Wednesday, 11th December 2024

ಸ್ವಾಮೀಜಿಗಳೇ ಧರ್ಮದ ಕೆಲಸವನ್ನೂ ಮಾಡಿ

ಅಭಿಪ್ರಾಯ

ಡಾ.ದಯಾನಂದ ಲಿಂಗೇಗೌಡ

ನಿಮ್ಮ ಸ್ಥಳೀಯ ಜಾತಿ ಸಮಸ್ಯೆಗಳ ಜತೆಗೆ, ಸನಾತನ ಧರ್ಮದ ಸಮಸೆಗಳನ್ನು ಒಗ್ಗಟ್ಟಾಗಿ ನಿಂತು ನಿಭಾಯಿಸುವ ಅವಶ್ಯಕತೆ ಇದೆ. ಇಂದು ಜಾಗತಿಕವಾಗಿ ಹಣಬಲವಿರುವ ವಿಕಾಸ ತತ್ವವನ್ನು ನಂಬಿರುವ ಮತಗಳಿಂದ, ಸನಾತನ ಧರ್ಮಕ್ಕೆ ಸಂಚಕಾರ ಬಂದಿದೆ.

ರಾಜ್ಯದ ಎಲ್ಲ ಮಠಾಧಿಪತಿಗಳಿಗೆ ನಮಸ್ಕಾರ. ತಮಗೆ ಬೇಕಾದ ಎಲ್ಲ ಸಕಲ ಸೌಲಭ್ಯ ಗಳನ್ನು ಆ ದೇವರು, ಮಠದ ಭಕ್ತರ ಮೂಲಕ ಒದಗಿಸಿಕೊಟ್ಟಿದ್ದಾರೆ ಎಂದು ಭಾವಿಸು ತ್ತೇನೆ. ತಾವೆಲ್ಲ ಒಂದ ಒಂದು ಚಟುವಟಿಕೆಯಿಂದ ಬಿಡುವಿಲ್ಲದೆ ತೊಡಗಿಸಿ ಕೊಂಡಿರು ವುದು ಸಂತೋಷದ ಸಂಗತಿ. ತಮ್ಮಲ್ಲಿ ಕೆಲವರು, ತಮ್ಮ ಜಾತಿಗೆ ಸಂಬಂಧಪಟ್ಟ ಹೋರಾಟದಲ್ಲಿ ಸದಾ ಸಕ್ರಿಯರಾಗಿ ಪ್ರತಿಭಟನೆಯನ್ನು ಮಾಡಿದ್ದನ್ನು ಕಂಡಿದ್ದೇವೆ.

ನಿಮ್ಮ ಜಾತಿಗೆ ಅಥವಾ ನಿಮ್ಮ ಜಾತಿಯ ಪ್ರಮುಖರಿಗೆ ಅವಮಾನವಾದಾಗ, ನೀವುಗಳು ಪ್ರತಿಭಟನೆ ಮಾಡಿರುವುದು ಸಂತೋಷ . ಇನ್ನು ಕೆಲವರು ತಮ್ಮ ಜಾತಿಗೆ ಮೀಸಲಾತಿ ಕೊಡಿಸುವ ಹೋರಾಟದಲ್ಲಿ, ಇನ್ನೂ ಕೆಲವರು ತಮ್ಮ ಜಾತಿಗಳನ್ನು ಪ್ರತ್ಯೇಕ ಧರ್ಮ ವಾಗಿ ಮಾಡುವ ಹೋರಾಟದಲ್ಲಿ ಭಾಗವಹಿಸಿದ್ದಿರಿ. ಇನ್ನೂ ಕೆಲವರು ಇನ್ನು ಮುಂದೆ ಹೋಗಿ ತಮ್ಮ ಜಾತಿಯವರನ್ನು ಮಂತ್ರಿ ಮಾಡಿ, ಮುಖ್ಯ ಮಂತ್ರಿ ಮಾಡಿ, ಅಥವಾ ತಮ್ಮ ಜಾತಿಯವರನ್ನು ಮುಖ್ಯಮಂತ್ರಿಯನ್ನಾಗಿ ಸ್ಥಾನದಿಂದ ಇಳಿಸಬೇಡಿ ತರಾವರಿ ಉದ್ದೇಶ ಗಳನ್ನು ಇಟ್ಟುಕೊಂಡು ನಾವು ಹೋರಾಟ ಮಾಡಿರುವುದನ್ನು ನಾವೆಲ್ಲ ಕಣ್ಣಾರೆ ನೋಡಿದ್ದೇವೆ.

