ಅಭಿಮತ
ಮೋಹನದಾಸ ಕಿಣಿ
ನಮ್ಮ ನಾಯಕ ಮಹಾಶಯರು ಆಗಿಂದಾಗ್ಗೆ ಉದುರಿಸುವ ನುಡಿಮುತ್ತುಗಳು: ಶ್ರೀಯುತರು ಆ ಜಾತಿಗೆ ಸೇರಿದವರಾದರೂ ಒಳ್ಳೆಯವರು. (ಏಕೆಂದರೆ ಅವರು ಈಗ ‘ಈ’ ಪಕ್ಷದಲ್ಲಿದ್ದಾರೆ) ‘ಈ’ ಜಾತಿಯವರಾಗಿ ‘ಆ’ ಪಕ್ಷದಲ್ಲಿ ಇರಬಾರದಿತ್ತು(ಅವರು ಬೇರೆ ಪಕ್ಷದಲ್ಲಿ ಇದ್ದಾರೆ)ಈ ಜಾತಿಯವರಾಗಿ ಇಷ್ಟು ಕೆಟ್ಟವರೆಂದು ಯಾರೂ ನಂಬ ಲಾರರು ಇಂತಹ ಹೇಳಿಕೆಗಳ ಅರ್ಥವಾದರೂ ಏನು? ಎಲ್ಲವನ್ನೂ ಜಾತಿಯ ನೆಲೆಯಲ್ಲಿ ಅಳೆಯುವ ಮನಸ್ಥಿತಿಯಿಂದ
ಸಾಧಿಸುವುದಾದರೂ ಏನನ್ನು? ಕೇವಲ ಜಾತಿ ಕಾರಣಕ್ಕೆ ಯಾರಾದರೂ ಒಳ್ಳೆಯವರು ಅಥವಾ ಕೆಟ್ಟವರಾಗುತ್ತಾರೆಯೇ? ಹಾಗೆಯೇ ಒಂದು ಪಕ್ಷದ ಸದಸ್ಯರಾದ ಮಾತ್ರಕ್ಕೆ ಒಳ್ಳೆಯವರಾಗಿದ್ದವರು ಕೆಟ್ಟವರಾಗಿ ಅಥವಾ ಕೆಟ್ಟವರು ಒಳ್ಳೆಯವರಾಗಿ ಬದಲಾಗುವುದು ಸಾಧ್ಯವೇ? ಯಾವುದೇ ಜಾತಿ ಅಥವಾ ಪಕ್ಷ ಮನುಷ್ಯನ ಸ್ವಭಾವದ ಬದಲಾವಣೆಯ ಮಂತ್ರದಂಡವಾಗಿರುತ್ತಿದ್ದರೆ ದೇಶದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ.
ಸಂವಿಧಾನದಲ್ಲಿ ಕೆಲವು ನಿರ್ದಿಷ್ಟ ವರ್ಗದವರಿಗೆ, ಅದೂ ಕೂಡಾ ಕೇವಲ ಹತ್ತು ವರ್ಷಗಳ ಅವಧಿಗೆ, ವಿದ್ಯಾರ್ಜನೆ ಮತ್ತು ಉದ್ಯೋಗದಲ್ಲಿ ಮಾತ್ರ
ಮೀಸಲಾತಿಗೆ ಅವಕಾಶ ಮಾಡಲಾಗಿತ್ತು. ಅಂದಿನ ಕಾಲಕ್ಕೆ ಅದು ಅಗತ್ಯವಾಗಿತ್ತು ಕೂಡಾ. ಅಲ್ಲಿಂದೀಚೆಗೆ ಹಲವಾರು ಕ್ಷೇತ್ರಗಳಿಗೆ ಇದನ್ನು ವಿಸ್ತರಿಸಿದ್ದು ತಾತ್ವಿಕವಾಗಿ ಇದು ಸ್ವಲ್ಪ ಮಟ್ಟಿಗೆ ಸರಿಯಿರಬಹುದು, ಆದರೆ ಮೂಲತಃ ಯಾವ ಉದ್ದೇಶಕ್ಕಾಗಿ ತರಲಾಗಿದೆಯೋ ಅದು ಸಾಧಿಸಲ್ಪಟ್ಟಿದೆಯೇ ಎಂಬ ಪ್ರಶ್ನೆಗೆ ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲ ಎನ್ನುವುದೇ ಉತ್ತರವಾಗಿದೆ.
