Wednesday, 11th December 2024

ಗಣತಂತ್ರ ದಿನದ ಅತಿಥಿ ಸನ್ಮಾನದ ಪ್ರಸ್ತುತತೆ

ಶಿಶಿರ ಕಾಲ

shishirh@gmail.com

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ನೀವು ಈ ಲೇಖನ ಓದುವಾಗ ಜನವರಿ ೨೬, ಗಣತಂತ್ರ ದಿನ ನಿನ್ನೆಗೆ ಮುಗಿದಿರುತ್ತದೆ. ಪ್ರತೀ
ಗಣರಾಜ್ಯೋತ್ಸವದಲ್ಲಿಯೂ ಹುಟ್ಟುವ ದೇಶಪ್ರೇಮ, ರಾಜಪಥ (ಕರ್ತವ್ಯ ಪಥ) ದಲ್ಲಿ ನಡೆಯುವ ಭವ್ಯ ಪರೇಡ್, ಪ್ರಧಾನಿಯ ಭಾಷಣ ಇತ್ಯಾದಿ ಒಂದು ಕಡೆಯಾಯಿತು.

ಇದರ ಜತೆ ಗಣರಾಜ್ಯೋತ್ಸವಕ್ಕೆ ಈ ದಿನಗಳಲ್ಲಿ ವಿಶೇಷ ಜಿಯೋಪೊಲಿಟಿಕಲ್ ಮಹತ್ವವಿದೆ. ಭಾರತ ಯಾರನ್ನು ಅತಿಥಿಯಾಗಿ ಆಹ್ವಾನಿಸುತ್ತದೆ ಎನ್ನುವುದು ದ್ವಿಪಕ್ಷೀಯ ಸಂಬಂಧದ ಸೂಚಕ ವೆಂದು ಪರಿಗಣಿಸಲಾಗುತ್ತದೆ. ಈಗೀಗ ಇದನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತವೆ. ಅತಿಥಿ ಯಾರು, ಅದು ಏನನ್ನು ಸಾರುತ್ತದೆ ಎನ್ನುವ ವಿವರಣೆ ಗಳನ್ನು ಜಗತ್ತಿನ ಎಲ್ಲ ಟಾಪ್ ಪತ್ರಿಕೆಗಳು, ಟಿವಿ ವಾಹಿನಿಗಳು ವಿಶ್ಲೇಷಿಸುತ್ತವೆ. ಇದು ಜಗತ್ತಿನ ಬಹುತೇಕ ರಾಷ್ಟ್ರಗಳ ನಾಯಕರ ಗಮನ ಸೆಳೆಯುತ್ತದೆ. ದಶಕದಿಂದೀಚೆ ಭಾರತ ತೀರಾ ಕರಾರು ವಾಕ್ಕಾಗಿ ಜಾಗತಿಕ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಮಹತ್ವ ಇನ್ನಷ್ಟು ಹೆಚ್ಚಿದೆ. ಇದು ಭಾರತದ ಅಂತಾರಾಷ್ಟ್ರೀಯ ಸಂಬಂಧದ ದಿಶೆಯ ಪ್ರತೀಕವಾಗಿದೆ.

ಆ ಕಾರಣಕ್ಕೆ ಇದನ್ನು ವಕ್ರದೃಷ್ಟಿಯಿಂದ ನೋಡುವ, ತಗಾದೆ ಎತ್ತುವ ದೇಶಗಳೂ ಅಕ್ಕಪಕ್ಕದಲ್ಲಿವೆ. ಹಿಂದಿನ ಗಣರಾಜ್ಯೋತ್ಸವಗಳಲ್ಲಿ ಕೆಲವೊಂದಿಷ್ಟು ನಾಯಕರನ್ನು ಆಹ್ವಾನಿಸಿದ್ದು ಒಂದಿಷ್ಟು ಇತಿಹಾಸವನ್ನು ಕೂಡ ಕೆಣಕುತ್ತದೆ. ೧೯೪೭ರಲ್ಲಿ ಮೊದಲ ಭಾರತ ಪಾಕಿಸ್ತಾನ ಯುದ್ಧ ಕಾಶ್ಮೀರ ಕ್ಕೋಸ್ಕರ ನಡೆದಿತ್ತು. ಇದಾದ ಮೇಲೆ, ಅಲ್ಲಿಂದ ಇಲ್ಲಿಯವರೆಗೂ ಪಾಕಿಸ್ತಾನ ಒಂದಿಂದು ಅಧಿಕಪ್ರಸಂಗ ತನ ಮಾಡಿಕೊಂಡೇ ಬಂದಿದೆ. ಇದಾದ ನಂತರ ನಡೆದ ಯುದ್ಧ ೧೯೬೫ ರದ್ದು. ಈ ಎರಡು ಯುದ್ಧದ ನಡುವೆ ನಡೆದ ಸರ್ಕಸ್ಸುಗಳು, ರಾಜಕಾರಣ, ಪಾಶ್ಚಿಮಾತ್ಯ ದೇಶಗಳು ಪಾಕಿಸ್ತಾನದ ಕಡೆ ಹೋಗಿ ನಿಂತಿದ್ದು ಇವೆಲ್ಲ ಮರೆಯಬಾರದ ಇತಿಹಾಸ.

