Friday, 13th December 2024

ಆರ್ಥಿಕ ದುರ್ಬಲರಿಗೆ ಮೀಸಲಾತಿ: ರಾಜ್ಯದಲ್ಲಿ ಜಾರಿಗೆ ಬರುವುದೇ ?

ಪ್ರಸ್ತುತ

ಸುಬ್ರಾಯ ಎಂ.ಹೆಗಡೆ, ಗೌರಿಬಣ್ಣಿಗೆ

ಸರ್ವೋಚ್ಚ ನ್ಯಾಯಾಲಯದ ಪಂಚ ಸದಸ್ಯರ ಸಂವಿಧಾನ ಪೀಠ ನ.೭ರಂದು ನೀಡಿದ ೩-೨ರ ಬಹುಮತದ ತೀರ್ಪಿನಲ್ಲಿ, ಇದುವರೆಗೆ ಯಾವುದೇ ಮೀಸಲಾತಿ ಪಟ್ಟಿಯಲ್ಲಿ ಸೇರಿರದ ಮುಂದುವರಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾತಿ ನೀಡಲು ನರೇಂದ್ರ ಮೋದಿ ಸರಕಾರವು ತಂದ ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿದಿದೆ.

ಇದರಿಂದ ದೇಶದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಸ್‌ಸಿ, ಎಸ್‌ಟಿ, ಮತ್ತು ಓಬಿಸಿ ಪಟ್ಟಿಗಳಲ್ಲಿರುವ ಜಾತಿಗಳನ್ನು ಬಿಟ್ಟು, ಸಾಮಾನ್ಯ ವರ್ಗಗಳ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಶಿಕ್ಷಣ ಕ್ಷೇತ್ರ ಮತ್ತು ನಾಗರಿಕ ಸೇವೆಗಳಲ್ಲಿ ೧೦% ಮೀರದಂತೆ ಮೀಸಲಾತಿ ನೀಡುವ ಸಂವಿಧಾನದ ತಿದ್ದುಪಡಿಯನ್ನು ಎತ್ತಿ ಹಿಡಿದಿದೆ.

ಈ ಸಂವಿಧಾನದ ತಿದ್ದುಪಡಿ ಕಾಯ್ದೆಯನ್ನು ಜನವರಿ 2019ರಿಂದಲೇ ದೇಶದಾದ್ಯಂತ ಇರುವ ಮೆಡಿಕಲ್, ಐಐಟಿ ಸೇರಿದಂತೆ ತನ್ನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಐಎಎಸ್ ಮುಂತಾದ ಎಲ್ಲಾ ನಾಗರಿಕ ಸೇವೆಗಳಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿದೆ. ಹಾಗೆಯೇ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಕೇರಳ, ಜಾರ್ಖಂಡ್ ಮುಂತಾದ ೧೨ಕ್ಕೂ ಹೆಚ್ಚು ರಾಜ್ಯಗಳು ಈಗಾಗಲೇ ಇದನ್ನು ಜಾರಿಗೆ ತಂದಿವೆ.

ಆದರೆ ಕರ್ನಾಟಕ ಸರಕಾರ ಈವರೆಗೂ ಇದನ್ನು ಜಾರಿಗೆ ತಂದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯ
ಕ್ಯಾಬಿನೆಟ್ ಎದುರಿಗೆ ಬಂದಿದ್ದರೂ ಕೆಲವು ಕಾರಣಗಳಿಂದ ನಿರ್ಣಯ ಕೈಗೊಂಡಿರಲಿಲ್ಲ. ಅನಂತರ ಈ ತಿದ್ದುಪಡಿಯ
ಸಿಂಧುತ್ವ ಪ್ರಶ್ನಿಸಿ ೪೦ಕ್ಕಿಂತ ಹೆಚ್ಚು ರಿಟ್ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ರಾಜ್ಯದಲ್ಲಿ ಈಗಾಗಲೇ ಒಂದಲ್ಲ ಒಂದು ಮೀಸಲಾತಿ ಪಡೆದಿದ್ದರೂ ಅದನ್ನು ಇನ್ನೂ ಹೆಚ್ಚಿಸಬೇಕು ಅಥವಾ ನಮಗೆ ಮೀಸಲಾತಿಯ ೨-ಎ ವರ್ಗಕ್ಕೆ , ಮೇಲ್ದರ್ಜೆಗೆ ಸೇರಿಸಬೇಕು ಇತ್ಯಾದಿ ರಾಜಕೀಯ ಮೇಲಾಟಗಳಿಂದ, ಈ ವಿಷಯ ಸರಕಾರಕ್ಕೆ ಬಿಸಿ ತುಪ್ಪ ವಾಯಿತು.