ಜಾತಿ ಆಧಾರಿತ ಮೀಸಲಾತಿಯ ಪ್ರಯೋಜನ ಪಡೆದು ಆರ್ಥಿಕವಾಗಿ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಅನ್ವಯಿಸಿ ಸುಧಾರಿಸಿದರೂ ಆರ್ಥಿಕವಾಗಿ ದುರ್ಬಲವಾಗಿರುವ ಅವರದೇ ಜಾತಿಯ, ವರ್ಗದ, ಇತರರಿಗಾಗಿ ತಮಗೆ ಸಿಕ್ಕ ಅವಕಾಶಗಳನ್ನು ತ್ಯಾಗ ಮಾಡಿದವರಿದ್ದಾರೆಯೆ? ಏಕೆಂದರೆ ಇದನ್ನು ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲ, ಏನಿದ್ದರೂ ಅಂತಹುದನ್ನು ಕೇವಲ ಫಲಾನುಭವಿಗಳೇ ಮಾಡಬೇಕಾಗುತ್ತದೆ. ಹಾಗೆ ಮಾಡುವುದರಿಂದ ಮಾತ್ರವೇ ಹಿಂದುಳಿದವರನ್ನು ಮುಂದೆ ತರುವ ಸಾಮಾಜಿಕ ನ್ಯಾಯ ಸಾಧ್ಯವಾದೀತು ಮತ್ತು ಸಂವಿಧಾನದ ಮೂಲ ಉದ್ದೇಶ ಸಫಲವಾದೀತು, ಅನ್ಯಥಾ ಸಾಧ್ಯವಿಲ್ಲ.
ಆರಂಭದಲ್ಲಿ ವಿದ್ಯಾರ್ಜನೆ ಮತ್ತು ಉದ್ಯೋಗದಲ್ಲಿ ಮಾತ್ರ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿತ್ತು. ಕ್ರಮೇಣ ಅದನ್ನು ಬೇರೆ ಬೇರೆ
ಕ್ಷೇತ್ರಗಳಿಗೆ ವಿಸ್ತರಿಸಲಾಗಿದ್ದು ಅವುಗಳ ಸಾಧಕ- ಬಾಧಕಗಳ ಬಗ್ಗೆ ಚಿಕ್ಕದೊಂದು ಪಕ್ಷಿನೋಟ. ವಿಧಾನಸಭೆ, ವಿಧಾನ ಪರಿಷತ್ ಮತ್ತು ಲೋಕಸಭಾ
ಸ್ಥಾನಗಳ ಮೀಸಲಾತಿಗೆ ಸಂವಿಧಾನದಲ್ಲಿಯೇ ಅವಕಾಶವಿದೆ. ಕ್ರಮೇಣ ಇದನ್ನು ಸ್ಥಳೀಯ ಸಂಸ್ಥೆಗಳಿಗೆ ಮತ್ತು ಸ್ಥಳೀಯ ಸಂಸ್ಥೆಯ ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗಳಿಗೆ ವಿಸ್ತರಿಸಲಾಯಿತು.ಇದರ ಸರಿ ತಪ್ಪುಗಳ ಬಗ್ಗೆ ಚರ್ಚೆ ಬೇಡ. ಆದರೆ ಇದು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎಂಬುದಷ್ಟೇ ಪ್ರಸ್ತುತ ವಾಗುತ್ತದೆ.
