ನಾಡಿಮಿಡಿತ
ವಸಂತ ನಾಡಿಗೇರ
vasanth.nadiger@gmail.com
ಇಪ್ಪತ್ತೈದು ವರ್ಷ ಎಂದರೆ ಅದೊಂದು ಮಹತ್ವದ ಘಟ್ಟ. ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಮತ್ತಾವುದಾದರೂ ಪ್ರಮುಖ ಘಟನೆ ಗಳಿರಬಹುದು. ಅದನ್ನು ಬೆಳ್ಳಿಹಬ್ಬ, ರಜತ ಮಹೋತ್ಸವ ಎಂದು ಸಂಭ್ರಮದಿಂದ ಆಚರಿಸುತ್ತೇವೆ.
ಕೆಲವು ಪುಣ್ಯತಿಥಿಗಳನ್ನೂ 25, 50 ವರ್ಷಗಳ ಸಂದರ್ಭದಲ್ಲಿ ಪ್ರಮುಖವಾಗಿ ನಡೆಸುವುದುಂಟು. ಒಂದಷ್ಟು ಪ್ರಮುಖ ಘಟನೆಗಳು, ದುರಂತಗಳನ್ನೂ ಹೀಗೆ ನೆನಪಿಸಿಕೊಳ್ಳುತ್ತೇವೆ. ಈ ಪೀಠಿಕೆ ಈಗೇಕೆ ಎಂದರೆ ಈ ವಾರದ ವಿಷಯ ಇಂಥದ್ದಾಗಿದೆ. ಮಹಿಳಾ ಮೀಸಲು ವಿಧೇಯಕವು ಸಂಸತ್ತಿನಲ್ಲಿ ಮಂಡನೆಯಾಗಿ ಭರ್ತಿ 25 ವರ್ಷ ತುಂಬಿದೆ. ಆದರೆ ಇಂದಿನವರೆಗೂ ಅದು ಅಂಗೀಕಾರವಾಗಿಲ್ಲ. ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದಲ್ಲಿ ಶೇ.33 ರಷ್ಟು ಮೀಸಲು ನೀಡುವ ಉದ್ದೇಶದ ವಿಧೇಯಕವಿದು. ಈ ವರೆಗೆ ಒಟ್ಟು ನಾಲ್ಕು ಬಾರಿ ವಿಧೇಯಕ ಮಂಡನೆಯಾಗಿದೆ.
ಆದರೆ ಇದುವರೆಗೂ ಬೆಳಕು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಯಾವ ರೀತಿ ನೋಡಬೇಕು? ದುಃಖದಿಂದ ಲೋ, ಬೇಸರದಿಂದಲೋ, ವಿಷಾದದಿಂದಲೋ? ಅಥವಾ ಇಚ್ಛಾಶಕ್ತಿಯ ಕೊರತೆ, ಅಸಡ್ಡೆ ಎಂದೋ. ಈ ವಿಧೇಯಕದ ಇತಿಹಾಸ ಮತ್ತು ಇದುವರೆಗೆ ನಡೆದಿರುವ ವಿಫಲ ಪ್ರಯತ್ನಗಳನ್ನು ಗಮನಿಸಿದಾಗ ಇದು
ಇವೆಲ್ಲವುಗಳ ಮಿಶ್ರಣವಾಗಿ ಗೋಚರಿಸುತ್ತದೆ. ಸದ್ಯದ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ 78. ಹಾಗೆ ನೋಡಿದರೆ ಇದೇ ಇದುವರೆಗಿನ ಗರಿಷ್ಠ. ಮೊದಲ ಲೋಕಸಭೆಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ 24. ಲೋಕಸಭಾ ಸದಸ್ಯರ ಒಟ್ಟು ಸಂಖ್ಯೆ 534. ಈ ಲೆಕ್ಕದಲ್ಲಿ ಶೇ. 33 ಮೀಸಲು ಎಂದರೆ ಮಹಿಳಾ ಸದಸ್ಯರ ಸಂಖ್ಯೆ 180 ಆಗಬೇಕು. ಅಂದರೆ ಈಗಿನ ಸದಸ್ಯರಿಗಿಂತ ಇನ್ನೂ 100ಕ್ಕೂ ಹೆಚ್ಚು.
