ದಾಸ್ ಕ್ಯಾಪಿಟಲ್
dascapital1205@gmail.com
ಜಗತ್ತಿನ ಹಲವು ರಾಷ್ಟ್ರಗಳು ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ಆಚರಣೆಗಳನ್ನು ವೈಜ್ಞಾನಿಕವಾಗಿ ಒಪ್ಪಿ ಸ್ವೀಕರಿಸಿದೆ. ಹಿಂದೂ ಧರ್ಮಗ್ರಂಥಗಳ ಅಧ್ಯಯನ ಮಾಡಲು ಭಾರತಕ್ಕೆ ವಿದೇಶಿಯರು ಬರುತ್ತಿದ್ದಾರೆ. ಖಾವಿ ಬಟ್ಟೆ, ಖಾದಿ ಬಟ್ಟೆಗಳನ್ನು ಧರಿಸಿ ಜಪಮಣಿ ಹಿಡಿದು ನಮ್ಮ ತೀರ್ಥಕ್ಷೇತ್ರಗಳಲ್ಲಿ ಜಪ-ತಪ- ಧ್ಯಾನ ಯೋಗದಲ್ಲಿ ತನ್ಮಯರಾಗುತ್ತಿದ್ದಾರೆ.
ಕುಂಕುಮ ಧರಿಸಿದ, ಕಾಲುಬಳೆ ಹಾಕಿದ, ಜಪಮಣಿಯನ್ನು ಕೊರಳಿಟ್ಟುಕೊಂಡ, ಬರಿ ಗಾಲಲ್ಲಿ ನಡೆವ ಅವಿಭಕ್ತ ಕುಟುಂಬ, ಸತಿ-ಪತಿ, ಮಕ್ಕಳು, ಅಂತೆಲ್ಲಾ ಭಾರತೀಯ ಪರಂಪರೆ ಯಲ್ಲಿ ಬದುಕುವ ಇಚ್ಛೆಯನ್ನು ಹೊಂದಿರುವ ಎಷ್ಟೋ ಅನ್ಯ ಧರ್ಮೀಯರು ಈ ನೆಲಕ್ಕೆ ಬಂದು ನಮ್ಮ ಹಾಗೆ ಬದುಕುತ್ತಿದ್ದಾರೆ. ಸತ್ಯ, ಅಹಿಂಸೆ, ತ್ಯಾಗ, ದಾನ, ಇವೇ ಮುಂತಾದ ಮೌಲ್ಯಗಳನ್ನು ವಿಶ್ವಕ್ಕೆ ನೀಡಿದ ಹಿಂದೂ ಧರ್ಮದಲ್ಲಿ ಹಿಂದೂ ಜೀವನ ಪದ್ಧತಿಯಲ್ಲಿ ಸ್ವಾಧ್ಯಾಯ, ಸ್ವಾಭಿಮಾನ, ಸ್ವಾವಲಂಬನೆಗೆ ಪ್ರಾಧಾನ್ಯ ನೀಡಲಾಗಿದೆ ಎಂಬುದನ್ನು ನಮ್ಮ ಹಾಗೆ ಅವರೂ ಮನಗಂಡಿದ್ದಾರೆ.
ಹಿಂದೂ ಎಂಬುದು ಮತ, ಧರ್ಮ ಅಥವಾ ಇಂಗ್ಲಿಷಿನ ರಿಲಿಜನ್ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿರುವುದು ತುಂಬಾ ಪ್ರಾಚೀನ ವಾದುದ್ದೇನಲ್ಲ. ತೀರಾ ಹೊಸತೂ ಅಲ್ಲ. ವೇದ ಪ್ರಾಮಾಣ್ಯವನ್ನು ಒಪ್ಪುವ, ದೇವರನ್ನು ನಂಬುವ, ಪುನರ್ಜನ್ಮದಲ್ಲಿ ವಿಶ್ವಾಸವಿರುವ ಹಾಗೂ ವರ್ಣಾಶ್ರಮ ವ್ಯವಸ್ಥೆಯ ಬಗ್ಗೆ ಆದರವುಳ್ಳವರು ಈ ಹಿಂದೂಗಳು. ಹಿಂದೂ ಜನಾಂಗದ ಧರ್ಮವನ್ನು ಹಿಂದೂ ಧರ್ಮವೆಂದು ಕರೆದವರು ಪ್ರಾಚೀನ ಪರ್ಷಿಯನ್ನರು.