ಹೋರಾಟಗಳ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ. ಏಕೆಂದರೆ ಅದು ತಮ್ಮ ಜಾತಿಯ ಋಣವನ್ನು ತೀರಿಸುವ ಒಂದು ಬಗೆ
ನೀವು ಭಾವಿಸಿರಬಹುದು. ತಾವುಗಳು ಪ್ರಮುಖವಾದ ಕಾರ್ಯಗಳನ್ನು ಮಾಡಿದ ನಂತರ, ಇಂತಹ ಸಣ್ಣಪುಟ್ಟ ಚಟುವಟಿಕೆ ಗಳಲ್ಲಿ ತೊಡಗಿಕೊಂಡಿದ್ದರೆ, ಈ ಲೇಖನ ಬರೆಯುವ ಅವಶ್ಯಕತೆ ಇರಲಿಲ್ಲ. ತಾವುಗಳೆಲ್ಲರೂ ಬೇರು ಮತ್ತು ಕಾಂಡವನ್ನು ರಕ್ಷಣೆ
ಮಾಡುವುದನ್ನು, ಬಿಟ್ಟು ಬರಿ ರೆಂಬೆಗಳ ರಕ್ಷಣೆಯಲ್ಲಿ ತೊಡಗಿರುವುದರಿಂದ ಈ ಲೇಖನ ಪತ್ರ ಬರೆಯುವ ಅವಶ್ಯಕತೆ ಉಂಟಾ ಗಿದೆ.

ನಾನು ಹೇಳುತ್ತಿರುವುದು ಸನಾತನ ಧರ್ಮದ ಎಂಬ ಮರದ ಬೇರು ಮತ್ತು ಕಾಂಡದ ಬಗ್ಗೆ. ನೀವು ರಕ್ಷಣೆ ಮಾಡುತ್ತಿರುವ ಜಾತಿ ಗಳು ಇದೆ ಮರದ ರಂಬೆಗಳು. ಕಾಂಡ ಮತ್ತು ಬೇರಿನ ರಕ್ಷಣೆ ಮಾಡದೆ, ಬರೀ ರೆಂಬೆಗಳ ರಕ್ಷಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಬುಡಕ್ಕೆ ಪೆಟ್ಟು ಬಿದ್ದಾಗ, ಎಂತಹ ರಕ್ಷಣೆ ಇದ್ದರೂ ತಂತಾನೇ ತಮ್ಮ ರೆಂಬೆಗಳು ಕುಸಿದು ಬಿಡುತ್ತದೆ ಎಂಬುದನ್ನು ನಾವುಗಳು ಮರೆತಂತಿದೆ.

ನೀವು ಮರೆತಿರುವ ಪ್ರಮುಖ ಕಾರ್ಯಗಳ ವಿಚಾರಕ್ಕೆ ಬರೋಣ. ಮೊದಲನೆಯದಾಗಿ, ಪ್ರತಿಯೊಂದು ಮತಗಳಲ್ಲಿ, ತಮ್ಮ ಮತದ ಮೂಲಗ್ರಂಥಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಉದಾಹರಣೆಗೆ ಕುರಾನ್‌ಗಳನ್ನು ಮದ್ರಸಾಗಳಲ್ಲಿ ಮತ್ತು ಮಸೀದಿಗಳಲ್ಲಿ ಹೇಳಿಕೊಡಲಾಗುತ್ತದೆ. ಹಾಗೆಯೇ ಬೈಬಲ್ಲನ್ನು ಚರ್ಚುಗಳಲ್ಲಿ ಬೋಧಿಸ ಲಾಗುತ್ತದೆ. ಆದರೆ ಸನಾತನಧರ್ಮದ ನಿತ್ಯ ಗ್ರಂಥಗಳಾದ ಮಹಾಭಾರತ, ಭಗವದ್ಗೀತೆ, ರಾಮಾಯಣ, ವೇದಗಳು ಪುರಾಣಗಳನ್ನ ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಯಾವುದೇ ವ್ಯವಸ್ಥೆ ನಮ್ಮಲ್ಲಿ ಇಲ್ಲ.

