Friday, 13th December 2024

ಇಸ್ರೇಲಿನಲ್ಲಿ ವಾಸ್ತವವಾದಿ ಆಗಿರಬೇಕೆಂದರೆ ಪವಾಡವನ್ನು ನಂಬಬೇಕು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಕಳೆದ ಇಪ್ಪತ್ತು ದಿನಗಳಿಂದ ಒಂಥರಾ ವಿಚಿತ್ರ ಸುಖವನ್ನು ಅನುಭವಿಸುತ್ತಿದ್ದೇನೆ. ಪ್ರತಿದಿನ ಮುನ್ನೂರರಿಂದ ಐನೂರು ಪುಸ್ತಕಗಳಿಗೆ ಹಸ್ತಾಕ್ಷರ (ಆಟೋಗ್ರಾಫ್) ಹಾಕಿ ಕೊಡುತ್ತಿದ್ದೇನೆ. ಒಂದೂವರೆಯಿಂದ ಎರಡು, ಕೆಲವೊಮ್ಮೆ ಮೂರು ತಾಸು ಒಂದೇ ಬೈಠಕ್‌ನಲ್ಲಿ ಹಸ್ತಾಕ್ಷರ ಹಾಕಿದ್ದುಂಟು. ಇಲ್ಲಿಯ ತನಕ ನಾನು ಎಪ್ಪತ್ತು ಪುಸ್ತಕಗಳನ್ನು ಬರೆದಿದ್ದರೂ, ಈ ಪರಿ ಹಸ್ತಾಕ್ಷರ ಹಾಕಿರಲಿಲ್ಲ.

ಹೆಚ್ಚೆಂದರೆ ನೂರಾರು ಪುಸ್ತಕಗಳಿಗೆ, ಬಿಡುಗಡೆ ಕಾರ್ಯಕ್ರಮದ ದಿನ ಆಟೋಗ್ರಾ- ಹಾಕಿದ್ದಿದೆ. ಆದರೆ ಅದನ್ನೇ ಕಾಯಕ ಮಾಡಿ ಕೊಂಡವನಂತೆ, ಬೇರೇನೂ ಕೆಲಸ ಮಾಡದೇ, ಅದೊಂದನ್ನೇ ಅಷ್ಟು ಹೊತ್ತು ಮಾಡಿದ್ದಿಲ್ಲ. ತಮ್ಮ ವಿಶಿಷ್ಟ ಸಂಶೋಧನೆಗಳ ಮೂಲಕ ಇಡೀ ಜಗತ್ತನ್ನು ಬದಲಾವಣೆಗೆ ಮುಖ ಮಾಡಿ ನಿಲ್ಲಿಸಿದ ಇಸ್ರೇಲ್ ಬಗ್ಗೆ ‘ಆವಿಷ್ಕಾರದ ಹರಿಕಾರ’ ಎಂಬ ಪುಸ್ತಕವನ್ನು ಸುಮಾರು ಇಪ್ಪತ್ತೈದು ದಿನಗಳ ಹಿಂದೆ ಬಿಡುಗಡೆ ಮಾಡಿದೆ.

ದಕ್ಷಿಣ ಭಾರತದ ಇಸ್ರೇಲಿ ರಾಜತಾಂತ್ರಿಕ ಅಧಿಕಾರಿ ಮತ್ತು ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಈ ಕೃತಿಯನ್ನು ವಿಧಾನ ಸೌಧದಲ್ಲಿ ಬಿಡುಗಡೆ ಮಾಡಿದರು. ಇದು ಮೂಲತಃ ಅನುವಾದಿತ ಕೃತಿ. ಆವಿ ಯೋರಿಶ್ ಎಂಬ ಉದ್ಯಮಿ, ಲೇಖಕ, ಚಿಂತಕ ಮತ್ತು ಅಮೆರಿಕ ಸರಕಾರದ ಹಣಕಾಸು – ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಬರೆದ ಪುಸ್ತಕವಿದು. ಇವರು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಅಂಕಣಕಾರರೂ ಹೌದು. ಸುಮಾರು ಎರಡು ವರ್ಷಗಳ ಹಿಂದೆ, ನನಗೆ ಆವಿ ಯೋರಿಶ್ ಪರಿಚಯವಾಯಿತು.
ಮೊದಲನೇ ಭೇಟಿಯ ನಾವಿಬ್ಬರೂ ಅವೆಷ್ಟೋ ವರ್ಷಗಳ ಸ್ನೇಹಿತರಂತೆ ಆಪ್ತರಾದೆವು.

