ಅಂತಃಕರಣ
ಡಾ.ಮುರಲೀ ಮೋಹನ್ ಚೂಂತಾರು
‘ಮಾನವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯು ಹುಟ್ಟುವುದಕ್ಕೆ ಕಾರಣೀ ಭೂತರಾದ ಮಹಾನ್ ವ್ಯಕ್ತಿ ಹೆನ್ರಿ ಡ್ಯೂನಾಂಟ್. ಇವರು ಹುಟ್ಟಿದ ಮೇ ೮ರ ದಿನವನ್ನು ಪ್ರತಿ ವರ್ಷ ‘ವಿಶ್ವ ರೆಡ್ ಕ್ರಾಸ್ ದಿನ’ವಾಗಿ ಆಚರಿಸಲಾಗುತ್ತದೆ.
೧೮೫೯ರ ಜೂನ್ ೨೪ರಂದು ‘ಸಲರಿನೋ ಕದನ’ದ ಗಾಯಾಳುಗಳ ಮನ ಕಲಕುವ ದೃಶ್ಯವನ್ನು ಕಂಡ ಡ್ಯೂನಾಂಟ್, ‘ಜನರಿಂದ ಜನರಿಗೆ ನೆರವು’ ಎನ್ನುವ ಕಲ್ಪನೆಯೊಂದಿಗೆ ೧೮೬೩ರಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಜನ್ಮ ತಳೆಯುವುದಕ್ಕೆ ಪ್ರೇರಕ ಶಕ್ತಿಯಾದರು. ಇಂದು ಈ ಸಂಸ್ಥೆಯು ಜಾಗತಿಕ
ಮಟ್ಟದಲ್ಲಿ ಸಾರ್ವಕಾಲಿಕ ಸೇವಾ ಸಂಘಟನೆಯಾಗಿ ಮಾರ್ಪಟ್ಟು, ಯುದ್ಧಕಾಲದಲ್ಲಿ ಮತ್ತು ಶಾಂತಿಕಾಲದಲ್ಲಿ ನಿರಂತರವಾಗಿ ಶಾಂತಿ ಪ್ರಕ್ರಿಯೆಗಳು ಹಾಗೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದೆ.
ಭಾರತದಲ್ಲಿ ೧೯೨೦ರಲ್ಲಿ ಮತ್ತು ಕರ್ನಾಟಕದಲ್ಲಿ ೧೯೨೧ರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಘಟಕಗಳು ಹುಟ್ಟಿಕೊಂಡವು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ
ಅತ್ಯಂತ ವಿಶಾಲವಾದ ಮಾನವೀಯ ಸೇವಾ ಸಂಘಟನೆಯಾಗಿದೆ. ಆರೋಗ್ಯ ಆರೈಕೆ, ರಕ್ತ ಸಂಗ್ರಹಣೆ, ಪ್ರಾಕೃತಿಕ ವಿಕೋಪಗಳಾದಾಗ ರಕ್ಷಣಾ ಕಾರ್ಯಾ ಚರಣೆಗಳಲ್ಲಿ ಪಾಲ್ಗೊಳ್ಳುವಿಕೆ ಇತ್ಯಾದಿ ಸೇವಾಕಾರ್ಯಗಳಿಗೆ ಈ ಸಂಸ್ಥೆ ಹೆಸರುವಾಸಿಯಾಗಿದೆ. ಒಟ್ಟಿನಲ್ಲಿ, ಪ್ರತಿಯೊಬ್ಬ ನಾಗರಿಕನೂ ತನ್ನ ಜೀವನ ಶೈಲಿಯನ್ನು ಮರುವಿಮರ್ಶೆ ಮಾಡಿ, ಸಮಾಜದ ನೊಂದವರ, ರೋಗಿಗಳ, ದುರ್ಬಲ ವರ್ಗದವರ ಮತ್ತು ಶೋಷಿತರ ಸೇವೆಗೆ ಸಮರ್ಪಿಸಿಕೊಳ್ಳುವ ಒಂದು ಸುದಿನವೇ ಮೇ ೮ ಎಂದರೂ ತಪ್ಪಲ್ಲ.