ನಮ್ಮ ದೇವಸ್ಥಾನಗಳಲ್ಲಿ ಪ್ರಮುಖವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತವೆಯೇ ಹೊರತು, ಯಾವುದೇ ಧರ್ಮಬೋಧನೆ ಕಾರ್ಯಗಳು ನಡೆಯುವುದಿಲ್ಲ. ಬರೀ ಪೂಜೆ-ಪುನಸ್ಕಾರ ಗಳಿಂದ ಜನರಿಗೆ ತಮ್ಮ ಧರ್ಮದ ಬಗ್ಗೆ ಆಳವಾದ ಜ್ಞಾನವಾಗಲಿ, ನಂಬಿಕೆಯಾಗಲಿ ಮೂಡಲು ಸಾಧ್ಯವಿಲ್ಲ. ಆಳವಾದ ಜ್ಞಾನವಿಲ್ಲದಿದ್ದರೆ ತಮ್ಮ ಧರ್ಮದ ಬಗ್ಗೆ ಹೆಮ್ಮೆಯಾದರೂ ಹೇಗೆ ಮೂಡುತ್ತದೆ?.

ಅದೂ ಅಲ್ಲದೆ ನಾವು ನಮ್ಮ ‘ಸೆಕ್ಯುಲರ್’ ಮನಸ್ಥಿತಿಯಿಂದಾಗಿ, ಶಾಲಾ-ಕಾಲೇಜುಗಳಲ್ಲಿ ಸನಾತನ ಧರ್ಮದ ವಿಷಯಗಳನ್ನು ಸೇರಿಸುವುದನ್ನು ನಿಲ್ಲಿಸಿದ್ದೇವೆ. ಸನಾತನ ಧರ್ಮದವರ ಹಣವನ್ನು ದೇವಸ್ಥಾನಗಳ ಮೂಲಕ ಸಂಗ್ರಹಿಸುವಾಗ ಇಲ್ಲದ ಸೆಕ್ಯು ಲರಿಸಂ, ಸನಾತನಧರ್ಮದವನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವ ವಿಷಯ ಬಂದಾಗ ಬರುವುದನ್ನು ನೀವು ಏಕೆ  ಗಂಭೀರ ವಾಗಿ ಪರಿಗಣಿಸಿ ಪ್ರತಿಭಟಿಸುತ್ತಿಲ್ಲ. ಹಿಂದಿನ ತಲೆಮಾರಿನವರು ಹಾಗೂ-ಹೀಗೋ , ಅಷ್ಟೋ -ಇಷ್ಟೋ ಓದುವ ಅಭ್ಯಾಸ ಇಟ್ಟುಕೊಂಡಿ ರುವುದರಿಂದ, ಅಲ್ಪಸ್ವಲ್ಪ ತಮ್ಮ ಸನಾತನ ಧರ್ಮದ ಬಗ್ಗೆ ತಿಳಿದುಕೊಂಡಿದ್ದಾರೆ.

