೆ ನೀಡಿದ್ದೆವು. ಪ್ರತಿ ದಿನಕಾರ್ಯಕ್ರಮಕ್ಕೆ ಮುನ್ನ, ನಾವು ಪ್ರಕಟಣೆ ನೀಡುವುದು ಸಂಪ್ರದಾಯ.

ಫೇಸ್ ಬುಕ್, ಟ್ವಿಟರ್ ಮತ್ತು ವಾಟ್ಸಾಪ್ ಗಳಲ್ಲಿ ಪೋಸ್ಟರುಗಳನ್ನು ಸರ್ಕ್ಯುಲೇಟ್ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹರಿಬಿಡುತ್ತಿದ್ದಂತೆ,
ಶುರುವಾಯಿತು ನೋಡಿ, ಚರ್ಚೆ, ಸಂವಾದ, ಟ್ರೋಲ್, ಬೈಗುಳ…ಒಂದಿಬ್ಬರು ಬೇರೆ ಬೇರೆ ಮೊಬೈಲಿನಿಂದ ಫೋನ್ ಮಾಡಿ ಬೆದರಿಕೆ ಹಾಕಿದರು. ಇಂದಿನ ಕಾರ್ಯಕ್ರಮ ರದ್ದು  ಮಾಡದಿದ್ದರೆ, ಪರಿಣಾಮ ಎದುರಿಸ ಬೇಕಾಗಿತ್ತದೆ ಎಂದು ಧಮಕಿ ಹಾಕಿದರು. ಭಟ್ಟರಿಗೆ ಇದು ಬೇಕಿತ್ತಾ? ಇಂಥ ಚೀಪ್ ಗಿಮಿಕ್ ಬಿಟ್ಟುಬಿಡಿ… ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ… ಮೂಢನಂಬಿಕೆಗಳನ್ನು ಹಬ್ಬಿಸಬೇಡಿ….ವಿಶ್ವವಾಣಿ ಕ್ಲಬ್ ಘನತೆ ಕಾಪಾಡಿ… ಈ ಧಾಟಿಯ ಅನೇಕ ಮೆಸೇಜುಗಳು ಬಂದವು.

ಈ ರೀತಿಯ ಪ್ರತಿಕ್ರಿಯೆ, ಬೈಗುಳ, ಬೆದರಿಕೆಗಳು ನನಗೆ ಹೊಸತಲ್ಲ. ಇದು ಕಳೆದ ಇಪ್ಪತ್ತೆರಡು ವರ್ಷಗಳ ನಿತ್ಯೋತ್ಸವವೇ. ಇವು ಇಲ್ಲದಿದ್ದರೇ ಬದುಕು ಬರಡು. ಚರ್ಚೆಗೆ ಬಂದರೆ ಯಾರ ಜತೆಗಾದರೂ ಕುಳಿತು ಕೊಳ್ಳಬೇಕು ಮತ್ತು ಬೆದರಿಕೆ ಹಾಕಿದವರು ಯಾರೇ ಆಗಲಿ, ಅದಕ್ಕೆ ಜಗ್ಗಬಾರದು, ಬಗ್ಗಬಾರದು ಎಂಬುದು ವೃತ್ತಿ ಕಲಿಸದ ಪಾಠ. ‘ವಿಶ್ವವಾಣಿ’ಯಲ್ಲಿ ತಮ್ಮ ವಿರುದ್ಧ ಪ್ರಕಟವಾದ ವರದಿ ಯೊಂದರಿಂದ ಕ್ರುದ್ಧರಾದ ಮುಖ್ಯಮಂತ್ರಿಯೊಬ್ಬರು, ನನ್ನ ವಿರುದ್ಧ ಕೇಸು ಹಾಕಿ, ಒಂದು ದಿನದ ಮಟ್ಟಿಗಾದರೂ ಜೈಲಿಗೆ ಕಳಿಸಬೇಕೆಂದು ನಡೆಸಿದ ಹುನ್ನಾರಕ್ಕೂ ಸೊಪ್ಪುಹಾಕಲಿಲ್ಲ.