ರೆಡ್ ಕ್ರಾಸ್ ಸಂಸ್ಥೆಯ ಹೂರಣ ಹೀಗಿದೆ: ‘ಮಾನ ವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ
ರೆಡ್ ಕ್ರಾಸ್ ಸಂಸ್ಥೆಯ ಮೂಲಧ್ಯೇಯಗಳನ್ನು ಈ ರೀತಿ ವಿಂಗಡಿಸಲಾಗಿದೆ.
? ಯುದ್ಧರಂಗದಲ್ಲಿನ ಗಾಯಾಳುಗಳಿಗೆ ತಾರತಮ್ಯ ವಿಲ್ಲದೆ ಸೇವೆ ಸಲ್ಲಿಸುವ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆ ಜನ್ಮ ತಾಳಿತು. ಮಾನವರ ಸಂಕಟ
ಗಳನ್ನು ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ಸಮರ್ಥವಾಗಿ ತಡೆಗಟ್ಟುವುದು ಮತ್ತು ಉಪ ಶಮನ ನೀಡುವುದೇ ಈ ಸಂಸ್ಥೆಯ ಪರಮಗುರಿ.
ಜೀವನ ಸಂರಕ್ಷಣೆ, ಆರೋಗ್ಯ ಪಾಲನೆ ಹಾಗೂ ಮಾನವರ ಘನತೆ ಕಾಪಾಡುವುದು ಇವು ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶಗಳು. ಪರಸ್ಪರ
ತಿಳಿವಳಿಕೆ, ಸ್ನೇಹ, ಸಹಕಾರ ಮತ್ತು ಶಾಶ್ವತ ಶಾಂತಿ ಇವುಗಳನ್ನು ಸಂಸ್ಥೆಯು ಜನರಲ್ಲಿ ಅಭಿವೃದ್ಧಿಪಡಿಸುತ್ತದೆ.
? ವ್ಯಕ್ತಿಯ ರಾಷ್ಟ್ರೀಯತೆ, ಜನಾಂಗ, ಧಾರ್ಮಿಕ ಶ್ರದ್ಧೆ, ವರ್ಗ ಅಥವಾ ರಾಜಕೀಯ ಅಭಿಪ್ರಾಯ ಇವುಗಳಿಗೆ ಸಂಬಂಧಿಸಿದಂತೆ ಸಂಸ್ಥೆಯು ಯಾವುದೇ ಪಕ್ಷಪಾತ ಮಾಡುವುದಿಲ್ಲ.
? ಎಲ್ಲರ ವಿಶ್ವಾಸವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಂಸ್ಥೆಯು ಯಾವುದೇ ರಾಜಕೀಯ, ಜನಾಂಗೀಯ, ಧಾರ್ಮಿಕ ಮತ್ತು ಆದರ್ಶವಾದ
ಗಳ ವಿವಾದ ಪ್ರಸಂಗಗಳಲ್ಲಿ, ದ್ವೇಷಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ.
? ಅಂತಾರಾಷ್ಟ್ರೀಯ ಮತ್ತು ಸ್ವತಂತ್ರ ಸಂಘಟನೆ ಯಾಗಿದೆ ರೆಡ್ ಕ್ರಾಸ್. ಯಾವುದೇ ದೇಶದಲ್ಲಿನ ಸಂಸ್ಥೆಯ ರಾಷ್ಟ್ರೀಯ ಘಟಕವು ಅಲ್ಲಿನ ಮಾನವ
ಸೇವೆಗಳ ಸಹಾಯಕ ಮತ್ತು ಪರಿಹಾರಕಾರಕ ಸಂಘಟನೆಯಾಗಿದ್ದು, ತನ್ನದೇ ಆದ ನೀತಿ- ನಿಯಮಗಳಿಗೆ ಒಳಪಟ್ಟು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ವಿಪತ್ತಿನ ಸಂದರ್ಭದಲ್ಲಿ, ತನ್ನ ನೀತಿ-ನಿಯಮಗಳಿಗೆ ಬದ್ಧವಾಗಿ, ಮೂಲತತ್ತ್ವಗಳಿಗೆ ಧಕ್ಕೆಯಾಗದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಮರ್ಥ ವಾಗಿರುತ್ತದೆ.
