Saturday, 23rd November 2024

ಮೀಸಲಾತಿ ಟಾನಿಕ್ ರೂಪದಲ್ಲಿರಲಿ

ದಾಸ್ ಕ್ಯಾಪಿಟಲ್‌

dascapital1205@gmail.com

ತಮ್ಮ ಜಾತಿ/ಸಮುದಾಯಗಳ ವೋಟ್‌ಬ್ಯಾಂಕ್ ಮೂಲಕ ಚುನಾಯಿತರಾದ ಜನಪ್ರತಿನಿಧಿಗಳಲ್ಲಿ ಕೆಲವರು ಸಚಿವಗಿರಿಗಾಗಿ ಬ್ಲ್ಯಾಕ್‌ಮೇಲ್ ಮಾಡುವುದು, ಬಂಡಾಯ ಏಳುವುದು, ಸರಕಾರವನ್ನು ಉರುಳಿಸಲು ಮತ್ತು ಕಟ್ಟಲು ಯತ್ನಿಸುವುದು, ಸಮುದಾಯವನ್ನು ಪ್ರಚೋದಿಸುವುದನ್ನು ನೋಡಿದ್ದೀರಿ. ಇವರಿಗೆ ಅಂಥ ಸಮುದಾಯ ದವರ ಜತೆಜತೆಗೆ, ಅವರ ಮಠಾಧಿಪತಿ ಗಳೂ ಬೆಂಬಲವಾಗಿ ನಿಲ್ಲುವುದಿದೆ. ಪಕ್ಷ ರಾಜಕೀಯದ ದುಷ್ಟಮುಖವಿದು.

ಅಧಿಕಾರದ ಹಪಾಹಪಿ ಮನುಷ್ಯನನ್ನು ಯಾವ ಹಂತಕ್ಕೂ ಇಳಿಸುತ್ತದೆಂಬುದಕ್ಕೆ ಕರ್ನಾಟಕದ ಇಂದಿನ ರಾಜಕೀಯ ಪರಿಸ್ಥಿತಿ ಸಾಕ್ಷಿ. ಘಟನೆಯೊಂದನ್ನು ನೆನಪಿಸುತ್ತೇನೆ: ‘ನಮ್ಮ ಸಮುದಾಯದ ಜನಪ್ರತಿನಿಽಗಳಿಗೆ ಮಂತ್ರಿಸ್ಥಾನ ಕೊಡದಿದ್ದರೆ ನೀವು ನಮ್ಮ ನಿರ್ಲಕ್ಷ್ಯಕ್ಕೆ ಒಳಗಾಗುತ್ತೀರಿ, ನಾವು ನಿಮ್ಮನ್ನು ಕೈಬಿಡಬೇಕಾಗುತ್ತದೆ’ ಎಂಬ ಸ್ವಾಮೀಜಿಯೊಬ್ಬರ (ಇವರು ಸಿದ್ದರಾಮಯ್ಯ ನವರನ್ನು ‘ಯೋಗರಾಮಯ್ಯ’ ಎಂದ ಸ್ವಾಮೀಜಿ) ಮಾತಿಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಒಮ್ಮೆಲೇ ಗರಂ ಆಗಿ, ‘ನೀವು ಹೀಗೆಲ್ಲ ಮಾತಾಡುವುದು ಶೋಭೆಯಲ್ಲ’ ಎಂದು ಹೇಳಿ ಸಭೆಯನ್ನು ತೊರೆಯುವ ಮಾತಾಡಿದರೂ ಹಾಗೆಮಾಡದೆ ಆ ಸ್ವಾಮೀಜಿ ಯ ಕಾಲುಮುಟ್ಟಿ ನಮಸ್ಕರಿಸಿ ಅಲ್ಲೇ ಕುಳಿತರು.