ಇವೆಲ್ಲ ಸಂಪಾದಕರ ಜೀವನದಲ್ಲಿ ಸಾಮಾನ್ಯ. ಇಂಥ ಪ್ರಸಂಗಗಳನ್ನು ಆಗಾಗ ಎದುರಿಸಿ ನಮ್ಮಲ್ಲೂ ಒಂಥರದ ಭಂಡತನ ಬಂದಿರುತ್ತದೆ. ಹೀಗಾಗಿ ಬಡಪೆಟ್ಟಿಗೆ ಸುಲಭಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೈಯ್ದು, ನಿಂದಿಸಿ ಕೆಲವರು ವಿಕೃತ ಸಂತೋಷ ಅನುಭವಿಸುತ್ತಾರೆ. ಅಂಥವರಿಗೆ ನನ್ನ ವಿರೋಧವಿಲ್ಲ. ಅದು ಅವರ ಜನ್ಮ ಸಿದ್ಧ ಹಕ್ಕು. ಅದನ್ನು ಅವರು ಚೆನ್ನಾಗಿಯೇ ಅನುಭವಿಸಲಿ, ಅಭ್ಯಂತರವಿಲ್ಲ. ಅಂಥವರ ಕಾಮೆಂಟುಗಳನ್ನು ನಾನು ಡಿಲೀಟ್ ಕೂಡ ಮಾಡುವುದಿಲ್ಲ. ಅಷ್ಟಕ್ಕೂ ಅವರವರ ಕಾಮೆಂಟುಗಳು ಅವರವರ ಯೋಚನೆಗೆ ಹಿಡಿದ ಕೈಗನ್ನಡಿ. ಹೀಗಾಗಿ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅಂದು ಅಷ್ಟಕ್ಕೂ ನಾವು ಹೇಳಿದ್ದೇನು? ‘ಅಪ್ಪು ಆತ್ಮದ ಜತೆಗೆ ಮಾತಾಡ್ತಾರಂತೆ ಡಾ.ರಾಮಚಂದ್ರ ಗುರೂಜೀ’ ಅಂತಶೀರ್ಷಿಕೆ ನೀಡಿದೆವು.

ಇದರಲ್ಲಿ ತಪ್ಪೇನಿದೆಯೋ ನಾ ಕಾಣೆ. ಒಂದು ವೇಳೆ ಈ ಕಾರ್ಯಕ್ರಮವನ್ನು ಬೇರೆ ಕ್ಲಬ್ ಆಯೋಜಿಸಿದ್ದರೆ, ಬೇರೆ ಪತ್ರಿಕೆಯಲ್ಲಿ ಈ ಶೀರ್ಷಿಕೆಯಡಿಯಲ್ಲಿ ಲೇಖನ ಬರೆದಿದ್ದರೆ, ಖಂಡಿತ ಅದನ್ನು ನಾನು ಕೇಳುತ್ತಿದ್ದೆ ಮತ್ತು ಓದುತ್ತಿದ್ದೆ. ನಂತರ ಆ ಬಗ್ಗೆ ಪ್ರತಿಕ್ರಿಯಿಸುತ್ತಿದ್ದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲ ಧರ್ಮ. ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುನ್ನ ಬೇರೆಯವರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಿಸಿಕೊಳ್ಳಬೇಕು ಅಥವಾ ಬೇರೆಯವರ ಲೇಖನವನ್ನು ಓದಬೇಕು. ನಂತರ ನಮ್ಮ ಅನಿಸಿಕೆಗಳನ್ನು ಹೇಳಬೇಕು.