ಹಾಗಾದರೆ ಏನು ಸಮಸ್ಯೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಉತ್ತರ ಸುಲಭವಂತೂ ಅಲ್ಲ. ಬಲು ಜಟಿಲ ಎನಿಸುತ್ತದೆ. ಎಲ್ಲಿಂದ ಆರಂಭವೋ ಎಂದು ಹೊರಟರೆ ಅದರ ಹೆಜ್ಜೆ ಗುರುತನ್ನು ದಾಖಲಿಸಬಹುದು. 1996 ರಲ್ಲಿ ಮೊತ್ತ ಮೊದಲ ಬಾರಿಗೆ ಈ ವಿಧೇಯಕವನ್ನು ಮಂಡಿಸಲಾಯಿತು. ಇದಕ್ಕೆ ಮೂಲಾಧಾರ ಮತ್ತು ಪ್ರೇರಣೆ ಎಂದರೆ 1993ರ ಸಂವಿಧಾನ ತಿದ್ದುಪಡಿ ವಿಧೇಯಕ. ಗ್ರಾಮಪಂಚಾಯಿತಿಗಳಲ್ಲಿ ಮೂರನೇ ಒಂದು ಭಾಗದಷ್ಟು, ಅಂದರೆ ಶೇ.33 ರಷ್ಟು ಸೀಟು ಗಳನ್ನು ಮಹಿಳೆಯರಿಗೆ ಮೀಸಲಿಡುವ ಉದ್ದೇಶದ ಬಿಲ್ ಅದಾ ಗಿತ್ತು. ಇದು ಪಾಸ್ ಆಗಿ ಪಂಚಾಯಿತಿಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಇದೇ ಮಾದರಿಯನ್ನು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಅಳವಡಿಸಿ ಕೊಳ್ಳಬೇಕು ಎಂಬ ಯೊಚನೆ ಮೊಳಕೆಯೊಡೆಯಿತು.
ಇದರ ಮುಂದುವರಿದ ಭಾಗವಾಗಿ ಸಂಸತ್ತಿನಲ್ಲಿ ವಿಧೇಯಕ ಮಂಡನೆಯಾಯಿತು. ಈ ವಿಧೇಯಕವನ್ನು 1996ರ ಸೆಪ್ಟೆಂಬರ್ 12 ರಂದು ಮಂಡಿಸಲಾಯಿ ತಾದರೂ ಯಾಕೊ ಆ ಗಳಿಗೆಯೇ ರಿಯಾಗಿರಲಿಲ್ಲವೇನೊ. ಅಂದಿನಿಂದ ಬಾಲಗ್ರಹ ಪೀಡಿತವಾಯಿತು. ಮೊದಲ ಬಾರಿ ಮಂಡನೆಯಾದಾಗ ಸಂಯುಕ್ತ ರಂಗದ ಸರಕಾರವಿತ್ತು. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದರು. ಆದರೆ ಅದು ಪಾಸಾಗಲಿಲ್ಲ. ಅಥವಾ ಪಾಸಾಗಲು ಬಿಡಲಿಲ್ಲ. ಅದು ಹಾಗೆಯೇ ಬಿದ್ದು ಹೋಯಿತು.
1998-99 ರಲ್ಲಿ ವಿಧೇಯಕವನ್ನು ಪುನಃ ಮಂಡಿಸಲಾಯಿತು. ಆಗ ವಾಜಪೇಯಿ ನೇತೃತ್ವದ ಸರಕಾರವಿತ್ತು. ಆದರೆ ಈ ಯತ್ನವೂ ಫಲ ನೀಡಲಿಲ್ಲ.
2008 ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಮೂರನೇ ಅವಽಗೆ ಮಂಡನೆಯಾಯಿತು. 2010ರಲ್ಲಿ ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರವಾಯಿತು.
ಆದರೆ ಲೋಕಸಭೆಯಲ್ಲಿ ಅದಕ್ಕೆ ಅವಕಾಶ ಆಗಲಿಲ್ಲ. ಲೋಕಸಭೆಯಲ್ಲಿ ವಿಧೇಯಕವನ್ನು ಮಂಡಿಸಲು ಯತ್ನಿಸಿದಾಗ ಹೈಡ್ರಾಮಾ, ಹಂಗಾಮಾ ನಡೆಯಿತು. ಆಗ
ಕಾನೂನು ಸಚಿವರಾಗಿದ್ದ ಎಚ್.ಆರ್ ಭಾರದ್ವಾಜ್ ಅವರು ಬಿಲ್ ಮಂಡಿಸಲು ಮುಂದಾದಾಗ ಮಹಿಳಾ ಸದಸ್ಯರು ಸರಪಳಿ ನಿರ್ಮಿಸಿದರು. ಆದರೂ ವಿಧೇಯಕ ವನ್ನು ವಿರೋಧಿಸಿದ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಸಚಿವರತ್ತ ನುಗ್ಗಿ ಅವರ ಬಳಿಯಿದ್ದ ವಿಧೇಯಕದ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕಲು ಯತ್ನಿಸಿದರು. ಇಷ್ಟು ರಾದ್ಧಾಂತ ಮತ್ತು ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ವಿಧೇಯಕ ಅಂಗೀಕಾರವಾಗಲಿಲ್ಲ. ಈಗಲೂ ಹಾಗೆಯೇ ಇದೆ. ಅಲ್ಲಿ ಇನ್ನೂ ಕೊಳೆ ಯುತ್ತ ಬಿದ್ದಿದೆ.