? ಈ ಸಂಸ್ಥೆಯನ್ನು ಯಾವುದೇ ರೂಪದಲ್ಲಿಯೂ ಲಾಭಗಳಿಕೆಯ ಉದ್ದೇಶದಿಂದ ನಿರ್ಮಿಸಿಲ್ಲ; ಎಲ್ಲರಿಗೂ ಮುಕ್ತವಾಗಿರುವ ಈ ಸಂಸ್ಥೆ ರಾಷ್ಟ್ರ
ವ್ಯಾಪಿಯಾಗಿ ತನ್ನ ಮಾನವೀಯ ಸೇವೆಗಳನ್ನು ನೆರವೇರಿಸುತ್ತದೆ.
? ವಿಶ್ವವ್ಯಾಪಿ ಸಂಘಟನೆಯಾಗಿರುವ ರೆಡ್ ಕ್ರಾಸ್ನ ಅಡಿಯಲ್ಲಿ ಬರುವ ಎಲ್ಲಾ ರಾಷ್ಟ್ರೀಯ ಘಟಕಗಳೂ ಸಮಾನ ಸ್ಥಾನಮಾನ ಹೊಂದಿದ್ದು,
ಇತರರಿಗೆ ಸಹಾಯ ಮಾಡುವಲ್ಲಿನ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಅವು ಹಂಚಿಕೊಳ್ಳುತ್ತವೆ. ಬಿಳಿ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಹೊಂದಿದ
ಲಾಂಛನ ರೆಡ್ ಕ್ರಾಸ್ ಸಂಸ್ಥೆಯ ಹೆಗ್ಗುರುತು ಎನ್ನಬಹುದು. ಈ ಕ್ರಾಸ್ನ ಎಲ್ಲ ಬಾಹುಗಳೂ ಪರಸ್ಪರ ಸಮನಾಗಿವೆ.
‘ಯುದ್ಧ-ತಟಸ್ಥ ಸಂಕೇತ’ ಎಂಬುದಾಗಿ ಈ ಲಾಂಛನವನ್ನು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಉಪಯೋಗಿಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸ ಬಹುದಾಗಿದೆ. ಯುದ್ಧಕಾಲದಲ್ಲಿ, ಸೇನಾದಂಗೆಯ ಸಮಯದಲ್ಲಿ ಅಗತ್ಯವಿರುವ ಸೇವೆ, ಸಹಾಯ ಮತ್ತು ತುರ್ತು ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸುವಾಗ, ‘ಈ ಸೇವಾಕಾರ್ಯದಲ್ಲಿ ತೊಡಗಿ ರುವವರು ಯುದ್ಧದಿಂದ ಹೊರತಾದವರು’ ಎಂಬು ದನ್ನು ಈ ಲಾಂಛನದಿಂದ ಸೂಚಿಸಲಾಗುತ್ತದೆ.
