ಚರ್ಚಾವೇದಿಕೆ
ಗಣೇಶ್ ಭಟ್ ವಾರಣಾಸಿ
ದೇಶದಲ್ಲೀಗ ಹೆಚ್ಚು ನಕ್ಸಲರು ಇರುವುದು ಛತ್ತೀಸ್ಗಢದಲ್ಲಿ. ಇತ್ತೀಚೆಗೆ ಅಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ೨೯ ಮಂದಿ ನಕ್ಸಲರನ್ನು ಕೊಂದು ಹಾಕಲಾಯಿತು. ಇದು ಈಚಿನ ವರ್ಷಗಳಲ್ಲಿನ ಇಂಥ ಕಾರ್ಯಾಚರಣೆಯಲ್ಲಿ ಅತಿಹೆಚ್ಚು ನಕ್ಸಲರು ಹತರಾದ ನಿದರ್ಶನವಾಗಿದೆ.
ದೇಶದ ಆಂತರಿಕ ಭದ್ರತೆಯಲ್ಲಿ ಗಮನಾರ್ಹ ಸುಧಾರಣೆಯಾಗಿರುವುದು ಕಳೆದ ೧೦ ವರ್ಷಗಳಲ್ಲಿ ಭಾರತವು ಕಂಡ ಅತಿ ಪ್ರಮುಖ ಬದಲಾವಣೆ ಗಳಲ್ಲೊಂದು. ದಶಕದ ಹಿಂದೆ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಉಗ್ರರ ದಾಳಿ, ಬಾಂಬ್ ಸ್ಪೋಟ, ನಕ್ಸಲ್ ಆಕ್ರಮಣಗಳು ಮತ್ತು ಈಶಾನ್ಯ
ರಾಜ್ಯಗಳಲ್ಲಿ ‘ಉಲಾ’ ದಾಳಿಯಂಥ ಘಟನೆಗಳು ಸರ್ವೇಸಾಮಾನ್ಯವಾಗಿದ್ದವು. ಆದರೀಗ ಪಾಕಿಸ್ತಾನಿ ಉಗ್ರರಿಗೆ ಕಾಶ್ಮೀರದ ಗಡಿ ದಾಟಿ ದೇಶದೊಳಗೆ
ಬರಲು ಸಾಧ್ಯವಾಗುತ್ತಿಲ್ಲ. ದೇಶದ ಗುಪ್ತಚರ ವಿಭಾಗವು ಆಧುನೀಕರಣಗೊಂಡು ಹಿಂದೆಂದಿಗಿಂತಲೂ ಹೆಚ್ಚು ಸಕ್ಷಮವಾಗಿದೆ.
ಗುಪ್ತಚರ ಇಲಾಖೆ, ಭಯೋತ್ಪಾದನಾ ನಿಗ್ರಹದಳ, ರಾಷ್ಟ್ರೀಯ ತನಿಖಾದಳ ಹಾಗೂ ರಾಜ್ಯ ಪೊಲೀಸರುಗಳ ನಡುವಿನ ಸಮನ್ವಯ ಉತ್ತಮಗೊಂಡಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಭಯೋತ್ಪಾದನೆಯಿಂದ ದೇಶವನ್ನು ಬಿಡುಗಡೆಗೊಳಿಸಬೇಕೆಂಬ ಇಚ್ಛಾಶಕ್ತಿಯುಳ್ಳ ನಿರ್ಣಾಯಕ ಸರಕಾರವು ಕೇಂದ್ರದಲ್ಲಿದೆ.
ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ವೈಮಾನಿಕ ದಾಳಿ ಮುಂತಾದ ಪ್ರತ್ಯಾಕ್ರಮಣಗಳು ಉಗ್ರರನ್ನು ಹಿಮ್ಮೆಟ್ಟಿಸಿದವು. ಭಾರತಕ್ಕೆ ಬೇಕಾಗಿದ್ದ, ಪಾಕಿಸ್ತಾನ
ದಲ್ಲಿ ಅಡಗಿ ಕುಳಿತಿದ್ದ ೨೦ಕ್ಕೂ ಹೆಚ್ಚು ಮಂದಿ ಭಯೋತ್ಪಾದಕರು ಕಳೆದೆರಡು ವರ್ಷಗಳಲ್ಲಿ ಅಲ್ಲಿಯೇ ಅಪರಿಚಿತರ ಗುಂಡಿಗೆ ಬಲಿಯಾಗಿದ್ದಾರೆ.
ಇವುಗಳೆಲ್ಲದರ ಪರಿಣಾಮವಾಗಿ ಭಾರತೀಯರಿಂದು ಹಿಂದೆಂದಿಗಿಂತ ಸುರಕ್ಷಿತರಾಗಿದ್ದಾರೆ. ದಶಕಗಳ ಹಿಂದೆ ಇಡೀ ದೇಶವನ್ನೇ ಆವರಿಸಿದ್ದ ನಕ್ಸಲರು
ಇಂದು ತಮ್ಮ ಬಲವನ್ನು ಕಳೆದುಕೊಂಡು ದೇಶದ ಕೆಲವೇ ಜಿಲ್ಲೆಗಳಿಗೆ ಸೀಮಿತಗೊಂಡಿದ್ದಾರೆ. ಮುಂದಿನ ೩ ವರ್ಷಗಳಲ್ಲಿ ಭಾರತವು ಕೆಂಪು ಉಗ್ರವಾದಿ ಗಳಿಂದ ಮುಕ್ತವಾಗಲಿದೆ. ದೇಶದಲ್ಲೀಗ ಹೆಚ್ಚು ನಕ್ಸಲರು ಇರುವುದು ಛತ್ತೀಸ್ಗಢದಲ್ಲಿ ಮಾತ್ರ. ಕಳೆದ ಏಪ್ರಿಲ್ನ ೧೬ರಂದು, ಅಲ್ಲಿನ ಕಾಂಕೇರ್ನಲ್ಲಿ ನಡೆಸಲಾದ ನಕ್ಸಲ್-ವಿರೋಧಿ ಕಾರ್ಯಾಚರಣೆಯಲ್ಲಿ ೨೯ ಮಂದಿ ನಕ್ಸಲರನ್ನು ಕೊಂದುಹಾಕಲಾಯಿತು.
ಇದು ಇತ್ತೀಚಿನ ವರ್ಷಗಳಲ್ಲಿನ ಇಂಥ ಕಾರ್ಯಾಚರಣೆಯಲ್ಲಿ ಅತಿಹೆಚ್ಚು ನಕ್ಸಲರು ಹತರಾದ ನಿದರ್ಶನವಾಗಿದೆ. ಕೆಲ ದಿವಸಗಳ ಹಿಂದೆ ದಾಂತೇವಾಡ ದಲ್ಲಿ ೨೩ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರಿಗೆ ಶರಣಾದರು. ಏಪ್ರಿಲ್ ೩೦ರಂದು ನಡೆದ ಕಾರ್ಯಾಚರಣೆಯಲ್ಲಿ ೯ ಮಂದಿ ನಕ್ಸಲರು ಹತರಾದರು. ಈ ಎಲ್ಲ ಕಾರ್ಯಾಚರಣೆಗಳಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ಯಾವುದೇ ಪ್ರಾಣಹಾನಿಯಾಗದಿದ್ದುದು ವಿಶೇಷ. ಛತ್ತೀಸ್ ಗಢದಲ್ಲಿ ಬಿಜೆಪಿಯು ಅಽಕಾರಕ್ಕೆ ಬಂದ ನಂತರ ೮೫ಕ್ಕೂ ಹೆಚ್ಚು ನಕ್ಸಲರ ಅಂತ್ಯವಾಗಿದೆ.
