Friday, 13th December 2024

ಭ್ರಷ್ಟರನ್ನು ತಿರಸ್ಕರಿಸಿ, ದೇಶ ರಕ್ಷಿಸಲು ಮತ ಹಾಕಿ

ಸ್ವಾಸ್ಥ್ಯ ಸಂಪದ

Yoganna55@gmail.com

ಕರ್ನಾಟಕ ವಿಧಾನಸಭಾ ಚುನಾವಣೆ ನಾಳೆ (ಮೇ 10) ನಡೆಯಲಿದ್ದು, ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಗೊಳಿಸಿವೆ. ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ ಉಚಿತ ಭರವಸೆಗಳೇ ತುಂಬಿಕೊಂಡಿದ್ದು, ರಾಜ್ಯವನ್ನು ಆರ್ಥಿಕವಾಗಿ ಸುಭದ್ರಗೊಳಿಸುವ, ಜನಸಾಮಾನ್ಯರನ್ನು ಸ್ವಾಭಿಮಾನಿಗಳನ್ನಾಗಿಸುವ, ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವ, ಜನಸಾಮಾನ್ಯರ ಮೇಲೆ ತೆರಿಗೆ ಹೊರಿಸುವುದಿಲ್ಲವೆಂಬ ಮತ್ತು ಪರಿಸರದ ಸಂಪತ್ತನ್ನು ರಕ್ಷಿಸುತ್ತೇವೆಂಬ ಮತ್ತು ಇವೆಲ್ಲವುಗಳನ್ನು ಸಾಧಿಸಲು ಅತ್ಯವಶ್ಯಕವಾದ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತವನ್ನು ನೀಡುತ್ತೇವೆಂಬ ಭರವಸೆ ಗಳನ್ನು ಯಾವ ಪಕ್ಷವೂ ನೀಡದಿರುವುದು ರಾಜಕೀಯ ಪಕ್ಷಗಳ ಮೌಲ್ಯಗಳ ಅಧಃಪತನಕ್ಕೆ ಹಿಡಿದ ಕೈಗನ್ನಡಿ.

ಸಚ್ಚಾರಿತ್ರ್ಯ, ಭ್ರಷ್ಟಾಚಾರ ರಹಿತ, ದಕ್ಷ, ಪಾರದರ್ಶಕ ಆಡಳಿತದಿಂದ ಮಾತ್ರ ಪ್ರಜಾಪ್ರಭುತ್ವ ಸದೃಢವಾಗುತ್ತದೆ ಎಂಬುದು ನಿರ್ವಿವಾದ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ವಿವಿಧ ಮಜಲುಗಳಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ, ಪ್ರಾಕೃತಿಕ ಇವೆಲ್ಲ ವಿಭಿನ್ನ ಕ್ಷೇತ್ರಗಳ ಪೋಷಣೆ ಮತ್ತು ನಿರ್ವಹಣೆ ಚುನಾಯಿತ ಆಡಳಿತ ಹಿಡಿದ ಸರ್ಕಾರದ್ದಾಗಿದ್ದು, ಇವೆಲ್ಲವುಗಳನ್ನು ಸಕಾರಾತ್ಮಕವಾಗಿ ನಿರ್ವಹಿಸುವ ಜನಪ್ರತಿ ನಿಧಿಗಳಿರುವ ಆಡಳಿತ ಅತ್ಯವಶ್ಯಕ.