ರಾಜಪೀಠವೂ ಯತಿಪೀಠಕ್ಕೆ ಬಾಗುವುದಾದರೂ, ತನ್ನ ಘನತೆ ಕುಂದದಂತೆ ಎಚ್ಚರ ವಹಿಸಬೇಕಾದ್ದು ಯತಿಪೀಠದ ಜವಾಬ್ದಾರಿ. ಅಷ್ಟಕ್ಕೂ, ಲೌಕಿಕದ ಬಗ್ಗೆ ಮಾತಾಡುವುದು ಯತಿಗಳಿಗೆ ಶೋಭೆಯೇ ಅಲ್ಲ. ಅದರಲ್ಲೂ ಮಠಾಧಿಪತಿಯಾಗಿ ತಮ್ಮ ಸಮು ದಾಯದ ಪ್ರತಿನಿಧಿಯಾಗಿ ಮಾತಾಡುವುದು ಹಿತವಲ್ಲ. ಲೌಕಿಕ ಬಂಧನಗಳಿಂದ ಮುಕ್ತರಾಗಿ ಸಂನ್ಯಾಸ ಸ್ವೀಕರಿಸಿ, ಸಮಾಜದ ಕಣ್ಣಲ್ಲಿ ಜಾತ್ಯತೀತರೆಂದೇ ಕಂಡರಿಸಿದ ಸ್ವಾಮೀಜಿಗಳು ತಮ್ಮ ಜಾತಿ/ಸಮುದಾಯವನ್ನು ಪ್ರತಿನಿಧಿಸುತ್ತ ಮೀಸಲಾತಿಗಾಗಿ ಆಗ್ರಹಿಸುವುದೇ ಒಂಥರಾ ಅಸಹ್ಯವೆನಿಸುತ್ತದೆ.

‘ಈ ಸಮಾಜ ಜಾತ್ಯತೀತವಾಗಬೇಕು’ ಎಂದೇ ಉಪದೇಶಿಸುವ ಸ್ಥಾನದಲ್ಲಿದ್ದೂ ಜಾತಿಮೋಹ ಬಿಡಲು ಸಾಧ್ಯವಾಗದ ಸ್ವಾಮೀಜಿ ಗಳಿಗೆ ಕೇಸರಿ ಧಾರಣೆಯ ನೈತಿಕತೆಯಾದರೂ ಹೇಗೆ ಸಾಧ್ಯ? ಅವರು ಜಾತ್ಯತೀತರಾಗಲು ಹೇಗೆ ಸಾಧ್ಯ? ಮೀಸಲಾತಿ ಹೋರಾಟ ವೆಂಬುದು ಸಮಾಜವನ್ನು ಜಾತಿಯಾಧಾರಿತವಾಗಿ ಒಡೆದು ನಮ್ಮೊಳಗಿನ ಬಾಂಧವ್ಯವನ್ನು ನಾಶಮಾಡುತ್ತದೆ. ಇದಕ್ಕೆ ೨ ತೆರನಾದ ಪರಿಹಾರಗಳು ಸಾಧ್ಯವಿದೆ. ಒಂದು- ನಾವೆಲ್ಲರೂ ಜಾತಿಯನ್ನು ಬಿಡಬೇಕು; ಎರಡು- ಬ್ರಾಹ್ಮಣರೂ ಸೇರಿದಂತೆ ಎಲ್ಲ ಜಾತಿ/ಸಮುದಾಯಗಳನ್ನು ಸರಕಾರವೇ ಒಬಿಸಿ ವರ್ಗಕ್ಕೆ ಸೇರಿಸಬೇಕು.