ಇದರ ನಿಜ ಹೆಸರು ಸನಾತನ ಧರ್ಮ. ಅಂದರೆ ಅತ್ಯಂತ ಪ್ರಾಚೀನವಾದ ಮತ್ತು ಶಾಶ್ವತ ಮೌಲ್ಯಗಳನ್ನು ಒಳಗೊಂಡಿರುವ ಧರ್ಮ. ಧರ್ಮವೆಂದರೆ ಜಗತ್ತನ್ನು ಧರಿಸಿರುವ ಶಕ್ತಿ. ಅರ್ಥಾತ್ ಪರಮಾತ್ಮ. ಅವನ ಅನುಭವಗಳನ್ನು ತಂದುಕೊಡಬಲ್ಲ ಉಪಾಸನಾ ಮಾರ್ಗ, ಜೀವನ ಪದ್ಧತಿಗಳನ್ನೂ ಧರ್ಮವೆಂದೇ ಕರೆಯಬಹುದು. ಈ ಕಾರಣವಾಗಿ ಇದನ್ನು ಸನಾತನ ಧರ್ಮ ಅಥವಾ ಹಿಂದೂಧರ್ಮ ಎನ್ನಬಹುದು.
ನಮ್ಮ ಪ್ರಾಚೀನ ಋಷಿಮುನಿಗಳ, ಸಾಧುಸಂತರ ಅತೀಂದ್ರಿಯ ದರ್ಶನಗಳ ಮತ್ತು ಆಧ್ಯಾತ್ಮಿಕ ಅನುಭವಗಳ ಆಧಾರದ ಮೇಲೆ ಭದ್ರವಾಗಿದ್ದೂ ಎಷ್ಟೋ ಆಕ್ರಮಣಗಳನ್ನು ಸಹಿಸಿಯೂ ಸುಭದ್ರವಾಗಿ ನೆಲೆನಿಂತಿದೆ. ಸತ್ಯವು ಅನಂತ ಮತ್ತು ಬಹುಮುಖ. ಒಬ್ಬ ವ್ಯಕ್ತಿಯಿಂದ ಇದು ಪ್ರಕಟವಾದುದಲ್ಲ. ಆಗುವುದೂ ಇಲ್ಲ. ಆದುದರಿಂದಲೇ ಇಂದು ಮತ್ತು ಮುಂದೆ ಸಹ ಹೊಸ ಅವತಾರ ಗಳಿಗೆ, ಹೊಸಧರ್ಮ ಶಾಸಗಳಿಗೆ, ಹೊಸ ಆಧ್ಯಾತ್ಮಿಕ ಅನುಭವಗಳ ಅಭಿವ್ಯಕ್ತಿಗೆ ಹಿಂದೂಧರ್ಮದಲ್ಲಿ ಅವಕಾಶವಿದೆ.