ಸರ್ವ ಕ್ಷೇತ್ರಗಳನ್ನು ನಿಯಂತ್ರಿಸುವ ಚುನಾಯಿತ ಆಡಳಿತ ವ್ಯವಸ್ಥೆಯೇ ದುರ್ಬಲವಾದಲ್ಲಿ ಮಾನವ ಕುಲದಲ್ಲಿ ಅಶಾಂತಿ
ಮತ್ತು ಪ್ರಕೃತಿ ನಿಯಮಗಳಿಗೆ ಧಕ್ಕೆಯಾಗಿ ಇಡೀ ವ್ಯವಸ್ಥೆಯೇ ಕುಸಿಯುತ್ತದೆ. ರಾಜಕೀಯ ಕ್ಷೇತ್ರ ವೈಯಕ್ತಿಕ ಆಸೆ ಆಕಾಂಕ್ಷೆಗಳ ತ್ಯಾಗದ ಕ್ಷೇತ್ರ ದೇಶಪ್ರೇಮ, ನಿಸ್ವಾರ್ಥ ಸೇವೆ, ಸರಳ ಬದುಕು, ಮಾನವ ಪ್ರೀತಿ, ರಾಜಕೀಯ ಕ್ಷೇತ್ರದವರ ಬದುಕಿನ ಮೂಲಮಂತ್ರ ಗಳಾಗಬೇಕು. ಸ್ವಾತಂತ್ರ್ಯ ಸಂಗ್ರಾಮ ಮತ್ತು ತದನಂತರ ನಾಲ್ಕೈದು ದಶಕಗಳ ಕಾಲ ಈ ದೇಶವನ್ನಾಳಿದ ರಾಜಕಾರಣಿಗಳಲ್ಲಿ ಈ ಎಲ್ಲಾ ಗುಣಗಳು ಮೈಗೂಡಿಕೊಂಡಿದ್ದರ ಫಲವಾಗಿ ಪ್ರಾರಂಭದಲ್ಲಿಯೇ ನಿಸ್ವಾರ್ಥ ಸೇವೆಯ ಆಡಳಿತಕ್ಕೆ ಪೂರ್ವಿಕರು ಭದ್ರವಾದ
ಬುನಾದಿಯನ್ನು ಹಾಕಿಹೋಗಿದ್ದಾರೆ.

ದೇಶಕ್ಕಾಗಿ ಆಸ್ತಿಪಾಸ್ತಿಗಳನ್ನು, ವೈಯಕ್ತಿಕ ಬದುಕನ್ನು ತ್ಯಾಗಮಾಡಿ ದೇಶ ಉಳಿಸಿದ ಪುಣ್ಯವಂತರಿಗೆ ಜನ್ಮ ನೀಡಿದ ತಪೋಭೂಮಿ ಯಿದು. ದೇಶದಲ್ಲಿ ಅದರಲ್ಲೂ ರಾಜ್ಯದಲ್ಲಿ ಇಂದು ಜರಗುತ್ತಿರುವ ಭ್ರಷ್ಟಾಚಾರ, ಜಾತಿವಾದ, ಸ್ವಜನ ಪಕ್ಷಪಾತಗಳು ಶರವೇಗ ದಲ್ಲಿ ಹೆಚ್ಚಾಗುತ್ತಿರುವುದನ್ನು ನೋಡಿ ಗತಿಸಿದ ಹುತಾತ್ಮಗಳು ಶೋಕಿಸುತ್ತಿರಬೇಕು. ಧರ್ಮಾತೀತವಾಗಿ ಅಧಿಕಾರ ನಡೆಸುತ್ತೇ ನೆಂದು ಅಧಿಕಾರ ಸ್ವೀಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರೇ ಸಾರ್ವಜನಿಕವಾಗಿ ಬಜರಂಗ ಬಲಿಕಿ ಜೈ ಎಂದು ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿದ್ದು ದೇಶದ ರಾಜಕೀಯ ವ್ಯವಸ್ಥೆಯ ಅಧಃಪತನಕ್ಕೆ ಹಿಡಿದ ಕೈಗನ್ನಡಿ.

ಅಧಿಕಾರಕ್ಕಾಗಿ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ಬಲಿಕೊಡುವ ಪ್ರಸಂಗವಲ್ಲವೇ? ಎಲ್ಲ ರಾಜಕೀಯ ಪಕ್ಷಗಳು ಹಣಕ್ಕಾಗಿ ಅಧಿಕಾರ, ಅಧಿಕಾರಕ್ಕಾಗಿ ಹಣ ಎಂಬ ವಿಷವರ್ತುಲಕ್ಕೆ ಪ್ರಜ್ಞಾಪೂರ್ವಕವಾಗಿ ಸಿಲುಕಿಕೊಂಡಿರುವುದು ಮತದಾರನೂ ಸಹ ಇದಕ್ಕೆ ಸಮ್ಮತಿ ನೀಡಿ ಸಹಕರಿಸುತ್ತಿರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಯ ಕುಸಿತದ ಮುನ್ಸೂಚನೆ. ಭ್ರಷ್ಟಾಚಾರವನ್ನು ಇಂದು ರಾಜಕೀಯ ಪಕ್ಷಗಳಾಗಲಿ ಮತ್ತು ಜನಸಾಮಾನ್ಯರಾಗಲಿ ಚರ್ಚೆಯ ವಿಷಯವೇ ಅಲ್ಲ ಎಂಬಂತೆ ಭಾವಿಸಿ ಮೌನವಾಗಿರುವುದು ಆತಂಕಕಾರಿ. ಭ್ರಷ್ಟಾಚಾರ ಇಂದು ವ್ಯವಸ್ಥೆಯ ಅವಿಭಾಜ್ಯ ಅಂಗ ಎಂಬಂತಾಗಿದೆ.