ಯಾವುದೇ ಸಂವಾದ, ಚರ್ಚೆ, ಅನುಸಂಧಾನ ನಡೆಯುವ ಕ್ರಮವೇ ಅದು. ಬೇರೆಯವರ ಅಭಿಪ್ರಾಯಗಳನ್ನು ಕೇಳಿದ ಬಳಿಕ ಅನಿಸಿದ್ದನ್ನುಕಠೋರ ಮಾತುಗಳ ಹೇಳಲಿ, ಪರವಾಗಿಲ್ಲ. ಆದರೆ ಅಭಿಪ್ರಾಯವನ್ನೇ ಹೇಳುವ ಮುನ್ನ, ಕೇಳದ ಮುನ್ನ, ಅನಿಸಿಕೆಗಳನ್ನು ವ್ಯಕ್ತಪಡಿಸುವುದಿದೆಯಲ್ಲ, ಅದು ಅವಿವೇಕದ ಪರಾಕಾಷ್ಠೆ.
‘ವಿಶ್ವವಾಣಿ’ಯಲ್ಲಿ ನಾಳೆ ಪ್ರಕಟವಾಗುವ ಅಂಕಣ ಅಥವಾ ಲೇಖನದ ಬಗ್ಗೆ ಹಿಂದಿನ ದಿನವೇ ಪ್ರಕಟಣೆಯನ್ನು ಪೋಸ್ಟರುಗಳ ಮೂಲಕ ಸಾಮಾಜಿಕ ಜಾಲತಾಣ ಗಳಲ್ಲಿ ಬಿಡುಗಡೆ ಮಾಡುತ್ತೇವೆ. ಲೇಖನವನ್ನೇ ಓದಿರುವುದಿಲ್ಲ, ಅದರ ಶೀರ್ಷಿಕೆ ನೋಡಿಯೇ ಆಗಲೇ ಬೈಗುಳ, ಬೆದರಿಕೆ, ಚರ್ಚೆ ಶುರುವಾಗಿಬಿಟ್ಟಿರುತ್ತದೆ. ಅದನ್ನು ನೋಡಿ, ‘ಅಲ್ರಪ್ಪಾ, ನಾಳೆ ಬೆಳಗಾಗುವ ತನಕ ಕಾಯಿರಿ, ಅಂಕಣವನ್ನು ಓದಿರಿ, ನಂತರ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರಿ’ ಎಂದು ಹೇಳಿದರೂ, ಮುಂಗಾಲಪುಟಿಕೆ ಸ್ವಭಾವದವರು ಗದ್ದಲವೆಬ್ಬಿಸಿ, ಲಗಾಡಿ ತೆಗೆದಿರುತ್ತಾರೆ.

ಇವರು ಮಹಾ ಅಪಾಯಕಾರಿಗಳು. (ಗಡ್ಡಬಿಟ್ಟವರೆಲ್ಲರೂ ಸಾಬರು, ಸಾಬರೆಲ್ಲರೂ ಭಯೋತ್ಪಾದಕರು, ಹೀಗಾಗಿ ಗಡ್ಡಬಿಟ್ಟವರೆಲ್ಲ ಭಯೋತ್ಪಾದಕರು ಎಂದು
ಹೇಳಿದಂತೆ) ಹಿಂದೆ-ಮುಂದೆ ನೋಡದೆ, ವಿಷಯವನ್ನು ಪೂರ್ತಿ ಅರಿಯದೆ ಪ್ರತಿಕ್ರಿಯೆ ವ್ಯಕ್ತಪಡಿಸುವವರು, ಕ್ರಮಕ್ಕೆ ಮುಂದಾಗುವವರು ಅಪಾಯಕಾರಿಗಳು. ಕಾರಣ ಇವರು ವಿಚಾರಹೀನರಾಗಿ ಮುನ್ನುಗ್ಗುವವರು. ಇಲ್ಲಿ ತಮಾಷೆಯ ಮತ್ತು ದುರ್ದೈವದ ಸಂಗತಿಯೇನೆಂದರೆ, ಹಿಂದಿನ ರಾತ್ರಿ ಉಗ್ರ ಪ್ರತಾಪ ತೋರಿ ದವರು, ಬಾಯಿಗೆ ಬಂದಂತೆ ವ್ಯಕ್ತಪಡಿಸಿದವರು, ಮೆಸೇಜು/ಕಾಮೆಂಟು ಬರೆದವರು, ಈ ಲೇಖನ ಪ್ರಕಟವಾದರೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದೆಲ್ಲ ಹಾರಾಡಿದವರು, ಪತ್ರಿಕೆಯಲ್ಲಿ ಪ್ರಕಟವಾದ ಆ ಅಂಕಣವನ್ನುಮರುದಿನ ಓದಿದ ಬಳಿಕ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸುವುದಿಲ್ಲ. ನನಗೆ ಇದು ಬಹಳ ತಮಾಷೆ ಅನಿಸುತ್ತದೆ.