ಹೀಗಾಗಿ ಆರ್ಥಿಕ ದುರ್ಬಲರಿಗೆ ಈ ಸಂವಿಧಾನ ಪ್ರದತ್ತ ಮೀಸಲಾತಿಯನ್ನು ಜಾರಿಗೆ ತಂದು, ಅವರಿಗೆ ನ್ಯಾಯ ಒದಗಿಸುವ ನಿರ್ಣಯವನ್ನು ಇನ್ನೂ ರಾಜ್ಯ ಸರಕಾರ ಕೈಗೊಂಡಿಲ್ಲ. ಇತ್ತೀಚೆಗೆ ಸರಕಾರವು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಅನುಕ್ರಮವಾಗಿ ೨% ಮತ್ತು ೪% ರಷ್ಟು ಮೀಸಲಾತಿಯನ್ನು ಹೆಚ್ಚಿಸಿರುವುದು ಉಲ್ಲೇಖನೀಯ. ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆಯ ಮೂಲಭೂತ ಹಕ್ಕನ್ನು ನೀಡುವ ಸಂವಿಧಾನದ ೧೫ ಮತ್ತು ೧೬ ನೇ ವಿಧಿಗಳ (೪) ನೇ ಉಪವಿಧಿಗಳಿಗೆ ಮಾಡಲಾದ ತಿದ್ದುಪಡಿಯಂತೆ ಇದುವರೆಗೆ ಯಾವುದೇ ತರಹದ ಮೀಸಲಾತಿಯ ಸೌಲಭ್ಯ ಪಡೆಯದ ಜಾತಿಗಳ ಸಾಮಾನ್ಯ ವರ್ಗಗಳಲ್ಲಿನ ಆರ್ಥಿಕವಾಗಿ ದುರ್ಬಲರಿಗೆ ಶಿಕ್ಷಣ ಹಾಗೂ ಸರಕಾರಿ ಉದ್ಯೋಗಗಳಲ್ಲಿ ೧೦% ಗೆ ಮೀರದಂತೆ ಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಒಂದು ಅತ್ಯಂತ ಸಮಂಜಸ ತಿರುವು ನೀಡಿದೆ.

ಕಳೆದ 75 ವರ್ಷಗಳಿಂದ ಎಸ್.ಸಿ,ಎಸ್‌ಟಿ, ಸಮುದಾಯಗಳಿಗೆ ಹಾಗೂ ಮಂಡಲ್ ವರದಿ ಬಂದ ನಂತರ ಓಬಿಸಿ ಸಮುದಾಯಗಳಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿವಿಕೆಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ.
ನಮ್ಮ ಸಂವಿಧಾನವು ಮತ್ತು ಚಲನಶೀಲವಾಗಿದ್ದು ದೇಶದ ಇಂದಿನ ಅವಶ್ಯಕತೆಗೆ ಅನುಗುಣವಾಗಿ ಅದನ್ನು ತಿದ್ದುಪಡಿ ಮಾಡುವ ಪರಮಾಽಕಾರ ದೇಶದ ಪಾರ್ಲಿಮೆಂಟಿಗೆ ಇದೆ ಎಂದು ಹೇಳಿದೆ. ಇಂತಹ ಮೀಸಲಾತಿ ತರಬಾರದು ಎನ್ನುವ ಅಂಶ ಸಂವಿಧಾದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ ಎಂದು ಹೇಳಿದೆ.