ಬ್ರಾಹ್ಮಣರನ್ನು ಜನರಲ್ ಮೆರಿಟ್ ವರ್ಗಕ್ಕೆ ಸೇರಿಸಿದ್ದರಿಂದ ಕಡುಬ್ರಾಹ್ಮಣನೂ ಎಲ್ಲ ಬಗೆಯ ಮೀಸಲಾತಿಯಿಂದ ವಂಚಿತ ನಾಗುವುದು ಆಗ ತಪ್ಪುತ್ತದೆ. ಲೋಕಹಿತಕ್ಕೆ ಅಗತ್ಯವಾದ ಮೌಲ್ಯಗಳನ್ನು ತಾನು ವ್ರತಶೀಲನಾಗಿ ಒಳಗೊಂಡಿರುತ್ತೇನೆ, ಆದ್ದರಿಂದ ತಾನು ಶ್ರೇಷ್ಠ, ಅನುಸರಣೀಯ, ಅನುಕರಣೀಯ ಎಂಬ ದೊಡ್ಡಭಾವದಲ್ಲಿ ಇಂಥವರಿಗೆ ಮಂತ್ರಿಗಿರಿ ಕೊಡಲೇಬೇಕೆಂದು ತಮ್ಮ ಸಮುದಾಯದವರ ಮುಂದೆ ಮುಖ್ಯಮಂತ್ರಿಗಳನ್ನು ‘ಒತ್ತಡ ಪೂರ್ವಕವಾಗಿ’ ಆಗ್ರಹಿಸುವುದು ಯಾವ ಸ್ವಾಮೀಜಿಗಳಿಗೂ
ಶೋಭೆಯಲ್ಲ!

ಇದು ಜಾತಿಗಳಿಂದ ರೂಪುಗೊಂಡ ಸಮಾಜ ವ್ಯವಸ್ಥೆಯ ವಿಘಟನೆಗೆ ಪ್ರಚೋದಿಸುತ್ತದೆ. ಸರಕಾರಗಳಿರುವುದು ಎಲ್ಲ ಜಾತಿ ಗಳನ್ನು ಒಗ್ಗೂಡಿಸಲೇ ವಿನಾ ಒಡೆಯುವುದಕ್ಕಲ್ಲ. ಹಾಗಾದರೆ ಮೀಸಲಾತಿ ಬೇಡವೇ ಎಂದು ಕೇಳಿದರೆ, ಬೇಕೇ ಬೇಕು. ಆದರದು ಟಾನಿಕ್ ರೂಪದಲ್ಲಿರಬೇಕೇ ವಿನಾ ಆಹಾರದ ರೂಪದಲ್ಲಿರಬಾರದು!

ಇನ್ನೊಂದು ವಿಚಾರ: ಮೀಸಲಾತಿಯನ್ನು ಒಂದು ಹಂತದವರೆಗೆ ಅನುಭವಿಸಿ, ಇನ್ನು ಮೀಸಲಾತಿ ಬೇಡವೆಂಬ ಭಾವನೆ ಬರುವಂತೆ ಸರಕಾರಗಳು ಮೀಸಲಾತಿ ಪಡೆದ ಸಮುದಾಯಗಳಿಗೆ ಭದ್ರತೆ ಒದಗಿಸಬೇಕು. ಸಮಾಜವೂ ಅದನ್ನು ಬೆಂಬಲಿಸಬೇಕು. ಮೀಸಲಾತಿಯ ಅನಿವಾರ್ಯತೆಯನ್ನು ಹೋಗಲಾಡಿಸುವ ನೈತಿಕಶಕ್ತಿ ಸರಕಾರಕ್ಕೂ ಇದೆ, ಸಮಾಜಕ್ಕೂ ಇದೆ.

ಆದರೆ ಮೀಸಲಾತಿಯನ್ನು ಅನುಭವಿಸಿದ ಜಾತಿಗಳಿಗೂ ಮೀಸಲಾತಿಯನ್ನು ತೊರೆಯುವ ನೈತಿಕಶಕ್ತಿ ಇರಬೇಕು. ‘ನಮ್ಮನ್ನು ಈ ಪಟ್ಟಿಗೆ, ಆ ವರ್ಗಕ್ಕೆ ಸೇರಿಸಿ’ ಎಂದು ಸ್ಪರ್ಧೆಗೆ ಬಿದ್ದವರಂತೆ ಹೋರಾಡುವ, ಬ್ಲ್ಯಾಕ್‌ಮೇಲ್ ಮಾಡುವ ಅಗತ್ಯ, ಅನಿವಾರ್ಯತೆ ಯಾವ ಜಾತಿಗೂ ಇಲ್ಲವೇ ಇಲ್ಲ. ಹಾಗೆ ಇದ್ದುದರಿಂದ ಇಂದಿಗೂ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದ ಜಾತಿಗಳಿಗೆ ಮೀಸಲಾತಿ ಯಿದೆ.