ರಾಜಕಾರಣಿಗಳು ತಮ್ಮ ಅಧಿಕಾರ ಉಪಯೋಗಿಸಿಕೊಂಡು ಹಣ ಮಾಡುವುದರಿಂದ ಅದನ್ನು ನಮಗೂ ಹಂಚಲಿ ಎಂಬ
ಅಂಬೋಣ ಮತದಾರರದ್ದು. ಚುನಾವಣೆಯಲ್ಲಿ ಮತ ಹಾಕಲು ಮತದಾರರು ಹಣ, ಹೆಂಡ, ಗಿಫ್ಟ್ ಕೇಳುತ್ತಾರೆ, ಅದಕ್ಕಾಗಿ ನಾವು ಭ್ರಷ್ಟಾಚಾರ ಮಾಡುವುದು ಅನಿವಾರ್ಯವೆಂಬುದು ರಾಜಕಾರಣಿಗಳ ಸಮಜಾಯಿಷಿ. ಮತದಾರರೇ ಅಭ್ಯರ್ಥಿಗಳಿಗೆ ವಂತಿಕೆ ನೀಡಿ ತಮ್ಮ ಖರ್ಚುಗಳಿಂದಲೇ ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಿದ್ದ ಕಾಲವನ್ನು ಇವರು ಮರೆತಂತಿದೆ. ರಾಜಕಿಯ
ಕ್ಷೇತ್ರಕ್ಕೆ ವ್ಯಾಪಾರಸ್ಥರು ಕಳೆದ ೨೫ವರ್ಷಗಳಿಂದ ಕಾಲಿಟ್ಟ ನಂತರ ಇದು ವಾಣಿಜ್ಯೋದ್ಯಮ ಕ್ಷೇತ್ರವಾಗಿ ರಾಜಕೀಯ
ಭ್ರಷ್ಟಾಚಾರ ಅತಿಯಾಗಿ ಸುಲಭ ಮಾರ್ಗದಲ್ಲಿ ಹಣ ಗಳಿಕೆಯಾದ್ದರಿಂದ ಮತದಾರರನ್ನು ಭ್ರಷ್ಟಗೊಳಿಸಿ ಅಧಿಕಾರ ಹಿಡಿಯುವ ಪರಂಪರೆ ಚಾಲ್ತಿಗೆ ಬಂತು.

ಕರ್ನಾಟಕದ ಮೊಟ್ಟ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ದೇವೇಗೌಡರು ಕೇಂದ್ರದಲ್ಲಿನ ಸಮ್ಮಿಶ್ರ ಸರ್ಕಾರವನ್ನು ಪೂರ್ಣಾವಧಿಗೆ ಕೊಂಡೊಯ್ಯಲು ವಿಫಲರಾದರೂ, ೧೧ ತಿಂಗಳ ಆಡಳಿತದಲ್ಲಿ ಅವರು ಕೈಗೊಂಡ ರೈತರ ರಸಗೊಬ್ಬರ ಬೆಲೆ ನಿಯಂತ್ರಣ, ಕರ್ನಾಟಕದ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸಲು ಅನುಮತಿ ನೀಡಿದ್ದು, ಹಿಂದಿನ ಪ್ರಧಾನಿಗಳು ಕಡೆಗಣಿಸಿದ್ದ ಕಾಶ್ಮೀರಕ್ಕೆ ಭೇಟಿ ನೀಡಿ ಚುನಾವಣೆ ನಡೆಸಲು ಕಾರ್ಯೋನ್ಮುಖರಾಗಿದ್ದು, ಬೆಂಗಳೂರಿನ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಿದ್ದು, ದೆಹಲಿಗೆ ಮೆಟ್ರೋ ಚಾಲನೆ ನೀಡಿದ್ದು, ನೆನೆಗುದಿಗೆ ಬಿದ್ದಿದ್ದ ಭಾರತ ಮತ್ತು ಬಾಂಗ್ಲಾ ನಡುವಿನ ನದಿ ನೀರು ಹಂಚಿಕೆಯನ್ನು ಬಗೆಹರಿಸಿದ್ದು, ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡಿದ್ದು ಇತಿಹಾಸದ ಪುಟಗಳಲ್ಲಿ ಉಳಿಯುವ ಅವಿಸ್ಮರಣೀಯ ಘಟನೆಗಳಾಗಿವೆ.