ಈ ಹಿಂದೆ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ೯ ಸದಸ್ಯರ ಸಂವಿಧಾನ ಪೀಠವು ನೀಡಿದ ತೀರ್ಪಿನಲ್ಲಿ ಇಂತಹ ಮೀಸಲಾತಿ ಪ್ರತಿಶತ ೫೦ ನ್ನು ಮೀರಬಾರದು ಎಂದು ವಿಧಿಸಲಾದ ಷರತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೀಡಲಾಗುತ್ತಿರುವ ಮೀಸಲಾತಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಹೊಸ ಮೀಸಲಾತಿ ಇದುವರೆಗೆ ಮೀಸಲಾತಿಗಾಗಿ ಇರುವ ೫೦% ಬಾಸ್ಕೆಟ್ ಗೆ ಕೈಹಾಕದೇ ಇರುವುದರಿಂದ ಇದುವರೆಗೆ ಮೀಸಲಾತಿಗೆ ಒಳಪಟ್ಟವರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮೀಸಲಾತಿಯ ಪ್ರಯೋಜನಗಳನ್ನು ಕಳೆದ 75 ವರ್ಷಗಳಿಂದ ಪಡೆದುಕೊಂಡು ಬಂದಿರುವ ಎಸ್.ಸಿ, ಎಸ್.ಟಿ ಮತ್ತು ಓಬಿಸಿ ಸಮುದಾಯಗಳ ಕೆಲವರು ತಮ್ಮ ಜೀವನ ಮಟ್ಟದಲ್ಲಿ ಮೇಲ್ಮೆ ಪಡೆದುಕೊಂಡಿದ್ದು ಅಂತವರಿಗೆ ಮೀಸಲಾತಿ ಮುಂದುವರಿ ಸುವ ಬದಲು ಈ ಸಮುದಾಯಗಳಲ್ಲಿಯೇ ಆರ್ಥಿಕವಾಗಿ ದುರ್ಬಲರಿಗೆ ಮಾತ್ರ ಅದನ್ನು ಸೀಮಿತಗೊಳಿಸಿದರೆ ಸಂವಿಧಾನದ ಅಪೇಕ್ಷೆಯಂತೆ ಶೋಷಿತ ಜನರು ಭವಿಷ್ಯದಲ್ಲಿಯಾದರೂ ಮುಂದುವರಿದ ವರ್ಗಗಳ ಮಟ್ಟಕ್ಕೆ ಬರಬಹುದು ಎಂದು ದರ್ಭಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದು ದೇಶದ ನೀತಿ ನಿರೂಪಕರಿಗೆ, ಜನಪ್ರತಿನಿಽಗಳಿಗೆ ನ್ಯಾಯಾಲಯ ನೀಡಿದ ಮಾರ್ಗಸೂಚಿಯಂತಿದೆ. ಮೀಸಲಾತಿ ಪಡೆಯಲು ಕೇಂದ್ರ ಸರಕಾರ ಕೆಲವು ಮಾನದಂಡ ಗೊತ್ತುಮಾಡಿದ್ದು, ಒಬ್ಬ ವ್ಯಕ್ತಿಯ ಕುಟುಂಬದ ಒಟ್ಟೂ ವಾರ್ಷಿಕ ವರಮಾನ ರು.೮ ಲಕ್ಷಗಳ ಒಳಗೆ ಇರಬೇಕು; ಕೃಷಿ ಭೂಮಿ ೫ ಎಕರೆಗಳಿಗಿಂತ ಕಡಿಮೆ ಇರಬೇಕು; ಹಾಗೂ ಒಂದು ಸಾವಿರ ಚದರಡಿ ಗಿಂತ ಕಡಿಮೆ ವಿಸ್ತಾರದ ಮನೆ ಇತ್ಯಾದಿ ಇರುವವರು ಮಾತ್ರ ಈ ಮೀಸಲು ಪಡೆಯಲು ಅರ್ಹರಾಗುತ್ತಾರೆ.

ನಮ್ಮ ರಾಜ್ಯದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಮ್ಮ ಸಂವಿಧಾನದಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ಅವಕಾಶವೇ ಇಲ್ಲವಾದ್ದರಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಅವರಂತೆ ಈಗಾಗಲೇ ಮೀಸಲಾತಿಯ ಪ್ರಯೋಜನಗಳನ್ನು ಪಡೆಯುತ್ತಿರುವ ಕೆಲವು ವರ್ಗಗಳ ಮುಖಂಡರುಗಳು ಈ ತೀರ್ಪನ್ನು ಸಹಜವಾಗಿಯೇ ವಿರೋಧಿಸಿದ್ದಾರೆ.