ಒಟ್ಟಿನಲ್ಲಿ, ತುರ್ತು ಅವಘಡದ ಸಮಯದಲ್ಲಿ ಮಾನವೀಯ ಮತ್ತು ಪರಿಹಾರಕ ಸೇವೆ ನೀಡುವ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರು ಈ ಲಾಂಛನ ವನ್ನು ಬಳಸಬಹುದು. ರೆಡ್ ಕ್ರಾಸ್ ಸಂಘಟನೆಯ ಚಟುವಟಿಕೆಗಳನ್ನು ಯುದ್ಧಕಾಲದವು ಮತ್ತು ಶಾಂತಿಕಾಲದವು ಎಂದು ವಿಂಗಡಿಸ ಲಾಗುತ್ತದೆ. ಮಾನವೀಯ ತತ್ತ್ವ ಮತ್ತು ಮೌಲ್ಯಗಳನ್ನು ಬೆಳೆಸುವಿಕೆ, ಜನರ ಆರೋಗ್ಯ ವೃದ್ಧಿಸುವ ಕಾರ್ಯವನ್ನು ನಿರ್ವಹಿಸುವಿಕೆ, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವಿಕೆ, ಆರೋಗ್ಯಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವಿಕೆ ಮತ್ತು ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯಚಟುವಟಿಕೆಗಳಿಗೆ ಒತ್ತುನೀಡುವಿಕೆ ಇವು ಶಾಂತಿಕಾಲದ ಚಟುವಟಿಕೆಗಳಲ್ಲಿ ಸೇರುತ್ತವೆ.
ನಾವೆಲ್ಲಾ ಸೇರಿ, ಜಾತಿ, ಮತ, ಕುಲ, ಗೋತ್ರ, ವರ್ಣ ಇತ್ಯಾದಿ ಭೇದಗಳನ್ನು ಮೆಟ್ಟಿ ನಿಂತು, ವಿಶ್ವಭ್ರಾತೃತ್ವದ ಮತ್ತು ವಿಶ್ವಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರಬೇಕು. ಹಾಗೆ ಮಾಡಿದಲ್ಲಿ, ಅದು ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಎಂಬ ಮಹಾನ್ ಚೇತನಕ್ಕೆ ನಾವು ನೀಡುವ ಬಹುದೊಡ್ಡ ಗೌರವವಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ರೆಡ್ ಕ್ರಾಸ್ ಹುಟ್ಟಿದ್ದು ಹೀಗೆ
ರೆಡ್ ಕ್ರಾಸ್ ಸಂಸ್ಥೆಯ ಉಗಮ, ಮಾನವ ಇತಿಹಾಸದಲ್ಲಿ ಒಂದು ಕುತೂಹಲಕಾರಿ ಅಧ್ಯಾಯ. ೧೮೫೯ರ ಜೂನ್ ೨೪ರಂದು ನಡೆದ ‘ಸಲರಿನೋ ಕದನ’ ರೆಡ್ ಕ್ರಾಸ್ ಉಗಮಕ್ಕೆ ಕಾರಣವಾಯಿತು. ಇದೊಂದು ಭೀಕರ ಮತ್ತು ಅಮಾನವೀಯ ಯುದ್ಧ ಎನ್ನುತ್ತದೆ ಇತಿಹಾಸ. ಒಂದೆಡೆ ಫ್ರಾನ್ಸ್ ಮತ್ತು
ಇಟಲಿಯ ಸಂಯುಕ್ತ ಸೈನ್ಯ, ಇನ್ನೊಂದೆಡೆ ಆಸ್ಟ್ರಿಯಾ ಸೈನ್ಯ ಈ ರಣರಂಗದಲ್ಲಿದ್ದು, ಮೂರು ಲಕ್ಷಕ್ಕೂ ಹೆಚ್ಚು ಸೈನಿಕರು ಅದರಲ್ಲಿ ಕಾದಾಡುತ್ತಿದ್ದರು. ೧೫ ಗಂಟೆಗಳ ಕಾಲ ನಡೆದ ಈ ಯುದ್ಧ ಮುಗಿದಾಗ, ಸತ್ತವರ ಹಾಗೂ ಗಾಯಗೊಂಡವರ ದೇಹಗಳು ರಣರಂಗದ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಆ ದಿನಗಳಲ್ಲಿ ಚಿಕಿತ್ಸೆಗೆ ಲಭ್ಯವಿದ್ದ ಆಸ್ಪತ್ರೆಗಳು ಹಾಗೂ ವೈದ್ಯರ ಸಂಖ್ಯೆ ಬಹಳ ವಿರಳವಾಗಿತ್ತು.