೨೦೦೭ರಲ್ಲಿ ದೇಶದ ೧೬೦ ಜಿಲ್ಲೆಗಳು ನಕ್ಸಲ್-ಬಾಧಿತವಾಗಿದ್ದವು. ೨೦೧೩ರಲ್ಲಿ ಇದು ೧೨೦ಕ್ಕೆ ಇಳಿದು, ಈಗ ಆ ಸಂಖ್ಯೆ ೫೬ಕ್ಕೆ ತಗ್ಗಿದೆ. ಕಮ್ಯುನಿಸ್ಟ್ ಚಿಂತನೆಯನ್ನು ಹೊಂದಿ, ಹಿಂಸೆ ಮತ್ತು ರಕ್ತಪಾತದಲ್ಲಿ ಮಾತ್ರ ನಂಬಿಕೆಯಿಟ್ಟಿರುವ ಸಶಸ್ತ್ರ ಕ್ರಾಂತಿಯೇ ನಕ್ಸಲಿಸಂ. ೧೯೬೭ರಲ್ಲಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನ ಸಿಲಿಗುರಿಯ ನಕ್ಸಲ್ ಬಾರಿ ಎಂಬ ಊರಿನಲ್ಲಿ ಈ ಹಿಂಸಾಚಾರ ಆರಂಭವಾಯಿತು. ಅಲ್ಲಿ ಬುಡಕಟ್ಟು ಜನಾಂಗದವರೊಡನೆ ‘ಆಲ್ ಇಂಡಿಯಾ ಕೋಆರ್ಡಿನೇಷನ್ ಕಮಿಟಿ ಆ- ಕಮ್ಯುನಿಸ್ಟ್ ರೆವಲ್ಯೂಷನರೀಸ್’, ‘ಆಲ್ ಇಂಡಿಯಾ ಕಿಸಾನ್ ಸಭಾ’ ಹಾಗೂ ಸ್ಥಳೀಯ ರೈತರು ಸೇರಿಕೊಂಡು ಭೂಮಾಲೀಕರೊಡನೆ ಸಂಘರ್ಷವನ್ನು ಆರಂಭಿಸಿದರು.
ಚಾರು ಮಜುಂದಾರ್, ಕಾನು ಸಾನ್ಯಾಲ್, ಜಂಗಲ್ ಸಂತಾಲ್, ಶಾಂತಿ ಮುಂಡಾ ಮೊದಲಾದ ಕಮ್ಯುನಿಸ್ಟ್ ನಾಯಕರು ನಕ್ಸಲ್ ಹೋರಾಟದ ನೇತೃತ್ವ ವನ್ನು ವಹಿಸಿದ್ದರು. ಈ ಹೋರಾಟವು ನಂತರದ ದಿನಗಳಲ್ಲಿ ದೇಶಾದ್ಯಂತ ಸಶಸ ಹೋರಾಟ ನಡೆಸುವುದಕ್ಕೆ ಕಮ್ಯುನಿಸ್ಟರಿಗೆ ಚಿತಾವಣೆ ನೀಡಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್ ಲೆನಿನಿಸ್ಟ್) ನೇತೃತ್ವದಲ್ಲಿ ನಕ್ಸಲರ ಹೋರಾಟ ನಡೆಯಿತು. ನಂತರದ ದಿನಗಳಲ್ಲಿ ಚೀನಾದ ಮಾವೋ ಝೆಡಾಂಗನ ಸಶಸ ಕ್ರಾಂತಿಯಿಂದ ಪ್ರೇರೇಪಿತರಾದ ನಕ್ಸಲರು ತಮ್ಮನ್ನು ಮಾವೋವಾದಿಗಳೆಂದು ಕರೆದುಕೊಂಡರು. ಇವರಿಗೆ ಭಾರತದಲ್ಲಿ ಪ್ರಜಾ ಪ್ರಭುತ್ವ ರೀತಿಯಲ್ಲಿ ಆಯ್ಕೆಗೊಂಡ ಸರಕಾರಗಳ ಬಗ್ಗೆ ನಂಬಿಕೆಯಿಲ್ಲ.