ಆದರೆ ಇದೇ ಮಾತನ್ನು ಮುಂದಿನ ತಲೆಮಾರಿಗೆ ಹೇಳುವಂತಿಲ್ಲ. ನಮ್ಮ ಮುಂದಿನ ತಲೆಮಾರು ನಮ್ಮ ಸನಾತನ ಧರ್ಮದ ಗಂಧಗಾಳಿಯೂ ಗೊತ್ತಿಲ್ಲದೆ ಬೆಳೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ನಿಮ್ಮಲ್ಲಿ ಕೆಲವರು ಪ್ರವಚನಗಳ ಮೂಲಕ ಧರ್ಮದ ವಿಚಾರಗಳನ್ನು ಹೆಚ್ಚು ಪ್ರಚಾರ ಪಡಿಸುತ್ತಿರಬಹುದು. ಆದರೆ ಅದು ಯಾವುದಕ್ಕೂ ಸಾಲುವುದಿಲ್ಲ. ಎಲ್ಲಾ ಮಠಾಧಿಪತಿಗಳು ಒಗ್ಗಟ್ಟಿನಿಂದ, ಸನಾತನಧರ್ಮದ ಗ್ರಂಥಗಳನ್ನು ಎಲ್ಲಾ ಪಠ್ಯಪುಸ್ತಕಗಳಲ್ಲಿ ಸೇರಿಸುವಂತೆ ಸರ್ಕಾರವನ್ನು ಏಕೆ
ಒತ್ತಾಯಿಸಬಾರದು? ಇನ್ನು ಎರಡನೇ ವಿಷಯಕ್ಕೆ ಬರೋಣ. ಈ ದೇಶದಲ್ಲಿ ಹಿಂದೂಧರ್ಮದ ಸನಾತನ ಧರ್ಮದ ದೇವಾಲಯ ಗಳು ಮಾತ್ರ ಸರಕಾರದ ಆಡಳಿತಕ್ಕೆ ಒಳಪಟ್ಟಿದೆ.

ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದ ಈ ಕಾನೂನು, ಸ್ವತಂತ್ರ ನಂತರವೂ ನಮ್ಮ ದೇಶದಲ್ಲಿ ಮುಂದುವರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಹಿಂದೂ ಧರ್ಮದ ದೇವಾಲಯಗಳಲ್ಲಿ ಅತ್ಯಂತ ದೊಡ್ಡ ಮೊತ್ತದ ಹಣವನ್ನು ಗಳಿಸುತ್ತಿರುವುದು ಸರಕಾರವು ತನ್ನ ಹಿಡಿತವನ್ನು ಮುಂದುವರಿಸುವುದಕ್ಕೆ ಕಾರಣ. ಆದರೆ ಸನಾತನ ಧರ್ಮದ ದೇವಸ್ಥಾನಗಳಿಂದ ಬಂದ ಹಣವನ್ನು ಸರ್ಕಾರಗಳು ಸನಾತನಧರ್ಮದ ಅಭಿವೃದ್ಧಿ ಬಳಸದೆ, ಇತರೆ ತೆರಿಗೆ ಮೂಲದಂತೆ ಬಳಸುತ್ತಿರುವುದು ನಿಮಗೆ
ಗಮನಕ್ಕೆ ಬಂದಿರಬಹುದು. ಇಂತಹ ಘೋರ ಅನ್ಯಾಯಗಳನ್ನು ನೀವು ಹೇಗೆ ಸಹಿಸಿ ಕೊಂಡಿದ್ದೀರಿ?. ಅಪಾರ ಮಟ್ಟದ ದೊಡ್ಡ ಹಣದ ವ್ಯವಹಾರ ದೇವಸ್ಥಾನಗಳಲ್ಲಿ ನಡೆಯುತ್ತಿರುವುದರಿಂದ ಅದು ಅವ್ಯವಹಾರಕ್ಕೆ ಕಾರಣ ಎಂಬ ಸರಕಾರದ ಕಾರಣವನ್ನು ಹೇಗೆ ಒಪ್ಪಿಕೊಂಡಿದ್ದೀರಿ?.

ನಮ್ಮ ಸನಾತನ ಧರ್ಮದಲ್ಲಿ ನ್ಯಾಯಯುತವಾಗಿ, ಧರ್ಮದಿಂದ ದೇವಸ್ಥಾನಗಳನ್ನು ನಡೆಸುವ ವ್ಯಕ್ತಿಗಳು ಅಥವಾ ಟ್ರಸ್ಟ್ ಗಳು ಬರುವುದಕ್ಕೆ ಯೋಗ್ಯತೆ ಇಲ್ಲವೇ?. ಈ ಸನಾತನ ಧರ್ಮದ ದೇವಸ್ಥಾನಗಳಿಂದ ಬಂದ ಹಣ, ಸನಾತನ ಧರ್ಮದ ಟ್ರಸ್ಟ್ ಗಳಲ್ಲಿಯೇ ಉಳಿದುಕೊಂಡರೆ, ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ರಮಗಳಿಗೆ, ದೇವಸ್ಥಾನದ ಕೆಲಸಗಾರರಿಗೆ ಸನಾತನ ಧರ್ಮವನ್ನು ಪ್ರಚಾರಕ್ಕೆ, ಸರಕಾರದ ಮುಂದೆ ಕೈಚಾಚುವ ಪ್ರಮೇಯವೇ ಬರುವುದಿಲ್ಲ. ಇಂತಹ ಹಣದಿಂದ ಸನಾತನ ಧರ್ಮದ ರಕ್ಷಣೆ ಸುಲಭಸಾಧ್ಯ.