ಈ ಸಮಯದಲ್ಲಿ ಪಾಕಿಸ್ತಾನ ಹಲವು ರೀತಿಯಲ್ಲಿ  ಭಾರತದ ಶತ್ರುವಿನಿಂತೆ ಹೊರಹೊಮ್ಮಿದೆ. ಇಷ್ಟೊಂದು  ಬೆಳವಣಿಗೆಯಾಗುವಾಗ, ಆ ಎಲ್ಲ ವೈಷಮ್ಯ ಬೆಳವಣಿಗೆಯ ಬಗ್ಗೆ ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರುಗೆ ಅಂದಾಜು, ಸತ್ಯಾಸತ್ಯಗಳ ಅರಿವು ಚೆನ್ನಾಗಿಯೇ ಇತ್ತು. ಅದೆಲ್ಲದರ ನಡುವೆ ೧೯೫೫ ರಲ್ಲಿ ನೆಹರು ಗಣರಾಜ್ಯೋತ್ಸವಕ್ಕೆ ಕರೆದದ್ದು ಮಾತ್ರ ಅಂದಿನ ಪಾಕಿಸ್ತಾನದ ಗವನರ್ರ‍ ಜನರಲ್ ಮಲಿಕ್ ಘುಲಾಮ್ ಮೊಹಮ್ಮದ್‌ ನನ್ನು. ಅದಾದ ನಂತರ ೧೯೬೩-೬೪ ರಲ್ಲಿ ಸಂಬಂಧವನ್ನು ಸುಧಾರಿಸಲು ಪ್ರಯತ್ನಗಳು ನಡೆದವು. ನೆಹರು ೧೯೬೪ ರಲ್ಲಿ ತೀರಿಕೊಂಡದ್ದು. ಅದಾದ ನಂತರ, ಲಾಲ್ ಬಹದ್ದೂರ್ ಶಾಸ್ತ್ರಿ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು, ಕೆಲ ದಿನ ಗುಲ್ಜಾರಿಲಾಲ್ ನಂದ ಪ್ರಧಾನಿಯಾಗಿದ್ದರು.

ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಆಹಾರ ಮತ್ತು ಕೃಷಿ ಮಂತ್ರಿ ರಾಣಾ ಅಬ್ದುಲ್ ಹಮೀದ್ ನನ್ನು ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆತ ಬಂದು ಹೋದ ಏಳೇ ತಿಂಗಳಲ್ಲಿ ಇನ್ನೊಂದು ಭಾರತ ಪಾಕಿಸ್ತಾನ ಯುದ್ಧ ನಡೆಯಿತು. ಅದಾದ ಮೇಲೆ ಪಾಕಿಸ್ತಾನದ
ವರನ್ನು ಅತಿಥಿಯಾಗಿ ಗಣರಾಜ್ಯೋತ್ಸವಕ್ಕೆ ಆಹ್ವಾನಿಸುವ ಕ್ರಮ ನಿಂತಿದೆ. ಆದರೆ ಇಂದಿಗೂ ಆ ಇಬ್ಬರನ್ನು ಅಂದು ಕರೆಸಿದ್ದು ಏಕೆ, ಎಷ್ಟು ಸಮಂಜಸ ಎನ್ನುವುದರ ಬಗ್ಗೆ ಪ್ರಶ್ನೆಗಳಿವೆ. ಪಾಕಿಸ್ತಾನದ ಜೊತೆ ಸ್ನೇಹ ಬೆಳೆಸಲು, ಸಂಬಂಧ ಸರಿಮಾಡಿಕೊಳ್ಳಲು ಬಹುಶಃ ಎಲ್ಲ ಪ್ರಧಾನಿಗಳೂ ಪ್ರಯತ್ನ
ನಡೆಸಿzರೆ, ಅಷ್ಟೇ ಪ್ರಮಾಣದ ಭಂಗವಾಗಿದೆ. ಪಾಕಿಸ್ತಾನ ಹೊಟ್ಟೆಗಿಲ್ಲದಾಗಲೆಲ್ಲ ಶಾಂತಿ ಮಂತ್ರ ಪಠಿಸಿದೆ. ಈಗ ಸಧ್ಯ ಆರ್ಥಿಕವಾಗಿ ಅತ್ಯಂತ ಕಷ್ಟದಲ್ಲಿದೆ, ಮತ್ತೊಮ್ಮೆ ಕೆಲ ದಿನಗಳಿಂದ ಶಾಂತಿ, ಸ್ನೇಹ, ಪ್ರೀತಿ ಎನ್ನುವ ಮಾತುಗಳು ಕೇಳಿ ಬರುತ್ತಿದೆ – ಭೂತದ ಬಾಯಿಂದ ಭಾಗವದ್ಗೀತೆಯಂತೆ.