ಇವರ ಈ ಮನಸ್ಥಿತಿ ವಿಚಿತ್ರವಾಗಿದೆ. ತಮ್ಮವರ ಬಡತನ, ಹಸಿವು, ನಿರುದ್ಯೋಗ ಮತ್ತು ಅದರಿಂದಾಗುವ ತಮ್ಮ
ಜನರ ಒಡಲಾಳದ ನೋವಿನ ಕುರಿತು ಆಗಾಗ ಸಾರ್ವಜನಿಕ ವಾಗಿ ಅನುಕಂಪ ವ್ಯಕ್ತಪಡಿಸುವ ಇಂಥವರು, ಇದುವರೆಗೆ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿ ಬಡತನಕ್ಕೆ ನೂಕಲ್ಪಟ್ಟ ಆರ್ಥಿಕವಾಗಿ ದುರ್ಬಲರಾದ ವ್ಯಕ್ತಿಗಳ ಒಡಲಿನ ಹಸಿವೆಯೂ ಅಷ್ಟೇ ನೋವಿನದ್ದು ಎಂದು ಅರ್ಥ ಮಾಡಿಕೊಳ್ಳುತ್ತಿಲ್ಲ.

ಬ್ರಾಹ್ಮಣರಿಗೆ ಅನುಕೂಲ ಎಂಬ ತಪ್ಪು ಕಲ್ಪನೆ: ಇನ್ನು ಕೆಲವರು ಈ ತೀರ್ಪು ಕೇವಲ ಬ್ರಾಹ್ಮಣ ಸಮುದಾಯಕ್ಕೆ
ಮಾತ್ರ ಅನುಕೂಲವಾಗುತ್ತದೆ ಎಂದು ಸತ್ಯಕ್ಕೆ ದೂರವಾದ ಮಾತನ್ನು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಈ ತೀರ್ಪಿನಿಂದ
ಇದುವರೆಗೆ ಯಾವುದೇ ತರದ ಮೀಸಲಾತಿಯ ಪ್ರಯೋಜನಗಳನ್ನು ಪಡೆಯದ ನೂರಾರು ಜಾತಿಗಳಿಗೆ ಅನುಕೂಲ ವಾಗುತ್ತಿದ್ದು, ಅದರಲ್ಲಿ ಬ್ರಾಹ್ಮಣ ಜಾತಿಯೂ ಒಂದಾಗಿದೆ. ಕರ್ನಾಟಕದ ಸಂದರ್ಭದಲ್ಲಿ ಹೇಳುವುದಾದರೆ ಬ್ರಾಹ್ಮಣರು, ಆರ್ಯವೈಶ್ಯರು, ಜೈನರು, ಮೊದಲಿಯಾರರು, ಹೀಗೆ ನಾಲ್ಕೈದು ಜಾತಿಗಳಿಗೆ ಈ ಮೀಸಲಾತಿಯಿಂದ ಪ್ರಯೋಜನ ವಾಗುತ್ತದೆ. ಪಕ್ಕದ ತಮಿಳುನಾಡಿನಲ್ಲಿ 79 ಜಾತಿಗಳಿಗೆ ಇದು ಪ್ರಯೋಜನವಾಗುತ್ತದೆ.

ಇನ್ನು ಕೆಲವರು ಬ್ರಾಹ್ಮಣರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಪ್ರತಿಶತ ೩ರಷ್ಟಿದ್ದು ನೀವೇಕೆ ೧೦ರಷ್ಟು ಮೀಸಲಾತಿ
ನೀಡುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ನಮ್ಮ ಕರ್ನಾಟಕದಲ್ಲಿ ಒಂದು ವಿಶ್ವಾಸಾರ್ಹ ಮಾಹಿತಿಯ ಪ್ರಕಾರ ಹಾಗೂ ಕಾಂಗ್ರೆಸ್ ಸರಕಾರದ ಜಾತಿಗಣತಿಯ ಸೋರಿಕೆಯಾದ ವರದಿಯಲ್ಲೂ ಕಂಡುಬರುವಂತೆ ೪೧ ಬ್ರಾಹ್ಮಣ ಉಪಜಾತಿಗಳ ಒಟ್ಟು ಜನಸಂಖ್ಯೆ ೪೦ ಲಕ್ಷಗಳಿಗಿಂತಲೂ ಅಧಿಕವಿದ್ದು, ಅದು ರಾಜ್ಯದ ಒಟ್ಟು ಜನಸಂಖ್ಯೆಯ ೬% ಗಿಂತ
ಹೆಚ್ಚಿದೆ. ಇದನ್ನು ಎಲ್ಲಾ ರಾಜಕೀಯ ಪಕ್ಷಗಳೂ ವಿಶೇಷವಾಗಿ ಗಮನಿಸಬೇಕಾಗದೆ. ಹಾಗೆಯೇ ಆರ್ಯವೈಶ್ಯರು, ಜೈನರು ಮುಂತಾದವರ ಜನಸಂಖ್ಯೆಯನ್ನು ಗಮನಿಸಿದರೆ ಈ ಎಲ್ಲಾ ಜಾತಿಗಳಿಗೂ ಸೇರಿ ಪ್ರತಿಶತ ಹತ್ತರಷ್ಟು ಮೀಸಲಾತಿಯನ್ನು ನೀಡುವುದು ಅವಶ್ಯಕವಿದೆ.