ಮೊನ್ನೆಯೂ ಹಾಗೆ ಆಯಿತು. ‘ಅಪ್ಪು ಆತ್ಮದ ಜತೆಗೆ ಮಾತಾಡ್ತಾರಂತೆ ಡಾ.ರಾಮಚಂದ್ರ ಗುರೂಜೀ’ ಕಾರ್ಯಕ್ರಮ ಕೇಳಿಸಿಕೊಂಡ ನಂತರ ಯಾರೂ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಲಿಲ್ಲ. ನನಗೆ ಬಹಳ ನಿರಾಸೆ ಆಯಿತು. ಕಾರಣ ವೀರಾವೇಶದಿಂದ ಮಾತಾಡಿದವರು, ಪ್ರತಿಕ್ರಿಯಿಸಿದವರು, ಬೆದರಿಕೆ
ಹಾಕಿದವ ರಾದರೂ ಮಾತಾಡಿ ತಮ್ಮ ಅಭಿಪ್ರಾಯ ಹೇಳಬಹುದು ಅಂದುಕೊಂಡಿದ್ದೆ. ಹಿಂದಿನ ದಿನ ತೀವ್ರ ಮತ್ತು ತೀಕ್ಷ್ಣ ಪ್ರತಿಕ್ರಿಯೆ ಬರೆದವರೆಲ್ಲ ಯಾಕೋ
ಸುಮ್ಮನಾಗಿದ್ದರು. ಕೆಲವು ಹತ್ತೂ ಚಿಲ್ಲರೆ ಅವಿವೇಕಿಗಳು ಮೂಲ ವಿಷಯದ ಬಗ್ಗೆ ಚರ್ಚೆಯನ್ನೇ ಮಾಡದೇ, ನನ್ನ ಬಗ್ಗೆ ಪ್ರತ್ಯೇಕ ಕ್ಲಬ್ ಹೌಸ್ ಸಂವಾದ ಮಾಡಿ ಬಾಯಿಚಪಲ ತೀರಿಸಿಕೊಂಡರಂತೆ. ಇವೆಲ್ಲ ಇರುವಂಥದ್ದೇ.

ಒಂದು ವಿಷಯ ಸ್ಪಷ್ಟಪಡಿಸುವೆ. ‘ವಿಶ್ವೇಶ್ವರ ಭಟ್ ಬ್ರಾಂಡ್ ಆಫ್ ಜರ್ನಲಿಸಂ’ನ್ನು ಕರ್ನಾಟಕದ ಓದುಗರು ಇಪ್ಪತ್ತೆರಡು ವರ್ಷಗಳಿಂದ ನೋಡಿದ್ದಾರೆ. ಈ ಅವಧಿಯಲ್ಲಿ ನಾನು ಯಾರು ಎಂಬುದನ್ನು ಜನ ನಿರ್ಧರಿಸಿದ್ದಾರೆ. ಅದನ್ನು ಮತ್ತೊಮ್ಮೆ ಅಥವಾ ಪದೇ ಪದೆ ಮನವರಿಕೆ ಮಾಡಿಕೊಡಬೇಕಿಲ್ಲ. ನಾನೆಂದೂ ಚೀಪ್ ಗಿಮಿಕ್ ಮಾಡಿದ್ದು ಇಲ್ಲವೇ ಇಲ್ಲ. ವಿಶ್ವವಾಣಿ ಕ್ಲಬ್‌ಗೆ ಎಂದೂ ಜನರ ಕೊರತೆ ಆಗಿಲ್ಲ. ಜಗತ್ತಿನಲ್ಲಿಯೇ ಅತಿ ಹೆಚ್ಚು ಕೇಳುಗರು ಭಾಗವಹಿಸಿದ ದಾಖಲೆ ವಿಶ್ವವಾಣಿ ಕ್ಲಬ್ ಹೆಸರಿನಲ್ಲಿಯೇ ಇದೆ. ಕ್ಲಬ್ ಹೌಸ್ ಸಂಸ್ಥಾಪಕರ ಕಾರ್ಯಕ್ರಮಗಳಿಗಿಂತ ಹೆಚ್ಚು ಜನ ವಿಶ್ವವಾಣಿ ಕ್ಲಬ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಅಷ್ಟಾಗಿಯೂ, ಒಬ್ಬನೇ ಒಬ್ಬ ಕೇಳುಗ ಇದ್ದರೂ, ನಾವು ಅದೇ ಉತ್ಸಾಹದಿಂದ ಕಾರ್ಯಕ್ರಮ ಮಾಡುತ್ತೇವೆ. ಚೀಪ್ ಗಿಮಿಕ್ ಮಾಡುವ ಅವಶ್ಯಕತೆಯೇ ನಮಗಿಲ್ಲ.
ಸತತವಾಗಿ ನೂರೈವತ್ತು ದಿನ ಕಾರ್ಯಕ್ರಮ ನಡೆಸಿದ ಅಗ್ಗಳಿಕೆ ವಿಶ್ವವಾಣಿ ಕ್ಲಬ್ ನದು. ಆತ್ಮಗಳೊಂದಿಗೆ ಮಾತಾಡುತ್ತೇನೆ ಎಂದು ಹೇಳಿದವರಲ್ಲಿ ಡಾ.ರಾಮಚಂದ್ರ ಗುರೂಜೀ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಸ್ವಾಮಿ ರಾಮ ಅವರ ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ಪುಸ್ತಕವನ್ನು ಓದಿದರೆ, ಎಂಥೆಂಥ ಮಹಾತ್ಮರು ಇದ್ದರು ಎಂಬುದು ಗೊತ್ತಾಗುತ್ತದೆ. ಹಿಮಾಲಯದಲ್ಲಿ ಒಬ್ಬ ಮಹಾತ್ಮ ಅವೆಷ್ಟೋ ವರ್ಷಗಳಿಂದ(ಎಷ್ಟು ವರ್ಷಗಳಿಂದ ಎಂಬುದು ನಿಖರ ವಾಗಿ ಯಾರಿಗೂ ಗೊತ್ತಿಲ್ಲ) ತಪಸ್ಸು ಮಾಡಿ, ಬಾಯಿಯಿಂದ ಬೆಂಕಿ ಉಗುಳುವ ತಪಸ್ಸಿದ್ಧಿಯನ್ನು ಗಳಿಸಿದ್ದರಂತೆ. ಅವರು ಬಾಯಿ ಬಿಟ್ಟರೆ, ಬೆಂಕಿ ಕಾಣಿಸಿಕೊಳ್ಳು ತ್ತಿತ್ತಂತೆ. ಈ ವಿಷಯವನ್ನು ಅಂಬರೀಷವರ್ಮ ಕೂಡ ಹೇಳುತ್ತಿದ್ದರು ಎಂದು ಪತ್ರಕರ್ತ ವೈಎನ್ಕೆ ಹೇಳುತ್ತಿದ್ದುದನ್ನು ನಾನು ಹಲವು ಸಲ ಕೇಳಿಸಿಕೊಂಡಿದ್ದೇನೆ.