ಈ ಅತಿಥಿಯ ಆಯ್ಕೆ ಮತ್ತು ಆಹ್ವಾನದಲ್ಲಿ ಇನ್ನೊಂದಿಷ್ಟು ಅಪಸವ್ಯಗಳು ಕೂಡ ನಡೆದಿವೆ. ಭಾರತ ಬ್ರಿಟಿಷರ ಅಮಾನವೀಯ, ಕ್ರೂರ ಆಡಳಿತದಿಂದ ಮುಕ್ತವಾಗಿ ದಶಕವೂ ಕಳೆದಿರಲಿಲ್ಲ. ಆದರೆ ಅಂದಿನ ಪ್ರಧಾನಿ ನೆಹರೂವಿಗೆ ಇಂಗ್ಲೀಷರೆಂದರೆ ಅದೇನೋ ಒಲವು. ಈ ಒಲವಿನಿಂದಾಗಿಯೇ ಅಂದಿನ ಯುನೈಟೆಡ್ ಕಿಂಗ್ಡಮ್‌ನ ಚಾನ್ಸಲರ್ ಆಫ್ ದಿ ಎಕ್ಸ್ಚೆಕ್ಕರ್ ಆರ್.ಎ.ಬಟ್ಲರ್ ಅನ್ನು ೧೯೫೬ರ ಗಣರಾಜ್ಯೋತ್ಸವದ ಅತಿಥಿಯಾಗಿ ನೆಹರು ಆಹ್ವಾನಿಸಿದ್ದರು, ಕೂಡ್ರಿಸಿ ತಂಪು ಪಾನೀಯ ಕೊಟ್ಟಿದ್ದರು. ಇದು ಅಷ್ಟಕ್ಕೇ ನಿಲ್ಲಲಿಲ್ಲ. ೧೯೫೯ರಲ್ಲಿ ರಾಜಕುಮಾರ ಫಿಲಿಪ್ ಅನ್ನು ಕರೆಸಿದ್ದಾಯಿತು. ಅದಾದ ಎರಡು ವರ್ಷದ ನಂತರ ರಾಣಿ ಎಲಿಜಬೆತ್ ಅನ್ನು ಕರೆಸಿದ್ದೂ, ಕಾಣಿಕೆ ಕೊಟ್ಟದ್ದು ಕೂಡ ನಡೆಯಿತು. ನಂತರ ೧೯೬೪ರಲ್ಲಿ ಲೂಯಿಸ್ ಮೌಂಟ್ ಬ್ಯಾಟನ್ ಅನ್ನೂ ಕರೆಸಿದ್ದು ಕೂಡ ನೆಹರು ಚಾಚಾ ಅವರೇ.

ಸ್ವಾತಂತ್ರ್ಯಕ್ಕೆ ಭಾರತೀಯರು ಪಟ್ಟ ಕಷ್ಟ, ಘೋರ ಹಿಂಸೆ ಆಗಿನ್ನೂ ಹಸಿ ಹಸಿಯಾಗಿಯೇ ನೆನಪಿತ್ತು. ಸ್ವಾತಂತ್ರ್ಯ ಸಿಕ್ಕಿ ನೆಟ್ಟಗೆ ಇಪ್ಪತ್ತೈದು ವರ್ಷ ಕಳೆದಿಲ್ಲ, ಅದರೊಳಗೆ ನಾಲ್ಕು ಮಹೋನ್ನತ ಬ್ರಿಟಿಷರನ್ನು ಭಾರತಕ್ಕೆ, ಅದರಲ್ಲಿಯೂ ಗಣರಾಜ್ಯೋತ್ಸವಕ್ಕೆ ಕರೆಸಿ ಆ ಮೂಲಕ ಸನ್ಮಾನಿಸಿದ್ದು ಎಷ್ಟು
ಸರಿಯೆನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಂದಿನ ಬೋರಿಸ್ ಜಾನ್ಸನ್, ಋಷಿ ಸುನಕ್ ಮೊದಲಾದವರನ್ನು ಕರೆಸಿದಂತಲ್ಲ ಅಂದಿನ ಕಾಲ ಮತ್ತು ಸ್ಥಿತಿಯಲ್ಲಿ ಅವರನ್ನೆಲ್ಲ ಕರೆಸುವುದು. ಆ ಕಾರಣಕ್ಕೆ ಇಂತಹ ಇತಿಹಾಸವನ್ನು ಪುನರ್ ಪ್ರಸ್ತಾಪಿಸುತ್ತಿರಬೇಕು ಮತ್ತು ಈಗ ಪ್ರಶ್ನಿಸಲೇಬೇಕು. ಗಣರಾಜ್ಯೋತ್ಸವದ ಅತಿಥಿಗಳ ಇತಿಹಾಸದಲ್ಲಿ ಇಂತಹ ಕೆಲವು ಪ್ರಶ್ನಿಸಲೇಬೇಕಾದ ಅಪಸವ್ಯಗಳು ನಡೆದಿವೆ.