ಬ್ರಾಹ್ಮಣರಲ್ಲೂ ಸ್ಥಾನಿಕ ಬ್ರಾಹ್ಮಣರಿಗೆ ಮೀಸಲಾತಿಯಿದೆ. ಇತರ ಬ್ರಾಹ್ಮಣರು ಅಂದರೆ ಚಿತ್ಪಾವನರು ತಾವು ಮೇಲ್ಜಾತಿಗೆ
ಸೇರಿದ ಕಡಿಮೆ ಆದಾಯವುಳ್ಳವರು ಎಂಬ ಪ್ರಮಾಣಪತ್ರ ತಂದರೆ ಆದಾಯದ ಮೀಸಲಾತಿಯಿದೆ. ಈಗ ನಡೆಯುತ್ತಿರುವ ಮೀಸಲಾತಿ ಹೋರಾಟಕ್ಕೆ ಸ್ವಾಮೀಜಿಗಳ ಸಾರಥ್ಯವಿದೆ. ಉಪವಾಸ ಸತ್ಯಾಗ್ರಹದ (?) ಬೆದರಿಕೆಯೊಡ್ಡುವುದು, ಸಮುದಾಯ ವನ್ನು ತಂದು ಬೀದಿಗೆ ನಿಲ್ಲಿಸುವುದು- ಇವೆಲ್ಲ ಇತರರೂ ಹೀಗೆಯೇ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುವುದಕ್ಕೆ ಕರೆಕೊಟ್ಟಂತೆ ಕಾಣುತ್ತದೆ.

ಸರಕಾರದ ಮುಂದೆ ಬೇಡಿಕೆಯಿಟ್ಟು ಜನತೆಯೇ ಹೋರಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಜನರ ನಿತ್ಯಬದುಕಿಗೆ ತೊಂದರೆ ಯಾಗುವಂತೆ ನಡೆಯುವ ಯಾವುದೇ ಹೋರಾಟವು ಆರಂಭದಲ್ಲಿ ಅಲ್ಲದಿದ್ದರೂ ತರುವಾಯದಲ್ಲಿ ಅರ್ಥಹೀನವೂ ಹಾಸ್ಯಾ ಸ್ಪದವೂ ಆಗಿ, ಕೊನೆಗೆ ‘ಪಬ್ಲಿಕ್ ಜೋಕ್’ ಆಗಿಬಿಡುತ್ತದೆ. ಐತಿಹಾಸಿಕವಾಗಿ ಸಾರ್ವಜನಿಕವಾದ ಅವಕಾಶವನ್ನೇ ಕಳೆದು ಕೊಂಡವರಿಗೆ ಅದು ಸುಲಭದಲ್ಲಿ ದಕ್ಕುವಂತಾಗಬೇಕೆಂಬುದೇ ಮೀಸಲಾತಿಯ ನೈಜ ಉದ್ದೇಶ. ಹಾಗೆ ನೋಡಿದರೆ
ಈ ಅರ್ಹತೆಯಿರುವುದು ದಲಿತರಿಗೆ ಮತ್ತು ಮಹಿಳೆಯರಿಗೆ.

ಇವರಂತೆ ಇತರರೂ ಇದ್ದರೆ ಅವರೂ ಅರ್ಹರೇ! ಜಾತ್ಯಾಧಾರಿತ ಮೀಸಲಾತಿ ಎಂಬ ಪರಿಕಲ್ಪನೆಯಲ್ಲೇ ಮೋಸವಿದೆ. ದಲಿತ ನೆಂಬ ಕಾರಣಕ್ಕೆ ಮೀಸಲಾತಿ ಸುಲಭದಲ್ಲಿ ಸಿಗುವಂತೆ, ಬ್ರಾಹ್ಮಣನೆಂಬ ಕಾರಣಕ್ಕೆ ಕಡುಬ್ರಾಹ್ಮಣನಿಗೆ ಯಾವ ಮೀಸಲಾತಿಯೂ ಸಿಗಲಾರದು. ಆದಾಯವನ್ನು ಆಧರಿಸಿದ ಮೀಸಲಾತಿಯಲ್ಲಿ ಭ್ರಷ್ಟತೆಯಿದೆ. ಮೀಸಲಾತಿಗೆ ಬೇಕಾಗುವಷ್ಟು ವಾರ್ಷಿಕ ಆದಾಯವನ್ನು ಹಣಕೊಟ್ಟು ಬರೆಸುವುದರಿಂದಾಗಿ, ನಿಜವಾಗಿ ಮೀಸಲಾತಿ ದಕ್ಕಬೇಕಾದವರಿಗೆ ದಕ್ಕದೆ ಬಿಪಿಎಲ್ ಪಡಿತರ ಚೀಟಿ ಅನರ್ಹರಿಗೂ ಸಿಕ್ಕುವಂತಾಗಿದೆ.