ರಕ್ತಸಿಕ್ತ ರಣರಂಗದಲ್ಲಿ ಸೈನಿಕರು ನೋವಿನಿಂದ ಚೀರಾಡುತ್ತಿದ್ದರೂ ಸಹಾಯಹಸ್ತ ನೀಡುವವರೇ ಇರಲಿಲ್ಲ. ಕಳೇಬರಗಳನ್ನು ಸಾಗಿಸುವವರು ಯಾರೂ
ಇರಲಿಲ್ಲ. ಬದುಕುಳಿದ ಗಾಯಾಳು ಸೈನಿಕರನ್ನು ಉಪಚರಿಸಿ ಚಿಕಿತ್ಸೆ ನೀಡಲು ವೈದ್ಯಕೀಯ ವ್ಯವಸ್ಥೆಯು ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿರಲಿಲ್ಲ. ಆ ವೇಳೆ ಯುದ್ಧರಂಗದ ಬಳಿ ಹಾದು ಹೋಗುತ್ತಿದ್ದ ಸ್ವಿಜರ್ಲೆಂಡ್ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್, ಈ ಭಯಾನಕ ರಣರಂಗದಲ್ಲಿ ವ್ಯಾಪಕವಾಗಿದ್ದ ರಕ್ತದೋಕುಳಿ, ಯೋಧರ ನೋವು, ಕಿರುಚಾಟಗಳನ್ನು ಕಂಡು ಮಮ್ಮಲ ಮರುಗಿದರು.
ಸೂರ್ಯ ಮುಳುಗುವ ಹೊತ್ತಲ್ಲಿ ಅಲ್ಲಿಗೆ ಬಂದಿದ್ದ ಡ್ಯೂನಾಂಟ್, ಮರುದಿನ ಸೂರ್ಯ ಉದಯಿಸುವವರೆಗೂ ಸ್ಥಳೀಯ ಗ್ರಾಮಸ್ಥರ ನೆರವು ಪಡೆದು,
ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಹಾಕಿಕೊಂಡು ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಸಾಗಿಸಿದರು. ಯುದ್ಧದಲ್ಲಿ ಗಾಯಾಳುಗಳಾಗಿದ್ದವರನ್ನು ಖಾಸಗಿ ಮನೆಗಳು, ಚರ್ಚುಗಳು, ಆಶ್ರಮಗಳು, ಮಸೀದಿಗಳು, ಸೇನಾನೆಲೆಗಳಲ್ಲಿ ಇರಿಸಿ ಉಪಚರಿಸಿದರು. ಆ ವೇಳೆ ಅವರಿಗಾದ ವೈವಿಧ್ಯಮಯ ಅನುಭವಗಳೇ ರೆಡ್
ಕ್ರಾಸ್ ಸಂಸ್ಥೆಯ ಉಗಮಕ್ಕೆ ಪ್ರೇರಣೆ ನೀಡಿದವು.
(ಲೇಖಕರು ವೈದ್ಯರು)
ಯಾರು ಈ ಡ್ಯೂನಾಂಟ್?
ಹೆನ್ರಿ ಡ್ಯೂನಾಂಟ್ ಜನಿಸಿದ್ದು ಸ್ವಿಜರ್ಲೆಂಡ್ ದೇಶದ ಜಿನೀವಾದಲ್ಲಿ ೧೮೨೮ರ ಮೇ ೮ರಂದು. ತಂದೆ ಜೀನ್ ಜ್ಯಾಕ್ ಡ್ಯೂನಾಂಟ್ ವ್ಯಾಪಾರಿ ಮತ್ತು ಸಮಾಜಸೇವಕರಾಗಿದ್ದರೆ, ತಾಯಿ ಧರ್ಮ ಶ್ರದ್ಧೆ ಉಳ್ಳವರಾಗಿದ್ದರು. ಇವರಿಬ್ಬರ ಗುಣಗಳು ಮೇಳೈಸಿದಂತಿದ್ದ ಹೆನ್ರಿ ಡ್ಯೂನಾಂಟ್, ವ್ಯಾಪಾರದ ಜತೆಗೆ ಮಾನವೀಯತೆಯ ಗುಣವನ್ನೂ ಬೆಳೆಸಿಕೊಂಡರು. ಬಡವರಿಗೆ, ರೋಗಿಗಳಿಗೆ, ವೃದ್ಧರಿಗೆ ಆಹಾರ-ಔಷಧ-ನೆರವು ನೀಡುವ ಪರಿ ಪಾಠವನ್ನು ಎಳೆಯ ಪ್ರಾಯದಲ್ಲೇ ರೂಢಿಮಾಡಿ ಕೊಂಡರು.
