Saturday, 14th December 2024

ಮಿಥ್ಯ ವಾಸ್ತವ ಪ್ರಪಂಚದಲ್ಲಿ ಸಭ್ಯಾಚಾರ

ಅಭಿಮತ

ಸಂದೀಪ್ ಶರ್ಮಾ

ಕಣ್ಣಿಗೆ ಕಾಣದ ವೈರಿಯಾಗಿ ಇಡೀ ವಿಶ್ವಕ್ಕೆ ಪರಿಣಮಿಸಿರುವ ಕೋವಿಡ್ ಪ್ರಸರಣದ ಪ್ರಹಸನ ಶುರುವಾಗಿದೆ. ಈಗ ರಾಜ್ಯಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಮನೆಯಲ್ಲಿಯೇ ಹೊತ್ತು ತೂಗಿಸುವ ಕಾಲ ಬಂದಿರುವು ದರಿಂದ ಆಧುನಿಕ ಮಾಧ್ಯಮ ಮತ್ತು ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ಅಂತರ್ಜಾಲ ಬೇಡಿಕೆಯೂ ಸೂಕ್ತವಾಗಿ ದೊರಕುತ್ತಿರುವುದರಿಂದ ನಮ್ಮ ಕೆಲಸಗಳು ಕೂಡ ವೇಗ ಪಡೆಯು ತ್ತಿದೆ. ಆಧುನಿಕ, ವೇಗಶೀಲ ಹಾಗೂ ಸ್ಮಾರ್ಟ್ ಬದುಕಿಗೆ ಅಗತ್ಯ ಎನಿಸಿಕೊಂಡ ಅನುಕೂಲಗಳನ್ನು ನವ ಮಾಧ್ಯಮ ಕೊಡುಗೆಯಾಗಿ ನೀಡಿದ್ದರು, ಇನ್ನೊಂದೆಡೆ ಅಷ್ಟೇ ಅಡ್ಡಿ, ಆತಂಕಗಳನ್ನು ಮತ್ತು ಸನ್ನಿವೇಶ ಗಳನ್ನೂ ತಂದೊಡ್ಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ವಿಚಾರಗಳು ಅನಿಸಿಕೊಂಡವೆಲ್ಲವೂ ಸಾರ್ವಜನಿಕ ಸ್ವತ್ತಾಗಿ ಮತ್ತೊಬ್ಬರ ನಗೆಪಾಟಲಿಗೆ ಈಡಾಗಿಯೋ ಅಥವಾ ಗಾಳಿಮಾತಿಗೆ ಪ್ರೇರಣೆಯಾಗಿ ಪರಿಣಮಿಸುತ್ತಿದೆ. ಒಬ್ಬ
ವ್ಯಕ್ತಿಯ ಖಾಸಗಿ ವಿಚಾರಗಳು ಯಾವುದೇ ಇರಲಿ; ಅರ್ಹ ಎನಿಸಿಕೊಂಡವುಗಳು ಸಾರ್ವಜನಿಕ ಸ್ವತ್ತಾಗುತ್ತಿದೆ. ಇದರ ಪರಿಣಾಮ ವೈಯಕ್ತಿಕ ತತ್ತ್ವ, ಸಾಮಾಜಿಕ ಸಭ್ಯತೆ, ನೈತಿಕ ಚೌಕಟ್ಟಿನ ಅಡಿಪಾಯ ನಿಧಾನವಾಗಿ ಅಭದ್ರವಾಗುತ್ತಿರುವ ಸಂದೇಶವನ್ನೂ ನೀಡುತ್ತಿವೆ.

ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಸುಮಾರು 60 ಕೋಟಿ ಇಂಟರ್‌ನೆಟ್ ಬಳಕೆದಾರರು, 46 ಕೋಟಿ
ವಾಟ್ಸ್‌ಆಪ್ ಬಳಕೆದಾರರು, 32 ಕೋಟಿ ಫೇಸ್‌ಬುಕ್ ಬಳಕೆದಾರರು, 42 ಕೋಟಿ ಯೂಟ್ಯೂಬ್ ಬಳಕೆ ದಾರರಿದ್ದಾರೆ. ದಿನದಲ್ಲಿ ಒಬ್ಬ ವ್ಯಕ್ತಿ ಸರಾಸರಿ 2.50 ಗಂಟೆಗಳಷ್ಟು ಕಾಲ ಸಾಮಾಜಿಕ ಮಾಧ್ಯಮ ಗಳಲ್ಲಿ ಕಳೆಯುತ್ತಿದ್ದಾನೆ. ಕತ್ತಲಾವರಿಸಿದ ನಂತರ ದಿನಮಾನಕ್ಕೆ ಹೋಲಿಸಿದರೆ ಸರಾಸರಿ 3 ಗಂಟೆಗಳಷ್ಟು ಹೆಚ್ಚಾಗಿ ಕಾಲ ಕಳೆಯುತ್ತಿದ್ದಾನೆ.

ಪ್ರಸ್ತುತ ಶ್ವಾಸಿಕ ರೋಗ ಕೋವಿಡ್ ಸಾಂಕ್ರಾಮಿಕದಿಂದ ಲಾಕ್‌ಡೌನ್ ಹೇರಿಕೆಯಾದ ಮೇಲೆ ಸರಾಸರಿ ಅಂಕಿಗಳು ಮತ್ತಷ್ಟು ಹೆಚ್ಚುತ್ತವೆ. ಬೆಚ್ಚಿಬೀಳಿಸುವ ಈ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಒಂದು ವಿಚಾರ ಸ್ಪಷ್ಟವಾಗುತ್ತದೆ. ನಾವೀಗ ಎರಡು ಲೋಕಗಳಲ್ಲಿ ಬದುಕುತ್ತಿದ್ದೇವೆ! ಒಂದು ನಾವಿರುವ ಭೌತಿಕ ಪ್ರಪಂಚ, ಇನ್ನೊಂದು ನಾವು ಅತಿ ಹೆಚ್ಚು ಅವಲಂಬಿತವಾಗಿರುವ ಅಂತರ್ಜಾಲ ಎಂಬ ಮಿಥ್ಯಾವಾಸ್ತವ ಪ್ರಪಂಚ. ಈ ಲೋಕಗಳು ತಡೆಗಳಿಲ್ಲದೆ ನಡೆಯುವಾಗ ನಮ್ಮ ನಡವಳಿಕೆಗಳ ಬಗೆಗೆ ವಿವೇಚಿಸುವುದು ಅಗತ್ಯವಲ್ಲವೇ?
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸಭ್ಯಾಚಾರಗಳು ಎಂದರೆ, ನಾವು ಹಂಚಿಕೊಳ್ಳುವ ಮಾಹಿತಿ, ಚಿತ್ರಗಳು ಹಾಗೂ ದೃಶ್ಯಾವಳಿಗಳ ಕುರಿತು ಒಂದಷ್ಟು ಗಮನ.

ಫಾರ್ವರ್ಡೆಡ್ ಮಾಹಿತಿಯನ್ನು ಹಂಚಿಕೊಳ್ಳುವಾಗ ಇರಬೇಕಾದ ಸಹಜ ವಿವೇಚನೆ, ಇನ್ನೊಬ್ಬರ ಪೋಸ್ಟ್‌ ಗಳಿಗೆ ಪ್ರತಿಕ್ರಿಯಿಸುವಾಗ ಇರಬೇಕಾದ ಜಾಗರೂಕತೆ ಮತ್ತು ಎಚ್ಚರಿಕೆ, ಮಾಹಿತಿಯನ್ನು ಪಡೆಯುವಾಗ ಹಾಗೂ ಅದನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ಅದು ಸತ್ಯವೇ? ಮಿಥ್ಯವೇ? ಎಂದು ತಿಳಿದುಕೊಳ್ಳುವ ವ್ಯವಧಾನ.