ಕ್ಷತ್ರಿಯರಿಗೆ, ದೇಶವನ್ನಾಳಿದ ಮುಸ್ಲಿಮರಿಗೆ, ಆಧುನಿಕ ಅಭಿವೃದ್ಧಿ ಮಾಡಿದರೆನ್ನಲಾದ ಕ್ರಿಶ್ಚಿಯನ್ನರಿಗೂ ಮೀಸಲಾತಿಯಿದೆ. ಸಾಮಾಜಿಕ ವೈವಿಧ್ಯದಲ್ಲಿ ತಾರತಮ್ಯ ಅನುಭವಿಸುತ್ತಿರುವ ಜನಾಂಗಗಳ ಹಕ್ಕು ರಕ್ಷಿಸುವುದು ಮೀಸಲಾತಿಯ ಪ್ರಧಾನ ಉದ್ದೇಶ ಎಂಬುದನ್ನು ಮರೆತದ್ದರ ದುರಂತವಿದು! ಬ್ರಾಹ್ಮಣರನ್ನು ಮೇಲ್ಜಾತಿಯೆಂದು ಪರಿಗಣಿಸಿದ್ದರೂ, ಬ್ರಾಹ್ಮಣರಲ್ಲೇ ಆದಾಯ ವಿಲ್ಲದವರು ಮೀಸಲಾತಿಯಿಂದ ಈಗಲೂ ವಂಚಿತರಾಗಿದ್ದಾರೆ. ಒಂದೋ ಅವರು ಜಾತಿ ಬಿಡಬೇಕು, ಇಲ್ಲವೇ ಮೀಸಲಾತಿಗಾಗಿ ಮತಾಂತರವಾಗಬೇಕು.

ಅದೂ ಆಗದೆಂದರೆ ಎಲ್ಲವನ್ನೂ ಎದುರಿಸುತ್ತ ಬದುಕಬೇಕು. ಏಕೆಂದರೆ, ಪ್ರಬಲ ಸಮುದಾಯವಾಗಿರುವ ಒಕ್ಕಲಿಗರಿಗೂ,
ಲಿಂಗಾಯಿತರಿಗೂ ಮೀಸಲಾತಿಯಿದೆ. ಜಾತಿಯಲ್ಲಿ ಅಲ್ಪ ಸಂಖ್ಯಾತರಾದ ಬ್ರಾಹ್ಮಣರೂ ಸೇರಿದಂತೆ ಎಲ್ಲ ಸಣ್ಣ ಸಮುದಾಯ ಗಳಿಗೂ ಒಬಿಸಿ ಮೀಸಲಾತಿ ಕೊಟ್ಟುಬಿಟ್ಟರೆ, ಮೀಸಲಾತಿ ಹೋರಾಟಕ್ಕೆ ಮಂಗಳ ಹಾಡಬಹುದು. ಇನ್ನೂ ಒಂದು ಪರಿಹಾರವಿದೆ: ಜಾತ್ಯಾಧಾರಿತ ಮೀಸಲಾತಿ ನೀಡುವುದಾದರೆ, ದೊಡ್ಡ ಸಮುದಾಯದ ಯಾರಿಗೂ ಮೀಸಲಾತಿ ಬೇಡ.