ಮೊದಮೊದಲಿಗೆ ಇದು ಸರಿಯಾಗಿತ್ತು. ಆದರೆ ಕ್ರಮೇಣ ರಾಜಕಾರಣಿಗಳ ಸ್ವಾರ್ಥವೋ, ಬಹುಮತ ಇಲ್ಲದಿದ್ದರೂ ಆಡಳಿತ ಚುಕ್ಕಾಣಿ ಹಿಡಿಯಲು ಒಳದಾರಿಯಾಗಿ ಬಳಸುವ ಹುನ್ನಾರವೋ ಇನ್ಯಾವುದೋ ಕಾರಣವಾಗಿ, ಒಂದೋ ದೀರ್ಘಾವಧಿ ಚುನಾವಣೆಯೇ ಇಲ್ಲದೆ ಅಥವಾ ಚುನಾವಣೆ ಆದರೂ
ಮೀಸಲಾತಿ ಇತ್ಯರ್ಥವಾಗದೇ ಆಡಳಿತವು ಅಧಿಕಾರಶಾಹಿಯ ಉಳಿದುಬಿಡುತ್ತಿದೆ. ಮೀಸಲಾತಿಯ ಪರೋಕ್ಷ ದುಷ್ಪರಿಣಾಮಗಳಲ್ಲಿ ಇದೂ ಒಂದು.
ಮೀಸಲಾತಿ ತಕರಾರಿನಿಂದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಆಡಳಿತಕ್ಕೆ ಚುನಾಯಿತ ಪ್ರತಿನಿಧಿಗಳಿಲ್ಲದೆ ಸುಮಾರು ನಾಲ್ಕು ವರ್ಷಗಳೇ
ಕಳೆದಿದೆ. ಇತರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯಾದ್ಯಂತ ಚುನಾವಣೆ ನಡೆದರೂ ಇದೇ ಕಾರಣಕ್ಕೆ ಜನಪ್ರತಿನಿಧಿಗಳು ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗದೆ
ಉಳಿದಿದೆ. ಇಂತಹದೊಂದು ಮೀಸಲಾತಿ ಅಗತ್ಯವಿದೆ ಎಂದು ಭಾವಿಸುವುದಾದಲ್ಲಿ ಅದು ಯಾವುದೇ ತಕರಾರಿಗೆ ಒಳಪಡದೆ ಚುನಾವಣೆ ಮುಗಿದ ಕೂಡಲೇ ಚುನಾಯಿತ ಪ್ರತಿನಿಧಿಗಳು ಅಧಿಕಾರ ವಹಿಸಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕಲ್ಲವೇ? ಸ್ಥಳೀಯ ಸಂಸ್ಥೆ ಮೀಸಲಾತಿಗೆ ಸೂಕ್ತ ಮಾನದಂಡವನ್ನೊಳಗೊಳ್ಳುವಂತೆ ಕಾನೂನು ನಿರೂಪಿಸಿ, ರಾಜಕೀಯ ಪಕ್ಷಕ್ಕೆ ಅಥವಾ ರಾಜಕಾರಣಿಗಳ ಸ್ವಾರ್ಥಕ್ಕೆ ಅವಕಾಶ ನೀಡದಿದ್ದರೆ ಇಂತಹ ಅಪಸವ್ಯಗಳು ತಪ್ಪಬಹುದು.