ಹಾಗಾದರೆ ಯಾಕೆ ಈ ಬಿಲ್ ಪಾಸಾಗುತ್ತಿಲ್ಲ? ಯಾಕೆಂದರೆ ವಿಧೇಯಕದಲ್ಲಿ ಅಡಕವಾಗಿರುವ ವಿಷಯಗಳ ಬಗ್ಗೆ ವಿಭಿನ್ನ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಇಲ್ಲ.
ಹಾಗೆ ಹೇಳುವುದಕ್ಕಿಂತ ತಕರಾರು ಇದೆ ಎನ್ನುವುದು ಹೆಚ್ಚು ಸೂಕ್ತ. ಲಾಲು ಯಾದವ್ ನೇತೃತ್ವದ ಆರ್‌ಜೆಡಿ ಹಾಗೂ ಸಮಾಜವಾದಿ ಪಾರ್ಟಿ ಪಕ್ಷಗಳೇ ಇದರ ಪ್ರಮುಖ ವಿರೋಧಿಗಳು.
ಸರದಿಯ ಆಧಾರದ ಮೇಲೆ ಶೇ.33 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಉದ್ದೇಶವನ್ನು ವಿಧೇಯಕ ಹೊಂದಿದೆ. ಇದನ್ನು ಲಾಟರಿ ಮೂಲಕ ನಿಗದಿಪಡಿಸಬೇಕೆಂಬ ಅಂಶವನ್ನು ಸೇರ್ಪಡೆ ಮಾಡಲಾಗಿತ್ತು. ಮೂರು ಚುನಾವಣೆಗಳಲ್ಲಿ, ಒಂದರಲ್ಲಿ ಮಾತ್ರ ನಿರ್ದಿಷ್ಟ ಕ್ಷೇತ್ರವು ಹಿಳೆಯರಿಗೆ ಮೀಸಲಾಗುವ ವ್ಯವಸ್ಥೆ ಅದರಲ್ಲಿತ್ತು. ಇಷ್ಟಕ್ಕೂ ವಿರೋಧಕ್ಕೆ ಕಾರಣವೇನು?
ಒಂದಲ್ಲ ಎರಡಲ್ಲ. ಬೇಕಾದಷ್ಟಿವೆ. ಒಂದೊಂದಾಗಿ ನೋಡುವುದಾದರೆ : ಮಹಿಳಾ ಮೀಸಲಿನಲ್ಲೇ ಪರಿಶಿಷ್ಟರಿಗೆ ಒಳಮೀಸಲು ಬೇಕು ಎಂಬುದು ಎಸ್‌ಪಿ ಮತ್ತು ಆರ್ ಜೆಡಿಗಳ ಹಕ್ಕೊತ್ತಾಯವಾಗಿದೆ. ಮಹಿಳೆಯರಿಗೆ ಈ ರೀತಿಯಾಗಿ ಕ್ಷೇತ್ರಗಳನ್ನು ಮೀಸಲಿಟ್ಟರೆ ಅವರು ಅದರ ಆಧಾರದಲ್ಲಿ ಆಯ್ಕೆಯಾಗುತ್ತಾರೆ. ಮೀಸಲು ಕೋಟಾದಲ್ಲಿ ಆಯ್ಕೆಯಾದ ವರು ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಳ್ಳಬೇಕಾಗುತ್ತದೆ. ಪುರುಷರ ಜತೆ ಸ್ಪಽಸಲು ಅಸಮರ್ಥರು ಎಂಬ ಭಾವನೆ ಉಂಟಾಗುತ್ತದೆ. ಅಲ್ಲಿಗೆ ಸಮಾನತೆ ಎಂಬ ಪದಕ್ಕೆ ಏನು ಅರ್ಥ ಎಂಬುದು ಕೆಲವರ ವಾದ.
ಮೀಸಲು ಎಂದು ನಿಗದಿಮಾಡಿದ ಮೇಲೆ ಅಷ್ಟು ಸ್ಥಾನಗಳನ್ನು ಎಲ್ಲ ಪಕ್ಷಗಳೂ ಕಡ್ಡಾಯವಾಗಿ ಮಹಿಳೆಯರಿಗೆ ಬಿಟ್ಟುಕೊಡಬೇಕಾಗುತ್ತದೆ. ಅಷ್ಟು ಸಂಖ್ಯೆಯ ಮಹಿಳೆಯರು ಸಿಗುತ್ತಾರೆಯೇ ಎಂಬುದು ಒಂದು ಪ್ರಶ್ನೆ. ಅಥವಾ ಅರ್ಹತೆ, ಸಾಮರ್ಥ್ಯ ಇಲ್ಲದಿದ್ದರೂ ಅನಿವಾರ್ಯವಾಗಿ ಕೊಡಬೇಕಾಗುತ್ತದೆ. ಇದರಿಂದ ಪಕ್ಷಗಳ ಕೈಕಟ್ಟಿ ಹಾಕಿದಂತಾಗುತ್ತದೆ. ಅರ್ಹರು, ಸಮರ್ಥರು, ದಕ್ಷರ ಆಯ್ಕೆಗೆ ತೊಡಕಾಗುತ್ತದೆ. ಮಹಿಳಾ ಮೀಸಲು ಕ್ಷೇತ್ರಗಳು ಬದಲಾಗುವ ಕಾರಣ ಯಾರೂ ನಿರ್ದಿಷ್ಟ ಕ್ಷೇತ್ರವನ್ನು ಪೋಷಿಸಿಕೊಂಡು ಹೋಗುವುದಿಲ್ಲ. ಹೀಗಾಗಿ ಅದು ನಿರ್ಲಕ್ಷ್ಯಕ್ಕೆ ಒಳಗಾಗಬಹುದು.
ಮೀಸಲು ವಿರೋಧಿಗಳು ಪಟ್ಟಿ ಮಾಡುವ ಪ್ರಕಾರ ಇನ್ನೊಂದಿಷ್ಟು ಸಮಸ್ಯೆಗಳಿವು : ಮಹಿಳಾ ಮೀಸಲು ಈಗ ಪಂಚಾಯಿತಿಗಳಲ್ಲಿ ಜಾರಿಯಲ್ಲಿದೆ. ವಿಪರ್ಯಾಸ ವೆಂದರೆ ಮಹಿಳೆಯರು ಸದಸ್ಯರಾಗಿದ್ದರೂ ಅವರು ನಾಮಕೆ ವಾಸ್ತೆ ಎಂಬ ಪರಿಸ್ಥಿತಿ ಅನೇಕ ಕಡೆಗಳಲ್ಲಿ ಇರುವುದು ವಾಸ್ತವ. ಗಂಡ, ಸೋದರ, ಮಾವ ಇವರದೇ ನೈಜ ಅಧಿಕಾರ, ಅವರದೇ ಪಾರುಪತ್ಯ ಎನ್ನುವಂತಾಗಿದೆ. ಅನೇಕ ಪಂಚಾಯಿತಿ ಸಭೆಗಳಲ್ಲಿ ಗಂಡಂದಿರೇ ರಾಜಾರೋಷವಾಗಿ ಭಾಗವಹಿಸಿದ ನಿದರ್ಶನಗಳಿವೆ. ಹೊರಗಡೆಯೂ ಅವರದೇ ದರ್ಬಾರು. ಹೀಗಾದರೆ ಮಹಿಳಾ ಮೀಸಲಿಗೆ ಏನು ಅರ್ಥ? ಅದರ ಉದ್ದೇಶ ಹೇಗೆ ಸಾರ್ಥಕವಾದೀತು ಎಂಬ ಪ್ರಶ್ನೆ.
ಗಂಡಂದಿರು ಮತ್ತಿತರರ ಹಸ್ತಕ್ಷೇಪ ಕಂಡುಬಂದರೆ ಅಂಥ ಮಹಿಳೆಯರ ಸದಸ್ಯತ್ವ ರದ್ದು ಪಡಿಸುವ ಕುರಿತಂತೆ ಈಚೆಗೆ ಕೋರ್ಟ್ ತೀರ್ಪೊಂದು ಬಂದಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲೂ ಇದೇ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂಬ ಖಾತರಿ ಏನು ಎಂಬುದು ವಿರೋಧಿಗಳ ಪ್ರಶ್ನೆ. ಆದರೆ ಇದು ಅನಗತ್ಯ ಸಂಶಯ ಎಂಬುದು ಮೀಸಲು ಪರವಾಗಿರುವರ ವಾದ. ದೇಶಾದ್ಯಂತ 14 ಲಕ್ಷ ಮಹಿಳೆಯರು ಪಂಚಾಯಿತಿ ಸದಸ್ಯರಾಗಿದ್ದಾರೆ.