ಸಣ್ಣಸಣ್ಣ ಸಮುದಾಯಗಳನ್ನು ಗುರುತಿಸಿ ಅವನ್ನು ಮಾತ್ರ ಮೀಸಲಾತಿ ಪಟ್ಟಿಗೆ ಸೇರಿಸುವುದು ಉತ್ತಮವೆನಿಸುತ್ತದೆ. ದೊಡ್ಡ ಸಮುದಾಯದವರಿಗೆ ಆದಾಯದ ಮೇಲೆ ಮೀಸಲಾತಿ ಕೊಡಬಹುದು. ಇಲ್ಲಿಯೂ ದರಿದ್ರ ವೆನಿಸುವಂಥ ರೀತಿಯ ಮಾನದಂಡ ದಲ್ಲಿ ಮೀಸಲಾತಿ ಕೊಡುವಂತಾಗಬಾರದು. ಮೀಸಲಾತಿಗೆ ನಿಗದಿಯಾದ ಆದಾಯಕ್ಕಿಂತ ಕಡಿಮೆ ಆದಾಯವಿರುವಂತೆ ಸುಳ್ಳು ಪ್ರಮಾಣಪತ್ರ ಪಡೆಯಲು ಅವಕಾಶವಿರದಂತೆ, ವೈಜ್ಞಾನಿಕ ಅಧ್ಯಯನದ ಮೂಲಕ ಆದಾಯದ ಮಿತಿಯನ್ನು ನಿಗದಿ ಮಾಡಬೇಕು. ಆಗ ಅನರ್ಹರು ಆದಾಯದ ಮೀಸಲಾತಿ ಗಳಿಸುವುದು ತಪ್ಪುತ್ತದೆ.

ಮೀಸಲಾತಿಗೆ ಅರ್ಹರೋ ಅನರ್ಹರೋ ಎಂದು ಬ್ರಾಹ್ಮಣರನ್ನು ವಿಮರ್ಶಿಸಿದಂತೆಯೇ ಧನಿಕ ದಲಿತರನ್ನೂ ವಿಮರ್ಶಿಸದಿದ್ದರೆ, ಬಡ ದಲಿತರು ಉದ್ಧಾರವಾಗಲಾರರು. ಅವರು ಇಂದಿಗೂ ಬಡವರಾಗೇ ಇದ್ದಾರೆ, ಸಾಮಾಜಿಕ ಸ್ಥಾನಮಾನದಲ್ಲೂ ಅಸ್ಪೃಶ್ಯ ರಾಗೇ ಉಳಿದಿದ್ದಾರೆ. ಮೀಸಲಾತಿ ಪಡೆಯುತ್ತಿರುವ ಇತರ ದೊಡ್ಡ ಸಮುದಾಯದವರೂ ಸಮಗ್ರ ವಿಮರ್ಶೆಗೆ ಒಳಪಡದಿದ್ದರೆ, ಒಟ್ಟೂ ಮೀಸಲಾತಿ ಪ್ರಕ್ರಿಯೆಯಲ್ಲೇ ಭ್ರಷ್ಟತೆ ತುಂಬುತ್ತದೆ. ಆದ್ದರಿಂದ, ಅಸಂಖ್ಯ ಜಾತಿ- ಉಪಜಾತಿಗಳಿರುವ ಭಾರತದಲ್ಲಿ ಜಾತ್ಯಾಧಾರಿತ ಮೀಸಲಾತಿ ಯಾವ ಕಾಲಕ್ಕೂ ಒಳ್ಳೆಯದಲ್ಲ. ಮೇಲೆ ಉಲ್ಲೇಖಿಸಿದ ಒಂದಷ್ಟು ಅತಿರೇಕಗಳಿಂದಾಗಿ ಮೀಸಲಾತಿ ಮೌಲ್ಯ ಕಳೆದು ಕೊಂಡಿದೆ.