ಕೆಲವು ಮೀಸಲಾತಿ ವೈವಿದ್ಯತೆ ನೋಡಿ: ಕೃಷಿ ಇಲಾಖೆಯಿಂದ ಹೊರಡಿಸಲಾದ ಪ್ರಕಟಣೆಯೊಂದರಲ್ಲಿ ಕೀಟನಾಶಕಗಳು ಮೀಸಲಾತಿ ವರ್ಗದ ರೈತರಿಗೆ ಮಾತ್ರ ಲಭ್ಯವಿದೆ ಎಂದು ತಿಳಿಸಲಾಗಿತ್ತು. ಬೇರೆ ರೈತರ ತೋಟದಲ್ಲಿರುವ ಕೀಟಗಳಿಗೆ ಈ ಮೀಸಲಾತಿ ವಿಚಾರ ಗೊತ್ತಾ? ಒಂದು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹೀಗೊಂದು ಫಲಕ ಹಾಕಿರುವುದು ಜಾಲತಾಣದಲ್ಲಿ ಬಿತ್ತರಗೊಂಡಿತ್ತು. ಪ.ಜಾ., ಪ.ವರ್ಗದವರಿಗೆ ಉಚಿತ ಚಿಕಿತ್ಸೆ ಹಾಗಾದರೆ ಬೇರೆಯವರಿಗೆ? ಹಣವಿಲ್ಲದ ಬೇರೆ ವರ್ಗದವರು ನರಳಬೇಕೇ? ರಾಜಕೀಯ ಪಕ್ಷವೊಂದು ಕಳೆದ ಚುನಾವಣೆಯಲ್ಲಿ, ತಮ್ಮ ಪಕ್ಷ ಗೆದ್ದು ಬಂದರೆ, ಒಂದು ಧರ್ಮದವರಿಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಿ, ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವುದಾಗಿ ಲಿಖಿತ ಆಶ್ವಾಸನೆ ನೀಡಿತ್ತು!
ಭ್ರಷ್ಟಾಚಾರ, ಅತ್ಯಾಚಾರದಲ್ಲಿ ಸಿಕ್ಕಿ ಬಿದ್ದರೂ ಜಾತಿಯ ಮುಸುಕಿನಲ್ಲಿ ಪಾರಾಗುವ ಪ್ರಯತ್ನ ಮಾಡಿದ ಉದಾಹರಣೆ ಇದೆ. ಇತ್ತೀಚೆಗೆ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಹೇಮಂತ್ ಸೊರೇನ್ ಅವರ ಮೇಲೆ ಜ್ಯಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದಾಗ, ತನ್ನ ಮೇಲೆ ದಲಿತ ದೌರ್ಜನ್ಯ ಎಸಗಿzರೆಂದು ಇ.ಡಿ. ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಇದಕ್ಕೆ ತಾಜಾ ಉದಾಹರಣೆ. ಯಾರೋ ಒಬ್ಬ ಪ್ರಚಾರ ಪ್ರಿಯ, ಕಳೆದ ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಸೋಲಲು ಆಟಗಾರರ ಆಯ್ಕೆಯಲ್ಲಿ ಮೀಸಲಾತಿ ನೀಡದಿರುವುದೇ ಕಾರಣ ಎಂದಿದ್ದರು. ಇನ್ನೊಂದೆಡೆ ರಿಯಾಲಿಟಿ ಶೋನಲ್ಲಿ ತೀರ್ಪುಗಾರರು ಓರ್ವ ಸ್ಪರ್ಧಿಯ ಜಾತಿ ಯಾವುದು ಎಂದು ಗುಟ್ಟಾಗಿ ಇನ್ನೋರ್ವ ತೀರ್ಪುಗಾರರಲ್ಲಿ ವಿಚಾರಿಸಿದ್ದರು. ಆದರೆ ಧ್ವನಿ ವರ್ಧಕ ಚಾಲನೆಯಲ್ಲಿದ್ದು, ಸಂಭಾಷಣೆ ಸ್ಪಷ್ಟವಾಗಿ ಬಿತ್ತರಗೊಂಡು ನಗೆಪಾಟಲಿಗೆ ಈಡಾಗಿತ್ತು! ಹೀಗೆಯೇ ಮುಂದುವರೆದರೆ ಕ್ರಮೇಣ ತೆರಿಗೆ ವಿನಾಯಿತಿ, ಪ್ರತ್ಯೇಕ ನ್ಯಾಯಾಲಯ, ತಮ್ಮದೇ ಜಾತಿಯ, ಧರ್ಮದ ನ್ಯಾಯಾಧೀಶರು ಇರಬೇಕು, ಶಿಕ್ಷೆಯಲ್ಲೂ ವಿನಾಯಿತಿ ಬೇಕು ಎಂಬ ಬೇಡಿಕೆ ಬಂದರೂ ಆಶ್ಚರ್ಯವಿಲ್ಲ.
ಎಷ್ಟೇ ಸಿರಿವಂತರಾಗಿದ್ದರೂ ಜಾತಿ ಆಧಾರಿತ ಮೀಸಲಾತಿಯವರಿಗೆ ಶುಲ್ಕ ಪಾವತಿಯಲ್ಲಿ ವಿನಾಯ್ತಿ, ಕೆಲವು ನಿರ್ದಿಷ್ಟ ವರ್ಗದವರಿಗೆ ಉಚಿತ ತರಬೇತಿ,
ಅದೂ ಉಚಿತ ಊಟ,ವಸತಿ ವ್ಯವಸ್ಥೆ ಸಹಿತ! ಮುಂದುವರಿದ ಜಾತಿಯೆಂಬ ಹಣೆಪಟ್ಟಿಯೊಂದಿಗೆ ಹುಟ್ಟಿದ ಕಾರಣಕ್ಕೆ ಸದಾಕಾಲ ಅವಕಾಶಗಳಿಂದ
ವಂಚಿತರಾಗಿ ಉಳಿದು, ಅತ್ತ ಹಿಂದುಳಿದ ಜಾತಿಯಲ್ಲೂ ಆರ್ಥಿಕವಾಗಿ ಹಿಂದುಳಿದವರೂ ಹಿಂದೆಯೇ ಉಳಿದು ಬಿಟ್ಟಿರುವ ಉದಾಹರಣೆಗಳಿವೆ. ಎಷ್ಟೇ ಬಡವರಾದರೂ ದೊಡ್ಡ ಮೊತ್ತದ ಶುಲ್ಕ ಪಾವತಿ ಮುಂತಾದ ಕಾರಣಕ್ಕೆ ಎಷ್ಟೇ ಪ್ರತಿಭೆ ಇದ್ದರೂ ಅವಕಾಶ ಸಿಗದೇ ವಿದೇಶಕ್ಕೆ ವಲಸೆ ಹೋಗುವವರ
ಸಂಖ್ಯೆ ಹೆಚ್ಚುತ್ತಿದೆ. ಸಮಸ್ಯೆಯ ಮೂಲವನ್ನು ತಿಳಿಯುವ ಪ್ರಯತ್ನ ಮಾಡದೆ, ಗೊತ್ತಿದ್ದರೂ ಸ್ವಾರ್ಥ ರಾಜಕೀಯ ಕಾರಣಕ್ಕೆ ಜಾಣ ಕುರುಡು ಪ್ರದರ್ಶಿಸುವುದು, ವೇದಿಕೆಗಳಲ್ಲಿ ಪ್ರತಿಭಾ ಪಲಾಯನ ಎಂದು ಅಲವತ್ತುಗೊಳ್ಳುವುದು, ಇವೆಲ್ಲವೂ ವ್ಯವಸ್ಥೆಯ ವಿಡಂಬನೆಗಳಲ್ಲವೇ? ವಿದ್ಯಾರ್ಜನೆ ಯಲ್ಲಿ ಮೀಸಲಾತಿ ಇರುವುದು ಸರಿ, ಆದರೆ ಸಾಮಾನ್ಯ ವರ್ಗ ಮತ್ತು ಮೀಸಲಾತಿ ವರ್ಗದ ವಿದ್ಯಾರ್ಥಿಗಳ ನಡುವೆ ಅಪಾರ ಅಂತರವಿರುವುದರಿಂದ
ಅದೆಷ್ಟೋ ಪ್ರತಿಭಾವಂತರು ಗರಿಷ್ಠ ಅಂಕ ಗಳಿಸಿದರೂ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗದೇ ಮಾನಸಿಕವಾಗಿ ಕುಗ್ಗಿ ಹೋದ ಪ್ರಕರಣಗಳಿವೆ.
ಇದರಿಂದಾಗಿ ವಿದ್ಯಾರ್ಜನೆ ಮುಗಿದರೂ ಉದ್ಯೋಗ ಸಿಗದೆ, ಉದ್ಯೋಗ ಸಿಗದಿದ್ದ ಕಾರಣಕ್ಕೆ ವಿವಾಹ, ಮಕ್ಕಳು ಇನ್ನೂ ಹಲವು ಕಾಲಕಾಲಕ್ಕೆ ಆಗಬೇಕಾದವು ಮುಂದಕ್ಕೆ ಹೋಗುವುದರಿಂದ ಒಟ್ಟಾರೆ ಯುವ ಪೀಳಿಗೆ ಬದುಕಿನಲ್ಲಿ ನಿರಾಶೆಗೆ ತಳ್ಳಲ್ಪಟ್ಟ ಅಥವಾ ದಾರಿ ತಪ್ಪಿದ ಉದಾಹರಣೆಗಳಿವೆ.
ಇತ್ತೀಚೆಗೆ ತಂತ್ರeನ ಕ್ಷೇತ್ರದ ಪ್ರತಿಭಾವಂತನೊಬ್ಬ ಉದ್ಯೋಗದ ಆಮಿಷಕ್ಕೆ ಮರುಳಾಗಿ ವಿದೇಶಕ್ಕೆ ಹೋಗಿದ್ದು, ಅಂತಿಮವಾಗಿ ಕಾಂಬೋಡಿಯದ ಉಗ್ರವಾದಿಗಳಿಗೆ ವಸ್ತುಶಃ ಮಾರಾಟವಾದ ವರದಿ ಪ್ರಕಟವಾಗಿತ್ತು. ಇವೆಲ್ಲ ನೇರವಾಗಿ ಅಲ್ಲದಿದ್ದರೂ ಮೀಸಲಾತಿ ಮತ್ತು ಪ್ರತಿಭೆಯ ನಡುವಿನ ತಿಕ್ಕಾಟದ
ಫಲವೆನ್ನುವುದು ನಿಜವೇ ತಾನೇ! ಉದ್ಯೋಗಕ್ಕೆ ಕಾದು ನಿಲ್ಲುವ ಬದಲು ಸ್ವೋದ್ಯೋಗ ಮಾಡಬಹುದಲ್ಲ ಎಂದು ವಾದಿಸುವವರಿರುತ್ತಾರೆ.
ಹೌದು ಒಳ್ಳೆಯ ಸಲಹೆಯೇ, ಆದರೆ ಇಲ್ಲಿಯೂ ಇದೇ ಮೀಸಲಾತಿ ಮತ್ತೊಮ್ಮೆ ಅಡ್ಡ ಬರುತ್ತದೆ. ಹೇಗೆ? ಯಾವುದಾದರೂ ಉದ್ಯಮ ಮಾಡುವುದಕ್ಕೆ ಆರ್ಥಿಕ ಬೆಂಬಲವೂ ಸೇರಿದಂತೆ ಹಲವಾರು ರೀತಿಯ ರಿಯಾಯಿತಿಗಳಲ್ಲೂ ಮೀಸಲಾತಿ ಇದೆ, ಸಾಲದೆಂಬಂತೆ ಸರಕಾರಿ ಕಾಮಗಾರಿ ಮತ್ತಿತರ ಪೂರೈಕೆಗೆ ಸಂಬಂಧಿಸಿದ ಟೆಂಡರುಗಳಲ್ಲೂ ಮೀಸಲಾತಿ ಇದೆ. ಹೀಗಿರುವಾಗ ಸಾಮಾನ್ಯ ವರ್ಗದವರಿಗೆ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಹಾಗೆ ಮೀಸಲಾತಿ ವರ್ಗದಡಿ ಟೆಂಡರ್ ಪಡೆದು, ಅವರ ಪರವಾಗಿ ರಾಜಕೀಯ/ಆರ್ಥಿಕವಾಗಿ ಬಲಾಢ್ಯರು ನಿರ್ವಹಿಸುವ ಸಾಧ್ಯತೆಯೂ ಇರಬಹುದಲ್ಲವೇ?
ಈ ಮೀಸಲಾತಿ ವ್ಯವಸ್ಥೆಯ ಕದಂಬ ಬಾಹುಗಳ ವ್ಯಾಪ್ತಿ, ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಇನ್ನೊಂದಿಷ್ಟು: ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುವಾಗಲೂ ಆಯ್ಕೆ ಸಮಿತಿಯಲ್ಲಿ ಇರುವವರು (ಸಹಜವಾಗಿಯೇ ಸರಕಾರದ ಯಾವುದೇ ನೇಮಕಾತಿಯಲ್ಲಿ ಮೀಸಲಾತಿ ಇರುತ್ತದೆ) ಕೃತಿಯ ಗುಣಮಟ್ಟದ ಬಗ್ಗೆ, ತೀರ್ಪುಗಾರರ ಅಭಿಪ್ರಾಯಕ್ಕಿಂತ ಲೇಖಕರ ಜಾತಿ ಯಾವುದು ಎಂಬುದನ್ನು ಗಮನಿಸುತ್ತಾರಂತೆ!
ಪ್ರಶಸ್ತಿ ಪಡೆದವರ ಮತ್ತು ಆಯ್ಕೆ ಸಮಿತಿಯ ಸದಸ್ಯರಾಗಿದ್ಜವರ ಅನುಭವವಿದು. ಜಾತಿ ಗಣತಿ ಎಂಬ ಪಗಡೆಯಾಟವನ್ನು ರಾಜಕಾರಣಿಗಳು ಆಗಿಂದಾಗ್ಗೆ ಆಡುತ್ತಿದ್ದಾರೆ, ಎಲ್ಲದರಲ್ಲೂ ಮೀಸಲಾತಿಗೆ ಮಠಾಧೀಶರೂ ಸೇರಿದಂತೆ ಎಲ್ಲರೂ ಒತ್ತಡ ಹಾಕುವುದು, ಸೌಲಭ್ಯಗಳನ್ನು ಪಡೆಯಲು ಇನ್ನಿಲ್ಲದ ಹೋರಾಟ ಮಾಡುವುದು,ಸೌಲಭ್ಯ ಸಿಕ್ಕ ನಂತರವೂ ಆರ್ಥಿಕವಾಗಿ ಸಬಲರಾದರೂ, ಇನ್ನಷ್ಟು ಮತ್ತಷ್ಟು ಸೌಲಭ್ಯ ಪಡೆಯಲು ಹಿಂದೆಯೇ ಉಳಿಯ
ಬಯಸುವುದು, ಇದೆ ಏನನ್ನು ಸೂಚಿಸುತ್ತದೆ? ಸಂವಿಧಾನದ ಮೂಲ ಆಶಯದಂತೆ ನಿಜವಾಗಿ ಅಗತ್ಯವಿರುವವರಿಗೆ ಮಾತ್ರ, ಅದೂ ಕೂಡಾ ಅವರು
ಆರ್ಥಿಕವಾಗಿ ಬಲಿಷ್ಟರಾಗುವ ಹಂತವನ್ನು ತಲುಪುವ ತನಕ ಮಾತ್ರ ಸಿಗುವಂತಾಗಬೇಕು. ಇಲ್ಲದಿದ್ದರೆ, ಹಿಂದುಳಿದವರು ಹಿಂದೆಯೇ ಉಳಿಯುತ್ತಾರೆ.
