Wednesday, 18th September 2024

ರೆಸಾರ್ಟ್‌ನಲ್ಲೊಂದು ಮ್ಯಾನೇಜ್‌ಮೆಂಟ್ ಪಾಠ !

ಇದೇ ಅಂತರಂಗ ಸುದ್ದಿ

vbhat@me.com

ಕೆಲವರ್ಷದ ಹಿಂದೆ ಮೂಡಿಗೆರೆಯಿಂದ ಬರುವಾಗ, ಹಾಸನ ಹೊರವಲಯದಲ್ಲಿರುವ ಹೊಯ್ಸಳ ವಿಲೇಜ್ ರೆಸಾರ್ಟ್‌ಗೆ ಉಪಾಹಾರಕ್ಕೆಂದು ಹೋಗಿzಗ, ಕಣ್ಣ ಮುಂದೇ ನಡೆದ ಪ್ರಸಂಗವಿದು. ನಮ್ಮ ಟೇಬಲ್ ಪಕ್ಕ ಮೂವರು ಬಂದು ಕುಳಿತರು. ವೇಟರ್ ಬಂದ. ‘ಏನೇನಿದೆ ತಿಂಡಿ?’ ಎಂದು ಅವರು ಕೇಳಿದರು. ‘ಇಲ್ಲಿ ಮೂವತ್ತೆರಡು ವಿಧದ ತಿಂಡಿಗಳಿವೆ. ನೀವೇ ಆಯ್ದು (ಬಫೆ) ಸೇವಿಸಬಹುದು. ಒಬ್ಬರಿಗೆ ೪೫೦ ರುಪಾಯಿ ಪ್ಲಸ್ ಟ್ಯಾಕ್ಸ್’ ಎಂದ ವೇಟರ್.

ಅದಕ್ಕೆ ಅವರು ಹೇಳಿದರು – ‘ಅಬ್ಬಬ್ಬಾ.. ಬೆಳಗ್ಗೆ ಬೆಳಗ್ಗೆ ಅಷ್ಟೆಲ್ಲ ತಿನ್ನಲು ಆಗುವುದಿಲ್ಲ. ನಾವು ಬರಗಾಲ ದೇಶದಿಂದ ಬಂದಿಲ್ಲ. ನಮಗೆ ಎರಡು ಇಡ್ಲಿ ಮತ್ತು ಒಂದು ವಡಾ ಸಾಕು. ಅಷ್ಟೇ ಕೊಡಿ.’ ‘ಸಾರಿ ಸರ್, ಇಲ್ಲಿ ಬಫೆ ಸರ್ವೀಸ್ ಮಾತ್ರ. ಬೇಕಾದ್ರೆ ಎರಡು ಇಡ್ಲಿ ಮತ್ತು ಒಂದು ವಡಾವನ್ನೇ ತಿನ್ನಿ. ಆದರೆ
ಒಬ್ಬರಿಗೆ ೪೫೦ ರುಪಾಯಿ ಪ್ಲಸ್ ಟ್ಯಾಕ್ಸ್’ ಎಂದ. ಅದಕ್ಕೆ ಅವರು ಹೇಳಿದರು – ‘ಅರಿ, ಎರಡು ಇಡ್ಲಿ ಒಂದು ವಡಾಕ್ಕೆ ಐನೂರು ರುಪಾಯಿ ಚಾರ್ಜ್ ಮಾಡೋದು ಸರೀನಾ? ಅದು ಯಾವ ನ್ಯಾಯ?’ ಆದರೆ ಅದಕ್ಕೆ ವೇಟರ್, ‘ಇದು ಇಲ್ಲಿನ ನಿಯಮ. ತಿನ್ನೋದಾದ್ರೆ ತಿನ್ನಬಹುದು.. ಇಂದ್ರೆ …’ ಎಂದು ಹೇಳಿದ.

ಅಷ್ಟಕ್ಕೇ ಆ ಮೂವರು ಬೇಸರದಿಂದ ಎದ್ದು ಹೊರಟರು. ಈಗಷ್ಟೇ ಆಗಮಿಸಿದ ಕಸ್ಟಮರ್ಸ್ ಎದ್ದು ಹೋಗುತ್ತಿರುವುದನ್ನು ಗಮನಿಸಿದ ರೆಸಾರ್ಟಿನ ಮಾಲೀಕ ಧಾವಿಸಿದ. ‘ಏನಾಯ್ತು?’ ಎಂದು ಕೇಳಿದ. ಆ ಮೂವರು ನಡೆದುದನ್ನು ಹೇಳಿದರು. ಆಗ ಮಾಲೀಕ, ವೇಟರ್ ಹೇಳಿದ್ದನ್ನು ಸಮರ್ಥಿಸಿಕೊಂಡ.
ಅದಕ್ಕೆ ಆ ಮೂವರಲ್ಲಿ ಒಬ್ಬ ಖಡಾಖಡಿ ಹೇಳಿದ – ‘ಬೆಳಗ್ಗೆ ಯಾರು ಮೂವತ್ತೆರಡು ಐಟಮ್ಮುಗಳನ್ನು ಸೇವಿಸುತ್ತಾರೆ? ಅಷ್ಟಕ್ಕೂ ಅವೆಲ್ಲವನ್ನೂ ಸೇವಿಸ ಬೇಕೆಂದು ನೀವೇಕೆ ಬಯಸುತ್ತೀರಿ? ಅಷ್ಟು ಐಟಮ್ ಸೇವಿಸದಿದ್ದರೆ, ಸೇವಿಸದ ಐಟಮ್ಮುಗಳಿಗೆ ಯಾಕೆ ಹಣ ಪೀಕಿಸುತ್ತೀರಿ? ಸರಿ, ತಿನ್ನುವವರು ತಿನ್ನಲಿ, ಆದರೆ ನಮಗೆ ಬೇಕಾಗಿದ್ದು ಕೇವಲ ಎರಡು ಇಡ್ಲಿ ಮತ್ತು ಒಂದು ವಡಾ. ಅದಕ್ಕಾಗಿ ಉಳಿದ ಮೂವತ್ತು ಐಟಮ್ಮುಗಳನ್ನು ನಾವ್ಯಾಕೆ ಸೇವಿಸ ಬೇಕು? ಸೇವಿಸದಿದ್ದರೂ ಒಬ್ಬರಿಗೆ ೪೫೦ ರುಪಾಯಿ ಪ್ಲಸ್ ಟ್ಯಾಕ್ಸ್ ಕೊಡಿ ಅಂತೀರಾ.