ತಾವುಗಳು ತಮ್ಮ ಮಠಗಳನ್ನು ನಡೆಸುವುದಕ್ಕೆ, ಸರಕಾರದ ಮುಂದೆ ಅಥವಾ ಯಾವುದೇ ನಾಯಕರ ಮುಂದೆ ಕೈಚಾಚಿಕೊಂಡು ನಿಲ್ಲುವ ಸಂದರ್ಭಗಳು ಒದಗಿಬರುವುದಿಲ್ಲ. ಇಂಥ ಎಲ್ಲಾ ಸಾಧ್ಯತೆಗಳನ್ನು ಮನಗಂಡು ತಾವುಗಳು ಏಕೆ ಸನಾತನಧರ್ಮದ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಬಿಡಿಸಿಕೊಳ್ಳಬೇಕು ಎಂದು ಒತ್ತಾಯದ ಹೋರಾಟ ಮಾಡಬಾರದು? ಇಷ್ಟು ಅಪಾರ ಪ್ರಮಾಣದ ಹಣ ಸನಾತನ ಧರ್ಮದ ದೇವಸ್ಥಾನಗಳಿಂದ ಸರಕಾರಕ್ಕೆ ಬರುತ್ತಿದ್ದರೂ, ಇಂದಿಗೂ ಸನಾತನ ಧರ್ಮದ ಪ್ರಮುಖ
ದೇವಸ್ಥಾನಗಳಿಗೆ ಹೋಗುವುದಕ್ಕೆ ಸರಿಯಾದ ರಸ್ತೆಯಿಲ್ಲ.

ಅಲ್ಲಿ ಬರುವ ಧರ್ಮರ್ಥಿಗಳಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲ. ತೀರ್ಥಯಾತ್ರಿಗಳಿಗೆ ಸರಿಯಾದ ಮಾಹಿತಿ, ಸೌಲಭ್ಯ ಗಳನ್ನು ಒದಗಿಸಿದೆ ಇರುವುದು ನೋಡಿ ನಿಮ್ಮ ಕರುಳು ಚುರುಕ್ ಎನ್ನುತ್ತಿಲ್ಲವೇ?. ಸರಕಾರದ ಆಡಳಿತಕ್ಕೆ ಒಳಪಟ್ಟಿರುವ ನಮ್ಮ ದೇವಸ್ಥಾನಗಳು ಇಂದು ಸರಕಾರಿ ಕಚೇರಿಗಳಂತೆ ಯಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ನಿಮಗೆ ಏನೂ ಅನಿಸುತ್ತಿಲ್ಲವೇ? ನಮ್ಮ ಹಲವಾರು ಪುರಾತನ ಕೆಲವು ದೇವಸ್ಥಾನಗಳು ಶಿಥಿಲಾವಸ್ಥೆಯದ್ದರೂ, ಅದರ ಪುನರುತ್ಥಾನಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಸರಕಾರದ ಸೆಕ್ಯುಲರ್ ಬುದ್ಧಿ ಇದಕ್ಕೆ ಅಡ್ಡ ಬರುತ್ತಿದೆ. ಇವೆಲ್ಲವನ್ನು ಕಂಡು ಕೂಡ ನೀವೆಲ್ಲರೂ ಪ್ರತಿಭಟಿಸದೇ ಇರುವುದು ಯಾವ ನ್ಯಾಯ. ಸನಾತನ ಧರ್ಮದ ಅತ್ಯಂತ ಪ್ರಮುಖ ದೇವಾಲಯಗಳು, ಬೇರೆ ಮತದ ಅಕ್ರಮ ಹಿಡಿದಕ್ಕೆ ಒಳಗಿದ್ದರೂ, ಅದನ್ನು ಹಿಂಪಡೆಯುವಲ್ಲಿ ನಿಮ್ಮ ನಿರಾಸಕ್ತಿ ಏಕೆ?.

