Wednesday, 11th December 2024

ಕಾರ್ಯಕರ್ತರ ಬಿಟ್ಟರೆ ಪ್ರಾದೇಶಿಕ ಪಕ್ಷಕ್ಕೆ ಮಾರಕ

ಅಶ್ವತ್ಥಕಟ್ಟೆ

ranjith.hoskere@gmail.com

ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ರಾಜಕೀಯ ಅಸ್ಥಿರತೆ ಭಾರಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿಯ ಪ್ರಮುಖ ಪಕ್ಷವಾಗಿರುವ ಶಿವಸೇನೆಯಲ್ಲಿ ಉಂಟಾಗಿರುವ, ಆಂತರಿಕ ಕಿತ್ತಾಟದಿಂದ ಇಡೀ ಪಕ್ಷವೇ ಇಬ್ಭಾಗವಾಗುವ ಸ್ಥಿತಿ ನಿರ್ಮಾಣವಾಗಿದೆ.

ಶಿವಸೇನೆಯಲ್ಲಿ ಇಂದು ಉಂಟಾಗುತ್ತಿರುವ ಭಿನ್ನಮತಗಳಿಗೆ ಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಹಿಂದೆ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಭಿನ್ನಮತಗಳಿಗೆ ಸಾಮ್ಯತೆ ಕಾಣಿಸುತ್ತಿರುವುದು ಸ್ಪಷ್ಟ. ಹೌದು, ಸೈದ್ಧಾಂತಿಕವಾಗಿ ಜೆಡಿಎಸ್ ಹಾಗೂ ಶಿವಸೇನೆಗೂ ಅಜಗಜಾಂತರವಿದ್ದರೂ, ಎರಡೂ ಪಕ್ಷದಲ್ಲಿ ಅಸಮಾಧಾನ ಭುಗಿಲೇ ಳುವುದಕ್ಕೆ ಪ್ರಮುಖ ಕಾರಣ ಮಾತ್ರ ಒಂದೇ ಆಗಿದೆ. ಅದೇನೆಂದರೆ, ‘ಅಧಿಕಾರಕ್ಕೆ ಬರುವ ತನಕ ಬೇಕಿದ್ದ ಕಾರ್ಯಕರ್ತ.

ಅಧಿಕಾರಕ್ಕೆ ಬಂದ ಬಳಿಕ ಬೇಡವಾಗಿದ್ದಾನೆ’ ಎನ್ನುವುದು. ಶಿವಸೇನೆಯ ಇಂದಿನ ಸಮಸ್ಯೆಯ ಬಗ್ಗೆ ಮಾತನಾಡುವ ಮೊದಲು, ಕರ್ನಾಟಕದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ವೇಳೆ ಜೆಡಿಎಸ್‌ನಲ್ಲಿ ಶುರುವಾದ ಆಂತರಿಕ ಬೇಗುದಿಯ ಬಗ್ಗೆ ನೋಡಬೇಕಿದೆ. ಕರ್ನಾಟಕದಲ್ಲಿ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕ ಲಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರದ ಗದ್ದುಗೆ ಏರುವುದಕ್ಕೆ ಬೇಕಾದ ಬಹುಮತವಿರಲಿಲ್ಲ. ಇದನ್ನು ಬಳಸಿಕೊಂಡ ಕಾಂಗ್ರೆಸ್, ನಮ್ಮ ಪಕ್ಷ ಅಧಿಕಾರಕ್ಕೆ ಬಾರದಿದ್ದರೂ ಪರವಾಗಿಲ್ಲ ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವ ಏಕೈಕ ಕಾರಣಕ್ಕೆ,37 ಜನರಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ಸಮ್ಮಿಶ್ರ ಸರಕಾರವನ್ನು ರಚಿಸಿತು.