ಅಂಗೈಯ ಜಗತ್ತು ಎನ್ನುವ ಈ ಸಂದರ್ಭದಲ್ಲಿ ನಾವಿರುವ ಸಮುದಾಯ ಅಥವಾ ಪ್ರದೇಶ ಗಮನಿಸುವು ದಕ್ಕಿಂತಲೂ ಹೆಚ್ಚಾಗಿ ವರ್ಚುವಲ್ ಸಮುದಾಯ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಗಮನಿಸುತ್ತಿರುತ್ತದೆ ಎನ್ನುವುದಂತು ಉತ್ಪ್ರೇಕ್ಷೆಯಲ್ಲ. ನವಮಾಧ್ಯಮಗಳ ಕುರಿತಾದ ಚರ್ಚೆಯಲ್ಲಿ ಬಹುತೇಕ ವಿಚಾರಗಳು; ಜನರ ಬದಲಾದ ಜೀವನಶೈಲಿ ಮತ್ತು ನಡವಳಿಕೆಗಳಿಗೆ ತಂತ್ರಜ್ಞಾನ ಹಾಗೂ ವಿವಿಧ ಸಾಮಾಜಿಕ ಜಾಲತಾಣ ಗಳಲ್ಲಿ ಲಭ್ಯವಾಗುವ ವಿಷಯಗಳತ್ತ ಗಿರಕಿ ಹೊಡೆಯುತ್ತದೆಯೇ ವಿನಾ ಅದರ ಬಳಕೆದಾರರಾದ ನಮ್ಮ ನಡವಳಿಕೆ ಗಳು ಹೇಗಿರಬೇಕು ಎನ್ನುವುದರ ಬಗೆಗೆ ಉಲ್ಲೇಖ ಅತ್ಯಂತ ವಿರಳ. ಈ ಬಗ್ಗೆ ಚರ್ಚೆಗಳು ನಡೆದರೂ ಹಣಕಾಸಿನ ವಂಚನೆ, ಖಾಸಗಿ ಹಕ್ಕುಗಳ ಉಲ್ಲಂಘನೆ, ಮಾನಹಾನಿ ಕುರಿತಾದ ವಿಚಾರಗಳು ಹಾಗೂ ನಾವು ಹೊಂದಿರ ಬೇಕಾದ ಜಾಗರೂಕತೆಗಳ ಕುರಿತಾಗಿ ಮಾತ್ರವೇ ಪ್ರಸ್ತಾಪವಾಗುತ್ತವೆ.

ಒಟ್ಟಿನಲ್ಲಿ ನಡೆಯುವ ಚರ್ಚೆಗಳು ಇನ್ನೊಬ್ಬರಿಂದಾಗಿ ನಮಗಾಗುವ ಮೋಸ ಅಥವಾ ನಾವು ಎದುರಿಸ ಬೇಕಾದ ಪರಿಣಾಮಗಳ ಬಗೆಗೆ ಇರುತ್ತವೆಯೇ ವಿನಾ ದಿನನಿತ್ಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ನಾವು ಪಾಲಿಸಬೇಕಾದ ಸಭ್ಯಾಚಾರಗಳ ವ್ಯವಧಾನ ಕಡಿಮೆ. ಸಾಮಾನ್ಯವಾಗಿ ಸಾಮಾಜಿಕ ನಡವಳಿಕೆಗಳ ಕುರಿತು ಬೋಧನೆಗಳು ಮನೆ ಮತ್ತು ನಮ್ಮ ಶಾಲಾ ದಿನಗಳಲ್ಲಿ ಗುರುಗಳು ತಿಳಿಸಿರುತ್ತಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವರ್ತನೆ ಹೇಗಿರಬೇಕು, ವೇಷ ಭೂಷಣ ಹೇಗಿದ್ದರೆ ಚೆನ್ನ, ಹಿರಿಯರೊಂದಿಗೆ ನಮ್ಮ ವರ್ತನೆ ಹೇಗಿರಬೇಕು ಇತ್ಯಾದಿ. ಈ ನಡವಳಿಕೆಗಳಿಂದಲೇ ನಮ್ಮ ವ್ಯಕ್ತಿತ್ವವನ್ನು ಹೇಗೆ ತೋರ್ಪಡಿಸಿ ಕೊಳ್ಳಬೇಕು ಹಾಗೂ ಗೌರವಯುತವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದಾಗಿದೆ. ಏಕೆಂದರೆ ಹೆಚ್ಚಿನ ಸಂದರ್ಭದಲ್ಲಿ ನಮ್ಮ ವ್ಯಕ್ತಿತ್ವದ ವ್ಯಾಖ್ಯಾನವಾಗುವುದೇ ಇತರರು ನಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯದ ಆಧಾರದಲ್ಲಿ.