ಹಾಗೆಂದು ಬದಲಾವಣೆಯಾಗಿರುವ ನಲವತ್ತು ಸಾವಿರ ದೇನಸ್ಥಾನಗಳಿಗೆ ಹೋರಾಟ ಮಾಡಿ ಎನ್ನುತ್ತಿಲ್ಲ. ನಮ್ಮ ಪ್ರಮುಖ
ನಾಲ್ಕು ಶ್ರದ್ಧಾ ಕೇಂದ್ರಗಳನ್ನು ಮರಳಿ ಪಡೆಯಲು ಹೋರಾಟ ಮಾಡಿ ಎಂಬುದೇ ನಾಮ ಆಶಯ. ಮೂರನೆಯದಾಗಿ, ನಮ್ಮ ಧರ್ಮದ ಮೇಲೆ ಅಪಾರವಾದ eನವಾಗಲಿ, ಆಳವಾದ ಅರಿವಾಗಲಿ ಇಲ್ಲದಿರುವ ಜನಗಳು, ಸುಲಭವಾಗಿ ಮತಾಂತರಕ್ಕೆ
ಒಳಗಾಗುತ್ತಿದ್ದಾರೆ.

ಮತಾಂತರಕ್ಕೆ ಒಳಗಾಗುತ್ತಿರುವ ಜನರಲ್ಲಿ ಎಲ್ಲಾ ಜಾತಿಯವರು ಕೂಡ ಇದ್ದಾರೆ. ಹಣ ಅರೋಗ್ಯ ಈಗೆ ಮುಂತಾದ ಅಮಿಷಾ
ತೋರಿಸಿ ಮತಾಂತರಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಕೆಲವೊಂದು ಕಡೆ ಮತಾಂತರವಾದವರು, ಮೂಲ ಜಾತಿಗಳಲ್ಲಿ ಸರಕಾರಿ ಸೌಲಭ್ಯವನ್ನು ಪಡೆದುಕೊಳ್ಳುತ್ತಲೇ, ಮತಾಂತರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುತ್ತಾ, ಜನರು ತಾತ್ಕಾಲಿಕ ಆನಂದವನ್ನು ಅನುಭವಿಸುತ್ತಿದ್ದಾರೆ.

ಇದು ಹೀಗೆ ಮುಂದುವರಿದರೆ ಅದು ಎಲ್ಲಾ ಜಾತಿಗಳ ಜತೆ, ನಿಮ್ಮ ಜಾತಿಗಳ ಸಂಖ್ಯೆಗಳು ಕೂಡ ಒಂದು ದಿನ ಕಡಿಮೆಯಾಗಿ, ನಿಮಗೂ ದಯನೀಯ ಸ್ಥಿತಿಗೆ ಬಂದು ಹೋಗುವ ಅಪಾಯವನ್ನು ನೀವು ಮನಗಾಣುತ್ತಿಲ್ಲ. ಕೆಲವು ರಾಜಕಾರಣಿಗಳು ಸರಕಾರಿ ಜಮೀನನ್ನು ಗೋಮಾಳಗಳನ್ನು ಅನ್ಯಧರ್ಮೀಯರ ಅಕ್ರಮವಾಗಿ ಆಕ್ರಮಿಸುವುದಕ್ಕೆ ಸಹಾಯ ಮಾಡುತ್ತಿದ್ದರೂ, ನೀವು ಏಕೆ
ಪ್ರತಿಭಟಿಸಲಿಲ್ಲ?. ಪ್ರತಿಭಟಿಸುವುದು ಬಿಡಿ, ಅಂಥವರನ್ನು ಖಾಸಗಿಯಾಗಿ ಭೇಟಿಯಾಗಿ ಅವರ ಬೆಂಬಲಕ್ಕೆ ನಿಂತಿದ್ದು ನಿಮಗೆ ನಾಚಿಕೆ ಎನಿಸಲಿಲ್ಲ.