ಬೇರೆ ರಾಜ್ಯಗಳಲ್ಲಿ ಇದಕ್ಕೆ ಅರ್ಹರಾಗುವ ನೂರಾರು ಜಾತಿಗಳಿದ್ದು ಅದು ಅಲ್ಲಿನ ಒಟ್ಟು ಜನಸಂಖ್ಯೆಯ ಸುಮಾರು ೨೦%
ಇದೆ. ಹಿಂದೆ ಪಿ. ವಿ. ನರಸಿಂಹರಾವ್ ಸರಕಾರವು ತಂದ ಮೀಸಲಾತಿಯನ್ನು ಸಂವಿಧಾನಕ್ಕೆ ಅವಶ್ಯಕ ತಿದ್ದುಪಡಿ ಮಾಡದೇ ತರಲಾಗಿದೆ ಎನ್ನುವ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಮನಮೋಹನ್ ಸಿಂಗ್ ಅವರ ಸರಕಾರವು ೨೦೧೦ ರಲ್ಲಿ ಡಾ. ಸಿನ್ಹೋ ಆಯೋಗವನ್ನು ರಚಿಸಿತು. ಅದು ಎನ್‌ಎಸ್‌ಎಸ್‌ಓ ದ ಅಧಿಕೃತ ದತ್ತಾಂಶದ ಪ್ರಕಾರ ದೇಶದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಅಂದಾಜು ೩೧.೭ ಕೋಟಿ ಜನರಲ್ಲಿ ಸುಮಾರು ೫.೮ ಕೋಟಿ ಜನರು (೧೮.೮%)
ಮುಂದುವರಿದ ಜಾತಿಗಳಿಗೆ ಸೇರಿದವರೇ ಇದ್ದಾರೆ ಎನ್ನುವ ಕಾರಣಕ್ಕಾಗಿ ಈ ವರ್ಗಗಳ ಜನರಿಗೆ ಅವರ ಆರ್ಥಿಕ ದುರ್ಬಲ ತೆಯ ಆಧಾರದ ಮೇಲೆ ಪ್ರತಿಶತ ೧೫ ರಷ್ಟು ಮೀಸಲಾತಿ ನೀಡಬಹುದು ಎಂದು ವರದಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಜಾರಿ ಮಾಡಬೇಕೆಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಅಸ್ತಿತ್ವಕ್ಕೆ ಬಂದ ಲಾಗಾಯ್ತು ಮಂಡಳಿಯ ಅಧ್ಯಕ್ಷ ಎಚ್. ಎಸ್. ಸಚ್ಚಿದಾನಂದ ಮೂರ್ತಿಯವರ ನೇತೃತ್ವದಲ್ಲಿ ಸತತವಾಗಿ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದು, ಕೋರ್ಟ್ ತೀರ್ಪು ಬಂದ ಮೇಲೆ ಹಕ್ಕೊತ್ತಾಯ ಮುಂದುವರೆಸಿದೆ.

ಇದನ್ನು ಜಾರಿ ಮಾಡಲು ಸರಕಾರ ಮೀನಮೇಷ ಎಣಿಸಿದರೆ ಬ್ರಾಹ್ಮಣರೂ ಸೇರಿದಂತೆ ಮುಂದುವರೆದ ಈ ಎಲ್ಲ
ಜಾತಿಗಳ ಲಕ್ಷಾಂತರ ಜನರು ತಮ್ಮ ಅನೇಕ ಸಂಘಟನೆಗಳ ಮೂಲಕ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ
ಈ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟಕ್ಕೆ ಸನ್ನದ್ಧರಾಗುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ.