Friday, 13th December 2024

ಗಣರಾಜ್ಯೋತ್ಸವದ ಒಂದಷ್ಟು ವಿಶೇಷಗಳು

ಗಣತಂತ್ರ ಸಂಭ್ರಮ

ಸುದರ್ಶನ

ಗಣತಂತ್ರ ದಿವಸವು ಪ್ರತಿವರ್ಷವೂ ಒಂದಲ್ಲಾ ಒಂದು ರಾಷ್ಟ್ರಹಿತದ ಧ್ಯೇಯದೊಂದಿಗೆ ಆಚರಿಸಲ್ಪಡುತ್ತಿದೆ. ದೆಹಲಿಯಲ್ಲಿ ನಡೆಯುವ ಈ ವರ್ಷದ ಗಣರಾಜ್ಯೋ ತ್ಸವ ಸಮಾರಂಭದಲ್ಲಿ ‘ವಿಕಸಿತ ಭಾರತ’ ಮತ್ತು ‘ಭಾರತ- ಲೋಕತಂತ್ರದ ಮಾತೃಕೆ’ ಎನ್ನುವ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ಭಾರತದ ಶ್ರೀಮಂತ ಸಾಂಸ್ಕೃತಿಕ ಹಾಗೂ ಸಶಸ ಸೇನಾಪಡೆಗಳ ಶೌರ್ಯ-ಪರಾಕ್ರಮಗಳ ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಈ ಬಾರಿಯ ಮತ್ತೊಂದು ವಿಶೇಷವೇನೆಂದರೆ, ಸೇನಾಪಡೆಗಳೂ ಸೇರಿದಂತೆ ಇತರೆ ಹಲವಾರು ಕ್ಷೇತ್ರಗಳಲ್ಲಿ ವೃದ್ಧಿಸುತ್ತಿರುವ ನಾರಿಶಕ್ತಿಯ ವಿಶೇಷ ಪ್ರದರ್ಶನ ನೆರವೇರಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಈ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಫ್ರಾನ್ಸ್ ನಡುವೆ ೨೫ ವರ್ಷಗಳಿಂದ ಸತತವಾಗಿ ವಿವಿಧ ಕ್ಷೇತ್ರಗಳಲ್ಲಿ ನಡೆದುಕೊಂಡು ಬರುತ್ತಿರುವ ಪಾಲುದಾರಿಕೆಯ ಸಂಭ್ರಮಾಚರಣೆಯೂ ಈ ವೇಳೆ ನೆರವೇರಲಿದೆ. ಕಳೆದ ವರ್ಷ ಜುಲೈ ೧೪ರಂದು ಪ್ಯಾರಿಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್‌ನಲ್ಲಿ ನಮ್ಮ ಪ್ರಧಾನಿ ಗೌರವ ಅತಿಥಿಯಾಗಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.

ಈ ವರ್ಷದ ಸಮಾರಂಭದ ಹಲವಾರು ವಿಶೇಷತೆಗಳಲ್ಲಿ ಮೊದಲನೆಯದು, ಶಂಖನಾದದಿಂದ ಆರಂಭಗೊಳ್ಳುವ ಸಂಗೀತ ಕಾರ್ಯಕ್ರಮ. ಸುಮಾರು ೧೦೦ ಕಲಾವಿದೆಯರು ತಮ್ಮ ವಾದ್ಯಗಳೊಂದಿಗೆ ಸಂಗೀತ ಲಹರಿ ಹರಿಸುತ್ತಾ ಸಾಗುತ್ತಾರೆ. ತಾಳ, ಮದ್ದಳೆ, ಮೃದಂಗ, ನಗಾರಿ, ನಾದಸ್ವರಗಳ ನಾದಸಮ್ಮೇಳವು ಪ್ರೇಕ್ಷಕರನ್ನು ರೋಮಾಂಚನಗೊಳಿಸುವುದರೊಂದಿಗೆ ಇದು ಪ್ರಾರಂಭವಾಗುತ್ತದೆ. ಮುಂದಿನ ಒಂದೂವರೆ ಗಂಟೆ ಕಾಲ ನಿರಂತರವಾಗಿ ನಡೆಯುವ ಕಾರ್ಯ ಕ್ರಮಗಳು, ಅಲ್ಲಿ ನೆರೆಯುವ ೭೭,೦೦೦ ಪ್ರೇಕ್ಷಕರ ಮನಸೂರೆಗೊಳ್ಳುವುದರಲ್ಲಿ ಸಂದೇಹವಿಲ್ಲ.