ಇನ್ನು ಕೆಲವು ಅಷ್ಟು ಮಹತ್ವದ್ದಲ್ಲದ ದೇಶದ ಪ್ರಧಾನಿ, ಅಧ್ಯಕ್ಷರನ್ನು ಕರೆಸಿದ ಉದಾಹರಣೆಗಳಿವೆ. ಇಂಥವರನ್ನೆಲ್ಲ ಅದೇಕೆ ಕರೆಸಿದರೋ ಗೊತ್ತಿಲ್ಲ. ಅವರನ್ನು ಆಹ್ವಾನಿಸುವುದರ ಹಿಂದೆ ಮಹತ್ವಾಕಾಂಕ್ಷೆಯಿದೆಯೇ ಎಂದು ಪ್ರಶ್ನಿಸಿದರೆ ಉತ್ತರವೇ ಸಿಗುವುದಿಲ್ಲ. ಚಳ್ಳೆ-ಪಿಳ್ಳೆ ದೇಶಗಳ, ಜಾಗತಿಕ
ಸ್ಥರದಲ್ಲಿ ಆ ಸಮಯದಲ್ಲಿ ಎಂಟಾಣೆ ಮಹತ್ವದ್ದಲ್ಲದ ದೇಶಗಳ ಅಧ್ಯಕ್ಷರನ್ನು ಕರೆಸಿದ ಉದಾಹರಣೆ ಸಾಲಲ್ಲಿದೆ. ಇದೆಲ್ಲ ಒಂದು ಸಮಯದಲ್ಲಿ ನಮ್ಮ ಗಣರಾಜ್ಯೋತ್ಸವದ ಆಹ್ವಾನದ ಮಹತ್ವವನ್ನೇ ಕಡಿಮೆ ಮಾಡಿತ್ತು. ಆ ದೇಶದ ಜತೆ ದ್ವಿಪಕ್ಷೀಯ ಸಂಬಂಧ ಇಂಥವರನ್ನು ಆಹ್ವಾನಿಸುವುದಕ್ಕಿಂತ ಮೊದಲೂ ಹಾಗೆಯೇ ಇತ್ತು, ನಂತರವೂ ಹಾಗೆಯೇ ಮುಂದುವರಿಯಿತು.

ಇದೆಲ್ಲ ಬದಲಾದದ್ದು ನರಸಿಂಹ ರಾಯರ ಕಾಲದಲ್ಲಿ. ಅವರು ಪ್ರಧಾನಿಯಾಗಿದ್ದಾಗ ಅಂದಿನ ದಕ್ಷಿಣ ಆಫ್ರಿಕಾದ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ಆಹ್ವಾನಿಸಿದ್ದರು. ಇದು ಅಂದಿನ ಕಾಲಕ್ಕೆ ಪುನಹ ಗಣರಾಜ್ಯೋತ್ಸವದ ಆಹ್ವಾನದ ಮಹತ್ವವನ್ನು ಹೆಚ್ಚಿಸಿತ್ತು. ಬ್ರಿಟನ್, ಸಿಂಗಾಪುರ, ಬ್ರೆಝಿಲ್ ದೇಶದ ಅಧ್ಯಕ್ಷ/ಪ್ರಧಾನಿಗಳನ್ನು ಕರೆಸಿ ಈ ಕರೆಯೋಲೆಯ ಮಹತ್ವ ಮತ್ತು ಗೌರವವನ್ನು ಹೆಚ್ಚಿಸಿದ್ದು ನರಸಿಂಹ ರಾಯರು. ಅಲ್ಲಿಂದ ಮುಂದೆ ಭಾರತದ ದ್ವಿಪಕ್ಷೀಯ ಸಂಬಂಧದ ಹರಿವನ್ನು ಈ ಆಹ್ವಾನದಿಂದ ಅಳೆಯುವ ಕಾಲ ಶುರುವಾಯಿತೆಂದು ಹೇಳಬಹುದು.

ಈ ಗಣರಾಜ್ಯೋತ್ಸವದ ಅತಿಥಿಯಾಗಿ ಕರೆಯುವುದರ ಮೂಲಕ ಗೌರವಿಸುವ, ಆ ಮೂಲಕ ಅದನ್ನು ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗಿಸಲು ಬಳಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದು ಇಂದಿನ ಪ್ರಧಾನಿ ಶ್ರೀಯುತ ನರೇಂದ್ರ ಮೋದಿಯವರು. ಮೋದಿಜಿ ಮೊದಲು ಕರೆಸಿದ್ದು ಭೂತಾನಿನ ರಾಜನನ್ನು. ಅದಾದ ನಂತರದ ವರ್ಷದಲ್ಲಿ ಜಪಾನಿನ ಅಧ್ಯಕ್ಷ ಶಿಂಝೋ ಅಬೆಯನ್ನು. ಚೀನಾವನ್ನು ಎಲ್ಲಿ ಬೇಕೋ ಅಲ್ಲಿಡಲು ಮತ್ತು ತಂತ್ರಾಂಶ, ಉತ್ಪಾದನೆಯ ಕಾರಣದಿಂದ ಇದು ತೀರಾ ಮಹತ್ವzಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಜಪಾನ್ ಮತ್ತು ಭಾರತದ ಸಂಬಂಧ ಬಲಿಷ್ಠವಾಗುತ್ತ
ಮುಂದುವರಿದಿದೆ.