ದೇವರು ಎಂಬುದು ಒಂದು ಚೈತನ್ಯ; ತೇಜಸ್ಸು; ಸತ್ವ; ಶಕ್ತಿ. ಅದರ ಮಹಿಮೆಗೆ ಒಳಪಡದ ಯಾವ ವಸ್ತುವು ಪ್ರಪಂಚದಲ್ಲಿಲ್ಲ. ಮಾನುಷ ವ್ಯಾಪಾರಗಳು ದೇವರಾಧನವೇ ಆಗಿದೆ. ಹೀಗಾಗಿ ದೇವರು ಸರ್ವೇಶ್ವರ; ಸರ್ವಶಕ್ತ; ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣ. ದೇವರ ನಿಜಸ್ವರೂಪ ಸತ್ ಚಿತ್ ಆನಂದ. ಅವನು ಸರ್ವಜ್ಞ; ಸರ್ವಶಕ್ತ; ಸರ್ವವ್ಯಾಪೀ; ಸರ್ವಾಂತರ್ಯಾಮಿ. ಸತ್ಯದ, ಜ್ಞಾನದ ಸೌಂದರ್ಯದ ಗಣಿಯವನು. ನಮ್ಮ ಕಲ್ಪನೆ ಮತ್ತು ಕಲ್ಪನೆಗೂ ನಿಲುಕದ ಸದ್ಗುಣಗಳ ಪರಿಪೂರ್ಣ ಮೂರ್ತಿಯೇ ಅವನು. ಅವನು ಭಕ್ತಿಪ್ರಿಯ.
ಶರಣಾಗತಿಯೇ ಅವನೊಲಿಸಿಕೊಳ್ಳುವ ಮಾರ್ಗ. ದೇವರನ್ನು ಬಿಟ್ಟದ್ದು, ಹೊರಗಾದದ್ದು, ಹೊರಗಿರಬಲ್ಲುದು ಯಾವುದೂ ಇಲ್ಲ. ಎಲ್ಲವೂ ಅವನೊಳಗೇ ಇರುವಂತದ್ದು. ಇದು ಸನಾತನ ಹಿಂದೂ ಧರ್ಮದ ನಂಬಿಕೆ. ಪ್ರತಿಯೊಂದರಲ್ಲೂ ದೇವರ ಅಸ್ತಿತ್ವವನ್ನು ಕಾಣುವುದು ಶ್ರೇಷ್ಠ ಕಲ್ಪನೆ ಸನಾತನ ಹಿಂದೂ ಧರ್ಮದ್ದು. ಅಷ್ಟಲ್ಲದೇ ತಾಯಿ, ತಂದೆ, ಗುರು, ಅತಿಥಿ ಇವರನ್ನು ದೈವತ್ವದ
ಸ್ಥಾನಕ್ಕೇರಿಸಿ ಗೌರವಿಸಿ ಪೂಜಿಸುವ ಸಂಸ್ಕೃತಿ ಹಿಂದೂಗಳಲ್ಲಿದೆ. ಇಂದ್ರಿಯ, ಮನಸ್ಸು, ಬುದ್ಧಿಗಳ ಮೂಲಕ ಸಂಗ್ರಹವಾದ ಪ್ರಾಪಂಚಿಕ ಅನುಭವಗಳ ಮೊತ್ತ ರಾಶಿಯೇ ಜೀವನ. ಹಿಂದೂ ಧರ್ಮದ ಪರಮಪ್ರಮಾಣವಾದ ಉಪನಿಷತ್ತುಗಳ ಪ್ರಕಾರ ನಾವು
ಆತ್ಮ. ಇದು ಸನಾತನವೂ ಶಾಶ್ವತವೂ ಆದುದು.
ಹುಟ್ಟು, ಬೆಳವಣಿಗೆ, ಬದಲಾವಣೆ, ಅವನತಿ, ಮುಪ್ಪು, ಕಾಯಿಲೆ, ಮರಣ- ಇವಾವುದೂ ಇದಕ್ಕಿಲ್ಲ. ಈ ಅವಸ್ಥೆಗಳು ದೇಹಕ್ಕೆ
ಮಾತ್ರ. ಹಾಗಾಗಿ ನಮ್ಮ ನಿಜ ಸ್ವರೂಪ ಚೈತನ್ಯ ಮತ್ತು ಆನಂದದಾಯಕ. ಅಜ್ಞಾನ ಅವಿದ್ಯೆ ಅಥವಾ ಮಾಯೆಯಿಂದಾಗಿ ನಾವು ನಮ್ಮ ನಿಜಸ್ವರೂಪವನ್ನು ಮರೆತು ದೇಹ, ಇಂದ್ರಿಯ ಮತ್ತು ಮನಸ್ಸುಗಳೇ ನಾವೆಂದು ಭ್ರಮಿಸಿ ದುಃಖಾದಿ ಸಂಕಟಗಳನ್ನು ಅನುಭವಿಸುತ್ತೇವೆ.