ದೇವೇಗೌಡರು ಪ್ರಧಾನಿಯಾಗಿ ಹೋದ ನಂತರ ಜೆ. ಎಚ್. ಪಟೇಲ್ ಮುಖ್ಯಮಂತ್ರಿಯಾದರು. ದೇವೇಗೌಡರು ಮಾರ್ಗದರ್ಶಕ ಸ್ಥಾನದಲ್ಲಿದ್ದುಕೊಂಡು ಎಲ್ಲರನ್ನೂ ಒಗ್ಗಟ್ಟಾಗಿ, ಸೌಹಾರ್ದಯುತವಾಗಿ ಬೆಸುಗೆ ಹಾಕಿ ನಾಯಕತ್ವವನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಸಿದ್ದಲ್ಲಿ ದೇಶದ ಮತ್ತು ಕರ್ನಾಟಕದ ಚರಿತ್ರೆ ಹೊಸ ಆಯಾಮ ಪಡೆಯುವ ಎಲ್ಲಾ ಸಾಧ್ಯತೆಗಳು ಇದ್ದವು.

ದೇವೇಗೌಡರು ತಳಮಟ್ಟದಿಂದ ಬಂದ, ದೀರ್ಘಕಾಲ ಹೋರಾಟದ ಅನುಭವವಿರುವ, ಗ್ರಾಮೀಣ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ, ಜನಸಾಮಾನ್ಯರ ನಡುವೆ ಬೆಳೆದು ಬಂದ, ಜನಸಾಮಾನ್ಯರಿಗೆ ಸಿಗುವ, ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡು ಹಿಡಿಯಬಲ್ಲ ಅಪರೂಪದ ಜನ ನಾಯಕರಾಗಿದ್ದರು. ದುರ್ದೈವ ಪ್ರಧಾನಿಯಾದ ಮೇಲೆ ದೇವೇಗೌಡರಿಗೆ ಬೇರೆ ಯವರೊಂದಿಗೆ ವಿರಸವೇ ಅಧಿಕವಾಯಿತು. ಜೆ.ಎಚ್. ಪಟೇಲ್ ಸರ್ಕಾರವೂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಸ್ಥಿರ ಗೊಂಡು, ದೇವೇಗೌಡರ ನಾಯಕ ತ್ವ ಮತ್ತಷ್ಟು ದುರ್ಬಲವಾಯಿತು. ಕುಟುಂಬದವರು ರಾಜಕೀಯಕ್ಕೆ ಬಂದ ಮೇಲಂತೂ ಎಲ್ಲ ನಾಯಕರು ದೇವೇಗೌಡ ರಿಂದ ದೂರವಾದರು. ಕುಟುಂಬ ರಾಜಕಾರಣದ ಹಣೆಪಟ್ಟಿ ದೇವೇಗೌಡರಿಗೆ ಅಂಟಿಕೊಂಡಿತು. ಅರಳಬೇಕಾಗಿದ್ದ ಗ್ರಾಮೀಣ ನಾಯಕತ್ವ ಸೊರಗುತ್ತಿರುವುದು ವಿಷಾದನೀಯ.