ಹಾಗಾದರೆ ಅವರೆಲ್ಲರೂ ಅದಕ್ಷರೇ? ಸಾಮರ್ಥ್ಯ ಇರುವವರಿಲ್ಲವೆ? ಒಳ್ಳೆಯ ಕೆಲಸ ಮಾಡಿದ ಬಹಳಷ್ಟು ಉದಾಹರಣೆಗಳಿವೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯ
ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲು ನೀಡಿರುವೆ. ಇದು ಸಾಧ್ಯವಾಗುವುದಾದರೆ ಅಲ್ಲೇಕೆ ಸಾಧ್ಯವಾಗದು? ದೇಶದ ಜನಸಂಖ್ಯೆ ಯಲ್ಲಿ ಶೇ.48.5ರಷ್ಟು ಮಹಿಳೆಯರಿದ್ದಾರೆ.
ಸಮಾನತೆಯ ಲೆಕ್ಕದಲ್ಲಿ ಇಷ್ಟು ಪ್ರಮಾಣದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಆದರೆ ಕನಿಷ್ಠ ಶೇ. 33 ರಷ್ಟನ್ನಾದರೂ ನೀಡಲು ಏನು ಸಮಸ್ಯೆ ಎಂದರೆ ಮತ್ತದೇ ಇಚ್ಛಾಶಕ್ತಿಯ ಕೊರತೆಯ ಸಮಸ್ಯೆ ಅಷ್ಟೆ. ಇಷ್ಟಕ್ಕೂ ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ
ಮಟ್ಟಕ್ಕೆ ಹೋಲಿಸಿದರೆ ನಿರಾಶಾದಾಯಕ ಚಿತ್ರಣ ಸಿಗುತ್ತದೆ.
ಮಹಿಳಾ ಪ್ರಾತಿನಿಧ್ಯ ಕುರಿತಂತೆ, ಒಟ್ಟು 198 ದೇಶಗಳಲ್ಲಿ ಭಾರತ 148 ನೇ ಸ್ಥಾನದಲ್ಲಿದೆ. ಅಂದರೆ ತುಂಬ ಕೆಳಗೆ. ಅದೇ ರೀತಿ ಜಾಗತಿಕವಾಗಿ ಮಹಿಳಾ ಪ್ರಾತಿನಿಧ್ಯ ಶೇ. 25.8 ಆದರೆ ಭಾರತದಲ್ಲಿ 2019 ರ ಚುನಾವಣೆ ಬಳಿಕ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ 78 ಇದೆ. ಅಂದರೆ ಶೇ. 14.4
ರಾಜ್ಯಸಭೆಯಲ್ಲೂ ಹೇಳಿಕೊಳ್ಳುವಂಥ ಪ್ರಾತಿನಿಧ್ಯವಿಲ್ಲ. ಅಲ್ಲಿ ಮಹಿಳಾ ಸದಸ್ಯರ ಪ್ರಮಾಣ ಶೇ. 11.6 ಅಷ್ಟೆ. ಹಾಗೆಂದು ನಮ್ಮ ದೇಶದ ಶಾಸಕಾಂಗ ಸಭೆಗಳು ಹಾಗೂ ಪ್ರಮುಖ ಸಾಂವಿಧಾನಿಕ ಹುದ್ದೆ ನೀಡಿಕೆ ವಿಚಾರದಲ್ಲಿ ಮಹಿಳೆಯರಿಗೆ ಮಹತ್ವ ಇಲ್ಲ ಎಂದೇನೂ ಇಲ್ಲ.
ಮಹಿಳೆಯರು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂದಿರಾ ಗಾಂಧಿಯವರು 15 ವರ್ಷಗಳ ಕಾಲ ಪ್ರಧಾನಿಯಾಗಿದ್ದವರು. ಆಗ ಅವರ ಸಂಪುಟದಲ್ಲಿ
ಅವರೊಬ್ಬರೇ ಪುರುಷರು ಎಂಬಷ್ಟರ ಮಟ್ಟಿಗೆ ಪ್ರಭಾವಿ ಮತ್ತು ಪ್ರಬಲರಾಗಿದ್ದರು. ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾಗಿದ್ದಾರೆ. ಮೀರಾ ಕುಮಾರ್ ಹಾಗೂ ಸುಮಿತ್ರಾ ಮಹಾಜನ್ ಅವರು ಸ್ಪೀಕರ್ ಆಗಿದ್ದರು. ವಿದೇಶಾಂಗ, ವಿತ್ತ, ರಕ್ಷಣೆಯಂಥ ಮಹತ್ವದ ಖಾತೆಗಳನ್ನು ಮಹಿಳೆಯರು ನಿಭಾಯಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಾದವರಿದ್ದಾರೆ.
ಒಂದು ಕಾಲಕ್ಕೆ ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಗಳಾಗಿದ್ದರು. ಹಿಂದೆ ಸುಷ್ಮಾ ಸ್ವರಾಜ್, ಉಮಾ ಭಾರತಿ, ಶೀಲಾ ದೀಕ್ಷಿತ್, ವಸುಂಧರಾ ರಾಜೆ ಮೊದಲಾದವರು ಮುಖ್ಯಮಂತ್ರಿಗಳಾಗಿದ್ದರು. ಹಲವರು ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸೋನಿಯಾ ಗಾಂಧಿಯವರು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಆದರೆ ಈಗ ಮಮತಾ ಅವರೊಬ್ಬರೇ ಮುಖ್ಯಮಂತ್ರಿ. ರಾಜ್ಯದ ವಿಷಯಕ್ಕೆ ಬಂದರೂ ಪರಿಸ್ಥಿತಿ ಅಷ್ಟು
ಆಶಾದಾಯಕವಾಗೇನೂ ಇಲ್ಲ. ಈ ಹಿಂದೆ ಮಾರ್ಗರೆಟ್ ಆಳ್ವ, ಬಸವರಾಜೇಶ್ವರಿ ಮೊದಲಾದವರು ಕೇಂದ್ರ ಸಚಿವರಾಗಿದ್ದರೂ ಇತ್ತೀಚೆಗೆ ಯಾರೂ ಇರಲಿಲ್ಲ.
ನಿರ್ಮಲಾ ಸೀತಾರಾಮನ್ ಅವರು ಹೆಸರಿಗೆ ಮಾತ್ರ ರಾಜ್ಯದವರು. ಆದರೆ ಇದೀಗ ಶೋಭಾ ಕರಂದ್ಲಾಜೆ ಸಚಿವರಾಗಿದ್ದಾರೆ. ಇನ್ನು ರಾಜ್ಯ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವೂ ಅಷ್ಟಕ್ಕಷ್ಟೆ.
ಕಳೆದ ಚುನಾವಣೆಯಲ್ಲಿ ಆರು ಸದಸ್ಯರಿದ್ದರು. ಈ ಬಾರಿ ಒಂದು ಹೆಚ್ಚಾಗಿ ಏಳು ಸದಸ್ಯರಿದ್ದಾರೆ. ಮಹಿಳೆಯರಿಗೆ ಶಾಸ ಹಾಗೂ ಭೂಷಣಕ್ಕೆ ಎಂಬಂತೆ ಒಂದು ಮಂತ್ರಿ ಸ್ಥಾನ ಇರುತ್ತದೆ. ಅದು ಮಹಿಳಾ ಮತ್ತು ಕಲ್ಯಾಣ ಖಾತೆಯೇ ಹೆಚ್ಚು. ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಮಹಿಳಾ ಪ್ರಾತಿನಿಧ್ಯ ತುಂಬ ಕಡಿಮೆ ಇದೆ.
ಇಷ್ಟಾಗಿಯೂ ಚುನಾವಣೆಯಲ್ಲಿ ಮಹಿಳೆಯರ ಯಶಸ್ಸಿನ ಸಾಧನೆ ಪುರುಷರಿಗೆ ಹೋಲಿಸಿದರೆ ಚೆನ್ನಾಗಿಯೇ ಇದೆ. ಅಂದರೆ ಟಿಕೆಟ್ ಕೊಟ್ಟ ಮಹಿಳೆಯರಲ್ಲಿ ಗೆದ್ದವರ
ಸಂಖ್ಯೆ ಪುರುಷರಿಗಿಂತ ಉತ್ತಮವಾಗಿದೆ. ಇದು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳೆರಡಕ್ಕು ಅನ್ವಯವಾಗುತ್ತದೆ. ಮಹಿಳಾ ಅಭ್ಯರ್ಥಿಗಳ ಗೆಲುವಿನ ಪಾಲು ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕವಾಗಿದೆ. ಶೇ.14 ರಷ್ಟು. ಆದರೆ ಕರ್ನಾಟಕ ಈ ವಿಚಾರದಲ್ಲಿ ಸಾಕಷ್ಟು ಹಿಂದಿದೆ. ಅಂದರೆ ಕೊನೆಯಿಂದ ನಾಲ್ಕನೇ ಸ್ಥಾನದಲ್ಲಿದೆ. ಇದು 2011-2021 ರ ನಡುವಿನ ಚಿತ್ರಣ. ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲವರ್ಧನೆಗೊಳಿಸಿ,
ಅಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಿದ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದು. ಅದರೆ ಈಗ ವಿಧಾನಸಭೆಗಳ ಮಹಿಳೆಯರ ಪ್ರಾತಿನಿಧ್ಯದತ್ತ ಯಾವ
ಪಕ್ಷಗಳೂ ಅಷ್ಟಾಗಿ ಗಮನ ಹರಿಸುತ್ತಿಲ್ಲ.
ಎಲ್ಲ ರಂಗಗಳಲ್ಲಿ ಮಹಿಳೆಯರು ಮುಂದೆ ಬಂದಿದ್ದಾರೆ. ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಲ್ಲ ಬಗೆಯ ಕೆಲಸಗಳನ್ನು ಮಾಡಲು ತಾವು ಸಮರ್ಥರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ರಾಜಕೀಯ ರಂಗದಲ್ಲಿ ಮಾತ್ರ ಏಕೆ ಹೀಗೆ ಎಂಬುದು ಮುಖ್ಯವಾದ ಪ್ರಶ್ನೆ. ಜನಸಂಖ್ಯೆಯಲ್ಲಿ ಸರಿಸುಮಾರು ಶೇ.50 ರಷ್ಟಿದ್ದರೂ ರಾಜಕೀಯ ಪ್ರಾತಿನಿಧ್ಯದಲ್ಲಿ ಮಾತ್ರ ಅವರಿಗೆ ಯಾಕೆ ಆದ್ಯತೆ, ಪ್ರಾಮುಖ್ಯತೆ, ಸಮಾನತೆ ಸಿಗುತ್ತಿಲ್ಲ ? ಈ ಕ್ಷೇತ್ರದಲ್ಲಿ ಮಾತ್ರ ಯಾಕೆ ಇನ್ನೂ
ಹಿಂದುಳಿದವರಾಗಿದ್ದಾರೆ. ಅವಕಾಶ ಕೊಟ್ಟರೆ ಅವರೂ ಸಾಧಿಸಿ ತೋರಿಸಬಲ್ಲರು. ಆದರೆ ಟಿಕೆಟ್ ಕೊಡುವುದರಲ್ಲೆ ಅಸಡ್ಡೆ, ತಾರತಮ್ಯ ಇದೆ. ಅದಕ್ಕಾಗಿಯೇ
ಹೋರಾಡಬೇಕಾಗಿದೆ.
ಈ ಕಾರಣಕ್ಕಾಗಿಯೇ ಅವರಿಗೆ ಮೀಸಲು ಅಗತ್ಯ ಎಂಬುದು ಮಹಿಳಾ ಮೀಸಲು ವಿಧೇಯಕದ ಪರವಾಗಿರುವವರ ವಾದ ಮತ್ತು ಅದರ ಉದ್ದೇಶ. ಆದರೆ ಇಲ್ಲ ಸಲ್ಲದ ತಕರಾರುಗಳನ್ನು ಎತ್ತಿ ಈ ವಿಧೇಯಕಕ್ಕೆ ಅಡ್ಡಿ ಉಂಟು ಮಾಡಲಾಗುತ್ತಿದೆ. ಇದಕ್ಕೆಲ್ಲ ಸೂಕ್ತ ವಿವರಣೆ ಕೊಟ್ಟ ಬಳಿಕವೂ ವಿಧೇಯಕ ಅಂಗೀಕರಿಸಲು ಮೀನಮೇಷ ಎಣಿಸುತ್ತಿರುವುದರ ಹಿಂದೆ ಯಾವುದೇ ತರ್ಕಕ್ಕಿಂತ ಮನಸ್ಸಿಲ್ಲದಿರುವುದೇ ಮುಖ್ಯ ಕಾರಣ ಎನಿಸುತ್ತಿದೆ. ಏಕೆಂದರೆ ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆಯರಿಗೆ ಅಷ್ಟು ಸಂಖ್ಯೆಯ ಸೀಟುಗಳನ್ನು ಬಿಟ್ಟುಕೊಟ್ಟರೆ ತಾವೆಲ್ಲಿ ಹೋಗಬೇಕು ಹಾಗೂ ಕ್ರಮೇಣ ತಮ್ಮ ಪ್ರಾಬಲ್ಯ ಮತ್ತು ಪ್ರಾಮುಖ್ಯತೆಗೆ ಎಲ್ಲಿ ಕುಂದು ಉಂಟಾಗುವುದೋ, ಸಂಚಕಾರ ಬರುವುದೋ ಎಂಬ ಅಳುಕು ಮತ್ತು ಶಂಕೆ ಮುಖ್ಯ ಕಾರಣವಾಗಿದೆ.