ನಕ್ಸಲರು ದೇಶದ ಕಾನೂನು ಹಾಗೂ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಇವರಿಗೆ ಪ್ರಜಾಪ್ರಭುತ್ವ ಪದ್ಧತಿಯ ಬಗ್ಗೆ ಒಲವಿಲ್ಲ. ಭಾರತದ ಚುನಾ ಯಿತ ಸರಕಾರವನ್ನು ಸಶಸ್ತ್ರ ಕ್ರಾಂತಿಯ ಮೂಲಕ ಕೆಳಗಿಳಿಸಿ, ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸುವುದು ನಕ್ಸಲರ ಪರಮಗುರಿ ಆಗಿತ್ತು. ಪಶ್ಚಿಮ ಬಂಗಾಳದಲ್ಲಿ ಜನ್ಮತಾಳಿದ ನಕ್ಸಲರು ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ, ಮಹಾ ರಾಷ್ಟ್ರ ಮೊದಲಾದ ರಾಜ್ಯಗಳಿಗೂ ತಮ್ಮ ನೆಲೆಗಳನ್ನು ವಿಸ್ತರಿಸಿದರು. ಬಿಹಾರದಲ್ಲಿ ಭೂಮಾಲೀಕರ ವಿರುದ್ಧ ಹೋರಾಟ ಆರಂಭಿಸಿದ ನಕ್ಸಲರು, ಭೂಮಾಲೀಕರ ಅಪಹರಣ ಹಾಗೂ ಹತ್ಯೆಗಳನ್ನು ನಡೆಸಿದರು. ಕೊನೆಗೆ ಬಿಹಾರದ ಭೂಮಾಲೀಕರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ‘ರಣವೀರ್ ಸೇನಾ’ ಎಂಬ ಖಾಸಗಿ ಪಡೆಯನ್ನು ಕಟ್ಟಿಕೊಂಡರು. ೧೯೯೦ರಿಂದ ೨೦೦೦ನೇ ಇಸವಿಯವರೆಗಿನ ಅವಽಯಲ್ಲಿ ನಕ್ಸಲರು ಮತ್ತು ರಣವೀರ್ ಸೇನಾ ನಡುವೆ ಭಾರಿ ಸಂಘರ್ಷಗಳು ನಡೆದು ನೂರಾರು ಜನರು ಸಾವಿಗೀಡಾದರು.
ಅದೇ ರೀತಿ, ಛತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧ ಹೋರಾಡಲು ಅಲ್ಲಿನ ರಾಜ್ಯ ಸರಕಾರವು ಸ್ಥಳೀಯ ಬುಡಕಟ್ಟು ಜನಾಂಗದ ಯುವಕರನ್ನು ತರಬೇತು ಗೊಳಿಸಿ, ಅವರ ಮೂಲಕ ೨೦೦೫ರಿಂದ ೨೦೧೧ರವರೆಗೆ ನಕ್ಸಲರ ವಿರುದ್ಧ ‘ಸಲ್ವಾ ಜುಡುಂ’ ಹೆಸರಿನ ಕಾರ್ಯಾಚರಣೆಯನ್ನು ನಡೆಸಿತು. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ.ನಂದಿನಿ ಸುಂದರ್ ಅವರು ಈ ಕಾರ್ಯಾಚರಣೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದಾಗ, ‘ಸಲ್ವಾ ಜುಡುಂ’ ಕಾರ್ಯಾಚರಣೆಯು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಅದನ್ನು ನಿಷೇಧಿಸಿತು.
ಆದರೆ, ಇದೇ ಪ್ರೊ.ನಂದಿನಿ ಅವರು ಛತ್ತೀಸ್ಗಢದ ಕಾಡುಗಳಿಗೆ ತೆರಳಿ ನಕ್ಸಲರನ್ನು ಗುಟ್ಟಾಗಿ ಸಂಧಿಸುತ್ತಿದ್ದರು ಎಂದು ಪೊಡಿಯಾಮ್ ಪಾಂಡು ಅಲಿಯಾಸ್ ಪಾಂಡಾ ಎಂಬ ಹೆಸರಿನ ನಕ್ಸಲರ ನಾಯಕ ಹೇಳಿಕೆ ಕೊಟ್ಟಿದ್ದ. ಅದೇ ರೀತಿ, ನಕ್ಸಲರ ವಿರುದ್ಧ ಸೆಟೆದು ನಿಂತಿದ್ದ ಶಾಮ್ನಾಥ್ ಭಾಗೆಲ್ ಎಂಬ ಆದಿವಾಸಿ ಜನಾಂಗದ ನಾಯಕನನ್ನು ಕೊಲ್ಲಿಸುವಲ್ಲಿ ಪ್ರೊ.ನಂದಿನಿ ಅವರ ಪಾತ್ರವಿತ್ತು ಎಂದು ಕೇಸು ದಾಖಲಾಗಿತ್ತು. ಪ್ರೊ.ನಂದಿನಿ ಅವರು ಮೊದಲು ‘ದಿ ಹಿಂದೂ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಹಾಗೂ ಈಗಿನ ‘ದಿ ವೈರ್’ ಪತ್ರಿಕೆಯ ಸಂಸ್ಥಾಪಕರಾದ ಸಿದ್ಧಾರ್ಥ ವರದರಾಜನ್ ಅವರ ಪತ್ನಿ ಎಂಬುದು ಗಮನಾರ್ಹ ವಿಷಯ.
ನಕ್ಸಲರು ‘ಪೀಪಲ್ಸ್ ವಾರ್ ಗ್ರೂಪ್’ ಹೆಸರಿನಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ವ್ಯಾಪಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಆಂಧ್ರದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲು ‘ಗ್ರೇ ಹೌಂಡ್’ ಹೆಸರಿನ ಕಮಾಂಡೋ ತಂಡವನ್ನು ೧೯೮೬ ರಲ್ಲಿ ರೂಪಿಸಲಾಯಿತು. ೨೦-೩೦ ಜನರನ್ನು ಹೊಂದಿದ್ದ ಈ ಕಮಾಂಡೋ ತಂಡಗಳು ನಕ್ಸಲರ ಮೇಲೆ ಗೆರಿಲ್ಲಾ ಮಾದರಿಯ ದಾಳಿಗಳನ್ನು ನಡೆಸಿ ಅವರನ್ನು ನಾಶಗೊಳಿಸಲು ಮುಂದಾದವು. ೧೯೯೫ ರಿಂದ ೨೦೧೬ರವರೆಗಿನ ಅವಽಯಲ್ಲಿ ಗ್ರೇ ಹೌಂಡ್ ಗಳು ೧,೭೮೦ ನಕ್ಸಲರನ್ನು ಕೊಂದರು. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅಡಗಿದ್ದ
ಶೇ.೮೦ರಷ್ಟು ನಕ್ಸಲರನ್ನು ಸಂಪೂರ್ಣ ನಾಶಗೊಳಿಸಿದ ಕೀರ್ತಿ ‘ಗ್ರೇ ಹೌಂಡ್’ಗಳಿಗೆ ಸಲ್ಲುತ್ತದೆ.