ಹೀಗೆ ಅಧಿಕಾರದಿಂದ ಬಿಜೆಪಿಯನ್ನು ಕಾಂಗ್ರೆಸ್ ದೂರವಿಟ್ಟು, ಸರಕಾರವನ್ನು ರಚಿಸಿದರೂ, ಮುಖ್ಯಮಂತ್ರಿ ಸ್ಥಾನದಲ್ಲಿ ಕುಮಾರಸ್ವಾಮಿ ಅವರನ್ನು ಕೂರಿಸಿದ್ದಕ್ಕೆ ಒಂದು ರೀತಿಯ ಅಸಮಾಧಾನವಿದ್ದೇ ಇತ್ತು. ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ, ‘ತಮಗೆ ಬೇಕಾದದ್ದು ಮಾತ್ರ ಮಾಡಿಸಿಕೊಳ್ಳುವ ಮನಸ್ಥಿತಿಗೆ ಕಾಂಗ್ರೆಸ್ ಬಂದಿತ್ತು’. ಕುಮಾರಸ್ವಾಮಿ ಅವರು ನೇರವಾಗಿ ಏನು ಹೇಳದಿದರೂ, ಕಾಂಗ್ರೆಸ್ ತಾಳಕ್ಕೆ ಕುಣಿಯುವ ಪರಿಸ್ಥಿತಿಯಲ್ಲಿಯೇ ಇದ್ದರು. ಆದರೆ ಈ ರೀತಿ ತಾಳಕ್ಕೆ ಕುಣಿಯುವ ಉತ್ಸಾಹದಲ್ಲಿ ಅವರು ಜೆಡಿಎಸ್ ಕಾರ್ಯಕರ್ತರನ್ನೇ ಮರೆತರು. ಕಾರ್ಯಕರ್ತರನ್ನು ಮರೆಯುವುದು ಹೋಗಲಿ, ಜೆಡಿಎಸ್ ಶಾಸಕರಿಗೂ ಸಿಗದ ಪರಿಸ್ಥಿತಿಗೆ ಬಂದರು. ಜೆಡಿಎಸ್ ಸಿಎಂ ಆಗಿದ್ದರೂ, ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರಿಗೆ ಆಗುತ್ತಿದ್ದ ಕೆಲಸಗಳು ಜೆಡಿಎಸ್ ನವರಿಗೆ ಆಗುತ್ತಿರಲಿಲ್ಲ. ಇದನ್ನು ಪ್ರಶ್ನಿಸಿದರೆ, ಋಣ ಸಂದಾಯ ಮಾಡುವ ಅಗತ್ಯವಿದೆ ಎನ್ನುವ ಮಾತನ್ನು ಹೇಳುತ್ತಿದ್ದರು.

ಅಧಿಕಾರಕ್ಕೆ ಬರುವ ಮೊದಲು ಕುಮಾರಸ್ವಾಮಿ ಅವರು ಕಾರ್ಯಕರ್ತರು, ನಾಯಕರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಮಾಡುತ್ತಿದ್ದ ಕಾರ್ಯವೈಖರಿಯನ್ನು ಮರೆತು, ಕೇವಲ ಕಾಂಗ್ರೆಸ್ ಅನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಕುಮಾರಸ್ವಾಮಿ ಅವರ ಈ ನಡೆ, ಜೆಡಿಎಸ್‌ಅನ್ನೇ ಬುಡಮೇಲು ಮಾಡಿತ್ತು ಎಂದರೆ ತಪ್ಪಾಗುವುದಿಲ್ಲ. ಅದರ ಫಲವಾಗಿಯೇ, ಲೋಕಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದು.