ಕಾಲೇಜು ವಿದ್ಯಾಭ್ಯಾಸಕ್ಕೆ ಪ್ರವೇಶಿಸುವ ಹೊತ್ತಿಗೆ ಡ್ಯೂನಾಂಟ್ರಲ್ಲಿನ ಮಾನವೀಯ ಕಳಕಳಿ ಮತ್ತಷ್ಟು ಹೆಚ್ಚಿತು. ಓದಿನಲ್ಲಿ ಪ್ರತಿಭಾವಂತರಾಗಿದ್ದುದರ ಜತೆಗೆ ಉತ್ತಮ ಮಾತು ಗಾರರೂ ಆಗಿದ್ದ ಡ್ಯೂನಾಂಟ್ ಧಾರ್ಮಿಕ ಚರ್ಚೆ ಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ೧೮೪೪ರಲ್ಲಿ ‘ವೈ.ಎಂ.ಸಿ.ಎ.’ ಎಂಬ ಧರ್ಮಸಂಸ್ಥೆಯನ್ನು ಹುಟ್ಟುಹಾಕಿ, ಬಡವರಿಗೆ, ರೋಗಿಗಳಿಗೆ, ನೊಂದ ವರಿಗೆ ಸಾಂತ್ವನ ಹೇಳುವಲ್ಲಿ ಹೆಚ್ಚು ವ್ಯಸ್ತರಾದರು.
ತಮ್ಮ ಜೀವನದ ಹೆಚ್ಚಿನ ಸಮಯವನ್ನು ಯುದ್ಧ ಖೈದಿಗಳ ಕಲ್ಯಾಣಕ್ಕಾಗಿ, ಸಮರದಲ್ಲಿ ಗಾಯಗೊಂಡವರ ಸೇವೆಗಾಗಿ ಮುಡಿಪಾಗಿಟ್ಟರು. ೧೮೫೯ರ ‘ಸಲರಿನೋ ಯುದ್ಧ’ ಡ್ಯೂನಾಂಟ್ರ ಜೀವನಧ್ಯೇಯವನ್ನು ಬದಲಾಯಿಸಿತು. ಮೂಲತಃ ವ್ಯಾಪಾರಿಯಾಗಿದ್ದರೂ, ವ್ಯಾವಹಾರಿಕತೆಗಿಂತ ಮಾನವೀಯ ತೆಗೇ ಹೆಚ್ಚು ಒತ್ತು ನೀಡಿದ್ದರ ಫಲವಾಗಿಯೇ ರೆಡ್ ಕ್ರಾಸ್ ಸಂಸ್ಥೆಯ ಉಗಮಕ್ಕೆ ಕಾರಣೀಭೂತರಾದರು ಡ್ಯೂನಾಂಟ್.