ಇವೆಲ್ಲವೂಗಳಿಂದ ಹೊರಬಂದು ನಿಜಸ್ವರೂಪವು ಅನುಭವಿಸುವ ಅವಸ್ಥೆಯನ್ನೇ ಮೋಕ್ಷವೆಂದು ಹಿಂದೂ ಧರ್ಮ ಸಾರುತ್ತದೆ. ಇದಕ್ಕೆ ಆತ್ಮಜ್ಞಾನ ಮುಖ್ಯವಾಗುತ್ತದೆ. ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಹಿರಿಯದಾದ ಹಿಂದೂ ಧರ್ಮ ಇತರೆಲ್ಲ ಧರ್ಮ ಗಳಿಗಿಂತ ತುಂಬಾ ಪ್ರಾಚೀನ. ಅಪೌರುಷೇಯವೆನಿಸಿದ ’ಸನಾತನ ಧರ್ಮ’ ವಿದು. ಈ ಧರ್ಮದ ಧಾರ್ಮಿಕ ಆಚರಣೆಗಳು, ವಿಧಿ ನಿಷೇಧಗಳು, ಸಾಮಾಜಿಕ ಕಟ್ಟುಪಾಡುಗಳು, ಜೀವನ ಪದ್ಧತಿ ವಿನ್ಯಾಸಗಳೆಲ್ಲಿ ವೈಜ್ಞಾನಿಕತೆಯಿದೆ, ತಾತ್ತ್ವಿಕತೆಯಿದೆ, ನೈತಿಕತೆ ಯಿದೆ.
ಯಾವುದೂ ಇಲ್ಲಿ ಕಲ್ಪನೆಯಲ್ಲ. ಊಹಾತ್ಮಕವಲ್ಲ. ವಿಶ್ವವೇ ಇಂದು ಭಾರತೀಯ ಜೀವನ ಪದ್ಧತಿಯನ್ನು ಮೆಚ್ಚಿ ಕೊಂಡಾಡಿದೆ. ಪಾಶ್ಚಾತ್ಯರು ಭಾರತೀಯ ಜೀವನಪದ್ಧತಿಯನ್ನು ಅಳವಡಿಸಿಕೊಂಡು ಅನುಸರಿಸುತ್ತಿದ್ದಾರೆ. ಮನೆಯನ್ನು ಕಟ್ಟುವಲ್ಲೂ ನಮ್ಮ ಪ್ರಾಚೀನರ ಮಾರ್ಗವನ್ನೇ ಹಿಡಿಯುತ್ತಿದ್ದಾರೆ. ಊಟ, ಉಡುಗೆ ತೊಡುಗೆಗಳಲ್ಲಿ ಹಿಂದೂಗಳನ್ನು ಅನುಕರಿಸುತ್ತಾ ಹಿಂದೂಗಳೇ
ಆಗುತ್ತಿದ್ದಾರೆ.