ಒಂದು ವೇಳೆ ಅಂಥ ಸಾಧಕರು ಇಂದಿಗೂ ಬದುಕಿದ್ದರೆ, ಖಂಡಿತವಾಗಿಯೂ ಅಂಥವರನ್ನು ನಮ್ಮ ಕ್ಲಬ್‌ಗೆ ಆಹ್ವಾನಿಸುತ್ತೇವೆ. ‘ಬಾಯಿಯಿಂದ ಬೆಂಕಿ ಬರಲು ಸಾಧ್ಯವಾ? ಭಟ್ಟರು ಯಾವನೋ ನಕಲಿ ಸ್ವಾಮಿಯನ್ನು ಕರೆಯಿಸುತ್ತಿದ್ದಾರೆ, ಇದು ಮೂಢನಂಬಿಕೆಯ ಪರಾಕಾಷ್ಠೆ, ಇದನ್ನು ಪ್ರತಿಭಟಿಸುತ್ತೇವೆ’ ಎಂದು ಹೇಳಿದರೆ ಅಂಥವರ ಬಗ್ಗೆ ನನ್ನ ಅನುಕಂಪ, ಸಹಾನುಭೂತಿಯಿದೆ. ಆದರೆ ನನ್ನ ಪಾಲಿಗೆ ಅದೊಂದು ಅದ್ಭುತ ವಿಷಯ. ನಾನಂತೂ ಬಾಯಿಯಿಂದ ಬೆಂಕಿ ಉಗುಳುವವರ ಮಾತುಗಳನ್ನು ಕೇಳಲು ಬಯಸುತ್ತೇನೆ. ಅವರು ವಿಷ, ದ್ವೇಷ ಕಕ್ಕುವವರಿಗಿಂತ ಎಷ್ಟೋ ವಾಸಿ. ಅವರು ಉಗುಳುವ ಬೆಂಕಿಯಲ್ಲಿ ಮನುಷ್ಯನ ಸಣ್ಣತನಗಳೆಲ್ಲ
ಸುಟ್ಟು ಹೋಗಿರುತ್ತವೆ. ಕಾರ್ಯಕ್ರಮ ಕೇಳಿದ ನಂತರ ಅವರು ಉಗುಳಿದ್ದು ಏನು ಎಂಬುದು ಗೊತ್ತಾಗುವುದಲ್ಲ, ಅಲ್ಲಿ ತನಕ ಸುಮ್ಮನಿರುವುದು ವಿವೇಕಶಾಲಿಗಳ ನಡೆ.