ನಮ್ಮಿಬ್ಬರನ್ನು ಬೆಸೆದಿದ್ದು ಇಸ್ರೇಲ್ ಎಂಬ ಪವಾಡ. ಒಬ್ಬ ಕನ್ನಡ ಪತ್ರಕರ್ತನಾಗಿ ನಾನು ಒಂಬತ್ತು ಸಲ ಇಸ್ರೇಲಿಗೆ ಭೇಟಿ ನೀಡಿದ್ದು ಅವರಿಗೆ ಇಷ್ಟ ಮತ್ತು ಅಚ್ಚರಿಯಾಗಿತ್ತು. ‘ನೀವು ಆಮ್ಸ ಡೀಲರಾ?’ ಎಂದು ಅವರು ತಮಾಷೆಗೆ ಕೇಳಿದ್ದರು. ಅದಕ್ಕೆ ನಾನು, ಪಂಪ್ ಸೆಟ್, ಪೈಪು ಮತ್ತು ಶಸಾಸ ವ್ಯಾಪಾರಿಗಳು ಮಾತ್ರ ಇಸ್ರೇಲಿಗೆ ಅಷ್ಟು ಸಲ ಹೋಗುತ್ತಾರೆ’ ಎಂದು ಹಾಸ್ಯ ಮಾಡಿದ್ದೆ.

ಮೂಲತಃ ಆವಿ ಯಹೂದಿ. ಅವರು ವಾಸಿಸುವುದು ಅಮೆರಿಕದಲ್ಲಿ, ಆದರೆ ಮನಸ್ಸಿರುವುದು ಇಸ್ರೇಲಿನಲ್ಲಿ. ಹೀಗಾಗಿ ಅವರು ಆ ಎರಡು ದೇಶಗಳ ಮಧ್ಯೆ ಪ್ರವಾಸ ಮಾಡುತ್ತಿರುತ್ತಾರೆ. ಇಸ್ರೇಲಿ ಸಂಶೋಧನೆಗಳ ಬಗ್ಗೆ ಯೋರಿಶ್ ಥರ ಅಧ್ಯಯನ ಮಾಡಿದವರು ಅಪರೂಪ. ಈ ಪುಸ್ತಕವನ್ನು ಓದಿ ತಮ್ಮ ಅಭಿಪ್ರಾಯ ತಿಳಿಸುವಂತೆ ಹೇಳಿದರು. ಅದನ್ನು ಓದಿದ ಬಳಿಕ, ‘ನನಗೆ ಅನುವಾದಿಸದೇ
ಇರಲು ಸಾಧ್ಯವಾಗುತ್ತಿಲ್ಲ’ ಎಂದಷ್ಟೇ ಪ್ರತಿಕ್ರಿಯಿಸಿದೆ.

ಕಳೆದ ಎಂಟು ವರ್ಷಗಳಲ್ಲಿ ನಾನು ಒಂಬತ್ತು ಸಲ ಇಸ್ರೇಲಿಗೆ ಹೋಗಿ ಬಂದಿದ್ದೇನೆ. ಪ್ರತಿ ಸಲ ಅಲ್ಲಿಗೆ ಹೋದಾಗಲೂ ಆ ದೇಶದ ಪ್ರಥಮ ಪ್ರಧಾನಿ ಡೆವಿಡ್ ಬೆನ್ – ಗುರಿಯನ್ ಹೇಳಿದ ಒಂದು ಮಾತು ಮತ್ತಷ್ಟು, ಇನ್ನಷ್ಟು ನಿಜ ಎಂಬುದು ನನ್ನ ಅರಿವಿಗೆ ಬಂದಿದೆ. ಬೆನ್ – ಗುರಿಯನ್ ಅವರು ತಮ್ಮ ದೇಶದ ಬಗ್ಗೆ ಯಾವತ್ತೂ ಅಭಿಮಾನದಿಂದ ಹೇಳುತ್ತಿದ್ದರು – ನೀವು ಇಸ್ರೇಲ್‌ನಲ್ಲಿ ವಾಸ್ತವವಾದಿ ಆಗಿರಬೇಕೆಂದು ಬಯಸಿದರೆ, ಪವಾಡಗಳಲ್ಲಿ ನಂಬಿಕೆಯನ್ನು ಇರಿಸಿಕೊಳ್ಳಲೇಬೇಕು.