ನಂತರ 2005 ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಓಬಾಮಾ ಅವರನ್ನು ಮೋದಿ ಆಹ್ವಾನಿಸಿದ್ದರು. ಇದು ಅತ್ಯಂತ ಚಾಣಾಕ್ಷ ನಡೆಯಾಗಿತ್ತು. ಈ ಸಮಯದ ನಂತರ ಭಾರತ ಮತ್ತು ಅಮೆರಿಕದ ಸಂಬಂಧ ಬಹಳ ಗಟ್ಟಿಯಾಯಿತು. ಅಷ್ಟೇ ಅಲ್ಲ, ಅಮೆರಿಕದ ಸಂಬಂಧ ಪಾಕಿಸ್ತಾನದ ಜತೆ ಹಳಸಲು
ಶುರುವಾಗಿದ್ದು ಕೂಡ ಇದೇ ಸಮಯದಿಂದ. ಪಾಕಿಸ್ತಾನದಲ್ಲಿ ಬಿನ್ ಲಾಡೆನ್ ಸಿಕ್ಕಿ ಕೊಲ್ಲಲ್ಪಟ್ಟ ನಂತರ ಅಮೆರಿಕ ಮತ್ತು ಪಾಕಿಸ್ತಾನದ ಸಂಬಂಧ ಹೆಚ್ಚು ಕಡಿಮೆ ಮುರಿದು ಬಿದ್ದರೂ ಭಾರತದೊಂದಿಗಿನ ಸಂಬಂಧ ಬೆಳೆದದ್ದು ೨೦೧೩ರ ನಂತರ.

ಅಮೆರಿಕ ಪಾಕಿಸ್ತಾನ ಸಂಬಂಧ ಸಂಪೂರ್ಣ ಮುರಿದು ಬಿದ್ದದ್ದು ಟ್ರಂಪ್ ಕಾಲದಲ್ಲಿಯೇ ಆದರೂ ಅದಕ್ಕೆ ಬುನಾದಿ ನಿರ್ಮಾಣವಾಗಿದ್ದು ಒಬಾಮ ಎರಡನೇ ಅವಧಿಯಲ್ಲಿ. ಅದರ ಜತೆ ಭಾರತದ ಜತೆಗಿನ ಸ್ನೇಹ ಆರ್ಥಿಕವಾಗಿ, ಮಿಲಿಟರಿ ಮತ್ತು ತಂತ್ರಾಂಶ ವಿನಿಮಯದಲ್ಲಿ ಗೋಚರವಾಗಿದ್ದು
ಒಬಾಮ ಭಾರತಕ್ಕೆ ಬಂದು ಹೋದ ನಂತರ. ಇದಾದ ನಂತರ ಭಾರತ ಮತ್ತು ಅಮೆರಿಕದ ವ್ಯವಹಾರ ಶೇ. 60ರಷ್ಟು (ವಾರ್ಷಿಕ ನೂರು ಬಿಲಿಯನ್ ಡಾಲರ್‌ನಷ್ಟು) ಹೆಚ್ಚಿತು. ಎರಡೂ ದೇಶಕ್ಕೆ ಒಳ್ಳೆಯದಾಗುವ ಹಲವು ನಿರ್ಧಾರಗಳನ್ನು ಒಬಾಮ ಮತ್ತು ಮೋದಿ ಅಂದು ತೆಗೆದುಕೊಂಡಿದ್ದರು. ಅದರ
ಪರಿಣಾಮ ಸುಮಾರು ಎರಡುನೂರು ಬಿಲಿಯನ್ ಹೆಚ್ಚುವರಿ ವ್ಯವಹಾರ ಭಾರತಕ್ಕೆ ಮುಂದಿನ ಒಂದೂವರೆ ವರ್ಷದಲ್ಲಿ ಹರಿದು ಬಂತು.

ಗಣರಾಜ್ಯೋತ್ಸವಕ್ಕೆ ಆಹ್ವಾನಿಸುವಾಗ ಅನ್ಯ ದೇಶದ ಅಧ್ಯಕ್ಷ/ ಪ್ರಧಾನಿಯ ಜತೆ ಅವರ ಹೆಂಡತಿ, ಪರಿವಾರವನ್ನು ರೆಸುವುದು ಹಿಂದಿನಿಂದ ನಡೆದು ಬಂದ ಕ್ರಮ. ಆದರೆ ಹಾಗೆ ಕರೆಸಿದಾಗ ಅದಕ್ಕೊಂದು ಪರ್ಸನಲ್ ಟಚ್ ಕೊಡುವಲ್ಲಿ ಸಫಲರಾಗಿದ್ದು ಕೂಡ ಮೋದಿಯವರೇ. ಅಂದು ಒಬಾಮಾರ
ಕುಟುಂಬವನ್ನು ಕರೆಸಿದ್ದು, ಸತ್ಕರಿಸಿದ್ದು ವ್ಯಾವಹಾರಿಕವಾಗಿ ಮತ್ತು ವೈಯಕ್ತಿಕವಾಗಿ ಹೇಗೆ ಅಲ್ಲಿನ ಅಧ್ಯಕ್ಷರ ಮೇಲೆ ಪರಿಣಾಮ ಬೀರಿತು ಎನ್ನುವು ದನ್ನು ಇತ್ತೀಚೆ ಮಿಚೆಲ್ ಒಬಾಮ ಒಂದು ಇಂಟರ್‌ವ್ಯೂನಲ್ಲಿ ಏಳು ವರ್ಷದ ನಂತರ ಹೇಳಿಕೊಳ್ಳುತ್ತಾಳೆ ಎಂದರೆ ಅದರ ಇಂಪ್ಯಾಕ್ಸ್ ಹೇಗಿದ್ದಿರಬೇಕು ಎಂದು ಅಂದಾಜಿಸಿಕೊಳ್ಳಬಹುದು. ದೇಶದೇಶಗಳ ಸಂಬಂಧದಲ್ಲಿ ದೇಶಗಳ ಮಹೋನ್ನತ ನಾಯಕರ ವೈಯಕ್ತಿಕ ಸಂಬಂಧ ಎಷ್ಟು ಮಹತ್ವದ್ದಾಗಿರುತ್ತದೆ ಎನ್ನುವುದನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ.