ಇದ್ಯಾವ ನ್ಯಾಯ? ಇದು ಗ್ರಾಹಕ ಸ್ನೇಹಿ ಅಲ್ಲ. ಅಲ್ಲದೇ ನಿಮ್ಮಲ್ಲಿ ಅಲಾ ಕಾರ್ಟ್ (ಟೇಬಲ್ಲಿಗೆ ವೇಟರ್ ಬಂದು ಸರ್ವ್ ಮಾಡುವುದು) ಸೇವೆ ಇಲ್ಲ ಎಂದು ಹೇಳುತ್ತೀರಿ. ನೀವು ಹೇಳಿದ್ದನ್ನು ಗ್ರಾಹಕ ಯಾಕೆ ಸೇವಿಸಬೇಕು? ಅವನಿಗೆ ಬೇಕಾಗಿದ್ದನ್ನು ನೀವೇಕೆ ಕೊಡುವುದಿಲ್ಲ? ನಿಮಗೆ ಗೊತ್ತು, ಯಾರೂ ಮೂವತ್ತೆ ರಡು ಐಟಮ್ ಸೇವಿಸುವುದಿಲ್ಲವೆಂದು. ಅದಕ್ಕಾಗಿಯೇ ಅಷ್ಟು ಹೆಚ್ಚು ಐಟಮ್ ಮತ್ತು ಹೆಚ್ಚಿನ ಬೆಲೆ ಇಟ್ಟಿದ್ದೀರಿ. ಇದು ಹಗಲು ದರೋಡೆ ಮತ್ತು ಗ್ರಾಹಕ ವಿರೋಧಿ ನಡೆ. ಇದು ನಿಮಗೆ ಶೋಭೆ ಅಲ್ಲ.’ ಮಾಲೀಕನ ಬಳಿ ಉತ್ತರವಿರಲಿಲ್ಲ. ‘ಇದು ನಮ್ಮ ನಿಯಮ.

ಬೇಕಾದವರು ಸೇವಿಸುತ್ತಾರೆ. ಇಷ್ಟವಿಲ್ಲದವರು ಹೋಗಲಿ. ನಮಗೆ ಬೇಸರವಿಲ್ಲ’ ಎಂದು ಹೇಳಿದ. ಇದು ವ್ಯಾಪಾರಕ್ಕೆ ಕುಳಿತವ ಹೇಳುವ ಮಾತಲ್ಲ. ಹೊಟ್ಟೆ ತುಂಬಿದವ ಅಥವಾ ದುಡ್ಡು ಹೊಡಕೊಂಡವ (‘ಹುಡ್ಕೋ’ಅಲ್ಲ) ಹೇಳುವ ಮಾತು ಎಂದೆನಿಸಿತು. ಹಣ ಕೊಡುವವನಿಗೆ ಎಂದೂ ಬೇಸರ ವಾಗದಂತೆ ನೋಡಿಕೊಳ್ಳಬೇಕು. ಗ್ರಾಹಕ ನಗುಮೊಗ ದಿಂದ ಹಣ ಕೊಡಬೇಕು. ಬೇಸರಿಸಿಕೊಂಡು ಕೊಟ್ಟ ಹಣ ಕೈಗೆ ಹತ್ತುವುದಿಲ್ಲ. ಹೋಟೆಲ್ಲಿಗೆ ಹೊಟ್ಟೆ ದುಂಬಿದವ ಬರುವುದಿಲ್ಲ. ಹಸಿದು ಹೊಟ್ಟೆಯಲ್ಲಿ ಬಂದವರನ್ನು ಹಾಗೆ ಕಳಿಸಬಾರದು. ಗ್ರಾಹಕನನ್ನು ಸಂತೃಪ್ತಗೊಳಿಸದ ಯಾವ ಉದ್ಯಮವೂ ಬಹಳ ದಿನ ನಡೆಯುವುದಿಲ್ಲ.