ಜನತಾದಳದ ವಿಭಜನೆ, ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ಪಾಂಚಜನ್ಯ ಮೊಳಗಿಸಿದ ಎಸ್.ಎಂ. ಕೃಷ್ಣ ಅವರ ನೇತೃತ್ವದಿಂದಾಗಿ
1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕೃಷ್ಣಾ ಅವರ ಸರ್ಕಾರ ಅಧಿಕಾರಕ್ಕೆ ಬಂತು. ಭೂಮಿ ಯೋಜನೆ ಮೂಲಕ ರೈತರ ಭೂ ದಾಖಲಾತಿಗಳನ್ನು ಕಂಪ್ಯೂಟರೀಕರಿಸಿ ರೈತರಿಗೆ ಭೂ ದಾಖಲಾತಿಗಳು ಸುಲಭವಾಗಿ ಸಿಗುವಂತಾಗಿಸಿದ್ದು, ಬೆಂಗಳೂರನ್ನು ಐಟಿ ಬಿಟಿ ನಗರವನ್ನಾಗಿಸಿ ರಾಜ್ಯದ ಬಜೆಟ್‌ನ ಶೇ. ೫೦ ರಷ್ಟು ಆದಾಯವನ್ನು ಬೆಂಗಳೂರಿ ನಿಂದಲೇ ಬರುವಂತಾಗಲು ಬುನಾದಿ ಹಾಕಿದ್ದು, ಸಹಕಾರ ಸಚಿವರಾಗಿದ್ದ ವಿಶ್ವನಾಥ್ ಅವರ ಸಲಹೆ ಮೇರೆಗೆ ಬಡವರಿಗೆ ಯಶಸ್ವಿನಿ ಯೋಜನೆ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ವಿಶಿಷ್ಟ ಚಿಕಿತ್ಸೆಗಳು ಉಚಿತವಾಗಿ ಲಭಿಸುವಂತಾಗಿಸಿದ್ದು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಮೂಲಕ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಿದ್ದಲ್ಲದೆ ಅವರಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಿದ್ದು, ಸ್ತ್ರೀ ಶಕ್ತಿ ಯೋಜನೆಗಳ ಮೂಲಕ ಮಹಿಳೆಯರಲ್ಲಿ ಆರ್ಥಿಕ ಮತ್ತು ಸಾಮಾಜಿಕ ನಾಯಕತ್ವ ಬೆಳೆಯಲು ನಾಂದಿ ಹಾಕಿದ್ದು, ಅಬಕಾರಿ ಇಲಾಖೆಯಲ್ಲಿ ಸೆಕೆಂಡ್ಸ್ ಹಾವಳಿ ತಡೆಗಟ್ಟಿ, ರಾಜ್ಯದ ಬೊಕ್ಕಸ ತುಂಬಲು ಕಾನೂನು ರಚಿಸಿದ್ದು, ವರನಟ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಕಪಿಮುಷ್ಟಿಯಿಂದ ಯಾವ ಹಾನಿಯೂ ಇಲ್ಲದೆ ಚಾಣಾಕ್ಷತನದಿಂದ ಬಿಡುಗಡೆಗೊಳಿಸಿದ್ದು, ಯಾವ ಹಗರಣಗಳೂ ಇಲ್ಲದೆ ಸ್ವಚ್ಛ ಆಡಳಿತ ನೀಡಿ ಆಡಳಿತ ವನ್ನು ಕಂಪ್ಯೂಟರೀಕರಣಗೊಳಿಸಿ ‘ಹೈಟೆಕ್ ಮುಖ್ಯಮಂತ್ರಿ’ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಕೃಷ್ಣ ಅವರ ಆಡಳಿತದಲ್ಲಿ ಗುರುತಿಸ ಬಹುದಾದ ಹೆಗ್ಗುರುತುಗಳು.

ಕೃಷ್ಣಾರವರು ಕಾಂಗ್ರೆಸ್ಸಿನಿಂದ ಸಂಸದರಾಗಿ, ಕೇಂದ್ರ ಸಚಿವರಾಗಿ, ವಿಧಾನಸಭಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಗಳಾಗಿ,
ಮುಖ್ಯಮಂತ್ರಿಗಳಾಗಿ, ರಾಜ್ಯಪಾಲರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಚ್ಚಾರಿತ್ರ್ಯವುಳ್ಳ ರಾಜಕಾರಣಿಯೆಂದು ಹೆಸರು ಪಡೆದಿದ್ದವರು ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರಗೊಂಡು, ರಾಜಕೀಯ ನಿವೃತ್ತಿ ಪಡೆದಿದ್ದು ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಲ್ಲವೇ? ಸತತ ತೀವ್ರ ಬರ, ಲೋಕಸಭಾ ಚುನಾವಣೆಯೊಂದಿಗೆ ಅವಧಿ ಮುನ್ನ ನಡೆದ ವಿಧಾನಸಭಾ ಚುನಾವಣೆಗಳಿಂದಾಗಿ ಶುದ್ಧ ಪರಿಣಾಮಕಾರಿ ಆಡಳಿತ ನೀಡಿದ್ದರೂ, ೨೦೦೪ರ ಚುನಾವಣೆಯಲ್ಲಿ ಎಸ್.ಎಂ. ಕೃಷ್ಣ ಅವರ ನೇತೃತ್ವದ ಸರ್ಕಾರ ಪುನರಾಯ್ಕೆಯಾಗದೆ ದೇವೇಗೌಡ ಮತ್ತು ಸಿದ್ದರಾಮಯ್ಯನವರ ಸಂಘಟಿತ ರಾಜಕೀಯ ನಾಯಕತ್ವ ಮತ್ತು ಬಲಶಾಲಿಯಾದ ಬಿಜೆಪಿಗಳಿಂದಾಗಿ ಯಾವ ಪಕ್ಷವೂ ಬಹುಮತ ಪಡೆಯದೆ ಕಾಂಗ್ರೆಸ್‌ನ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಜನತಾದಳ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಗಳಾದರು
(೨೦೦೪-೨೦೦೬). ಈ ಸರ್ಕಾರವೂ ಸಹ ದೀರ್ಘಕಾಲ ಉಳಿಯದೆ ಕುಮಾರಸ್ವಾಮಿ ಅವರ ನೇತೃತ್ವದ, ಬಿಜೆಪಿ-ಜನತಾ ದಳದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ ಬಿಜೆಪಿ ಬೆಳವಣಿಗೆಗೆ ನಾಂದಿಯಾಯಿತು.