ನಮ್ಮಿಷ್ಟದ ಹಾಗೆ ನಾವು ಬದುಕುತ್ತೇವೆ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ಆಯ್ಕೆಗಳನ್ನು ಹೇಳಿದರೂ ನಮ್ಮ ಬಗೆಗಿನ ಇತರರ ಅಭಿಪ್ರಾಯವೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಹಾಗೂ ಅದರ ಜತೆಗೆ ನಮಗೆ ದಕ್ಕುವ ಗೌರವವೂ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಮಾಜಿಕ ಕಟ್ಟುಪಾಡುಗಳಿಗೆ ಬದ್ಧರಾಗಿಯೇ ಇರಬೇಕಾಗುತ್ತದೆ. ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಭ್ಯಾಚಾರಗಳನ್ನು ನಾವು ಡಿಜಿಟಲ್ ವೇದಿಕೆಗಳಲ್ಲೂ ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಇಂದಿನ ಅತ್ಯಗತ್ಯವಾಗಿದೆ.

ಹಂಚಿಕೊಳ್ಳುವ ಯಾವುದೇ ವಿಚಾರಗಳು ನಮ್ಮ ವ್ಯಕ್ತಿತ್ವವನ್ನು ಬೆಳೆಸುವ, ನಮ್ಮ ಕುರಿತಾದ ಗೌರವವನ್ನು
ಕಾಪಿಡುಕೊಳ್ಳುವ ಸ್ವರೂಪವನ್ನು ಹೊಂದಿರಬೇಕಾಗುತ್ತದೆ. ಸಾಧ್ಯವಾದಷ್ಟು ಮತ್ತೊಬ್ಬರು ಬರೆದುದನ್ನು ಹಂಚಿಕೊಳ್ಳುವ ಬದಲಾಗಿ ಸೃಷ್ಟಿಶೀಲ ಬರಹಗಳು, ಚಿತ್ರಗಳು, ವಿಡಿಯೊಗಳು ಹಾಗೂ ಸಂದೇಶಗಳು ಜಗತ್ತಿನೆಡೆಗೆ ನಮ್ಮನ್ನು ನಾವು ಧನಾತ್ಮಕವಾಗಿ ವಿಸ್ತರಿಸಿಕೊಳ್ಳುವಲ್ಲಿ ಸಹಾಯಕವಾಗಬಲ್ಲವು.