ಲಾಭ ಮಾಡುವುದು ಉದ್ದೇಶವಾದರೂ, ಗ್ರಾಹಕನನ್ನು ಸಂತೃಪ್ತಗೊಳಿಸುವುದು ಪರಮೋದ್ದೇಶವಾಗಿರಬೇಕು. ಹಸಿವಿನಲ್ಲಿ ಬರುವ ಗ್ರಾಹಕ ಬೇರೆ ಉಪಾಯ ಕಾಣದೇ ತನಗಿಷ್ಟವಿಲ್ಲದಿದ್ದರೂ, ಹಣ ಕೊಟ್ಟ ಕಿಚ್ಚಿಗೆ ಹತ್ತಾರು ಐಟಮ್ಮುಗಳನ್ನು ಸೇವಿಸಿ, ಹೊಟ್ಟೆ ಭಾರ ಮಾಡಿಕೊಂಡು ನಂತರ ಪರಿತಪಿಸ ಬಹುದು. ಇನ್ನು ರೆಸಾರ್ಟಿನಲ್ಲಿ ವಾಸಿಸುವವರಿಗೆ ಅಷ್ಟೊಂದು ವೆರೈಟಿಗಳು ಇಷ್ಟವಾಗಬಹುದು. ಕಾರಣ ಅವರು ವಿಶ್ರಾಂತಿ ತೆಗೆದುಕೊಳ್ಳ ಲೆಂದೇ ಬಂದಿರುತ್ತಾರೆ. ಆದರೆ ಹೊರಗಿನಿಂದ ಬರುವವರಿಗೆ, ಅತಿಯಾದ ಸೇವನೆ ತೀವ್ರ ಕಿರಿಕಿರಿ ಯಾಗಬಹುದು. ಅದೇನೇ ಇರಲಿ, ಗ್ರಾಹಕನಿಗೆ ಆಯ್ಕೆಗಳನ್ನು ಕೊಡಬೇಕು. ಅವನಿಗೆ ಆಯ್ಕೆಗಳನ್ನು ಕೊಡದೇ, ಕೈ ಕಟ್ಟಿಹಾಕಬಾರದು. ಅದು ಒಳ್ಳೆಯ ಬಿಜಿನೆಸ್ ಮಾದರಿಯಲ್ಲ.

ಇದನ್ನು ಅರ್ಥ ಮಾಡಿಕೊಳ್ಳದವರು ಎಲ್ಲಾ ಇದ್ದೂ ಸೋಲುತ್ತಾರೆ. ಒಮ್ಮೆ ವಾಪಸ್ ಹೋದ ಗ್ರಾಹಕನನ್ನು ಮರಳಿ ಬರುವಂತೆ ಮಾಡುವುದು ಕಷ್ಟ. ಅಷ್ಟೂ ಸಾಲದೆಂಬಂತೆ ಆತ ಸಂದರ್ಭ ಸಿಕ್ಕಾಗ ತನ್ನ ಅನುಭವವನ್ನು ಹತ್ತಾರು ಜನರ ಮುಂದೆ ಹೇಳಿ ಹಾನಿ ಮಾಡುತ್ತಾನೆ. If you don’t appreciate your customers, someone else will.. ಎಂಬ ಮಾತನ್ನು ಬಿಜಿನೆಸ್ ಮಾಡುವ ಪ್ರತಿಯೊಬ್ಬರೂ ಅರಿತಿರಲೇಬೇಕಾದ ಮೂಲಮಂತ್ರ. ಗ್ರಾಹಕ ಸೇವೆ ಅಥವಾ ಸೇವೆಯಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಒಂದು ಮಾತಿದೆ Quality in a service or product is not what you put into it. It is what the
customer gets out of it.ಇದು ಪ್ರತಿ ವ್ಯವಹಾರದಲ್ಲೂ ಅಕ್ಷರಶಃ ಸತ್ಯ. ತಿಂಡಿ ತಿನ್ನದೇ ಎದ್ದು ಹೋದ ಆ ಮೂವರ ನಡೆ ಇಷ್ಟವಾಯಿತು. ಒಂದು ಒಳ್ಳೆಯ ಮ್ಯಾನೇಜ್‌ಮೆಂಟ್ ಪಾಠ ಕೇಳಿದಂತೆ ಭಾಸವಾಯಿತು.

ಬದುಕನ್ನು ಬದಲಿಸಿಕೊಳ್ಳೋದು ಹೇಗೆ?
ರಿಚರ್ಡ್ ಬ್ರಾನ್‌ಸನ್ ಅದ್ಯಾವ ಮೂಡಿನಲ್ಲಿದ್ದರೋ ಏನೋ? ಕೆಲ ವರ್ಷದ ಹಿಂದೆ ಅವರಿಗೊಂದು ಟ್ವಿಟರಿನಲ್ಲಿ (ಟ್ವೀಟ್ ಅಲ್ಲ) ಮೆಸೇಜ್ ಮಾಡಿದ್ದೆ. ಹತ್ತು ನಿಮಿಷಗಳಲ್ಲಿ ವಾಪಸ್ ಮೆಸೇಜ್ ಮಾಡಿದರು ನನಗೆ ಅಚ್ಚರಿಯಾಯಿತು. ‘ನಮ್ಮ ಬದುಕನ್ನು ಒಂದು ವರ್ಷದಲ್ಲಿ ಬದಲಿಸಿಕೊಳ್ಳಬಹುದೇ?
ಹೇಗೆ?’ ಎಂದು ಕೇಳಿದ್ದೆ. ಅದಕ್ಕೆ ಬ್ರಾನ್‌ಸನ್ ಅವರು ಜಗತ್ತಿನ ಅತಿ ಶ್ರೀಮಂತ ವಾರೆನ್ ಬಫೆಟ್ ಹೇಳಿದ್ದನ್ನು ಪ್ರಸ್ತಾಪಿಸಿ ಬರೆದಿದ್ದರು.