ಎಲ್ಲರೂ ಜಾತಿನಿಮಿತ್ತ ಮೀಸಲಾತಿಗಾಗಿ ಬಂಡಾಯವೆದ್ದು ಬೇಡಿಕೆಯ ಈಡೇರಿಕೆಗಾಗಿ ಹೋರಾಟ ಆರಂಭಿಸುತ್ತಾರೆ. ಇದು ಅತಿಯಾಗಿ ಎಲ್ಲ ಸಮುದಾಯಗಳೂ ಮೀಸಲಾತಿ ಕೇಳುವಂಥ ಪರಿಸ್ಥಿತಿ ಹುಟ್ಟಬಹುದು. ಅದರಲ್ಲೂ ಸ್ವಾಮಿಜಿಗಳು ಇಂಥ ಹೋರಾಟದ ಸಾರಥ್ಯ ವಹಿಸಿದರೆ, ಮುಂದೆ ಶಾಲಾ ಕಾಲೇಜುಗಳಲ್ಲಿ ಜಾತ್ಯಾಧಾರಿತ ಸೀಟಿಗಾಗಿ, ಬಸ್ಸು-ರೈಲುಗಳಲ್ಲಿ ಪ್ರತ್ಯೇಕ ಆಸನಕ್ಕಾಗಿ ಮೀಸಲಾತಿ ಕೇಳಬಹುದು. ಇಂಥ ಅಧ್ವಾನ ತಡೆಗಟ್ಟಲು ಸಂವಿಧಾನಾತ್ಮಕವಾಗಿ ಯತ್ನಿಸಬೇಕಾಗಿದೆ. ಜಾತ್ಯತೀತ ಮೌಲ್ಯವನ್ನು ಅಳವಡಿಸಿಕೊಂಡೇ ಜಾತಿಗಣನೆ ಮಾಡಲು ಹಿಂದೆಯೂ ಯತ್ನಿಸಲಾಗಿತ್ತು.

ಜಾತಿಸಂಖ್ಯೆ ಮತ್ತು ಜಾತ್ಯಾಧಾರಿತ ಜನಸಂಖ್ಯೆಯನ್ನು ಸರಕಾರ ಪರಿಗಣಿಸುವುದರ ಮೂಲೋದ್ದೇಶ ಪ್ರಮುಖವಾಗಿ ಯೋಜನೆ ಗಳನ್ನು ಸಣ್ಣ ಸಮುದಾಯದ ಜನತೆಗೆ ತಲುಪಿಸುವುದು. ಕಾರಣವಿಷ್ಟೇ- ಸಾಮಾಜಿಕ ಸ್ಥಾನಮಾನದಲ್ಲೂ ನಿರ್ಲಕ್ಷಿಸಲ್ಪಟ್ಟ, ಆದಾಯದಲ್ಲೂ ಹಿಂದುಳಿದ ಸಣ್ಣ ಸಮುದಾಯಗಳ ಹಿತರಕ್ಷಣೆ ಸರಕಾರದ ಪ್ರಧಾನ ಆಶಯವಾಗಿರುತ್ತದೆ. ಮೀಸಲಾತಿಯ ನೈಜ ಆಶಯ ಸಂಪನ್ನಗೊಳ್ಳುವುದೇ ಈ ಬಗೆಯಲ್ಲಿ! ಆದರೆ ಅದು ರಾಜಕೀಯ ಪ್ರೇರಿತವಾಗಬಾರದು. ತಾನು ಇಂಥ ಜಾತಿ-ಮತ-ಪಂಥದಲ್ಲೇ ಹುಟ್ಟಲೆಂದು ಯಾರೂ ಬೇಡಿಕೊಂಡು ಹುಟ್ಟುವುದಿಲ್ಲ.