ಭಾರತ ಸರಕಾರದಿಂದ ಆಹ್ವಾನಿತರಾಗಿರುವ ಸುಮಾರು ೧೩,೦೦೦ ಮಂದಿ ಅತಿಥಿಗಳು ಈ ಪ್ರೇಕ್ಷಕಗಣದಲ್ಲಿ ಇರುತ್ತಾರೆ. ಇವರಲ್ಲಿ ಪ್ರಗತಿಪರ ರೈತರು,
ಹಳ್ಳಿಯ ಸರಪಂಚರು, ಇಸ್ರೋದ ಮಹಿಳಾ ವಿಜ್ಞಾನಿಗಳು, ಯೋಗ ಶಿಕ್ಷಕರು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಮತ್ತು ಪ್ಯಾರಾಲಿಂಪಿಕ್‌ನಲ್ಲಿನ ವಿಜೇತರು ಸೇರಿರುತ್ತಾರೆ. ಅತ್ಯುತ್ತಮ ಸ್ವಸಹಾಯ ಗುಂಪುಗಳು, ರೈತರ ಉತ್ಪಾದಕ ಸಂಸ್ಥೆ ಗಳು, ಪ್ರಧಾನಮಂತ್ರಿಯವರ ಮನ್-ಕಿ-ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಲ್ಪಟ್ಟವರು, ಪ್ರಾಜೆಕ್ಟ್ ವೀರ್ ಗಾಥಾದ ‘ಸೂಪರ್-೧೦೦’ ಮತ್ತು ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆಯ ವಿಜೇತರು ಸಹ ಉಪಸ್ಥಿತರಿರುತ್ತಾರೆ.

ಕರ್ನಾಟಕದಿಂದ ‘ಯುವ ಬ್ರಿಗೇಡ್’ನ ಎಸ್.ಚಂದ್ರಶೇಖರ್, ರಂಜಿತ್ ಹಾಗೂ ಉದಯೋನ್ಮುಖ ಕವಿ ಕೊಳ್ಳೇಗಾಲದ ಮಂಜುನಾಥ್ ಮೊದಲಾದವರು ಈ ವರ್ಷದ ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿದ್ದಾರೆ. ‘ಸ್ವಾಗತಂ… ಸುಸ್ವಾಗತಂ’ ಈ ಹಿನ್ನೆಲೆ ಗೀತೆಯೊಂದಿಗೆ ಪ್ರಧಾನಮಂತ್ರಿ ಮೋದಿಯವರು, ರಾಷ್ಟ್ರಪತಿಗಳು ಮತ್ತು ವಿಶೇಷ ಅತಿಥಿಗಳನ್ನು ಸ್ವಾಗತಿಸುತ್ತಾರೆ. ಕರ್ತವ್ಯ ಪಥದ ಮಧ್ಯದಲ್ಲಿ ನಿರ್ಮಿಸಿರುವ ಮುಖ್ಯವೇದಿಕೆಗೆ ರಾಷ್ಟ್ರಪತಿಗಳ
ಆಗಮನವಾಗುತ್ತಲೇ ಧ್ವಜಾರೋಹಣ ನೆರವೇರುತ್ತದೆ, ಜತೆಗೆ ರಾಷ್ಟ್ರಗೀತೆಯ ಗಾಯನ ಪ್ರಾರಂಭವಾಗುತ್ತದೆ. ಇದರ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ೨೧ ತೋಪಿನ ಸನ್ಮಾನ ನೀಡಿ ಗೌರವಿಸಲಾಗುತ್ತದೆ. ಪ್ರತಿವರ್ಷ ಈ ಸಮಾರೋಹಕ್ಕೆ ಕರ್ನಾಟಕದ ಕೊಡುಗೆ ಏನೆಂದರೆ, ಇಲ್ಲಿನ ಧ್ವಜಾರೋಹಣದಲ್ಲಿ ಹಾರಿಸುವ ರಾಷ್ಟ್ರೀಯ ಧ್ವಜ; ನಮ್ಮ ರಾಜ್ಯದ ಧಾರವಾಡ ಜಿಲ್ಲೆಯ ಬೆಣಗೇರಿ ಗ್ರಾಮದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದವರು ತಯಾರಿಸುವ ಈ ಧ್ವಜ
ದೆಹಲಿಯಲ್ಲಿ ರಾರಾಜಿಸುತ್ತದೆ ಎಂಬುದು ಹೆಮ್ಮೆಯ ಸಂಗತಿ.