?ಏನೇ ಮಾಡಿ ತಕ್ಷಣ ಫಲಿತಾಂಶ ಬರುವುದಿಲ್ಲ. ಎಲ್ಲದಕ್ಕೂ ಟೈಮು ಹಿಡಿಯುತ್ತದೆ.
?ನಿಮ್ಮ ಸಂತಸ, ನೆಮ್ಮದಿಗೆ ಬೇರೆಯವರನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು.

?ಕಂಪ್ಲೇನ್ ಮಾಡೋದನ್ನು ನಿಲ್ಲಿಸಿ, ನನ್ನಂಥ ಅದೃಷ್ಟವಂತ ಯಾರೂ ಇಲ್ಲ ಎಂದು ಭಾವಿಸಿ.
?ಏನು ಅಂದುಕೊಂಡಿದ್ದೀರೋ ಅದನ್ನು ಮಾಡಿ, ಎಂದಿಗೂ ಕೈಚೆಲ್ಲಬೇಡಿ.

?ನೀವು ಮಾಡುವ ತಪ್ಪುಗಳಿಂದ ನಿಮ್ಮನ್ನು ಅಳೆಯುವುದನ್ನು ನಿಲ್ಲಿಸಿ.
?ಸಕಾರಾತ್ಮಕ ಯೋಚನೆಗಳಿರುವವರನ್ನು ಹತ್ತಿರಕ್ಕೆ ಇಟ್ಟುಕೊಳ್ಳಿ.

?ನಿಮ್ಮನ್ನು ಟೀಕಿಸುವವರನ್ನು ನಿರ್ಲಕ್ಷಿಸಿ.

ಇಷ್ಟು ಮಾಡಿ, ಒಂದು ವರ್ಷದಲ್ಲಿ ನೀವು ಹೊಸ ವ್ಯಕ್ತಿಯಾಗಿರುತ್ತೀರಿ. ಅಂದ ಹಾಗೆ ಈ ಏಳೂ ಸಂಗತಿಗಳನ್ನು ನಾನಂತೂ ಅಕ್ಷರಶಃ ಪಾಲಿಸುತ್ತಿದ್ದೇನೆ. ಹೀಗಾಗಿ ಪ್ರತಿದಿನವನ್ನೂ ಹೊಸದಾಗಿ, ಖುಷಿಯಾಗಿ ಕಳೆಯುತ್ತೇನೆ. ನೀವೂ ಪ್ರಯತ್ನಿಸಿ.

ಸ್ವಚ್ಛತೆ ಕಂಡು ‘ಶಾಕ್’
ಇದು ಎಲ್ಲೂ ಸುದ್ದಿಯಾಗಲಿಲ್ಲ. ಅದೇನೆಂದರೆ, ಕೆಲ ವರ್ಷದ ಹಿಂದೆ ರವಾಂಡದಲ್ಲಿ ಎರಡು ದಿನ ಇದ್ದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಸ್ವಚ್ಛತೆ ನೋಡಿ ಅತೀವ ಸಂತಸ ವ್ಯಕ್ತಪಡಿಸಿದರಂತೆ. ಪ್ರಧಾನಿಯವರಿಗೆ ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದರಂತೆ- ‘ರಾಜಧಾನಿ ಕಿಗಾಲಿ ಮಾತ್ರ ಅಲ್ಲ, ಇಡೀ ದೇಶವೇ ಇಷ್ಟು ಸ್ವಚ್ಛವಾಗಿದೆ. ವಿದೇಶಿ ಗಣ್ಯರಿಗಾಗಿ ಈ ಸ್ವಚ್ಛತೆ ಅಲ್ಲ. ವರ್ಷದ ಯಾವುದೇ ದಿನ ಬಂದರೂ ಇದೇ ಸ್ವಚ್ಛತೆ ಕಾಣಬಹುದು.’

ಮೊದಲ ಬಾರಿಗೆ ರವಾಂಡಕ್ಕೆ ಹೋದ ಯಾರಿಗೇ ಆದರೂ ಅಲ್ಲಿನ ಸ್ವಚ್ಛತೆ ಕಂಡು ‘ಶಾಕ್’ ಆಗುತ್ತದೆ. ಇಡೀ ದೇಶದಲ್ಲಿ ಒಂದೇ ಒಂದು ಕಸ, ಕಡ್ಡಿ, ಬಾಟಲಿ, ಸಿಗರೇಟ್ ಪ್ಯಾಕ್, ಪ್ಲಾಸ್ಟಿಕ್… ಹೀಗೆ ಯಾವ ಕಸ-ಕಲ್ಮಶಗಳನ್ನು ನೋಡಲು ಸಾಧ್ಯ ವಿಲ್ಲ. ದಾರಿಯಲ್ಲಿ ಯಾರೂ ಉಗುಳುವುದಿಲ್ಲ, ಎಲೆ-ಅಡಕೆ
ಪಿಚಕಾರಿ ಸಿಂಪಡಿಸುವುದಿಲ್ಲ. ಕಳ್ಳೇಕಾಯಿ ತಿಂದು ಸಿಪ್ಪೆಯನ್ನು ಬೀದಿಗೆಸೆಯುವುದಿಲ್ಲ. ಯಾರೂ ಸಹ ರಸ್ತೆ ಬದಿಗೆ ಮೂತ್ರ ವಿಸರ್ಜನೆಗೆ ನಿಲ್ಲುವುದಿಲ್ಲ. ತಂಬಿಗೆ ತೆಗೆದುಕೊಂಡು ಹೋಗುವುದಿಲ್ಲ.