ಕ್ರಿಯಾಶೀಲ ಆಡಳಿತ, ಗ್ರಾಮ ವಾಸ್ತವ್ಯ, ಜನತಾದರ್ಶನ, ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಇತ್ಯಾದಿ ಜನಪರ ಆಡಳಿತದಿಂದಾಗಿ ರಾಜ್ಯದ ಪ್ರಥಮ ಯುವಮುಖ್ಯಮಂತ್ರಿ ಎಂಬ ಖ್ಯಾತಿಗೆ ಕುಮಾರಸ್ವಾಮಿ ಪಾತ್ರರಾದರು. ಒಪ್ಪಂದದಂತೆ ೨೦ ತಿಂಗಳ ನಂತರ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಿದರೂ ಕುಮಾರಸ್ವಾಮಿಯವರು ಕೆಲವೇ ದಿನಗಳಲ್ಲಿ ಬೆಂಬಲವನ್ನು ವಾಪಸ್ ಪಡೆದ ಪರಿಣಾಮವಾಗಿ ಸರ್ಕಾರ ಅವಧಿಗೆ ಮುನ್ನ ಪತನವಾಯಿತು. ಜನಪರ ಆಡಳಿತ ನೀಡಿ ಅಪಾರ
ಜನಪ್ರಿಯ ಗಳಿಸಿದ್ದ ಕುಮಾರಸ್ವಾಮಿ ‘ವಚನ ಭ್ರಷ್ಟ’ನಾಗದೆ ಅಧಿಕಾರ ಹಸ್ತಾಂತರಿಸಿದ್ದಲ್ಲಿ ಕರ್ನಾಟಕದ ರಾಜಕೀಯ ಹೊಸ ಆಯಾಮವೊಂದನ್ನು ಪಡೆದುಕೊಳ್ಳುತ್ತಿತ್ತು.

ಯಡಿಯೂರಪ್ಪನವರ ಮೇಲಿನ ಅನುಕಂಪದಿಂದಾಗಿ ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ೧೦೦ಕ್ಕಿಂತ ಹೆಚ್ಚು ಸ್ಥಾನ ಗಳಿಸಿ ಅಽಕಾರಕ್ಕೆ ಬಂದು ಆಪರೇಷನ್ ಕಮಲ ಎಂಬ ಅನೈತಿಕ ಮಾರ್ಗದಲ್ಲಿ ಪಕ್ಷಾಂತರದಿಂದ ಸರ್ಕಾರ ಸ್ಥಿರವಾಯಿತಾದರೂ ಭ್ರಷ್ಟಾಚಾರ ಹಗರಣದಿಂದಾಗಿ ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡು ಮುಂದಿನ ಅವಽಗೆ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿ ಬಿಜೆಪಿಯೂ ಸಹ ಶಿಸ್ತು ಮತ್ತು ಮೌಲ್ಯಯುಕ್ತ ಪಕ್ಷವಲ್ಲ ಎಂಬ ಅಪಖ್ಯಾತಿಗೀಡಾಗಿ
೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು.