ಸಾಧುಗಳು ಪೋಲೀಸರ ಮುಂದೆಯೇ ದಾಳಿಗೊಳಗಾಗಿ ದುರ್ಮರಣಕ್ಕೆ ಈಡಾದಾಗ, ಯಾರೂ ಪ್ರತಿಭಟನೆ ನೆಡೆಸದೆ ಇದ್ದಿದು ದುರಂತವಲ್ಲವೇ ? ಆ ಪರಿಸ್ಥಿತಿ ನಿಮಗೆ ಬರುವುದಿಲ್ಲ ಎಂಬ ನಂಬಿಕೆ ನಿಮಗಿದೆಯೇ ?. ನಿಮ್ಮ ಸ್ಥಳೀಯ ಜಾತಿ ಸಮಸ್ಯೆಗಳ ಜತೆಗೆ,
ಸನಾತನ ಧರ್ಮದ ಸಮಸೆಗಳನ್ನು ಒಗ್ಗಟ್ಟಾಗಿ ನಿಂತು ನಿಭಾಯಿಸುವ ಅವಶ್ಯಕತೆ ಇದೆ. ಇಂದು ಜಾಗತಿಕವಾಗಿ ಹಣಬಲವಿರುವ ವಿಕಾಸ ತತ್ವವನ್ನು ನಂಬಿರುವ ಮತಗಳಿಂದ, ಸನಾತನ ಧರ್ಮಕ್ಕೆ ಸಂಚಕಾರ ಬಂದಿದೆ. ನಾವು ಜಾತಿ ಮತಗಳನ್ನು ಮೀರಿದ, ಧರ್ಮ ಸಂಸ್ಥಾಪಿಸಲು ಮಾರ್ಗದರ್ಶನ ನೀಡಿದ ಚಾಣಕ್ಯ , ವಿದ್ಯಾರಣ್ಯರಂತಹ ಧರ್ಮ ಗುರುಗಳನ್ನು ನಮ್ಮ ಮಠ ಗಳಿಂದ ನಿರೀಕ್ಷಿಸುವುದು ತಪ್ಪೇ? ಅನಾದಿಕಾಲದಿಂದಲೂ, ಭಾರತ ದೇಶ ಎಂಬುದು ಮಾನಸಿಕವಾಗಿ ಧಾರ್ಮಿಕವಾಗಿ ಒಂದಾಗಿರಲು ಸನಾತನ ಧರ್ಮವೇ ಕಾರಣ.

ಬ್ರಿಟಿಷರು ಇದನ್ನು ಆಡಳಿತಾತ್ಮಕವಾಗಿ, ಈ ದೇಶವನ್ನಾಗಿ ಮಾಡಿರಬಹುದು, ಆದರೆ ಶತ ಶತಮಾಗಳಿಂದಲೂ ಸನಾತನ ಧರ್ಮದ ತೀರ್ಥಯಾತ್ರಿಗಳು, ಈ ಭೂ ಪ್ರದೇಶವನ್ನು ಒಂದೇ ಧರ್ಮದ ಜನರಿಗೆ ಸೇರಿದ್ದು ಎಂಬ ನಂಬಿಕೆಯಿಂದಲೇ ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದರು. ಸನಾತನ ಧರ್ಮವಿಲ್ಲದೆ, ಭಾರತ ಒಂದು ರಾಷ್ಟ್ರವಾಗಿರ ಉಳಿದುಕೊಳ್ಳಬಹುದೇ.

ಕೊನೆಯ ಮಾತು: ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ವಿಶಾಲ ಅರ್ಥವುಳ್ಳ ವ್ಯಖ್ಯಾನವನ್ನು, ಇಂದಿನ ಮಠಾಧಿಪತಿಗಳು ‘ಜಾತಿ ರಕ್ಷತಿ ರಕ್ಷಿತಃ’  ಎಂದು ಅರ್ಥೈಸಿ ಆಚರಿಸುತ್ತಿರಬಹುದೇ ಎಂಬ ಅನುಮಾನ ಮೂಡುತ್ತಿದೆ.