ಪವಾಡಗಳನ್ನು ಎಂದೂ ನಂಬದ ನಾನು, ಇಸ್ರೇಲ್‌ಗೆ ಭೇಟಿ ನೀಡಲಾರಂಭಿಸಿದ ನಂತರ, ಖುzಗಿ ನೋಡಿದ ನಂತರ, ಅವುಗಳನ್ನು
ನಂಬಲಾರಂಭಿಸಿದ್ದೇನೆ. ವಾಸ್ತವವಾದಿ ಯಾಗಿಯೇ ಪವಾಡ ಗಳನ್ನು ನಂಬಬಹುದು ಎಂಬುದನ್ನು ಇಸ್ರೇಲ್ ಮನವರಿಕೆ
ಮಾಡಿಕೊಟ್ಟಿದೆ. ಇಸ್ರೇಲ್‌ನ ಉದ್ದಗಲದಲ್ಲಿ ಅಲೆಮಾರಿಯಂತೆ ಓಡಾಡಿ, ಆ ದೇಶದ ಇತಿಹಾಸ, ವೈಚಿತ್ರ್ಯ, ಕತೆಗಳನ್ನು ಕೇಳಿದ ನಂತರ, ಮಿರಾಕಲ್ (ಪವಾಡ) ಮತ್ತು ಮ್ಯಾಜಿಕ್ (ಜಾದೂ) ಈ ಎರಡು ಪದಗಳಿಗೆ ಹೆಚ್ಚು ವ್ಯತ್ಯಾಸವಿಲ್ಲ ಎಂದೂ ಅನಿಸಿದೆ. ಕಾರಣ ಇಂದು ಇಸ್ರೇಲ್ ಒಂದು ರಾಷ್ಟ್ರವಾಗಿ ಅಸ್ತಿತ್ವದಲ್ಲಿದ್ದರೆ ಅದು ಪವಾಡವೂ ಹೌದು, ಜಾದೂ ಸಹ ಹೌದು.

ಇಸ್ರೇಲ್‌ನ ಚರಿತ್ರೆಯನ್ನು ಓದಿದರೆ ಇಂದು ಅದು ಅಸ್ತಿತ್ವದಲ್ಲಿ ಇರಲೇಬಾರದು ಎಂದು ಎಂಥವರಿಗಾದರೂ ಅನಿಸುತ್ತದೆ. ಇನ್ನು, ವಿಶ್ವ ಭೂಪಟದಲ್ಲಿ ಅದನ್ನು ನೋಡಿದರೆ ಅದು ಇನ್ನೂ ಹೇಗೆ ಅಸ್ತಿತ್ವದಲ್ಲಿದೆ ಎಂದು ಎಂಥವರಿಗಾದರೂ ಸೋಜಿಗವಾಗುತ್ತದೆ. ಕಾರಣ, ಇಸ್ರೇಲ್ ಅತ್ಯಂತ ಆಯಕಟ್ಟಿನ ಮತ್ತು ಅಪಾಯಕಾರಿ ಭೌಗೋಳಿಕ ಪ್ರದೇಶದಲ್ಲಿದೆ. ಇಸ್ರೇಲನ್ನು ಸುತ್ತಲೂ ವೈರಿ ದೇಶಗಳೇ ಸುತ್ತುಗಟ್ಟಿಕೊಂಡಿವೆ.

ಉತ್ತರಕ್ಕೆ ಲೆಬನಾನ್, ಸಿರಿಯಾ, ಪೂರ್ವಕ್ಕೆ ಜೋರ್ಡನ್ ಮತ್ತು ಸೌದಿ ಅರೇಬಿಯಾ, ಇರಾಕ್ ಮತ್ತು ಪಶ್ಚಿಮಕ್ಕೆ ಈಜಿಪ್ಟ್ ದೇಶಗಳಿವೆ. ಇವೆಲ್ಲ ಮುಸ್ಲಿಂ ದೇಶಗಳು. ಇಸ್ರೇಲನ್ನು ಕಬಳಿಸಲು ತುದಿಗಾಲ ಮೇಲೆ ನಿಂತಿವೆ. ಇಷ್ಟು ಸಾಲದೆಂಬಂತೆ, ಇಸ್ರೇಲ್ ಒಳಗೆ ಪ್ಯಾಲಸ್ತೀನ್ ಎಂಬ ಮತ್ತೊಂದು ಮುಸ್ಲಿಂ ದೇಶ. ಬಗಲಲ್ಲಿ ಮುಸ್ಲಿಮರಿಂದಲೇ ಗಿಜಿಗುಡುವ ಗಾಜಾ ಪ್ರದೇಶ! ಸ್ವಲ್ಪ ಮೈ ಮರೆತರೂ ಇಸ್ರೇಲ್ ಸರ್ವನಾಶ ನಿಶ್ಚಿತ. ಎಲ್ಲ ದೇಶಗಳು ಹಸಿದ ಹೆಬ್ಬುಲಿಯಂತೆ ಕಾದು ಕುಳಿತಿವೆ. ಆದರೆ ಇಸ್ರೇಲ್ ಕಳೆದ
ಎಪ್ಪತ್ತು ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ.