ಮೊದಲೇ ಹೇಳಿದಂತೆ ಶಿವಸೇನೆಯ ಪರಿಸ್ಥಿತಿಗೂ, ರಾಜ್ಯದಲ್ಲಿ ಮೂರು ವರ್ಷದ ಹಿಂದೆ ಜೆಡಿಎಸ್ ಇದ್ದ ಪರಿಸ್ಥಿತಿಗೂ ಹೆಚ್ಚು ಭಿನ್ನವೇನಲ್ಲ. ಸುಮಾರು ಎರಡು ವರ್ಷದ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆ ಯಲ್ಲಿಯೂ, ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲಿಲ್ಲ. ಈ ಸಮಯದಲ್ಲಿ, ಬಿಜೆಪಿ ಅತಿದೊಡ್ಡ ಪಕ್ಷವಾಗಿ, ಶಿವಸೇನೆ ಹಾಗೂ ಇನ್ನಿತ್ತರೆ ಪಕ್ಷೇತರರೊಂದಿಗೆ ಸರಕಾರವನ್ನು
ರಚಿಸಬಹುದು ಎಂದೇ ಹೇಳಲಾಗಿತ್ತು. ಆದರೆ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ ಬಿಟ್ಟುಕೊಡಲು, ಬಿಜೆಪಿ ಸಿದ್ಧವಿರಲಿಲ್ಲ. ಇದನ್ನೇ ದಾಳವಾಗಿಟ್ಟುಕೊಂಡು, ಕಾಂಗ್ರೆಸ್ ಮಹಾರಾಷ್ಟ್ರದಲ್ಲಿಯೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ‘ಮಹಾ ವಿಕಾಸ್ ಅಘಾಡಿ‘ ಹೆಸರಲ್ಲಿ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆಯ ಮೈತ್ರಿ ಮಾಡಿ ಕೊಂಡು, ಬಹುಮತ ಸಾಬೀತುಪಡಿಸಿ, ಶಿವಸೇನೆಯ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಿತ್ತು.

ಶಿವಸೇನೆಯೂ ಅಚ್ಚರಿ ಎಂಬಂತೆ, ತನ್ನ ದಶಕಗಳ ಸಿದ್ಧಾಂತ ವನ್ನೆಲ್ಲ ಬದಿಗಿಟ್ಟು, ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಕೈಜೋಡಿ ಸಿತ್ತು. ಹಾಗೇ ನೋಡಿದರೆ, ಚುನಾವಣಾ ಸಮಯದಲ್ಲಿ ಶಿವಸೇನೆಯ ಪ್ರಮುಖ ಪ್ರತಿಪಕ್ಷವಾಗಿ ಎನ್ ಸಿಪಿಯಿತ್ತೇ ಹೊರತು, ಬಿಜೆಪಿಯಲ್ಲ. ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಂದ ಕಾಂಗ್ರೆಸ್ -ಎನ್‌ಸಿಪಿಯೊಂದಿಗೆ ಠಾಕ್ರೆ ಕೈಜೋಡಿಸಿದರೂ, ಈ ಮೂರು ಪಕ್ಷದ ಕಾರ್ಯಕರ್ತರಲ್ಲಿ ಮಾತ್ರ ಈ ಬಗ್ಗೆ ಈ ಹಂತದವರೆಗೆ ಯಾವುದೇ ಸಮನ್ವಯತೆ ಕಾಣಿಸಲೇ ಇಲ್ಲ.

ಏಕೆಂದರೆ ಶಿವಸೇನೆ, ಹಿಂದುತ್ವದ ಆಧಾರದಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದರೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಇದನ್ನೇ ವಿರೋಧಿ
ಸಿಕೊಂಡು ಹೋರಾಡಿದೆ. ಈ ಹಿಂದೆ ನಡೆದಿರುವ ಹೋರಾಟಗಳನ್ನು ಪಕ್ಷದ ನಾಯಕರು ಮರೆತು ಒಂದಾದರೂ, ಕಾರ್ಯಕರ್ತರನ್ನು ಹಾಗೇ ಮಾಡಲು ಸಾಧ್ಯವಿಲ್ಲ. ಹಾಗೇ ನೋಡಿದರೆ, ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿ ರಲಿಲ್ಲ. ಚುನಾವಣಾ ಸಮಯ ದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಬಡಿದಾಡಿಕೊಂಡಿದ್ದರು. ಆದರೆ ಸಮ್ಮಿಶ್ರ ಸರಕಾರದ ನೆಪದಲ್ಲಿ ಒಂದಾಗಿ ಎಂದರೆ, ಗ್ರೌಂಡ್ ಮಟ್ಟದಲ್ಲಿ ಅದು ಸಾಧ್ಯವೇ ಆಗಲಿಲ್ಲ.

ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮೇಲಿರುವ ಮತ್ತೊಂದು ಗಂಭೀರ ಆರೋಪವೆಂದರೆ, ‘ಸರಕಾರ ರಚನೆಯಾದ ಬಳಿಕ ಶಿವಸೇನೆಯ ಶಾಸಕರನ್ನು ಹತ್ತಿರವೇ ಬಿಟ್ಟುಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಶಾಸಕರು ಕೇಳಿದ ಒಂದು ದಿನದಲ್ಲಿ ಸಮಯವನ್ನು ಕೊಟ್ಟರೆ, ಶಿವಸೇನೆ ಶಾಸಕರಿಗೆ ತಿಂಗಳುಗಟ್ಟಲೇ ಕಾಯಿಸುತ್ತಿದ್ದರು’. ಕೆಲಸದ ವಿಷಯದಲ್ಲಿಯೂ ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳ ಪ್ರಣಾಳಿಕೆಯ ವಿಷಯಗಳನ್ನು ಜಾರಿಗೊಳಿಸುವುದರಲ್ಲಿಯೇ ಸರಕಾರ ಮಗ್ನವಾಗಿತ್ತೇ ಹೊರತು, ಶಿವಸೇನೆಯ ಆಶೋತ್ತರಗಳನ್ನು
ಈಡೇರಿಸುವಲ್ಲಿ ಗಮನವೇ ಹರಿಸಲಿಲ್ಲ ಎನ್ನುವ ಆರೋಪವಿದೆ.

ಕರ್ನಾಟಕದಲ್ಲಿದ್ದ ಜೆಡಿಎಸ್ ಸರಕಾರವೂ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗೆ ಹೆಚ್ಚು ಮಹತ್ವ ನೀಡಿತ್ತೇ ಹೊರತು, ತಮ್ಮ ಪಕ್ಷದ ಪ್ರಣಾಳಿಕೆ ಯ ಬಗ್ಗೆ ಹೆಚ್ಚು ಗಮನಹರಿಸಲಿಲ್ಲ ಎನ್ನುವ ಆರೋಪಿವಿತ್ತು. ಇದೇ ಕಾರಣಕ್ಕಾಗಿಯೇ ಎರಡೂ ಪಕ್ಷದಲ್ಲಿ ಸಮಸ್ಯೆಯಾಗಿದ್ದು ಇದೀಗ ಸ್ಪಷ್ಟವಾಗುತ್ತಿದೆ. ಹಾಗೇ ನೋಡಿದರೆ, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟದ ಸರಕಾರ ಇಷ್ಟು ದಿನ ನಡೆದಿದ್ದೇ ಹೆಚ್ಚು ಎನ್ನುವ ಮಾತುಗಳು ಅನೇಕರಲ್ಲಿದೆ. ಏಕೆಂದರೆ, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಜಾತ್ಯತೀತ ಸಿದ್ಧಾಂತದ ಮೇಲೆ ರಾಜಕೀಯ ಮಾಡಿಕೊಂಡು ಬಂದಿವೆ.

ಆದರೆ ಮಹಾರಾಷ್ಟ್ರದಲ್ಲಿ ಶಿವಸೇನೆಯ ಸಿದ್ಧಾಂತಕ್ಕೂ, ಎನ್‌ಸಿಪಿ ಯ ಸಿದ್ಧಾಂತಕ್ಕೂ ಸಂಬಂಧವೇ ಇಲ್ಲ. ಪ್ರತಿಹಂತದಲ್ಲಿಯೂ
ಶಿವಸೇನೆಯ ಮೂಲ ಆಶಯಕ್ಕೆ ವಿರುದ್ಧವಾಗಿಯೇ ಠಾಕ್ರೆ ಸರಕಾರ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದರು.
ಪ್ರಾದೇಶಿಕ ಪಕ್ಷಗಳು ಈ ರೀತಿ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ರಾಷ್ಟ್ರೀಯ ಪಕ್ಷಗಳೊಂದಿಗೆ ಯಾವೆಲ್ಲ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲಾಗುವುದೋ, ಅಲ್ಲೆಲ್ಲ ಈ ರೀತಿಯ ಸಮಸ್ಯೆ ಎದುರಾಗುವುದು ಸಹಜ.