ಇಂದು ಈ ಎರಡೂ ರಾಜ್ಯಗಳು ನಕ್ಸಲರಿಂದ ಬಹುತೇಕ ಮುಕ್ತವಾಗಿವೆ. ನಕ್ಸಲರು ಪಾಕಿಸ್ತಾನಿ ಭಯೋತ್ಪಾದಕರಿಗಿಂತ ಕಡಿಮೆಯೇನಿಲ್ಲ. ನಕ್ಸಲರ ದಾಳಿಯಿಂದಾಗಿ ದೇಶದಲ್ಲಿ ಇದುವರೆಗೂ ೧೨,೦೦೦ಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದು, ಇವರಲ್ಲಿ ಸುಮಾರು ೪,೦೦೦ದಷ್ಟು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಕಳೆದ ೨೨ ವರ್ಷಗಳಲ್ಲಿ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯೊಂದರಲ್ಲೇ ೧,೭೭೫ ನಾಗರಿಕರನ್ನು ನಕ್ಸಲರು ಕೊಂದಿದ್ದಾರೆ.
ವನವಾಸಿಗಳ ಅಭಿವೃದ್ಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಿಶ್ವ ಹಿಂದೂ ಪರಿಷತ್ತಿನ ಸ್ವಾಮೀ ಲಕ್ಷ್ಮಣಾನಂದ ಸರಸ್ವತಿಯವರನ್ನು,
ಕ್ಯಾಥಲಿಕ್ ಪಾನೋಸ್ಗಳ ಜತೆಗೆ ಸೇರಿಕೊಂಡು ಹತ್ಯೆಗೈದವರು ನಕ್ಸಲೀಯರೇ.
ನಕ್ಸಲರು ತಮ್ಮ ಪ್ರಾಬಲ್ಯದ ಪ್ರದೇಶಗಳಲ್ಲಿ ಸರಕಾರವು ನಿರ್ಮಿಸುವ ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ, ಮೊಬೈಲ್ ಟವರ್ ಮೊದಲಾದವನ್ನು ಹಾಳುಗೆಡವುತ್ತಾರೆ. ಇವರಿಗೆ ಅಭಿವೃದ್ಧಿ ಸಹ್ಯವಲ್ಲ. ನಕ್ಸಲರಿಗೆ ಚೀನಾದ ತಾತ್ವಿಕ ಬೆಂಬಲವಿದೆ. ಪಾಕಿಸ್ತಾನದ ಮತ್ತು ಈಶಾನ್ಯ ರಾಜ್ಯಗಳ ಉಗ್ರರ ಜತೆಗೂ ನಕ್ಸಲರಿಗೆ ಸಂಪರ್ಕವಿದೆ.
ನಕ್ಸಲರಿಗೆ ರಾಜಕೀಯ ಬೆಂಬಲವಿದೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ನಕ್ಸಲರ ಬಗ್ಗೆ ಮೃದು ಧೋರಣೆ ಹೊಂದಿವೆ. ಕಾಂಗ್ರೆಸ್ನ ವಕ್ತಾರೆ ಸುಪ್ರಿಯಾ ಶ್ರೀನೇಟ್ ಅವರು, ಇತ್ತೀಚೆಗೆ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ೨೯ ನಕ್ಸಲರನ್ನು ‘ಹುತಾತ್ಮರು’ ಎಂದು ಬಣ್ಣಿಸಿದ್ದರು.
೨೦೧೦ರಲ್ಲಿ ಮಾವೋವಾದಿಗಳ ವಿರುದ್ಧ ವೈಮಾನಿಕ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದ ಅಂದಿನ ಕೇಂದ್ರ ಗೃಹಮಂತ್ರಿ ಪಿ.ಚಿದಂಬರಂ ಅವರನ್ನು ಅಂದಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ‘ಇಂಟೆಲೆಕ್ಚುವಲ್ ಆರೋಗೆಂಟ್’ (ಬೌದ್ಧಿಕ ದುರಹಂಕಾರಿ) ಎಂದು ಜರೆದಿದ್ದರು. ಈ ಹೇಳಿಕೆಯ ನಂತರ, ನಕ್ಸಲರ ಮೇಲೆ ನಡೆಸಲು ಉದ್ದೇಶಿಸಲಾಗಿದ್ದ ವೈಮಾನಿಕ ಕಾರ್ಯಾಚರಣೆಯನ್ನು ತಡೆಹಿಡಿಯಲಾಯಿತು.