ದೇಶಕ್ಕೆ ದೇಶವೇ ಶುದ್ಧ, ಸ್ವಚ್ಛ, ಬಡತನಕ್ಕೂ, ಕೊಳಕಿಗೂ ಅವಿನಾಭಾವ ಸಂಬಂಧ. ಮೊದಲನೆಯದಿದ್ದರೆ ಎರಡನೆಯದೂ ಇರಲೇಬೇಕು. ಎರಡನೆ ಯದಕ್ಕೆ ಮೊದಲನೆಯದೇ ಕಾರಣ. ಆದರೆ ರವಾಂಡದಲ್ಲಿ ಮಾತ್ರ ಬಡತನವಿದ್ದರೂ ಅಸ್ವಚ್ಛತೆಯನ್ನು ಓಡಿಸಲಾಗಿದೆ. ಇದು ಪ್ರಧಾನಿಯೋ, ರಾಷ್ಟ್ರಾ ಧ್ಯಕ್ಷನೋ ಕರೆ ಕೊಡುವುದರಿಂದ ಆಗುವಂಥದ್ದಲ್ಲ. ಪ್ರತಿಯೊಬ್ಬ ದೇಶವಾಸಿಗೂ ಅನಿಸಬೇಕು. ತನ್ನ ದೇಶ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಅತೀವ ಕಾಳಜಿ ಇರಬೇಕು. ನೂರರಲ್ಲಿ ಒಬ್ಬ ಸ್ವಚ್ಛತೆ ಉಲ್ಲಂಸಿದರೆ, ಅಷ್ಟರಮಟ್ಟಿಗೆ ಹೊಲಸಾಗಿರುತ್ತದೆ. ನಂಬಿಕೆಯೆಂದರೆ ನೂರಕ್ಕೆ ನೂರು ಹೇಗೋ, ಸ್ವಚ್ಛತೆಯೆಂದರೂ ನೂರಕ್ಕೆ ನೂರೇ.

ರವಾಂಡದಲ್ಲಿ ಇದನ್ನು ಅಕ್ಷರಶಃ ಪಾಲಿಸಲಾಗುತ್ತಿದೆ. ನನ್ನ ಜತೆಗಿದ್ದ ಕನ್ನಡಿಗರೊಬ್ಬರು ‘ನಾನೂ ನೋಡ್ತಾನೇ ಇದ್ದೇನೆ, ರವಾಂಡದಲ್ಲಿ ಒಂದೇ ಒಂದು ಕಸವನ್ನಾದರೂ ಹುಡುಕಲೇ ಬೇಕೆಂದು, ಆಗುತ್ತಿಲ್ಲ’ ಎಂದು ಉದ್ಗಾರ ತೆಗೆದರು. ಇಡೀ ದೇಶಕ್ಕೆ ದೇಶವೇ ಯಾವುದೇ ಘೋಷಣೆಗಳಿಲ್ಲದೇ, ಅದೊಂದು
ಜೀವನಕ್ರಮದಂತೆ, ತೀರಾ ಸಹಜವೆಂಬಂತೆ ಸ್ವಚ್ಛತೆಯನ್ನು ಆಚರಿಸಿಕೊಂಡು ಬರುತ್ತಿದೆ.

ಬೆಂಗಳೂರಿಗೆ ವಿದೇಶಿ ಗಣ್ಯರು ಬಂದಾಗ ವಿಮಾನ ನಿಲ್ದಾಣದಿಂದ ರಾಜಭವನ ಹಾಗೂ ಅವರು ಓಡಾಡುವ ಪ್ರಮುಖ ದಾರಿಗಳಿಗೆ ಮಾತ್ರ ಅಲಂಕಾರ ಮಾಡುತ್ತಿದ್ದುದು ಸಂಪ್ರದಾಯ. ಅವರು ಹೋಗುತ್ತಿದ್ದಂತೆ ಆ ಅಲಂಕಾರಕ್ಕೆ ತಿಲಾಂಜಲಿ. ಬೆಂಗಳೂರಿನಲ್ಲಿ ಸಾರ್ಕ್ ಸಮಾವೇಶವಾದಾಗ, ಇಡೀ ನಗರ ವನ್ನು ಸುಣ್ಣ ಬಣ್ಣ ಬಳಿದು ಸಿಂಗರಿಸಿದ್ದರು. ರಸ್ತೆಗಳಿಗೆಲ್ಲ ಡಾಂಬರು ಹಾಕಿ ಬಿಳಿ ಪಟ್ಟಿ ಬಳಿದು ಅಲಂಕರಿಸಿದ್ದರು. ಆನಂತರ ಒಂದೆರಡು ಸಂದರ್ಭ ಗಳಲ್ಲಿ ಹೀಗೆ ಮಾಡಿದ್ದುಂಟು. ಕಾರ್ಯಕ್ರಮ ಮುಗಿದ ನಂತರ ಈ ಅಲಂಕಾರ, ಸ್ವಚ್ಛತೆಗಳೆಲ್ಲ ಮಾಯ!