ಒಬಾಮಾ ನಂತರ ಸೌದಿಯ ಅಂದಿನ ಕ್ರೌನ್ ಪ್ರಿನ್ಸ್ ಶೇಯ್ಕ ಜಯೆಡ್ ಅನ್ನು ಆಹ್ವಾನಿಸಲಾಗಿತ್ತು. ಇಂದು ದಿಯ ಜತೆಗಿನ ಸಂಬಂಧ ಹೇಗಿದೆ ಯೆನ್ನುವ ಅರಿವು ನಿಮಗಿದೆ. ನಂತರ 2018 ರಲ್ಲಿ ಬರೋಬ್ಬರಿ ಹತ್ತು ದೇಶದ ಪರಮೋಚ್ಚ ನಾಯಕರನ್ನು ಆಹ್ವಾನಿಸಲಾಯಿತು. ಇದು ಖಂಡಿತ ಒಂದು ಮಾಸ್ಟರ್ ಸ್ಟ್ರೋಕ್. ಈ ಹತ್ತೂ ದೇಶಗಳು ವ್ಯಾವಹಾರಿಕವಾಗಿ ಪಾಕಿಸ್ತಾನ ಮತ್ತು ಚೀನಾದ ಮೇಲೆ ಒತ್ತಡ ಹೇರಲು, ನಮ್ಮ ಪಾರ್ಟಿಗೆ ಆ ದೇಶಗಳನ್ನು ಸೇರಿಸಿಕೊಂಡ ದ್ದನ್ನು ಅನುಮೋದಿಸಲು ಬಳಸಿಕೊಂಡದ್ದು ನಿಜವಾಗಿಯೂ ಒಂದು ಚಾಣಾಕ್ಷ ನಡೆ.

ಈಗ ಕೋವಿಡ್‌ನ ನಂತರ ಮೊದಲ ಬಾರಿಗೆ ಈಜಿಪ್ಟ್ ನ ಅಧ್ಯಕ್ಷರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿ ಸತ್ಕರಿಸಲಾಗಿದೆ. ಕಾಲ ಕಳೆದಂತೆ ಈ ಆಹ್ವಾನ ಕೇವಲ ಅತಿಥಿ ಸತ್ಕಾರ, ಊಟ ಪಾರ್ಟಿಗಳಿಗಷ್ಟೇ ಸೀಮಿತವಾಗಿಲ್ಲ. ಚಿಕ್ಕದಾಗಿ ಈಜಿಪ್ಟ್ ಅಧ್ಯಕ್ಷರನ್ನು ಕರೆಸಿದ್ದು ಏಕೆ, ಅದರ ಮಹತ್ವ ವೇನು, ಅದರ ಹಿಂದಿನ ಕಥೆಯೇನೆಂದು ವಿಶ್ಲೇಷಿಸೋಣ. ಈಗ ಸದ್ಯ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿರುವ ಮುಸ್ಲಿಂ ದೇಶ ಪಾಕಿಸ್ತಾನ ಮಾತ್ರವಲ್ಲ. ಅದರಷ್ಟೇ ಅಥವಾ ಅದಕ್ಕಿಂತ ಕಷ್ಟದಲ್ಲಿರುವ ರಾಷ್ಟ್ರ ಈಜಿಪ್ಟ್. ಅಲ್ಲಿನ ಪೌಂಡ್‌ನ ಬೆಲೆ ಮಾರ್ಚ್ 2022ರಿಂದ ಪಾತಾಳದತ್ತ ನಿರಂತರವಾಗಿ ಇಳಿಯುತ್ತಲೇ ಇದೆ.