ಅದೇ ರೀತಿ ಹಿಂದುಳಿದವರು ಮುಂದೆ ಬರಬೇಕೆಂದು ಮುಂದುವರಿದ (?) ಜಾತಿಯಲ್ಲಿ ಹುಟ್ಟಿದವರನ್ನು ತುಳಿದೇ ಸೇರಬೇಕೆಂದೇನೂ ಇಲ್ಲವಲ್ಲ? ಈ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ಪ್ರಯತ್ನಗಳಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಇದುವರೆಗೆ ಎಲ್ಲದರಲ್ಲೂ ಕೇವಲ ಜಾತಿ ಆಧಾರಿತ ಮೀಸಲಾತಿ ಇರುವಲ್ಲಿ, EWS ಅಂದರೆ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಯಾವುದೇ ಜಾತಿಗೆ ಸೀಮಿತವಾಗದ ರೀತಿಯಲ್ಲಿ ಶೇ೧೦% ಮೀಸಲಾತಿ ಜ್ಯಾರಿಗೆ ಬಂದಿದ್ದು, ಅದನ್ನು ಇದುವರೆಗಿನ ಯಾವುದೇ ವರ್ಗದ ಮೀಸಲಾತಿ ಕಡಿತಗೊಳಿಸದೆ ನೀಡಲಾಗಿದೆ. ಇದನ್ನು ಸರ್ವೋಚ್ಚ
ನ್ಯಾಯಾಲಯದ ಸಾಂವಿಧಾನಿಕ ಪೀಠವೂ ಎತ್ತಿ ಹಿಡಿದಿದೆ.
ಅದೇ ರೀತಿ ಕೇವಲ ಜಾತಿ ಆಧಾರಿತ ಮೀಸಲಾತಿಯಡಿ ಸರಕಾರಿ ಹುದ್ದೆಗಳಿಗೆ ಮಾಡಲಾಗುತ್ತಿದ್ದ ನೇಮಕಾತಿ ಪದ್ಧತಿಯನ್ನು ಬದಿಗಿರಿಸಿ, ಖಾಸಗಿ ಕ್ಷೇತ್ರದ ಪ್ರತಿಭಾನ್ವಿತರನ್ನು ನೇರವಾಗಿ ಉನ್ನತ ಹುದ್ದೆಗಳಿಗೆ ನೇಮಿಸಲಾಗುತ್ತಿದೆ. ಅಕ್ಟೋಪಸ್ ಹಿಡಿತವೆಂಬುದು ಅತ್ಯಂತ ಭೀಕರ. ಇದು ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಬೆಳೆಯುವ, ಅಪಾಯಕಾರಿ ಉಭಯ ಜೀವಿ. ಒಮ್ಮೆ ಅದರ ಹಿಡಿತಕ್ಕೆ ಸಿಕ್ಕಿದರೆ ಬಿಡುಗಡೆಯೇ ಇಲ್ಲವಂತೆ, ಹೀಗೆಯೇ ಆ ಜಾತಿ, ಈ ಜಾತಿ, ನಮ್ಮ ಜಾತಿ ಶ್ರೇಷ್ಠ ಎನ್ನುವವರು ಮಾನವ ಜಾತಿ ಶ್ರೇಷ್ಠ ಎನ್ನುವ ಕಾಲ ಬಂದಾಗ ದೇಶ ಮಾತ್ರವಲ್ಲ, ಇಡೀ ಮನುಜಕುಲ ಉದ್ಧಾರವಾದೀತು.
ಆದರೆ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿ. ಒಟ್ಟಿನಲ್ಲಿ ಈ ಅಕ್ಟೋಪಸ್ ಹಿಡಿತದಿಂದ ಬಿಡುಗಡೆಗೆ ಅಗತ್ಯವಿರುವ ಇಚ್ಛಾಶಕ್ತಿ
ಪ್ರದರ್ಶಿಸುವ ಸಮರ್ಥ ನಾಯಕ ಅವತಾರ ತಾಳಿ ಬರಲೆಂದು ಹಾರೈಸೋಣ.
(ಲೇಖಕರು: ನಿವೃತ್ತ ಕಚೇರಿ ಅಧಿಕ್ಷಕ, ಆರೋಗ್ಯ
ಇಲಾಖೆ ಮತ್ತು ಹವ್ಯಾಸಿ ಬರಹಗಾರ)