ಸಾರ್ವಜನಿಕವಾಗಿ ಸ್ವಚ್ಛತೆ ಕಾಪಾಡುವುದು ನಮಗೆ ಒಂದು ಸಾಂಕ ಗುಣವಾಗಿ ಬೆಳೆದು ಬಂದಿಲ್ಲ. ತಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡವರೂ, ಸಾರ್ವಜನಿಕ ಸ್ಥಳಗಳಲ್ಲಿ ಕಂಡಲ್ಲಿ ಕಸಗಳನ್ನು ಎಸೆಯುತ್ತಾರೆ. ಸ್ವತಃ ಪ್ರಧಾನಿಯವರೇ ಪೊರಕೆ ಹಿಡಿದರೂ, ಸ್ವಚ್ಛ ಭಾರತ ಎಂದು ಬೊಬ್ಬೆ ಹೊಡೆದು ಕೊಂಡರೂ ನಮ್ಮ ಜನರಲ್ಲಿ ಇನ್ನೂಜಾಗೃತಿ ಮೂಡಿಲ್ಲ. ಸ್ವಚ್ಛ ಭಾರತ ಪ್ರಚಾರಕ್ಕೆಂದು, ಅರಿವು ಮೂಡಿಸಲೆಂದು ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ನಿತ್ಯವೂ ಬಳಸುವ ನೋಟಿನ ಮೇಲೆ ಸ್ವಚ್ಛ ಭಾರತ ಲಾಂಛನವಿಟ್ಟು ಜಾಗೃತಿ ಮೂಡಿಸಲಾಗುತ್ತಿದ್ದರೂ ಸಮಾಧಾನವಾಗು ವಂಥ ಪರಿವರ್ತನೆಯಾಗಿಲ್ಲ. ಮೋದಿಯವರಿಗೆ ಕೀರ್ತಿ ಬಂದು ಬಿಡಬಹುದೆಂದು ಭಾರತ ಸ್ವಚ್ಛವಾಗುವುದು ಪ್ರತಿಪಕ್ಷಗಳಿಗೂ ಬೇಕಿಲ್ಲ. ಇಂಥ
ಮನಸ್ಥಿತಿಯಿದ್ದರೆ ಯಾವ ದೇಶ ಉದ್ಧಾರವಾದೀತು?

ಯಾರು ಬುದ್ಧಿವಂತರು?
ಸುಮಾರು ಐವತ್ತು ವರ್ಷಗಳ ಹಿಂದಿನ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ, ಬಹಳ ಹಿಂದೆ ಓದಿದ ಒಂದು ಪ್ರಸಂಗವಿದು. ಮುಸ್ಸೋಲಿನಿ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲಿ ಅಮೆರಿಕದ ಶ್ರೀಮಂತ ಆರ್ಟ್ ಸಂಗ್ರಹಕಾರ ಇಟಲಿಗೆ ಬಂದು, ಹದಿನಾರನೇ ಶತಮಾನದ ಪ್ರಸಿದ್ಧ ಕಲಾವಿದ ಟಿಟಿಯನ್‌ನ ಬೃಹತ್ ವರ್ಣಚಿತ್ರವನ್ನು ಭಾರಿ ಬೆಲೆಗೆ ಖರೀದಿಸಿದ. ಅದನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವುದು ಅವನ ಉದ್ದೇಶವಾಗಿತ್ತು. ಆದರೆ ಅದನ್ನು ಇಟಲಿಯಿಂದ ಹೊರಗೆ ತೆಗೆದುಕೊಂಡು ಹೋಗಲು ಮುಸ್ಸೋಲಿನಿ ಸರಕಾರ ಅನುಮತಿ ನೀಡಲಿಕ್ಕಿಲ್ಲ ಎಂದು ಅವನಿಗೆ ಕೆಲವರು ಹೇಳಿದರು.

ಆಗ ಆ ಅಮೆರಿಕನ್ ಕಲಾ ಸಂಗ್ರಹಕಾರನಿಗೆ ಅತೀವ ಬೇಸರವಾಯಿತು. ಇದನ್ನು ತನ್ನ ದೇಶಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಆತ ಒಬ್ಬ ಸಲಹೆಗಾರನನ್ನು ಕೇಳಿದ. ಅದಕ್ಕೆ ಆತ ಒಂದು ಸಲಹೆ ನೀಡಿದ – ‘ಒಂದು ಕೆಲಸ ಮಾಡಿ, ಟಿಟಿಯನ್‌ನ ವರ್ಣಚಿತ್ರದ ಮೇಲೆ ಮುಸ್ಸೋಲಿನಿ ವರ್ಣಚಿತ್ರ ವನ್ನು ಬಿಡಿಸುವಂತೆ ಸ್ಥಳೀಯ ಕಲಾವಿದನಿಗೆ ಹೇಳಿ. ಆತ ಅದನ್ನು ಬಿಡಿಸಿಕೊಡುತ್ತಾನೆ. ಮುಸ್ಸೋಲಿನಿ ಆಡಳಿತದ ಅಧಿಕಾರಿಗಳು ತಮ್ಮ ನಾಯಕನ ಚಿತ್ರವನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವವನು ಮುಸ್ಸೋಲಿನಿ ಅಭಿಮಾನಿಯಿರಬೇಕೆಂದು, ತಕ್ಷಣ ಸಂತೋಷದಿಂದ ಅನುಮತಿ ನೀಡುತ್ತಾರೆ. ಅಮೆರಿಕಕ್ಕೆ ಹೋದ ನಂತರ, ಮೇಲಿನ ಪೇಂಟಿಂಗ್ ನ್ನು ತೆಗೆದುಹಾಕಿ.’