ಅಲ್ಲಿನ ಹಣದುಬ್ಬರ ವರ್ಷದಿಂದೀಚೆ ಹೆಚ್ಚಿ ವಸ್ತುಗಳು ಎಷ್ಟು ತುಟ್ಟಿಯಾಗಿವೆಯೆಂದರೆ ಅದರ ವಿವರಣೆಯೇ ಒಂದು ಲೇಖನಕ್ಕಾದೀತು. ಚಿಕ್ಕದಾಗಿ
ಹೇಳಬೇಕೆಂದರೆ ಅಲ್ಲಿನ ವಸ್ತುಗಳ ಬೆಲೆ ಕಳೆದೊಂದು ವರ್ಷದಲ್ಲಿ ಏಳು ಪಟ್ಟು ಹೆಚ್ಚಿದೆ. ತೀರಾ ಅವಶ್ಯಕ ಆಹಾರ ವಸ್ತುಗಳ ಬೆಲೆ ಐದುಪಟ್ಟು ಹೆಚ್ಚಿದೆ. ಈಜಿಪ್ಟ್‌ನಲ್ಲಿನ ಸ್ಥಿತಿಯನ್ನು ವಿವರಿಸುವಾಗ ನ್ಯೂಯಾರ್ಕ್ ಟೈಮ್ಸ್ ಅಲ್ಲಿ ಕೋಳಿಮೊಟ್ಟೆಯನ್ನು ಖರೀದಿಸುವುದು ಇಂದು ಒಂದು ಲಕ್ಸುರಿ, ಉಳಿದ ದೇಶಗಳಲ್ಲಿ ಕಾರು ಖರೀದಿಸಿದಷ್ಟು ಐಷಾರಾಮಿ ಎಂದು ವರದಿ ಮಾಡಿತ್ತು. ಕೋವಿಡ್ ನ ನಂತರ ಅಲ್ಲಿನ ಪ್ರಮುಖ ಆದಾಯದಂದಾದ ಪ್ರವಾಸೋ ದ್ಯಮ ನೆಲಕಚ್ಚಿದ್ದು ಈಗೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ.

ಹೀಗಿರುವಾಗ ಅಂತಹ ದಿವಾಳಿಯ ಅಂಚಿನ ದೇಶದ ಅಧ್ಯಕ್ಷನನ್ನು ಕರೆಸಿದ್ದಾದರೂ ಏಕೆ ಎನ್ನುವ ಸಹಜ ಪ್ರಶ್ನೆ ಎದುರಾಗುತ್ತದೆ. ಇಷ್ಟು ಸಂಕಷ್ಟಕ್ಕೆ ಸಿಲುಕಿದ್ದು ಹಿಂದಿನ ವರ್ಷದಿಂದ ಈಚೆ. ಈಜಿಪ್ಟ್ ಮುಸ್ಲಿಮ್ ರಾಷ್ಟ್ರಗಳಲ್ಲಿಯೇ ವಿಶೇಷ. ಭಯೋತ್ಪಾದನೆಯನ್ನು ವಿರೋಧಿಸುವ ಮತ್ತು ಆ ನಿಟ್ಟಿನಲ್ಲಿ
ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಏಕೈಕ ಇಸ್ಲಾಮಿಕ್ ರಾಷ್ಟ್ರ ಈಜಿಪ್ಟ್. ಭಾರತದ ಸಂಬಂಧ ಗಲ ರಾಷ್ಟ್ರಗಳಾದ ಸೌದಿ, ಬಹರೇನ್ ಮೊದಲಾ ದವುಗಳ ಜತೆ ತೀರಾ ಒಳ್ಳೆಯದಿದೆ. ಈಗ ಅದರ ಜೊತೆ ಈಜಿಪ್ಟ್ ದೇಶದ ಜತೆಯೂ ಕಳೆದ ಏಳು ವರ್ಷದಿಂದ ಚೆನ್ನಾಗಿ ನಡೆದುಕೊಂಡು ಬಂದಿದೆ.

ಈಜಿಪ್ಟ್ ಮತ್ತು ಅಲ್ಲಿನ ಅಧ್ಯಕ್ಷ ಅಬ್ದೆಲ್ ಸಿಸಿ ತಾವು ನಂಬಿಕೆಗೆ, ವಿಶ್ವಾಸಕ್ಕೆ ಅರ್ಹ ಎಂದು ಅವರ ಭಯೋತ್ಪಾದನೆಯೆಡೆಗಿನ ನಿರ್ಧಾರಗಳಿಂದ ಸಾಬೀತಾಗಿದೆ. ಒಐಸಿ – ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕಂಟ್ರೀಸ್ ಒಕ್ಕೊಟದಲ್ಲಿಯೇ ಅತ್ಯಂತ ಗಟ್ಟಿಯಾಗಿ ಭಯೋತ್ಪಾದನೆಯನ್ನು ಮತ್ತು ಪಾಕಿಸ್ತಾನವನ್ನು ಖಂಡಿಸುವ ದೇಶವೆಂದರೆ ಈಜಿಪ್ಟ್. ಅಷ್ಟೇ ಅಲ್ಲ, ಇಂತಹ ಕಷ್ಟದ ಸ್ಥಿತಿಯಲ್ಲಿಯೂ ಭಾರತದ ಪರವಾಗಿ ಒಐಸಿಯಲ್ಲಿ ಧ್ವನಿ ಎತ್ತಿದ ರಾಷ್ಟ್ರವೆಂದರೆ ಈಜಿಪ್ಟ್. ಸದ್ಯ ಅಲ್ಲಿನ ಸ್ಥಿತಿ ಹಾಗಿರಬಹುದು, ಈಗ ಕಷ್ಟದಲ್ಲಿದೆ ಎಂದು ಭಾರತ ಕೈ ಬಿಟ್ಟಿಲ್ಲ. ಬದಲಿಗೆ ಅಲ್ಲಿನ ಅಧ್ಯಕ್ಷರನ್ನು
ಗೌರವಾನ್ವಿತ ಗಣರಾಜ್ಯೋತ್ಸವಕ್ಕೆ ಕರೆಸಿದೆ. ಇದೆಲ್ಲದರ ನಡುವೆ ಚೀನಾ ತನ್ನ ಸ್ವಾರ್ಥಕ್ಕಾಗಿ ಈಜಿಪ್ಟ್‌ನ ಸಹಾಯಕ್ಕೆ ಪೈಪೋಟಿಗಿಳಿದಿದೆ. ಆದರೆ ಅಧ್ಯಕ್ಷ ಅಬ್ದೆಲ್ ಸಿಸಿ ಯ ಒಲವು ಮಾತ್ರ ಭಾರತದತ್ತ ಹೆಚ್ಚಿದೆ.