ಏಕೆಂದರೆ, ರಾಷ್ಟ್ರೀಯ ಪಕ್ಷಗಳ ಯೋಚನಾ ಲಹರಿಗೂ, ಪ್ರಾದೇಶಿಕ ಪಕ್ಷಗಳ ಯೋಚನಾ ಲಹರಿಗೂ ಭಾರಿ ವ್ಯತ್ಯಾಸವಿರುತ್ತದೆ. ಪ್ರಾದೇಶಿಕ ಪಕ್ಷಗಳು, ಅಧಿಕಾರದ ಗದ್ದುಗೆ ಎನ್ನುವ ಏಕೈಕ ಕಾರಣಕ್ಕೆ ರಾಷ್ಟ್ರೀಯ ಪಕ್ಷಗಳ ಎಲ್ಲ ಮಾತಿಗೆ ‘ಒಪ್ಪಿಕೊಂಡರೆ’, ಮುಂದಿನ ಚುನಾವಣೆಯ ವೇಳೆಗೆ ಸಂಘಟನೆಯನ್ನೇ ಕಳೆದುಕೊಳ್ಳಬೇಕಾದ ಸಮಸ್ಯೆ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವುದರಿಂದ, ರಾಜ್ಯದ ಅಭಿವೃದ್ಧಿ ಸಾಧ್ಯ ಎನ್ನುವುದು ಸತ್ಯ. ಆದರೆ ಸ್ವಂತ ಕಾಲಿನ ಮೇಲೆ ಅಧಿಕಾರದ ಗದ್ದುಗೆ ಹಿಡಿದರೆ ಮಾತ್ರ ಇದು ಸಾಧ್ಯ.

ಒಂದು ವೇಳೆ, ಇನ್ನೊಬ್ಬರನ್ನು ಅಧಿಕಾರದಿಂದ ದೂರ ಇರಿಸಲು ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಅವರ ತಾಳಕ್ಕೆ ಕುಣಿಯುವ ಪರಿಸ್ಥಿತಿ ತಂದುಕೊಂಡರೆ, ಅಧಿಕಾರ ಅನುಭವಿಸುವತ್ತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಇರಬಹುದು, ಕರ್ನಾಟಕದಲ್ಲಿ ಜೆಡಿಎಸ್ ಇರಬಹುದು, ಪ್ರಾದೇಶಿಕ ಅಸ್ಮಿತೆ, ತಮ್ಮದೇಯಾದ ಸೈದ್ಧಾಂತಿಕ ಆಧಾರದ ಮೇಲೆಯೇ ಇಲ್ಲಿಯವರೆಗೆ ನಡೆದುಕೊಂಡು ಬಂದಿವೆ.

ಆದರೆ ಅಧಿಕಾರಕ್ಕೆ ಬಂದ ಕೂಡಲೇ, ಕಾರ್ಯಕರ್ತರನ್ನು, ಶಾಸಕರನ್ನು ಮರೆತು, ಅಧಿಕಾರದ ಗದ್ದುಗೆ ಏರಲು ಕೈಜೋಡಿಸಿದ ಪಕ್ಷ ಹಾಗೂ ಆ ಪಕ್ಷದ ನಾಯಕರನ್ನು ಒಲೈಸುವುದಕ್ಕಾಗಿ, ಸ್ವಪಕ್ಷದವರನ್ನು ದೂರವಿಡುವುದು ಎಂದಿದ್ದರೂ ಪಕ್ಷದ ಸಂಘಟನೆಗೆ ಮಾರಕವೆ. ಈಗಾಗಲೇ ಜೆಡಿಎಸ್ ಒಮ್ಮೆ ಇದೇ ವಿಷಯದಲ್ಲಿ ಕೈಸುಟ್ಟುಕೊಂಡಿದ್ದು, ಮಹಾರಾಷ್ಟ್ರದಲ್ಲಿಯೂ ಇದೇ ರೀತಿಯ ಬೆಳವಣಿಗೆ ನಡೆ ಯುತ್ತಿದೆ. ಇನ್ನಾದರೂ, ಪಕ್ಷದ ಕಾರ್ಯಕರ್ತರು, ಸಿದ್ಧಾಂತದ ವಿಷಯದಲ್ಲಿ ಮೈಮರೆಯದಂತೆ ಎಚ್ಚರವಹಿಸುವುದು ಅತ್ಯಗತ್ಯ.