೧೯೦೧ರಲ್ಲಿ ಹೆನ್ರಿ ಡ್ಯೂನಾಂಟ್ರಿಗೆ ‘ನೊಬೆಲ್ ಶಾಂತಿ ಪುರಸ್ಕಾರ’ ಪ್ರಪ್ರಥಮವಾಗಿ ದೊರಕಿತು. ಈ ಸಂಬಂಧವಾಗಿ ರೆಡ್ ಕ್ರಾಸ್ ಸಂಸ್ಥೆಯ ಅಂತಾ
ರಾಷ್ಟ್ರೀಯ ಸಮಿತಿಯು ಡ್ಯೂನಾಂಟ್ರಿಗೆ ಜಿನೀವಾದಿಂದಲೇ ಕಳಿಸಿದ ಸಂದೇಶ ಈ ರೀತಿ ಯಲ್ಲಿತ್ತು: ‘ಇಂಥ ಘನತರವಾದ ಗೌರವಕ್ಕೆ ನಿಮ್ಮಂತೆ ಪಾತ್ರರಾದವರು ಬೇರೆ ಯಾರೊಬ್ಬರೂ ಇಲ್ಲ. ೪೦ ವರ್ಷಗಳ ಸತತ ಪರಿಶ್ರಮದಿಂದ ಈ ಅಂತಾರಾಷ್ಟ್ರೀಯ ಸಂಘಟನೆಯನ್ನು ಯುದ್ಧ ರಂಗದಲ್ಲಿನ ಗಾಯಾಳುಗಳ ಪರಿಹಾರಕ್ಕಾಗಿ ನೀವು ಆರಂಭಿಸಿದಿರಿ. ನೀವಿಲ್ಲದಿದ್ದರೆ ೧೯ನೇ ಶತಮಾನದ ಸರ್ವೋಚ್ಚ ಮಾನವೀಯ ಸಾಧನೆಯಾದ ರೆಡ್ ಕ್ರಾಸ್ ಸಂಸ್ಥೆ ಉದಯಿಸುತ್ತಿರಲಿಲ್ಲ’. ಹೀಗೆ, ಶ್ರೀಮಂತರಾಗಿದ್ದರೂ ಬಡವರ ಜತೆಗೆ ಬದುಕಿದ, ತಮ್ಮ ಜೀವನದ ಕೊನೆಯ ಕ್ಷಣದಲ್ಲಿ ಕೂಡ ಆಸ್ಪತ್ರೆಯಲ್ಲಿ ಬಡರೋಗಿ ಗಳ ಸೇವೆ ಮಾಡುತ್ತಾ ಇದ್ದ ಹೆನ್ರಿ ಡ್ಯೂನಾಂಟ್, ೧೯೧೦ರ ಅಕ್ಟೋಬರ್ ೩೦ರಂದು ಅಸುನೀಗಿದರು.
‘ಜನತೆ ಯಿಂದ ಜನತೆಗೆ ನೆರವು’ ಎಂಬ ೩ ಸರಳ ಶಬ್ದ ಗಳಲ್ಲಿ ತಮ್ಮ ಬದುಕಿನ ಉದ್ದೇಶವನ್ನು ದಾಖಲಿಸಿ ದವರು ಹೆನ್ರಿ ಡ್ಯೂನಾಂಟ್. ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯ ಗಳನ್ನು ಈ ಶಬ್ದಗಳೇ ವಿವರಿಸು ತ್ತವೆ. ಒಟ್ಟಿನಲ್ಲಿ, ತನ್ನ ಸೇವಾಕಾರ್ಯಗಳಿಂದಾಗಿ ಜಾಗತಿಕ ಆಶಾಕಿರಣವಾಗಿ ಮತ್ತು ಸಾರ್ವಕಾಲಿಕ ಸೇವಾಸಂಸ್ಥೆಯಾಗಿ ಹೊರಹೊಮ್ಮಿರುವ ರೆಡ್ ಕ್ರಾಸ್, ಯುದ್ಧ ಕಾಲದಲ್ಲಿ ಮತ್ತು ಶಾಂತಿಕಾಲದಲ್ಲಿ ನಿರಂತರವಾಗಿ ಶಾಂತಿ ಪ್ರಕ್ರಿಯೆಗಳು ಮತ್ತು ಆರೈಕೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡೇ ಇದೆ, ತನ್ಮೂಲಕ ವಿಶ್ವಶಾಂತಿಗೆ ಮುನ್ನುಡಿ ಬರೆಯುತ್ತಿದೆ.