ಪುರುಷಾರ್ಥಗಳು, ಧರ್ಮಕ್ಕೆ ಪ್ರಾಶಸ್ತ್ಯ, ಋಣತ್ರಯಗಳು, ಪಂಚ ಮಹಾಯಜ್ಞಗಳು, ಯೋಗ, ಪುನರ್ಜನ್ಮ, ತರ್ಕಬದ್ಧವಾದ ಕರ್ಮಸಿದ್ಧಾಂತ, ಅಧಿಕಾರ ಭೇದ ಸಿದ್ಧಾಂತ, ಅವತಾರಗಳ ಹಿನ್ನೆಲೆಯಲ್ಲಿ ಮನುಷ್ಯ ಕುಲದ ವಿಕಾಸದ ಹೆಜ್ಜೆಗಳು, ಹಿಂದೂ ಜೀವನ ಪದ್ಧತಿಯಂತೆ ಬ್ರಾಹ್ಮೀ ಮುಹೂರ್ತದ ಮಹತ್ವ, ಪ್ರಾತಃ ಸ್ಮರಣೆಯ ಉದ್ದೇಶ, ಕರದರ್ಶನ, ಗೋವುಗಳ ಮಹತ್ವ,
ಗೋವುಗಳ ಮುಖದರ್ಶನ, ಪ್ರಾತಃಕಾಲದಲ್ಲಿ ಪರಮಾತ್ಮನ ಧ್ಯಾನ, ಬೆಳಗಿನ ವ್ಯಾಯಾಮ, ಅಭ್ಯಂಗ ಸ್ನಾನ, ಸ್ನಾನದ ಮಹತ್ವ, ಹಿಂದೂ ಸೀಯರು ಧರಿಸುವ ಅರಿಸಿನ ಕುಂಕುಮ ಮಹತ್ವ, ಪ್ರಾರ್ಥನೆಯ ಮಹತ್ವ, ಪುರುಷರು ಶಿಖೆಯನ್ನು ಬಿಡುವುದರ ಮಹತ್ವ, ಸ್ವಾಧ್ಯಾಯ ಮತ್ತು ತಪಸ್ಸು, ಆಹಾರ ಸ್ವೀಕಾರ ಕ್ರಮ, ದುಡಿಮೆಯ ಸ್ಥಾನ, ಸತ್ಸಂಗ ಮತ್ತು ಸೇವೆ, ಅಂತರ್ನಿರೀಕ್ಷಣೆ ಮತ್ತು ಭಗವದರ್ಪಣ, ತುಳಸೀಪೂಜೆ, ಕಮಲದ ಸಂಕೇತ ಮತ್ತು ಸಂದೇಶ, ಪೂರ್ಣಕುಂಭದ ಮಹತ್ವ, ಅಶ್ವತ್ಥ ಮಹಿಮೆ ಮತ್ತದರ ಪ್ರದಕ್ಷಿಣೆಯ ಉದ್ದೇಶ, ಹುಬ್ಬುಗಳ ನಡುವೆ ವಿಭೂತಿ, ಗಂಧ, ನಾಮಗಳ ಧಾರಣೆಯ ಔಚಿತ್ಯ, ಓಂಕಾರದ ಮಹತ್ವ,
ತೀರ್ಥಯಾತ್ರೆಯ ಮಹಿಮೆ, ಮೂರ್ತಿಪೂಜೆಯ ಅಂತರಾರ್ಥ, ಹಿಂದೂ ದೇವಳಗಳ ನಿರ್ಮಾಣದ ಹಿನ್ನೆಲೆ, ಶಾಸ್ತ್ರ ಗ್ರಂಥಗಳ ಹಿನ್ನೆಲೆಯಲ್ಲಿ ದೇವಳಗಳ ರಚನೆ ಮತ್ತು ಅವುಗಳ ಸಂಕೇತಾರ್ಥ, ವಿಗ್ರಹ ಪ್ರತಿಷ್ಠಾಪನೆಯ ವಿಧಿವಿಧಾನ ಮತ್ತು ಉತ್ಸವ, ದೇವಳಗಳಲ್ಲಿ ಭಕ್ತರ ಕರ್ತವ್ಯ, ಪೂಜಾ ಸಂದರ್ಭದಲ್ಲಿ ಘಂಟೆ ಜಾಗಟೆಗಳ ನಾದ, ದೇವದರ್ಶನ ಮತ್ತು ಸೇವೆ, ದೇವತಾಪರಾಧ ಗಳ ಪರಿಮಾರ್ಜನೆ, ಪಂಚಾಯತನ ಪೂಜೆ, ಸಂಸ್ಕಾರಗಳ ಉದ್ದೇಶ, ಮಹತ್ವ ಮತ್ತು ಆಶಯ, ಹಾಗೂ ಸಾಮಾಜಿಕ ಪ್ರಯೋಜನ ಗಳು, ತರ್ಪಣದ ಮಹತ್ವ, ಪಂಚಗವ್ಯ ಮತ್ತು ಪ್ರಾಶನದ ಮಹತ್ವ, ವ್ರತಾಚರಣೆಗಳ ಔಚಿತ್ಯ, ಪರ್ವಕಾಲದ ಪ್ರಯೋಜನ, ಹಬ್ಬದ ಉದ್ದೇಶ, ಹಿಂದೂ ಧರ್ಮದಲ್ಲಿ ಸ್ತ್ರೀಯರ ಮತ್ತು ಗುರುವಿನ ಸ್ಥಾನ, ಸ್ವರ್ಗ ಮತ್ತು ನರಕಗಳ ಕಲ್ಪನೆ, ಸೃಷ್ಟಿ-ಸ್ಥಿತಿ- ಲಯಗಳ ಕಲ್ಪನೆ, ದ್ವೈತ, ಅದ್ವೈತ ವಿಶಿಷ್ಟಾದ್ವೈತ ದರ್ಶನಗಳು, ಸಗುಣ-ನಿರ್ಗುಣ ಉಪಾಸನೆ, ಸಾಧನ ಚತುಷ್ಟಯಗಳು, ಸಾಧನ ಸೂತ್ರತ್ರಯಗಳು, ಹಿಂದೂವಿನ ದೃಷ್ಟಿಯಲ್ಲಿ ಜೀವನ ಶೈಲಿ, ಸಾವನ್ನು ಎದುರಿಸುವ ಕಲಿಕೆ, ನಮ್ಮ ನಿಜ ಸ್ವರೂಪ, ಆತ್ಮಾನುಭವ, ಮೋಕ್ಷ ಮತ್ತದರ ಅನುಭವ- ಹೀಗೆ ಈ ಎಲ್ಲಾ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಿಕೊಂಡು ಬಾಳನ್ನು ಬದುಕುವ ಹಿಂದೂವಿನ ಪ್ರಜ್ಞೆಯಲ್ಲಿ ವೈಚಾರಿಕತೆಯ ಗಾಢತೆ ತುಂಬಿರುವುದು ಈಗ ಎಲ್ಲೆಡೆ ಪ್ರಚುರವಾಗೇ ರೂಢಿಗೆ ಬಂದಿರು ವುದು ಬಹಿರಂಗ ಸತ್ಯ.
ಜಾತ್ಯತೀತತೆ, ಸಾಂಸ್ಕೃತಿಕ ಬಹುತ್ವ, ಏಕತ್ವಾಧಾರಿತ ಆಡಳಿತ ಪದ್ಧತಿ, ಸಮಾನತೆ, ಸೌಹಾರ್ದತೆ ಇವೆಲ್ಲ ಹಿಂದುತ್ವದ ಮೂಲ ಸ್ರೋತಗಳು. ಎಲ್ಲಿಯವರೆಗೆ ಈ ರಾಷ್ಟ್ರದಲ್ಲಿ ಹಿಂದೂಗಳಿರುತ್ತಾರೋ ಅಲ್ಲಿಯವರೆಗೆ ಇವೆಲ್ಲ ಜೀವಂತವಾಗಿರುತ್ತದೆ. ಹಿಂದೂ, ಹಿಂದುತ್ವದ ಎಳೆ ನಾಶವಾಗುವುದೆಂದರೆ ಈ ರಾಷ್ಟ್ರದ ಈ ಮೌಲ್ಯಗಳ ನಾಶವೆಂದೇ ಅರ್ಥ. ನಮ್ಮ ಹಿರಿಯರಲ್ಲಿದ್ದ ಸ್ವಾಭಿಮಾನ, ಸ್ವದರ್ಶನ, ಸ್ವಸ್ಥತೆ, ಸ್ವಾತ್ಮದರ್ಶನ, ಆತ್ಮವಿಶ್ವಾಸ- ಇವೆಲ್ಲವೂ ನಮಗೆ ಆದರ್ಶವಾಗೇ ಬಂದಿದೆಯೆಂದರೆ ಅಚ್ಚರಿಯಾಗುತ್ತದೆ.