ಈ ಎಲ್ಲಾ ವೈರಿ ರಾಷ್ಟ್ರಗಳು ಒಂದಲ್ಲ ಒಂದು ಸಂದರ್ಭದಲ್ಲಿ ಇಸ್ರೇಲ್ ಮೇಲೆ ದಾಳಿ ಮಾಡಿವೆ, ಕಾಲು ಕೆರೆದು ಯುದ್ಧಕ್ಕೆ
ಬಂದಿವೆ. ನಿತ್ಯವೂ ಒಂದಲ್ಲ ಒಂದು ರೀತಿಯ ಉಪಟಳ ನೀಡುತ್ತಿವೆ. ಜಗತ್ತಿನ ಎಲ್ಲ ಅರಬ್ ದೇಶಗಳು ಇಸ್ರೇಲ್‌ಗೆ ಒಂದಿಂದು ರೀತಿಯಲ್ಲಿ ಕಂಟಕವಾಗಿವೆ. ಸಿರಿಯಾದಲ್ಲಿ ಹುಟ್ಟಿದ ಐಸಿಸ್ ಉಗ್ರಗಾಮಿ ಸಂಘಟನೆ ಲಂಡನ್, ಬ್ರುಸೆಲ್ಸ್, ಪ್ಯಾರಿಸ್, ಬಾರ್ಸಿಲೋನಾ ಮುಂತಾದ ನಗರಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನೆಸಗಿದ್ದರೂ, ಪಕ್ಕದ ಇಸ್ರೇಲ್ ಮೇಲೆ ಇಲ್ಲಿಂತನಕ ದಾಳಿ ಮಾಡಿಲ್ಲ ಅಂದರೆ, ಇಸ್ರೇಲ್ ಈ ಪುಂಡು ಪೋಕರಿಗಳ ಎದೆ ಗುಂಡಿಗೆಯಲ್ಲಿ ಎಂಥ ನಡುಕ ಹುಟ್ಟಿಸಿರಬಹುದೆಂಬುದನ್ನು ಊಹಿಸಬಹುದು.

ಇಸ್ರೇಲಿಗಳು ಅದೆಂಥ ಪ್ರತೀಕಾರ ಪ್ರಿಯರೆಂದರೆ ತನ್ನ ಮೇಲೆ ದಾಳಿ ಮಾಡಿದವರು ಬೇರೆ ದೇಶಕ್ಕೆ ಹೋದರೂ, ಅಲ್ಲಿಗೇ ಹೋಗಿ ಅವರನ್ನು ಹೊಡೆದು ಬರುತ್ತಾರೆ. ಹೀಗಾಗಿ ಆ ಪುಟ್ಟ ದೇಶವನ್ನು ಮಣಿಸಲು ಅರಬ್ ದೇಶಗಳೆಲ್ಲ ಒಂದಾದರೂ ಆಗಿಲ್ಲ. ಪ್ರತಿದಿನ ಯಾವುದಾದರೂ ಸಣ್ಣ ಪುಟ್ಟ ಘಟನೆ ನಡೆಯದೇ ಹೋಗುವುದಿಲ್ಲ. ಆದರೆ ತನ್ನ ತಂಟೆಗೆ ಬಂದವರ ಕಿವಿ ಹಿಂಡದೇ ಹೋಗುವು ದಿಲ್ಲ. ಒಬ್ಬನೇ ಒಬ್ಬ ಉಗ್ರ ಅಥವಾ ಶತ್ರುಗಳನ್ನು ಒಳಗೆ ಬಿಟ್ಟುಕೊಂಡಿದ್ದರೆ ಇಷ್ಟೊತ್ತಿಗೆ ಇಸ್ರೇಲ್ ಎಂದೋ ನಾಮಾವಶೇಷ ವಾಗಿರುತ್ತಿತ್ತು.