‘ವಿಕಸಿತ ಭಾರತ’ ಮತ್ತು ‘ಭಾರತ- ಲೋಕತಂತ್ರದ ಮಾತೃಕೆ’ ಎಂಬ ಈ ಸಲದ ಗಣರಾಜ್ಯೋತ್ಸವದ ಧ್ಯೇಯ ವಾಕ್ಯದ ಆಧಾರದ ಮೇಲೆ ಸ್ತಬ್ದಚಿತ್ರ ರೂಪಿಸಿ ಕಳಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಪರ್ಧೆಗೆ ಆಹ್ವಾನ ನೀಡಲಾಗಿತ್ತು. ರಕ್ಷಣಾ ಸಚಿವಾಲಯದ ವಿಸ್ತೃತವಾದ ಆಯ್ಕೆಯ ಕಾರ್ಯವಿಧಾನದ ಅನುಸಾರ ಈ ಸ್ಪರ್ಧೆ ನಡೆಯುತ್ತದೆ. ವಿವಿಧ ಕ್ಷೇತ್ರಗಳಿಂದ ಆಯ್ದ ಪ್ರತಿಷ್ಠಿತ ವ್ಯಕ್ತಿಗಳ ಸಮಿತಿಯು, ರಾಜ್ಯಗಳು ಮತ್ತು ಕೇಂದ್ರಾಡಳಿತ
ಪ್ರದೇಶಗಳಿಂದ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತದೆ. ದೃಶ್ಯ ಆಕರ್ಷಣೆ, ಧ್ಯೇಯಕ್ಕೆ ಅನುಸಾರವಾಗಿರುವ ನಿರ್ಮಾಣ, ಸಂಗೀತ ಮತ್ತು ಸ್ಥಳೀಯ ಕಲಾವಿದರ ಒಳಗೊಳ್ಳುವಿಕೆ ಇವು ಕೋಷ್ಟಕದ ಆಯ್ಕೆಯಲ್ಲಿ ಪ್ರಮುಖ ನಿರ್ಣಾಯಕ ಅಂಶಗಳಾಗಿವೆ.

ಒಟ್ಟು ೪ ಸುತ್ತಿನ ಆಯ್ಕೆ ಮತ್ತು ಸಂವಾದಗಳು ನಡೆದ ನಂತರ, ಈ ಸ್ತಬ್ಧ ಚಿತ್ರಗಳ ಅಂತಿಮ ಆಯ್ಕೆ ನಡೆಯುತ್ತದೆ. ಪರೇಡಿನಲ್ಲಿ ಪ್ರದರ್ಶಿಸಲು ಒಟ್ಟು ೧೫
ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗದೆ ಉಳಿದ ಸ್ತಬ್ಧಚಿತ್ರಗಳನ್ನು ಕೆಂಪುಕೋಟೆಯ ಆವರಣದಲ್ಲಿನ ‘ಭಾರತ ಪರ್ವ’ ಎಂಬ ಸಭಾಂಗಣದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಸ್ತಬ್ಧ ಚಿತ್ರಗಳ ಆಯ್ಕೆಯಲ್ಲಿ ಕೆಲವೊಮ್ಮೆ ವಿವಾದ ಸೃಷ್ಟಿಯಾಗಿ ಅದು ರಾಜಕೀಯ ವಲಯ ಗಳಲ್ಲೂ ಚರ್ಚೆಗೀಡಾಗುತ್ತದೆ. ಹಾಗಾಗಿ, ಈ ವರ್ಷದಿಂದ ವಿವಿಧ ರಾಜ್ಯಗಳ ಮತ್ತು ಈ ಸ್ಪರ್ಧೆಯನ್ನು ಆಯೋಜಿಸುವ
ರಕ್ಷಣಾ ಮಂತ್ರಾಲಯದ ನಡುವೆ ಒಂದು ಒಪ್ಪಂದ ಮಾಡಿಕೊಳ್ಳಲಾಗಿದೆ.

ಅದೆಂದರೆ, ಪ್ರತಿ ರಾಜ್ಯಕ್ಕೂ ೩ ವರ್ಷ ಗಳ ಅವಧಿಯಲ್ಲಿ ಕನಿಷ್ಠ ಒಂದು ಸಲವಾದರೂ ತಮ್ಮ ಸ್ತಬ್ಧ ಚಿತ್ರವನ್ನು ಪ್ರದರ್ಶಿಸುವ ಅವಕಾಶ ಸಿಗಬೇಕು ಎಂಬುದು.
ಒಂದು ಕಾಲದಲ್ಲಿ ಭಾರತ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ಪ್ರಪಂಚದ ಒಟ್ಟಾರೆ ಜಿಡಿಪಿಯಲ್ಲಿ ಭಾರತದ್ದೇ ಸುಮಾರು ಶೇ.೨೫ರಷ್ಟು ಪಾಲು ಇತ್ತಂತೆ. ಆ ಕಾಲದಲ್ಲಿ ಭಾರತದ ಶ್ರೀಮಂತಿಕೆಯಲ್ಲಿ ನೇಕಾರರ ಪಾತ್ರ ಬಹಳ ಪ್ರಮುಖವಾಗಿತ್ತು. ಆದರೆ ಈ ವಲಯದಲ್ಲಿ ಯಾಂತ್ರೀಕರಣ ಮತ್ತು ವಿದೇಶಿ ವಸ್ತುಗಳ ಪ್ರವೇಶ ಹೆಚ್ಚಾದಂತೆ, ಈ ವಲಯದ ಪ್ರಾಮುಖ್ಯ ಕುಗ್ಗುತ್ತಾ ಹೋಯಿತು. ಈ ಕ್ಷೇತ್ರದ ವೈವಿಧ್ಯವನ್ನು ಪ್ರದರ್ಶಿಸಲು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ‘ಅನಂತಸೂತ್ರ’ ಎಂಬ ಹೆಸರಿನಡಿ ಸುಮಾರು ೧೯೦೦ ಪ್ರದೇಶಗಳ ಸೀರೆಗಳ ಪ್ರದರ್ಶನ ನಡೆಯಲಿದೆ.

ಕರ್ನಾಟಕದ ಮೈಸೂರು ಸಿಲ್ಕ್, ತಮಿಳುನಾಡಿನ ಕಾಂಜೀವರಂ, ತೆಲಂಗಾಣದ ಪೋಚಂಪಲ್ಲಿ, ಅಸ್ಸಾಮಿನ ಮೂಗ ಚಾದರ್, ಉತ್ತರ ಪ್ರದೇಶದ ಬನಾರಸಿ ಹೀಗೆ ಭಾರತದ ವೈವಿಧ್ಯವನ್ನು ಬಿಂಬಿಸುವ ಸೀರೆಗಳ ಪ್ರದರ್ಶನ ಇದಾಗಲಿದೆ. ಇನ್ನು ಸಮಾರಂಭದ ರೋಚಕ ಮುಕ್ತಾಯದ ಹಂತವೆಂದರೆ ವಾಯುಪಡೆಯ ವಿಮಾನಗಳ ಪ್ರದರ್ಶನ. ಈ ಬಾರಿಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ೨೯ ಯುದ್ಧ ವಿಮಾನಗಳು, ೮ ಸಾರಿಗೆ ವಿಮಾನಗಳು, ೧೩ ಹೆಲಿಕಾಪ್ಟರ್‌ಗಳು
ಮತ್ತು ಒಂದು ಪಾರಂಪರಿಕ ವಿಮಾನ ಭಾಗವಹಿಸಿ ದೆಹಲಿಯ ಆಗಸದಲ್ಲಿ ಹಾರಲಿವೆ.