ಅಮೆರಿಕದ ಕಲಾ ಸಂಗ್ರಹಕಾರನಿಗೆ ಇದು ಅದ್ಭುತ ಐಡಿಯಾ ಎಂದೆನಿಸಿತು. ಆತ ತಕ್ಷಣ ಸ್ಥಳೀಯ ಕಲಾಕಾರನನ್ನು ಕರೆಯಿಸಿ, ಟಿಟಿಯನ್ ಪೇಂಟಿಂಗ್ ಮೇಲೆ ಮುಸ್ಸೋಲಿನಿ ಪೇಂಟಿಂಗ್ ಬಿಡಿಸಿಕೊಡುವಂತೆ ಹೇಳಿದ. ಆತ ಬಿಡಿಸಿಕೊಟ್ಟ. ಮುಂದೆ ಆತ ಅಂದುಕೊಂಡಂತೆ ಆಯಿತು. ಯಾವ ತೊಂದರೆಯೂ ಇಲ್ಲದೇ ಪೇಂಟಿಂಗ್‌ನ್ನು ಸುಲಭವಾಗಿ ಅಮೆರಿಕಕ್ಕೆ ತೆಗೆದುಕೊಂಡು ಬಂದ. ಬಂದವನೇ ಆ ಪೇಂಟಿಂಗ್ ಮೇಲೆ ಬಿಡಿಸಿದ ಮುಸ್ಸೋಲಿನಿ ಚಿತ್ರವನ್ನು ಕೆರೆಸಿ ಹಾಕುವಂತೆ ನುರಿತ ಪೇಂಟರ್‌ಗೆ ಹೇಳಿದ. ಆತ ಹರಿತವಾದ ಚಾಕುವಿನಿಂದ ಬಹಳ ನಾಜೂಕಿನಿಂದ ಮೇಲಿನ ಪದರ ಕೆರೆಸಿ ಹಾಕಿದ. ಟಿಟಿಯನ್‌ನ ಅದ್ಭುತ ಪೇಂಟಿಂಗ್ ಎದ್ದು ಕಂಡಿತು. ಅಷ್ಟಕ್ಕೇ ಸುಮ್ಮನಾಗದ ಪೇಂಟರ್, ‘ಸರ್, ಈ ಟಿಟಿಯನ್ ಪೇಂಟಿಂಗ್ ಕೆಳಗೆ ಬೇರೆ ಇನ್ನೊಂದು ಪೇಂಟಿಂಗ್
ಇರುವಂತಿದೆ’ ಎಂದು ಹೇಳಿದ. ಕಲಾ ಸಂಗ್ರಹಕಾರನಿಗೆ ದಿಗಿಲಾಯಿತು. ಆ ಪೇಂಟರ್, ಟಿಟಿಯನ್‌ನ ಪೇಂಟಿಂಗ್‌ನ್ನು ಕೆರೆಸುತ್ತಿದ್ದಂತೆ ಮತ್ತೊಂದು ಚಿತ್ರ ಎದ್ದು ಬಂದಿತು. ನೋಡಿದರೆ ಮುಸ್ಸೋಲಿನಿ ಪೇಂಟಿಂಗ್!

ಅದು ರಂಗಭೂಮಿ ಅಲ್ಲ, ಹುಚ್ಚಾಸ್ಪತ್ರೆ

ಒಮ್ಮೆ ಮಾಸ್ಟರ್ ಹಿರಣ್ಣಯ್ಯ ಅವರ ಜತೆಗೆ ವೇದಿಕೆ ಹಂಚಿಕೊಂಡಿz. ಆ ದಿನ ಅವರು ಅದ್ಭುತವಾಗಿ ಮಾತಾಡಿದರು. ಕಾರ್ಯಕ್ರಮ ಮುಗಿದ ಬಳಿಕ ಹಲವರು ಅವರನ್ನು ಸುತ್ತುವರಿದು ಅಭಿನಂದಿಸಿದರು. ಅವರಬ್ಬ, ‘ಹಿರಣ್ಣಯ್ಯನವರೇ, ನೀವು ರಂಗಭೂಮಿಯ ನಟರಾಗುವ ಬದಲು, ಲೋಕಸಭಾ ಸದಸ್ಯರಾಗಿದ್ದರೆ, ಎಷ್ಟು ಚೆನ್ನಾಗಿತ್ತು. ನಿಮ್ಮ ಮಾತಿನಿಂದ ಇಡೀ ಲೋಕಸಭೆ ತಲೆದೂಗುವಂತೆ ಮಾಡಬಹುದಾಗಿತ್ತು. ಲೋಕಸಭೆಗಿಂತ ದೊಡ್ಡ
ರಂಗಭೂಮಿ ಯಾವುದಿದೆ? ಈಗಲೂ ಕಾಲ ಮಿಂಚಿಲ್ಲ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ’ ಎಂದು ಹೇಳಿದ.