ಆದರೆ ಇಷ್ಟೆ ಆದರೂ ಯಾರಿಗೂ ಇಸ್ರೇಲ್‌ನ ಕೂದಲನ್ನು ಕೊಂಕಿಸಲೂ ಸಾಧ್ಯವಾಗಿಲ್ಲ. ನಿಜ, ಇಸ್ರೇಲ್ ಬೆಚ್ಚಗಿದೆ ! ಈಗ ಹೇಳಿ, ಇಸ್ರೇಲ್ ಅಸ್ತಿತ್ವದಲ್ಲಿರುವುದೇ ಮಿರಾಕಲ್ ಮತ್ತು ಮ್ಯಾಜಿಕ್ ಹೌದೋ, ಅಲ್ಲವೋ ಅಂತ. ಇಸ್ರೇಲಿನ ಭೂಭಾಗದ ಅರವತ್ತೈದ ರಷ್ಟು ರಣರಣ ಮರುಭೂಮಿ. ಇಡೀ ದೇಶದಲ್ಲಿ ನದಿಮೂಲಗಳಿಲ್ಲ. ಮಳೆಯೂ ಬೀಳುವುದಿಲ್ಲ. ಬೆಂಗಳೂರಿನಲ್ಲಿ ಎರಡು ಗಂಟೆ
ಮಳೆ ಸುರಿದಷ್ಟು ಇಸ್ರೇಲಿನಲ್ಲಿ ಒಂದು ವರ್ಷದಲ್ಲಿ ಸುರಿಯಬಹುದು. ಆದರೆ ಇಸ್ರೇಲ, ನೀರಿನ ನಿರ್ವಹಣೆಯಲ್ಲಿ ಜಗತ್ತಿಗೇ ಮಾದರಿ. ಕೃಷಿ ಮತ್ತು ಕೃಷಿ ತಂತ್ರಜ್ಞಾನದ ಕುರಿತು ಪಾಠ ಮಾಡಿದರೆ, ಇಡೀ ಜಗತ್ತು ಕೇಳಿಸಿಕೊಳ್ಳುತ್ತದೆ.

ಜಾಗತೀಕರಣದ ಹೊಡೆತದ ನಡುವೆಯೂ ಭಾಷೆ (ಹೀಬ್ರೂ)ಯನ್ನು ಹೇಗೆ ಚೆಂದವಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ಇಸ್ರೇಲಿಗರಿಂದ ಕಲಿಯಬೇಕು. ಇನ್ನು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ಇಸ್ರೇಲ್ ದೊಡ್ಡ ದೊಡ್ಡ ದೇಶಗಳಿಗೆ ಸರಿಸಾಟಿಯಾಗಿ ನಿಂತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಅನ್ವೇಷಣೆ ಮತ್ತು ಆವಿಷ್ಕಾರಗಳು ನಡೆಯುವ ದೇಶ ವೆಂದರೆ ಇಸ್ರೇಲ್‌.

ಇವನ್ನೆ ನೋಡಿದರೆ, ಎಂಬತ್ತೈದು ಲಕ್ಷ ಜನರಿರುವ ಆ ಒಂದು ಪುಟ್ಟ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪವಾಡ ಸದೃಶವೆಂದು ಅನಿಸುವುದಿಲ್ಲವೇ? ಅಮೆರಿಕದ ನ್ಯೂಜೆರ್ಸಿ ರಾಜ್ಯಕ್ಕಿಂತ ಚಿಕ್ಕದಾಗಿರುವ ಇಸ್ರೇಲ್‌ನಲ್ಲಿ ಜಗತ್ತಿನ ಯಾವ ದೇಶಗಳಲ್ಲೂ ನಡೆಯುವುದಕ್ಕಿಂತ ಹೆಚ್ಚು ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ. ಅತಿ ಕಡಿಮೆ ನೈಸರ್ಗಿಕ ಸಂಪನ್ಮೂಲ, ಕಡಿಮೆ ಜನಸಂಖ್ಯೆ ಮತ್ತು ವೈರಿ ನೆರೆ – ಹೊರೆಗಳನ್ನು ಹೊಂದಿರುವ ಇಸ್ರೇಲ್‌, ಆವಿಷ್ಕಾರಗಳ ಹರಿಕಾರನಾಗಿದ್ದು ಹೇಗೆ? ಭಾರತ, ಕೆನಡ, ಜಪಾನ್, ಕೊರಿಯಾ, ಬ್ರಿಟನ್ ಗಳಿಗಿಂತ ಹೆಚ್ಚು ಸ್ಟಾರ್ಟ್ ಅಪ್‌ಗಳು ಇಸ್ರೇಲಿನಲ್ಲಿರಲು ಸಾಧ್ಯವಾಗಿದ್ದು ಹೇಗೆ? ಅರ್ಧಕ್ಕಿಂತ ಹೆಚ್ಚು ಭೂಭಾಗ ಮರುಭೂಮಿಯಾಗಿದ್ದರೂ, ಜಾಗತಿಕ ಜಲ ಮಹಾಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ?
ಇಂದು ಇಸ್ರೇಲ್ ಆಹಾರ, ನೀರು, ಹೈನು, ಔಷಧ, ರಕ್ಷಣಾ ಉಪಕರಣಗಳ ಬಗ್ಗೆ ಬೇರೆ ದೇಶಗಳನ್ನು ಅವಲಂಬಿಸದೇ
ಸ್ವಾವ ಲಂಬನೆ ಸಾಧಿಸಿರುವುದು ಹೇಗೆ? ಇದು ನಿಜಕ್ಕೂ ರೋಚಕ ಕಥನ.