ಇನ್ನಷ್ಟು ಜನರಿಗೆ ನಮ್ಮ ಅಭಿರುಚಿಗಳು, ಸಾಧನೆಗಳು ಗೊತ್ತಾಗಬಹುದು. ಹಾಗೆಯೇ ಅದು ಇತರರನ್ನು ಪ್ರಭಾವಿಸಬಹುದು, ಪ್ರಭಾವಿಸದೇ ಇರಬಹುದು. ಸಾಮಾಜಿಕ ಜಾಲತಾಣಗಳ ಬಳಕೆ ನನ್ನ ಖಾಸಗಿ ವಿಚಾರ ಎಂದು ಬೇಕಾಬಿಟ್ಟಿಯಾಗಿ ಬರೆದುಕೊಳ್ಳುವುದು ಒಳ್ಳೆಯ ಸಭ್ಯತೆಯಲ್ಲ. ಹಾಗೆಂದು ನಮ್ಮ ಭಾವನೆಗಳನ್ನು ಅಲ್ಲಿ ಹಂಚಿಕೊಳ್ಳಬಾರದೆಂದಲ್ಲ, ಅಗತ್ಯವಿದ್ದಷ್ಟು ಹಂಚಿಕೊಳ್ಳಬಹುದು, ಅಭಿಪ್ರಾಯಗಳನ್ನು
ವ್ಯಕ್ತಪಡಿಸಬಹುದು. ಅದು ಸೃಷ್ಟಿಶೀಲತೆಗೆ ವೇದಿಕೆಯು ಹೌದು.

ಸಾರ್ವಜನಿಕವಾಗಿ ಹಂಚಿಕೊಳ್ಳುವ ವಿಚಾರಗಳಿಗಿಂತ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಚಾರಗಳು ಅತಿ ವೇಗವಾಗಿ, ಅತಿ ಹೆಚ್ಚು ಜನರಿಗೆ ತಲುಪುವ ಕಾಲ ಇದು. ತೀರಾ ಖಾಸಗಿ ವಿಚಾರಗಳನ್ನು ನಾವು ಸಾರ್ವಜನಿಕ ವಾಗಿ ಹೇಗೆ ಹೇಳಿಕೊಳ್ಳುವುದಿಲ್ಲವೋ ಹಾಗೆಯೇ ಜಾಲತಾಣಗಳಲ್ಲಿ ಹಂಚಿಕೊಳ್ಳದಿದ್ದರೆ ಉತ್ತಮ. ಆದಕಾರಣ ಗೌರವಕ್ಕೆ ಚ್ಯುತಿ ಬರದ ಹಾಗೆ ಯಾವುದೇ ವಿಚಾರಗಳನ್ನು ಅಲ್ಲಿ ಹಂಚಿಕೊಳ್ಳದಿದ್ದರೆ ಉತ್ತಮ.

ಹಾಕಿದ ಪೋಸ್ಟ್‌ಗಳ ವೀಕ್ಷಕರ ಸಂಖ್ಯೆ ಯಾವುದೇ ಧನಾತ್ಮಕ ಯಶಸ್ಸನ್ನು ಹೇಳುವುದಿಲ್ಲ ಅದಕ್ಕೆ ಪ್ರತಿಕ್ರಿಯೆ
ಬರದಿದ್ದರು ವಿಮುಖರಾಗುವುದು ಸಲ್ಲ. ನಾವು ಹಂಚಿದ ಮಾಹಿತಿ, ಫೋಟೋ, ವಿಡಿಯೊ ಎಲ್ಲರೂ ಪೂರ್ತಿಯಾಗಿ ನೋಡಿರಲೇ ಬೇಕೆಂದಿಲ್ಲ ಅಥವಾ ನೋಡಿದರೂ ಅದನ್ನು ಅವರು ಗಮನಿಸಿದ್ದಾರೆ ಎಂಬ
ಅರ್ಥವೂ ಅಲ್ಲ. ಆದ್ದರಿಂದ ಆ ಸಂಖ್ಯೆಯ ಕುರಿತೇ ಪದೇ ಪದೆ ಖಚಿತಪಡಿಸಿಕೊಳ್ಳುತ್ತಾ ತಮ್ಮ ಅಮೂಲ್ಯ ವಾದ ಸಮಯವನ್ನು ವ್ಯರ್ಥಮಾಡಕೊಳ್ಳದಿರುವುದು ಈ ಸಂದರ್ಭದಲ್ಲಿ ಅವಶ್ಯವಾಗಿದೆ.