ನಮಗೆ ಗೊತ್ತಿರದಿರುವುದನ್ನು ತಿಳಿದುಕೊಳ್ಳಬೇಕು. ಅಷ್ಟಕ್ಕೂ ನಾವು ತಿಳಿದುಕೊಂಡಿದ್ದೇ ಪರಮಸತ್ಯವಲ್ಲ. ಯಾರಾದರೂ ಒಂದು ವಿಷಯವನ್ನು ಹೇಳಿವಾಗ ಕೇಳಿಸಿಕೊಳ್ಳುವ ತಾದಾತ್ಮ್ಯತನ ಬೆಳೆಸಿಕೊಳ್ಳಬೇಕು. ಆತ್ಮಗಳ ಜತೆ ನೂರಾರು mystic ಗಳು ಮಾತಾಡಿದ್ದಾರೆ. ಅಮೆರಿಕದ ಫ್ಯೂಚರಾಲಾಜಿಸ್ಟ್ ಎಡ್‌ಗರ್ ಕೇಯ್ಸಿ ಆತ್ಮಗಳ ಜತೆ ಮಾತಾಡಿದ ಅನುಭವವನ್ನು ತನ್ನ ‘ಬಿಯಾಂಡ್ ಡೆತ್’ ಪುಸ್ತಕದಲ್ಲಿ ವಿವರಿಸಿದ್ದಾನೆ.

ಬ್ರಿಯಾನ್ ವೆಯ್ಸ್ ಕೂಡ ‘ಮೆನಿ ಮಾಸ್ಟರ್ಸ್, ಮೆನಿ ಲೈವ್ಸ್’ ಪುಸ್ತಕದಲ್ಲಿ ಬರೆದಿದ್ದಾನೆ. ನಮ್ಮಲ್ಲಿ ಆತ್ಮಗಳೊಂದಿಗೆ ಮಾತಾಡಿದ ಅನೇಕ ಸಾಧು-ಸಂತರು, ಅವಧೂತರು ಇದ್ದಾರೆ. ಅವರಾರೂ ಅಳ್ಳಾಟೋಪಿಗಳಲ್ಲ. ಅದು ಅವರವರ ನಂಬಿಕೆಗೆ ಸಂಬಂಧಿಸಿದ ಪ್ರಶ್ನೆ. ವಿಜ್ಞಾನದ ಪಲಕುಗಳಿಗೆ ಸಿಲುಕದ ಅಸಂಖ್ಯ ವಿಷಯಗಳಿವೆ. ವಿಜ್ಞಾನಕ್ಕೂ ಸಿಗದವುಗಳೆಲ್ಲ ಗೊಡ್ಡು ವಿಚಾರಗಳಲ್ಲ. ಅವೆಲ್ಲ ಮೂಢನಂಬಿಕೆಗಳಲ್ಲ. ಕ್ರಿಶ್ಚಿಯಾನಿಟಿ, ಜುದಾಯಿಸಂನಲ್ಲೂ ‘ಆತ್ಮ ಸಂಭಾಷಣೆ’ಯ ಉಲ್ಲೇಖವಿದೆ. ನಮಗೆ ಗೊತ್ತಿಲ್ಲದ, ನಾವು ನಂಬದ ಸಂಗತಿಗಳೆಲ್ಲ ಮೂಢನಂಬಿಕೆಗಳಲ್ಲ. ಒಮ್ಮೆ ನಾವು ಹಾಗೆ ಭಾವಿಸಿದರೆ ನಮ್ಮಷ್ಟು ಮೂಢರು ಮತ್ತೊಬ್ಬರಿಲ್ಲ.

ಪ್ರತಿಕ್ರಿಯೆ ಕೊಡುವ ಮೊದಲು ಲೇಖನ ಓದಬೇಕು, ಮಾತನ್ನು ಕೇಳಿಸಿಕೊಳ್ಳಬೇಕು, ಮೊದಲೇ ಬಾಯಿ ಹಾಕಿ ಅವಲಕ್ಷಣ ಮಾಡಿಸಿಕೊಳ್ಳಬಾರದು. ಅಪ್ಪನ ತಿಥಿ
ಮಾಡುತ್ತಿರುವಾಗ ಅಪ್ಪ ಸತ್ತಿದ್ದನ್ನು ಸಾಬೀತು ಮಾಡು ಎಂದು ಹೇಳುವ ಮೂರ್ಖತನ ಪ್ರದರ್ಶಿಸಬಾರದು. ಇಷ್ಟು ಸಾಕು.