ಇಂದು ಜಗತ್ತಿನ ಕಣ್ಣಿಗೆ ಇಸ್ರೇಲ್ ಅಂದ ಕೂಡಲೇ ನೆನಪಿಗೆ ಬರುವುದು ಕದನ, ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆ. ಈ ಕಾರಣಗಳಿಂದಲೇ ಜಾಗತಿಕ ಮಾಧ್ಯಮದಲ್ಲಿ ಇಸ್ರೇಲ್ ಗಮನ ಸೆಳೆಯುತ್ತಿದೆ. ಆದರೆ ಇದು ಇಸ್ರೇಲ್ ಬಗೆಗಿನ ನೈಜವಾದ ಚಿತ್ರಣವಲ್ಲ. ಇದಕ್ಕಿಂತ ಭಿನ್ನವಾದ, ಸಕಾರಾತ್ಮಕ ಮತ್ತು ಆಶಾದಾಯಕ ವಿದ್ಯಮಾನ ಗಳು ಆ ದೇಶದಲ್ಲಿ ನಡೆಯು ತ್ತಿವೆ. ಈ ಜಗತ್ತು ಎದುರಿಸುತ್ತಿರುವ ಹತ್ತು ಸಮಸ್ಯೆಗಳನ್ನು ಪಟ್ಟಿ ಮಾಡಿ, ಅದನ್ನು ಪರಿಹರಿಸಲು ಇಸ್ರೇಲಿಗಳು ಕಾರ್ಯನಿರತ
ರಾಗಿರುತ್ತಾರೆ.

ಅದು ಹನಿ ನೀರಾವರಿ ಸಮಸ್ಯೆಯಿರಬಹುದು, ರಕ್ತಸ್ರಾವವನ್ನು ತಕ್ಷಣ ನಿಲ್ಲಿಸುವ ಎಮರ್ಜೆನ್ಸಿ ಬ್ಯಾಂಡೇಜ್ ತಯಾರಿಕೆಯಿರ ಬಹುದು, ಮಿದುಳು ಶಸ ಚಿಕಿತ್ಸೆಗೆ ಅನುವಾಗುವ ಜಿಪಿಎಸ್ ಅಭಿವೃದ್ಧಿಪಡಿಸುವುದಿರಬಹುದು, ಕರುಳು ಸಂಬಂಧಿ ರೋಗ ಪತ್ತೆಗೆ ನಾಳಗಳೊಳಗೆ ಕೆಮರ ತೂರಿಸುವುದಿರಬಹುದು, ಚಾಲಕರಹಿತ ಕಾರು ತಯಾರಿಸುವುದಿರಬಹುದು, ಸಿಗ್ನಲ್ ದೀಪದ ಬಳಿ ನಿಲ್ಲುವ ವಾಹನಗಳಿಂದ ಇಂಧನ ಉಳಿತಾಯ ಮತ್ತು ಮಾಲಿನ್ಯ ನಿಯಂತ್ರಣ ಮಾಡುವುದಿರಬಹುದು, ನೂರು ಕ್ವಿಂಟಲ್
ಕಾಳು – ಕಡಿಗಳನ್ನು ಸಂಗ್ರಹಿಸಿಡುವ ಜಿಪ್ – ಲಾಕ್ ಬ್ಯಾಗ್ ಗಳನ್ನು ತಯಾರಿಸುವುದಿರಬಹುದು … ಇಸ್ರೇಲಿಗಳು ಸಂಶೋಧನೆ ಯಲ್ಲಿ ತೊಡಗಿದ್ದಾರೆ.