ಅನ್ನಭಾಗ್ಯ, ಶಾದಿಭಾಗ್ಯ ಮತ್ತಿತರ ಭಾಗ್ಯಗಳ ಯೋಜನೆ ಮತ್ತು ಡಿ.ಕೆ. ಶಿವಕುಮಾರ್ ಅವರ ಆಸಕ್ತಿಯಿಂದಾಗಿ ವಿದ್ಯುಚ್ಛಕ್ತಿ ಉತ್ಪಾದನೆಗೆ ಸೋಲಾರ್ ಪಾರ್ಕ್ ನಿರ್ಮಾಣ ಇವು ಈ ಸರ್ಕಾರದ ಸಾಧನೆಗಳಾದರೂ ಲಿಂಗಾಯತ ಧರ್ಮ ಒಡೆದರೆಂಬ ಅಪಖ್ಯಾತಿಗೀಡಾಗಿ ಪೂರ್ಣಾವಧಿಗೆ ಅಧಿಕಾರ ನೀಡಿದರೂ ಪುನರಾಯ್ಕೆಯಾಗಲಿಲ್ಲ.

೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗಳಿಸಿದ ಪಕ್ಷವಾದುದರಿಂದ ಮುಖ್ಯಮಂತ್ರಿ ಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತು ಮಾಡಲಾಗದೆ ೬ ದಿನಗಳಲ್ಲೇ ಪತನಗೊಂಡು, ಕುಮಾರಸ್ವಾಮಿ ನೇತೃತ್ವದ ಜನತಾದಳ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ (೨೦೧೮-೨೦೧೯) ಅಧಿಕಾರಕ್ಕೆ ಬಂದರೂ ಬಿಜೆಪಿಯ ೨ನೆಯ ಅನೈತಿಕ ಆಪರೇಷನ್ ಕಮಲದಿಂದಾಗಿ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದ ಸರ್ಕಾರ ಪುನಃ ಅಧಿಕಾರಕ್ಕೆ ಬಂತು (೨೦೧೯-೨೧). ಬಿಜೆಪಿಯ ಒಳಜಗಳದಿಂದಾಗಿ ಯಡಿಯೂರಪ್ಪನವರನ್ನು ಇಳಿಸಿ ಬಿಜೆಪಿ ಬಸವರಾಜ
ಬೊಮ್ಮಾಯಿಯವರು ಮುಖ್ಯಮಂತ್ರಿಯಾದರು (೨೦೨೧- ೨೩). ಮತ್ತೊಮ್ಮೆ ಬಿಜೆಪಿಯೂ ಸಹ ಶಿಸ್ತಿನ ಪಕ್ಷವಲ್ಲ ಎಂಬ
ಅಪಖ್ಯಾತಿಗೀಡಾಯಿತು.

ಪಿಎಸ್‌ಐ ಹಗರಣ, ಶೇ. ೪೦% ಕಮೀಷನ್ ಹಗರಣ ಇತ್ಯಾದಿ ಭ್ರಷ್ಟಾಚಾರದ ಆರೋಪಗಳನ್ನು ಬೊಮ್ಮಾಯಿ ಸರ್ಕಾರ ಎದುರಿಸುತ್ತಿದೆ. ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ರಾಜಕೀಯ ಭ್ರಷ್ಟಾಚಾರದ ವಿವಿಧ ಮಜಲುಗಳನ್ನು ಪ್ರಸ್ತಾಪಿಸಿ ಅದನ್ನು ನಿರ್ಮೂಲನ ಮಾಡದೆ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ಪ್ರತಿಪಾದಿಸಿದರೂ ಸಭಾಪತಿ ಕಾಗೇರಿ ಹೆಗ್ಗಡೆಯವರು ಮೆಚ್ಚುಗೆ ಸೂಚಿಸಿದರೇ ವಿನಃ ಇದನ್ನು ಗಂಭೀರವಾಗಿ ಚರ್ಚೆಗೆ ಕೈಗೆತ್ತಿಕೊಳ್ಳದೇ ಹೋದದ್ದು ವಿಷಾದನೀಯ.