ರಫೆಲ್, ಸುಖೋಯ್ – ೩೦, ಜಾಗ್ವಾರ್, ಸಿ-೧೩೦ ಮತ್ತು ತೇಜಸ್ ಯುದ್ಧವಿಮಾನಗಳು ವೀಕ್ಷಕರನ್ನು ರೋಮಾಂಚನಗೊಳಿಸಲಿವೆ. ಈ ವಿಮಾನಗಳ ಪೈಲಟ್‌ಗಳಲ್ಲಿ ೧೫ ಮಂದಿ ಮಹಿಳೆ ಯರೂ ಇದ್ದಾರೆ ಎಂಬುದು ಈ ವರ್ಷದ ವಿಶೇಷತೆ. ಕನ್ನಡತಿ -ಟ್ ಲೆಫ್ಟಿನೆಂಟ್ ಪೂಣ್ಯ ನಂಜಪ್ಪ ಮಿಗ್-೨೯ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆ. ಏರ್ ಬಸ್ ಮತ್ತು ಟಾಟಾ ಸಮೂಹದ ಸಹಯೋಗದಲ್ಲಿ ನಿರ್ಮಿಸಲಾದ ಹೊಚ್ಚ ಹೊಸ ಸಿ-೨೯೫ ಸಾರಿಗೆ ವಿಮಾನವೂ
ಈ ಸಂದರ್ಭದಲ್ಲಿ ಪ್ರಪ್ರಥಮ ವಾಗಿ ಹಾರಲಿದೆ. ಈ ವೈಮಾನಿಕ ಪ್ರದರ್ಶನದಲ್ಲಿ ಒಂದು ಮಲ್ಟಿ ರೋಲ್ ಟ್ಯಾಂಕರ್ ಟ್ರಾನ್ಸ್‌ಪೋರ್ಟ್ (ಎಂಆರ್‌ಟಿಟಿ) ವಿಮಾನ ಮತ್ತು ಫ್ರಾನ್ಸ್‌ನ ಎರಡು ರಫರಲ್ ವಿಮಾನಗಳು ಸಹ ಭಾಗವಹಿಸಲಿವೆ.

ಹೀಗೆ ಪ್ರತಿವರ್ಷ ಭಾರತದ ಸಾಂಸ್ಕೃತಿಕ ವೈವಿಧ್ಯ, ಸದೃಢ ಸೈನ್ಯದ ವ್ಯವಸ್ಥೆ, ಅನೇಕತೆಯಲ್ಲಿ ಏಕತೆಯನ್ನು ಸಾರುವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿದ ನೀತಿ ಯನ್ನು ಬಿಂಬಿಸುವ ಗಣರಾಜ್ಯೋತ್ಸವ ಎಂಬ ರಾಷ್ಟ್ರೀಯ ಹಬ್ಬವನ್ನು ಪ್ರತಿಯೊಬ್ಬ ಭಾರತೀಯರೂ ಸಂಭ್ರಮಿಸುತ್ತಾರೆ, ಹೆಮ್ಮೆಯಿಂದ ಆಚರಿಸುತ್ತಾರೆ.

(ಲೇಖಕರು ಭಾರತೀಯ ವಾಯುಪಡೆಯ
ನಿವೃತ್ತ ವಿಂಗ್ ಕಮಾಂಡರ್)