ಅದಕ್ಕೆ ತಟ್ಟನೆ ಹಿರಣ್ಣಯ್ಯನವರು ಹೇಳಿದರು – ‘ಅಲ್ಲಯ್ಯಾ, ನಾನು ಲೋಕಸಭಾ ಸದಸ್ಯನಾಗಿದ್ದಿದ್ದರೆ ಮೂರ್ಖನ ಹಾಗೆ ಬಾಯಿಮುಚ್ಚಿ ಕುಳಿತು ಎದ್ದು ಬರಬೇಕಾಗುತ್ತಿತ್ತು. ನಮ್ಮ ರಾಜ್ಯದಿಂದ ಹೋದ ಒಬ್ಬನೇ ಒಬ್ಬ ಲೋಕಸಭಾ ಸದಸ್ಯ ಮಾತಾಡಿದ್ದನ್ನು ನೀವೆಲ್ಲ ಕೇಳಿದ್ದೀರಾ, ನೋಡಿದ್ದೀರಾ? ಇಲ್ಲಿ
ನೀವೆಲ್ಲ ನನ್ನ ಮಾತನ್ನು ಕೇಳಿದಿರಿ ಎಂದು ಅಲ್ಲಿ ಯಾರು ಕೇಳುತ್ತಾರೆ? ಅಲ್ಲಿದ್ದವರಿಗೆ ಮಾತನ್ನು ಕೇಳುವ ವ್ಯವಧಾನ ಇಲ್ಲ. ಲೋಕಸಭಾ ಸದಸ್ಯನಾದರೆ ಪಕ್ಷದ ನಾಯಕರು ಹೇಳಿದಂತೆ ಮೂಕನಾಗಿ ಇರಬೇಕಾಗುತ್ತದೆ. ನಾನು ಹಾಗೆ ಇರುವುದುಂಟಾ? ಅಷ್ಟಕ್ಕೂ ಲೋಕಸಭೆ ಅನ್ನೋದು ರಂಗಭೂಮಿ ಅಲ್ಲ. ಅದೊಂದು ಹುಚ್ಚಾಸ್ಪತ್ರೆ. ಹೀಗಾಗಿ ನಾನು ನನ್ನ ಪಾಡಿಗೆ ನಾಟಕ ಮಾಡಿಕೊಂಡಿರುತ್ತೇನೆ. ಅದೇ ನನಗೆ ಇಷ್ಟ. ನನಗೆ ಮೂಕನ ಪಾತ್ರ ಮಾಡಿ ಗೊತ್ತಿಲ್ಲ.’

ಹೀಗೊಂದು ಫ್ಯಾನ್ ಕ್ಲಬ್!

ನಾನು ಡೆನ್ವರ್‌ನ ಒಂದು ಹೋಟೆಲ್‌ಗೆ ಹೋಗಿದ್ದೆ. ಅದರ ಹೆಸರು ಫ್ಯಾನ್ ಕ್ಲಬ್ ಅಂತ. ಹಾಗೆ ನೋಡಿದರೆ, ಅದೊಂದು ಪಬ್. ಅಲ್ಲಿ ಕುಳಿತಷ್ಟು ಹೊತ್ತು ಬೇಸರವಾಗುವುದಿಲ್ಲ. ಅಲ್ಲಿನ ಗೋಡೆಗಳ ಮೇಲೆ ‘ವಕ್ರತುಂಡೋಕ್ತಿ’ ಮಾದರಿಯ ಸಾಲುಗಳನ್ನು ಬರೆದು ಗೋಡೆಗೆ ತಗುಲಿ ಹಾಕಲಾಗಿದೆ. ಕೆಲವು
ಸಾಲುಗಳನ್ನು ನೋಡಿ. Why do german love american? Because American are most hated people ಯಾರಾದರೂ ಎರಡೂ ಭಾಷೆ ಮಾತಾಡಿದರೆ bilingual ಅಂತಾರೆ. ಹಲವು ಭಾಷೆಗಳನ್ನು ಮಾತಾಡಿದರೆ multilingual ಅಂತಾರೆ. ಆದರೆ ಒಂದೇ ಭಾಷೆ ಮಾತಾಡು ವವರನ್ನು ಏನಂತಾರೆ? -ಅಮೆರಿಕನ್! ಅಮೆರಿಕನ್‌ಗೂ ಯೋಗರ್ಟ್(ಮೊಸರು)ಗೂ ಏನು ವ್ಯತ್ಯಾಸ?

– ಒಂದು ತಿಂಗಳು ಬಿಟ್ಟರೆ ಯೋಗರ್ಟ್ ತನ್ನದೇ ಆದ ಗುಣ, ಸ್ವಭಾವವನ್ನು ಬೆಳೆಸಿಕೊಳ್ಳುತ್ತದೆ. ಈ ಮಾತನ್ನು ಅಮೆರಿಕನ್‌ಗೆ ಹೇಳಲಾಗದು!

ಅಮೆರಿಕದಲ್ಲಿ ಮಾತ್ರ ಇದು ಸಾಧ್ಯ!
– ಗ್ರಾಹಕರು ಡಬಲ್ ಚೀಸ್ ಬರ್ಗರ್, ಲಾರ್ಜ್ ಫ್ರೆಂಚ್ ಫ್ರೈಸ್‌ಗಳ ಜತೆಗೆ ಡಯಟ್ ಕೋಕ್ ಆರ್ಡರ್ ಮಾಡುತ್ತಾರೆ! ಅಮೆರಿಕದಲ್ಲಿ ಮಾತ್ರ ಇದು ಸಾಧ್ಯ!
– ಸಾವಿರಾರು ಡಾಲರ್‌ನ ಕಾರನ್ನು ಮನೆಮುಂದೆ ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಬೇಡದ ಸಾಮಾನುಗಳನ್ನು ಗ್ಯಾರೇಜ್‌ನಲ್ಲಿ ಜೋಪಾನವಾಗಿ ಇಟ್ಟಿರುತ್ತಾರೆ!

Leave a Reply

Your email address will not be published. Required fields are marked *