ಆಕಾಶ ಮಂಡಲ, ಸೂರ್ಯ ಚಂದ್ರರ ಅಸ್ತಿತ್ವ, ಗ್ರಹಗಳ ಚಲನೆ, ಹಗಲು ರಾತ್ರೆ, ದಿನಗಳು, ಮಾಸಗಳು, ಋತುಗಳು, ವರ್ಷ, ಗ್ರಹಣಾದಿ ಮುಂತಾದವುಗಳ ಬಗ್ಗೆ ನಮ್ಮ ಪ್ರಾಚೀನರ ಜ್ಞಾನ ಅಸಾಮಾನ್ಯ, ಅನುಪಮವಲ್ಲವೆ? ಇಂಥ ಶ್ರೀಮಂತ ಜ್ಞಾನ ಪರಂಪರೆಗೆ ಸೇರಿದ ನಾವು ನಮ್ಮವರ ಹಿರಿಮೆ ಗರಿಮೆಯನ್ನು ಅರಿಯಬೇಕಲ್ಲವೆ? ನಮ್ಮ ಮಕ್ಕಳ ಮನಸ್ಸನ್ನು ಬಾಲ್ಯದಿಂದಲೂ ರಾಷ್ಟ್ರಭಾವನೆಯಿಂದ ತುಂಬಬೇಕು.
ಪ್ರತಿಹಂತದಲ್ಲೂ ಅದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಅವರ ತಾರುಣ್ಯ ಜೀವನವನ್ನಿಡೀ ಮುಂದೆ ಅವರನ್ನು ದೇಶಭಕ್ತ ನಾಗರಿಕರನ್ನಾಗಿಸುವಂಥ ಸದ್ಗುಣಗಳ ಅಭ್ಯಾಸಕ್ಕಾಗಿ ಮೀಸಲಾಗಿಸಬೇಕು. ನಾವೀ ಪ್ರಯತ್ನ ಮಾಡದಿದ್ದರೆ ಭಾರತ ರಾಷ್ಟ್ರವನ್ನು ನಿರ್ಮಿಸುವ ಇಚ್ಛೆಯನ್ನೇ ಬಿಟ್ಟುಬಿಡಬೇಕು; ಯಾಕೆಂದರೆ ಇಂಥ ಶಿಸ್ತಿಲ್ಲದೆ ರಾಷ್ಟ್ರೀಯತೆ, ದೇಶಭಕ್ತಿ, ಪುನರ್ನಿರ್ಮಾಣ ಇವೆಲ್ಲ ಕೇವಲ ಶುಷ್ಕಪದಗಳಾಗಿ, ವಿಚಾರಗಳಾಗಿ ಮಾತ್ರ ಉಳಿಯುತ್ತವೆ.
ರಾಷ್ಟ್ರಚೇತನದ ಭಾಗವೆಂದೂ ಆಗುವುದಿಲ್ಲ. ಅಲ್ಲದೆ, ಈ ಕಾರಣದಿಂದಾಗಿ ಸಾಕ್ಷಾತ್ಕಾರಗೊಂಡ ಒಂದು ಮಹಾ ಯಥಾರ್ಥ ವಾಗುವುದಿಲ್ಲ. ಕೇವಲ ಪಠ್ಯಪುಸ್ತಕಗಳು ಬೋಧಿಸುವ ದೇಶಭಕ್ತಿಯಿಂದ ಯಾವ ಉಪಯೋಗವೂ ಇಲ್ಲ.