ಈಗಾಗಲೇ ಈ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಹಿಡಿದಿದ್ದಾರೆ. ಇಸ್ರೇಲಿಗಳನ್ನು ಈ ಸಂಶೋಧನೆ, ಆವಿಷ್ಕಾರಗಳಿಗೆ ತೊಡಗಿಸಲು ಪ್ರೇರಣೆ ನೀಡಿದ ಅಂಶಗಳಾದರೂ ಯಾವುವು? ನಿಜಕ್ಕೂ ಈ ಸಂಗತಿ ಬೆರಗು ಹುಟ್ಟಿಸುತ್ತದೆ. ಈ ಮನುಕುಲದ
ಹಸಿವು ನೀಗಲು, ರೋಗ – ರುಜಿನು ವಾಸಿ ಮಾಡಲು, ಬದುಕನ್ನು ಹಸನುಗಳಿಸಲು, ಆ ಪುಟ್ಟ ದೇಶದಲ್ಲಿ ಒಂದಿಂದು ಸಂಶೋಧನೆ, ಆವಿಷ್ಕಾರಗಳು ಜರುಗುತ್ತಲೇ ಇರುತ್ತವೆ. ಪ್ರತಿನಿತ್ಯ ನಾವು ಬಳಸುವ ಅವೆಷ್ಟೋ ವಸ್ತುಗಳು ಇಸ್ರೇಲಿನ ಪ್ರಯೋಗ ಶಾಲೆಯಲ್ಲಿ ಹುಟ್ಟಿದಂಥವು.

ಐದು ವರ್ಷಗಳ ಹಿಂದೆ, ನಾನು ಇಸ್ರೇಲಿಗೆ ಭೇಟಿ ನೀಡಿದಾಗ, ಅಲ್ಲಿನ ಟೆಲ್ ಅವಿವ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ನಾವು
ಪ್ರತಿನಿತ್ಯ ಬಾಯಿಯ ಸ್ವಚ್ಛತೆಗೆ ಬಳಸುವ ಮೌತ್ ಫ್ರೆಶ್ನರ್ ಮತ್ತು ಮೌತ್ ವಾಷ್‌ನ್ನು ಅದೇ ವಿಶ್ವವಿದ್ಯಾಲಯದಲ್ಲಿ ಕಂಡು ಹಿಡಿದ್ದಿದ್ದಂತೆ. ಆಶ್ಚರ್ಯವೆನಿಸಬಹುದು, ಪ್ರತಿವರ್ಷ ಜಗತ್ತಿನಾದ್ಯಂತ ಮೂರು ಸಾವಿರ ದಶಲಕ್ಷ ಡಾಲರ್ ವಹಿವಾಟು ಬರೀ ಮೌತ್ ವಾಷ್ ವ್ಯವಹಾರವೊಂದರ ನಡೆಯುತ್ತದೆ.

ಸಂಶೋಧನೆ, ಪ್ರಯೋಗ, ಆವಿಷ್ಕಾರಗಳು ಇಸ್ರೇಲಿಗಳ ರಕ್ತದಲ್ಲಿಯೇ ಇದೆ. ತಮಗೆ ಎದುರಾದ ಯಾವ ಹೊಸ ಯೋಚನೆಯನ್ನೂ ಅವರು ಜಾರಿಗೊಳಿಸದೇ ಬಿಡುವುದಿಲ್ಲ. ಯಾವ ಸಮಸ್ಯೆಯನ್ನೂ ಪರಿಹರಿಸದೇ ಬಿಡುವುದಿಲ್ಲ. ಯಾವ ಒಗಟು ರಹಸ್ಯವಾಗಿರಲು ಬಿಡುವುದಿಲ್ಲ. ಹೀಗಾಗಿ ಮಳೆಯಿಲ್ಲದಿದ್ದರೂ ಅವರಿಗೆ ಕೃಷಿ ಮಾಡುವುದು ಗೊತ್ತು. ನೀರಿಲ್ಲದಿದ್ದರೂ ಬದುಕುವುದು ಗೊತ್ತು. ಅಷ್ಟೇ ಅಲ್ಲ, ನೀರಿನ ನಿರ್ವಹಣೆ ಬಗ್ಗೆ ಜಗತ್ತಿಗೆ ಪಾಠ ಹೇಳುವಷ್ಟು ಗೊತ್ತು. ಆ ಕ್ಷೇತ್ರದಲ್ಲಿ ಔನ್ನತ್ಯ ಸಾಧಿಸುವ ತನಕ ಅವರು
ವಿರಮಿಸುವುದಿಲ್ಲ.