ಕಳೆದ ೯ವರ್ಷಗಳಿಂದ ಪ್ರಧಾನಿಯಾಗಿ ಮೋದಿ ಅವರು ಕೇಂದ್ರದಲ್ಲಿ ಸುಭದ್ರ ಭ್ರಷ್ಟಾಚಾರರಹಿತ ಆಡಳಿತ ನೀಡಿ, ಕಾಶ್ಮೀರವನ್ನು ದೇಶದ ಅವಿಭಾಜ್ಯ ಅಂಗವನ್ನಾಗಿಸಿ ಜಾಗತಿಕ ಮನ್ನಣೆ ಪಡೆದಿರುವುದು ಹೆಮ್ಮೆಯಾದರೂ ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಇದನ್ನು ಹೇಳುವಂತಿಲ್ಲ. ೨ ಬಾರಿಯೂ ವಾಮಮಾರ್ಗದಿಂದ ಬಿಜೆಪಿ ಅಧಿಕಾರಕ್ಕೆ ಬಂದರೂ ಶುದ್ಧ, ಆದರ್ಶ ಆಡಳಿತ ನೀಡುವ ಎಲ್ಲ ಅವಕಾಶಗಳನ್ನು ಕಳೆದುಕೊಂಡು ಹಲವಾರು ಭ್ರಷ್ಟಾಚಾರಗಳ ಆರೋಪಗಳಿಗೆ ಗುರಿಯಾಗಿ ೨ ಅವಧಿಯಲ್ಲಿ ೫ ಬಾರಿ ಮುಖ್ಯಮಂತ್ರಿಗಳು ಬದಲಾಗಿ ಸುಭದ್ರ ಸರ್ಕಾರವನ್ನು ನೀಡುವಲ್ಲಿ ಬಿಜೆಪಿ ವಿಫಲವಾಯಿತು.

ಇವೆಲ್ಲ ಅವಘಡಗಳನ್ನು ಮೋದಿಯವರು ಏಕೆ ನಿಯಂತ್ರಿಸಲಿಲ್ಲ? ಬಿಜೆಪಿ ಸರ್ಕಾರದ ಮೇಲಿರುವ ಗಂಭೀರ ಆರೋಪಗಳ ಅರಿವಿರುವ ಮೋದಿಯವರು ರಾಜ್ಯ ಬಿಜೆಪಿ ಸರ್ಕಾರದ ಸಮರ್ಥನೆಗಿಳಿಯದೆ ಕಾಂಗ್ರೆಸ್, ಜೆಡಿಎಸ್ ಮೇಲೆ ಹರಿಹಾಯುತ್ತಿದ್ದಾ ರೆಯೇ? ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ನೀಡಿರುವ ಅವಕಾಶಗಳನ್ನು ಅವು ಸಮರ್ಥವಾಗಿ ಏಕೆ ಉಪಯೋಗಿಸಿಕೊಳ್ಳ ಲಿಲ್ಲ ಎಂಬ ಪ್ರಶ್ನೆಗಳು ಪ್ರಜ್ಞಾವಂತ ಮತದಾರರನ್ನು ಭ್ರಮ ನಿರಶನಗೊಳಿಸಿ, ಎಲ್ಲ ಪಕ್ಷಗಳೂ ಇಷ್ಟೇ ಎಂಬ ಭಾವ ಮೂಡಿ
ಮತದಾನದ ಬಗ್ಗೆಯೇ ನಿರಾಸಕ್ತಿ ಉಂಟಾಗಿದೆ.

ಸರ್ಕಾರದ ಭ್ರಷ್ಟಾಚಾರ ಕಪ್ಪು ಹಣದಿಂದಾಗುವುದರಿಂದ ಸರ್ಕಾರ ಖಜಾನೆಯ ಬಿಳಿ ಹಣ ಭ್ರಷ್ಟಾಚಾರದಿಂದ ಕಪ್ಪು ಹಣವಾಗಿ ಪರಿವರ್ತನೆ ಹೊಂದಿ ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕ. ಭ್ರಷ್ಟಾಚಾರ, ಜಾತಿ, ಕುಟುಂಬ ರಾಜಕಾರಣ ಮತ್ತು ಧಾರ್ಮಿಕ ವಿಷಯಗಳಿಗಿಂತಲೂ ಹೆಚ್ಚಾಗಿ ಪ್ರಜಾಪ್ರಭುತ್ವವನ್ನು ತಲ್ಲಣಗೊಳಿಸುವುದರಿಂದ ಭ್ರಷ್ಟಾಚಾರಿಗಳನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ತಿರಸ್ಕರಿಸಿ ದೇಶ ರಕ್ಷಿಸಿ, ಮತದಾನ ಮಾಡಿ.