ಅಮೆರಿಕಕ್ಕೂ ಚೀನಾವನ್ನು ಈಜಿಪ್ಟಿನಿಂದ ಹೊರಗಿಡುವುದೇ ಸರಿಯೆನಿಸುತ್ತದೆ. ಆ ಕಾರಣಕ್ಕೆ ಐಎಂಎಫ್ ಈಜಿಪ್ಟ್‌ಗೆ ೩ ಬಿಲಿಯನ್ ಡಾಲರ್ ಸಹಾಯ ಮಾಡಿದೆ. ಅಲ್ಲದೆ ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಈಜಿಪ್ಟ್‌ನಲ್ಲಿ ಆಹಾರ ಬಿಕ್ಕಟ್ಟು ಎದುರಾದಾಗ ೬೧ ಸಾವಿರ ಟನ್ ನಷ್ಟು ಗೋಧಿ ಯನ್ನು ಭಾರತ ಈಜಿಪ್ಟ್‌ಗೆ ನೀಡಿದೆ. ಅದರ ಜತೆ ಹಲವು ಆರ್ಥಿಕ ನೆರವುಗಳನ್ನು ಕೂಡ ಭಾರತ ನೀಡುತ್ತಿದೆ. ಹೀಗೆ ಚೀನಾಕ್ಕೆ ಮಾರಾಟವಾಗಿಬಿಡ
ಬಹುದಾಗಿದ್ದ ದೇಶವನ್ನು ಸೌದಿ, ಭಾರತ, ಅಮೆರಿಕಾ ಮೊದ ಲಾದ ದೇಶಗಳು ಕಾಪಾಡಿಕೊಂಡದ್ದು ಇಲ್ಲಿ ತಿಳಿಯಬೇಕು.

ಈಜಿಪ್ಟ್ ಈಗ ಸಂಕಷ್ಟದಲ್ಲಿದೆ. ಸ್ನೇಹಿತ ಕಷ್ಟದಲ್ಲಿದ್ದಾಗ ಕೈಬಿಡದೆ ಹಿಡಿದೆತ್ತುವ ಕೆಲಸವನ್ನು ಭಾರತ ಮಾಡುತ್ತಿದೆ. ಇದು ಖಂಡಿತ ಹೆಮ್ಮೆ ಪಡಬೇಕಾ ದದ್ದು. ಮಾತ್ರವಲ್ಲ, ಇದು ಮುಂದಿನ ದಿನಗಳಲ್ಲಿ ಒಐಸಿಯಲ್ಲಿ ಭಾರತದ ಪ್ರಾಬಲ್ಯಕ್ಕೆ ಸಹಾಯವಾಗುತ್ತದೆ ಕೂಡ. ಇದು ಹಿನ್ನೆಲೆಯ ಲೆಕ್ಕಾಚಾರ. ಈಜಿಪ್ಟ್ ಕಷ್ಟದಲ್ಲಿಯೂ ನಂಬಿಕೆಯನ್ನು ಉಳಿಸಿಕೊಂಡಿರುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ತೈಲ ಸಾಮ್ರಾಜ್ಯದ ಮೇಲಿನ ಹಿಡಿತ, ಪ್ರಾಬಲ್ಯದ ಜತೆ ಭಯೋತ್ಪಾದನೆಯ ನಿರ್ಮೂಲನೆಯಲ್ಲಿ ಮತ್ತು ಮಿಲಿಟರಿ ಕಾರಣಗಳಿಂದಾಗಿ ಈಜಿಪ್ಟ್ ಮಹತ್ವದ ದೇಶವಾಗಿದೆ. ಈಜಿಪ್ಟನ್ನು ಚೀನಾ ಪ್ರತಿಕೂಲ ಸ್ವಾಧೀನ (hostile takeover) ಮಾಡಿಕೊಳ್ಳುವುದನ್ನು ತಪ್ಪಿಸುವುದು ಎಲ್ಲರ ಅವಶ್ಯಕತೆ ಕೂಡ ಹೌದು. ಭಾರತ ಸುಮ್ಮನೆ ಕೂತಲ್ಲಿ ವಿಶ್ವಗುರುವಾಗಿಬಿಡುವುದಿಲ್ಲ.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಸಿಸಿ ಆಹ್ವಾನಿತರಾಗಿ ಬರುವ ಹಿನ್ನೆಲೆಯಲ್ಲಿ ಇದೆಲ್ಲ ವಿಚಾರಗಳಿವೆ.

 
Read E-Paper click here