ದೇಶದ ಒಂದಿಷ್ಟು ವಿಶ್ವವಿದ್ಯಾಲಯಗಳ ಕೆಲ ಪ್ರಾಧ್ಯಾಪಕರುಗಳು, ಬರಹಗಾರರು, ಅಂಕಣಕಾರರು, ಸರಕಾರೇತರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬುದ್ಧಿಜೀವಿಗಳು ನಕ್ಸಲರ ಪರವಾಗಿ ಮಾತನಾಡುತ್ತಾರೆ. ನಕ್ಸಲರನ್ನು ‘ದಾರಿ ತಪ್ಪಿದ ದೇಶಪ್ರೇಮಿಗಳು’ ಎಂದು ಇವರು ಬಣ್ಣಿಸುತ್ತಾರೆ. ಹೀಗಾಗಿ ಇಂಥವರನ್ನು ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ನಗರ ನಕ್ಸಲರು’ ಎಂದು ಕರೆದಿದ್ದಾರೆ. ಬಡತನ ಇರುವಲ್ಲಿ ಮತ್ತು ರಸ್ತೆ, ವಿದ್ಯುತ್,
ನೀರು ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆ ಇರುವಲ್ಲಿ ನಕ್ಸಲರು ತಮ್ಮ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತಾರೆ. ನಿರುದ್ಯೋಗಿ ಯುವಕರ
ತಲೆಕೆಡಿಸಿ ದೇಶವಿರೋಽ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುತ್ತಾರೆ. ಆದರೆ, ೨೦೧೪ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು,
ವಿದ್ಯುತ್, ರಸ್ತೆ, ನೀರು, ಮೊಬೈಲ್ ಹಾಗೂ ಅಂತರ್ಜಾಲ ಸಂಪರ್ಕ ಮೊದಲಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಾ ಬಂತು.
ದೇಶದ ಶೇ.೯೯ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ, ಶೇ.೯೯.೮ರಷ್ಟು ಮನೆಗಳಿಗೆ ಅಡುಗೆ ಅನಿಲ, ಶೇ.೯೯ರಷ್ಟು ಮನೆಗಳಿಗೆ ಶೌಚಾಲಯ, ಶೇ.೭೬ರಷ್ಟು ಮನೆಗಳಿಗೆ ಪೈಪ್ ಮೂಲಕ ಕುಡಿಯುವ ನೀರಿನ ಸಂಪರ್ಕ, ಜನಧನ್ ಖಾತೆ- ಆಧಾರ್-ಮೊಬೈಲ್ ಸಂಖ್ಯೆಗಳನ್ನು ಬೆಸೆಯುವ ಮೂಲಕ ಸರಕಾರಿ ಸಹಾಯಧನವನ್ನು ಸಂಪೂರ್ಣವಾಗಿ ಫಲಾನುಭವಿಗಳಿಗೆ ತಲುಪಿಸುವಿಕೆ ಮೊದಲಾದ ಉಪಕ್ರಮಗಳಿಂದಾಗಿ ಕಳೆದ ೧೦ ವರ್ಷಗಳಲ್ಲಿ ದೇಶದ ೨೫ ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಜನರಿಗೆ ಸರಕಾರದ ಮೇಲೆ ಅಷ್ಟಾಗಿ ರೋಷ ಇಲ್ಲದಿ ರುವುದರಿಂದ, ನಕ್ಸಲ್ ಹೋರಾಟಗಳೆಡೆಗೆ ಜನರನ್ನು ಸೆಳೆಯಲು ಮಾವೋವಾದಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇಶದಲ್ಲಿ ಕೆಂಪು ಉಗ್ರವಾದವು ಮೂಲೆಗುಂಪಾಗುತ್ತಿದೆ.
(ಲೇಖಕರು ಹವ್ಯಾಸಿ ಬರಹಗಾರರು)