ಈ ಕಾರಣದಿಂದ ಇಸ್ರೇಲಿನ ಸಂಶೋಧನೆ ಬಗ್ಗೆ ತಿಳಿದುಕೊಳ್ಳುವುದು ಮಹತ್ವದ ಸಂಗತಿ ಎಂದು ನಾನು ಭಾವಿಸಿದ್ದೇನೆ. ಈ ವಿಷಯಗಳ ಬಗ್ಗೆ ನಾನು ಅಧ್ಯಯನ ಮಾಡುವಾಗ ನನಗೆ ಎದುರಾದವರು ಇಸ್ರೇಲಿ ಮೂಲದ ಉದ್ಯಮಿ, ಚಿಂತಕ ಮತ್ತು ಬರಹಗಾರ ಅವಿ ಯೋರಿಶ್. ಅವರು ಬರೆದ Thou Shalt Innovate ಕೃತಿ ಇಸ್ರೇಲಿ ಆವಿಷ್ಕಾರಗಳ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಿಸಿತು.

ಇಸ್ರೇಲಿಗಳು ಎಂಥೆಂಥ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುತ್ತದ್ದಾರಲ್ಲ ಎಂಬುದನ್ನು ತಿಳಿದು ಸೋಜಿಗವಾಯಿತು. ಈ ಜಗತ್ತನ್ನು ಸುಂದರವಾಗಿ ಮತ್ತು ಸಂತೋಷವಾಗಿಡಲು, ಇಸ್ರೇಲಿಗಳು ಮಾಡಿದ ಐವತ್ತು ಆವಿಷ್ಕಾರಗಳನ್ನು ಕಂಡು, ಆ ದೇಶದ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿತು. ಇಂಥ ತಿಯನ್ನು ಕನ್ನಡಿಗರ ಕೈಗಿತ್ತರೆ ಅವರಿಗೂ ಉಪಯುಕ್ತ ವಾಗಬಹುದೆಂದು ಈ ಕೃತಿ ಯನ್ನು ಅನುವಾದಿಸಲು ನಿರ್ಧರಿಸಿದೆ. ಈ ಪುಸ್ತಕ ಓದಿದರೆ ಇಸ್ರೇಲ್ ಬಗ್ಗೆ ನಿಮ್ಮಲ್ಲಿ ಒಂದು ಸಕಾರಾತ್ಮಕ ಅಭಿಪ್ರಾಯ ಮೂಡುವುದಷ್ಟೇ ಅಲ್ಲ, ನಾವೂ ಅದೇ ರೀತಿಯಲ್ಲಿ ಕಾರ್ಯತತ್ಪರರಾಗಬೇಕು ಎಂಬ ಪ್ರೇರಣೆ ಮೂಡುತ್ತದೆ.

ಇದೊಂದು ಮಹತ್ವಪೂರ್ಣ ಪುಸ್ತಕ. ಪ್ರತಿಯೊಂದು ಸಂಶೋಧನೆಯಲ್ಲಿ ತೊಡಗಿಕೊಂಡಿರುವವರನ್ನೆಲ್ಲ ಅವಿ ಯೋರಿಶ್ ಸಂದರ್ಶನ ಮಾಡಿರುವುದರಿಂದ, ಅನೇಕ ತಾಂತ್ರಿಕ ಅಂಶಗಳನ್ನು ಯಥಾವತ್ತು ನೀಡಿರುವುದರಿಂದ, ಅದರ ದೃಢತೆ, ಸಾಚಾತನವನ್ನು ಉಳಿಸಿಕೊಳ್ಳಲು ಈ ಕೃತಿಯಲ್ಲಿ ಗಮನ ನೀಡಲಾಗಿದೆ. ಇಸ್ರೇಲ್ ಬಗ್ಗೆ ತಿಳಿದುಕೊಳ್ಳಬಯಸುವವರು ಈ ಕೃತಿಯನ್ನು ಓದಲೇಬೇಕು.

ಆವಿಷ್ಕಾರವನ್ನೇ ಮೂಲಮಂತ್ರ ವಾಗಿಸಿಕೊಂಡ ಒಂದು ದೇಶ, ಹೇಗೆ ತನ್ನ ಪಾಡಿಗೆ ಜಗತ್ತನ್ನು ಬದಲಿಸುತ್ತಲಿದೆ ಎಂಬುದೂ ಈ ಕೃತಿಯನ್ನು ಓದಿದರೆ ಅರ್ಥವಾಗುತ್ತದೆ. ಒಂದು ಉತ್ತಮ, ಉಪಯುಕ್ತ ಪುಸ್ತಕವನ್ನು ಅನುವಾದಿಸಿದ ಧನ್ಯತೆ ನನ್ನದು.