ನಾವೆಲ್ಲರೂ ಮೊದಲು ಮನುಷ್ಯಜಾತಿಗೆ ಸೇರಿದವರು. ದೇವರು ಜಾತಿ-ಮತಗಳನ್ನು ಸೃಷ್ಟಿಸಲಿಲ್ಲ, ಹಾಗಂತ ಜಾತಿ ಬಿಟ್ಟು ಬದುಕಲು ಯಾರಿಂದಲೂ ಸಾಧ್ಯವಿಲ್ಲ! ನಮ್ಮ ಜಾತಿಪ್ರಜ್ಞೆ ನಮ್ಮ ಸಮುದಾಯದೊಳಗಿದ್ದರೆ ಸಾರ್ವಜನಿಕವಾಗಿ ಯಾವ ಸಮಸ್ಯೆಯೂ ಹುಟ್ಟಲಾರದು. ಸಾರ್ವಜನಿಕ ಸ್ಥಳ, ಜಾತ್ರೆಗಳಲ್ಲಿ ಎಲ್ಲಿಯೂ ಜಾತಿಪ್ರಜ್ಞೆ ಬರಲಾರದು. ಜಾತಿ-ಮತಗಳು ಅಫೀಮು ಆಗಬಾರದೆಂಬ ಅರಿವಿದ್ದರೆ ಸಮಸ್ಯೆಗಳು ಹುಟ್ಟಲಾರವು. ಪ್ರಜಾತಂತ್ರದ ಯಶಸ್ಸಿರುವುದು ಪ್ರಜೆಗಳ ನಡೆಯಲ್ಲಿ! ಜಾತಿಮೋಹ ಅತಿಯಾಗಿ ಸಮಾಜ ವನ್ನು ಒಡೆಯದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದೆ.

ಜಾತಿ ಮೀಸಲಾತಿ ಹೋರಾಟಗಾರರಿಗೆ ಇದು ಮೊದಲು ಅರಿವಾಗಬೇಕಿದೆ! ಮಂತ್ರಿಗಳು, ಅಧಿಕಾರಿಗಳು ಸ್ವಾಮೀಜಿಗಳ ಮರ್ಜಿಗಳಿಗೆ ಹೆದರುತ್ತಾರೆ. ಏಕೆಂದರೆ, ಸ್ವಾಮೀಜಿಗಳು ಜಾತಿ ರಾಜಕೀಯ ಮಾಡುತ್ತಾರೆ ಅಂತ! ಸ್ವಾಮೀಜಿಗಳು ತಮಗನುಕೂಲ ವಾಗುವ ವ್ಯಕ್ತಿಗೆ/ಪಕ್ಷಕ್ಕೆ ಮತಹಾಕಿರೆಂದಾಗ ಆ ಮಾತನ್ನು ಸಮುದಾಯದವರು ಅನುಸರಿಸುತ್ತಾರೆ. ಇಂಥ ಜಾತಿ ರಾಜಕೀಯ ದಲ್ಲಿ ಸಣ್ಣ ಸಮುದಾಯಗಳ ಗತಿಯೇನು? ಜಾತಿ, ಸಾಮಾಜಿಕ ಸ್ಥಾನಮಾನ ಮತ್ತು ಆದಾಯದ ಕಾರಣಕ್ಕಾಗಿ ಅರ್ಹ ಮಾನದಂಡದಲ್ಲಿ ಅರ್ಹ ದಲಿತರಿಗೆ ನಿರ್ದಿಷ್ಟ ಅವಽಯವರೆಗೆ ಮತ್ತು ಲಿಂಗದ ಕಾರಣಕ್ಕಾಗಿ ಮಹಿಳೆಯರಿಗೆ ಮೀಸಲಾತಿಯ ಅಗತ್ಯವಿದೆ.

ಇದು ಸಾಧ್ಯವಿಲ್ಲವೆಂದಾದರೆ, ಇವರನ್ನೂ ಮೀಸಲಾತಿಯಿಂದ ಹೊರಗಿಟ್ಟು ಹೊಸದಾಗಿ ಮೀಸಲಾತಿ ವಿನ್ಯಾಸಗೊಳಿಸಲಿ.
ಇದೂ ಅಸಾಧ್ಯವೆಂದಾದರೆ, ‘ಒಂದು ದೇಶ, ಒಂದು ಕಾನೂನು’ ಜಾರಿಗಾಗಿ ಕೇಂದ್ರವನ್ನು ಆಗ್ರಹಿಸುವುದೊಂದೇ ಕೊನೆಯ ಪರಿಹಾರವೇನೋ! ಏನಂತೀರಿ?