ಆದರೆ ಹೀಗೆ ಒತ್ತಾಯ ಪೂರ್ವಕವಾಗಿ ಕಾನೂನಿನ ಮೂಲಕ ಮಹಿಳಾ ಮೀಸಲು ಕೊಡುವ ಬದಲು ರಾಜಕೀಯ ಪಕ್ಷಗಳೇ ಸ್ವಯಂ ಪ್ರೇರಣೆಯಿಂದ ಮಹಿಳೆಯ ರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬಹುದು ಎಂಬುದು ಮತ್ತೊಂದು ಅಭಿಪ್ರಾಯ. ಹೌದು. ಇದರಿಂದ ಕಾನೂನು ತೊಡಕು, ಬೇಕು ಬೇಡವೆಂಬ ಹಗ್ಗ ಜಗ್ಗಾಟದ ರಗಳೆ ಇಲ್ಲದೆ ಸುಲಭವಾಗಿ,ಅನಧಿಕೃತವಾಗಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬುದು ನಿಜ. ಇಲ್ಲಿ ಮತ್ತೊಂದು ಅಂಶ ಗಮನಾರ್ಹ. ಸಂಸತ್ತಿ ನಲ್ಲಿ 370 ನೇ ವಿಧಿ ರದ್ದು ಕುರಿತಾದ ತಿದ್ದುಪಡಿ ವಿದೇಯಕ ಪಾಸಾಗುತ್ತದೆ. ಜಿಎಸ್‌ಟಿ ವಿದೇಯಕ ಅಂಗೀಕರಿಸಲು ವಿಶೇಷ ಅಧಿವೇಶನ ಕರೆಯಲಾಗುತ್ತದೆ. ಆದರೆ ಮಹಿಳಾ ಮೀಸಲು ವಿಧೇಯ ಕದ ವಿಚಾರದಲ್ಲಿ ಮಾತ್ರ ಯಾರೂ ಮಾತೇ ಆಡುವುದಿಲ್ಲ.
ಅಷ್ಟೇಕೆ ಬೇರೆ ಎಷ್ಟೊ ವಿಷಯಗಳಲ್ಲಿ ಹೊರಗಡೆಯೂ ಸಾಕಷ್ಟು ಪ್ರತಿಭಟನೆ ನಡೆಯುತ್ತವೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ದೊಡ್ಡ ಗಲಾಟೆ ಯಾಗುತ್ತದೆ. ಆದರೆ ಮಹಿಳಾ ಮೀಸಲು ವಿಷಯದಲ್ಲಿ ಮಹಿಳೆಯರು ಸಹ ದೊಡ್ಡದಾಗಿ ದನಿ ಎತ್ತುವುದಿಲ್ಲ. ಈ ವಿಧೇಯಕ ಇದೀಗ ಅಪ್ರಸ್ತುತವಾಗಿದೆ
ಎಂದು ಮೊನ್ನೆ ಮೊನ್ನೆ ಬೃಂದಾ ಕಾರಟ್ ಹೇಳಿದ ನೆನಪು. ಅಂದರೆ ಮಹಿಳಾ ಮೀಸಲು ವಿಧೇಯಕವು ಅದೇಕೊ ಯಾರಿಗೂ ಬೇಡವಾದ ಕೂಸಾಗಿದೆ. ಹೀಗಾಗಿಯೇ ಆ ವಿಧೇಯಕ ಬಡವಾಗಿದೆ. ಈ ಪರಿಸ್ಥಿತಿ ಾವಾಗ ಬದಲಾಗುವುದೋ ಎಂದು ಕಾದುನೋಡಬೇಕು.
ನಾಡಿಶಾಸ್ತ್ರ
ಮಹಿಳಾ ಸಮಾನತೆ ಎಂದು ಬಾಯಲ್ಲಿ ಹೇಳುವರು
ಮಹಿಳಾ ಮೀಸಲಿಗೆ ಮಾತ್ರ ಅವಕಾಶ ಕೊಡಲೊಲ್ಲರು
ನಾಲ್ಕು ಬಾರಿ ಸಂಸತ್ತಿನಲ್ಲಿ ಮಂಡನೆಯಾದರು
ಬಿಲ್, ಬಿಲ್‌ಕುಲ್ ಪಾಸು ಮಾಡುತ್ತಿಲ್ಲ ಸಂಸದರು